ಕೇಂದ್ರ ಸಚಿವರ ಬಳಿ ನಿಯೋಗ ಕರೆದೊಯ್ಯುವ ಭರವಸೆ ನೀಡಿದ ರವೀಂದ್ರ ಶ್ರೀಕಂಠಯ್ಯ
ಮಂಡ್ಯ: ಶ್ರೀರಂಗಪಟ್ಟಣದಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೨೭೫ರ ನಿರ್ಮಾಣದಲ್ಲಿ ರೈತರು, ಜನಸಾಮಾನ್ಯರು ಹಾಗೂ ಪ್ರವಾಸಿಗರ ಹಿತ ಕಡೆಗಣಿಸಿ ಸರ್ವೀಸ್ ರಸ್ತೆಗೆ ಅನುವು ಮಾಡಿಕೊಡದ ಎನ್‌ಎಚ್ ಅಧಿಕಾರಿಗಳ ಕರ್ತವ್ಯ ಲೋಪವನ್ನು ಖಂಡಿಸಿ ನೂರಾರು ರೈತರು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಸಿಡಿದೆದ್ದಿದ್ದಾರೆ.
೨೦೧೯ರಲ್ಲಿ ಶ್ರೀರಂಗಪಟ್ಟಣ- ಕುಶಾಲನಗರ ನಡುವಿನ ರಾಷ್ಟ್ರೀಯ ಹೆದ್ದಾರಿ-೨೭೫ರ ನಿರ್ಮಾಣಕ್ಕೆ ಅಗತ್ಯ ಭೂ ಸ್ವಾಧೀನಕ್ಕೆ ಮುಂದಾದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸ್ಥಳೀಯ ರೈತರಿಗೆ ವಾಣಿಜ್ಯ ಉದ್ದೇಶದ ಆಮಿಷವೊಡ್ಡಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಸ್ಥಳೀಯರು ಹಾಗೂ ರೈತರಿಗೆ ಅಗತ್ಯವಿರುವ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸದಿರುವುದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದರು.
ನೂರಾರು ರೈತರು, ರೈತ ಮಹಿಳೆಯರು ಶ್ರೀರಂಗಪಟ್ಟಣ ತಾಲ್ಲೂಕಿನ ಬೊಮ್ಮೂರು ಅಗ್ರಹಾರ ಬಳಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಜಮಾವಣೆಗೊಂಡು ಸ್ಥಳೀಯ ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ೬,೫೦೦ ಕೋಟಿ ರೂ. ವೆಚ್ಚದಲ್ಲಿ ೧೦೦ ಕಿ.ಮೀ. ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಿ ಭೂಸ್ವಾಧಿನ ಮಾಡಿ ಕೊಂಡಿರುವ ಹೆದ್ದಾರಿ ಪ್ರಾಧಿಕಾರ ಸ್ಥಳೀಯ ರೈತರಿಗೆ ವಂಚನೆ ಮಾಡಿದರೆ ಸಹಿಸಲು ಸಾಧ್ಯವಿಲ್ಲ, ಕಾಮಗಾರಿಗೆ ತಡೆವೊಡ್ಡಲಾಗುವುದು ಎಂಬ ಆಕ್ರೋಶ ರೈತರಿಂದ ವ್ಯಕ್ತವಾಯಿತು.ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಬಳಿ ಸರ್ವೀಸ್ ರಸ್ತೆಯ ಅಗತ್ಯತೆ ಬಗ್ಗೆ ಮನವಿ ಮಾಡಿದ ರೈತರು, ಶಾಸಕರು ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ನಡವಳಿಕೆ ವಿರುದ್ಧ ಕಿಡಿಕಾರಿದರು.
ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಸಮಸ್ಯೆಯ ಗಂಭೀರತೆ ನನಗೆ ಅರ್ಥವಾಗಿದೆ. ಕೇಂದ್ರ ಸಚಿವರಾದ ಎಚ್. ಡಿ.ಕುಮಾರಸ್ವಾಮಿ ಹಾಗೂ ನಿತಿನ್ ಗಡ್ಕರಿ ಅವರ ಬಳಿಗೆ ಮುಂದಿನ ವಾರದಲ್ಲಿ ೨೦ ಮಂದಿ ರೈತರ ನಿಯೋಗವನ್ನು ಕರೆದೊಯ್ದು ಅಗತ್ಯ ಸರ್ವೀಸ್ ರಸ್ತೆ ಮಂಜೂರು ಮಾಡಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಬೆಳಗೊಳ ಲೋಕೇಶ್, ತಾಲ್ಲೂಕು ಜಾ.ದಳ ಅಧ್ಯಕ್ಷ ದಶರಥ, ಯುವ ಘಟಕದ ಅಧ್ಯಕ್ಷ ಸಂಜಯ್, ಪಾಲಹಳ್ಳಿ ರಮೇಶ್, ಭರತ್ ಕುಮಾರ್, ಸುನಿಲ್ ಬೆಳಗೊಳ, ರಾಕೇಶ್ ಸೇರಿದಂತೆ ಹಲವರು ಹಾಜರಿದ್ದರು.
” ರಾಷ್ಟ್ರೀಯ ಹೆದ್ದಾರಿಗಾಗಿ ಶ್ರೀರಂಗಪಟ್ಟಣ ತಾಲ್ಲೂಕಿನ ಬ್ರಹ್ಮಪುರ, ಬಿ.ಅಗ್ರಹಾರ, ಕರಿಮಂಟಿ, ಪಾಲಹಳ್ಳಿ, ಕೆಂಪಲಿಂಗಾಪುರ, ಬೆಳಗೊಳ, ಬಲಮುರಿ, ಮಜ್ಜಿಗೆಪುರ, ಹುಲಿಕೆರೆ, ಬೀಚನಕುಪ್ಪೆ, ಅವ್ವೇರಹಳ್ಳಿ ಸೇರಿದಂತೆ ೧೨ ಗ್ರಾಮಗಳ ರೈತರ ಜಮೀನುಗಳನ್ನು ನೀಡಲಾಗಿದೆ. ಡಿಪಿಆರ್ ಸಿದ್ಧಪಡಿಸದೆ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಸರ್ವೀಸ್ ರಸ್ತೆ ನಿರ್ಮಾಣ ಮಾಡದಿದ್ದರೆ ರೈತರು ಜಮೀನುಗಳಿಗೆ ಹೋಗಲು ಆಗುವುದಿಲ್ಲ.”
ಅರುಣ್ ಕುಮಾರ್, ಬೆಳಗೊಳ
” ಸ್ಥಳೀಯ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಪರ ನಿಂತಿರುವುದು ದುರದೃಷ್ಟಕರ. ಶ್ರೀರಂಗಪಟ್ಟಣದಲ್ಲಿ ಐತಿಹಾಸಿಕ ಸ್ಮಾರಕಗಳಿವೆ. ಪ್ರವಾಸಿಗರು, ರೈತರು ಹಾಗೂ ಜನಸಾಮಾನ್ಯರಿಗೆ ಸರ್ವೀಸ್ ರಸ್ತೆಯ ಅಗತ್ಯತೆ ಇದ್ದು, ಈ ಕೆಲಸ ಆಗುವವರೆಗೂ ನಾವು ಸುಮ್ಮನಿರುವುದಿಲ್ಲ.”
ಸಂತೋಷ್, ಪಾಲಹಳ್ಳಿ
” ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ – ಕುಶಾಲನಗರ ನಡುವೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ನಮ್ಮ ತಕರಾರಿಲ್ಲ. ಆದರೆ, ಭೂಮಿ ಕಳೆದುಕೊಳ್ಳುವ ರೈತರ ಬದುಕಿನ ಬಗ್ಗೆ ಅಧಿಕಾರಿಗಳು ಸಹಾನುಭೂತಿ ತೋರಿಲ್ಲ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದರು.ರಾಷ್ಟ್ರೀಯ ಹೆದ್ದಾರಿ ೨೭೫ರ ಬಳಿ ಜಮಾವಣಿಗೊಂಡಿದ್ದ ರೈತರ ಅಹವಾಲು ಆಲಿಸಿ ಮಾತನಾಡಿದ ಮಾಜಿ ಶಾಸಕರು, ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ರೈತರ ಜಮೀನು ಹೋಳಾಗಿವೆ. ನೂರಾರು ರೈತರ ಜಮೀನು ರಸ್ತೆಯ ಇಕ್ಕೆಲ್ಲಗಳಲ್ಲಿವೆ.ಜನ-ಜಾನುವಾರು, ಟ್ರಾಕ್ಟರ್ ಮುಂತಾದ ಕೃಷಿ ಉಪಕರಣಗಳು ಹಾಗೂ ದವಸ-ಧಾನ್ಯಗಳನ್ನು ಸಾಗಿಸಲು ಸರ್ವಿಸ್ ರಸ್ತೆ ಬೇಕು ಎಂಬ ಮನಃಸ್ಥಿತಿ ಶಾಸಕರು ಹಾಗೂ ಅಧಿಕಾರಿಗಳಿಗೆ ಇಲ್ಲದಿರುವುದು ಬೇಸರದ ಸಂಗತಿ ಎಂದರು.”
” ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ರೈತರು ಜಮೀನು ಗಳಿಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಎರಡೂ ಕಡೆ ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕು ಎಂದರು. ರೈತರ ಬಗ್ಗೆ ಸಹಾನುಭೂತಿ ತೋರದ ಅಧಿಕಾರಿಗಳು ಬೆಳಗೊಳ ಗ್ರಾಮದ ಮುಖಂಡ ಸುನಿಲ್ ಮಾತನಾಡಿ, ಹೆದ್ದಾರಿ ನಿರ್ಮಾಣ ಉದ್ದೇಶಕ್ಕೆ ಜಮೀನು ಕಳೆದುಕೊಂಡ ಹಲವು ರೈತರ ಮನೆಗಳು ಹಣದ ವಿಷಯದಲ್ಲಿ ಹೋಳಾಗಿವೆ. ನಮ್ಮ ಅಳಲು ಆಲಿಸಬೇಕಾದ ಕ್ಷೇತ್ರದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ನಕಾರಾತ್ಮಕವಾಗಿ ಮಾತನಾಡುತ್ತಾರೆ. ಜಿಲ್ಲಾಧಿಕಾರಿಗಳು ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕರೆತಂದು ವಿವೇಚನೆ ಇಲ್ಲದೇ ಮಾತನಾಡುವ ಶಾಸಕರಿಂದ ರೈತರಿಗೆ ನ್ಯಾಯ ಸಿಗುವುದಿಲ್ಲ. ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಕೇಂದ್ರ ಸಚಿವರೊಂದಿಗೆ ಮಾತನಾಡಿದ್ದು, ನ್ಯಾಯ ದೊರಕಿಸುವ ಭರವಸೆ ನೀಡಿದ್ದಾರೆ. ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡುವವರೆಗೆ ನಮ್ಮ ಹೋರಾಟ ನಿರಂತರ ಎಂದು ಹೇಳಿದರು.”
ಹೊಸ ವರ್ಷದಂದು ಹಲವರು ಬಂಧು,ಬಳಗ, ಸ್ನೇಹಿತರ ಜತೆ ಸೇರಿ ಸಂಭ್ರಮಿಸಿದರು. ಆದರೆ ಸಾಂಸ್ಕ ತಿಕ ನಗರ ಮೈಸೂರಿನಲ್ಲಿ ದಾಖಲೆ ಮದ್ಯ…
ಸ್ವಾಗತಾರ್ಹ ನಡೆ! ಜಾತಿ ಮೀರಿ ಪ್ರೀತಿಸಿದರೆ ಕುಂದಲ್ಲವದು ಮರ್ಯಾದೆಗೆ ಬದಲಿಗೆ ಹೆಚ್ಚುವುದು ಮರ್ಯಾದೆ ಗೌರವ! ಜಾತಿ ಕಟ್ಟಳೆ ಮುರಿವ ಸಮತೆಯ…
ಸಾಂಸ್ಕ ತಿಕ ನಗರಿ ಮೈಸೂರಿನಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಬ್ಯಾರಿಕೇಡ್‌ಗಳು ಬಳಕೆಯಾದ ನಂತರ ನಿರ್ಲಕ್ಷ್ಯಕ್ಕೆ ಒಳಪಡುತ್ತಿವೆ. ಅವುಗಳನ್ನು ಸುರಕ್ಷಿತವಾಗಿ ಒಂದೆಡೆ…
ಲೊಕ್ಕನಹಳ್ಳಿ ಬಳಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ; ಅಧಿಕಾರಿಗಳ ವಿರುದ್ಧ ಆಕ್ರೋಶ ಹನೂರು: ಒಂದೆಡೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಶಾಲಾ-ಕಾಲೇಜು…
ನವೀನ್ ಡಿಸೋಜ ೧೮,೫೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿರುವ ರೈತರು; ಹವಾಮಾನ ವೈಪರೀತ್ಯದ ನಡುವೆಯೂ ಕಟಾವು ಕಾರ್ಯ ಚುರುಕು ಮಡಿಕೇರಿ:…
ಚಾಮರಾಜನಗರ: ತೀವ್ರ ಚಳಿಯಿಂದ ತತ್ತರಿಸಿದ್ದ ಜಿಲ್ಲೆಯ ಜನತೆ ಕಳೆದ ೨-೩ ದಿನಗಳಿಂದ ಎದುರಾಗಿರುವ ಮೋಡ ಕವಿದ ವಾತಾವರಣ ಮತ್ತು ಅಲ್ಲಲ್ಲಿ…