ಕೆ. ಬಿ. ರಮೇಶನಾಯಕ
ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿರುವ ಗಜಪಡೆಯ ಹೊಸ ಸಾರಥಿಯ ಆಯ್ಕೆಗಾಗಿ ನಾಲ್ಕು ದಿನಗಳಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ತಾಲೀಮಿನ ವೇಳೆ ಆನೆಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಶೀಘ್ರವೇ ಅಂಬಾರಿ ಆನೆ ಯಾವುದು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ಲಕ್ಷಾಂತರ ಜನರ ಗೌಜು-ಗದ್ದಲದ ನಡುವೆ ೭೫೦ ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಗಜ ಗಾಂಭೀರ್ಯ ದಿಂದ ೫ ಕಿ. ಮೀ. ಸಾಗುವ ಸಾಮರ್ಥ್ಯ ಇರುವ ಆನೆ ಆಯ್ಕೆಯತ್ತ ಅಧಿಕಾರಿಗಳ ಗಮನ ಕೇಂದ್ರೀಕೃತವಾಗಿದೆ. ಕಳೆದ ನಾಲ್ಕು ದಿನಗಳಿಂದ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಸ್ಥಾನದಿಂದ ಬನ್ನಿಮಂಟಪದವರೆಗೆ ನಡೆಯುತ್ತಿರುವ ತಾಲೀಮಿನಲ್ಲಿ ಮೊದಲ ತಂಡದ ಒಂಬತ್ತು ಆನೆಗಳು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಪಾಲ್ಗೊಳ್ಳುತ್ತಿದ್ದರೂ ಇಲಾಖೆಯ ಅಧಿಕಾರಿಗಳು ಮೂರು ಆನೆಗಳ ಮೇಲೆ ವಿಶೇಷ ದೃಷ್ಟಿ ನೆಟ್ಟಿದ್ದಾರೆ. ತಾಲೀಮಿನ ವೇಳೆ ಧನಂಜಯ, ಪ್ರಶಾಂತ ಹಾಗೂ ಮಹೇಂದ್ರ ಆನೆಗಳ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತಿದ್ದು, ಆನೆ ತಜ್ಞರು, ಹಿರಿಯ ಅಧಿಕಾರಿಗಳೊಂದಿಗೆ ನಿತ್ಯ ಸಮಾಲೋಚನೆ ನಡೆಸುವ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಹಿಂದೆ ಜಂಬೂಸವಾರಿಯಲ್ಲಿ ದ್ರೋಣ, ಬಲರಾಮ, ಅರ್ಜುನ, ಅಭಿಮನ್ಯು ಆನೆಗಳು ೭೫೦ ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಸಾಗಿ ಎಲ್ಲರಿಂದಲೂ ಶಹಬ್ಬಾಸ್ ಅನಿಸಿಕೊಂಡಿದ್ದವು. ಇದೀಗ ಕ್ಯಾಪ್ಟನ್ ಇಲ್ಲದೆ ಆ. ೨೬ರಂದು ವೀರನಹೊಸಹಳ್ಳಿಯಲ್ಲಿ ನಡೆದ ಗಜಪಯಣದ ಮೂಲಕ ೨೮ರಂದು ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಕಾವೇರಿ, ಮಹೇಂದ್ರ, ಲಕ್ಷ್ಮೀ, ಏಕಲವ್ಯ, ಶ್ರೀಕಂಠ ಆನೆಗಳು ಅರಮನೆ ಅಂಗಳ ಪ್ರವೇಶ ಮಾಡಿವೆ.
ಮೂರು ಆನೆಗಳ ಮೇಲೆ ನಿಗಾ:
ಕಳೆದ ಭಾನುವಾರದಿಂದ ಮೆರವಣಿಗೆ ತಾಲೀಮು ನಡೆಯುತ್ತಿದ್ದು, ನಿತ್ಯ ಒಂದೊಂದು ಆನೆ ತಾಲೀಮನ್ನು ಮುನ್ನಡೆಸುತ್ತಿವೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಧನಂಜಯ, ಪ್ರಶಾಂತ, ಮಹೇಂದ್ರ ಆನೆಗಳನ್ನು ಕೇಂದ್ರೀಕರಿಸಿಕೊಂಡು ಸಂಪೂರ್ಣ ನಿಗಾ ಇರಿಸಿದ್ದಾರೆ. ಮೈಸೂರು ವೃತ್ತದ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಎಸ್. ಎಸ್. ರವಿಶಂಕರ್, ಡಿಸಿಎಫ್ ಡಾ.ಐ.ಬಿ.ಪ್ರಭು ಗೌಡ ಸೇರಿದಂತೆ ಆನೆ ವೈದ್ಯರು, ಅರಣ್ಯ ಇಲಾಖೆಯಿಂದ ನಿಯೋಜನೆಗೊಂಡಿರುವ ಅಧಿಕಾರಿಗಳು ಗಮನಹರಿಸಿದ್ದಾರೆ. ತಾಲೀಮಿನ ವೇಳೆ ಆನೆಗಳನ್ನು ಹಿಂಬಾಲಿಸುವ ಅಧಿಕಾರಿಗಳು ಜನ ಮತ್ತು ವಾಹನ ದಟ್ಟಣೆಯ ಸಂದರ್ಭದಲ್ಲಿ ಆನೆಗಳ ವರ್ತನೆ, ಸಾರ್ವಜನಿಕರು ಅಲ್ಲಲ್ಲಿ ಕೊಡುವ ಹಣ್ಣುಗಳನ್ನು ಸ್ವೀಕರಿಸುವಾಗ ವರ್ತಿಸುವ ರೀತಿ, ಮಾವುತ ಮತ್ತು ಕಾವಾಡಿ ಕೊಡುವ ಸನ್ನೆಯನ್ನು ಅರ್ಥೈಸಿಕೊಳ್ಳುವುದು. ಬಲಭಾಗದಲ್ಲಿ ಆಗಿಂದಾಗ್ಗೆ ಸೈರನ್ ಮಾಡಿಕೊಂಡು ಬರುವ ಆಂಬ್ಯುಲೆನ್ಸ್ ಸದ್ದಿಗೆ ಕಿವಿ ಕೊಡುವುದನ್ನು ಅಧಿಕಾರಿಗಳು ನೋಡುತ್ತಿದ್ದಾರೆ.
ಹೀಗಾಗಿ, ದಿನಕಳೆದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಮೂರು ಆನೆಗಳಲ್ಲಿ ಒಂದನ್ನು ಆಯ್ಕೆ ಪ್ರಕ್ರಿಯೆಗೆ ನಿರ್ಧರಿಸುವುದಕ್ಕೆ ಬೇಕಾದ ಎಲ್ಲಾ ಮಾನದಂಡಗಳನ್ನು ಕಲೆ ಹಾಕುತ್ತಿದ್ದಾರೆ. ಮರದ ಅಂಬಾರಿ ಹೊರುವ ತಾಲೀಮಿನವರೆಗೂ ನಿರ್ಧಾರ ಕಷ್ಟ. ಅಕ್ಟೋಬರ್ ೨೦ರಂದು ವಿಜಯದಶಮಿ ಮೆರವಣಿಗೆ (ಜಂಬೂಸವಾರಿ) ಇರುವ ಕಾರಣ ಅಧಿಕಾರಿಗಳು ಯಾವುದೇ ಆತುರದ ನಿರ್ಧಾರ ಮಾಡದೆ ಮರಳಿನ ಮೂಟೆ ಹಾಗೂ ಮರದ ಅಂಬಾರಿ ಹೊರುವ ಸಾಮರ್ಥ್ಯ ಪರೀಕ್ಷೆ ಮುಗಿಸಿದ ಬಳಿಕ ದಸರಾ ಗಜಪಡೆಯ ನೂತನ ಸಾರಥಿ ಆಯ್ಕೆಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಅಂಬಾರಿ ಆನೆ ಆಯ್ಕೆಯನ್ನು ಸರ್ಕಾರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ವಿವೇಚನೆಗೆ ಬಿಟ್ಟಿರುವ ಪರಿಣಾಮವಾಗಿ ಆನೆಗಳ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳು ಕೂಡ ಸಾಧಕ-ಬಾಧಕಗಳನ್ನು ಪರಿಗಣಿಸಿಯೇ ಒಂದು ನಿರ್ಧಾರಕ್ಕೆ ಬರಲಿದ್ದು, ಅಲ್ಲಿಯವರೆಗೆ ಜನರು ಕಾಯುವುದು ಅನಿವಾರ್ಯವಾಗಿದೆ.
ಚಾ.ನಗರದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಚಾರ ಮಾಡಲಿರುವ ವಾಹನಗಳು ಚಾಮರಾಜನಗರ : ಧಮ್ಮ ಪಯಣ ಜಾಗೃತಿ ಜಾಥಾದ…
ಮೈಸೂರು ದಸರಾ ಎಂದರೆ ಜಂಬೂಸವಾರಿ, ಅರಮನೆಯ ದೀಪಾಲಂಕಾರ, ಸಂಗೀತ-ನೃತ್ಯ ಕಾರ್ಯಕ್ರಮಗಳು, ಯುವ ದಸರಾ, ಆಹಾರ ಮೇಳ, ವಸ್ತುಪ್ರದರ್ಶನ ಮಾತ್ರವಲ್ಲ. ಕಳೆದ…
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 2016ನೇ ಬ್ಯಾಚ್‌ನ…
ಬೆಂಗಳೂರು : ಸಾರ್ವಜನಿಕರಿಂದ ವ್ಯಕ್ತವಾದ ತೀವ್ರ ವಿರೋಧ ಹಾಗೂ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವಿವಾದಿತ ‘ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ)…
ಬೆಂಗಳೂರು : ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್…