Andolana originals

ಜೀವವೂ ಉಳಿಯಬೇಕು, ಜೀವನೋಪಾಯವೂ ನಡೆಯಬೇಕು

ಸಫಾರಿ ಪುನಾರಂಭದ ಸಂಬಂಧ ‘ಆಂದೋಲನ’ ದಿನಪತ್ರಿಕೆಯು ನಡೆಸಿದ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಇದಕ್ಕೆ ಪೂರಕವಾಗಿ ಪತ್ರಿಕೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಆಡಳಿತಾತ್ಮಕ ನಿರ್ಧಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಆಂದೋಲನ: ಕಾಡಿನ ಮೇಲೆ ಒತ್ತಡ ಹೆಚ್ಚಾದರೆ ವನ್ಯಪ್ರಾಣಿಗಳು ಕಾಡಿನಿಂದ ಹೊರಬರುತ್ತವೆ ಅಲ್ಲವೇ? ಆದರೂ ಸಫಾರಿಗೆ ಮತ್ತೆ ಅನುಮತಿ ನೀಡಿದ್ದೀರಿ ಏಕೆ?

ಈಶ್ವರ ಖಂಡ್ರೆ: ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರು ವನ್ಯಜೀವಿ ಸಂರಕ್ಷಣಾ ಕಾಯಿದೆ ೧೯೭೨ ಜಾರಿಗೆ ತರುವವರೆಗೆ ಅರಣ್ಯಗಳು ಬೇಟೆ ಮತ್ತು ಮೋಜಿನ ತಾಣಗಳಾಗಿದ್ದವು. ೧೯೭೨ರ ಬಳಿಕ ವನ್ಯಜೀವಿಗಳ ಸಂರಕ್ಷಣೆ ಆಗುತ್ತಿದೆ. ನಾನು ಸಚಿವ ನಾದ ಮೇಲೆ ಸಫಾರಿಯನ್ನು ಆರಂಭ ಮಾಡಿಲ್ಲ ಎಂಬುದನ್ನು ಮೊದಲು ಸ್ಪಷ್ಟಪಡಿಸುತ್ತೇನೆ. ೧೯೮೦ರ ದಶಕದ ಆದಿಯಲ್ಲಿ ನಾಗರಹೊಳೆಯಲ್ಲಿ ಮೊದಲ ಬಾರಿಗೆ ಪರಿಸರ ಪ್ರವಾಸೋದ್ಯಮ ಆರಂಭವಾಯಿತು. ಜಂಗಲ್ ಲಾಡ್ಜ್ ನಿರ್ಮಾಣದೊಂದಿಗೆ ಸಫಾರಿ ನಡೆಯುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲೂ ಸಫಾರಿ ಇದೆ. ಹುಲಿ ದಾಳಿಯಿಂದ ಸರಣಿ ಸಾವುಗಳು ಸಂಭವಿಸಿ ದಾಗ ನಾನೇ ಸ್ವತಃ ನಿರ್ಣಯ ಕೈಗೊಂಡು ಮುಂದಿನ ಆದೇಶದವರೆಗೆ ಸಫಾರಿ ಸ್ಥಗಿತಗೊಳಿಸಲು ಆದೇಶ ನೀಡಿ, ಸಫಾರಿ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ಬಳಸಲು ಸೂಚಿಸಿದ್ದೆ. ಇದೇ ಮೊದಲ ಬಾರಿಗೆ ೨೨ಕ್ಕೂ ಹೆಚ್ಚು ಹುಲಿಗಳನ್ನು ಸೆರೆ ಹಿಡಿಯಲಾಗಿದೆ. ಈಗ ಪರಿಸ್ಥಿತಿ ಸುಧಾರಿಸಿದೆ. ಹುಲಿಗಳ ಸಂಚಾರವಿದ್ದ ಸ್ಥಳದಲ್ಲಿ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ನಂತರ ೧೦೦ ದಿನಗಳು ಕಳೆದ ಮೇಲೆ ತಜ್ಞರ ವರದಿ ಮತ್ತು ಇಲಾಖೆಗೆ ಬಂದ ಮನವಿಗಳನ್ನು ಆಧರಿಸಿ, ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಎಲ್ಲರ ಸಹಮತದೊಂದಿಗೆ ಸಫಾರಿ ಪುನಾರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇ ಶನ, ಸುಪ್ರೀಂ ಕೋರ್ಟ್ ಆದೇಶ ಪಾಲನೆಯೊಂದಿಗೆ ಸಫಾರಿ ಪುನಾರಂಭಿಸಲು ಸೂಚಿಸಿದ್ದೇನೆ. ಇನ್ನು ಸಫಾರಿಯಿಂದ ವನ್ಯಜೀವಿಗಳು ಕಾಡಿನಿಂದ ಹೊರಬರುತ್ತಿವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಆಂದೋಲನ: ಸಫಾರಿಯನ್ನು ವಾರದಲ್ಲಿ ೨-೩ ದಿನಗಳು ಮಾತ್ರ ಮಾಡಬಹುದಲ್ಲವೇ?

ಈಶ್ವರ ಖಂಡ್ರೆ: ಜೀವನವೂ ಇರಬೇಕು, ಜೀವವೂ ಉಳಿಯಬೇಕು, ಜೀವನೋಪಾಯವೂ ನಡೆಯ ಬೇಕು. ಹೀಗಾಗಿ ನಿರ್ಬಂಽತ ಮತ್ತು ಷರತ್ತುಬದ್ಧವಾಗಿ ಸಫಾರಿ ಪುನಾರಂಭಿಸಲಾಗಿದೆ. ಸಫಾರಿ ವಾಹನಗಳ ಸಂಖ್ಯೆ ಮತ್ತು ಸಮಯವನ್ನೂ ಕಡಿತ ಮಾಡಲಾಗಿದೆ. ಮಿಗಿಲಾಗಿ ಪ್ರವಾಸೋದ್ಯಮದಿಂದ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಸ್ಥಳೀಯರಿಗೂ ಜೀವನೋಪಾಯ ಆಗುತ್ತದೆ. ರೈತರಿಗೆ ತಾವು ಬೆಳೆದ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲೂ ಅವಕಾಶ ಲಭಿಸುತ್ತದೆ. ರಸ್ತೆಯಲ್ಲಿ ಹಣ್ಣು, ತರಕಾರಿ, ಎಳನೀರು ಮಾರುವವರು, ಹೋಟೆಲ್ ಇತ್ಯಾದಿಗಳಿಗೂ ಅನುಕೂಲ ಆಗುತ್ತದೆ.

ಆಂದೋಲನ: ನಾಗರಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿಯ ಆದಾಯದಲ್ಲಿ ಎಷ್ಟು ಹಣವನ್ನು ಯಾವ್ಯಾವ ಕಾರ್ಯಗಳಿಗೆ ವೆಚ್ಚ ಮಾಡುತ್ತೀರಿ?

ಈಶ್ವರ ಖಂಡ್ರೆ: ಸಫಾರಿಯಿಂದ ಬರುವ ಆದಾಯದಲ್ಲಿ ಶೇ.೩೫ರಷ್ಟು ಹಣವನ್ನು ಸ್ಥಳೀಯ ಜನರು ಮತ್ತು ಕಾಡಿನಂಚಿನ ಗ್ರಾಮಗಳ ಕಲ್ಯಾಣಕ್ಕೆ ಬಳಸುವಂತೆ ನಾನು ಆದೇಶ ನೀಡಿದ್ದೇನೆ. ಈ ಹಣದಿಂದ ಮೇವು ಬೆಳೆಸಿ ರೈತರಿಗೆ ನೀಡಲು, ಕಾಡಿನಂಚಿನ ಗ್ರಾಮಗಳ ಮೂಲಸೌಕರ್ಯ ವರ್ಧನೆ, ಯುವಜನರಿಗೆ ಕೌಶಲ ತರಬೇತಿ ನೀಡಲು, ಕಾಡಿನಂಚಿನ ಗ್ರಾಮದ ಶಾಲೆಗಳ ಅಭಿವೃದ್ಧಿ ಇತ್ಯಾದಿಗೆ ಬಳಕೆ ಮಾಡಲಾಗುವುದು.

ಆಂದೋಲನ: ಅರಣ್ಯ ಇಲಾಖೆಯಲ್ಲಿ ಇತ್ತೀಚೆಗೆ ತಜ್ಞರ ಸಮಿತಿಗಳಲ್ಲಿ ಕನ್ನಡಿಗರನ್ನು ಕಡೆಗಣಿಸಿ, ಬೇರೆ ರಾಜ್ಯಗಳ ತಜ್ಞರನ್ನು ಸಮಿತಿಗಳಿಗೆ ನೇಮಿಸುವುದು ಹೆಚ್ಚಾಗಿದೆ ಏಕೆ?

ಈಶ್ವರ ಖಂಡ್ರೆ: ತಜ್ಞರ ಸಮಿತಿಯಲ್ಲಿ ರಾಜ್ಯದ ಉನ್ನತಾಧಿಕಾರಿಗಳೂ ಇದ್ದಾರೆ. ಅವರ ಜೊತೆಗೆ ಡೆಹರಾಡೂನ್ ನಲ್ಲಿರುವ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸ್ವಾಯತ್ತ ಸಂಸ್ಥೆಯಾದ ಭಾರತೀಯ ವನ್ಯಜೀವಿ ಸಂಸ್ಥೆ ಮತ್ತು ಭೋಪಾಲ್‌ನ ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆ ತಜ್ಞರ ನೆರವು ಪಡೆಯಲಾಗಿದೆ. ಈ ಸಂಸ್ಥೆಯ ತಜ್ಞರ ನೆರವನ್ನು ದೇಶದ ಎಲ್ಲ ರಾಜ್ಯಗಳೂ ಪಡೆಯುತ್ತವೆ. ಇಲ್ಲಿ ಕನ್ನಡಿಗರನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಆಂದೋಲನ: ಕಾಡಂಚಿನ ರೆಸಾರ್ಟ್‌ಗಳಲ್ಲಿ ಇತ್ತೀಚೆಗೆ ಮೋಜು, ಮಸ್ತಿ ಹೆಚ್ಚಾಗಿದೆ. ಗದ್ದಲ ಅಧಿಕವಾಗಿದೆ. ಇದರಿಂದ ವನ್ಯಜೀವಿಗಳಿಗೆ ತೊಂದರೆಯಲ್ಲವೇ? ಇದನ್ನು ತಡೆಯಲು ಕ್ರಮವೇನು?

ಈಶ್ವರ ಖಂಡ್ರೆ: ಕಾಡಿನಂಚಿನ ರೆಸಾರ್ಟ್‌ಗಳಿಗೆ ಅನುಮತಿ ನೀಡುವುದು ಪ್ರಾದೇಶಿಕ ಆಯುಕ್ತರೇ ಹೊರತು ಅರಣ್ಯ ಇಲಾಖೆ ಅಲ್ಲ. ಈ ರೆಸಾರ್ಟ್ಗಳಿಂದ ವನ್ಯಜೀವಿಗಳಿಗೆ ತೊಂದರೆ ಆಗುತ್ತಿದೆ ಎಂದು ಕಂಡುಬಂದರೆ ಈ ಬಗ್ಗೆ ಪರಿಶೀಲಿಸಿ, ಪ್ರಾದೇಶಿಕ ಆಯುಕ್ತರ ನೇತೃತ್ವದ ಸಮಿತಿಗೆ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲು ಸೂಚಿಸಲಾಗುವುದು.

 

 

ಆಂದೋಲನ ಡೆಸ್ಕ್

Recent Posts

ವೀರನಪುರ ಬಳಿ ಟಿಪ್ಪರ್ ಪಲ್ಟಿ: ಚಾಲಕ ಸಾವು

ಚಾಮರಾಜನಗರ: ತಾಲ್ಲೂಕಿನ ವೀರನಪುರ ಸಮೀಪವಿರುವ ಕರಿಕಲ್ಲು ಕ್ವಾರಿಯೊಂದರಲ್ಲಿ ಟಿಪ್ಪರ್ ಮಗುಚಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.…

4 hours ago

ಮುಂದಿನ ದಿನಗಳಲ್ಲಿಯೂ ಬಂಜಾರ ಸಮುದಾಯದವರ ಜೊತೆಗೆ ಸದಾ ಬೆಂಬಲವಾಗಿರುತ್ತೇನೆ: ಬಿಜೆಪಿ ಒ.ಬಿ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಜನಧ್ವನಿ ವೆಂಕಟೇಶ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಬಂಜಾರ ಸಮುದಾಯದ ಜನತೆಗೆ ಒಳ ಮೀಸಲಾತಿಯಲ್ಲಿ ಆಗಿರುವ ಅನ್ಯಾಯದ ಬಗ್ಗೆ…

4 hours ago

ಕರ್ನಾಟಕ ಸೋಲಿಸಿ ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತಿ ಹಿಡಿದ ಜಮ್ಮು-ಕಾಶ್ಮೀರ

ಹುಬ್ಬಳ್ಳಿ: ಹನ್ನೊಂದು ವರ್ಷಗಳ ಬಳಿಕ ಚಾಂಪಿಯನ್‌ ಪಟ್ಟಕ್ಕೇರುವ ಕರ್ನಾಟಕದ ಕನಸು ನನಸಾಗಲಿಲ್ಲ. ಇದೇ ಮೊದಲ ಬಾರಿಗೆ ಫೈನಲ್‌ಗೆ ಬಂದು, ಜಮ್ಮು-ಕಾಶ್ಮೀರ…

8 hours ago

ಹನೂರಿನಲ್ಲಿ ವಿಜೃಂಭಣೆಯಿಂದ ನಡೆದ ಸೇವಾಲಾಲ್‌ ಜಯಂತಿ ಕಾರ್ಯಕ್ರಮ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹನೂರು ತಾಲೂಕು ಕೇಂದ್ರದಲ್ಲಿ ವಿಭಾಗಿಯ ಮಟ್ಟದ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು…

8 hours ago

ಹಣೆಯಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ: ಡಿ.ಕೆ.ಸುರೇಶ್‌

ಬೆಂಗಳೂರು: ಹಣೆ ಬರಹದಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿಕೆ ನೀಡಿದ್ದಾರೆ. ಈ…

9 hours ago

ಸದ್ದಿಲ್ಲದೆ ಸಮಾಜಸೇವೆಗೆ ನಿಂತ ಎಂಬಿಶ್ರೀ ಪ್ರತಿಷ್ಠಾನ ತಂಡ

ಹೇಮಂತ್‌ಕುಮಾರ್ ಮಂಡ್ಯ: ನಗರದ ಹಲವಾರು ಬಡಾವಣೆಗಳಲ್ಲಿನ ರಸ್ತೆಗಳು ಸಾರ್ವಜನಿಕ ಮೂತ್ರಾಲಯವಾಗಿ ಮೂಗುಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಎಲ್ಲೆಂದರಲ್ಲಿ ಕಸ ಎರಚಾಡುತ್ತ…

9 hours ago