ಎಚ್.ಎಸ್.ದಿನೇಶ್ ಕುಮಾರ್
ಮೈಸೂರು ನಗರಾದ್ಯಂತ ಗುಂಡಿ ಬಿದ್ದ ರಸ್ತೆಗಳು
ಗುಂಡಿಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರ ಪರದಾಟ
ಬಹಳಷ್ಟು ರಸ್ತೆಗಳಲ್ಲಿ ಅರೆಬರೆ ಕಾಮಗಾರಿ
ಜನರ ಸಂಕಷ್ಟ ಕಂಡೂ ಮೌನವಾಗಿರುವ ನಗರಪಾಲಿಕೆ
ಮೈಸೂರು: ಒಂದೆಡೆ ಜನರು ಮಳೆಯಿಂದ ಹೈರಾಣಾದರೆ, ಮತ್ತೊಂದೆಡೆ ನಗರದ ಪ್ರಮುಖ ರಸ್ತೆಗಳಲ್ಲಿ ಕಾಮಗಾರಿಗಳು ಪೂರ್ಣಗೊಳ್ಳದೆ ಜನರು ರಸ್ತೆಯಲ್ಲಿ ನಿಂತ ನೀರಿನ ನಡುವೆಯೇ ಸರ್ಕಸ್ ಮಾಡುತ್ತಾ ಸಂಚರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ವಾಹನ ಸವಾರರ ಪರದಾಟ ಹೇಳತೀರದಾಗಿದೆ.
ಬೇಸಿಗೆಯ ವೇಳೆ ನಡೆದ ಅರೆಬರೆ ಕಾಮಗಾರಿಯಿಂದಾಗಿ ದೂಳನ್ನು ಸೇವಿಸುವ ಪರಿಸ್ಥಿತಿ ಉದ್ಭವವಾಗಿತ್ತು. ಆದರೀಗ ಜೋರು ಮಳೆಗೆ ಕಳಪೆ ಕಾಮಗಾರಿಯ ಪರಿಣಾಮವಾಗಿ ಕೆಲವೆಡೆ ರಸ್ತೆಯೇ ಕುಸಿದಿದ್ದು, ಹಳ್ಳಕೊಳ್ಳಗಳಲ್ಲಿ ಮಳೆ ನೀರು ತುಂಬಿದೆ.
ನಗರದ ಕೆಲ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಕಳೆದ ಒಂದು ವಾರದಿಂದ ಹೆಚ್ಚು ಮಳೆಯಾಗುತ್ತಿದೆ. ಹಾಗಾಗಿ ನಗರದ ಅನೇಕ ರಸ್ತೆಗಳು, ಅದರಲ್ಲಿಯೂ ಹೊರವಲ ಯದ ಬಡಾವಣೆಗಳಲ್ಲಿನ ರಸ್ತೆಗಳ ಡಾಂಬರು ಕಿತ್ತುಹೋಗಿದೆ. ರಸ್ತೆಗಳ ತುಂಬ ಹಳ್ಳಕೊಳ್ಳಗಳು ಕಾಣಿಸಿಕೊಂಡಿವೆ. ಈ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಬೇಕಾದ ನಗರಪಾಲಿಕೆ ಮೌನ ವಹಿಸಿರುವುದೇ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಯಾವುದೇ ಕಾಮಗಾರಿಯಾದರೂ ಆರಂಭವಾಗುತ್ತಿದ್ದಂತೆ, ಅದನ್ನು ಪೂರ್ಣಗೊಳಿಸುವ ಕಾಲಮಿತಿಯನ್ನು ಅಧಿಕಾರಿಗಳು ನಿಗದಿಪಡಿಸುವುದು ಸಾಮಾನ್ಯ ಆದರೆ ಕಾಮಗಾರಿ ಬಹುತೇಕ ಕಡೆ ಪೂರ್ಣಗೊಳ್ಳುವುದು ವಿಳಂಬವಾಗಿರುವುದರಿಂದ ಅದರ ದುಷ್ಪರಿಣಾಮವನ್ನು ಸಾರ್ವಜನಿಕರು ಎದುರಿ ಸುವಂತಾಗಿದೆ.
ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಗ್ರಹಾರದ ರಾಮಾನುಜ ರಸ್ತೆ, ತ್ಯಾಗರಾಜ ರಸ್ತೆ, ಕುವೆಂಪುನಗರ, ಚಾಮರಾಜ ಜೋಡಿ ರಸ್ತೆ, ಜನತಾನಗರ, ತೊಣಚಿಕೊಪ್ಪಲು, ಚಾಮರಾಜ ಕ್ಷೇತ್ರದ ಪಡುವಾರಹಳ್ಳಿ, ಮಂಚೇಗೌಡನ ಕೊಪ್ಪಲು, ಮಹದೇಶ್ವರ ಬಡಾವಣೆ, ನರಸಿಂಹರಾಜ ಕ್ಷೇತ್ರದ ಗಾಂಧಿನಗರ, ಉದಯಗಿರಿ, ಎನ್.ಆರ್.ಮೊಹಲ್ಲಾ, ರಾಜೇಂದ್ರನಗರ, ಕೆಸರೆ, ಕಾರಾಗೃಹ ಮುಂಭಾಗದ ರಸ್ತೆ ಸೇರಿದಂತೆ ಹಲವಾರು ರಸ್ತೆಗಳಲ್ಲಿ ಕೆಲ ತಿಂಗಳುಗಳ ಹಿಂದೆಯೇ ಕಾಮಗಾರಿ ಆರಂಭಿಸಲಾಗಿದೆ.
ಒಳಚರಂಡಿ, ಮೋರಿ ನಿರ್ಮಾಣ, ರಸ್ತೆ ಅಭಿವೃದ್ಧಿ ಇನ್ನಿತರ ಕಾಮಗಾರಿಗಳಿಗಾಗಿ ಹಲವು ರಸ್ತೆಗಳನ್ನು ಅಗೆಯಲಾಗಿದೆ. ಆದರೆ, ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಈ ಸಂಬಂಧ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಡಾಂಬರು ಹಾಕಬೇಕಾದರೆ ಅಗೆದಿರುವ ರಸ್ತೆಯ ಮಣ್ಣು ಆಳಕ್ಕಿಳಿಯಬೇಕು ಎಂದು ಸಬೂಬು ಹೇಳುತ್ತಿದ್ದರು. ಆದರೀಗ ಒಂದು ವಾರದಿಂದ ಬೀಳುತ್ತಿರುವ ಮಳೆಗೆ ರಸ್ತೆಯ ಕೆಲವೆಡೆ ಕಾಮಗಾರಿ ನಡೆಸಿದ ಸ್ಥಳದಲ್ಲಿ ರಸ್ತೆಯೇ ಕುಸಿದಿದೆ.
ಮಳೆಯ ಕಾರಣದಿಂದ ರಾತ್ರಿ ವೇಳೆ ಪ್ರತಿದಿನ ಒಂದಲ್ಲ ಒಂದು ರಸ್ತೆಯಲ್ಲಿ ವಾಹನಗಳು ಹಳ್ಳಕ್ಕಿಳಿಯುವ ಮೂಲಕ ಸವಾರರು ಕೆಳಗೆ ಬಿದ್ದು ಗಾಯ ಗೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಅರೆಬರೆಯಾ ಗಿರುವ ಚರಂಡಿ, ಮೋರಿ ಹಾಗೂ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ. ಅಲ್ಲದೆ, ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕಾಗಿದೆ. ತಪ್ಪಿದಲ್ಲಿ ರಸ್ತೆ ಗುಂಡಿಗಳಿಂಯಾವುದೇ ಅನಾಹುತ ಸಂಭವಿಸಿದಲ್ಲಿ ಅದಕ್ಕೆ ನಗರ ಪಾಲಿಕೆಯೇ ಸಂಪೂರ್ಣ ಹೊಣೆಯಾಗಬೇಕಾಗುತ್ತದೆ ಎಂಬುದು ಸಾರ್ವಜನಿಕರ ಎಚ್ಚರಿಕೆಯಾಗಿದೆ.
ನಗರಪಾಲಿಕೆ ಸದಸ್ಯರಿಲ್ಲ, ಅಧಿಕಾರಿಗಳದ್ದೇ ದರ್ಬಾರ್:
ಮೈಸೂರು ನಗರದಾದ್ಯಂತ ಹಲವಾರು ರಸ್ತೆಗಳು ಹದಗೆಟ್ಟಿವೆ. ಪ್ರಮುಖ ರಸ್ತೆಗಳು ಗುಂಡಿಬಿದ್ದಿವೆ. ಆದರೆ, ಜನರು ಮಾತ್ರ ಯಾರನ್ನು ಪ್ರಶ್ನಿಸುವುದು ಎಂದು ತಿಳಿಯದೆ ಗೊಂದಲದಲ್ಲಿದ್ದಾರೆ. ಕಾರಣ ನಗರಪಾಲಿಕೆಯಲ್ಲಿ ಚುನಾಯಿತ ಸದಸ್ಯರಿಲ್ಲ. ಜೊತೆಗೆ ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿಗಳು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅಪೂರ್ಣಗೊಂಡ ಕಾಮಗಾರಿಗಳ ಬಗ್ಗೆ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ವಿಚಾರಿಸಲು ನಗರಪಾಲಿಕೆ ಅಽಕ್ಷಕ ಅಭಿಯಂತರರಾದ ಸಿಂಧು ಅವರನ್ನು ಸಂಪರ್ಕಿಸಲು -ನ್ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ
ಸಮಸ್ಯೆಗಳಿದ್ದಲ್ಲಿ ತಿಳಿಸಿ:
ಮಳೆಯಿಂದ ನಿಮ್ಮ ಬಡಾವಣೆಗಳಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಹಾಗೂ ಅನಾಹುತಗಳ ಕುರಿತು ಚಿತ್ರ ಸಹಿತ ‘ಆಂದೋಲನ’ ಪತ್ರಿಕೆಗೆ ಕಳುಹಿಸಿ ಆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ೯೦೭೧೭೭೭೦೭೧
” ಮಳೆಗಾಲ ಆರಂಭವಾಗಿದ್ದು, ಅನೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಮಳೆ ನೀರು ನಿಂತು ಬೃಹತ್ ಗುಂಡಿಗಳಾಗಿ ರೂಪುಗೊಂಡಿವೆ. ದೂರದಿಂದ ನೋಡಿದರೆ ರಸ್ತೆ ಚೆನ್ನಾಗಿದೆ ಅನಿಸುತ್ತದೆ. ಆದರೆ, ದಿಢೀರ್ ಗುಂಡಿ ಪ್ರತ್ಯಕ್ಷವಾಗಿ ಬಿಡುತ್ತದೆ. ಇವುಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸ್ವಲ್ಪ ಯಾಮಾರಿದರೂ ಅಪಘಾತ ಸಂಭವಿಸುತ್ತದೆ.”
ಮಂಜು, ಎನ್.ಆರ್.ಮೊಹಲ್ಲಾ
” ಚಾಮರಾಜ ಜೋಡಿ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಲ್ಲಿ ಒಳಚರಂಡಿ ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿದೆ. ಇದರಿಂದ ರಸ್ತೆಯಲ್ಲಿ ವಾಹನಗಳು ಅನಿವಾರ್ಯವಾಗಿ ಏಕಮುಖವಾಗಿ ಸಂಚರಿಸುವಂತಾಗಿದೆ. ರಾತ್ರಿ ವೇಳೆ ಅಲ್ಲಿ ಸಾಕಷ್ಟು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇಂತಹ ಪ್ರಮುಖ ರಸ್ತೆ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಬೇಕು.”
ಹರೀಶ್‌ಕುಮಾರ್, ಅಗ್ರಹಾರ, ಮೈಸೂರು
” ಐಜಿಡಿ ಸಮಸ್ಯೆ ಬಗ್ಗೆ ದೂರುಗಳು ಬಂದಿವೆ. ಮಳೆ ಬೀಳುತ್ತಿರುವುದರಿಂದ ಕಾಮಗಾರಿ ನಡೆಸಲು ಸ್ವಲ್ಪ ಸಮಸ್ಯೆಯಾಗಿದೆ. ರಸ್ತೆ, ಯುಜಿಡಿ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಲು ಕ್ರಮವಹಿಸಲಾಗು ವುದು. ಅಲ್ಲದೆ, ಅಪೂರ್ಣವಾಗಿರುವ ಕಾಮಗಾರಿಯನ್ನು ಪೂರ್ಣ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.”
ಶೇಖ್ ತನ್ವೀರ್ ಆಸಿಫ್, ಆಯುಕ್ತರು, ನಗರಪಾಲಿಕೆ
” ಬಹುತೇಕ ದ್ವಿಚಕ್ರ ವಾಹನಗಳು, ಬಸ್ಸುಗಳು, ಲಾರಿಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಈ ರಸ್ತೆಗೆ ಹೊಂದಿಕೊಂಡಂತೆ ಶಾಲಾ ಕಾಲೇಜು, ಕಚೇರಿಗಳು, ಪ್ರಮುಖ ಮಳಿಗೆಗಳು, ಬಡಾವಣೆಗಳು ಇವೆ. ಯಾವಾಗಲೂ ವಾಹನ ದಟ್ಟಣೆ ಇರುತ್ತದೆ. ಇಂತಹ ಪ್ರಮುಖ ರಸ್ತೆಯಲ್ಲಿ ಭಾರಿ ಗಾತ್ರದ ಗುಂಡಿಗಳು ಬಿದ್ದಿದ್ದು, ವಾಹನ ಸವಾರರ ಪ್ರಾಣಕ್ಕೆ ಕಂಟಕವಾಗಿದೆ.”
ಪ್ರಶಾಂತ್, ಮೇಟಗಳ್ಳಿ, ಚಾಮರಾಜ ಕ್ಷೇತ್ರ
” ಮಳೆ ಬಂದರೆ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುತ್ತವೆ ಎಂಬ ಅರಿವಿದ್ದರೂ ನಗರಪಾಲಿಕೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ರಸ್ತೆ ಕಾಮಗಾರಿಗಳು ಅರೆಬರೆ ಆಗಿರುವುದರಿಂದ ಸಂಚಾರಕ್ಕೆ ಕಷ್ಟವಾಗುತ್ತಿದೆ. ಮಳೆಯಿಂದ ಯುಜಿಡಿ ಮಲಿನ ನೀರು ರಸ್ತೆಗೆ ಹರಿಯುತ್ತಿದ್ದು, ಗಬ್ಬು ನಾರುತ್ತಿದೆ.”
ಚಕ್ರವರ್ತಿ, ಮಂಚೇಗೌಡನ ಕೊಪ್ಪಲು, ಚಾಮರಾಜ ಕ್ಷೇತ್ರ.
” ನಮ್ಮ ಬಡಾವಣೆಯಲ್ಲಿ ಹಲವು ರಸ್ತೆಗಳು ಗುಂಡಿಗಳಾಗಿ ಮಾರ್ಪಟ್ಟಿವೆ. ಹಲವೆಡೆ ಯುಜಿಡಿ ನೀರು ರಸ್ತೆಗೆ ಹರಿಯುತ್ತಿದೆ. ಅದರಿಂದ ಸಾರ್ವಜನಿಕರು ಸಾಂಕ್ರಾಮಿಕ ರೋಗಗಳ ಹರಡುವ ಆತಂಕದಲ್ಲಿದ್ದಾರೆ. ನಗರಪಾಲಿಕೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ಅವರು ಸ್ಪಂದಿಸಿಲ್ಲ.”
ಎಮ್.ಕಿರಣ್ ಕುಮಾರ್, ಗಾಂಧಿನಗರ, ಎನ್ ಆರ್ ಕ್ಷೇತ್ರ.
” ಕುವೆಂಪುನಗರದಿಂದ ವಿವೇಕಾನಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹಳ್ಳಕೊಳ್ಳಗಳಿಂದ ಕೂಡಿದೆ. ಗುಂಡಿ ಮುಚ್ಚುವ ಕಾಮಗಾರಿ ನಡೆಸಿದ್ದರೂ, ಮತ್ತೆ ಹಳ್ಳ ಬಿದ್ದಿವೆ. ದಿನನಿತ್ಯ ಸಾವಿರಾರು ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸುವ ಈ ರಸ್ತೆ ದುರಸ್ತಿ ಏಕೆ ಆಗುತ್ತಿಲ್ಲ ಎಂಬುದೇ ಆಶ್ಚರ್ಯಕರ ಸಂಗತಿ.”
-ಗಿರೀಶ್, ಕುವೆಂಪುನಗರ, ಮೈಸೂರು
ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…
ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…
ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…
ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…
ಮೈಸೂರು : ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…