Andolana originals

ಜಿಲ್ಲೆಯಲ್ಲಿ ಕೈಗಾರಿಕೆ, ಸಣ್ಣ ಕೈಗಾರಿಕೆಗಳ ಸಂಖ್ಯೆ ಹೆಚ್ಚಳ

ಆಟೋ ಮೊಬೈಲ್, ಜವಳಿ ಕೈಗಾರಿಕೆಗಳ ನೋಂದಣಿ, ಉದ್ಯೋಗದಲ್ಲಿ ಕೊಂಚ ಏರಿಕೆ

ಕೆ.ಬಿ.ರಮೇಶ ನಾಯಕ

ಮೈಸೂರು: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಜತೆಗೆ ಸ್ಟಾರ್ಟ್ ಅಪ್, ಮೇಕ್ ಇನ್ ಇಂಡಿಯಾದಡಿ ಸ್ವದೇಶಿ ಉತ್ಪನ್ನಗಳ ತಯಾರಿಕೆ, ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಿದ ಪರಿಣಾಮವಾಗಿ ಮೈಸೂರು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಖಾನೆಗಳು, ಸಣ್ಣ ಪ್ರಮಾಣದ ಕೈಗಾರಿಕೆಗಳ ಪ್ರಮಾಣ ಹೆಚ್ಚಾಗಿದ್ದು, ಉದ್ಯೋಗ ಸೃಷ್ಟಿಯಲ್ಲೂ ಗಣನೀಯವಾಗಿ ಏರಿಕೆಯಾಗಿದೆ.

ಬೆಂಗಳೂರು ನಂತರ ಎರಡನೇ ಐಟಿ-ಬಿಟಿ, ಪ್ರತಿಷ್ಠಿತ ಸಂಸ್ಥೆಗಳನ್ನು ಹೊಂದಿರುವ ಮೈಸೂರು ಜಿಲ್ಲೆಯಲ್ಲಿ ಭೂಮಿ, ನೀರು ಮತ್ತಿತರ ಸೌಲಭ್ಯಗಳು ಸುಲಭವಾಗಿ ದೊರೆಯುತ್ತಿರುವುದರಿಂದ ಐದು ವರ್ಷಗಳಲ್ಲಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಕೌಶಲಯುತ ಕೈಗಳಿಗೆ ಉದ್ಯೋಗ ದೊರೆಯುತ್ತಿರುವುದು ಗಮನಾರ್ಹವಾಗಿದೆ.

ಕಾವೇರಿ, ಕಬಿನಿ ಜಲಾಶಯಗಳನ್ನು ಹೊಂದಿರುವ ಜತೆಗೆ ಪ್ರವಾಸಿ ತಾಣವಾಗಿರುವ ಮೈಸೂರಿನಲ್ಲಿ ಇನೋಸಿಸ್, ವಿಪ್ರೋ ಸಂಸ್ಥೆಗಳು ಆರಂಭವಾದ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳು ತನ್ನ ಘಟಕವನ್ನು ತೆರೆದಿವೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಣ್ಣ ಕೈಗಾರಿಕೆಗಳಿಗೆ ಒತ್ತು ನೀಡುವ ಜತೆಗೆ ಸ್ಟಾರ್ಟ್ ಅಪ್, ಮೇಕ್ ಇನ್ ಇಂಡಿಯಾ, ಮುದ್ರಾ ಯೋಜನೆಯಡಿ ಕೈಗಾರಿಕೆಗಳ ಸ್ಥಾಪನೆಗೆ ನೆರವು ನೀಡುತ್ತಾ ಬಂದಿರುವ ಪರಿಣಾಮ ಕೈಗಾರಿಕೆಗಳ ಬೆಳವಣಿಗೆಗೆ ದಾರಿಯಾಗಿದೆ.

ಜಿಲ್ಲೆಯಲ್ಲಿ ಹೆಬ್ಬಾಳು, ಹೂಟಗಳ್ಳಿ, ಬೆಳಗೊಳ, ಬೆಳವಾಡಿ, ನಂಜನಗೂಡು, ತಾಂಡವಪುರ, ಕೂರ್ಗಳ್ಳಿ, ಕಡಕೊಳ, ಯಾದವಗಿರಿ, ಮೇಟಗಳ್ಳಿ, ನಂಜನಗೂಡು, ಹುಣಸೂರು, ಹಿನಕಲ್ ಪ್ರದೇಶಗಳಲ್ಲಿ ಕೈಗಾರಿಕೆಗಳು ಇದ್ದರೆ, ಆರು ಕಡೆಗಳಲ್ಲಿ ಕೈಗಾರಿಕಾ ಎಸ್ಟೇಟ್‌ಗಳು ಕೂಡ ಇವೆ. ಕೃಷಿ ಮತ್ತು ಆಹಾರ ಸಂಸ್ಕರಣೆ, ಗಾರ್ಮೆಂಟ್ಸ್, ಜವಳಿ, ಆಟೋಮೊಬೈಲ್, ಟೂರಿಸಂ ಕ್ಷೇತ್ರಗಳಿಗೆ ದೊಡ್ಡ ಅವಕಾಶ ಇದ್ದರೆ, ಇದಕ್ಕೆ ಪೂರಕವಾಗುವಂತಹ ಸಂಪನ್ಮೂಲಗಳನ್ನು ಹೊಂದಿದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಕಾರ್ಖಾನೆಗಳ ನೋಂದಣಿ ಮತ್ತು ಆರಂಭ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ.

೫ ವರ್ಷಗಳಲ್ಲಿ ನೋಂದಣಿಯಲ್ಲಿ ಹೆಚ್ಚಳ: ಕಳೆದ ಐದು ವರ್ಷಗಳಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಕಾರ್ಖಾನೆಗಳು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿವೆ. ಕೈಗಾರಿಕೆಗಳ ಸಂಖ್ಯೆ ಜೊತೆಗೆ ಉದ್ಯೋಗದ ಪ್ರಮಾಣದಲ್ಲೂ ಹೆಚ್ಚಳವಾಗಿರುವುದು ಕಂಡುಬಂದಿದೆ. ಆಟೋ ಮೊಬೈಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಕೆಮಿಕಲ್ಸ್, ಆಹಾರ ಮತ್ತು ಮಾದಕ ವಸ್ತುಗಳು, ಚರ್ಮ, ಕಾಗದ ಮತ್ತು ಮುದ್ರಣ, ರಬ್ಬರ್ ಮತ್ತು ಪ್ಲಾಸ್ಟಿಕ್, ಟೈಕ್ಸ್‌ಟೈಲ್ಸ್, ಮರ, ಇತರೆ ವಲಯಗಳಲ್ಲಿ ೨೦೨೩- ೨೪ನೇ ಸಾಲಿನಲ್ಲಿ ೬೧,೭೫೦ ಸಂಖ್ಯೆಯಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳು ನೋಂದಣಿ ಮಾಡಿಸಿಕೊಂಡಿದ್ದು, ೩,೭೮,೭೪೭ ಮಂದಿಗೆ ಉದ್ಯೋಗ ದೊರೆತಿದೆ.

ನೋಂದಣಿ ಹೆಚ್ಚಳಕ್ಕೆ ಕಾರಣವೇನು?: ಸಮಾಜದ ಕಟ್ಟಕಡೆಯ ವ್ಯಕ್ತಿಯು ಸ್ವಾವಲಂಬಿಯಾಗಬೇಕೆಂಬ ಮಹದಾಸೆಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ವಿಶ್ವಕರ್ಮ, ಪಿಎಂಇಜಿಪಿ ಯೋಜನೆಯು ಸಣ್ಣ ಸಣ್ಣ ಕೈಗಾರಿಕೆಗಳ ಆರಂಭಕ್ಕೆ ಬೆನ್ನೆಲುಬಾಗಿ ನಿಂತಿದೆ. ಮೈಸೂರು ಜಿಲ್ಲೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ ೧.೮೦ ಲಕ್ಷ ಜನರು ನೋಂದಣಿ ಮಾಡಿಸಿಕೊಂಡಿದ್ದರೆ, ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ೨೦ ಸಾವಿರ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಪಿಎಂ ವಿಶ್ವಕರ್ಮ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ೧೮ ಕರಕುಶಲತೆಗಳನ್ನು ಗುರುತಿಸಿದ್ದು, ಟೈಲರಿಂಗ್, ಮರದ ಕೆತ್ತನೆ ಕೆಲಸ, ಲ್ಯಾಂಡ್ರಿ ಅಂಡ್ ವಾಷಿಂಗ್, ಗಾರೆ ಕೆಲಸ ಮೊದಲಾದ ಕೆಲಸಗಳಲ್ಲಿ ಅನುಭವ ಹೊಂದಿರುವರು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.  ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಕೈಗಾರಿಕೆಗಳ ಸ್ಥಾಪನೆಗೆ ಶೇ.೫ರ ಬಡ್ಡಿ ದರದಲ್ಲಿ ನೀಡುತ್ತಿದ್ದ ಸಾಲವನ್ನು ಮಹಿಳಾ ಉದ್ಯಮಿಗಳಿಗೂ ವಿಸ್ತರಿಸಿದ್ದು, ದೊಡ್ಡ ಸಂಖ್ಯೆಯಲ್ಲಿ ನೋಂದಣಿಗೆ ದಾರಿಯಾಗಿದೆ.

ಸಂಪರ್ಕದ ನೆರವು: ಮೈಸೂರು- ಬೆಂಗಳೂರು ನಡುವೆ ದಶಪಥ ರಸ್ತೆ ನಿರ್ಮಾಣವಾದ ಮೇಲೆ ಮೈಸೂರಿ ನತ್ತ ಉದ್ಯಮಿಗಳು ಬರುವುದು ಜಾಸ್ತಿಯಾಗಿದೆ.

” ಮೈಸೂರು ಜಿಲ್ಲೆಯಲ್ಲಿ ಪ್ರತಿವರ್ಷ ೧,೫೦೦ ಕೋಟಿ ರೂ. ಬಂಡವಾಳ ಹೂಡಿಕೆಯಾಗುತ್ತಿದೆ. ತಿಂಗಳಿಗೆ ಕನಿಷ್ಠ ೫೦ ಕೋಟಿ ರೂ. ಕೈಗಾರಿಕೆಗಳ ಸ್ಥಾಪನೆಗೆ ಸಾಲ ಮಂಜೂರು ಮಾಡಲಾಗುತ್ತಿದೆ. ಪಿಎಂ ವಿಶ್ವಕರ್ಮ ಯೋಜನೆಯಡಿ ೧.೮೦ ಲಕ್ಷ ಜನರು ನೋಂದಣಿ  ಮಾಡಿಸಿಕೊಂಡಿದ್ದಾರೆ. ಇದರಿಂದಾಗಿ ಸಣ್ಣ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ನೋಂದಣಿ ಮಾಡಿಸುತ್ತಿರುವುದು, ಸ್ಥಾಪನೆಯಾಗುತ್ತಿರುವ ಪ್ರಮಾಣ ಜಾಸ್ತಿಯಾಗಿದೆ.”

ಶಿವಲಿಂಗಯ್ಯ, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ

ಆಂದೋಲನ ಡೆಸ್ಕ್

Recent Posts

ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ರಾಯಭಾರಿ ; ವಿಪಕ್ಷಗಳ ವಿರೋಧ

ಬೆಂಗಳೂರು : ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ನ ಐತಿಹಾಸಿಕ ಬ್ರ್ಯಾಂಡ್ ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ…

25 mins ago

ಮೈಸೂರಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ

ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್ ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ…

43 mins ago

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಕ್ಕೆ ಅನುಮತಿ ಸುಳಿವು

ಕುನ್ಹಾ ಆಯೋಗದ ವರದಿ ಆಧರಿಸಿ ಕ್ರಮ : ಪರಮೇಶ್ವರ್ ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗಳನ್ನು ನಡೆಸಲು…

57 mins ago

ಬಜೆಟ್‌ ದಿನಾಂಕ ಸದ್ಯದಲ್ಲೇ ನಿಗದಿ : ಸಿಎಂ

ಬೆಂಗಳೂರು : ವಿವಿಧ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದ್ದು, ಆಯವ್ಯಯದ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬುಧವಾರ…

1 hour ago

T20 World Cup : ಡಬಲ್‌ ಸೂಪರ್‌ ಓವರ್‌ : 2 ಬಾರಿ ಟೈ ಆದ ಪಂದ್ಯದಲ್ಲಿ ಹರಿಣಗಳ ಮೇಲುಗೈ

ಅಹಮದಾಬಾದ್ : ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ಅಪ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಲೀಗ್ ಪಂದ್ಯವು ಎರಡು…

2 hours ago

ಮುಂದುವರೆದ ಡ್ರಗ್ಸ್‌ ಸಮರ : ಮಾದಕ ವಸ್ತು ವಶಕ್ಕೆ ; ಐವರ ಬಂಧನ

ಮೈಸೂರು : ನಗರದಲ್ಲಿ ಮಾದಕ ವಸ್ತು ಅಕ್ರಮ ಮಾರಾಟ ಮತ್ತು ಸಾಗಾಟದ ಮೇಲೆ ಸಿಸಿಬಿ ಮತ್ತು ಮಂಡಿ ಠಾಣಾ ಪೊಲೀಸರಿಂದ…

3 hours ago