Andolana originals

ಪ್ರೋತ್ಸಾಹಧನ ಲಭಿಸದೆ ವಂಚನೆಗೊಳಗಾಗುತ್ತಿರುವ ಆಶಾಗಳು

ರಶ್ಮಿ ಕೋಟಿ

ನ್ಯೂನತೆಗಳಿಂದ ಕೂಡಿರುವ ‘ಆರ್‌ಸಿಎಚ್’ನಿಂದಾಗಿ ಆಶಾ ಕಾರ್ಯಕರ್ತರಿಗಾಗುತ್ತಿರುವ ಅನ್ಯಾಯ

ಪ್ರೋತ್ಸಾಹ ಧನ ನೀಡದೆ ಆಶಾ ಕಾರ್ಯಕರ್ತೆಯರನ್ನು ವಂಚಿಸುತ್ತಿರುವ ಆರ್‌ಸಿಎಚ್ ಪೋರ್ಟಲ್ ಅನ್ನು ರದ್ದು ಮಾಡಬೇಕು.

ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ಬಿಡುಗಡೆ ಮಾಡಲು ಒತ್ತಾಯ

ಗಂಡ ಕುಡುಕ. ವಾರಕ್ಕೆ ಒಂದು ದಿನ ಗಾರೆ ಕೆಲಸಕ್ಕೆ ಹೋಗಿ ೨೦೦ ರೂಪಾಯಿ ಗಳಿಸಿದರೆ ಹೆಚ್ಚು. ಇಂತಹ ಸ್ಥಿತಿಯಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವ ಮಹದಾಸೆ. ರಾಜ್ಯ ಸರ್ಕಾರ ಕೊಡುವ ೫ ಸಾವಿರ ರೂ. ಹಾಗೂ ಕೇಂದ್ರ ಸರ್ಕಾರ ನೀಡುವ ೨ ಸಾವಿರ ರೂ. ಪ್ರೋತ್ಸಾಹ ಧನ ಕುಟುಂಬದ ಅವಶ್ಯಕತೆಗಳಿಗೆ ಸಾಕಾಗುವುದಿಲ್ಲ. ಒಮ್ಮೊಮ್ಮೆ ೩-೪ ತಿಂಗಳವರೆಗೆ ಆ ಹಣವನ್ನೂ ಕೊಡುವುದಿಲ್ಲ. ಅನಿವಾರ್ಯವಾಗಿ ಕುಟುಂಬದ ಹೊರೆಯನ್ನು ನಿಭಾಯಿಸಲು ಸಾಲ ಮಾಡಿ ದಿನ ಕಳೆಯಬೇಕಾಗಿದೆ.

ಇದು ಆಶಾ ಕಾರ್ಯಕರ್ತೆಯಾದ ಕೋಮಲ ಅವರ ಸಂಕಷ್ಟದ ಜೀವನಕ್ಕೆ ಹಿಡಿದ ಕನ್ನಡಿ.

ಮೈಸೂರು ನಗರದ ಅಶೋಕಪುರಂನ ಮೂಲ ಸೌಕರ್ಯಗಳಿಲ್ಲದೆ ಇರುವ ಮನೆಗಳ ಸಾಲುಗಳಲ್ಲಿ ಇವರದೂ ಒಂದು. ಪ್ರತಿದಿನ ಕೋಮಲ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬದಿಗೊತ್ತಿ, ಆರೋಗ್ಯ ತಪಾಸಣೆಗಾಗಿ ಮನೆಮನೆಗೆ ತೆರಳಿ, “ಅಮ್ಮಾ, ಲಸಿಕೆ ಹಾಕಿಸಿಕೊಂಡ್ರಾ?” ಎಂದು ಕೇಳುತ್ತಾ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಾರೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಬಿಸಿಲು, ಮಳೆ, ಗಾಳಿಯನ್ನೂ ಲೆಕ್ಕಿಸದೆ ದುಡಿದರೂ ಇವರಿಗೆ ಸಿಗುವುದು ರಾಜ್ಯ ಸರ್ಕಾರದ ೫ ಸಾವಿರ ಹಾಗೂ ಕೇಂದ್ರ ಸರ್ಕಾರದಿಂದ ೨ ಸಾವಿರ ರೂ. ಸಹಾಯಧನ ಮಾತ್ರ.

ಹಾಗಂತ ಇನ್ನುಳಿದ ಆಶಾ ಕಾರ್ಯಕರ್ತೆಯರ ಜೀವನವೇನೂ ಇದಕ್ಕಿಂತ ಭಿನ್ನವಾಗಿಲ್ಲ. ಕರ್ನಾಟಕದಲ್ಲಿ ಒಟ್ಟು ೪೨,೦೦೦ ಆಶಾ ಕಾರ್ಯಕರ್ತೆಯರಿದ್ದಾರೆ. ಅದರಲ್ಲಿ ಮೈಸೂರು ಜಿಲ್ಲೆಯಲ್ಲಿ ಸುಮಾರು ೨,೦೦೦ ಆಶಾ ಕಾರ್ಯಕರ್ತರಿದ್ದರೆ, ನಗರದಲ್ಲಿ ೯೩ ಆಶಾ ಕಾರ್ಯಕರ್ತೆಯರಿದ್ದಾರೆ. ಎಲ್ಲರ ಜೀವನವೂ ಕುಲುಮೆಯಲ್ಲಿ ಕುದಿಯುತ್ತಿರುವಂತೆಯೇ ಸಾಗಿದೆ. ಆರೋಗ್ಯ ಇಲಾಖೆಯು ಆಶಾ ಕಾರ್ಯಕರ್ತೆಯರಿಗೆ ಕೇಂದ್ರದ ಪ್ರೋತ್ಸಾಹಧನ ನೀಡಲು ಆರ್‌ಸಿಎಚ್ (ಆಶಾ ನಿಧಿ) ಆನ್‌ಲೈನ್ ಪೋರ್ಟಲ್‌ಗೆ ಲಿಂಕ್ ಮಾಡಿದೆ. ಆಗಿನಿಂದಲೂ ಆಶಾಗಳಿಗೆ ಸಂಪೂರ್ಣವಾಗಿ ಪ್ರೋತ್ಸಾಹ ಧನ ಬರದಿರುವ ಸಾವಿರಾರು ಘಟನೆಗಳಿವೆ. ಆದರೂ ಯಾವುದೇ ಕ್ರಮ ಜರುಗಿರುವುದಿಲ್ಲ.

ಹಾಗಾಗಿ ಪ್ರೋತ್ಸಾಹ ಧನ ನೀಡದೆ ಆಶಾ ಕಾರ್ಯಕರ್ತೆಯರನ್ನು ವಂಚಿಸುತ್ತಿರುವ ಆರ್‌ಸಿಎಚ್ ಪೋರ್ಟಲ್ ಅನ್ನು ರದ್ದು ಮಾಡಬೇಕು. ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ಬಿಡುಗಡೆ ಮಾಡಿ ಎಂಬ ಒತ್ತಾಯ ಕೇಳಿಬಂದಿದೆ.

ಆರೋಗ್ಯ ಇಲಾಖೆ ಮಂಡಿಸಿರುವ ಅಂಕಿ ಅಂಶಗಳ ಪ್ರಕಾರವೇ ಸುಮಾರು ಶೇ.೧೪ರಷ್ಟು ಅಂದರೆ ಸುಮಾರು ೬,೦೦೦ ಆಶಾಗಳು ಪ್ರತೀ ತಿಂಗಳು ಮೇಲಿನ ಸಮಸ್ಯೆಗಳಿಂದ ನಷ್ಟವನ್ನು ಅನುಭವಿಸುತ್ತಿರುವರು. ಆದರೆ ಸಂಘವು ಪರೀಶೀಲಿಸಿದಾಗ ವಿವಿಧ ದಾಖಲೆಗಳ ಪ್ರಕಾರ ಪ್ರತೀ ತಿಂಗಳು ಶೇ.೨೫-೩೦ರಷ್ಟು ಅಂದರೆ ಸುಮಾರು ೧೦,೦೦೦-೧೨,೦೦೦ ಆಶಾಗಳಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ತಕ್ಷಣವೇ ಇತ್ತ ಗಮನ ಹರಿಸಿ ಇವರ ಬೇಡಿಕೆಯನ್ನು ಈಡೇರಿಸಬೇಕಿದೆ.

ಆರ್‌ಸಿಎಚ್ (ಆಶಾ ನಿಧಿ)ಗೆ ಲಿಂಕ್ ಮಾಡಿರುವ ವೇತನ ಮಾದರಿ ಸೃಷ್ಟಿಸಿರುವ ಸಮಸ್ಯೆ ಏನು?

ಕೇಂದ್ರ ಸರ್ಕಾರದಿಂದ ಆಶಾ ಕಾರ್ಯಕರ್ತರು ಮಾಡಬೇಕಾದ ೩೮ ಕೆಲಸಗಳನ್ನು ಪಟ್ಟಿ ಮಾಡಲಾಗಿದೆ. ಈ ಕೆಲಸಗಳನ್ನು ಆಶಾ ನಿಧಿ (ಆರ್‌ಸಿಎಚ್) ಪೋರ್ಟಲ್‌ಗೆ ಲಿಂಕ್ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು ತಾವು ಮಾಡಿದ ಕೆಲಸಗಳನ್ನು ಈ ಪೋರ್ಟಲ್‌ನಲ್ಲಿ ಇವರ ಮೇಲಿನ ಸಿಬ್ಬಂದಿಗೆ ಅಪ್‌ಡೇಟ್ ಮಾಡಿದರೆ ಮಾತ್ರ ಅವರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಲಭಿಸುತ್ತದೆ, ಇಲ್ಲದಿದ್ದರೆ ಅವರ ಕೆಲಸಕ್ಕೆ ಕೇಂದ್ರದ ಪ್ರೋತ್ಸಾಹ ಧನ ಸಿಗುವುದಿಲ್ಲ. ಆದರೆ ಈ ಪೋರ್ಟಲ್‌ನಲ್ಲಿ ಹಲವಾರು ನ್ಯೂನತೆಗಳಿದ್ದು ಆಶಾಗಳು ಮಾಡುವ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ ಎಂಬುದೇ ಕಾರ್ಯಕರ್ತೆಯರ ಅಳಲಾಗಿದೆ.

ಈ ಸಮಸ್ಯೆಯ ಪರಿಹಾರಕ್ಕೆ ಆಯುಕ್ತರ ಸಮ್ಮುಖದಲ್ಲಿ ಸಂಬಂಧಿತ ಇಲಾಖಾ ಅಧಿಕಾರಿಗಳು, ಸಂಘದ ಪದಾಧಿಕಾರಿಗಳೊಂದಿಗೆ ತಿಂಗಳಿ ಗೊಂದು ಸಭೆ ನಡೆಸಲಾಯಿತು. ಆದರೆ ಪರಿಹಾರದ ಬದಲಿಗೆ ಸಮಸ್ಯೆಗಳ ಪಟ್ಟಿ ಬೆಳೆಯಿತು. ಕೊನೆಗೆ ತಿಂಗಳ ಸಭೆಯನ್ನೇ ನಿಲ್ಲಿಸಿ ಬಿಟ್ಟರು. ವಿಧ ವಿಧ ಆದೇಶಗಳನ್ನು ಮಾಡಿ ಸಿಬ್ಬಂದಿಗಳನ್ನು ಹೊಣೆ ಮಾಡಲಾಯಿತು. ನಷ್ಟದ ಬಗ್ಗೆ ಸಂಘದಿಂದ ಪದೇ ಪದೇ ಧ್ವನಿ ಎತ್ತಿದಾಗ ತಿಂಗಳಿಗೆ ಇಂತಿಷ್ಟೆಂದು ಬಿಡಿಗಾಸು ನೀಡಿ, ಕೈತೊಳೆದು ಕೊಂಡಿರುವರು. ಕಳೆದ ೮ ವರ್ಷಗಳಿಂದ ಬಂದಂತಹ ಆಯುಕ್ತರು, ಎಂ ಡಿಯವರು ಹತ್ತಾರು ಆದೇಶಗಳನ್ನು ಮಾಡಿರುವರು. ಆದೇಶಗಳಿಗೆ ಬೆಲೆ ಇಲ್ಲ. ಸಮಸ್ಯೆಗಳಿಗೆ ಪರಿಹಾರವಿಲ್ಲ.

-ಸಂಧ್ಯಾ, ಅಧ್ಯಕ್ಷರು, ಮೈಸೂರು ಜಿಲ್ಲಾ ಆಶಾ ಕಾರ್ಯಕರ್ತರ ಸಂಘ

ಸಮಾಜದ ಸ್ವಾಸ್ಥ್ಯ ಕಾಪಾಡಲು ಬಿಸಿಲು, ಮಳೆ, ಗಾಳಿಯನ್ನೂ ಲೆಕ್ಕಿಸದೆ ಅಹೋರಾತ್ರಿ ದುಡಿಯುವ ಆಶಾ ಕಾರ್ಯಕರ್ತೆಯರು ಅನೇಕ ಸಮಸ್ಯೆಗಳಿಂದ ತೊಂದರೆಗೆ ಒಳಗಾಗಿದ್ದಾರೆ. ಅವರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಜನವರಿ ೭ರಿಂದ ೧೦ನೇ ತಾರೀಖಿನವರೆಗೂ ಅಹೋರಾತ್ರಿ ಹೋರಾಟ ನಡೆಸಿದರು. ಅಂತಿಮವಾಗಿ ಮುಖ್ಯಮಂತ್ರಿಗಳು ಸಂಘದ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನ ಸೇರಿ ಪ್ರತಿ ಆಶಾ ಕಾರ್ಯಕರ್ತೆಗೂ ಮಾಸಿಕ ರೂ. ೧೦,೦೦೦ ಗೌರವಧನ ನೀಡುವ ಭರವಸೆ ನೀಡಿದ್ದರು. ಹಾಗೆಯೇ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ‘ಆಶಾ’ಗಳ ಗೌರವಧನ ಹೆಚ್ಚಿಸುವ ಮೂಲಕ ನುಡಿದಂತೆ ನಡೆದಿದೆ. ಈ ಸಂಬಂಧ ಆದೇಶ ಬಾಕಿ ಇದ್ದು, ಅದು ಕೂಡ ಆದಷ್ಟು ಶೀಘ್ರವೇ ಆಗಬೇಕು ಎಂಬುದು ಆಶಾ ಕಾರ್ಯಕರ್ತೆಯರ ಒತ್ತಾಸೆಯಾಗಿದ್ದು, ಪತ್ರಿಕೆಯ ಆಶಯವೂ ಆಗಿದೆ. ಆಶಾ ಕಾರ್ಯಕರ್ತೆಯರು ಇನ್ನೂ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದು ಅವರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಆಂದೋಲನ ಸರಣಿ ಲೇಖನ ಆರಂಭಿಸಿದೆ

ಆಂದೋಲನ ಡೆಸ್ಕ್

Recent Posts

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಅಜ್ಜಿ ನಿಧನ

ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…

8 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ನಾಳೆ ಅಧಿಕೃತ ಚಾಲನೆ

ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…

9 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…

10 hours ago

ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅಜಿಂಕ್ಯ ಶಿಂಧೆ ಸಾರಥ್ಯ

ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…

11 hours ago

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

14 hours ago

ಓದುಗರ ಪತ್ರ: ಒಂದು ವರ್ಷ ಅಲೆದಾಡಿಸಿದ ನಂತರ… !

ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…

14 hours ago