ಮೈಸೂರು: ಬಗೆಬಗೆಯ ಹಕ್ಕಿ-ಪಕ್ಷಿಗಳ ಆವಾಸ ಸ್ಥಾನ, ಜಲಚರಗಳಿಗೆ ಜೀವಿಸಲು ಯೋಗ್ಯವಾಗಬೇಕಿದ್ದ ಹೆಬಾಳು ಕೆರೆ, ಹಸಿರುಗಟ್ಟಿದ ಪಾಚಿ, ಕೈಗಾರಿಕೆಗಳ ತ್ಯಾಜ್ಯದ ನೀರು, ಒಳಚರಂಡಿ ನೀರು, ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಆವೃತವಾಗಿದೆ. ಕೆರೆಗೆ ಸೇರುವ ಕಲುಷಿತ ನೀರಿನಿಂದ ದುರ್ವಾಸನೆ ಬೀರುತ್ತಿದ್ದು, ಜೀವ ಸಂಕುಲಕ್ಕೆ ಮಾರಕವಾಗಿ ಪರಿಣಮಿಸುವ ಸಾಧ್ಯತೆ ಇದೆ.
ನಗರದ ಹೊರವಲಯದಲ್ಲಿರುವ ಹೆಬ್ಬಾಳು ಕೆರೆ ೫೧ ಎಕರೆ ವಿಸ್ತೀರ್ಣ ಹೊಂದಿದ್ದು, ೩೬ ಎಕರೆ ಪ್ರದೇಶ ಜಲಾವೃತದಿಂದ ಕೂಡಿದೆ. ವಾಯುವಿಹಾರಿಗಳ ತಾಣವಾಗಿ, ಜೀವಸಂಕುಲಕ್ಕೆ ಬದುಕಾಗಿದ್ದ ಕೆರೆಯು ಇದೀಗ ತ್ಯಾಜ್ಯಗಳ ಒಡಲಾಗಿರುವುದು ವಿಪರ್ಯಾಸ.
ಕೆರೆ ಅಭಿವೃದ್ಧಿ ಕಾರ್ಯ: ೨೦೧೬ರಲ್ಲಿ ಇನೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾಮೂರ್ತಿ ಅವರು ೯೮ ಕೋಟಿ ರೂ.ಗಳ ವೆಚ್ಚದಲ್ಲಿ ಕೆರೆಯನ್ನು ಪುನರುಜ್ಜೀವನಗೊಳಿಸಿದ್ದರು. ೫೧ ಎಕರೆ ವಿಸ್ತೀರ್ಣದಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಿ, ೮ ಎಕರೆ ಭೂಪ್ರದೇಶವನ್ನು ಹಸಿರು ವಲಯವನ್ನಾಗಿ ಮಾಡಲಾಗಿತ್ತು. ಕೆರೆ ಅಭಿವೃದ್ಧಿ ಪಡಿಸಲು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು, ಕೆರೆಗೆ ಹರಿದು ಬರುವ ತ್ಯಾಜ್ಯ ನೀರಿನ ಶುದ್ಧೀಕರಣಕ್ಕಾಗಿ ೨.೧ ಎಕರೆ ಜಾಗದಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗಿತ್ತು.
ಇದನ್ನು ಓದಿ: ದೀಪಾವಳಿ ಜಾತ್ರೆಯಲ್ಲಿ 2.16 ಕೋಟಿ ರೂ. ಸಂಗ್ರಹ
ಹೂಳೆತ್ತುವಿಕೆ ಮತ್ತು ಕೆರೆ ಏರಿ ನಿರ್ಮಾಣ, ಸುರಕ್ಷಣಾ ಬೇಲಿ, ಕೆರೆ ಸುತ್ತಲೂ ಕಾಂಪೌಂಡ್ ವ್ಯವಸ್ಥೆ, ಹಸಿರು ವಲಯದಲ್ಲಿ ೮೦೦ ಸಾವಿರ ಗಿಡಗಳ ನೆಡುವಿಕೆ, ರಾಜಕಾಲುವೆ ಹಾಗೂ ಕೆರೆ ಕೋಡಿಗೆ ಅಡ್ಡ ಸೇತುವೆ, ಪ್ಲಾಸ್ಟಿಕ್ ತ್ಯಾಜ್ಯ ನೀರಿನಲ್ಲಿ ಸೇರದಂತೆ ತಂತಿ ಬೇಲಿಗಳು, ಉದ್ಯಾನ ನಿರ್ಮಾಣ, ವಾಯುವಿಹಾರಕ್ಕೆ ಪಾದಚಾರಿ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಜರುಗಿದ್ದವು. ಕೊಳೆತ ನೀರಿನ ದುರ್ವಾಸನೆ: ೩೬ ಎಕರೆ ವ್ಯಾಪ್ತಿಯಲ್ಲಿ ಕೆರೆಯ ನೀರು ಆವೃತವಾಗಿದ್ದು, ಕೆರೆಗೆ ನೀರು ಹರಿದು ಬರಲು ಎರಡು ರಾಜ ಕಾಲುವೆಗಳಿದ್ದು, ಅದರಲ್ಲಿ ನಿತ್ಯವೂ ಹೆಬ್ಬಾಳು, ವಿಜಯನಗರ, ಮಂಚೇಗೌಡನ ಕೊಪ್ಪಲು ಹಾಗೂ ವಿವಿಧ ಬಡಾವಣೆಗಳಿಂದ ಕೊಳಚೆ ನೀರು ಹರಿದು ಬರುತ್ತಿದೆ. ಕಲುಷಿತ ನೀರನ್ನು ಸಂಸ್ಕರಿಸಲು ೮ (ಎಂಎಲ್‌ಡಿ) ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೂ ಕೊಳಚೆ ನೀರಿನ ಹರಿವು, ಕೈಗಾರಿಕಾ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳು ನಿತ್ಯವು ಕೆರೆಗೆ ಹರಿದು ಬರುತ್ತಿದ್ದು, ನೀರಿನ ಸಂಸ್ಕರಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ತ್ಯಾಜ್ಯದಿಂದ ಕೆರೆಗೆ ಕಂಟಕ: ಪುನರುತ್ಥಾನದಿಂದ ಸುಧಾರಿಸಿದ ಹೆಬ್ಬಾಳು ಕೆರೆಯು ಮತ್ತೆ ಕಲುಷಿತಗೊಂಡು ಕೊಳೆತು ಗಾಢ ಹಸಿರು ಬಣ್ಣಕ್ಕೆ ತಿರುಗಿದೆ. ಕೆರೆಗೆ ನೀರಿನ ಪೂರೈಕೆಗೆಂದು ಸಂಪರ್ಕಿಸಲಾಗಿದ್ದ ಎರಡು ರಾಜ ಕಾಲುವೆಗಳೂ ಕೊಳಚೆ ಹಾಗೂ ತ್ಯಾಜ್ಯಗಳನ್ನು ಹೊತ್ತು ತರುವಂತಾಗಿದೆ. ಅದರಿಂದ ಕೆರೆಯ ತುಂಬೆಲ್ಲ ಕೊಳಚೆ ನೀರಿನೊಂದಿಗೆ ಪ್ಲಾಸ್ಟಿಕ್ ವಸ್ತುಗಳು, ಬಾಟಲಿಗಳು, ಹರಿದ ಬಟ್ಟೆ, ಒಳಚರಂಡಿ ನೀರು ಇನ್ನಿತರ ಘನ ತ್ಯಾಜ್ಯಗಳು ಸಂಗ್ರಹಗೊಂಡಿವೆ. ಅವುಗಳನ್ನು ತಡೆಗಟ್ಟಲು ತಂತಿ ಬೇಲಿಗಳನ್ನು ನಿರ್ಮಿಸಲಾಗಿದ್ದು, ಅದರ ಮೇಲೂ ಹರಿದು ಕೆರೆಯನ್ನು ಸೇರುತ್ತಿವೆ. ಇದರಿಂದ ಕೆರೆಯ ಒಡಲು ಪ್ಲಾಸ್ಟಿಕ್ಮಯವಾಗಿದೆ. ಅಲ್ಲದೇ ಕೆರೆಯ ತುಂಬೆಲ್ಲ ಹಾವಸೆ ಹಬ್ಬಿದೆ.
ಕೆರೆಯನ್ನು ಅಭಿವೃದ್ಧಿಪಡಿಸಿದ ಸಂದರ್ಭದಲ್ಲಿ ಕೆಆರ್‌ಎಸ್ ಅಣೆಕಟ್ಟಿನಿಂದ ಮೀನಿನ ಮರಿಗಳನ್ನು ತಂದು ಈ ಕೆರೆಯಲ್ಲಿ ಬಿಡಲಾಗಿತ್ತು. ಆದರೆ, ಕಲುಷಿತ ನೀರಿನಿಂದ ಎಲ್ಲ ಮೀನುಗಳೂ ಸಾವಿಗೀಡಾಗಿವೆ. ಪ್ರತಿನಿತ್ಯವೂ ನೀರಿನ ಶುದ್ಧೀಕರಣ ಕಾರ್ಯ ನಡೆಯುತ್ತಿದ್ದು, ಘಟಕದ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೊಳಚೆ ನೀರು ಕೆರೆ ಒಡಲನ್ನು ಸೇರುತ್ತಿದೆ. ಕೆರೆಯ ನಿರ್ವಹಣೆಗೆ ಈಗಲೂ ಇನೋಸಿಸ್ ಪ್ರತಿಷ್ಠಾನ ಪ್ರತಿ ತಿಂಗಳು ೩೦ ಲಕ್ಷ ರೂ.ಗೂ ಹೆಚ್ಚು ಹಣ ವ್ಯಯ ಮಾಡುತ್ತಿದೆ. ಕೊಳಚೆ ನೀರಿನ ಹರಿವು ನಿಂತರೆ ಮಾತ್ರ ಕೆರೆಯನ್ನು ಸ್ವಚ್ಛವಾಗಿಡಲು ಸಾಧ್ಯ ಎಂದು ಪ್ರತಿಷ್ಠಾನದ ಕೆರೆಯ ನಿರ್ವಹಣಾ ಸಿಬ್ಬಂದಿ ಅನಂತರಾಜ್ ಗೌಡ ತಿಳಿಸಿದರು.
” ಹೂಟಗಳ್ಳಿ ನಗರಸಭೆಯಿಂದ ತಿಂಗಳಿಗೊಮ್ಮೆ ಕೆರೆಯಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರ ತೆಗೆಯಲಾಗುತ್ತದೆ. ಉಳಿದ ತ್ಯಾಜ್ಯವು ಕೆರೆಯ ದಡಗಳಲ್ಲಿ ತೇಲಿನಿಂತು ಗುಡ್ಡೆಯಾಗಿದೆ. ಕೊಳಚೆ ನೀರನ್ನು ಕೆರೆಗೆ ಸೇರದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜನಪ್ರತಿನಿಧಿಗಳಿಗೆ, ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.”
–ಕೆ.ಎಂ.ಅನುಚೇತನ್
ಹೊಸದಿಲ್ಲಿ : ಹಿರಿಯ ನಟ ಧರ್ಮೇಂದ್ರ, ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ, ಬಂಗಾಳಿ…
ಹೊಸದಿಲ್ಲಿ : ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, ‘ಆಂತರಿಕ ವ್ಯವಸ್ಥೆ’ಯಿಂದಲೇ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್…
ಬೆಂಗಳೂರು : ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ…
ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…
ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…
ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್‌ನಲ್ಲಿ ಖತರ್ನಾಕ್ ರಾಬರಿ ಗ್ಯಾಂಗ್ ಒಂದಲ್ಲ, ಎರಡಲ್ಲ ಬರೋಬರಿ 400 ಕೋಟಿ…