Andolana originals

ʼದೇಶದ ನಿರ್ಧಾರಗಳು ವಿದೇಶಗಳಿಂದ ಆಗುತ್ತಿರುವಂತಿದೆʼ

 

ಕೃಷಿ ಚಳವಳಿಯ ಪ್ರಮುಖ ನಾಯಕರಾದ ರಾಕೇಶ್ ಟಿಕಾಯತ್ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖ ಮುಖಂಡರಾದ ಯುದ್ಧವೀರ್ ಸಿಂಗ್ ಅವರು, ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 90ನೇ ಜನ್ಮದಿನ ಆಚರಣೆ ಅಂಗವಾಗಿ ಚಾಮರಾಜನಗರ ಜಿಲ್ಲೆಯ ಅಮೃತ ಭೂಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಾರತ-ಅಮೆರಿಕದ ಹೊಸ ವ್ಯಾಪಾರ ಒಪ್ಪಂದದ ಕುರಿತು ‘ಆಂದೋಲನ’ ದಿನಪತ್ರಿಕೆಯೊಂದಿಗೆ ನಡೆಸಿದ ವಿಶೇಷ ಸಂದರ್ಶನದ ವಿವರ ಇಲ್ಲಿದೆ.

 

ಸಂದರ್ಶನ: ರಶ್ಮಿ ಕೋಟಿ

ʼದೇಶದ ನಿರ್ಧಾರಗಳು ವಿದೇಶಗಳಿಂದ ಆಗುತ್ತಿರುವಂತಿದೆʼ
‘ಆಂದೋಲನ’ ವಿಶೇಷ ಸಂದರ್ಶನದಲ್ಲಿ ರೈತ ನಾಯಕರಾದ ರಾಕೇಶ್ ಟಿಕಾಯತ್‌ ಹಾಗೂ ಯುದ್ಧವೀರ್ ಸಿಂಗ್‌ ಕಳವಳ

• ಆಂದೋಲನ : ಇತ್ತೀಚಿನ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ನಾವು ಸ್ವತಂತ್ರ ದೇಶದ ನಾಗರಿಕರು; ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ಕೆಲವು ತೀರ್ಮಾನಗಳು ಹೊರಗಿನಿಂದಲೇ ಆಗುತ್ತಿರುವಂತೆ ಕಾಣುತ್ತಿದೆ. ಯುದ್ಧ ವಿರಾಮದಿಂದ ಹಿಡಿದು, ತೈಲ ವನ್ನು ಯಾವ ದೇಶದಿಂದ ಖರೀದಿಸಬೇಕು ಎಂಬ ವಿಷಯಗಳವರೆಗೂ ಹೊರಗಿನ ಒತ್ತಡಗಳು ಹೆಚ್ಚುತ್ತಿರು ವಂತೆ ಕಾಣುತ್ತಿದೆ. ವ್ಯಾಪಾರ ಒಪ್ಪಂದಗಳ ಘೋಷಣೆ ಗಳೂ ವಿದೇಶಗಳಿಂದಲೇ ಹೊರ ಬರುತ್ತಿರುವುದು ಗೊಂದಲ ಉಂಟುಮಾಡುತ್ತಿದೆ. ದೇಶದನಿರ್ಧಾರಗಳು ನವದೆಹಲಿಯಿಂದ ಆಗುತ್ತಿವೆಯೋ ಅಥವಾ ವಿದೇಶ ಗಳಿಂದ ಆಗುತ್ತಿವೆಯೋ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಆಂದೋಲನ : ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಸುಂಕ ಕಡಿತ ಮತ್ತು ವ್ಯಾಪಾರ ಒತ್ತಡದ ಕ್ರಮಗಳನ್ನು ಅನುಸರಿಸುತ್ತಿ ರುವುದು ನ್ಯಾಯಸಮ್ಮತವೇ?
ಅಮೆರಿಕ ಭಾರತದ ವಸ್ತುಗಳ ಮೇಲೆ ವಿಧಿಸಿದ್ದ ಸುಂಕವನ್ನು ಶೇ.25ರಷ್ಟು ಕಡಿಮೆ ಮಾಡಿದ ಕ್ರಮವೂ ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳು ತಿರುವುದಕ್ಕೆ ಒತ್ತಡ ತರುವ ಪ್ರಯತ್ನದ ಭಾಗವಾಗಿದೆ. ರಷ್ಯಾದಿಂದ ತೈಲ ಖರೀದಿ ಭಾರತಕ್ಕೆ ಆರ್ಥಿಕವಾಗಿ ಲಾಭದಾಯಕವಾಗಿದ್ದು, ಭೌಗೋಳಿಕವಾಗಿ ಸಮೀಪ ದಲ್ಲಿರುವ ದೇಶದಿಂದ ತೈಲ ತರಿಸಿಕೊಳ್ಳುವುದು ಸುಲಭ ಹಾಗೂ ಕಡಿಮೆ ವೆಚ್ಚದಾಯಕ. ಈಗ ನಡೆದಿರುವ ಬೆಳವಣಿಗೆ ದೇಶದ ಜನರಿಗೆ ಮಾಡಿದ ದೊಡ್ಡ ಮೋಸ ಎಂದು ನಾವು ಭಾವಿಸುತ್ತೇವೆ. ಏಕೆಂದರೆ ಏಕಾಏಕಿ ವಾಷಿಂ ಗ್ಟನ್‌ನಿಂದ ಒಪ್ಪಂದ ಆಗಿದೆ ಎಂಬ ಸುದ್ದಿ ಬರುತ್ತದೆ.
ದೇಶದ ಸಾರ್ವಭೌಮತ್ವ ಎಂದರೆ ನಮ್ಮ ನಿರ್ಧಾರ ಗಳನ್ನು ನಾವು ಮತ್ತು ನಮ್ಮ ಸರ್ಕಾರವೇ ತೆಗೆದು ಕೊಳ್ಳಬೇಕು. ಆದರೆ ನಮ್ಮ ಬಗೆಗಿನ ತೀರ್ಮಾನಗಳನ್ನು ವಾಷಿಂಗ್ಟನ್‌ನಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಭಾರತ ದಂತಹ ದೊಡ್ಡ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಅನೇಕ ದೇಶಗಳು ಕಾಯುತ್ತಿರು ವಾಗ, ಒತ್ತಡದ ಮೂಲಕ ವ್ಯಾಪಾರ ನಿಯಮಗಳನ್ನು ವಿಧಿಸುವುದು ಸರಿಯಲ್ಲ.

• ಆಂದೋಲನ: ಈ ಒಪ್ಪಂದದಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆಯಲ್ಲ?
ನಮ್ಮ ದೇಶದಲ್ಲಿ ಕೃಷಿ ಎಂಬುದು ಉದ್ಯಮವಲ್ಲ, ಅದು ಜನರ ಜೀವನಶೈಲಿ ಮತ್ತು ಸಂಸ್ಕೃತಿಯ ಒಂದು
ಭಾಗ, ರೈತ ಪ್ರಧಾನ ದೇಶವಾಗಿರುವ ಭಾರತದ ಕೃಷಿ ವ್ಯವಸ್ಥೆ ಈ ಒಪ್ಪಂದದಿಂದ ಅಪಾಯಕ್ಕೆ ಸಿಲುಕಲಿದೆ. ಅದರಲ್ಲೂ ಸಣ್ಣ ಮತ್ತು ಅತಿಸಣ್ಣ ರೈತರು ಸಂಪೂರ್ಣ ವಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ದೊಡ್ಡ ದೊಡ್ಡ ಕಂಪೆನಿಗಳು ಕೃಷಿ ಕ್ಷೇತ್ರಕ್ಕೆ ಪ್ರವೇಶಿಸಿ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಬಹುದು. ಆಹಾರ ಪದಾರ್ಥಗಳ ಬೆಲೆ ಕೂಡ ದೊಡ್ಡ ಬಂಡವಾಳಶಾಹಿಗಳ ನಿಯಂತ್ರಣಕ್ಕೆ ಒಳಪಡುವ ಅಪಾಯ ಇದೆ.

ಒಟ್ಟು ಒಪ್ಪಂದ ಲಾಭದಾಯಕವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಅಮೆರಿಕದ ಉತ್ಪನ್ನಗಳು ಶೂನ್ಯ ಸುಂಕದೊಂದಿಗೆ ನಮ್ಮ ಮಾರುಕಟ್ಟೆಗೆ ಬಂದರೆ, ಅದ ರಿಂದ ನಿಜವಾಗಿ ಯಾವ ಲಾಭವಾಗುತ್ತದೆ. ನಮ್ಮ ರೈತರು ಇಂತಹ ಪರಿಸ್ಥಿತಿಯಲ್ಲಿ ಹೇಗೆ ಬದುಕು ಸಾಗಿಸಲಿದ್ದಾರೆ.

ಆಂದೋಲನ : ಈ ಒಪ್ಪಂದದಿಂದ ಭಾರತೀಯ ಕೃಷಿ ಉತ್ಪನ್ನಗಳ ಮೇಲೆ ಅಮೆರಿಕದಲ್ಲಿ ಸುಂಕ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆಯಲ್ಲ?
ಭಾರತೀಯ ಕೃಷಿ ಉತ್ಪನ್ನಗಳ ಮೇಲೆ ಅಮೆರಿಕದಲ್ಲಿ ಸುಂಕವನ್ನು ಶೇ.25ರಿಂದ ಶೇ.18ಕ್ಕೆ ಇಳಿಸಲಾಗಿದೆ ಎಂದು ಹೇಳುತ್ತಿದೆ. ಆದರೆ ಮೊದಲು ಸುಮಾರು ಶೇ.2.9 ಸುಂಕ ಮಾತ್ರವಿತ್ತು. ಅದನ್ನು ಶೇ.26ಕ್ಕೆ ಏರಿಸಲಾಗಿತ್ತು. ಹಾಗಾಗಿ ಈ ಒಪ್ಪಂದದಿಂದ ವಾಸ್ತವದಲ್ಲಿ ಶೇ.26ರಿಂದ ಶೇ.18ಕ್ಕೆ ಇಳಿದಿಲ್ಲ ಬದಲಾಗಿ ಶೇ.2.9ರಿಂದ ಶೇ.18ಕ್ಕೆ ಏರಿದೆ. ಇನ್ನೊಂದೆಡೆ, ಭಾರತ ಅಮೆರಿಕದ ಉತ್ಪನ್ನಗಳ ಮೇಲೆ ವಿಧಿಸುತ್ತಿದ್ದ ಸರಾಸರಿ ಶೇ.25 ಸುಂಕವನ್ನು ಶೂನ್ಯಕ್ಕೆ ಇಳಿಸಿದೆ. ಅಂದರೆ, ನಮ್ಮ ಉತ್ಪನ್ನಗಳಿಗೆ ಅಲ್ಲಿ ಸುಂಕ ಹೆಚ್ಚಾಗಿದೆ, ಆದರೆ ಅವರ ಉತ್ಪನ್ನಗಳಿಗೆ ಇಲ್ಲಿ ಸುಂಕ ಕಡಿಮೆಯಾಗಿದೆ.

ಆಂದೋಲನ: ಕಳೆದ ವರ್ಷ ಫೆಬ್ರವರಿ 2025ರಲ್ಲಿ ಭಾರತ ಮತ್ತು ಅಮೆರಿಕ ದೇಶಗಳು 2030ರೊಳಗೆ ದ್ವಿಪಕ್ಷೀಯ ವ್ಯಾಪಾರವನ್ನು 500 ಬಿಲಿಯನ್ ಡಾಲರ್ ಮಟ್ಟಕ್ಕೆ ಹೆಚ್ಚಿಸುವ ಗುರಿ ಘೋಷಿಸಿದ್ದವು. ಆದರೆ ಈಗ ವೈಟ್ ಹೌಸ್ ಬಿಡುಗಡೆ ಮಾಡಿರುವ ಹೇಳಿಕೆಗಳನ್ನು ಗಮನಿಸಿದರೆ, ಈ ಗುರಿ ದ್ವಿಪಕ್ಷೀಯ ವ್ಯಾಪಾರದ ಬದಲು ಭಾರತ ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡುವ ದಿಕ್ಕಿಗೆ ತಿರುಗುತ್ತಿರುವಂತೆ ಕಾಣುತ್ತಿದೆ?
ಈ ವಿಚಾರದಲ್ಲಿ ಭಾರತ ಸರ್ಕಾರದಿಂದ ಇನ್ನೂ ಸ್ಪಷ್ಟವಾದ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಒಪ್ಪಂದ ದಿಂದ ದೇಶಕ್ಕೆ ಲಾಭವಾಗಲಿದೆ ಎಂದು ಮಾತ್ರ ಹೇಳಲಾ ಗುತ್ತಿದೆ. ಆದರೆ ಅಧಿಕೃತ ದಾಖಲೆಗಳು ಅಥವಾ ಆದೇಶಗಳು ಸಾರ್ವಜನಿಕವಾಗಿಲ್ಲ.

ಆಂದೋಲನ : ಈ ವಿಷಯವಾಗಿ ಸರ್ಕಾರದೊಂದಿಗೆ ಯಾವಾಗ ಮಾತುಕತೆ ನಡೆಸಲಿದ್ದೀರಿ?
ಕಳೆದ 12 ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಯಾವುದೇ ಜನಾಂದೋಲನ ಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿಲ್ಲ. ನಾವು ಹಲವು ಬಾರಿ ಪ್ರಧಾನಮಂತ್ರಿಯನ್ನು ಭೇಟಿ ಮಾಡಲು ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟದ ಸಂದರ್ಭದಲ್ಲಿ 2021ರ ಜನವರಿ 22ರಂದು ಸರ್ಕಾರದೊಂದಿಗೆ ಕೊನೆಯದಾಗಿ ಮಾತುಕತೆ ನಡೆದಿತ್ತು. ಅದೂ ಆ ಮೂರು ಕಾಯ್ದೆಗಳ ವಿಷಯದಲ್ಲೇ ನಡೆದ ಚರ್ಚೆಯಾಗಿತ್ತು. ಆ ನಂತರ ಸರ್ಕಾರದಿಂದ ಯಾವುದೇ ಮಾತುಕತೆ ನಡೆದಿಲ್ಲ.

ಆಂದೋಲನ: ಯಾವ ಯಾವ ಕೃಷಿ ಉತ್ಪನ್ನಗಳನ್ನು ಈ ಒಪ್ಪಂದದಿಂದ ಹೊರಗಿಡಬೇಕೆಂಬುದು ನಿಮ್ಮ ಬೇಡಿಕೆ? ನಮ್ಮ ಬೇಡಿಕೆ ಒಂದೇ, ಅದು ಕೃಷಿ ಕ್ಷೇತ್ರವನ್ನೇ ಸಂಪೂರ್ಣವಾಗಿ ಈ ವ್ಯಾಪಾರ ಒಪ್ಪಂದದಿಂದ ಹೊರಗಿಡಬೇಕು ಎಂಬುದು. ಇಲ್ಲವಾದರೆ ರೈತರ ಅಸ್ತಿತ್ವವೇ ಅಪಾಯಕ್ಕೆ ಸಿಲುಕಲಿದೆ. ದೇಶದಲ್ಲಿ ಹೆಚ್ಚಿನವರು ಸಣ್ಣ ಮತ್ತು ಅತಿಸಣ್ಣ ರೈತರು. ಆದ್ದರಿಂದ ನಾವು ಯಾವುದೋ ಒಂದು ನಿರ್ದಿಷ್ಟ ಬೆಳೆಗಾಗಿ ಹೋರಾಟ ನಡೆಸುತ್ತಿಲ್ಲ, ಎಲ್ಲ ರೈತರ ಬದುಕನ್ನು ರಕ್ಷಿಸು ವುದು ನಮ್ಮ ಉದ್ದೇಶ.

 

ಆಂದೋಲನ: ಈ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಹೋರಾಟ ಆರಂಭಿಸುವ ಯೋಚನೆ ಇದೆಯೇ?
ಖಂಡಿತವಾಗಿಯೂ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ. ಈಗಾಗಲೇ ಸಭೆಗಳು ನಡೆಯುತ್ತಿವೆ. ರೈತರು, ಕೃಷಿ ಕಾರ್ಮಿಕರು ಮತ್ತು ಭೂಹೀನ ರೈತರು ಈ ಒಪ್ಪಂದದಿಂದ ಎದುರಿಸಬೇಕಾಗುವ ನಷ್ಟದ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಸಂಘಟನೆಯ ನಾಯಕರು ಗ್ರಾಮ ಮಟ್ಟಕ್ಕೆ ತೆರಳಿ ಜನರಿಗೆ ವಿಷಯವನ್ನು ವಿವರಿಸುತ್ತಿದ್ದಾರೆ.

ಫೆಬ್ರವರಿ 12ರಂದು ದೇಶದಾದ್ಯಂತ ರೈತ ಚಳವಳಿ ನಡೆಸಲಾಗಿತ್ತು. ನಮ್ಮ ಹೊಲ, ನಮ್ಮ ಹಕ್ಕು ಘೋಷಣೆಯೊಂದಿಗೆ ರೈತರು ತಮ್ಮ ತಮ್ಮ ಹೊಲಗಳಲ್ಲೇ ಪ್ರತಿಭಟನೆ ನಡೆಸಿದರು. ಹಲವೆಡೆ ಒಪ್ಪಂದದ ಪ್ರತಿಗಳ ಪ್ರತಿಕೃತಿಗಳನ್ನು ಸುಟ್ಟು ವಿರೋಧ ವ್ಯಕ್ತಪಡಿಸಿದರು. ವಿಚಾರ ಗ್ರಾಮ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಜನರು ಒಪ್ಪಂದದ ನಿಜವಾದ ಅಂಶಗಳೇನು ಎಂಬುದನ್ನು ಪ್ರಶ್ನಿಸುತ್ತಿದ್ದಾರೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಈ ಒಪ್ಪಂದದಿಂದ ಕೃಷಿ, ಹಾಲು ಉತ್ಪಾದಕರು ಮತ್ತು ಕಾರ್ಮಿಕ ವರ್ಗಕ್ಕೆ ದೊಡ್ಡ ನಷ್ಟವಾಗುವ ಸಾಧ್ಯತೆ ಇದೆ ಎಂಬ ಆತಂಕವೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜನರು ಮತ್ತಷ್ಟು ಹೋರಾಟಕ್ಕೆ ಸಿದ್ಧರಾಗಿದ್ದಾರೆ. ಆದ್ದರಿಂದ ಸರ್ಕಾರ ಈ ಒಪ್ಪಂದವನ್ನು ಹಿಂಪಡೆಯಬೇಕು, ಇಲ್ಲವಾದರೆ ದೇಶದಾದ್ಯಂತ ದೊಡ್ಡ ಮಟ್ಟದ ಜನಾಂದೋಲನ ನಡೆಯುವ ಸಾಧ್ಯತೆ ಇದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ | ಹತ್ತಿ ಬೆಳೆಗಾರರ ಸಮಸ್ಯೆ ಪರಿಹರಿಸಿ

ಹತ್ತಿ ಬೆಳೆಗಾರರು ರಾಜ್ಯದಲ್ಲಿ ವಾರ್ಷಿಕ ಸುಮಾರು 200 ಕೋಟಿ ರೂ.ಗೂ ಅಧಿಕ ನಷ್ಟ ಅನುಭವಿಸುತ್ತಿದ್ದಾರೆ. ಬಿತ್ತನೆ ಬೀಜ ಮಾರಾಟ ಮಾಡುವ…

2 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಫೆ.14 ಶನಿವಾರ

4 hours ago

ಪೂರ್ಣ ಸಿದ್ಧವಾಗದ ಎಕ್ಸ್‌ಪ್ರೇಸ್‌ ವೇ : ಟೋಲ್‌ ಕಡಿತ

ಹೊಸದಿಲ್ಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸುದ್ದಿಯೊಂದನ್ನು ನೀಡಿದೆ.…

14 hours ago

ಸೇವಾ ತೀರ್ಥ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ : ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ ‘ಸೇವಾ…

15 hours ago

T20 World Cup | ಕೆನಡಾ ವಿರುದ್ಧ ಯುಎಇಗೆ ರೋಚಕ ಜಯ

ಹೊಸದಿಲ್ಲಿ : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು…

15 hours ago

ದಳಪತಿ ವಿಜಯ್‌ ರ‍್ಯಾಲಿಯಲ್ಲಿ ನಿಲ್ಲದ ದುರಂತ : ಮತ್ತೊಬ್ಬನ ಸಾವು

ಸೇಲಂ : ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ‍್ಯಾಲಿ ವೇಳೆ ಕುಸಿದು ಬಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ…

15 hours ago