Andolana originals

ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ ಜಿಲ್ಲಾಸ್ಪತ್ರೆ ದುಬಾರಿ!

ನವೀನ್ ಡಿಸೋಜ

ವೈದ್ಯಕೀಯ ಶಿಕ್ಷಣ ಇಲಾಖೆ ಆಡಳಿತಕ್ಕೊಳಪಟ್ಟ ಬಳಿಕ ಸೇವೆಯೊಂದಿಗೆ ಶುಲ್ಕವೂ ಹೆಚ್ಚಳ; ಪ್ರತಿಯೊಂದು ಸೇವೆಗೂ ಪಾವತಿ ಮಾಡಬೇಕಾದ ಅನಿವಾರ್ಯತೆ 

ಮಡಿಕೇರಿ: ಮಡಿಕೇರಿಯ ಜಿಲ್ಲಾ ಆಸ್ಪತ್ರೆಯು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಾದ ನಂತರ ರೋಗಿಗಳಿಗೆ ದುಬಾರಿಯಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಪ್ರತಿಯೊಂದು ಸೇವೆಗೂ ಈಗ ಹಣ ಪಾವತಿ ಮಾಡಬೇಕಿದ್ದು, ರೋಗಿಗಳಿಗೆ ಸರ್ಕಾರಿ ಸಂಸ್ಥೆಯಲ್ಲಿ ಖಾಸಗಿ ಆಸ್ಪತ್ರೆಯ ಅನುಭವವಾಗುತ್ತಿದೆ.

ಮಡಿಕೇರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭವಾದ ಬಳಿಕ ಆರೋಗ್ಯ ಸೇವೆ ಬಹಳಷ್ಟು ಸುಧಾರಣೆ ಕಂಡಿದೆ. ಸಣ್ಣಪುಟ್ಟ ಕಾಯಿಲೆಗೂ ಹೊರಜಿಲ್ಲೆಗಳಿಗೆ ಹೋಗಬೇಕಿದ್ದ ಪರಿಸ್ಥಿತಿ ಬದಲಾಗಿ ಈಗ ಹೊರ ಜಿಲ್ಲೆಯ ರೋಗಿಗಳೂ ಮಡಿಕೇರಿಯ ಕೋಯಿಮ್ಸ್‌ಗೆ ಬಂದು ಚಿಕಿತ್ಸೆ ಪಡೆಯುವಷ್ಟು ವ್ಯವಸ್ಥೆ ಬದಲಾಗಿದೆ.

ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ಕಡಿಮೆ ಇಲ್ಲದಂತಹ ಉತ್ತಮ ಸೌಲಭ್ಯಗಳು ಲಭ್ಯವಾಗುತ್ತಿದೆ. ಆದರೆ ಅದರೊಂದಿಗೆ ನಾನಾ ಆರೋಗ್ಯ ಸೇವೆಗಳ ಶುಲ್ಕವೂ ಹೆಚ್ಚಾಗಿದ್ದು, ಬಿಪಿಎಲ್ ಕಾರ್ಡ್ ಇಲ್ಲದವರು ಪ್ರತಿಯೊಂದು ಸೇವೆಗೂ ಶುಲ್ಕ ಪಾವತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಈಗಾಗಲೇ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ನಿಯಂತ್ರಣ ಬಹುಪಾಲು ಕಳೆದುಕೊಂಡಿದ್ದು, ಇನ್ನು ಕೆಲ ದಿನಗಳಲ್ಲಿ ವಿರಾಜಪೇಟೆಯಲ್ಲಿ ಜಿಲ್ಲಾ ಆಸ್ಪತ್ರೆ ಆರಂಭವಾದರೆ ಈ ಆಸ್ಪತ್ರೆ ಸಂಪೂರ್ಣ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿನಕ್ಕೆ ಬರಲಿದೆ.

ಸಂಸ್ಥೆಯ ಆಂತರಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಪ್ರತಿ ಸೇವೆಗೂ ಇಂತಿಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಅದರಂತೆ ಈಗಾಗಲೇ ಎಲ್ಲಾ ಸೇವೆಗಳಿಗೂ ಶುಲ್ಕ ಸಂಗ್ರಹ ಮಾಡಲಾಗುತ್ತಿದ್ದು, ಈಗಾಗಲೇ ಜಿಲ್ಲೆಯ ಜನರಿಗೆ ಇದರ ಬಿಸಿ ತಟ್ಟಿದೆ. ಬಿಪಿಎಲ್ ಕಾರ್ಡುದಾರರು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಉಚಿತ ಸೇವೆಯಿದ್ದು, ಉಳಿದವರು ಪ್ರತಿ ಸೇವೆಗೂ ಇಂತಿಷ್ಟೆಂದು ಪಾವತಿ ಮಾಡಬೇಕಿದೆ.

ಜಿಲ್ಲೆಯ ಮಟ್ಟಿಗೆ ಇದ್ದ ಒಂದು ಜಿಲ್ಲಾ ಆಸ್ಪತ್ರೆಯೇ ದೊಡ್ಡ ಆಸ್ಪತ್ರೆಯಾಗಿತ್ತು. ಆಗ ಸರ್ಕಾರಿ ಆಸ್ಪತ್ರೆ ಎಂದರೇ ಎಲ್ಲವೂ ಫ್ರೀ ಎಂಬ ಮನೋಭಾವನೆ ಇತ್ತು. ಆದರೆ ಈಗ ಸೌಲಭ್ಯಗಳು ಹೆಚ್ಚಾಗುವುದರ ಜತೆಗೆ ಎಲ್ಲದಕ್ಕೂ ಪಾವತಿಸಬೇಕಾಗಿರುವುದು ಬಡವರಾಗಿದ್ದೂ ಬಿಪಿಎಲ್ ಕಾರ್ಡ್ ಹೊಂದಿಲ್ಲದವರಿಗೆ ಕೊಂಚ ಮಟ್ಟಿಗೆ ಹೊರೆಯಾಗಿ ಪರಿಣಮಿಸಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ನಿಯಮದಂತೆ ಪ್ರತಿ ಸೇವೆಗೆ ಇಂತಿಷ್ಟೆಂದು ಶುಲ್ಕ ನಿಗದಿಯಾಗಿದೆ. ಆದರೆ ಇದೇ ಸೇವೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆಯಾಗಿದೆ. ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ದೊರಕುತ್ತಿದ್ದು, ಎಪಿಎಲ್ ಕಾರ್ಡು ಹೊಂದಿದವರಿಗೂ ಶೇ.೩೦ರಷ್ಟು ಶುಲ್ಕಗಳನ್ನು ಸರ್ಕಾರ ಪಾವತಿಸುತ್ತದೆ. ಯಾವುದೇ ದಾಖಲೆ ಇಲ್ಲದವರಿಗೂ ಕೆಲವೊಮ್ಮೆ ಉಚಿತವಾಗಿ ಸೇವೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದಕ್ಕೆ ಎಷ್ಟು ಶುಲ್ಕ?: 

ಕೊಯಿಮ್ಸ್‌ನಲ್ಲಿ ಸದ್ಯ ಹೊರ ರೋಗಿಗಳ ನೋಂದಣಿಗೆ ೧೦ ರೂ., ಒಳ ರೋಗಿಗಳ ನೋಂದಣಿಗೆ ೫೦ ರೂ., ಬೆಡ್ ಶುಲ್ಕ ಪ್ರತಿ ದಿನಕ್ಕೆ ೫೦ ರೂ. ಇದೆ. ವಿಶೇಷ ವಾರ್ಡ್ ಗಳು ಬೇಕಾದರೇ ೨ ಬೆಡ್‌ನ ವಾರ್ಡಿಗೆ ಪ್ರತಿ ದಿನ ೯೦೦ ರೂ., ಒಂದೇ ಬೆಡ್‌ನ ವಾರ್ಡಿಗೆ ೧,೮೦೦ ರೂ. ಮತ್ತು ವಿಶೇಷ ಸೌಲಭ್ಯಗಳುಳ್ಳ ವಾರ್ಡಿಗೆ ದಿನವೊಂದಕ್ಕೆ ೩,೬೦೦ ರೂ. ಪಾವತಿ ಮಾಡಬೇಕಿದೆ. ಐಸಿಯುಗೆ ಪ್ರತಿ ದಿನ ೨,೫೦೦ ರೂ., ಆಪರೇಷನ್ ಥಿಯೇಟರ್‌ಗೆ ಮೊದಲ ಒಂದು ಗಂಟೆಗೆ ೫೦೦ ರೂ., ಬಳಿಕ ೩೦೦ ರೂ., ಎಂಆರ್ ಐಗೆ ೫೦೦ ರಿಂದ ೪,೫೦೦ ರೂ., ಸಿಟಿ ಸ್ಕ್ಯಾನ್ ಗೆ ೧,೦೦೦ – ೧,೫೦೦ ರೂ., ಅಲ್ಟ್ರಾ ಸೌಂಡ್ ಗೆ ೧೫೦-೫೦೦ ರೂ., ಎಕ್ಸ್-ರೇ ೯೦ರಿಂದ ೨,೭೦೦ ರೂ., ಪ್ರಯೋಗಾಲಯ ೫೦ – ೩,೬೦೦ ರೂ. ಹೀಗೆ ಬೇರೆ ಬೇರೆ ಸೌಲಭ್ಯಗಳಿಗೆ ಒಂದೊಂದು ರೀತಿಯ ಶುಲ್ಕಗಳನ್ನು ಪಾವತಿಸಬೇಕಿದೆ.

” ಸಂಸ್ಥೆಯ ಆಂತರಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕೆಲವು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಬಿಪಿಎಲ್ ಮತ್ತು ಎಸ್‌ಸಿ, ಎಸ್‌ಟಿ ಜಾತಿ ದೃಢೀಕರಣ ಪತ್ರವಿದ್ದರೆ ಸಂಪೂರ್ಣ ಉಚಿತ ಚಿಕಿತ್ಸೆ ಲಭ್ಯವಿದೆ. ಆದರೂ ಕೆಲವೊಮ್ಮೆ ಯಾವುದೇ ದಾಖಲೆ ಇಲ್ಲದೆ ಬರುವ ವಲಸೆ ಕಾರ್ಮಿಕರು ಸೇರಿದಂತೆ ಬಡ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹವರಿಗೆ ಪ್ರತಿ ತಿಂಗಳು ೮ರಿಂದ ೧೦ ಲಕ್ಷ ರೂ. ವೆಚ್ಚದ ಶುಲ್ಕ ರಹಿತ ಚಿಕಿತ್ಸೆ ಲಭಿಸುತ್ತಿದೆ.”

-ಡಾ.ನಂಜುಂಡಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕರು, ಕೋಯಿಮ್ಸ್‌ 

 

 

ಆಂದೋಲನ ಡೆಸ್ಕ್

Recent Posts

ಮದ್ದೂರು ಬಳಿ ಭೀಕರ ಅಪಘಾತ : 14 ಶಾಲಾ ಮಕ್ಕಳು ಸೇರಿದಂತೆ 20 ಮಂದಿಗೆ ಗಾಯ

ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…

22 mins ago

ಮಹದೇಶ್ವರ ಬೆಟ್ಟ | 23 ದಿನದಲ್ಲಿ 2 ಕೋಟಿ ಒಡೆಯನಾದ ಮಾದಪ್ಪ

ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…

44 mins ago

ಜನಪರ ಆಡಳಿತ ನೀಡುವಲ್ಲಿ ಸರ್ಕಾರ ವಿಫಲ : ನಿಖಿಲ್‌ ಕಿಡಿ

ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…

53 mins ago

ದಾವಣಗೆರೆ ದಕ್ಷಿಣ ಉಪಚುನಾವಣೆ : ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್‌

ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…

1 hour ago

SSLC | ಪರೀಕ್ಷೆ ಅಂಕ 625ರ ಬದಲಿಗೆ 525ಕ್ಕೆ ಇಳಿಕೆ ; ಲೆಕ್ಕಕ್ಕಿಲ್ಲ ತೃತೀಯ ಭಾಷೆ

ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…

1 hour ago

ಯುಪಿಎಸ್‌ಸಿ ಪರೀಕ್ಷೆಗೆ ಕಠಿಣ ಪರಿಶ್ರಮ ಅಗತ್ಯ : ಕಿರಣ ಕಮತೆ

ಮೈಸೂರು : ಯುಪಿಎಸ್‌ ಪರೀಕ್ಷೆ ಭೇದಿಸುವುದು ಸುಲಭವಲ್ಲ. ಅದಕ್ಕೆ ಕಠಿಣ ಪರಿಶ್ರಮ, ಸ್ಥಿರತೆ ಮತ್ತು ಸ್ಮಾರ್ಟ್ ಓದು ಅಗತ್ಯ ಎಂದು…

2 hours ago