ಹಿಂದೊಮ್ಮೆ ನಡೆದಿತ್ತು ಮಿನಿ ಸಂಪುಟ ಸಭೆ; ರೇಷ್ಮೆ ಕೃಷಿ ಪುನಶ್ಚೇತನ, ಗ್ರಾಮಗಳ ಸ್ಥಳಾಂತರ ಇತ್ಯಾದಿ ಬೇಡಿಕೆಗಳ ಮಹಾಪೂರ
ಪ್ರಸಾದ್ ಲಕ್ಕೂರು
ಚಾಮರಾಜನಗರ: ಜಿಲ್ಲೆಯ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯು ಏ. ೨೪ರಂದು ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಹಲವು ಕೊಡುಗೆಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
೨೦೧೩ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಆಗ ಸಚಿವರಾಗಿದ್ದ ಎಚ್. ಎಸ್. ಮಹದೇವ ಪ್ರಸಾದ್, ಮಾಜಿ ಸಂಸದ ಆರ್. ಧ್ರುವನಾರಾಯಣ, ಸ್ಥಳೀಯ ಶಾಸಕರ ಒತ್ತಾಸೆಯಂತೆ ೩ ಸಾವಿರ ಕೋಟಿ ರೂ. ಗಳಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು.
ಇದೀಗ ಮತ್ತೆ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲೇ ಸಚಿವ ಸಂಪುಟ ನಡೆಸುತ್ತಿದ್ದಾರೆ. ಹಾಗಾಗಿ ಜನರಲ್ಲಿ ಕುತೂಹಲ ಹೆಚ್ಚಾಗಿವೆ.
ಹಿಂದೊಮ್ಮೆ ಮಿನಿ ಸಂಪುಟ ಸಭೆ: ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿಳಿಗಿರಿ ರಂಗನಬೆಟ್ಟದಲ್ಲಿ ಮಿನಿ ಸಂಪುಟ ಸಭೆ ನಡೆಸಿದ್ದರು. ಎಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಬಡಗಲಮೋಳೆ ಮತ್ತು ಕೊಂಬುಡಿಕ್ಕಿ ಗ್ರಾಮ ಗಳಲ್ಲಿ ವಾಸ್ತವ್ಯ ಹೂಡಿ ಸಂಚಲನ ಮೂಡಿಸಿದ್ದರು.
ಇಡೀ ಜಿಲ್ಲೆಯ ೫ ತಾಲ್ಲೂಕುಗಳಿಗೆ ಒಂದೇ ಉಪ ವಿಭಾಗವಿದ್ದು, ಮತ್ತೊಂದು ವಿಭಾಗವನ್ನು ರಚಿಸಬೇಕು. ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದೊಳಗಿರುವ ಚಂಗಡಿ ಮತ್ತು ಮೆಂದಾರೆ ಗ್ರಾಮಗಳನ್ನು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ.
ಕೊರೊನಾ ಕಾಲದಲ್ಲಿ ನಗರದಲ್ಲಿರುವ ಈಗಿನ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ೩೬ಕ್ಕೂ ಹೆಚ್ಚು ಜನರು ಮೃತಪಟ್ಟರು. ಈ ದುರ್ಘಟನೆ ನಡೆದು ೪ ವರ್ಷಗಳು ಕಳೆದರೂ ಸಂತ್ರಸ್ತರಿಗೆ ನ್ಯಾಯ ಸಿಗಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಂತ್ರಸ್ತರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಕೆಲವರಿಗೆ ಹೊರಗುತ್ತಿಗೆ ನೌಕರಿ ದೊರೆತಿದೆ. ಇನ್ನು ಕೆಲವರಿಗೆ ಯಾವುದೇ ಕೆಲಸ ಸಿಕ್ಕಿಲ್ಲ.
ತಿ. ನರಸೀಪುರ ತಾಲ್ಲೂಕಿನ ಮಾಲಂಗಿಯಿಂದ ಚಾಮರಾಜನಗರಕ್ಕೆ ಎಕ್ಸ್‌ಪ್ರೆಸ್ ಕುಡಿಯುವ ನೀರು ಯೋಜನೆಗೆ ಅನುಮೋದನೆ ದೊರೆತಿಲ್ಲ. ಚಾಮರಾಜ ನಗರದಲ್ಲಿ ಗ್ರಾಮಾಂತರ ಬಸ್ ನಿಲ್ದಾಣ ನಿರ್ಮಾಣ ನನೆಗುದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ೨ನೇ ಹಂತದ ಒಳಚರಂಡಿ ಯೋಜನೆಗಳ ಪ್ರಸ್ತಾವನೆ ಸರ್ಕಾರದ ಮುಂದಿದೆ.
ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಸುಮಾರು ೨೦ ಗ್ರಾಮಗಳಲ್ಲಿ ಅನಾರೋಗ್ಯ ಪೀಡಿತರನ್ನು ಡೋಲಿ ಮೂಲಕ ಬೆಟ್ಟದ ಆಸ್ಪತ್ರೆ, ಇಲ್ಲವೇ ತಮಿಳುನಾಡಿನ ಮೆಟ್ಟೂರು, ಕೊಳತ್ತೂರಿನ ಆಸ್ಪತ್ರೆಗೆ ಸಾಗಿಸಬೇಕಿದೆ. ಈ ಸಮಸ್ಯೆ ನಿವಾರಿಸಲು ಬೆಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಬೇಡಿಕೆಯೂ ಹಾಗೆಯೇ ಉಳಿದಿದೆ.
ಮಲೆ ಮಹದೇಶ್ವರ ಬೆಟ್ಟ ಮತ್ತು ಕಾವೇರಿ ವನ್ಯಧಾಮಗಳ ಒಳಭಾಗದ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಿಂದಿನ ಡಿಸಿಎಫ್ ಏಡುಕೊಂಡಲು ಅವರು ‘ಜನ ವನ’ ವಾಹನ ಸೇವೆಯನ್ನು ಆರಂಭಿಸಿದ್ದರು. ಕೆಲವು ತಿಂಗಳು ಕಾರ್ಯನಿರ್ವಹಿಸಿದ ವಾಹನಗಳು, ವಿಮೆ ಮಾಡಿಸಿಲ್ಲ ಎಂಬ ಕಾರಣಕ್ಕೆ ಸ್ಥಗಿತವಾಗಿವೆ. ಈ ಸೇವೆಯನ್ನು ಪುನಾರಂಭಿಸಬೇಕು.
ರೇಷ್ಮೆ ಕೃಷಿ ಪುನಶ್ಚೇತನದ ಆಶಯ. . .
೩ ದಶಕಗಳ ಹಿಂದೆ ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ರೇಷ್ಮೆ ಕೃಷಿ ಉತ್ತುಂಗದಲ್ಲಿತ್ತು. ಪರಿಣಾಮವಾಗಿಯೇ ಸಂತೇಮರಹಳ್ಳಿ, ಮಾಂಬಳ್ಳಿ ಮತ್ತು ಕೊಳ್ಳೇಗಾಲದಲ್ಲಿ ರೇಷ್ಮೆ ಕಾರ್ಖಾನೆಗಳು ಪ್ರಾರಂಭವಾಗಿದ್ದವು. ಆದರೆ ಅವು ಕಾಲಕ್ಕೆ ತಕ್ಕಂತೆ ಬದಲಾವಣೆ ಆಗದೆ ಮರಣಶ್ಯಯೆಯಲ್ಲಿವೆ. ಇವುಗಳ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಬೇಕು.
ಪ್ರವಾಸೋದ್ಯಮ ನೀತಿ ಬೇಕಿದೆ
ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ. ಹಾಗಾಗಿ ಸಮಗ್ರ ಪ್ರವಾಸೋದ್ಯಮ ನೀತಿ ರೂಪಿಸಬೇಕಿದೆ. ಹೊಗೇನಕಲ್ ಜಲಪಾತದಲ್ಲಿಯೂ ಅಭಿವೃದ್ಧಿ ಕೆಲಸಗಳಾಗಬೇಕಿದೆ. ಅವಳಿ ಜಲಾಶಯಗಳಾದ ಸುವರ್ಣಾವತಿ ಮತ್ತು ಚಿಕ್ಕಹೊಳೆ ಬಳಿ ಕೆಆರ್‌ಎಸ್ ಮಾದರಿಯ ಉದ್ಯಾನ ನಿರ್ಮಿಸಬೇಕೆಂಬ ಬೇಡಿಕೆ ಈಡೇರಿಲ್ಲ. ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಪಾರ್ವತಾಂಬ ಬೆಟ್ಟ, ಹುಲುಗನಮುರಡಿ ವೆಂಕಟರಮಣಸ್ವಾಮಿ ಬೆಟ್ಟ, ಜೋಡಿಕೆರೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಚಾ. ನಗರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್, ಜಿಲ್ಲೆಯಲ್ಲೂ ಎಂಸಿಡಿಸಿಸಿ ಬ್ಯಾಂಕ್ ಸ್ಥಾಪನೆ, ಬೆಂಗ ಳೂರು-ಕನಕಪುರ-ಮಳವಳ್ಳಿ- ಕೊಳ್ಳೇಗಾಲ- ಚಾಮರಾಜನಗರ ರೈಲು ಮಾರ್ಗ ನಿರ್ಮಾಣಕ್ಕೆ ಭೂಸ್ವಾಧಿನಕ್ಕಾಗಿ ಅನುದಾನ ಮೀಸಲಿಡಬೇಕು.
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…
ಬೆಳಗಾವಿ : ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಈ…
ಮೈಸೂರು : ಮೈಸೂರು ವಿಶ್ವವಿದ್ಯಾನಿಲಯಕ್ಕೆ ಫ್ರಾನ್ಸ್ ದೇಶದ ರಾಯಭಾರಿಗಳ ನಿಯೋಗ ಭೇಟಿ ನೀಡಿ ಫ್ರೆಂಚ್ ಭಾಷೆ ವಿಭಾಗವನ್ನು ಮರು ಆರಂಭಿಸುವ…