ಕೆ.ಎಸ್. ಚಂದ್ರಶೇಖರ ಮೂರ್ತಿ
ಮೈಸೂರು: ಸ್ವಾತಂತ್ರ್ಯವೆಂದರೆ ಕೇವಲ ಧ್ವಜಾರೋಹಣ, ದೇಶಭಕ್ತಿ ಗೀತೆಗಳು ಮತ್ತು ಸಿಹಿ ಹಂಚಿಕೆಯ ಸಂಭ್ರಮವಲ್ಲ. ಅದು ಸ್ವಾತಂತ್ರ್ಯದ ಅರ್ಥವನ್ನು ಹೊಸ ತಲೆಮಾರು ಹೇಗೆ ನೋಡುತ್ತಿದೆ ಎಂಬುದನ್ನು ಅರಿಯುವ ಸಂದರ್ಭವೂ ಹೌದು. ೮೦ನೇ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿ ಜೆನ್-ಝೀ ಯುವಜನರೊಂದಿಗೆ ನಡೆಸಿದ ಮಾತುಕತೆಯಲ್ಲಿ ದೇಶದ ಬಗ್ಗೆ ಹೆಮ್ಮೆ, ಭರವಸೆ ಹಾಗೂ ಕೆಲವು ವಿಚಾರಗಳ ಬಗ್ಗೆ ಅಸಮಾಧಾನ ಎರಡೂ ಮುಖಗಳು ಕಾಣಿಸಿಕೊಂಡಿವೆ.
ಬಹುತೇಕ ಯುವಜನರಲ್ಲಿ ದೇಶಾಭಿಮಾನ ಗಟ್ಟಿಯಾಗಿದೆ. ಭಾರತದ ಸಾಧನೆಗಳು, ವಿಜ್ಞಾನ-ತಂತ್ರಜ್ಞಾನ ಪ್ರಗತಿ, ಕ್ರೀಡೆ, ಬಾಹ್ಯಾಕಾಶ ಕ್ಷೇತ್ರದ ಯಶಸ್ಸು ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸುತ್ತಾರೆ. ದೇಶ ಇನ್ನಷ್ಟು ಬಲಿಷ್ಠವಾಗಬೇಕು, ಯುವಜನರಿಗೆ ಉತ್ತಮ ಅವಕಾಶಗಳು ಸಿಗಬೇಕು, ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಬೇಕು, ಸಮಾನತೆ ಸಿಗಬೇಕು, ಅರ್ಹರಿಗೆ ಸ್ಥಾನ ಲಭಿಸಬೇಕು ಎಂಬ ಆಶಯವೂ ಅವರ ಮಾತುಗಳಲ್ಲಿ ಸ್ಪಷ್ಟವಾಗಿದೆ.
ಆದರೆ ಇದೇ ಯುವಜನರು ಕೆಲವು ಪ್ರಶ್ನೆಗಳನ್ನೂ ಮುಂದಿಡುತ್ತಾರೆ. ಶಿಕ್ಷಣ ಮತ್ತು ಉದ್ಯೋಗಾವಕಾಶಗಳು, ನಿರುದ್ಯೋಗ, ಬೆಲೆ ಏರಿಕೆ, ದೇಶದ ಆರ್ಥಿಕತೆ, ಪರಿಸರ ಸಂರಕ್ಷಣೆ, ಸಾಮಾಜಿಕ ಅಸಮಾನತೆ, ರಾಜಕೀಯದಲ್ಲಿ ಪಾರದರ್ಶಕತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ದೇಶವನ್ನು ಪ್ರೀತಿಸುವುದೆಂದರೆ ದೇಶದ ಪ್ರತಿಯೊಂದು ವಿಚಾರವನ್ನೂ ಪ್ರಶ್ನಿಸದೆ ಒಪ್ಪಿ ಕೊಳ್ಳುವುದಲ್ಲ; ತಪ್ಪು ಕಂಡಾಗ ಅದನ್ನು ಪ್ರಶ್ನಿಸಿ, ಉತ್ತಮ ಬದಲಾವಣೆಯನ್ನು ಬಯಸುವುದೂ ದೇಶಾಭಿಮಾನವೇ” ಎಂಬ ಮನೋಭಾವನೆ ಯುವಜ ನರಲ್ಲಿ ಮೂಡಿರುವುದು ಗಮನಾರ್ಹ ಸಂಗತಿ.
ಇಂದಿನ ಜೆನ್ ಝೀ ಯುವಜನರು ಕೇವಲ ಪ್ರೇಕ್ಷಕರಾಗಿ ಉಳಿಯಲು ಬಯಸುವುದಿಲ್ಲ. ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ತಮ್ಮ ಧ್ವನಿಗೂ ಸ್ಥಾನ ಸಿಗಬೇಕೆಂದು ಅವರು ಬಯಸುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಪ್ರಾಯವನ್ನು ವೇಗವಾಗಿ ವ್ಯಕ್ತಪಡಿಸುವ ಈ ತಲೆಮಾರು, ದೇಶದ ಬೆಳವಣಿಗೆಯನ್ನು ತಮ್ಮ ವೈಯಕ್ತಿಕ ಬದುಕಿನೊಂದಿಗೆ ನೇರವಾಗಿ ಸಂಪರ್ಕಿಸಿಕೊಂಡು ನೋಡುತ್ತಿದೆ. ಸ್ವಾತಂತ್ರ್ಯದಿನಾಚರಣೆಯ ಬಗ್ಗೆ ‘ಆಂದೋಲನ ದಿನಪತ್ರಿಕೆ’ ನಡೆಸಿದ ಮಾತುಕತೆಯಲ್ಲಿ ಜೆನ್-ಝೀ ಯುವ ಸಮೂಹದ ಅನಿಸಿಕೆ ಇಲ್ಲಿದೆ…
ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ: ಕೆಲವು ವಿಷಯಗಳಲ್ಲಿ ಇನ್ನೂ ನಮಗೆ ಸಂಪೂರ್ಣ ಸ್ವಾತಂತ್ರ್ಯ ಸಿಗುತ್ತಿಲ್ಲ ಅನಿಸುತ್ತದೆ. ಯಾವಾಗ ಮಧ್ಯರಾತ್ರಿ ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡುತ್ತಾರೋ ಅಂದು ಸ್ವಾತಂತ್ರ್ಯಲಭಿಸಿದಂತೆ ಎಂದು ಹೇಳುತ್ತಾರೆ. ಆದರೆ ಇಂದು ರಾತ್ರಿಯಲ್ಲ ಹಗಲಿನಲ್ಲೇ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಭಯಮುಕ್ತವಾಗಿ ಓಡಾಡುವ ವಾತಾವರಣ ಇಲ್ಲ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆ ಬರಬೇಕು. ನನ್ನ ದೇಶ ನನ್ನ ಹೆಮ್ಮೆ ಎಂಬ ದೇಶಾಭಿಮಾನ ನಮ್ಮಲ್ಲಿ ಸದಾ ಇರುತ್ತದೆ.
ದಿವ್ಯಾ, ಬಿಸಿಎ ವಿದ್ಯಾರ್ಥಿನಿ
ಶೈಕ್ಷಣಿಕ ಪ್ರಗತಿ ಕಾಣಬೇಕು: ಇವತ್ತು ಶಿಕ್ಷಣ ಪಡೆದು ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದ್ದೇವೆ ಅಂದರೆ ನಮಗೆ ಸ್ವಾತಂತ್ರ್ಯಸಿಕ್ಕಿದೆ, ದೇಶ ಬದಲಾವಣೆ ಕಂಡಿದೆ ಎಂದರ್ಥ. ಗ್ರಾಮೀಣ ಭಾಗದಲ್ಲಿ ಇನ್ನೂ ಮಹಿಳಾ ಸಬಲೀಕರಣ, ಶೈಕ್ಷಣಿಕ ಪ್ರಗತಿ ಕಾಣಬೇಕು.ನಮ್ಮ ದೇಶದ ಜಿಡಿಪಿ ದರ ಭವಿಷ್ಯದಲ್ಲಿ ಪ್ರಗತಿ ಕಾಣಬೇಕು. ದೇಶದಲ್ಲಿ ಬಹಳಷ್ಟು ಅಪರಾಧ ಪ್ರಕರಣಗಳಲ್ಲಿ ಸಾಕ್ಷಿಗಳ ಕೊರತೆಯಿಂದ ನ್ಯಾಯ ಸಿಕ್ಕಿಲ್ಲ. ಇಂತಹ ಅನ್ಯಾಯಕ್ಕೆ ಒಳಗಾದ ಜನರಿಗೆ ನ್ಯಾಯ ದೊರಕಿಸಿ ಕೊಡುವ ಮೂಲಕ ದೇಶಕ್ಕೆ ಮಾದರಿಯಾಗಿ ಕೊಡುಗೆ ನೀಡಬೇಕು.
ಮೋನಿಷಾ, ಮಡಿಕೇರಿ
ಮನೆಯಲ್ಲೇ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯಇಲ್ಲ: ನಮ್ಮ ದೇಶದಲ್ಲಿ ಭ್ರಷ್ಟಾಚಾರ, ಜಾತಿಪದ್ಧತಿ ಹೆಚ್ಚಾಗಿದೆ. ಹೆಣ್ಣು – ಗಂಡು ಭೇದಭಾವ, ಅಸಮಾನತೆ ಹೆಚ್ಚಾಗಿದೆ. ಮನೆಯಲ್ಲೇ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ. ಜತೆಗೆ ದೇಶದಲ್ಲಿ ನಿರೀಕ್ಷೆಯಂತೆ ಏನೂ ನಡೆಯುತ್ತಿಲ್ಲ. ಶಿಕ್ಷಣ ವ್ಯವಸ್ಥೆ, ಪರೀಕ್ಷೆಗಳಲ್ಲಿ ಪಾರದರ್ಶಕತೆ ಇಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮಗೆ ಇದ್ದ ನಂಬಿಕೆ ಹುಸಿಯಾಗಿದೆ. ನಾನು ವೈದ್ಯೆ ಆಗಬೇಕು ಎಂಬ ಕನಸು ಹೊಂದಿದ್ದೇನೆ. ಆದರೆ ನಮ್ಮ ದೇಶದಲ್ಲಿ ನ್ಯುರಾಲಜಿಸ್ಟ್ ಆಗಲು ಪೂರಕ ಸವಲತ್ತು ಸಿಗುತ್ತಿಲ್ಲ.
ವಿನಮ್ರತಾ, ಮೈಸೂರು
ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಿದೆಯೇ?: ದೇಶದಲ್ಲಿ ಇತ್ತೀಚೆಗೆ ಹೆಣ್ಣು ಮಕ್ಕಳಿಗೆ ರಕ್ಷಣೆ ಸಿಗುತ್ತಿಲ್ಲ. ಚಿಕ್ಕ ಮಕ್ಕಳ ಮೇಲೂ ಕೂಡ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನೆಲ್ಲಾ ನೋಡಿ ದಾಗ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಮಹಿಳೆಯರಿಗೆ ಗೌರವಯುತ ಬದುಕು ಸಿಗುವಂತಾಗಬೇಕು. ನಾನು ಸಿವಿಲ್ ಇಂಜಿನಿಯರ್ ಆಗುವ ಕನಸು ಕಂಡಿದ್ದೇನೆ. ಏಕೆಂದರೆ ನಮ್ಮ ದೇಶದಲ್ಲಿ ಉತ್ತಮ ರಸ್ತೆ ಇಲ್ಲದೆ ಅಪಘಾತಗಳು ನಡೆಯುತ್ತಲೇ ಇವೆ. ಇಂತಹ ಅವಘಡಗಳು ನಿಲ್ಲಬೇಕು.
ಹರ್ಷಿತಾ, ಕೊಡಗು
ಬ್ರಿಟಿಷರ ಕಪಿಮುಷ್ಟಿಯಿಂದ ಭಾರತ ಸ್ವತಂತ್ರ: ಸ್ವಾತಂತ್ರ್ಯದಿನಾಚರಣೆ ಅಂದರೆ ಮೊದಲು ನಮಗೆ ನೆನಪಿಗೆ ಬರುವುದು ಸ್ವಾತಂತ್ರ್ಯ ಹೋರಾಟಗಾರರು. ಬ್ರಿಟಿಷರ ಕಪಿಮುಷ್ಟಿಯಿಂದ ಭಾರತ ದೇಶ ಸ್ವತಂತ್ರವಾಗಲು ಅನೇಕ ಸ್ವಾತಂತ್ರ್ಯಹೋರಾಟಗಾರರು ತ್ಯಾಗ, ಬಲಿದಾನ ಮಾಡಿದ್ದಾರೆ. ಮುಂದಿನ ಪೀಳಿಗೆಗಾಗಿ ಅವರು ತಮ್ಮ ವೈಯಕ್ತಿಕ ಜೀವನವನ್ನು ತ್ಯಜಿಸಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಆದರೆ ಮಹಿಳೆಯರನ್ನು ಹೊರತುಪಡಿಸಿ ನಮ್ಮ ದೇಶದಲ್ಲಿ ಎಲ್ಲಕ್ಕೂ ಸ್ವಾತಂತ್ರ್ಯ ಸಿಕ್ಕಿದೆ. ಮಹಿಳೆಯರಿಗೆ ಭಯದ ವಾತಾವರಣ ಇದೆ.
ಕವನ, ಬೆಂಗಳೂರು
ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಅವಶ್ಯ: ನಮ್ಮ ದೇಶದ ರಾಜಕೀಯ ಕ್ಷೇತ್ರ ಭ್ರಷ್ಟಾಚಾರದಿಂದ ತುಂಬಿದೆ. ಈ ವ್ಯವಸ್ಥೆ ಬದಲಾಗಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ತಂದು ವಿದ್ಯಾರ್ಥಿಗಳಿಗೆ ಭರವಸೆ ಮೂಡಿಸಬೇಕು. ನನಗೆ ಚಾರ್ಟೆರ್ಡ್ ಅಕೌಂಟೆಂಟ್ ಆಗಬೇಕು ಎಂಬ ಕನಸಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ತೆರಿಗೆ ದುಬಾರಿಯಿದೆ. ತೆರಿಗೆ ಕಡಿಮೆಯಾದರೆ ನಮ್ಮ ದೇಶಕ್ಕೆ ಬಂಡವಾಳ ಹೂಡಿಕೆ ಹೆಚ್ಚಾಗುತ್ತದೆ.
ವಿಪುಲ್,ಉಡುಪಿ
ಮುಕ್ತ ಬದುಕಿಗೆ ಅವಕಾಶ ನೀಡುವುದೇ ಸ್ವಾತಂತ್ರ್ಯ: ಜೆನ್-ಝೀ ಯುವಜನತೆಗೆ ಸ್ವಾತಂತ್ರ್ಯಎಂದರೆ ಡಿಜಿಟಲ್ ಜವಾಬ್ದಾರಿಯೊಂದಿಗೆ ವರ್ತಿಸುವುದು. ಸುಳ್ಳು ಸುದ್ದಿ ಹರಡುವುದು ಅಥವಾ ಟ್ರೋಲ್ ಮಾಡುವುದನ್ನು ಬಿಟ್ಟು, ಪ್ರತಿಯೊಬ್ಬರ ಆಲೋಚನೆ ಹಾಗೂ ವ್ಯಕ್ತಿತ್ವವನ್ನು ಗೌರವಿಸುವುದೇ ನಿಜವಾದ ಸ್ವಾತಂತ್ರ್ಯ. ಪರಿಸರ, ಮಾನಸಿಕ ಆರೋಗ್ಯ ಮತ್ತು ಲಿಂಗ ಸಮಾನತೆ ಕುರಿತು ಮುಕ್ತವಾಗಿ ಧ್ವನಿ ಎತ್ತುತ್ತಾ, ಹಳೆಯ ತಪ್ಪು ಕಲ್ಪನೆಗಳಿಂದ ಹೊರಬಂದು ಮುಕ್ತವಾಗಿ ಬದುಕಲು ಅವಕಾಶ ನೀಡುವುದೇ ಸ್ವಾತಂತ್ರ್ಯ.
ಎಂ.ಮನೀಶ್, ಮೈಸೂರು
ಸ್ವಾತಂತ್ರ್ಯ ಸ್ವೇಚ್ಛೆಯಾಗದಿರಲಿ: ಇಂದಿನ ಯುವ ಜನರಿಗೆ ಸ್ವಾತಂತ್ರ್ಯ ಸ್ವೇಚ್ಛೆಯಾಗಿದ್ದು, ಹಿರಿಯರನ್ನು ಗೌರವಿಸುವುದು, ಭಯವಿಲ್ಲದೆ ಒಳ್ಳೆಯದರ ಪರ ಧ್ವನಿ ಎತ್ತುವುದು ಮತ್ತು ಶಾಂತಿಯುತ ನಿರ್ಧಾರ ತಳೆಯುವುದೇ ನಿಜವಾದ ಸ್ವಾತಂತ್ರ್ಯ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾನತೆ ಮತ್ತು ಭಗತ್ಸಿಂಗ್ ಅವರ ಕ್ರಾಂತಿಕಾರಿ ಆದರ್ಶಗಳನ್ನು ಮೈಗೂಡಿಸಿಕೊಂಡು, ಯುವಜನತೆ ದೇಶದ ಶಾಂತಿ ಹಾಗೂ ಸೌಹಾರ್ದತೆಗೆ ಮುಂಚೂಣಿಯಲ್ಲಿ ನಿಂತು ಧ್ವನಿಯಾಗಬೇಕಿದೆ.
ನಿವಾಸ್, ಮೈಸೂರು
ಸ್ವಾತಂತ್ರ್ಯ ಎಂದರೆ ಸಮಾನ ನ್ಯಾಯ: ಇಂದಿನ ಧೈರ್ಯವಂತ ವಿದ್ಯಾರ್ಥಿಗಳು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದು, ಎಲ್ಲರಿಗೂ ನ್ಯಾಯ ಸಿಗಬೇಕಿದೆ. ಸ್ವಾತಂತ್ರ್ಯ ದಿನವು ನಾಯಕರ ಸದ್ಗುಣಗಳನ್ನು ನೆನಪಿಸುತ್ತದೆ. ಹೀಗಾಗಿ ಜಾತಿ ಅಥವಾ ಹುಟ್ಟಿನ ಆಧಾರದಲ್ಲಲ್ಲದೇ ಕೇವಲ ಪ್ರತಿಭೆ ಹಾಗೂ ಕೌಶಲಗಳಿಗೆ ಸೂಕ್ತ ಅವಕಾಶ ನೀಡುವ ಜಾತಿರಹಿತ ಸಮಾಜ ನಿರ್ಮಾಣವಾಗಬೇಕು.
ಜಿ.ಯಶಸ್, ಮೈಸೂರು
ಸಕಾರಾತ್ಮಕ ಬದಲಾವಣೆ ತರಬೇಕು: ಸ್ವಾತಂತ್ರ್ಯಎಂದರೆ ಪ್ರಶ್ನೆ ಮಾಡುವ ಧೈರ್ಯ ಮತ್ತು ಸ್ವಯಂ ಸಾಮರ್ಥ್ಯ ಬೆಳೆಸಿಕೊಳ್ಳುವುದು. ಗಿಗ್ ಎಕಾನಮಿ, ಕಂಟೆಂಟ್ ಕ್ರಿಯೇಷನ್ ಹಾಗೂ ಸ್ಟಾರ್ಟ್ ಅಪ್‌ಗಳ ಮೂಲಕ ಬೆಳೆಯುವ ಅವಕಾಶವಿದೆ. ಕೇವಲ ಪದವಿ ಪಡೆಯದೆ ವೈಜ್ಞಾನಿಕ ಮನೋಭಾವದಿಂದ ಸರಿ-ತಪ್ಪು ವಿಮರ್ಶಿಸಿ, ಶಿಕ್ಷಣ ಮತ್ತು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವುದೇ ನೈಜ ಸ್ವಾತಂತ್ರ್ಯ.
ಜಿ.ಎನ್.ವಿನೋದ್, ಜೆಎಸ್‌ಎಸ್ ಕಾಲೇಜು
ನವದೆಹಲಿ: ದೇಶದಾದ್ಯಂತ ಇಂದು 80ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ…
ಪ್ರಾಮಾಣಿಕತೆ, ದಕ್ಷತೆ ವಿಷಯ ಬಂದಾಗ ಹೆಂಗಸರಿಗೆ ಸಿಗುವ ‘ಅಂಕ’ ಸ್ವಲ್ಪ ಹೆಚ್ಚೆ ಎಂಬ ಭಾವನೆ ಈ ಹಿಂದಿನಿಂದಲೂ ಇದೆ. ಅದೇ…
ರಾಜ್ಯ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಮೇಲೆ ಒಂದು…
ಪ್ರತಿ ವರ್ಷ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಬಹು ವಿಜೃಂಭಣೆಯಿಂದ ಮೈಸೂರಿನಲ್ಲಿ ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ…
ಟಿ.ಕೆ.ಹರೀಶ್ ಮನೆ ಮುಂದಿನ ರಸ್ತೆಯ ಕಸ ವಿಲೇವಾರಿಗೆ ನಾಗರಿಕರು ಜಾಗೃತರಾಗಬೇಕು ಮೈಸೂರು ಎಂದರೆ ಕೇವಲ ಒಂದು ನಗರವಲ್ಲ. ಅದು ಕರ್ನಾಟಕದ…
ಎಸ್.ಎಸ್.ಭಟ್ ನಂ.ಗೂಡು: ಕಳಚಿ ಬೀಳುತ್ತಿದೆ ಸೀಲಿಂಗ್ ಕಾಂಕ್ರೀಟ್; ವಾಹನ ಸವಾರರಲ್ಲಿ ಆತಂಕ ನಂಜನಗೂಡು: ನಗರದ ರೈಲು ನಿಲ್ದಾಣಕ್ಕೆ ತಾಗಿದಂತೆ ಮಹಾತ್ಮ…