banu mushtaq
ಬಾನು ಮುಷ್ತಾಕ್ ಅವರ “ಹಾರ್ಟ್ ಲ್ಯಾಂಪ್” ಕೃತಿಗೆ ಲಭಿಸಿರುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯು ಕನ್ನಡಿಗರಿಗೆ ಹೆಮ್ಮೆಯ ಕ್ಷಣ. ಬಾನು ಅವರು ಒಬ್ಬ ಕಥೆಗಾರ್ತಿ ಮಾತ್ರ ಅಲ್ಲ, ಅವರು ಒಂದು ಧ್ವನಿ. ಸಮಾಜದಲ್ಲಿ ದಮನಕ್ಕೊಳಗಾಗಿರುವ, ಧ್ವನಿ ಇಲ್ಲದವರ ಧ್ವನಿ. ಅವರು ಈ ಪ್ರಶಸ್ತಿಯನ್ನು ಗೆದ್ದಿದ್ದು ಕೇವಲ ಕತೆಗಳಿಗಾಗಿ ಅಲ್ಲ, ಅವರು ಬದುಕಿದ ಬದುಕು, ಎದುರಿಸಿದ ಟೀಕೆಗಳು ಹಾಗೂ ಅವರು ನಿರಾಕರಿಸಿದ ಮೌನವೇ ಈ ಪ್ರಶಸ್ತಿಗೆ ಹಕ್ಕುದಾರ. ಅವರ ಬರವಣಿಗೆಯು ಸಮಾಜದ ವೈರುಧ್ಯಗಳನ್ನು ಪ್ರಶ್ನಿಸುವ ಮೂಲಕ ಅಳವಡಿಸಿಕೊಂಡ ಧೈರ್ಯವಂತಿಕೆಯ ಚಿತ್ರಣ. ಹಾಗಾಗಿ ಈ ಪ್ರಶಸ್ತಿಯು ಬಾನು ಅವರ ಕೃತಿಗೆ ಸಿಕ್ಕಿರುವ ಮಾನ್ಯತೆ ಮಾತ್ರ ಅಲ್ಲ, ಅದು ಅವರ ಸಮುದಾಯ, ಭಾಷೆ, ತಾಯಿನಾಡು ಮತ್ತು ಸ್ಥಳೀಯ ಸಾಂಸ್ಕೃತಿಕ ವ್ಯವಸ್ಥೆ ಎಲ್ಲದರ ಕಡೆಗೂ ಜಗತ್ತಿನ ಗಮನ ಸೆಳೆಯುತ್ತದೆ.
ಅದರಲ್ಲೂ ಇಂದಿನ ಕಾಲಘಟ್ಟದಲ್ಲಿ, ಭಾರತದಲ್ಲಿ ಬಹುಸಂಖ್ಯಾತ ಕೋಮುವಾದ, ಬಹುಸಂಖ್ಯಾತ ಧಾರ್ಮಿಕ ಮೂಲಭೂತವಾದಗಳು ಅಲ್ಪಸಂಖ್ಯಾತ ಸಮುದಾಯದವರ ದನಿಯನ್ನು ಅಡಗಿಸುತ್ತಾ, ಮಹಿಳೆಯರ ಧ್ವನಿಯನ್ನು ಹತ್ತಿಕ್ಕುತ್ತಿವೆ. ಹೆಣ್ಣು ಮಕ್ಕಳಿಗೆ “ಇದು ನಮಗೆ ಸಂಕ್ರಮಣ ಕಾಲ, ಈಗ ಮಾತನಾಡಬೇಡಿ, ನಿಮ್ಮ ಕುಟುಂಬ ಬಿಕ್ಕಟ್ಟಿನಲ್ಲಿದೆ, ನಿಮ್ಮ ಜತಿ ಬಿಕ್ಕಟ್ಟಿನಲ್ಲಿದೆ, ನಿಮ್ಮ ಧರ್ಮ ಬಿಕ್ಕಟ್ಟಿನಲ್ಲಿದೆ, ದೇಶ ಬಿಕ್ಕಟ್ಟಿನಲ್ಲಿದೆ. ಈ ಮಧ್ಯೆ ನೀನು ಅಪಸ್ವರ ಎತ್ತಿ ನಮ್ಮ ಮರ್ಯಾದೆ ಕಳೆಯಬೇಡ, ನಿಮ್ಮ ಸಮಸ್ಯೆಗಳನ್ನು ನಾವು ಆ ನಂತರ ಪರಿಹರಿಸುತ್ತೇವೆ, ಮೊದಲು ನಾವು ಎದುರಿಸುತ್ತಿರುವ ಬಿಕ್ಕಟ್ಟನ್ನು ಸರಿಪಡಿಸಿಕೊಳ್ಳೋಣ” ಎಂದೆಲ್ಲಾ ಹೇಳುತ್ತಾ ಅವರ ಮನದಾಳದ ಮಾತುಗಳನ್ನು ಹೇಳಲು ಸಾಧ್ಯವೇ ಆಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗುತ್ತಿದೆ.
ಇಸ್ಲಾಮೋ-ಬಿಯಾ ಜಗತಿಕವಾಗಿ ಬೆಳೆಯುತ್ತಿರುವಾಗ , ಮುಸ್ಲಿಂ ಹೆಣ್ಣು ಮಕ್ಕಳು ಈ ರೀತಿಯ ಬಿಕ್ಕಟ್ಟನ್ನು ಬಹಳ ಎದುರಿಸುತ್ತಿದ್ದಾರೆ. ಆ ದೃಷ್ಟಿಯಿಂದ ನೋಡಿದರೆ ಬಾನು ಬಹಳ ದಿಟ್ಟವಾಗಿ ತಮ್ಮ ಸ್ವಧರ್ಮದ ಧಾರ್ಮಿಕ ಮೂಲ ಭೂತವಾದಿಗಳನ್ನೂ ಎದುರು ಹಾಕಿಕೊಂಡಿದ್ದಾರೆ. ಅಲ್ಲೂ ಅವರು ಯಾವುದೇ ರಾಜಿ ಮಾಡಿಕೊಳ್ಳದೆ ತಮ್ಮ ಇಷ್ಟದಂತೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಉಡುಪಿನ ಬಗ್ಗೆ, ಉದ್ಯೋಗದ ಬಗ್ಗೆ, ಬಳಸುವ ಭಾಷೆಯ ಬಗ್ಗೆ , ಮಾಡುವ ಪ್ರಾರ್ಥನೆಯ ಬಗ್ಗೆಯೂ ಹೆಣ್ಣುಮಕ್ಕಳಿಗೆ ಧಾರ್ಮಿಕ ಚೌಕಟ್ಟು ಇರುವ ಸಂದರ್ಭದಲ್ಲೂ ಬಾನು ಅವರು ಸ್ವಾಯತ್ತವಾಗಿ ಬದುಕಿದ್ದಾರೆ. ಆ ಸ್ವಾಯತ್ತತೆ ಮತ್ತು ಘನತೆಯ ಬದುಕು ಯಾವುದೇ ಹೋರಾಟಗಾರರ, ಬರಹಗಾರರ ಮೂಲ ಆಶಯ. ಅದನ್ನು ಅವರು ಸ್ವಧರ್ಮದ ಧಾರ್ಮಿಕ ಮೂಲಭೂತವಾದ ಮತ್ತು ಬಹು ಸಂಖ್ಯಾತ ಧಾರ್ಮಿಕ ಮೂಲಭೂತವಾದ-ಈ ಎರಡನ್ನೂ ಮೆಟ್ಟಿ ನಿಂತು ದಿಟ್ಟವಾಗಿ ತಮಗೆ ಏನು ಅನಿಸುತ್ತದೆಯೋ, ಏನು ಬರೆಯಬೇಕೋ ಅದನ್ನು ಬರೆದಿದ್ದಾರೆ. ೩೫ ವರ್ಷಗಳ ಹಿಂದೆಯೇ “ಓ ದೇವರೆ, ನೀನು ಹೆಣ್ಣಾದರೆ” ಎಂಬ ಕಥೆಗೆ ಬಾನು ವಿರುದ್ಧ ಫತ್ವಾ ಹೊರಡಿಸಲಾಗಿತ್ತು. ಈ ಘಟನೆಯು ಅವರ ಜೀವನದ ಮೇಲೆ ಪೆಟ್ಟು ಬೀರಿದರೂ, ಅವರು ಒಂದು ಹೆಜ್ಜೆಯೂ ಹಿಂದಕ್ಕೆ ಹಾಕಲಿಲ್ಲ. ಬರಹವನ್ನು ನಿಲ್ಲಿಸಲಿಲ್ಲ. ಬದಲಿಗೆ ಅವರು ಲೇಖಕಿಯಾಗಿ ಮಾತ್ರವಲ್ಲ-ವಕೀಲೆಯಾಗಿ, ಕಾರ್ಯಕರ್ತೆಯಾಗಿ, ಭಾಷಣಕಾರ್ತಿಯಾಗಿಯೂ ತಮ್ಮ ಅಭಿಪ್ರಾಯವನ್ನು ಸದಾ ಎತ್ತಿ ಹಿಡಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡಿಗರಿಗೇ ತಮ್ಮ ಭಾಷೆಯ ಮೇಲೆ ಅಭಿಮಾನ ಕುಂದುತ್ತಿದೆ. ಹಾಗಾಗಿ ಮೊದಲು ಈ ಪ್ರಶಸ್ತಿ ಕನ್ನಡಿಗರ ಕಣ್ತೆರೆಸಲಿ. ಕನ್ನಡ ಸಾಹಿತ್ಯದ ಬಗ್ಗೆ ಅಭಿಮಾನ ಬೆಳೆಸಲಿ. ಇದು ಕೇವಲ ಬಾನು ಅವರ ಯಶಸ್ಸಲ್ಲ, ಇದು ಕನ್ನಡ ಭಾಷೆಯ ಅಭಿವ್ಯಕ್ತಿಯ ಪುನರುತ್ಥಾನ. ಆ ದೃಷ್ಟಿಯಿಂದ ಬಾನು ಮುಷ್ತಾಕ್ ಅವರ ಕೃತಿಗೆ ಲಭಿಸಿರುವುದು ಕನ್ನಡ ಭಾಷೆಯೆಡೆಗೆ ವಿಶ್ವದ ಗಮನವನ್ನು ಸೆಳೆಯುವುದರೊಂದಿಗೆ ಕನ್ನಡಿಗರ ಗಮನವನ್ನೂ ಸೆಳೆಯುತ್ತದೆ.
ಹಾಸನದಿಂದ ಅಂತಾರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿವರೆಗೆ. . .
ಬಾನು ಮುಷ್ತಾಕ್ ಅವರು ಕರ್ನಾಟಕದ ಹಾಸನ ಜಿಲ್ಲೆಯ ಮುಸ್ಲಿಂ ಕುಟುಂಬದಲ್ಲಿ ೧೯೪೮ರಲ್ಲಿ ಜನಿಸಿದರು. ಅವರ ತಂದೆ ಸರ್ಕಾರಿ ಉದ್ಯೋಗಿಯಾಗಿದ್ದು, ಅವರು ತಮ್ಮ ಪುತ್ರಿಗೆ ಉತ್ತಮ ಶಿಕ್ಷಣ ಕೊಡಿಸಲು ಬಯಸಿದರು. ಸಮುದಾಯದ ನಿರೀಕ್ಷೆಗಳಿಗೆ ವಿರುದ್ಧವಾಗಿ, ಅವರು ಶಿವಮೊಗ್ಗದ ಕನ್ನಡ ಮಾಧ್ಯಮದ ಮಿಷನರಿ ಶಾಲೆಯಲ್ಲಿ ೮ ವರ್ಷದ ಮಗಳನ್ನು ದಾಖಲಿಸಿದರು. ಈ ಶಾಲೆಯಲ್ಲಿ ಬಾನು ಕನ್ನಡ ಭಾಷೆಯನ್ನು ವೇಗವಾಗಿ ಕಲಿತರು ಮತ್ತು ಕನ್ನಡ ಭಾಷೆಯೇ ಅವರ ಸಾಹಿತ್ಯದ ಪ್ರಧಾನ ಮಾಧ್ಯಮವಾಯಿತು.
ಬಾನು ಅವರು ತಮ್ಮ ಕಾಲೇಜಿನ ಸಹಪಾಠಿ ಮತ್ತು ದೂರದ ಸಂಬಂಽಯಾದ ಮುಷ್ತಾಕ್ ಮೊಹಿಯುದ್ದೀನ್ ಅವರನ್ನು ೨೬ನೇ ವಯಸ್ಸಿನಲ್ಲಿ ವಿವಾಹವಾದರು. ವಿವಾಹದ ನಂತರದ ವರ್ಷಗಳಲ್ಲಿ, ಅವರು ಗೃಹಜೀವನದ ಒತ್ತಡ ಮತ್ತು ಪ್ರಸವೋತ್ತರ ಮನೋವಿಕಾರದಿಂದ ಬಳಲಿದರು. ಈ ಸಮಯದಲ್ಲಿ, ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬರವಣಿಗೆಯನ್ನು ಆರಿಸಿಕೊಂಡರು. ೧೯೭೩ರಲ್ಲಿ ಅವರು ತಮ್ಮ ಮೊದಲ ಕಥೆ “ನಾನು ಅಪರಾಽಯೇ? ” ಅನ್ನು ಬರೆದರು. ಆದರೆ ನಂತರ ಕೆಲವು ವರ್ಷಗಳ ಕಾಲ ಬರವಣಿಗೆಗೆ ವಿರಾಮ ನೀಡಿದರು. ೧೯೮೦ರ ದಶಕದಲ್ಲಿ, ತಮ್ಮ ಮೂರನೇ ಪುತ್ರಿ ಆಯಿಷಾ ಜನಿಸಿದ ನಂತರ, ಅವರು ಮತ್ತೆ ಬರವಣಿಗೆಯನ್ನು ಪ್ರಾರಂಭಿಸಿದರು. ಅವರು ಲಂಕೇಶ್ ಪತ್ರಿಕೆಯಲ್ಲಿ ಮುಸ್ಲಿಂ ಮಹಿಳೆಯರ ಹಕ್ಕುಗಳ ಕುರಿತು ಲೇಖನಗಳನ್ನು ಪ್ರಕಟಿಸಿದರು.
ಬಾನು ಮುಷ್ತಾಕ್ ಅವರು ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಬೆಳವಣಿಗೆಯಾದ ಬಂಡಾಯ ಸಾಹಿತ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಚಳವಳಿಯು ದಲಿತರು, ಮಹಿಳೆಯರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಾಹಿತ್ಯದಲ್ಲಿ ತಮ್ಮ ಧ್ವನಿ ವ್ಯಕ್ತಪಡಿಸಲು ವೇದಿಕೆಯಾಗಿತ್ತು. ಅವರು ಆರು ಕಥಾ ಸಂಕಲನಗಳು, ಒಂದು ಕವನ ಸಂಕಲನ, ಒಂದು ಪ್ರಬಂಧ ಸಂಕಲನ ಮತ್ತು ಒಂದು ಕಾದಂಬರಿಯನ್ನು ಪ್ರಕಟಿಸಿದ್ದಾರೆ. ಅವರ ಕಥೆ “ಕರಿ ನಾಗರಗಳು” ಅನ್ನು ಗಿರೀಶ್ ಕಾಸರವಳ್ಳಿ ನಿರ್ದೇಶನದ “ಹಸೀನಾ” (೨೦೦೪) ಚಿತ್ರವಾಗಿ ರೂಪಾಂತರಿಸಲಾಗಿದೆ. ಮುಷ್ತಾಕ್ ಅವರು ತಮ್ಮ ಬರವಣಿಗೆಯಲ್ಲಿ ಮುಸ್ಲಿಂ ಮಹಿಳೆಯರ ಜೀವನದ ಸಂಕಷ್ಟಗಳು, ಧಾರ್ಮಿಕ ಸಂಪ್ರದಾಯಗಳು ಮತ್ತು ಸಮಾಜದ ಪಿತೃಸತ್ತಾತ್ಮಕ ವ್ಯವಸ್ಥೆಗಳ ವಿರುದ್ಧ ಧೈರ್ಯವಾಗಿ ಪ್ರಶ್ನೆಗಳನ್ನು ಎತ್ತಿದ್ದಾರೆ. ೨೦೦೦ರಲ್ಲಿ, ಅವರು ಮುಸ್ಲಿಂ ಮಹಿಳೆಯರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಬಹುದೆಂದು ಹೇಳಿದ ನಂತರ, ಅವರು ಸಾಮಾಜಿಕ ಬಹಿಷ್ಕಾರ ಮತ್ತು ಜೀವ ಬೆದರಿಕೆಗಳನ್ನು ಎದುರಿಸಬೇಕಾಯಿತು.
ಬರಹದ ಪುಟಗಳಿಂದ ಪರದೆಗೂ ಪ್ರೇರಣೆ: ಬಾನು ಮುಷ್ತಾಕ್ ಅವರ “ಕರಿ ನಾಗರಗಳು” ಕಥೆ ಆಧಾರಿತ ಚಲನಚಿತ್ರ ಹಸೀನಾ, ೨೦೦೪ರಲ್ಲಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಬಿಡುಗಡೆಯಾಯಿತು. ಹಸೀನಾ ಎಂಬ ಮಹಿಳೆಯೊಬ್ಬಳು ತನ್ನ ಮಕ್ಕಳ ಭವಿಷ್ಯಕ್ಕಾಗಿ ನಡೆಸುವ ಹೋರಾಟ ಈ ಚಿತ್ರದ ಹೃದಯವಾಗಿದೆ. ಚಿತ್ರವು ರಾಷ್ಟ್ರಪ್ರಶಸ್ತಿಯುಳ್ಳ “ಉತ್ತಮ ಕುಟುಂಬ ಕಲ್ಯಾಣ ಚಿತ್ರ” ಎಂಬ ಪುರಸ್ಕಾರ ಪಡೆದಿದ್ದು, ಕರ್ನಾಟಕ ರಾಜ್ಯ ಪ್ರಶಸ್ತಿಯಲ್ಲಿಯೂ ಪ್ರಶಂಸೆಗೆ ಪಾತ್ರವಾಗಿದೆ.
ಡಾ. ಎಚ್. ಎಸ್. ಅನುಪಮಾ, ಲೇಖಕರು
ಬೆಳಗಾವಿ : ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಜೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆ.ಪಿ.ಎಂ.ಇ. ನಿಯಮದಂತೆ ಕ್ರಮ…
ಚಿಕ್ಕಮಗಳೂರು : ಅತ್ಯಂತ ಪರಿಸರ ಸೂಕ್ಷ ಸ್ಥಳಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ…
ಹೊಸದಿಲ್ಲಿ : ಲೋಕಸಭೆಯಲ್ಲಿ ವಂದೇ ಮಾತರಂ ಗೀತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು ಇತಿಹಾಸವನ್ನು…
ಬೆಳಗಾವಿ : ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದೇ ಒಂದು ಮಗುವಿದ್ದರೂ ಕೂಡ ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ…
ಬೆಳಗಾವಿ : ಡಿನ್ನರ್ ಬ್ರೇಕ್‌ಫಾಸ್ಟ್ ಬಳಿಕವೂ ತಂದೆಯ ಪರ ಪುತ್ರ ಯತೀಂದ್ರ ಬ್ಯಾಟಿಂಗ್ ಮಾಡುವುದನ್ನು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಪೂರ್ಣ ಅವಧಿಯವರೆಗೆ…
ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ, ಕಾಂಗ್ರೆಸ್ ಮುಖಂಡ ಇನಾಯತ್ ಅಲಿಗೆ ದೆಹಲಿ…