Andolana originals

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ | ಮೈಸೂರು ದಸರಾ ಚಲನಚಿತ್ರೋತ್ಸವಕ್ಕೆ ಕೊಕ್?!

ಮೈಸೂರು ದಸರಾ ಎಂದರೆ ಜಂಬೂಸವಾರಿ, ಅರಮನೆಯ ದೀಪಾಲಂಕಾರ, ಸಂಗೀತ-ನೃತ್ಯ ಕಾರ್ಯಕ್ರಮಗಳು, ಯುವ ದಸರಾ, ಆಹಾರ ಮೇಳ, ವಸ್ತುಪ್ರದರ್ಶನ ಮಾತ್ರವಲ್ಲ. ಕಳೆದ ಸುಮಾರು ಎರಡು ದಶಕಗಳಲ್ಲಿ ಚಲನಚಿತ್ರೋತ್ಸವವೂ ದಸರಾದ ಪ್ರಮುಖ ಸಾಂಸ್ಕೃತಿಕ ಆಕರ್ಷಣೆಯಾಗಿ ಬೆಳೆದಿತ್ತು. ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರಗಳ ಪ್ರದರ್ಶನದಿಂದ ಆರಂಭವಾದ ಈ ಪ್ರಯತ್ನ, ಮುಂದೆ ಭಾರತೀಯ ಹಾಗೂ ವಿಶ್ವದ ಚಿತ್ರಗಳನ್ನು ಪರಿಚಯಿಸುವ ಚಿತ್ರೋತ್ಸವವಾಗಿ ರೂಪುಗೊಂಡಿತು. ಜೊತೆಗೆ ಚಲನಚಿತ್ರ ಕಾರ್ಯಾಗಾರ, ಕಿರುಚಿತ್ರ ಸ್ಪರ್ಧೆ, ಛಾಯಾಚಿತ್ರ ಪ್ರದರ್ಶನ, ನಿರ್ದೇಶಕರೊಂದಿಗೆ ಸಂವಾದ ಮುಂತಾದ ಚಟುವಟಿಕೆಗಳನ್ನೂ ಒಳಗೊಂಡಿತು.

೨೦೦೯ರ ದಸರಾ ಚಲನಚಿತ್ರೋತ್ಸವ ಐದು ದಿನಗಳ ಕಾರ್ಯಕ್ರಮವಾಗಿತ್ತು. ನಗರದ ವಿವಿಧ ಚಿತ್ರಮಂದಿರಗಳಲ್ಲಿ ೬೦ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಕನ್ನಡ ಚಿತ್ರರಂಗದ ಹಲವು ಪ್ರಮುಖ ಕಲಾವಿದರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ೨೦೧೦ರಲ್ಲಿ ದಸರಾ ಚಲನಚಿತ್ರೋತ್ಸವವು ಇನ್ನಷ್ಟು ವಿಸ್ತಾರವಾಯಿತು. ಸುಮಾರು ೯೦ ಚಿತ್ರಗಳ ಪ್ರದರ್ಶನ, ಸಾಮಾನ್ಯ ಪ್ರೇಕ್ಷಕರಿಗೆ ಕೈಗೆಟುಕುವಂತೆ ರೂ.೫ ಮತ್ತು ರೂ.೧೦ರ ಮಟ್ಟದಲ್ಲಿ ಟಿಕೆಟ್ ದರ ನಿಗದಿಪಡಿಸಿದ ಸುದ್ದಿ ಇತ್ತು. ಅದೇ ವರ್ಷ, ಮೈಸೂರು ಫಿಲಂ ಸೊಸೈಟಿಯ ನೆರವಿನೊಂದಿಗೆ, ಹಲವು ವಿದೇಶಿ ಚಿತ್ರಗಳ ಪ್ರದರ್ಶನವೂ ಆಗಿತ್ತು.

೨೦೧೭ರಲ್ಲಿ ಈ ಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ ವ್ಯಾಪ್ತಿ ನೀಡುವ ಕೆಲಸ ಆಯಿತು. ಮೈಸೂರು ದಸರಾ ಚಲನಚಿತ್ರೋತ್ಸವ ಎಂದು ಇದನ್ನು ಕರೆಯಲಾಯಿತು. ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಮಾದರಿಯಲ್ಲಿ ಅದನ್ನು ಬೆಳೆಸುವ ಉದ್ದೇಶವನ್ನು ಅಽಕಾರಿಗಳು ಪ್ರಕಟಿಸಿದ್ದರು. ಆ ವರ್ಷ ಕನ್ನಡ ಚಿತ್ರಗಳಲ್ಲದೆ, ವಿದೇಶಿ ಚಿತ್ರಗಳು, ಜೊತೆಗೆ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ಪ್ರದರ್ಶನವಾಗುತ್ತಿದ್ದ ಭಾರತೀಯ ಚಿತ್ರಗಳೂ ಪ್ರದರ್ಶನದಲ್ಲಿದ್ದವು. ಚಿತ್ರೋತ್ಸವವನ್ನು ಕೇವಲ ದಸರಾದ ಮನರಂಜನಾ ಕಾರ್ಯಕ್ರಮವನ್ನಾಗಿ ನೋಡುವುದಕ್ಕಿಂತ, ಮೈಸೂರಿನಲ್ಲಿ ಚಲನಚಿತ್ರ ಸಂಸ್ಕೃತಿಯನ್ನು ಬೆಳೆಸುವ ವೇದಿಕೆಯಾಗಿ ರೂಪಿಸುವ ಪ್ರಯತ್ನ ಲ್ಲಿ ನಡೆದಿತು. ಅದು ಅಗತ್ಯವೂ ಆಗಿತ್ತು.

೨೦೧೮ರಲ್ಲಿ ದಸರಾ ಚಿತ್ರೋತ್ಸವವು ಮತ್ತೊಂದು ಮಹತ್ವದ ಬದಲಾವಣೆ ಕಂಡಿತು. ಮೊದಲ ಬಾರಿಗೆ ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರೋತ್ಸವ ನಡೆಸಲಾಯಿತು. ಕನ್ನಡ ಚಿತ್ರಗಳು, ವಿದೇಶಿ ಚಿತ್ರಗಳು ಜೊತೆಗೆ ಭಾರತೀಯ ಪನೋರಮಾ ಚಿತ್ರಗಳು ಪ್ರದರ್ಶನ ಕಾಣುವುದರ ಜೊತೆಗೆ ಚಲನಚಿತ್ರ ನಿರ್ಮಾಣದ ಕಾರ್ಯಾಗಾರ, ಸಿನಿಮಾ ಕುರಿತ ಉಪನ್ಯಾಸಗಳು ಮತ್ತು ಕಿರುಚಿತ್ರ ಸ್ಪರ್ಧೆ ಕೂಡ ಆಯೋಜಿಸಲಾಗಿತ್ತು. ಇದು ಚಿತ್ರೋತ್ಸವಗಳಲ್ಲಿ ಸಾಮಾನ್ಯವಾಗಿ ಇರಬೇಕಾದ ಕಾರ್ಯಕ್ರಮಗಳು.

೨೦೨೦ ಮತ್ತು ೨೦೨೧ರ ದಸರಾ ವೇಳೆ ಕೋವಿಡ್-೧೯ ಹಿನ್ನೆಲೆಯಲ್ಲಿ ಮಕ್ಕಳ ದಸರಾ, ಮಹಿಳಾ ದಸರಾ, ಆಹಾರ ಮೇಳ, ಪ್ರದರ್ಶನ ಮುಂತಾದ ಹಲವು ಕಾರ್ಯಕ್ರಮಗಳ ಜೊತೆಗೆ ಚಲನಚಿತ್ರೋತ್ಸವವನ್ನು ಅನಿವಾರ್ಯವಾಗಿ ಕೈಬಿಡಲಾಗಿತ್ತು.

೨೦೨೨ರಿಂದ ಮತ್ತೆ ಚಿತ್ರೋತ್ಸವ ನಡೆಯಿತು. ಈ ಬಾರಿ ಆಯ್ಕೆಯಲ್ಲೂ ಗುಣಮಟ್ಟದತ್ತ ಹೆಚ್ಚಿನ ಗಮನ ಇತ್ತು. ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರಗಳು, ಭಾರತೀಯ ಪನೋರಮಾದಲ್ಲಿ ಆಯ್ಕೆಯಾದ ಚಿತ್ರಗಳ ಜೊತೆಗೆ ಕನ್ನಡದ ಚಿತ್ರಗಳು. ಅಗಲಿದ ಪುನೀತ್ ರಾಜಕುಮಾರ್ ಚಿತ್ರಗಳ ಪುನರವಲೋಕನ, ಸಂಚಾರಿ ವಿಜಯ್ ನೆನಪಿನ ಚಿತ್ರಗಳಿದ್ದವು. ಇದರ ಜೊತೆಗೆ ಕಿರುಚಿತ್ರ ನಿರ್ಮಾಣ ಕಾರ್ಯಾಗಾರ ಮತ್ತು ಕಿರುಚಿತ್ರ ಸ್ಪರ್ಧೆ ಕೂಡ ನಡೆದವು. ಮುಂದಿನ ವರ್ಷ ಎಂದಿನ ವಿಭಾಗಗಳ ಚಿತ್ರಗಳಲ್ಲದೆ, ಅ ಜೊತೆಗೆ ಜಪಾನಿನ ನಿರ್ದೇಶಕ ಅಕಿರಾ ಕುರೊಸಾವಾ ಪುನರವಲೋಕನ, ನರಸಿಂಹರಾಜು ಶತಮಾನೋತ್ಸವ ನೆನಪಿನ ಚಿತ್ರಗಳಿದ್ದವು.

೨೦೨೪ರಲ್ಲಿ ಇತರ ವಿಭಾಗಗಳ ಜೊತೆಗೆ ಹಳೆಯ ಕನ್ನಡ ಚಿತ್ರಗಳಿಗೆ ವಿಶೇಷ ಸ್ಥಾನ ನೀಡಲಾಗಿತ್ತು. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕನಾರ್‌ಗ್, ಪುನೀತ್ ರಾಜ್‌ಕುಮಾರ್, ರಮೇಶ್ ಅರವಿಂದ್, ಶ್ರೀನಾಥ್, ಶಿವರಾಜ್‌ಕುಮಾರ್, ರವಿಚಂದ್ರನ್ ಮುಂತಾದವರ ಚಿತ್ರಗಳನ್ನು ‘ಓಲ್ಡ್ ಇಸ್ ಗೋಲ್ಡ್’ ವಿಭಾಗದಲ್ಲಿ ಪ್ರದರ್ಶಿಸಲಾಯಿತು. ಜೊತೆಗೆ ಕೊಡವ ಮತ್ತು ಅರೆಭಾಷೆ ಸೇರಿದಂತೆ ವಿವಿಧ ಭಾಷೆಗಳ ಚಿತ್ರಗಳಿಗೂ ಅವಕಾಶ ನೀಡಲಾಗಿತ್ತು.

ಕಳೆದ ವರ್ಷ, ೨೦೨೫ರ ದಸರಾ ಚಲನಚಿತ್ರೋತ್ಸವವನ್ನು ಹಿರಿಯ ನಟಿ ಬಿ. ಸರೋಜದೇವಿ ಅವರಿಗೆ ಸಮರ್ಪಿಸಲಾಗಿತ್ತು. ಅವರ ಪ್ರಮುಖ ಚಿತ್ರಗಳ ವಿಶೇಷ ಪುನರವಲೋಕನ ಆಯೋಜಿಸಲಾಗಿತ್ತು. ಪುಟ್ಟಣ್ಣ ಕಣಗಾಲ, ಎನ್. ಲಕ್ಷ್ಮೀನಾರಾಯಣ, ಸಿದ್ದಲಿಂಗಯ್ಯ ಮತ್ತು ರವಿ ಅವರಿಗೂ ಛಾಯಾಚಿತ್ರ ಪ್ರದರ್ಶನದ ಮೂಲಕ ಗೌರವ ಸಲ್ಲಿಸಲಾಯಿತು. ಕಿರುಚಿತ್ರ ಸ್ಪರ್ಧೆಯೂ ಮುಂದುವರಿಯಿತು. ೨೦೨೫ರಲ್ಲಿ ಕಿರುಚಿತ್ರಗಳಿಗೆ ಅತ್ಯುತ್ತಮ ಚಿತ್ರ ಮಾತ್ರವಲ್ಲದೆ ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಛಾಯಾಗ್ರಹಣ ವಿಭಾಗಗಳಲ್ಲೂ ಪ್ರಶಸ್ತಿ ನೀಡುವ ವ್ಯವಸ್ಥೆ ಮಾಡಲಾಗಿತ್ತು.

೨೦೨೬ರ ದಸರಾ ಆಚರಣೆಯ ವೇಳೆ, ಚಲನಚಿತ್ರೋತ್ಸವವನ್ನು ಕೈಬಿಡಲಾಗಿದೆ ಎನ್ನುವ ವರ್ತಮಾನ ಕೇಳಿ ಬರುತ್ತಿದೆ. ಇದು ನಿಜವೇ ಆಗಿದ್ದರೆ, ಸ್ವತಃ ಚಲನಚಿತ್ರ ಪ್ರದರ್ಶಕರೂ ಆಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ಇದು ಬಂದಿದೆಯೇ ಎನ್ನವ ಪ್ರಶ್ನೆ, ಚಿತ್ರೋತ್ಸವಾಸಕ್ತರದ್ದು. ದಸರಾ ಮೆರವಣಿಗೆಯಲ್ಲಿ ಚಿತ್ರೋದ್ಯಮದ ಸ್ಥಬ್ದಚಿತ್ರಗಳಿರಬೇಕು, ಸಿನಿಮಾ ನಟ-ನಟಿಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿರುವ ಮುಖ್ಯಮಂತ್ರಿಗಳು ಚಿತ್ರೋತ್ಸವಕ್ಕೆ ಮುಖತಿರುಗಿಸುತ್ತಾರೆಯೇ? ಆ ಸಾಧ್ಯತೆ ಕಡಿಮೆ.

ದಸರಾ ಚಲನಚಿತ್ರೋತ್ಸವ ಕೇವಲ ಕೆಲವು ಸಿನಿಮಾಗಳನ್ನು ತೋರಿಸುವ ಕಾರ್ಯಕ್ರಮ ಆಗಿರಲಿಲ್ಲ. ಒಂದು ಹಂತದಲ್ಲಿ ಅದು ಮೈಸೂರಿನ ಸಾರ್ವಜನಿಕರಿಗೆ ಉತ್ತಮ ಕನ್ನಡ, ಭಾರತೀಯ ಮತ್ತು ವಿಶ್ವ ಸಿನಿಮಾಗಳನ್ನು ಪರಿಚಯಿಸುವ ವಾರ್ಷಿಕ ಸಿನಿಮಾ ವೇದಿಕೆಯಾಗಿ ಬೆಳೆದಿತ್ತು. ಜೊತೆಗೆ ಸಾಂಸ್ಕೃತಿಕ ರಾಜಧಾನಿ ಎಂದೇ ಹೆಸರಾದ ಮೈಸೂರಿನಲ್ಲಿ ಚಲನಚಿತ್ರ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನ ಒಂದು ಹೆಜ್ಜೆಯಾಗಿತ್ತು.

ಚಿತ್ರೋತ್ಸವ ನಡೆಸಲು ಸಾಕಷ್ಟು ಹಣ ಇಲ್ಲ ಎನ್ನುತ್ತಿವೆ ಮೂಲಗಳು. ಜಿಡಳಿತ ಮಾತ್ರ ಈ ಬಗ್ಗೆ ಹೇಳಬಹುದು.
ಈ ವರ್ಷ ನಡೆಸಲು ಉದ್ದೇಶಿಸಿರುವ ಕಂಬಳದ ವೆಚ್ಚದ ಜೊತೆ ಇದನ್ನು ತಾಳೆ ಹಾಕಲಾಗುತ್ತಿದೆ. ಈ ಹಿಂದಿನ ದಿನಗಳಲ್ಲಿ ಚಲನಚಿತ್ರ ಅಕಾಡೆಮಿ ಚಿತ್ರೋತ್ಸವಕ್ಕೆ ಹೊರಗಿನಿಂದ ಚಿತ್ರಗಳನ್ನು ತರಿಸಲು ನೆರವಾದ ಮಾಹಿತಿ ಇದೆ.

ವರ್ಷಗಳ ಹಿಂದೆ ಎಸ್. ವಿ. ರಾಜೇಂದ್ರ ಸಿಂಗ್ (ಬಾಬು) ಅಕಾಡೆಮಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಮೈಸೂರಿಗೂ ವಿಸ್ತರಿಸಿದ್ದರು. ಬೆಂಗಳೂರಿನಲ್ಲಿ ಚಿತ್ರೋತ್ಸವದ ಉದ್ಘಾಟನೆ, ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆದಿತ್ತು. ಆ ದಿನಗಳಲ್ಲಿ ರಾಜ್ಯದ ಕೆಲವು ಕಡೆ ಚಿತ್ರೋತ್ಸವ ನಡೆಸುವ ಪ್ರಸ್ತಾಪ ಆಗಿತ್ತು. ಮೈಸೂರಿನಲ್ಲಿ ನಡೆಸುವ ಚಿತ್ರೋತ್ಸವವನ್ನು ದಸರಾ ವೇಳೆ ಆಯೋಜಿಸುವ ಕುರಿತಂತೆಯೂ ಚರ್ಚೆ ಆಗಿತ್ತು. ಚಿತ್ರೋತ್ಸವ ರಾಜ್ಯ ಸರ್ಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಅದರ ಅಧೀನ ಅಕಾಡೆಮಿ ಜೊತೆ ಸೇರಿ ಹಮ್ಮಿಕೊಳ್ಳುವ ಕಾರ್ಯಕ್ರಮ.

ದಸರಾ ಅಂಗವಾಗಿ ಒಂದು ವಾರದ ಮಟ್ಟಿಗೆ ಮೈಸೂರಿಗೆ ವಿಶ್ವ ಸಿನಿಮಾವನ್ನು ಕರೆತಂದ, ಕನ್ನಡ ಚಿತ್ರರಂಗದ ಇತಿಹಾಸವನ್ನು ನೆನಪಿಸಿದ, ಹೊಸ ತಲೆಮಾರಿನ ಚಿತ್ರನಿರ್ಮಾತೃಗಳಿಗೆ ಕಾರ್ಯಾಗಾರ-ಕಿರುಚಿತ್ರ ಸ್ಪರ್ಧೆಗಳ ಮೂಲಕ ವೇದಿಕೆ ನೀಡಿದ ದಸರಾ ಚಲನಚಿತ್ರೋತ್ಸವಕ್ಕೆ ಈ ವರ್ಷ ಕೊಕ್ ನೀಡಿದ್ದೇ ಆದರೆ, ಅದು ಕೇವಲ ಒಂದು ಕಾರ್ಯಕ್ರಮ ನಿಂತಂತೆ ಆಗುವುದಿಲ್ಲ. ಮೈಸೂರು ದಸರಾದ ಸಾಂಸ್ಕೃತಿಕ ವ್ಯಾಪ್ತಿಯ ಒಂದು ಪ್ರಮುಖ ಕೊಂಡಿಯನ್ನು ಕಳಚಿದಂತಾಗುತ್ತದೆ. ಹಾಗಾಗಲಾರದು ಎಂದು ಆಶಿಸೋಣ.

ಈಗಾಗಲೇ, ಚಲನಚಿತ್ರ ವಾಣಿಜ್ಯ ಮಂಡಳಿ ಈ ಚಲನಚಿತ್ರೋತ್ಸವವನ್ನು ರದ್ದು ಮಾಡಬಾರದು ಎಂದು ಒತ್ತಾಯಿಸಿದೆ. ಈ ಹಿಂದೆ ಚಲನಚಿತ್ರೋತ್ಸವದ ಕಾರ್ಯಾಗಾರವೊಂದರ ಉದ್ಘಾಟನೆಗೆ ಬಂದಿದ್ದ ಪ್ರಶಸ್ತಿ ವಿಜೇತ ನಿರ್ದೇಶಕ ಪಿ ಶೇಷಾದ್ರಿ ಅವರು, ‘ಚಲನಚಿತ್ರ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಮತ್ತು ಯುವಸಮೂಹಕ್ಕೆ ಪಸರಿಸಲು ಅನುಕೂಲವಾಗುವ ಕಾರ್ಯಾಗಾರಗಳು, ರಸಗ್ರಹಣ ಶಿಬಿರಗಳು, ಕಿರುಚಿತ್ರ ನಿರ್ಮಾಣ ಸ್ಪರ್ಧೆಯೇ ಮುಂತಾಗಿ ಈ ಚಿತ್ರೋತ್ಸವದ ವೇಳೆ ನಡೆಯಬೇಕು. ಚಿತ್ರೋತ್ಸವವನ್ನು ರದ್ದು ಪಡಿಸುವುದು ಚಿತ್ರಾಸಕ್ತರಿಗೆ, ಅದರಲ್ಲೂ ಈ ದಿನಗಳ ಕನ್ನಡ ಚಿತ್ರರಂಗದ ಪರಿಸ್ಥಿಯಲ್ಲಿ ಸರ್ವಥಾ ಸಾಧುವಲ್ಲ’ ಎನ್ನುತ್ತಾರೆ.

ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಯ ನಿರ್ಧಾರ ಕೈಗೊಂಡಿರುವ ಸಂದರ್ಭದಲ್ಲೇ ದಸರಾ ಚಿತ್ರೋತ್ಸವವನ್ನು ಕೈಬಿಡುವುದಿಲ್ಲ ಎಂದುಕೊಳ್ಳೋಣ. ಹಿಂದಿನ ವರ್ಷಗಳಲ್ಲಿ ಚಿತ್ರಗಳ ಆಯ್ಕೆಯ ಕುರಿತಂತೆ ಒಂದಷ್ಟು ಅಪಸ್ವರಗಳು ಕೇಳಿಬಂದದ್ದಿವೆ. ಆಯ್ಕೆಯ ವೇಳೆ ಗುಣಮಟ್ಟದ ಚಿತ್ರಗಳನ್ನು ಕೈಬಿಟ್ಟ ಪ್ರಸಂಗಗಳೂ ಇದ್ದವು ಎನ್ನುವ ಆರೋಪ ಅವುಗಳಲ್ಲಿ ಮುಖ್ಯವಾದದ್ದು. ಭಾರತೀಯ ಚಿತ್ರಗಳ ವಿಷಯಕ್ಕೆ ಬಂದರೆ, ಅಲ್ಲಿ ಪನೋರಮಾ ವಿಭಾಗಕ್ಕೆ ಆಯ್ಕೆಯಾದ ಚಿತ್ರಗಳಿರುತ್ತವೆ. ವಿದೇಶಿ ಚಿತ್ರಗಳ ಆಯ್ಕೆಗೂ ಪ್ರಶಸ್ತಿಯೋ, ಇನ್ನೊಂದೋ ಮಾನದಂಡ ಆಗಬಹುದು. ಆದರೆ ಕೆಲವು ಕನ್ನಡ ಚಿತ್ರಗಳ ಆಯ್ಕೆಗೆ ಕನಿಷ್ಠ ಗುಣಮಟ್ಟದ ಗಮನವೂ ಇರಲಿಲ್ಲ ಎನ್ನಲಾಗಿದೆ. ಅಂತಹ ವಿಷಯಗಳ ಕುರಿತಂತೆ ಸಂಬಂಧಪಟ್ಟವರು ಗಮನ ಹರಿಸಲೇಬೇಕಾಗುತ್ತದೆ. ಚಿತ್ರೋತ್ಸವದ ಜೊತೆಯಲ್ಲಿ ಹಿಂದಿನಂತೆ ಕಾರ್ಯಾಗಾರಗಳು, ಗೋಷ್ಠಿಗಳು, ರಸಗ್ರಹಣ ಶಿಬಿರಗಳೇ ಮೊದಲಾಗಿ ಹಮ್ಮಿಕೊಳ್ಳುತ್ತಾರೆ ಎಂದು ಆಶಿಸೋಣ.

ತಿದ್ದುಪಡಿ
ಕಳೆದ ವಾರ ‘ಕಳಚಿದ ಚಲನಚಿತ್ರ ಪತ್ರಿಕೋದ್ಯಮದ ಹಿರಿಯ ಕೊಂಡಿ: ಶ್ರೀಕೃಪಾ’ ಶೀರ್ಷಿಕೆಯಲ್ಲಿ ಪ್ರಕಟವಾದ ಈ ಅಂಕಣದ ಎರಡನೇ ಪಾರಾದಲ್ಲಿ ‘ಶಾಲಾದಿನಗಳಿಂದಲೇ ಸಾಹಿತ್ಯಾಸಕ್ತಿ ಮೈಗೂಡಿಸಿಕೊಂಡಿದ್ದ ಶ್ರೀಕೃಪಾ ಅವರು ಚಲನಚಿತ್ರ ಪತ್ರಕರ್ತರಾಗಿ ಕೆಲಸ ಆರಂಭಿಸಿದ್ದು ಎಂ. ರಾಮನ್ ಅವರ ರೂಪಲೇಖ ಪತ್ರಿಕೆಯ ಮೂಲಕ’ ಎಂದಿದೆ. ರಾಮನ್ ಅವರು ‘ರೂಪಲೇಖ’ ವಾರಪತ್ರಿಕೆ ಆರಂಭಿಸಿದ್ದು ೧೯೬೬ರಲ್ಲಿ. ಅದೇ ಹೆಸರಿನ ಮಾಸಪತ್ರಿಕೆ ಬಿ. ಕೆ. ಗುರುರಾಜ್ ಅವರ ಸಹಕಾರದೊಂದಿಗೆ ೧೯೫೬ರಲ್ಲಿ ಪ್ರಕಟಣೆ ಆರಂಭಿಸಿತ್ತು. ಶ್ರೀಕೃಪಾ ಅವರು ಅಲ್ಲಿ ವೃತ್ತಿಜೀವನ ಆರಂಭಿಸಿದರು. ತಪ್ಪು ಮಾಹಿತಿಗಾಗಿ ವಿಷಾದಿಸುತ್ತೇನೆ – ಅಂಕಣಕಾರ.

 

ಆಂದೋಲನ ಡೆಸ್ಕ್

Recent Posts

‘ಧಮ್ಮಪಯಣ’ ಪ್ರಚಾರ ವಾಹನಗಳಿಗೆ ಎಆರ್‌ಕೆ ಚಾಲನೆ

ಚಾ.ನಗರದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಚಾರ ಮಾಡಲಿರುವ ವಾಹನಗಳು ಚಾಮರಾಜನಗರ : ಧಮ್ಮ ಪಯಣ ಜಾಗೃತಿ ಜಾಥಾದ…

1 hour ago

ಜಂಬೂಸವಾರಿ ; ಯಾರು ಹೊಸ ರಾಯಭಾರಿ?

ಕೆ. ಬಿ. ರಮೇಶನಾಯಕ ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿರುವ ಗಜಪಡೆಯ ಹೊಸ ಸಾರಥಿಯ ಆಯ್ಕೆಗಾಗಿ…

2 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌  4 ಶುಕ್ರವಾರ

2 hours ago

ಕೆಪಿಎಸ್‌ಸಿ ಹಗರಣ | ಜ್ಞಾನೇಂದ್ರ ಕುಮಾರ್ ಅಮಾನತ್ತು

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 2016ನೇ ಬ್ಯಾಚ್‌ನ…

12 hours ago

ವ್ಯಾಪಕ ಟೀಕೆ : ವಿವಾದಾತ್ಮಕ ʼಉದ್ಯಾನ ಮಸೂದೆʼ ಹಿಂಪಡೆಯಲು ಸರ್ಕಾರ ನಿರ್ಧಾರ

​ಬೆಂಗಳೂರು : ಸಾರ್ವಜನಿಕರಿಂದ ವ್ಯಕ್ತವಾದ ತೀವ್ರ ವಿರೋಧ ಹಾಗೂ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವಿವಾದಿತ ‘ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ)…

13 hours ago

ಕೆಪಿಎಸ್‌ಸಿ ಹಗರಣ | ಜ್ಞಾನೇಂದ್ರ ಕುಮಾರ್‌ ವಿರುದ್ಧ ಇನ್ನೊಂದು ಪ್ರಕರಣ ದಾಖಲು

ಬೆಂಗಳೂರು : ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್…

17 hours ago