Andolana originals

ಗಾಂಧಿ ಅಭಿಯಾನ ಅರಿವಿನ ಯಾನ | ವಿಲಾಯತಿಗೆ ತೆರಳಲು ಅಮ್ಮ ಒಪ್ಪಿದರು

೧೮೮೭ನೇ ಇಸವಿಯಲ್ಲಿ ನಾನು ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದೆನು. ಮೆಟ್ರಿಕ್ ಪರೀಕ್ಷೆಗೆ ಬೊಂಬಾಯಿ ಮತ್ತು ಅಹಮದಾಬಾದ್ ಎರಡೂ ಕೇಂದ್ರಗಳಾಗಿದ್ದವು. ನಾನು ಹತ್ತಿರದ ಅಹಮದಾಬಾದನ್ನೇ ಸ್ವಾಭಾವಿಕವಾಗಿ ಆರಿಸಿಕೊಂಡೆನು. ಆ ಮೊದಲನೇ ಬಾರಿ ರಾಜಕೋಟೆಯಿಂದ ಅಹಮದಾಬಾದಿಗೆ ನಾನು ಒಬ್ಬನೇ ಪ್ರಯಾಣ ಮಾಡಿದನು.

ಮುಂದೆ ನಾನು ಕಾಲೇಜಿನಲ್ಲಿ ವ್ಯಾಸಂಗವನ್ನು ಮುಂದುವರಿ ಸಬೇಕೆಂಬುದು ಮನೆಯ ಹಿರಿಯರ ಇಚ್ಛೆಯಾಗಿತ್ತು. ಬೊಂಬಾಯಿ ಮತ್ತು ಭಾವನಗರದಲ್ಲಿ ಕಾಲೇಜುಗಳಿದ್ದವು. ಭಾವನಗರದಲ್ಲಿ ವೆಚ್ಚ ಕಡಿಮೆ ಬೀಳುತ್ತಿದ್ದಿತು. ಆದುದರಿಂದ ಅಲ್ಲಿಯ ಶಾಮಲದಾಸ್ ಕಾಲೇಜಿನಲ್ಲಿ ನಾನು ವ್ಯಾಸಂಗ ಮಾಡಬೇಕೆಂದು ನಿಶ್ಚಯವಾಯಿತು. ಮೊದಲನೆಯ ವರ್ಷವನ್ನು ಮುಗಿಸಿ, ಬಿಡುವಿನಲ್ಲಿ ಮನೆಗೆ ಬಂದೆ.

ವ್ಯವಹಾರ ಕುಶಲರಾದ ವಿದ್ವಾಂಸರೂ ನಮಗೆ ಸಲಹೆಗಾರರೂ ಆಗಿದ್ದ ಮಾವಜೀ ದವ ಎಂಬ ಬ್ರಾಹ್ಮಣರು ಹಿಂದಿನಿಂದ ನಮ್ಮ ಸಂಸಾರದ ಮಿತ್ರರಾಗಿದ್ದರು. ನನ್ನ ರಜಾ ಕಾಲದಲ್ಲಿ ಅವರು ಒಮ್ಮೆ ಮನೆಗೆ ಬಂದರು. ನಮ್ಮ ತಾಯಿ ಮತ್ತು ದೊಡ್ಡ ಅಣ್ಣನೊಡನೆ ನಡೆದ ಚರ್ಚೆಯಲ್ಲಿ ನನ್ನ ವ್ಯಾಸಂಗದ ಮಾತು ಬಂದಿತು. ಶಾಮಲದಾಸ್ ಕಾಲೇಜಿನಲ್ಲಿ ನಾನು ಓದುತ್ತಿದ್ದ ವಿಷಯ ಕೇಳಿ ಅವರು, ‘ಈಗ ಕಾಲ ಬದಲಾಯಿಸುತ್ತಿದೆ. ಸರಿಯಾದ ವಿದ್ಯಾಭ್ಯಾಸವಿಲ್ಲದೆ ನಿಮ್ಮಲ್ಲಿ ಯಾರೂ ಕಬಾ ಗಾಂಽಯ ಗಾದಿಗೆ ಏರುವುದು ಸಾಧ್ಯವಿಲ್ಲ. ಈ ಹುಡುಗ ಇನ್ನೂ ಓದುತ್ತಿರುವುದರಿಂದ ನಿಮ್ಮ ಮನೆತನಕ್ಕೆ ಶಾಶ್ವತವಾಗಿ ಗಾದಿಯನ್ನುಳಿಸುವ ಭಾರ ಇವನ ಮೇಲೆ ಬೀಳುವುದಾಗುತ್ತದೆ. ಇವನಿಗೆ ಬಿ. ಎ. ಆಗಬೇಕಾದರೆ ಇನ್ನೂ ೪೫ ವರ್ಷ ಬೇಕು. ಅಷ್ಟು ಓದಿದರೂ ೫೦-೬೦ ರೂಪಾಯಿನ ಕೆಲಸವೇ ಹೊರತು ದಿವಾನಗಿರಿ ದೊರೆಯುವುದಿಲ್ಲ. ಅಥವಾ ನನ್ನ ಮಗನಂತೆ ಇವನೂ ವಕೀಲಿ ಪರೀಕ್ಷೆಗೆ ಹೋಗುವುದಾದರೆ ಇನ್ನೂ ಹೆಚ್ಚು ಕಾಲ ಹಿಡಿಯುತ್ತದೆ. ಅಷ್ಟು ಹೊತ್ತಿಗೆ ದಿವಾನಗಿರಿಗಾಗಿ ಸಿದ್ಧರಾಗುವ ವಕೀಲರು ಎಷ್ಟು ಜನರೋ, ಇದೆಲ್ಲಕ್ಕಿಂತ ಇವನನ್ನು ನೀವು ವಿಲಾಯಿತಿಗೆ ಕಳುಹಿಸುವುದು ಉತ್ತಮವೆಂದು ನನಗೆ ತೋರುತ್ತದೆ. ನಿನಗೆ ಇಲ್ಲಿ ಓದುವುದಕ್ಕಿಂತ ವಿಲಾಯತಿಗೆ ಹೋಗಿ ಓದುವುದು ಹೆಚ್ಚು ಇಷ್ಟವಲ್ಲವೆ’ ಎಂದು ಕೇಳಿದರು. ನನ್ನ ಉತ್ತರವೇನೆಂಬುದು ಅವರಿಗೆ ಖಚಿತವಾಗಿ ಗೊತ್ತಾಗಿದ್ದಂತೆ ತೋರಿತು.

ನನಗೆ ಅದಕ್ಕಿಂತ ಹೆಚ್ಚು ಪ್ರಿಯವಾದ ಸಲಹೆಯನ್ನು ಕೊಡುವುದು ಅವರಿಗೆ ಶಕ್ಯವಿರಲಿಲ್ಲ. ಕಾಲೇಜು ವ್ಯಾಸಂಗದ ಕಾಠಿಣ್ಯಕ್ಕೆ ನಾನು ಹೆದರಿದ್ದರಿಂದ ಅವರ ಸೂಚನೆಗೆ ಒಡನೆಯೇ ಒಪ್ಪಿ ಎಷ್ಟು ಬೇಗ ನನ್ನನ್ನು ವಿಲಾಯತಿಗೆ ಕಳುಹಿಸಿದರೆ ಅಷ್ಟು ಉತ್ತಮ, ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಸುಲಭವಾದ ಮಾತಲ್ಲ. ನನ್ನನ್ನು ವೈದ್ಯಕೀಯ ವ್ಯಾಸಂಗಕ್ಕೆ ಏಕೆ ಕಳುಹಿಸಬಾರದು? ’ ಎಂದು ಕೇಳಿದೆನು. ನಮ್ಮಣ್ಣ, ನನ್ನ ಮಾತಿಗೆ ಅಡ್ಡ ಬಂದು ‘ನಮ್ಮ ತಂದೆ ಇದನ್ನು ಎಂದಿಗೂ ಒಪ್ಪಿರಲಿಲ್ಲ. ವೈಷ್ಣವರಾದ ನಾವು ಹೆಣಗಳನ್ನು ಕುಯ್ಯುವ ಗೋಜಿಗೆ ಹೋಗಬಾರದೆಂದು ಅವರು ಹೇಳಿದಾಗ ಅವರ ಮನಸ್ಸಿನಲ್ಲಿ ದ್ದುದು ನೀನೇ. ನೀನು ವಕೀಲನಾಗಬೇಕೆಂಬುದು ತಂದೆಯ ಉದ್ದೇಶ ವಾಗಿತ್ತು’ ಎಂದರು. ಹಿರಿಯಣ್ಣ, ಆಲೋಚನೆಯಲ್ಲಿ ಮುಳುಗಿದರು, ಹಣಕ್ಕೆ ಏನು ಮಾಡಲಿ, ಈ ಚಿಕ್ಕ ವಯಸ್ಸಿನವನನ್ನು ಒಬ್ಬಂಟಿಗನಾಗಿ ಹೊರದೇಶಕ್ಕೆ ಕಳುಹಿಸುವುದು ಹೇಗೆ ಎಂದು. ನಮ್ಮ ತಾಯಿಯೂ ದೊಡ್ಡ ಗೊಂದಲದಲ್ಲಿ ಬಿದ್ದರು. ದೂರ ದೇಶಕ್ಕೆ ನನ್ನನ್ನು ಕಳುಹಿಸುವುದು ಅವರಿಗೆ ಇಷ್ಟವಿರಲಿಲ್ಲ.

ನಮ್ಮ ಹಿರಿಯಣ್ಣ ನನಗೆ ಹೇಳಿದ: ‘ಪೋರ್‌ಬಂದರ್ ರಾಜ್ಯದ ಮೇಲೆ ನಮ್ಮ ಹಕ್ಕು ಇದೆ. ಲೇಲಿ ಸಾಹೇಬರು ಅಡ್ಮಿನಿಸ್ಟ್ರೇಟರ್ ಆಗಿದ್ದಾರೆ. ನಮ್ಮ ಕುಟುಂಬದ ವಿಷಯದಲ್ಲಿ ಅವರಿಗೆ ಒಳ್ಳೆಯ ಅಭಿಪ್ರಾಯವಿದೆ. ಚಿಕ್ಕಪ್ಪನವರಲ್ಲಿ ಅವರಿಗೆ ವಿಶೇಷ ಆದರವಿದೆ. ಆತ ನಿನ್ನ ವಿದೇಶ ವ್ಯಾಸಂಗಕ್ಕಾಗಿ ಸಂಸ್ಥಾನದ ಕಡೆಯಿಂದ ಸಹಾಯ ಮಾಡಬಹುದು. ’ ನನಗೆ ಇದೆಲ್ಲ ಒಪ್ಪಿಗೆಯಾಯಿತು. ನಾನು ಪೋರ್ ಬಂದರ್‌ಗೆ ಹೊರಡಲು ಸಿದ್ಧನಾದೆ. ಆ ಕಾಲದಲ್ಲಿ ರೈಲು ಇರಲಿಲ್ಲ. ಐದು ದಿನಗಳ ಎತ್ತಿನ ಗಾಡಿ ಪ್ರಯಾಣ. ನಾನು ಅಂಜುಬುರುಕವಾಗಿದ್ದೆನೆಂದು ಆಗಲೇ ಹೇಳಿದ್ದೇನೆ. ಆದರೆ ಆ ಗಳಿಗೆಯಲ್ಲಿ ಇಂಗ್ಲೆಂಡಿಗೆ ಹೋಗುವ ಉತ್ಕಟ ಇಚ್ಛೆಯಲ್ಲಿ ನನ್ನ ಅಂಜುಬುರುಕತನ ಮಾಯವಾಯಿತು. ನಾನು ಧೋರಾಜಿವರೆಗೆ ಎತ್ತಿನ ಗಾಡಿಯನ್ನು ಬಾಡಿಗೆಗೆ ತೆಗೆದುಕೊಂಡೆ. ಪೋರ್ ಬಂದರ್‌ಗೆ ಒಂದು ದಿನ ಮುಂಚಿತವಾಗಿ ಹೋಗಬಹುದೆಂದು ಧೋರಾಜಿಯಿಂದ ಒಂಟೆಯ ಮೇಲೆ ಪ್ರಯಾಣ ಮಾಡಿದೆ. ಪೋರ್‌ಬಂದರ್ ಸೇರಿ ನಮ್ಮ ಚಿಕ್ಕಪ್ಪನವರನ್ನು ಕಂಡು ವಂದಿಸಿ ಎಲ್ಲ ವಿಷಯಗಳನ್ನೂ ಅವರಿಗೆ ಹೇಳಿದೆ. ಅವರು ಯೋಚನೆ ಮಾಡಿ ಹೀಗೆ ಹೇಳಿದರು: ‘ವಿಲಾಯತಿಗೆ ಹೋಗಿ ನಮ್ಮ ಧರ್ಮವನ್ನು ರಕ್ಷಿಸಿಕೊಳ್ಳುವುದು ಸಾಧ್ಯವೋ ಇಲ್ಲವೋ ಹೇಳಲಾರೆನು. ದೊಡ್ಡ ದೊಡ್ಡ ಬ್ಯಾರಿಸ್ಟರ್ ಗಳನ್ನು ನೋಡಿದಾಗ ಅವರಿಗೂ ಐರೋಪ್ಯರಿಗೂ ನನಗೆ ವ್ಯತ್ಯಾಸ ಕಾಣುವುದಿಲ್ಲ. ಆಹಾರದ ವಿಷಯದಲ್ಲಿ ಅವರಿಗೆ ಯಾವ ನಿಯಮವೂ ಇಲ್ಲ.

ಅವರ ಬಾಯಲ್ಲಿ ಚುಟ್ಟ ಇಲ್ಲದ ಕಾಲವೇ ಇಲ್ಲ. ಅವರ ಉಡುಪನ್ನು ನೋಡಿದರೆ ನಾಚಿಗೆಗೇಡು. ಇದೆಲ್ಲ ನಮ್ಮ ಸಂಸಾರಕ್ಕೆ ಕೀರ್ತಿ ತರುವುದಲ್ಲ. ನನ್ನ ಆಯುಷ್ಯ ಇನ್ನು ಹೆಚ್ಚು ಕಾಲ ಇಲ್ಲ. ವಿಲಾಯತಿಗೆ ಹೋಗುವುದಕ್ಕೂ ಸಮುದ್ರವನ್ನು ದಾಟುವು ದಕ್ಕೂ ನಿನಗೆ ಹೇಗೆ ಅನುಮತಿ ಕೊಡಲಿ, ಆದರೆ ನಾನು ನಿನ್ನನ್ನು ಅಡ್ಡಿ ಪಡಿಸುವುದಿಲ್ಲ. ನಿನಗೆ ನಿಜವಾಗಿ ಬೇಕಾಗಿರುವುದು ನಿಮ್ಮ ತಾಯಿಯ ಅಪ್ಪಣೆ. ಅವಳು ಒಪ್ಪಿದರೆ ನಾನು ಅಡ್ಡಿಪಡಿಸುವುದಿಲ್ಲ ವೆಂದು ಅವಳಿಗೆ ಹೇಳು, ನನ್ನ ಆಶೀರ್ವಾದ ನಿನಗೆ ಇದ್ದೇ ಇದೆ. ’ ‘ಇದಕ್ಕಿಂತ ಇನ್ನೇನನ್ನೂ ಹೆಚ್ಚಾಗಿ ನಿಮ್ಮಿಂದ ನಾನು ಕೇಳುವುದಿಲ್ಲ. ಇನ್ನು ತಾಯಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಆದರೆ ನನ್ನನ್ನು ಲೇಲಿ ಸಾಹೇಬರಿಗೆ ನೀವು ಶಿಫಾರಸು ಮಾಡುವುದಿಲ್ಲವೆ? ’ ಎಂದು ನಾನು ಹೇಳಿದೆ. ‘ಅದು ಹೇಗೆ ಸಾಧ್ಯ? ಆದರೆ ಆತ ಒಳ್ಳೆಯವ, ನಮ್ಮ ಕುಟುಂಬದ ವಿಷಯ ತಿಳಿಸಿ ಅವರಿಗೆ ನೀನು ಒಂದು ಪತ್ರ ಬರೆ. ಅವರು ಖಂಡಿತ ನಿನಗೆ ಸಂದರ್ಶನ ಕೊಡುವರು. ಸಹಾಯವನ್ನೂ ಮಾಡಬಹುದು.’ ನಮ್ಮ ಚಿಕ್ಕಪ್ಪ ನನಗೆ ಶಿಫಾರಸು ಕಾಗದವನ್ನು ಏಕೆ ಕೊಡಲಿಲ್ಲವೋ ನಾನು ಹೇಳಲಾರೆ, ವಿಲಾಯತಿಗೆ ನಾನು ಹೋಗುವುದು ಅವರ ಅಭಿಪ್ರಾಯದಲ್ಲಿ ಧರ್ಮ ವಿರುದ್ಧ ಕಾರ್ಯವಾದುದರಿಂದ, ನನಗೆ ಅದರಲ್ಲಿ ಪ್ರತ್ಯಕ್ಷ ಸಹಾಯ ಮಾಡಲು ಅವರು ಸಂಕೋಚಪಟ್ಟರೆಂದು ನನ್ನ ಭಾವನೆ.

ನಾನು ಲೇಲಿ ಸಾಹೇಬರಿಗೆ ಪತ್ರ ಬರೆದೆ. ಅವರು ತಮ್ಮ ನಿವಾಸ ದಲ್ಲಿ ನನ್ನನ್ನು ಸಂದರ್ಶಿಸಲು ಕರೆದರು. ‘ಬಿಎ ಪರೀಕ್ಷೆಯಲ್ಲಿ ಮೊದಲು ತೇರ್ಗಡೆ ಹೊಂದು. ಈಗ ನಿನಗೆ ಯಾವ ಸಹಾಯವೂ ಸಿಗದು’ ಎಂದು ಖಂಡಿತವಾಗಿ ಹೇಳಿ ಹೋದರು. ಅವರನ್ನು ಸಂದರ್ಶಿಸಲು ನಾನು ವಿಶೇಷ ಸಿದ್ಧತೆಯನ್ನು ಮಾಡಿಕೊಂಡಿದ್ದೆನು. ನಾನು ಎಚ್ಚರಿಕೆ ಯಿಂದ ಕೆಲವು ವಾಕ್ಯಗಳನ್ನು ಬಾಯಿಪಾಠ ಮಾಡಿದ್ದೆ. ಆದರೆ ಎಲ್ಲ ವ್ಯರ್ಥ.

ಅನಂತರ ನನ್ನ ದೃಷ್ಟಿ ನನ್ನ ಹೆಂಡತಿಯ ಒಡವೆಗಳ ಮೇಲೆ ಹೋಯಿತು. ನನ್ನ ಹಿರಿಯಣ್ಣ ನೊಡನೆ ಯೋಚಿಸಿದೆ. ಅವನಲ್ಲಿ ನನ್ನ ಭರವಸೆ ಅಪಾರವಾಗಿದ್ದಿತು. ನನ್ನ ವಿಷಯದಲ್ಲಿ ಔದಾರ್ಯಕ್ಕೆ ಎಲ್ಲೆಯೇ ಇರಲಿಲ್ಲ. ಅವನು ನನ್ನನ್ನು ಮಗನಂತೆ ಪ್ರೀತಿಸುತ್ತಿದ್ದ.

ನಾನು ಪೋರ್‌ಬಂದರ್‌ನಿಂದ ರಾಜಕೋಟೆಗೆ ಹಿಂದಿರುಗಿ ಬಂದು ನಡೆದ ಸಂಗತಿಗಳನ್ನೆಲ್ಲ ತಿಳಿಸಿದೆ. ನಾನು ಜೋಷಿಯವರ ಸಲಹೆ ಕೇಳಿದೆ. ‘ಅವಶ್ಯಕವಾದರೆ ಸಾಲವನ್ನಾದರೂ ಮಾಡು’ ಎಂದು ಅವರು ಸೂಚಿಸಿದರು. ನನ್ನ ಹೆಂಡತಿಯ ಒಡವೆಗಳನ್ನು ಮಾರೋಣವೆಂದು ನಾನು ಸೂಚಿಸಿದೆ. ಆದರಿಂದ ೨-೩ ಸಾವಿರ ರೂ. ಬರುತ್ತಿದ್ದಿತು. ಆದರೆ ನಮ್ಮಣ್ಣ ‘ಹೇಗೋ ಹಣ ಒದಗಿಸುತ್ತೇನೆ’ ಎಂದು ಆಶ್ವಾಸನೆಯಿತ್ತ. ಆದರೂ ನಮ್ಮ ತಾಯಿಗೆ ಇನ್ನೂ ಸಮ್ಮತಿಯಿರಲಿಲ್ಲ. ಅವರು ವಿಲಾಯತಿಯ ಜೀವನದ ವಿಷಯದಲ್ಲಿ ಎಲ್ಲವನ್ನೂ ಕೂಲಂಕಷವಾಗಿ ವಿಚಾರಿಸತೊಡಗಿದ್ದರು. ಇಂಗ್ಲೆಂಡಿಗೆ ಹೋಗುವ ನವಯುವಕರು ಕೆಟ್ಟು ಹೋಗುವರೆಂದು ಅವರಿಗೆ ಯಾರೋ ಹೇಳಿದರು. ಮಾಂಸಾಹಾರಿಗಳಾಗುತ್ತಾರೆಂದು ಮತ್ತೊಬ್ಬರು ಹೇಳಿದ್ದರು. ಅಲ್ಲಿಗೆ ಹೋದವರು ಮದ್ಯಪಾನವಿಲ್ಲದೆ ಜೀವಿಸಲಾರರೆಂದು ಬೇರೊಬ್ಬರು ಹೇಳಿದ್ದರು. ತಾಯಿ ನನ್ನನ್ನು ‘ಇದಕ್ಕೆಲ್ಲ ಏನು ಹೇಳುತ್ತೀ’ ಎಂದು ಕೇಳಿದರು. ನಾನು ಹೀಗೆ ಹೇಳಿದೆ: ‘ನನ್ನಲ್ಲಿ ನಿಮಗೆ ನಂಬಿಕೆಯಿಲ್ಲವೇ, ನಾನು ನಿಮ್ಮೊಂದಿಗೆ ಸುಳ್ಳು ಹೇಳುವುದಿಲ್ಲ. ಅವುಗಳಲ್ಲಿ ಯಾವುದನ್ನೂ ನಾನು ಮುಟ್ಟುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ. ಅಲ್ಲಿ ಅಂತಹ ಅಪಾಯವಿದ್ದರೆ ಜೋಷಿ ನನ್ನನ್ನು ಹೋಗಗೊಡುತ್ತಿದ್ದರೆ?’

ಆಕೆ ಹೇಳಿದರು: ‘ನಾನು ನಿನ್ನನ್ನು ನಂಬುತ್ತೇನೆ. ಆದರೆ ದೂರ ದೇಶದಲ್ಲಿರುವಾಗ ನಿನ್ನನ್ನು ನಂಬುವುದು ಹೇಗೆ? ನನಗೆ ದಿಕ್ಕು ತೋಚದಂತೆ ಆಗಿದೆ. ನಾನು ಬೇಚರಜೀ ಸ್ವಾಮಿಗಳನ್ನು ಕೇಳುತ್ತೇನೆ.’

ಬೇಚರಜೀ ಸ್ವಾಮಿಯವರು ಮೊದಲು ಮೋಧ್‌ಬನಿಯ ಆಗಿದ್ದು, ಅನಂತರ ಜೈನ ಸಾಧುವಾದವರು. ಅವರೂ ಸಹ ಜೋಶಿಯವರಂತೆ ನಮ್ಮ ಸಂಸಾರದ ಸಲಹೆಗಾರರಾಗಿದ್ದರು. ಅವರು ನನಗೆ ನೇರವಾಗಿ ‘ನಾನು ಈ ಮೂರು ವಿಷಯಗಳಲ್ಲಿಯೂ ಇವನಿಂದ ಪವಿತ್ರ ಪ್ರತಿಜ್ಞೆ ಮಾಡಿಸುತ್ತೇನೆ. ಆನಂತರ ಅವನನ್ನು ಸೀಮೆಗೆ ಕಳುಹಿಸಬಹುದು’ ಎಂದು ಹೇಳಿದರು. ಅವರು ನನ್ನಿಂದ ಪ್ರತಿಜ್ಞೆಯನ್ನು ಮಾಡಿಸಿದರು. ನಾನು ಮದ್ಯ, ಮಾಂಸ, ಸ್ತ್ರೀ ಈ ಮೂರನ್ನೂ ಮುಟ್ಟುವುದಿಲ್ಲವೆಂದು ಪ್ರತಿಜ್ಞೆ ಮಾಡಿದೆ. ಇದಾದ ಮೇಲೆ ನಮ್ಮ ತಾಯಿ ನನಗೆ ಅನುಮತಿ ಕೊಟ್ಟರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

1 day ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

1 day ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

1 day ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

1 day ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

1 day ago