Andolana originals

‘ಯಾವ ನಿಲ್ದಾಣವೂ ಅಂತಿಮವಾಗಿರಬಾರದು ಎನ್ನುವ ನಿಲ್ದಾಣಕ್ಕೆ ಬಂದಿದ್ದೇನೆ!’

ವಿಮರ್ಶಕ, ಚಿಂತಕ, ಪ್ರಾಧ್ಯಾಪಕ ಡಾ.ರಾಜೇಂದ್ರ ಚೆನ್ನಿ ಜೊತೆ ಕವಯಿತ್ರಿ ಜ.ನಾ. ತೇಜಶ್ರೀ ಮಾತುಕತೆ

• ‘ವಿಮರ್ಶೆ’ ಅಂದರೇನು? ಇದು ಬದುಕಿಗೆ ಎಷ್ಟು ಮುಖ್ಯ?

ರಾಜೇಂದ್ರ ಚೆನ್ನಿ: ‘ವಿಮರ್ಶೆಯೆಂದರೆ ಲೋಕ ವಿಮರ್ಶೆಯೆ’ ಎನ್ನುವುದು ನನ್ನ ನಂಬಿಕೆಯಾಗಿದೆ. ಅದು ಕೃತಿಯ ಅನುಭವವನ್ನು ಮಾತ್ರವಲ್ಲ, ವ್ಯಕ್ತಿಯಾಗಿ ನನ್ನ ಅನುಭವ, ನನ್ನ ಸಾಮಾಜಿಕ ಲೋಕದ ಅನುಭವ, ನಾನು ಒಪ್ಪಿಕೊಂಡಿರುವ, ತಿಳಿಯುವ ಹಾದಿ- ಇವೆಲ್ಲವನ್ನೂ ಒಟ್ಟುಗೂಡಿಸುವ ಪ್ರಯತ್ನ. ಹಾಗಾಗಿಯೇ ವಿಮರ್ಶೆಗೆ ಒಂದೇ ವ್ಯಾಖ್ಯಾನ ಇರಲಾರದು. ಒಂದೇ ಮಾರ್ಗವೂ ಇರಲಾರದು. ಸಾಹಿತ್ಯ ವಿಮರ್ಶೆಯು ಲೋಕ ವಿಮರ್ಶೆಯ ಒಂದು ರೂಪ. ಅದರ ವಿಶಿಷ್ಟತೆಯೆಂದರೆ, ಒಂದು ಕೃತಿ ಅಥವಾ ಸಾಹಿತ್ಯಕ್ಕೆ ಸಂಬಂಧಿಸಿದ ಸೈದ್ಧಾಂತಿಕ ಅಂಶದ ಮೇಲೆ ಕೇಂದ್ರೀಕರಿಸುತ್ತದೆ.

ವಿಮರ್ಶೆ ಬದುಕಿಗೆ ಮುಖ್ಯ. ಏಕೆಂದರೆ, ವಾಸ್ತವ ಅಂದರೇನು, ಅದು ನಮಗೆ ಹೇಗೆ ದಕ್ಕುತ್ತದೆ ಅಥವಾ ದಕ್ಕಬೇಕು, ಮನುಷ್ಯ ಸಂಬಂಧಗಳ ಸ್ವರೂಪವೇನು, ನಮಗೆ ದೊರಕಿರುವ ಸಮಾಜದಲ್ಲಿ ಆರೋಗ್ಯಕರವಾದ ಬದುಕನ್ನು ಹೇಗೆ ನಡೆಸಬೇಕು ಇವೆಲ್ಲ ಮುಖ್ಯ ಪ್ರಶ್ನೆಗಳನ್ನು ಅದು ಕೇಳಿಕೊಳ್ಳುತ್ತದೆ. ಅರ್ಥಪೂರ್ಣವಾದ ವಿಮರ್ಶೆ ಈಸ್ಥೆಟಿಕ್ ಆಗಿರುವುದಿಲ್ಲ. ಸರಳವಾಗಿ ಹೇಳುವುದಾದರೆ, ಎಚ್ಚರವಾಗಿ ಬದುಕುವವರು ಮಾಡುವ ಚಿಂತನೆ ವಿಮರ್ಶೆಯೇ ಹೌದು. ಕೆಲವರು ಅದನ್ನು ಬರೆಯುತ್ತಾರೆ ಅಷ್ಟೇ.
=========

• ಮಾರ್ಕ್ಸ್, ಮಾವೋಯಿಂದ ಗಾಂಧಿ, ಅಂಬೇಡ್ಕರ್‌ವರೆಗಿನ ಪಯಣದಲ್ಲಿ ಈಗ ನೀವು ತಲುಪಿರುವ ನಿಲ್ದಾಣ ಯಾವುದು?

ಚೆನ್ನಿ: ಯಾವ ನಿಲ್ದಾಣವೂ ಅಂತಿಮವಾಗಿರಬಾರದು ಎನ್ನುವ ನಿಲ್ದಾಣಕ್ಕೆ ಬಂದಿದ್ದೇನೆ! ನಿಲ್ದಾಣವೆಂದು ನಂಬಿ ನಿಂತರೆ ಪಯಣದ ಅಂತ್ಯವಲ್ಲವೆ? ಒಂದು ನಿಲುಗಡೆಗೆ ಬಂದು ನಿಂತರೆ ಸಿದ್ಧಾಂತವು ಬದುಕಿಗಿಂತ ದೊಡ್ಡದು ಎನ್ನುವ ಭ್ರಮೆ ಉಂಟಾಗಬಹುದು. ಹಾಗೆಂದ ಮಾತ್ರಕ್ಕೆ ಎಲ್ಲ ಸಿದ್ಧಾಂತಗಳೂ ಸಮಾನ ಎನ್ನುವ ಹಿಂನ ಭೋಳೆತನವೂ ಪ್ರಯೋಜನವಾಗಲಾರದು. ವಿಶೇಷ ಮಾರ್ಕ್ಸ್, ಗಾಂಧಿ ಇವರೆಲ್ಲ ತಮ್ಮ ಯುಗದ ವಾಸ್ತವಗಳನ್ನು ಅರ್ಥಮಾಡಿಕೊಳ್ಳಲು ತಮ್ಮ ಸಂದರ್ಶನ ತಾತ್ವಿಕತೆ ರೂಪಿಸಿಕೊಂಡರು. ಆ ತಾತ್ವಿಕತೆಯಲ್ಲಿ ಕಾಲ, ಯುಗಧರ್ಮದ ಎಲ್ಲೆಗಳನ್ನು ಮೀರಿದ್ದೂ ಇದೆ. ಅದನ್ನು ಎಚ್ಚರವಾಗಿ ನಮ್ಮ ಇಂದಿನ ದಂದುಗಗಳನ್ನು ಅರಿತುಕೊಳ್ಳಲು ಬಳಸುವುದು ಮುಖ್ಯವಾಗಿದೆ. ಇಷ್ಟು ತೀವ್ರವಾಗಿ, ಸಂಕೀರ್ಣವಾಗಿ ಜಗತ್ತು ಚರಿತ್ರೆಯಲ್ಲಿ ಬದಲಾವಣೆ ಆಗಿದ್ದು ಈ ಹಿಂದೆ ಆಗಿರಲಿಲ್ಲ. ಈ ಬಗೆಯ ಬವಣೆಗಳು, ಹಿಂಸೆಗಳೂ ಇರಲಿಲ್ಲ. ಹೀಗಾಗಿ ಅದನ್ನು ತಿಳಿಯಲು ಮಾರ್ಕ್ಸ್, ಗಾಂಧಿ, ಅಂಬೇಡ್ಕರ್ ಇವರೆಲ್ಲ ನನಗೆ ಬೇಕು ಅನ್ನಿಸುತ್ತದೆ.
==========

• ಒಂದು ಕಡೆ ಸಾಮಾಜಿಕ ಹೊಣೆಗಾರಿಕೆ, ಇನ್ನೊಂದೆಡೆ ಸಾಹಿತ್ಯ ವಿಮರ್ಶೆ- ಈ ಸರಸ ವಿರಸ ಸಂಬಂಧವನ್ನು ಹೇಗೆ ನಿರ್ವಹಿಸುತ್ತೀರ?

ಚೆನ್ನಿ: ನಾನು ವಿಮರ್ಶೆಗೆ ಪ್ರವೇಶಿಸಿದ್ದೇ ವಿದ್ಯಾರ್ಥಿ ದಿಸೆಯಲ್ಲಿ ಭಾಗವಹಿಸಿದ್ದ ಚಳವಳಿಗಳ ಹಿನ್ನೆಲೆಯಲ್ಲಿ. ನಮ್ಮದು 1970ರ ದಶಕದಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಓದಿದ ತಲೆಮಾರು. ಅದೂ ಧಾರವಾಡದಲ್ಲಿ. ಹೀಗಾಗಿ 1980ರ ದಶಕದಲ್ಲಿ ಶಿವಮೊಗ್ಗೆಗೆ ಬಂದ ಮೇಲೆ ವಿಮರ್ಶೆ ಮತ್ತು ಸಾಮಾಜಿಕ ಜವಾಬ್ದಾರಿಗಳು ಬೇರೆ ಬೇರೆ ಅನ್ನಿಸಲಿಲ್ಲ. ಒಮ್ಮೊಮ್ಮೆ ನನ್ನ ಬರಹ ತುಂಬಾ ‘ಸಾಮಾಜಿಕ’ ವಾಗುತ್ತಿದೆ ಅನ್ನಿಸುತ್ತದೆ. ಆದರೆ ಈವರೆಗೆ ‘ವಿರಸ’, ‘ವಿಚ್ಛೇದನ’ದ ಹಂತಕ್ಕೆ ಹೋಗಿಲ್ಲ. ಸದ್ಯಕ್ಕೆ ಜಗಳಗಂಟ ಸುಖಿ ಸಂಸಾರದ ಹಾಗೆಯೇ ಇದೆ!
===========

• ನೀವು ತರಗತಿಯಲ್ಲಿ ಪಾಠ ಮಾಡಿರುವ ಥಿಯರಿಗಳಿಗೂ, ನಿಮ್ಮ ವಿಮರ್ಶೆಗೂ ಹೇಗೆ ಸಂಬಂಧ?

ಚೆನ್ನಿ: ನಾನು ಬರೆಯಬಹುದಾಗಿದ್ದ ಒಳ್ಳೆಯ ವಿಮರ್ಶೆಯನ್ನು ತರಗತಿಗಳಲ್ಲಿ ಪಾಠ ಮಾಡಿದ್ದೇನೆ. ಅದರಲ್ಲೂ ಥಿಯರಿಗಳನ್ನು ಪಾಠ ಮಾಡುವಾಗ ಅವುಗಳನ್ನು ಕನ್ನಡ ಸೇರಿದಂತೆ ಅನೇಕ ಭಾಷೆಗಳ ಕೃತಿಗಳಿಗೆ ಅನ್ವಯಿಸಿ ನೋಡುವುದನ್ನು ಪಾಠ ಮಾಡುತ್ತ ಕಲಿತಿದ್ದೇನೆ. ಆ ಥಿಯರಿಗಳು ಸಹಜವಾಗಿ ನನ್ನ ಬರಹದಲ್ಲಿ ಪ್ರವೇಶಿಸಿವೆ. ಆದರೆ ಥಿಯರಿಗಳಿಗೆ ಸರ್ವಾಧಿಕಾರಿ ಸ್ವಭಾವ ಇರುವುದರಿಂದ ಎಚ್ಚರವಾಗಿರಲು ಪ್ರಯತ್ನಿಸುತ್ತೇನೆ. ಸದ್ಯ! ಸಾಹಿತ್ಯ ಕೃತಿಗಳು ಆಳದಲ್ಲಿ ಪ್ರಜಾಪ್ರಭುತ್ವವಾದಿಯಾಗಿರುತ್ತವೆ.
============

• ಈ ಹೊತ್ತಿನ ಕನ್ನಡ ಸಾಹಿತ್ಯ ವಿಮರ್ಶೆಯ ಆತಂಕಗಳೇನು ಮತ್ತು ಇದಕ್ಕಿರುವ ಭರವಸೆಗಳೇನು?

ಚೆನ್ನಿ: ಸಾಹಿತ್ಯವೆನ್ನುವುದು ಕಾಲದ ವಾಸ್ತವಗಳನ್ನು ವಿವರಿಸುವ ಒಂದು ಸಂಕಥನ (discourse) ಎಂದು ಕನ್ನಡ ವಿಮರ್ಶೆ ಒಪ್ಪಿಕೊಂಡಿದೆ. ಹೀಗಾಗಿ ಅದು ಸಾಹಿತ್ಯ ಮತ್ತು ಇತರ ಶಿಸ್ತುಗಳ ನಡುವೆ ಸಂಚಾರ ಮಾಡುತ್ತಲೇ ಇದೆ. ಆದರೆ ಕನ್ನಡ ವಿಮರ್ಶೆ ಹೀಗೆ ಬಹುಸ್ತರೀಯವಾದ ಚಿಂತನೆ ಮಾಡುವಾಗ ಸಾಹಿತ್ಯದ ಅನನ್ಯತೆಯನ್ನು (ಶ್ರೇಷ್ಠತೆಯನ್ನಲ್ಲ ಅಂಚಿಗೆ ತಳ್ಳದೇ ಇರುವಂತೆ ಕಾಳಜಿ ವಹಿಸುವುದು ಇಂದಿನ ಸವಾಲಾ ಗಿದೆ. ಸಾಹಿತ್ಯ ಹಾಗೂ ವಿಮರ್ಶೆ ಎರಡೂ ಇಂದು ಸಾಮಾಜಿಕ ಮಾಧ್ಯಮಗಳನ್ನು ಪ್ರವೇಶಿಸಿರುವುದರಿಂದ ವಿಮರ್ಶೆಗೆ ಇರಬೇಕಾದ ವ್ಯವಧಾನ ಮತ್ತು ಏಕಾಗ್ರತೆ ಬದಲಾಗಿ ಅವಸರದ ಓದು, ಅವಸರದ ವಾದ ಮಂಡನೆಗಳು ವಿಮರ್ಶಾ ಪ್ರಜ್ಞೆಯನ್ನು ಆಕ್ರಮಿಸಿಕೊಳ್ಳುತ್ತಿವೆ. ಸಾಮಾಜಿಕ ಮಾಧ್ಯಮಗಳು ಗುಂಪುಗಾರಿಕೆಗೆ ಹೇಳಿ ಮಾಡಿಸಿದ ವೇದಿಕೆಗಳಾಗಿ ಬಿಟ್ಟಿರುವುದರಿಂದ ಅಭಿಪ್ರಾಯ ಮಂಡನೆಯಲ್ಲಿ ಆಗ್ರಹ, ಆಕ್ರಮಣಗಳು ಹೆಚ್ಚಾಗುತ್ತಿವೆ. ಒಂದು ಗುಂಪು ಒಂದು ಕೃತಿಯ ಬಗ್ಗೆ ಏನು ಹೇಳ ಬಹುದು ಎಂದು ಮೊದಲೇ ಊಹಿಸಬಹುದಾದ ಸ್ಥಿತಿಯು ಸಾಂಸ್ಕೃತಿಕ ಅನಾರೋಗ್ಯದ ಲಕ್ಷಣ.

ಆದರೆ ಇದರ ಜೊತೆಗೆ ಕನ್ನಡ ವಿಮರ್ಶೆಯಲ್ಲಿದ್ದ ಯಜಮಾನಿಕೆ, ಅಧಿಕಾರ, ವರ್ಚಸ್ಸು ಇವುಗಳಿಗೆ ಬಲವಾದ ಪೆಟ್ಟು ಬಿದ್ದಿದ್ದು ತುಂಬ ಪಾಸಿಟಿವ್ ಆದ ವಿದ್ಯಮಾನವಾಗಿದೆ. ಈಗ ಬರೆಯುತ್ತಿರುವ ವಿಮರ್ಶೆಗಳಲ್ಲಿ ಅನೇಕರು ಪ್ರತಿಷ್ಠೆಯ ಆಧಾರದ ಮೇಲೆ ಅಭಿಪ್ರಾಯಗಳನ್ನು ಒಪ್ಪುವುದಿಲ್ಲ.
==============

• ‘ಪುಸ್ತಕ ಸಂಸ್ಕೃತಿ’ ಮತ್ತು ‘ಪುಸ್ತಕ ವಿಮರ್ಶೆಗೆ ಪರಸ್ಪರ ಸಂಬಂಧವಿದೆಯೆ?

ಚೆನ್ನಿ: ಹೌದು, ‘ಪುಸ್ತಕ ಸಂಸ್ಕೃತಿ ಯು ಗಟ್ಟಿಯಾಗಿ ಇರುವಾಗ ವಿಮರ್ಶೆಯು ಜವಾಬ್ದಾರಿಯುತವಾಗಿರುತ್ತದೆ, ಗಂಭೀರವಾಗಿರುತ್ತದೆ. ಅದು ಇಲ್ಲದಿದ್ದಾಗ ವಿಮರ್ಶೆಯು ಆತ್ಮವಿಶ್ವಾಸ ಕಳೆದುಕೊಳ್ಳುತ್ತದೆ. ವಿಮರ್ಶಕನಾಗಿ ನಾನು ಒಂದು ಸಮುದಾಯದ ಭಾಗವಾಗಿಲ್ಲವೆನ್ನುವ ತಬ್ಬಲಿತನದಿಂದ ಆತಂಕವೆನಿಸುತ್ತದೆ.
=============

• ಕನ್ನಡದಲ್ಲಿ ‘ಪುಸ್ತಕ ವಿಮರ್ಶೆ’ ಸೊರಗಿದೆ ಅನ್ನಿಸುವುದಿಲ್ಲವೆ?

ಚೆನಿ: ಪುಸ್ತಕ ವಿಮರ್ಶೆಗೆ ಜಾಗವೇ ಇಲ್ಲದಂತಾಗಿದೆ. ಅಲ್ಲದೆ ಪುಸ್ತಕ ವಿಮರ್ಶೆ 500 ಪದಗಳನ್ನು ಮೀರಬಾರದೆಂಬ ನಿಷೇಧಾಜ್ಞೆಯನ್ನು ‘ಪ್ರಜಾವಾಣಿ’ಯೂ ಹೇರಿದೆ. ಇದು ಆತಂಕದ ವಿಷಯ. ಶ್ರೇಷ್ಠ ವಿಮರ್ಶೆ ಬಹುಪಾಲು ಪುಸ್ತಕ ವಿಮರ್ಶೆಯಾಗಿಯೇ ಹೊರಬಂದಿದೆ; ಬರುತ್ತಿದೆ. ಆದರೆ ಕನ್ನಡದಲ್ಲಿ ಅದಕ್ಕೆ ಬೇಕಾದ space ಈಗ ಇಲ್ಲದಂತಾಗಿದೆ.
=============

• ಹಲವು ದಶಕಗಳ ಕಾಲ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದೀರಿ. ಕನ್ನಡವು ಇಂದು ‘ಮನೆಭಾಷೆ ಯಾಗಿ ಉಳಿಯುತ್ತಿದೆಯೇನೋ ಅನ್ನುವ ಆತಂಕ ನನ್ನದು…

ಚೆನ್ನಿ: ಹಾಗೆ ಹೇಳಲಾರೆ. ಒಂದು ಕಡೆಗೆ ಅನುವಾದಗಳ ಮೂಲಕ ಕನ್ನಡವು, ವಿಶೇಷವಾಗಿ ಜ್ಞಾನಗಳ ದೃಷ್ಟಿಯಿಂದ ಅಗಾಧವಾಗಿ ಹಿಗ್ಗತೊಡ ಗಿದೆ. ಕಳೆದ ಕೆಲವು ವರ್ಷಗಳಲ್ಲಿ ಜಗತ್ತಿನ ಮುಖ್ಯ ಸ್ತ್ರೀವಾದಿ ಬರಹ, ರಾಜಕೀಯ ಬರಹ, ಸಮಾಜವಿಜ್ಞಾನ ಬರಹ ಕನ್ನಡವನ್ನು ಪ್ರವೇಶಿಸಿವೆ. ಅದೇ ಪ್ರಮಾಣದಲ್ಲಿ ಅನೇಕ ಭಾಷೆಗಳಲ್ಲಿಯ ಸೃಜನಶೀಲ ಕೃತಿಗಳು ಕೂಡ. ಹೀಗಾಗಿ ಕೇವಲ ಕನ್ನಡದಲ್ಲಿ ಓದುವ ವ್ಯಕ್ತಿ ಕೂಡ ಈಗ ಜಾಗತಿಕ ಜ್ಞಾನ, ಬರಹಗಳ ಪರಿಚಯ ಮಾಡಿಕೊಳ್ಳಬಲ್ಲ. ಈಗಿರುವ ಸವಾಲೆಂದರೆ, ಇದನ್ನೆಲ್ಲ ಅರಗಿಸಿಕೊಂಡು ಕನ್ನಡದ್ದೇ ಆದ ಅರಿವನ್ನು ಕನ್ನಡದಲ್ಲಿಯೇ ಸೃಷ್ಟಿಸುವ ಕೆಲಸವನ್ನು ಮಾಡುವುದಾಗಿದೆ. ಅಲ್ಲದೆ ನಮ್ಮ ಮಧ್ಯಮವರ್ಗವು ಕನ್ನಡವನ್ನು ತನ್ನ ಕಲಿಕೆಯ, ಅರಿವಿನ ಹಾಗೂ ಚಿಂತನೆಯ ಭಾಷೆಯನ್ನಾಗಿ ಈಗ ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಇದೊಂದು ಆತಂಕಕಾರಿ ‘ಭಾಷಾ ವಲಸೆ. ಆದರೆ ಜಾಗತೀಕರಣದ ರಾಕ್ಷಸ ಶಕ್ತಿಯಿಂದಾಗಿ ಉಂಟಾದ ಈ ಸಾಮಾಜಿಕ ಸಂದರ್ಭವನ್ನು ಬದಲಿಸುವುದು ಹೇಗೆ? ಗೊತ್ತಿಲ್ಲ.

ಆಂದೋಲನ ಡೆಸ್ಕ್

Recent Posts

ನಾಯಕರೇ ಸುಳ್ಳುಕೋರರಾದರೆ ಅನುಯಾಯಿಗಳು ಸತ್ಯವಂತರಾಗಲು ಹೇಗೆ ಸಾಧ್ಯ? ಮೋದಿಗೆ ಸಿದ್ದರಾಮಯ್ಯ ಟಾಂಗ್‌

ಬೆಂಗಳೂರು: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜಕುಟುಂಬದ…

6 hours ago

‘ವಿದ್ಯಾಪತಿ’ ಹಾಡಿಗೆ ಜಗ್ಗೇಶ್‍ ಧ್ವನಿ; ‘ಅಯ್ಯೋ ವಿಧಿಯೇ …’

ಧನಂಜಯ್ ನಿರ್ಮಾಣದ ‘ವಿದ್ಯಾಪತಿ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಈ ಹಾಡನ್ನು…

6 hours ago

ಪ್ರಭಾಸ್‌ ಜತೆಗೆ ಹೊಂಬಾಳೆ ಫಿಲಂಸ್‍ ಮೂರು ಸಿನಿಮಾ ಘೋಷಣೆ

ಹೊಂಬಾಳೆ ಫಿಲಂಸ್‍ನ ವಿಜಯ್‍ ಕಿರಗಂದೂರು ಇದೀಗ ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಬೇರೆ ಭಾಷೆಗಳಿಗೂ ಕಾಲಿಟ್ಟಿದೆ. ಈಗಾಗಲೇ ‘ಕೆಜಿಎಫ್‍’, ‘ಸಲಾರ್‍’…

6 hours ago

ಕರ್ನಾಟಕ ಕಾಂಗ್ರೆಸ್‌ನ ಎಟಿಎಂ ಆಗಿದೆ: ಸಿದ್ದು ಸರ್ಕಾರದ ವಿರುದ್ಧ ಮೋದಿ ಗುಡುಗು

ಮುಂಬೈ : ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತ್ವತ್ವದ ಸರ್ಕಾರ ಕಾಂಗ್ರೆಸ್‌ನ ಎಟಿಎಂ ಆಗಿದೆ ಎಂದು ಪ್ರಧಾನಿ ನರೇಂದ್ರ ವಾಗ್ದಾಳಿ…

6 hours ago

ಚನ್ನಪಟ್ಟಣಕ್ಕೆ ಡಿ.ಕೆ ಸುರೇಶ್‌ ಕೊಡುಗೆ ಏನು: ನಿಖಿಲ್‌ ಪ್ರಶ್ನೆ

ಚನ್ನಪಟ್ಟಣ: ಡಿಸಿಎಂ ಡಿಕೆ ಶಿವಕುಮಾರ್‌ ಅವರು ನಿನ್ನೆ ಕ್ಷೇತ್ರದ ಪ್ರಚಾರ ವೇಳೆ ಚನ್ನಪಟ್ಟಣಕ್ಕೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಕೊಡುಗೆ…

8 hours ago

ವಕ್ಫ್‌ ವಿರುದ್ಧ ನಮ್ಮ ಆಸ್ತಿ ಉಳಿಸಿಕೊಳ್ಳಲು ಪ್ರತಿಭಟನೆ ಅಗತ್ಯ; ಪ್ರತಾಪ್‌ ಸಿಂಹ

ಮಡಿಕೇರಿ: ರಾತ್ರೋರಾತ್ರಿ ಈ ಭಾಗದ ಜನತೆಯ ಜಮೀನು ವಕ್ಫ್‌ ಆಸ್ತಿವೆಂದು ಸೃಷ್ಠಿಯಾಗುತ್ತಿದೆ. ಹೀಗಾಗಿ ನಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಸರ್ಕಾರದ ವಿರುದ್ಧ…

8 hours ago