ವಿನಯ್ ಕಸ್ವೆ, ಯುವ ಚಿಂತಕರು, ಬೆಂಗಳೂರು
ಸರ್ಕಾರ ನಿಗದಿಪಡಿಸಿರುವ ಮಾನದಂಡದ ಆಶಯಕ್ಕೂ ಆಯೋಗ ನೀಡಿದ ವರದಿಗೂ ತಾಳೆಯಾಗಿಲ್ಲ ಎಂಬುದು ತಕರಾರು
ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ೦೧.೦೮.೨೦೨೪ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಆಧರಿಸಿ, ಕರ್ನಾಟಕ ಸರ್ಕಾರವು ೧೨.೧೧.೨೦೨೪ರಂದು ಹೆಚ್. ಎನ್.ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿತು.
ಸರ್ಕಾರದ ಆದೇಶದಲ್ಲಿ ಸದರಿ ಆಯೋಗವು ೨೦೧೧ರ ಜನಗಣತಿಯನ್ನು ಪರಿಗಣಿಸಿ ವೈಜ್ಞಾನಿಕವಾಗಿ ತರ್ಕಬದ್ಧ ಒಳ ಮೀಸಲಾತಿ ಜಾರಿಗೊಳಿಸುವುದು ಮತ್ತು ಪರಿಶಿಷ್ಟ ಜಾತಿಗಳಲ್ಲಿ ಇರುವ ಸಮಾನ ಜಾತಿಗಳ (ಹೋಮೋಜೀನಿಯಸ್) ಒಳಗೆ ಬರುವ ಉಪ ಜಾತಿಗಳನ್ನು ಒಗ್ಗೂಡಿಸುವ ಬಗ್ಗೆ ಸಲಹೆ ನೀಡಲಾಗಿದೆ. ಮುಖ್ಯವಾಗಿ ಒಳ ಮೀಸಲಾತಿ ನೀಡುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿಗಳ ಒಳಗೇ ಹಿಂದುಳಿದಂತಹ ಉಪ ಜಾತಿಗಳ ಸ್ಥಿತಿಗತಿಯನ್ನು ನಿಖರ ದತ್ತಾಂಶದ ಮೂಲಕ ಆಯೋಗವು ತಿಳಿಯಬೇಕು ಮತ್ತು ಅವರ Inter Backwardness ಹಾಗೂ Representationನ ಆಧಾರದಲ್ಲಿ ಸುಪ್ರಿಂ ಕೋರ್ಟ್ ತೀರ್ಪಿಗೆ ಅನುಸಾರವಾಗಿ ಈ ಆಯೋಗವು ಒಳ ಮೀಸಲಾತಿ ವರ್ಗೀಕರಣ ಮಾಡಬೇಕೆಂದು ಸರ್ಕಾರವು ಸೂಚಿಸಿದೆ.
ಮುಂದುವರಿದು ಉಪ ಜಾತಿಗಳ ಸಾಮಾಜಿಕ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಅವುಗಳಿಗೆ ಮೀಸಲಾತಿ ವರ್ಗೀಕರಣ ಮಾಡುವಾಗ ಪರಿಣಾಮಕಾರಿ ವಿಧಾನವನ್ನು ಅನುಸರಿಸಬೇಕೆಂದೂ ಕೂಡ ಹೇಳಲಾಗಿದೆ.
ಆಯೋಗಕ್ಕೆ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳು ಸರಿಯಾಗಿದ್ದರೂ ಕೂಡ ಆಯೋಗವು ನೀಡಿದ ವರದಿಗೂ, ಸರ್ಕಾರದ ಮಾನದಂಡದ ಆಶಯಗಳಿಗೂ ತಾಳೆಯಾಗಿಲ್ಲ ಎಂಬುದು ಕೆಲವರ ತಕರಾರು. ಉದಾಹರಣೆಗೆ ‘ಅಗೇರ್’, ‘ಬಕುಡ’, ‘ಬೈರ’, ‘ಬಂತ್’, ‘ಬೇಡ ಜಂಗಮ’, ‘ಬುಡ್ಗ ಜಂಗಮ’, ‘ಗೊಡ್ಡ’, ‘ಲಿಂಗಾದರ್’, ‘ಮಾಚಲ’, ‘ಮನ್ನೆ’ ಆದಿಯಾಗಿ ಒಟ್ಟು ೨೬ ಜಾತಿಗಳ ಸಾಕ್ಷರತೆಯ ಪ್ರಮಾಣವು ಶೇ.೯೦ಕ್ಕಿಂತ ಮೇಲಿದ್ದರೂ ಅವುಗಳನ್ನು ಅತಿ ಹಿಂದುಳಿದ ಸಮುದಾಯಗಳೆಂದು ಪರಿಗಣಿಸಲಾಗಿರುತ್ತದೆ. ಇನ್ನು ೮೦ ರಿಂದ ಶೇ.೯೦ ರಷ್ಟು ಸಾಕ್ಷರತಾ ಪ್ರಮಾಣ ಹೊಂದಿದ ೫೫ಕ್ಕೂ ಅಽಕ ಜಾತಿಗಳನ್ನೂ ಅತಿ ಹಿಂದುಳಿದ ಜಾತಿಗಳೆಂದು ವರದಿಯಲ್ಲಿ ಹೇಳಲಾಗಿದ್ದು ಜಗ್ಗಲಿ, ಗರಡಗಾರು ಮತ್ತು ಸಿಂದೊಳ್ಳು ಜಾತಿಗಳ ಸಾಕ್ಷರತಾ ಪ್ರಮಾಣವು ಶೇ.೬೦ಕ್ಕಿಂತ ಕಡಿಮೆ ಇದ್ದು ಅವುಗಳನ್ನೂ ಕೂಡ ಅತಿ ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿ, ಒಳ ಮೀಸಲಾತಿ ಹಂಚಿಕೆಗೆ ತೊಡಕಾಗುವ ರೀತಿಯಲ್ಲಿ ಗೊಂದಲ ಸೃಷ್ಟಿಸಲಾಗಿದೆ.
ಇನ್ನು ಬೇಡ ಜಂಗಮರ ವಿಷಯದಲ್ಲೂ ಗೊಂದಲ ಇರುವಾಗಲೇ ಬುಡ್ಗ ಜಂಗಮ ಮತ್ತು ಬೇಡ ಜಂಗಮರನ್ನು ಒಂದೇ ಪರಿಧಿಯಲ್ಲಿ ಗುರುತಿಸುವ ಅಸಮರ್ಪಕ ಕೆಲಸವೂ ಕೂಡ ಆಯೋಗದ ವರದಿಯಲ್ಲಿದ್ದು ಇದು ಇನ್ನಷ್ಟು ಗೊಂದಲಮಯವಾಗಿದೆ. ಮುಖ್ಯವಾಗಿ ಬಾಬಾ ಸಾಹೇಬರ ಸಂವಿಧಾನದ ಅಡಿಯಲ್ಲಿ ನೀಡಿರುವ ಮೀಸಲಾತಿ ಸೌಲಭ್ಯವನ್ನು ಪಡೆದುಕೊಂಡು ವಿವಿಧ ಪರಿಶಿಷ್ಟ ಸಮುದಾಯಗಳು ಸರ್ಕಾರಿ ಉದ್ಯೋಗವನ್ನು ಪಡೆದಿವೆ. ಮೂಲಗಳ ಪ್ರಕಾರ ಈ ಪೈಕಿ ಹೊಲಯ, ಹೊಲೇರ್ ಮತ್ತು ಹೊಲೆಯ ಸಮುದಾಯದಿಂದ ೪೩ ಸಾವಿರದಷ್ಟು ಮಂದಿ ಉದ್ಯೋಗ ಪಡೆದಿದ್ದರೆ, ಮಾದಿಗ ಸಮುದಾಯದಿಂದ ೩೨ ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಂಜಾರ ಸಮುದಾಯದಿಂದ ೧೮ ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆದಿದ್ದರೆ ಬೋವಿ ಸಮುದಾಯದಲ್ಲಿ ೧೦ ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆದಿದ್ದಾರೆ. ಇದನ್ನು ಹೊರತುಪಡಿಸಿ ಉಳಿದ ಸಣ್ಣ ಪುಟ್ಟ ಸಮುದಾಯಗಳೆಲ್ಲ ಸೇರಿ ಸರಿ ಸುಮಾರು ೧೦ ಸಾವಿರಕ್ಕೂ ಹೆಚ್ಚಿನ ಮಂದಿ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಪೈಕಿ ವರದಿಯ ಅನ್ವಯ ಅಲೆಮಾರಿ ಸಮುದಾಯಗಳು ಅತ್ಯಂತ ಹಿಂದುಳಿದಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪವಿದೆ.
ಸರ್ಕಾರಿ ಉದ್ಯೋಗದಲ್ಲಿ ಕೆಲವು ಜಾತಿಗಳು ಹೆಚ್ಚಿನ ಪಾಲು ಪಡೆದರೂ ಕೂಡ ಒಳ ಮೀಸಲಾತಿ ವರ್ಗೀಕರಣ ವಿಷಯಕ್ಕೆ ಬಂದಾಗ, ಮತ್ತೆ ಅವೇ ಸಮುದಾಯಗಳನ್ನು ಅತಿ ಹಿಂದುಳಿದ ಸಮುದಾಯಗಳೆಂದು ಗುರುತಿಸಿ ಈ ವರೆಗೂ ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯವನ್ನೇ ಪಡೆಯದಿರುವ ಸುಮಾರು ೧೨ಕ್ಕೂ ಹೆಚ್ಚಿನ ಜಾತಿಗಳನ್ನು ಹಿಂದುಳಿದ ಸಮುದಾಯದ ಪಟ್ಟಿಯಿಂದಲೇ ಹೊರಗಿಡುವ ಮೂಲಕ ನಾಗಮೋಹನ್ ದಾಸ್ ಅವರು ಸರ್ವೋಚ್ಚ ನ್ಯಾಯಾಯಲವು ಹೇಳಿದಂತೆ ಸರ್ಕಾರಿ ಉದ್ಯೋಗದ ಪ್ರಾತಿನಿಧ್ಯವನ್ನು ವೈಜ್ಞಾನಿಕವಾಗಿ ಪರಿಗಣಿಸದೇ ಗೊಂದಲ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ‘ಚಾಂಡಾಲ’, ‘ಕೆಪ್ಮಾರಿಸ್’, ‘ಕುಲುಪುವಂದ್ಲು’, ‘ಕುಡುಂಬನ್’, ‘ಮಾಲಾ ಜಂಗಮ್’, ‘ಮಾಲಾ ಮಸ್ತಿ’, ‘ಮಾಯಾವಂಶಿ’, ‘ದೇಡ್’ನಂತಹ ಜಾತಿಗಳನ್ನು ಈ ೧೨ ಜಾತಿಗಳ ಒಳಗೆ ಗುರುತಿಸಲಾಗಿದೆ. ಇನ್ನು ರಾಜಕೀಯ ಪ್ರಾತಿನಿಧ್ಯವನ್ನು ಗಮನಿಸಿದರೆ ಈವರೆಗೂ ಪ್ರಾತಿನಿಧ್ಯವನ್ನೇ ಪಡೆಯದ ೪೦ಕ್ಕೂ ಹೆಚ್ಚು ಸಮುದಾಯಗಳು ಇದ್ದರೂ ಅವುಗಳನ್ನು ಅತಿ ಹಿಂದುಳಿದ ಸಮುದಾಯಗಳು ಎಂದು ಗುರುತಿಸದೇ ಅವನ್ನು ಗ್ರೂಪ್ ಸಿ ಪಟ್ಟಿಗೆ ಸೇರಿಸಲಾಗಿದೆ.
ಇನ್ನು ಅತಿ ಕಡಿಮೆ ರಾಜಕೀಯ ಪ್ರಾತಿನಿಧ್ಯ ಪಡೆದ ೫೦ಕ್ಕೂ ಹೆಚ್ಚು ಜಾತಿಗಳ ವಿಷಯದಲ್ಲೂ ಕೂಡ ಆಯೋಗವು ಇದೇ ರೀತಿಯಾಗಿ ನಡೆದುಕೊಂಡಿದ್ದು ನ್ಯಾಯದ ಮಾನದಂಡಗಳನ್ನು ಮೀರಿ ಪರಿಶಿಷ್ಟ ಸಮುದಾಯಗಳ ಒಳಗೆ ಹೆಚ್ಚು ಗೊಂದಲ ಸೃಷ್ಟಿ ಮಾಡಿದೆ. ಈ ವರದಿಯಲ್ಲಿ ಕೆಲವು ಲೋಪಗಳೂ ಇವೆ. ಉದಾಹರಣೆಗೆ ೨೦೨೫ರ ಪರಿಶಿಷ್ಟ ಸಮುದಾಯಗಳ ಸಮೀಕ್ಷೆಯಲ್ಲಿ ಪಾಲ್ಗೊಂಡ ಕುಟುಂಬಗಳ ಸಂಖ್ಯೆ ೨೭,೨೪,೭೬೮ ಎಂದು ಹೇಳಿರುವ ಆಯೋಗವು ೨೭,೬೦,೯೭೫ ಕುಟುಂಬಗಳು ಭೂಮಿಯನ್ನು ಹೊಂದಿವೆ ಎಂದೂ ಹೇಳಿದ್ದು ಇದು ಹೆಚ್ಚು ಗೊಂದಲಮಯವಾಗಿದೆ. ಈ ಗೊಂದಲವನ್ನು ನಾಗಮೋಹನ್ ದಾಸ ಆಯೋಗ ಬಗೆಹರಿಸಬೇಕಿದೆ.
ಪರಿಶಿಷ್ಟ ಸಮುದಾಯಗಳು ಹೊಂದಿರುವ ಭೂಮಿಯನ್ನು ಆಧರಿಸಿ ಕೂಡ ಅವರನ್ನು ಸಮೀಕ್ಷೆಯ ಒಳಗೆ ಅತಿ ಹಿಂದುಳಿದ ಪಟ್ಟಿಗೆ ಸೇರಿಸಲಾಗಿದೆ. ಇಲ್ಲಿಯೂ ಕೂಡ ಶೇ.೫೧ಕ್ಕಿಂತ ಹೆಚ್ಚಿನ ಭೂಮಿಯನ್ನು ಹೊಂದಿದವರು ಮತ್ತು ಶೇ.೪೧ನಿಂದ ಶೇ.೫೦ರ ಒಳಗೆ ಭೂಮಿಯನ್ನು ಹೊಂದಿದವರು ಎಂದು ವರ್ಗೀಕರಿಸಿಕೊಂಡಿದ್ದಾರೆ. ಆದರೆ ಇಲ್ಲಿ ಪರಿಶಿಷ್ಟ ಜಾತಿವಾರು ಕುಟುಂಬಗಳು ಹೊಂದಿರುವ ಭೂಮಿಯ ವಿಸ್ತೀರ್ಣವನ್ನು ಪರಿಶೀಲಿಸಲಾಗಿ ಇಲ್ಲಿ ಬಂಜಾರ ಸಮುದಾಯವು ಶೇ.೧೨, ಬೋವಿ ಸಮುದಾಯ ಶೇ.೧೦, ಹೊಲೆಯ ಶೇ.೨೪ ಮತ್ತು ಮಾದಿಗ ಸಮುದಾಯವು ಶೇ.೨೫ರಷ್ಟು ಭೂಮಿಯನ್ನು ಹೊಂದಿದ್ದು ಈ ನಾಲ್ಕು ಸಮುದಾಯಗಳಲ್ಲಿ ಶೇ.೭೩ಕ್ಕೂ ಹೆಚ್ಚಿನ ಜನರು ಭೂಮಿಯನ್ನು ಹೊಂದಿದ್ದಾರೆ. ಹೀಗಿದ್ದರೂ ಈ ಜಾತಿಗಳನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಲಾಗಿದ್ದು ಇಂತಹ ಗೊಂದಲವು ಸಮುದಾಯಗಳ ಒಳಗೆ ಬೇಸರ ಆಗುವಂತೆ ಮಾಡಿದೆ.
ಇನ್ನು ಜನಸಂಖ್ಯಾವಾರು ಗಮನಿಸಿದಾಗಲೂ ಕೂಡ ಬಲಗೈ ಎಂದು ಹೇಳಿರುವ ಗುಂಪಿನ ಜಾತಿಗಳನ್ನು ಎಡಗೈ ಗುಂಪಿಗೆ ಸೇರಿಸುವ ಮತ್ತು ಬಲಗೈ ಗುಂಪಿನ ಒಟ್ಟು ಜನಸಂಖ್ಯೆಯನ್ನು ಪ್ರತ್ಯೇಕವಾಗಿಸಿ ಅವರ ಜನಸಂಖ್ಯೆಯನ್ನು ಕಡಿಮೆ ಎಂದು ತೋರಿಸಿ ಅವರಲ್ಲಿ ಗೊಂದಲ ಸೃಷ್ಟಿ ಮಾಡುವ ಕೆಲಸವನ್ನು ನಾಗಮೋಹನ್ ದಾಸ್ ಅವರ ವರದಿಯು ಮಾಡಿದೆ ಎಂಬ ಆರೋಪವಿದೆ. ಈ ಆರೋಪಕ್ಕೆ ಪೂರಕವಾಗಿ ನೋಡುವಾಗ ಬಲಗೈ ಸಮುದಾಯಗಳಿಗೆ ಸೇರಿರುವ ಉಪ ಜಾತಿಗಳ ಒಟ್ಟು ಜನಸಂಖ್ಯೆಯು ೩೪,೭೬,೪೬೪ ಇದ್ದು ಎಡಗೈ ಸಮುದಾಯದ ಉಪಜಾತಿಗಳಿಗೆ ಸೇರಿದ ಜನರ ಸಂಖ್ಯೆಯು ೩೪,೪೦,೭೪೮ ಇದೆ. ಇನ್ನು ಪರಿಶಿಷ್ಟ ಜಾತಿ ಇತರೆ ಪಟ್ಟಿಯಲ್ಲಿರುವ ಬೋವಿ, ಲಂಬಾಣಿ ಮತ್ತಿತರೆ ಜಾತಿಗಳ ಸಂಖ್ಯೆಯು ೩೧,೧೧,೭೦೯ ಇದೆ. ಇಂತಹ ಸಂದರ್ಭದಲ್ಲಿ ಈ ಮೀಸಲಾತಿ ಹಂಚಿಕೆ ಗೊಂದಲವನ್ನು ಸರ್ಕಾರವು ಹೇಗೆ ಬಗೆಹರಿಸಲಿದೆ ಎಂಬ ಸಹಜ ಆತಂಕವು ಪರಿಶಿಷ್ಟ ಸಮುದಾಯಗಳದ್ದಾಗಿದೆ.
” ಒಳ ಮೀಸಲಾತಿ ವರ್ಗೀಕರಣವನ್ನು ಮಾಡುವಾಗ ಆದ್ಯತೆಯ ಮೇರೆಗೆ ವರ್ಗೀಕರಣ ಮಾಡಬೇಕೆಂಬ ಮಾನದಂಡವನ್ನು ಆಯೋಗವು ಶಿಫಾರಸ್ಸು ಮಾಡಿದೆ. ಆದರೆ ಅರ್ಹವಾಗಿ ಹಿಂದುಳಿದ ಜಾತಿಗಳನ್ನು ಪಟ್ಟಿಯಲ್ಲೇ ಇಟ್ಟುಕೊಳ್ಳದೆ ಯಾವ ರೀತಿಯಾಗಿ ಈ ಆಯೋಗವು ಆದ್ಯತೆಯನ್ನು ನಿರ್ಧರಿಸಲಿದೆ ಮತ್ತು ನ್ಯಾಯ ಹಂಚಿಕೆ ಮಾಡಲಿದೆ ಎಂಬ ಗೊಂದಲವೂ ಇದೀಗ ಪರಿಶಿಷ್ಟ ಸಮುದಾಯಗಳಲ್ಲಿ ಮನೆ ಮಾಡಿದೆ. ಹೀಗೆ ಮಾಡಿದರೆ ಸಮುದಾಯಗಳು ಭಿನ್ನಾಭಿಪ್ರಾಯಗಳಿಂದ ಒಡೆದು ಛಿದ್ರವಾಗುತ್ತದೆಯೇ ವಿನಾ ಸರ್ಕಾರವು ಆಯೋಗಕ್ಕೆ ಹೇಳಿದಂತೆ ಹೋಮೋಜೀನಿಯಸ್ ಗುಂಪುಗಳನ್ನು ಒಟ್ಟು ಮಾಡುವ ಕೆಲಸ ಆಗುವುದೇ ಇಲ್ಲ. ಹೀಗಾಗಿ ಸಾಮಾಜಿಕ ನ್ಯಾಯ ಹಂಚಿಕೆಯು ರಾಜಕೀಯ ಒತ್ತಡಗಳನ್ನು ಮೀರಿ ತಾನೇ ಸೂಚಿಸಿ ರುವ ವೈಜ್ಞಾನಿಕ ಮತ್ತು ತರ್ಕಬದ್ಧವಾದ ಮಾರ್ಗವನ್ನು ಅನುಸರಿಸುವ ಜರೂರು ಇದೆ.”
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…