Andolana originals

ಪಾರಂಪರಿಕ ಕಟ್ಟಡ ತತ್ತರ; ನಿರ್ವಹಣೆಗಿಲ್ಲ ಸ್ಪಷ್ಟ ಉತ್ತರ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೆಗ್ಗುರುತುಗಳಲ್ಲಿ ಪಾರಂಪರಿಕ ಕಟ್ಟಡಗಳೂ ಪ್ರಮುಖವಾದವು. ಪ್ರವಾಸಿಗರಿಗೂ ಇವುಗಳ ಸೆಳೆತ ಇದ್ದೇ ಇದೆ. ಇಂತಹ ಕಟ್ಟಡಗಳ ನಿರ್ವಹಣೆ, ಸಂರಕ್ಷಣೆಗೆ ಆದ್ಯತೆ ನೀಡಲೇ ಬೇಕಲ್ಲವೇ? ವಿಪರ್ಯಾಸವೆಂದರೆ ಇವುಗಳ ನಿರ್ವಹಣೆ ಬಗ್ಗೆ ಜಿಲ್ಲಾಡಳಿತದಲ್ಲಿ ಯಾವುದೇ ಸ್ಪಷ್ಟ ಉತ್ತರ ಇಲ್ಲ.

ನಗರದ ಪಾರಂಪರಿಕ ಕಟ್ಟಡಗಳ ಸ್ಥಿತಿಗತಿ ಕುರಿತು ‘ಆಂದೋಲನ’ ದಿನಪತ್ರಿಕೆಯಲ್ಲಿ ಪ್ರಕಟವಾದ ಸರಣಿ ಲೇಖನಗಳನ್ನು ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ತಜ್ಞರು ನೀಡಿದ ಪ್ರತಿಕ್ರಿಯೆ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯ ಬಗ್ಗೆ ಅನುಮಾನ ಹುಟ್ಟುಹಾಕಿವೆ.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಪುರಾತತ್ವ , ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜು ಮತ್ತು ಪಾರಂಪರಿಕ ಕಟ್ಟಡಗಳ ತಜ್ಞ ಶೆಲ್ವಪಿಳ್ಳೈ ಅಯ್ಯಂಗಾರ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಒಂದೆಡೆ ಪಾರಂಪರಿಕ ಕಟ್ಟಡಗಳ ಅಳಿವು ಮತ್ತು ಉಳಿವಿನ ಬಗ್ಗೆ ಅಸ್ಪಷ್ಟತೆ ಕಾಣುತ್ತಿದ್ದರೆ, ಮತ್ತೊಂದೆಡೆ ಅವುಗಳ ಸಂರಕ್ಷಣೆ, ನಿರ್ವಹಣೆಯ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಪ್ರಮುಖವಾಗಿ ಲ್ಯಾನ್ಸ್‌ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಪುನರ್ ನಿರ್ಮಿಸಬೇಕೋ ಅಥವಾ ಕೆಡವಿ ಹೊಸದಾಗಿ ಕಟ್ಟಬೇಕೋ ಎಂಬ ಗೊಂದಲಗಳ ನಡುವೆಯೇ ಉಳಿದ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಆಯಾ ಇಲಾಖೆಗಳ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ಹೇಳಿದರು.

ಒಂದು ಹಂತದಲ್ಲಿ ದೇವರಾಜ ಮಾರುಕಟ್ಟೆ ಜಾಗದಲ್ಲಿ ಬಹುಮಹಡಿ ಕಟ್ಟಡವನ್ನು ನಿರ್ಮಿಸಿ ಕೆಳ ಭಾಗದಲ್ಲಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕು. ಇದರಿಂದ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ ಎಂಬ ವಾದಕ್ಕೆ ಪಾರಂಪರಿಕ ಕಟ್ಟಡ ತಜ್ಞರು ವಿರೋಧ ವ್ಯಕ್ತಪಡಿಸಿದ್ದರು.

ಏಕೆಂದರೆ ದೇವರಾಜ ಮಾರುಕಟ್ಟೆಯನ್ನು ಕೆಡವಿ ಬಹುಮಹಡಿಯ ಮಾರುಕಟ್ಟೆಯ ನಿರ್ಮಾಣ ಮಾಡಿದರೆ, ಇತರೆ ಕಟ್ಟಡಗಳನ್ನು ಕೆಡವಲು ದಾರಿ ಮಾಡಿಕೊಟ್ಟಂತಾಗುತ್ತದೆ. ಎಂದು ಪಾರಂಪರಿಕ ಕಟ್ಟಡಗಳತಜ್ಞ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ಅಭಿಪ್ರಾಯಪಟ್ಟರು.

ಮಹಾರಾಜ ಕಾಲೇಜು, ಪುರಭವನ, ವಾಣಿವಿಲಾಸ ಮಾರುಕಟ್ಟೆ, ಕಮಾನುಗಳು ಸೇರಿದಂತೆ ನಗರದಲ್ಲಿ ೨೦೦ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳನ್ನು ನಿರ್ವಹಣೆ ಮಾಡಲು ಸಂಬಂಧಪಟ್ಟ ಇಲಾಖೆಯವರು ಹಣ ಇಲ್ಲ ಎನ್ನುತ್ತಾರೆ. ಜಗನ್ಮೋಹನ ಅರಮನೆಯನ್ನು ರಾಜವಂಶಸ್ಥರು ನಿರ್ವಹಣೆ ಮಾಡಿಕೊಂಡು ಸುಸ್ಥಿತಿಯಲ್ಲಿಟ್ಟಿದ್ದಾರೆ. ಕಾರಂಜಿ ಕೆರೆ ಬಳಿಯ ಅಂಚೆ ಕಚೇರಿ (ಕಾರಂಜಿ ಅರಮನೆ)ಯನ್ನು ಕೂಡ ನಿರ್ವಹಣೆ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರದ ಸುಪರ್ದಿನಲ್ಲಿರುವ ಪಾಂಪರಿಕ ಕಟ್ಟಡಗಳು ದುಸ್ಥಿತಿಯಲ್ಲಿವೆ ಎಂದು ಅಯ್ಯಂಗಾರ್ ಅಸಮಾಧಾನ ವ್ಯಕ್ತಪಡಿಸಿದರು.

ಪಾರಂಪರಿಕ ಕಟ್ಟಡಗಳು ಉರುಳಿದರೆ ನಗರದ ಸೌಂದರ್ಯ ಮತ್ತು ಇತಿಹಾಸವೂ ಕಳಚಿ ಬೀಳಲಿದೆ. ಹೀಗಾಗಿ ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಅನುದಾನ ಕೊಡುವುದು-ಬಿಡುವುದು ನಂತರದ ವಿಚಾರ. ಮೊದಲು ನಿರ್ವಹಣೆಗಾಗಿ ಇಚ್ಛಾಶಕ್ತಿ ತೋರಿಸಲಿ ಎಂಬುದು ಪಾರಂಪರಿಕ ಕಟ್ಟಡಗಳ ತಜ್ಞ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ವಾದವಾಗಿದೆ.

” ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಕಟ್ಟಡಗಳ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು. ಇತರೆ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಆಯಾ ಇಲಾಖೆಗೆ ಸಂಬಂಧಿಸಿದೆ. ಹೀಗಾಗಿ ಇಲಾಖೆಗಳ ಹಣ ಮೀಸಲಿಟ್ಟು ಕಟ್ಟಡ ನಿರ್ವಹಣೆ ಮಾಡಿಕೊಳ್ಳಬೇಕು. ಪಾರಂಪರಿಕ ಕಟ್ಟಡಗಳ ನಿರ್ವಹಣೆಗಾಗಿ ಯಾವುದೇ ಪ್ರತ್ಯೇಕ ಅನುದಾನ ಇಲ್ಲ.”

-ಜಿ.ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾಧಿಕಾರಿ

” ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡಗಳೂ ಸೇರಿದಂತೆ ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳುವ ಬಗ್ಗೆ ಅಧಿಕಾರಿಗಳು ಮಾತಾಡುತ್ತಿಲ್ಲ. ಕಟ್ಟಡಗಳ ಉಳಿವಿಗೆ ಪರ್ಯಾಯ ಮಾರ್ಗವನ್ನಾದರೂ ಹುಡುಕಬೇಕು.”

-ಡಾ.ಶೆಲ್ವಪಿಳ್ಳೈ ಅಯ್ಯಂಗಾರ್, ಪಾರಂಪರಿಕ ತಜ್ಞ

” ಪಾರಂಪರಿಕ ಕಟ್ಟಡಗಳ ನಿರ್ವಹಣೆ ಆಯಾ ಇಲಾಖೆಯ ಜವಾಬ್ದಾರಿ. ಇನ್ನೂ ಕೆಲವು ಪಾರಂಪರಿಕ ಕಟ್ಟಡಗಳು ಕಾಲ ಕಾಲಕ್ಕೆ ನಿರ್ವಹಣೆಯಾಗದೆ ದುಸ್ಥಿತಿ ತಲುಪಿವೆ. ಮಳೆಗಾಲದ ಆರಂಭಕ್ಕೂ ಮುಂಚೆಯೇ ನೀರು ಸೋರದಂತೆ, ಕಟ್ಟಡಗಳಲ್ಲಿ ಗಿಡಗಳು ಬೆಳೆಯದಂತೆ ನಿರ್ವಹಣೆ ಮಾಡಿಕೊಳ್ಳಬೇಕು. ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಲ್ಲಿ ಕಟ್ಟಡಗಳ ನಿರ್ವಹಣೆಗೆ ಅನುದಾನ ಇಲ್ಲ. ತಾಂತ್ರಿಕ ಸಹಾಯವನ್ನು ಇಲಾಖೆ ಮಾಡಲಿದೆ.”

 -ಎ.ದೇವರಾಜು, ಆಯುಕ್ತರು, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ

 

 

ಆಂದೋಲನ ಡೆಸ್ಕ್

Recent Posts

ಪಿರಿಯಾಪಟ್ಟಣ: ತಂಬಾಕು ನಾಟಿ ಕಾರ್ಯ ಚುರುಕು

ನವೀನ್ ಕುಮಾರ್ ಕೆಲವು ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ರೈತರಲ್ಲಿ ಮಂದಹಾಸ  ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಪ್ರಮುಖ ಬೆಳೆಯಾದ…

1 hour ago

ಬಾಲ್ಯವನ್ನು ನೆನಪಿಸಿದ ಗುರು-ಶಿಷ್ಯರ ಸ್ನೇಹ ಸಮ್ಮಿಲನ

ಎಸ್.ಎ.ಹುಸೇನ್ ಡಿ.ಚೆನ್ನಮ್ಮ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಕಣ್ಣಾಲಿಗಳನ್ನು ಒದ್ದೆಯಾಗಿಸಿದ ಗುರು-ಶಿಷ್ಯರ ಬಾಂಧವ್ಯ ಮಡಿಕೇರಿ: ಕಾಲ ಚಕ್ರ ಉರುಳುತ್ತಾ ಸಾಗುತ್ತದೆ, ತಲೆಗೂದಲು…

1 hour ago

ಹೆದ್ದಾರಿಯಲ್ಲಿ ಮನಸ್ಸಿಗೆ ಮುದ ನೀಡುತ್ತಿರುವ ಕೆಂಬಣ್ಣದ ಹೂಗಳ ಚಿತ್ತಾರ!

ಭೇರ್ಯ ಮಹೇಶ್ ಕೆ.ಆರ್.ನಗರದಿಂದ ಭೇರ್ಯ ಗ್ರಾಮದವರೆಗೆ ಅಲ್ಲಲ್ಲಿ ಮೇ ಫ್ಲವರ್ ಮರಗಳ ಆಕರ್ಷಣೆ  ಕೆ.ಆರ್.ನಗರ: ಬೇಸಿಗೆಯ ನಡುವೆ ಆಗೊಮ್ಮೆ ಈಗೊಮ್ಮೆ…

2 hours ago

ಮೈಸೂರು | ಮಳೆ ಅನಾಹುತ ಎದುರಿಸಲು ಚೆಸ್ಕಾಂ ಸನ್ನದ್ಧ

ಮೈಸೂರು : ಮಳೆಯ ಅನಾಹುತಗಳನ್ನು ಸಮರ್ಥವಾಗಿ ಎದುರಿಸಲು ಚೆಸ್ಕಾಂ ಕೂಡ ಸಿದ್ಧತೆ ಮಾಡಕೊಂಡಿದೆ. ಮೈಸೂರು ನಗರದ ಎಂಟು ಸಬ್ ಡಿವಿಸನ್‌ನಲ್ಲಿ…

12 hours ago

ಮತ್ತೆ ಗ್ರಾಹಕರಿಗೆ ಶಾಕ್ ; ಪೆಟ್ರೋಲ್, ಡೀಸೆಲ್ ದರ 95 ಪೈಸೆ ಹೆಚ್ಚಳ

ಹೊಸದಿಲ್ಲಿ : ಇರಾನ್ ಮೇಲಿನ ಯುದ್ಧದ ನಡುವೆಯೇ ಇಂಧನ ದರಗಳನ್ನು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಎರಡನೇ ಬಾರಿ ಕೇಂದ್ರ…

13 hours ago