kabini
ಕೆ.ಬಿ.ರಮೇಶನಾಯಕ
ಮೈಸೂರು: ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರುಣಿಸಲು ಸಾಧ್ಯವಾಗದೆ ಇದ್ದ ಕೊರಗನ್ನು ನೀಗಿಸಲು ಮುಂದಾಗಿರುವ ರಾಜ್ಯ ಸರ್ಕಾರವು ಐದು ವರ್ಷಗಳ ಸಮಗ್ರ ಯೋಜನೆ ರೂಪಿಸಿದ್ದು, ರೈತರ ೩ ಲಕ್ಷ ಎಕರೆ ಪ್ರದೇಶಗಳಿಗೆ ನೀರು ಸಿಗುವಂತೆ ಮಾಡುವ ಕಾಮಗಾರಿ ಶೀಘ್ರ ಆರಂಭವಾಗಲಿದೆ.
ಕಬಿನಿ ಜಲಾಶಯದ ಎಡ ಮತ್ತು ಬಲದಂಡೆ ನಾಲೆಯ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದ ಪ್ರದೇಶಗಳಿಗೆ ನೀರು ತಲುಪುವಂತೆ ಮಾಡಲು ೧೨೧೬.೯೭ ಕೋಟಿ ರೂ. ಮೊತ್ತದ ಯೋಜನೆಗೆ ಶೀಘ್ರ ಟೆಂಡರ್ ಪ್ರಕ್ರಿಯೆ ಶುರುವಾಗಲಿದ್ದು, ಆಗಸ್ಟ್ ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗುವ ನಿರೀಕ್ಷೆ ಹೊಂದಲಾಗಿದೆ.
ವರುಣ ನಾಲೆಯನ್ನು ತಂದು ಕೊಟ್ಟು ಮೈಸೂರು ತಾಲ್ಲೂಕಿನ ಸಾವಿರಾರು ಎಕರೆ ಪ್ರದೇಶಗಳಿಗೆ ನೀರು ಒದಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಕಬಿನಿ ಭಾಗದ ರೈತರ ಹಲವು ವರ್ಷಗಳ ಬೇಡಿಕೆ ಮತ್ತು ತಮ್ಮ ಜಮೀನಿಗೆ ನೀರಿಲ್ಲ ಎನ್ನುವ ಕೊರಗನ್ನು ದೂರ ಮಾಡಿದ್ದಾರೆ.
ಕಬಿನಿ ಅಣೆಕಟ್ಟಿಗೆ ೫೦ ವರ್ಷ: ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಸಮೀಪ ಕಪಿಲಾ ನದಿಗೆ ಅಣೆಕಟ್ಟನ್ನು ೧೯೭೪ರಲ್ಲಿ ನಿರ್ಮಿಸಲಾಗಿದ್ದು, ಡ್ಯಾಂ ಕಟ್ಟುವಾಗ ೩.೨ ಲಕ್ಷ ಎಕರೆ ಪ್ರದೇಶಗಳಿಗೆ ನೀರು ಒದಗಿಸುವಂತೆ ಅಚ್ಚುಕಟ್ಟು ನಿರ್ಮಿಸಲಾಗಿದೆ. ಈ ಅಣೆಕಟ್ಟೆಯಿಂದ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ವನ್ನು ಒದಗಿಸುವ ಜತೆಗೆ, ಬೆಂಗಳೂರು, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಮೀಸಲಿಡಲಾಗಿದೆ. ಕಬನಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಗಳಿಗೆ ೩.೪ ಲಕ್ಷ ಎಕರೆ ಪ್ರದೇಶಗಳಿಗೆ ನೀರು ಹರಿಸಬೇಕಿತ್ತಾದರೂ ಈತನಕ ೨.೧೬ ಲಕ್ಷ ಎಕರೆಗೆ ಮಾತ್ರ ನೀರು ಕೊಡಲಾಗುತ್ತಿದೆ. ೬೫ ಎಕರೆ ಪ್ರದೇಶಗಳಿಗೆ ನೀರು ಕೊಟ್ಟಿಲ್ಲದಿದ್ದರೆ, ೨೫ ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಕೈಗಾರಿಕಾರಣ, ನಗರೀಕರಣ ಹಾಗೂಬೇರೆ ಬೇರೆ ಕಾರಣಗಳಿಂದ ನೀರು ಹರಿಸುತ್ತಿಲ್ಲ. ಹೀಗಾಗಿ, ಪ್ರತಿ ವರ್ಷ ನೀರು ಹರಿಸಿದರೂ ಕೊನೆಯ ಭಾಗಕ್ಕೆ ನೀರು ತಲುಪದ ಕಾರಣ ರೈತರು ಸಮಸ್ಯೆ ಎದುರಿಸುತ್ತಿರುವುದನ್ನು ಮನಗಂಡು ರಾಜ್ಯ ಸರ್ಕಾರ ಐದು ವರ್ಷಗಳ ಸಮಗ್ರ ಯೋಜನೆಯಡಿ ನೀರು ದೊರೆಯುವಂತೆ ಮಾಡಲು ಪ್ಲಾನ್ ಮಾಡಿದೆ. ಕಾವೇರಿ ನ್ಯಾಯಾಧಿಕರಣದ ತೀರ್ಪಿನಂತೆ ಕರ್ನಾಟಕಕ್ಕೆ ಲಭ್ಯವಾಗಿರುವ ನೀರನ್ನು ಬಳಸಿಕೊಳ್ಳಬೇಕಿದ್ದು, ಇದುವರೆಗೂ ನಾಲೆಗಳ ಆಧುನೀಕರಣ, ಪಿಕಪ್ ನಾಲೆಗಳ ಆಧುನೀಕರಣ ಮಾಡದೆ ಹಾಗೂ ನಾಲೆಗಳಲ್ಲಿ ಹೂಳು ತೆಗೆಸದೆ ಇರುವುದರಿಂದ ಮೊದಲ ಹಂತದಲ್ಲಿ ೧೨೧೬.೯೭ ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ಕೊಟ್ಟಿದೆ. ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಒಪ್ಪಿಗೆ ದೊರೆತಿರುವ ಕಾರಣ ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಬಳಿಕ ಕಾಮಗಾರಿ ಶುರು ಮಾಡಲು ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಕೊಳ್ಳೇಗಾಲ, ಹನೂರು ಭಾಗಕ್ಕೆ ನೀರು: ಕೊಳ್ಳೇಗಾಲ, ಹನೂರು ಭಾಗದ ಪ್ರದೇಶಗಳಿಗೆ ನೀರು ತಲುಪಿಸಲು ರೂಪಿಸಿರುವ ಯೋಜನೆಗೆ ಒಪ್ಪಿಗೆ ದೊರೆತಿದೆ. ಕೊಳ್ಳೇಗಾಲ ತಾಲ್ಲೂಕಿನ ಗುಂಡಾಲ್ ಜಲಾಶಯ ಯೋಜನೆ, ಹನೂರು ತಾಲ್ಲೂಕಿನ ಉಡುತೊರೆಹಳ್ಳ ಯೋಜನೆ, ಗುಂಡಾಲ್ ನದಿಗೆ ಅಡ್ಡಲಾಗಿ ದುರ್ಗಿ ನದಿಗೆ ನಿರ್ಮಿಸಿರುವ ಅಣೆಕಟ್ಟೆಯಿಂದ ಎಂಟು ಕೆರೆಗಳಿಗೆ ನೀರು ಒದಗಿಸುವುದು ಸೇರಿದೆ. ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣ ವ್ಯಾಪ್ತಿಯ ಚಿಕ್ಕನಂದಿ ಏತ ನೀರಾವರಿ ಯೋಜನೆಯಿಂದ ಡಿ.ದೇವರಾಜ ಅರಸು ನಾಲೆಯ ಕೊನೆಯ ಭಾಗದ ಕೆರೆಗಳನ್ನು ತುಂಬಿಸಲು ಹೆಚ್ಚುವರಿ ನೀರನ್ನು ಹರಿವನ್ನು ಸರಿದೂಗಿಸಲು ಡಿ.ಡಿ. ಅರಸು ನಾಲೆಯ ಸರಪಳಿ ೭೪ ಕಿ.ಮೀ.ನಿಂದ ಮುಂದಕ್ಕೆ ರೀಮಾಡಲಿಂಗ್ ಮಾಡುವ ಕಾಮಗಾರಿಯು ನಡೆಯಲಿದೆ.
ಕಬಿನಿ ಅಣೆಕಟ್ಟು ದುರಸ್ತಿ ಭಾಗ್ಯ: ಕಬಿನಿ ಜಲಾಶಯ ನಿರ್ಮಾಣಗೊಂಡು ೫೦ ವರ್ಷಗಳು ಕಳೆದಿದ್ದು, ನೀರಿನ ರಭಸಕ್ಕೆ ಜಲಾಶಯದ ಕಲ್ಲಿನ ಕಟ್ಟಡದ ಗೋಡೆಗಳ ಜಾಯಿಂಟ್‌ಗಳು ಹಾನಿಗೊಳಗಾಗಿವೆ. ಹಲವು ಭಾಗಗಳಲ್ಲಿ ಕಲ್ಲು ಕಬ್ಬಿಣದ ಜಾಯಿಂಟ್ ಹಾಳಾಗಿರುವುದು ಮತ್ತು ಕಾಂಕ್ರೀಟ್ ಭಾಗಗಳಲ್ಲಿ ಬಿರುಕು ಬಿಟ್ಟಿರುವುದರಿಂದ ೩೨.೨೫ ಕೋಟಿ ವೆಚ್ಚದಲ್ಲಿ ದುರಸ್ತಿ ಕಾರ್ಯ ನಡೆಯಲಿದೆ.
” ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳ ಕೊನೆಯ ಭಾಗಕ್ಕೆ ನೀರು ಒದಗಿಸುವುದು ನಮ್ಮ ಕರ್ತವ್ಯ. ನಾಲೆಗಳ ಆಧುನೀಕರಣ, ಪಿಕಪ್ ನಾಳೆಗಳ ಆಧುನೀಕರಣ ಜತೆಗೆ ನಾಲೆಗಳ ಹೂಳು ತೆಗೆಸುವುದಕ್ಕೆ ಪ್ಲಾನ್ ಮಾಡಲಾಗಿದೆ. ೩ ಲಕ್ಷ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸಲು ನಿಗದಿಯಾಗಿದ್ದರೂ ನಾವು ಕೊಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಮೊದಲ ಹಂತದ ಯೋಜನೆಯಡಿ ಕಾಮಗಾರಿ ಶುರು ಮಾಡಲಾಗುತ್ತದೆ. ಇದರಿಂದಾಗಿ ಕೊನೆಯ ಭಾಗಕ್ಕೂ ನೀರು ತಲುಪಿಸಬಹುದು.”
-ಕೆ.ಮಹೇಶ್, ಅಧೀಕ್ಷಕ ಅಭಿಯಂತರ. ಕಬಿನಿ ಮತ್ತು ವರುಣ ನಾಲಾ ವೃತ್ತ.
ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…
ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…
ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…
ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…
ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…