ದಶಕಗಳ ಹಿಂದೆ ರಸ್ತೆಗೊಬ್ಬ ಫುಟ್ಬಾಲ್ ಆಟಗಾರರಿದ್ದರು
ಪ್ರೋತ್ಸಾಹದ ಕೊರತೆಯಿಂದ ಇಡೀ ಚಿತ್ರಣವೇ ಬದಲು
ಜಿ.ತಂಗಂ ಗೋಪಿನಾಥಂ
ಮೈಸೂರು: ರಾಜ್ಯದಲ್ಲೇ ಮೊದಲ ಫುಟ್ಬಾಲ್ ಅಸೋಸಿಯೇಷನ್ ಆರಂಭಿಸಿದ್ದ ಹೆಗ್ಗಳಿಕೆ ಹೊಂದಿರುವ ಮೈಸೂರಿನಲ್ಲೇ ಪ್ರೋತ್ಸಾಹವಿಲ್ಲದೆ ಫುಟ್ಬಾಲ್ ಕ್ರೀಡೆ ಸೊರಗುತ್ತಿದೆ.
1980ರ ದಶಕದವರೆಗೂ ದೇಶದ ಫುಟ್ಬಾಲ್ ಇತಿಹಾಸದಲ್ಲಿ ರಾಜ್ಯ ಫುಟ್ಬಾಲ್ ತಂಡವನ್ನು ಮಿಂಚಿಸಿ, ಛಾಪು ಮೂಡಿಸಿದ್ದ ಮೈಸೂರು ಫುಟ್ಬಾಲ್ ಅಸೋಸಿಯೇಷನ್‌ನಲ್ಲಿ ಈಗ ಪ್ರತಿಭಾನ್ವಿತ ಆಟಗಾರರಿದ್ದರೂ ಪ್ರೋತ್ಸಾಹದ ಕೊರತೆ ಕಾಡುತ್ತಿದೆ.
ಕುಸ್ತಿಯಷ್ಟೇ ಫುಟ್ಬಾಲ್‌ನಲ್ಲೂ ಮೈಸೂರು ಹೆಸರುವಾಸಿಯಾಗಿತ್ತು. ರಸ್ತೆಗೊಂದು ಗರಡಿ ಮನೆ, ಮನೆಗೊಬ್ಬ ಪೈಲ್ವಾನನನ್ನು ಹೊಂದಿರುವ ಮೈಸೂರಿನಲ್ಲಿ ದಶಕಗಳ ಹಿಂದೆ ರಸ್ತೆಗೊಬ್ಬ ಫುಟ್ಬಾಲ್ ಆಟಗಾರರಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೋತ್ಸಾಹದ ಕೊರತೆಯಿಂದ ಇಡೀ ಚಿತ್ರಣವೇ ಬದಲಾಗಿದೆ. ಫುಟ್ಬಾಲ್ ಅಸೋಸಿಯೇಷನ್‌ಗೆ ಸ್ವಂತ ಮೈದಾನ ಇಲ್ಲದೆ, ಮೈಸೂರು ವಿವಿ ಫುಟ್ಬಾಲ್ ಮೈದಾನದಲ್ಲಿ ಪಂದ್ಯಾವಳಿ ಆಯೋಜಿಸಬೇಕಾಗಿದೆ. ಆಟಗಾರರು ಖಾಲಿ ಜಾಗಗಳಲ್ಲಿ ಅಭ್ಯಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಇತರ ಕ್ರೀಡೆಗಳಿಗೆ ನೀಡಿದಷ್ಟು ಪ್ರೋತ್ಸಾಹವನ್ನು ಫುಟ್ಬಾಲ್ ಗೂ ನೀಡಿದ್ದರೆ ಫಿಫಾ ವಿಶ್ವಕಪ್‌ನಲ್ಲಿ ಭಾರತ ತಂಡವೂ ಸಕ್ರಿಯವಾಗಿ ಇರುತ್ತಿತ್ತು. ಆ ತಂಡದಲ್ಲಿ ಮೈಸೂರಿನ ಪ್ರತಿಭೆಗಳೂ ಸ್ಥಾನ ಪಡೆಯುತ್ತಿದ್ದರು. ಆದ್ದರಿಂದ ಇತರ ಕ್ರೀಡೆಗಳಂತೆ ಫುಟ್ಬಾಲ್‌ಗೂ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಫುಟ್ಬಾಲ್ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಆಟಗಾರರು ಇದ್ದರೂ ಪ್ರೋತ್ಸಾಹ ಇಲ್ಲ
ಹೆಲ್ಸಿಂಕಿ ಮತ್ತು ಲಂಡನ್ ಒಲಿಂಪಿಕ್ಸ್, ಕೊರಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಗೋಲ್ ಕೀಪರ್ ಆಗಿ ಭಾರತ ತಂಡದಲ್ಲಿದ್ದ ನರಸಿಂಹಯ್ಯ ಮೈಸೂರಿನವರು. ಈಗಲೂ ಅನೇಕ ಪ್ರತಿಭಾನ್ವಿತ ಆಟಗಾರರು ಮೈಸೂರಿನಲ್ಲಿದ್ದು, ಪ್ರೋತ್ಸಾಹದ ಕೊರತೆ ಎದುರಿಸುತ್ತಿದ್ದಾರೆ.
|
ಕ್ರಾಫರ್ಡ್ ಭವನದ ಬಳಿಯೇ ಫುಟ್ಬಾಲ್ ಅಭ್ಯಾಸ
ಮೈಸೂರಿನಲ್ಲಿ ಫುಟ್ಬಾಲ್ ಅಸೋಸಿಯೇಷನ್ ಪ್ರಾರಂಭಿಸುವುದಕ್ಕೂ ಮೊದಲು ಮೈಸೂರು ವಿವಿಯ ಈಗಿನ ಕ್ರಾಫರ್ಡ್ ಭವನದ ಸ್ಥಳದಲ್ಲಿ ಫುಟ್ಬಾಲ್ ಅಭ್ಯಾಸ ಮಾಡಲಾಗುತ್ತಿತ್ತು. ಫುಟ್ಬಾಲ್ ಅಸೋಸಿಯೇಷನ್ ಪ್ರಾರಂಭಿಸಿದ ನಂತರ ಮೈಸೂರು ಮಹಾರಾಜರು ಫುಟ್ಬಾಲ್ ಆಟಕ್ಕೆ ದೊಡ್ಡಕೆರೆ ಮೈದಾನದಲ್ಲಿ ಆಡಲು ವ್ಯವಸ್ಥೆ ಕಲ್ಪಿಸಿದರು.
ಫುಟ್ಬಾಲ್ ಬೆಳವಣಿಗೆಗೆ ಶ್ರಮಿಸಿದ್ದ ಕೃಷ್ಣರಾವ್, ಶ್ರೀನಿವಾಸ ಅಯ್ಯಂಗಾರ್
ಮೈಸೂರಿನಲ್ಲಿ ಫುಟ್ಬಾಲ್ ಬೆಳವಣಿಗೆಗೆ ಕೃಷ್ಣರಾವ್, ಶ್ರೀನಿವಾಸ ಅಯ್ಯಂಗಾರ್ ಶ್ರಮಿಸಿದ್ದಾರೆ. ಕೃಷ್ಣರಾವ್ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿಯಾಗಿ ಅಪಾರ ಪ್ರಮಾಣದಲ್ಲಿ ದುಡಿದಿದ್ದಾರೆ. ಮೈಸೂರಿನ ವರದರಾಜನ್ ಭಾರತದ ಪರ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಫುಟ್ಬಾಲ್ ಆಡಿದ್ದಾರೆ. ಶಂಕರ್‌ಸಿಂಗ್, ಬಸವಣ್ಣ, ಷಣ್ಣುಗಂ ದೇಶದ ಪ್ರಮುಖ ಆಟಗಾರರಾಗಿದ್ದರು. ಇವರು ಮೈಸೂರು ರಾಜ್ಯದ ಪರ ಮತ್ತು ಇಂಡಿಯನ್ ರೈಲ್ವೆ ಪರ ಆಡಿದ್ದರು.
ಈಗ ಬೆರಳೆಣಿಕೆಯ ಕ್ಲಬ್‌ಗಳು ಮಾತ್ರ ಇವೆ
ಹಿಂದೆ ಮೈಸೂರು ಬ್ಲೂಸ್, ಚಾಲೆಂಜ್ ಯೂನಿಯನ್, ಕೆ.ಆರ್.ಮಿಲ್ಸ್, ರೈಲ್ವೆ ವರ್ಕ್ ಶಾಪ್, ಐಡಿಯಲ್ ಜಾವಾ
ಉತ್ತಮ ಆಟಗಾರರನ್ನು ಹೊಂದಿದ ಕ್ಲಬ್ ಗಳಾಗಿದ್ದವು. ಈಗ ಬೆರಳೆಣಿಕೆಯ ಕ್ಲಬ್ ಗಳು ಮಾತ್ರ ಇವೆ. ರಾಯಲ್, ದುರ್ಗಾಂಬ, ಸರ್ಕಾರಿ ಮುದ್ರಣಾಲಯ ಪ್ರೆಸ್, ಗಣೇಶ್, ಅಶೋಕ, ಪೊಲೀಸ್, ಸೋನಿಯಾ, ಮುಸ್ಲಿಮ್ ಮತ್ತು ಪೋಸ್ಟ್, ರೈಲ್ವೆ ತಂಡಗಳಿವೆ.
50ಕ್ಕೂ ಹೆಚ್ಚು ತಂಡಗಳಿದ್ದವು.
1906ರಲ್ಲಿ ಜನ್ಮ ತಾಳಿದ ಮೈಸೂರು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ರಾಜ್ಯದ ಮೊದಲ ಫುಟ್ಬಾಲ್ ಸಂಸ್ಥೆ, ರಾಜ್ಯದ ಫುಟ್ಬಾಲ್ ಸಂಸ್ಥೆ ಹುಟ್ಟಿದ್ದೂ ಮೈಸೂರಿನಲ್ಲೇ ಎಂಬುದು ಹೆಮ್ಮೆಯ ಸಂಗತಿ. ಹಿಂದೆ ಅಸೋಸಿಯೇಷನ್ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚಿನ ತಂಡಗಳಿದ್ದವು. ಸಾವಿರಾರು ಕ್ರೀಡಾಪಟುಗಳಿದ್ದರು.
ಫುಟ್ಬಾಲ್‌ನಲ್ಲಿ ಸೋದರರ ಮಿಂಚು
ಮೈಸೂರು ಫುಟ್ಬಾಲ್ ಕ್ರೀಡೆಯ ವೈಭವದ ದಿನಗಳಲ್ಲಿ ಸೋದರರಾದ ಎನ್. ರಾಮಣ್ಣ, ಎನ್.ರಾಜಣ್ಣ ಮತ್ತು ಎನ್.ಪಾಪಣ್ಣ (ಚಿನ್ನಸ್ವಾಮಿ) ಮಿಂಚು ಹರಿಸಿದ್ದರು. 1956 ರಿಂದ 2 ದಶಕಗಳ ಕಾಲದ ಮೈಸೂರು ಫುಟ್ಬಾಲ್ ಅಂಗಳದತ್ತ ಗಮನಿಸಿದರೆ, ಮೂವರೂ ಸಹೋದರರ ಸಾಧನೆ ಬೆರಗು ಮೂಡಿಸುತ್ತದೆ. ಕೊಲ್ಕತ್ತದ ಪ್ರತಿಷ್ಠಿತ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್ ಈ ಮೂವರು ಆಡಿದ್ದರು. ರಾಜಣ್ಣ 1962ರಲ್ಲಿಯೇ ಈಸ್ಟ್ ಬೆಂಗಾಲ್ ತಂಡಕ್ಕೆ ಆಡಲು ಆಹ್ವಾನಿತರಾಗಿ ಹೋಗಿದ್ದರು. ಬಳಿಕ 1965 ರಿಂದ 1969ರ ವರೆಗೆ ಮೊಹಮ್ಮಡನ್ ಸ್ಪೋರ್ಟಿಂಗ್ ಪರ ಆಡಿದ್ದಾರೆ. ಎನ್.ಪಾಪಣ್ಣ 1968ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಮಲೇಷಿಯಾದ ಕೌಲಾಲಂಪುರದಲ್ಲಿ ನಡೆದ ಮರ್ಡೇಕಾ ಟೂರ್ನಿಯಲ್ಲಿ ಆಡಿದ್ದರು.
ನಮ್ಮಲ್ಲಿ ಪ್ರೋತ್ಸಾಹದ ಕೊರತೆ ಇದೆ. ಹಿಂದೆ ಯಾವುದೇ ಪಂದ್ಯ ನಡೆದರೂ ದೊಡ್ಡಕೆರೆ ಮೈದಾನದಲ್ಲಿ ಫುಟ್ಬಾಲ್‌ಗೆ ನೂರಾರು ಜನರು ಸೇರುತ್ತಿದ್ದರು. ಆದರೆ, ಈಗ ಮೈಸೂರಿನಲ್ಲಿ ಫುಟ್ಬಾಲ್ ಮೈದಾನವೇ ಇಲ್ಲದಂತಾಗಿದೆ. ಪ್ರೋತ್ಸಾಹ ಇಲ್ಲದ ಕಾರಣ ಜಿಲ್ಲೆಯಲ್ಲಿ ಫುಟ್ಬಾಲ್ ನೆಲಕಚ್ಚಿದೆ.
ಎಲ್.ಮಂಜುನಾಥ್, ಕಾರ್ಯದರ್ಶಿ, ಫುಟ್ಬಾಲ್ ಅಸೋಸಿಯೇಷನ್, ಮೈಸೂರು.
ಫುಟ್ಬಾಲ್ ರೋಚಕತೆ ಇರುವುದೇ ದೊಡ್ಡಕೆರೆಯಲ್ಲಿ
ಮೈಸೂರು ಫುಟ್ಬಾಲ್ ಇತಿಹಾಸದ ರೋಚಕತೆ ಇರುವುದೇ ದೊಡ್ಡಕೆರೆ ಮೈದಾನದಲ್ಲಿ, ದೇಶದ ಪ್ರಮುಖ ಪಂದ್ಯಾವಳಿಗಳು ಇಲ್ಲಿ ನಡೆದಿವೆ. ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ವರ್ಷವಿಡೀ ಒಂದಿಲ್ಲೊಂದು ಪಂದ್ಯಾವಳಿ ನಡೆಸಿ ಅನೇಕ ಆಟಗಾರರ ಹುಟ್ಟಿಗೆ ಮತ್ತು ಪ್ರತಿಭಾ ಪ್ರದರ್ಶನಕ್ಕೆ ಕಾರಣವಾಗಿತ್ತು. ದೊಡ್ಡಕೆರೆ ಮೈದಾನದಲ್ಲಿ ಪ್ರತಿವರ್ಷ ರಾಜವಂಶಸ್ಥರ ನೆರವಿನಿಂದ ‘ಪ್ರಿನ್ಸಸ್ ಬರ್ತ್ ಡೇ’ ಟೂರ್ನಮೆಂಟ್, ಗಣೇಶ ಬೀಡಿ ಮಾಲೀಕರ ಟೂರ್ನಮೆಂಟ್, ಮಾಯಣ್ಣ ಮೆಮೋರಿಯಲ್ ಕಪ್ ಟೂರ್ನಮೆಂಟ್, ಜಿಲ್ಲಾ ಸಂಸ್ಥೆಯ ಜಿಲ್ಲಾ ಲೀಗ್, ದಸರಾ ಫುಟ್ಬಾಲ್ ಟೂರ್ನಿ… ಹೀಗೆ ವರ್ಷಪೂರ್ತಿ ಒಂದಲ್ಲ ಒಂದು ಟೂರ್ನಿ ನಡೆಯುತ್ತಿದ್ದವು. ಆದರೆ, ಈಗ ಆಸೋಸಿಯೇಷನ್ ವರ್ಷದಲ್ಲಿ ಎರಡು ಮೂರು ಟೂರ್ನಿಗಳನ್ನು ಮಾತ್ರ ಆಯೋಜಿಸುತ್ತಿದೆ.
ಹನೂರು : ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ನಾವು ಪ್ರಾಧಿಕಾರಗಳನ್ನು ರಚನೆ ಮಾಡಿದ್ದೇವೆ, ಮಾಡುತ್ತಿದ್ದೇವೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ…
ಸಂಕಷ್ಟದಲ್ಲಿರುವ ಕನ್ನಡಿಗರನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ; ಸಿಎಂ ಬೆಂಗಳೂರು : ಕಾಶ್ಮೀರದ ಪೆಹಲ್ಗಾಮನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಭರತ್…
ಡಾ. ಚೈತ್ರಾ ಸುಖೇಶ್ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಈಗಾಗಲೇ ಪ್ರಕಟವಾಗಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಒಳ್ಳೆಯ…
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ನೀಡಿ ವಿಶೇಷ…
ಸಿದ್ದಾಪುರ: ತೋಟದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಉಸಿರು ಚೆಲ್ಲಿರುವ ಘಟನೆ ವರದಿಯಾಗಿದೆ. ಪಾಲಿಬೆಟ್ಟ ಸಮೀಪ…
ಬೆಳಗಿನ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಸಚಿವರು ಮಲೆ ಮಹದೇಶ್ವರ ಬೆಟ್ಟ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ…