ಎಚ್.ಎಸ್.ದಿನೇಶ್‌ಕುಮಾರ್
ಮೈಸೂರಿನಲ್ಲಿ ಪತ್ತೆಯಾಗಿದ್ದ ಘಟಕಕ್ಕೂ ನಂಟು
ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿರುವ ಕಿಂಗ್‌ಪಿನ್ ದಂಪತಿಗಳೇ ಇದರ ರೂವಾರಿಗಳು
೪ ವರ್ಷಗಳ ಹಿಂದೆ ಹೊಸಹುಂಡಿ ಗ್ರಾಮದ ಬಳಿ ತಲೆ ಎತ್ತಿದ್ದ ನಂದಿನಿ ನಕಲಿ ಘಟಕ
ಮೈಸೂರು: ನಕಲಿ ನಂದಿನಿ ತುಪ್ಪ ತಯಾರಿಕೆ ಜಾಲ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಾಲ್ಕು ವರ್ಷಗಳ ಹಿಂದೆ ಇಂತಹುದೇ ಪ್ರಕರಣ ನಗರದಲ್ಲಿ ಪತ್ತೆಯಾಗಿತ್ತು. ಅದೇ ಜಾಲ ಇದೀಗ ಬೆಂಗಳೂರಿನಲ್ಲಿ ನಕಲಿ ತುಪ್ಪ ತಯಾರಿಕೆ ಮಾಡುತ್ತಿತ್ತು ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ನಕಲಿ ತುಪ್ಪ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ತಮಿಳುನಾಡು ಮೂಲದ ಆರೋಪಿಗಳಾದ ಶಿವಕುಮಾರ್ ಹಾಗೂ ರಮ್ಯ ಅವರನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಅವರು ಮೈಸೂರಿನಲ್ಲಿ ನಡೆಸಲಾಗುತ್ತಿದ್ದ ನಕಲಿ ತುಪ್ಪ ತಯಾರಿಕಾ ಘಟಕ ಕೂಡ ನಮ್ಮ ನೇತೃತ್ವದಲ್ಲಿಯೇ ನಡೆಯುತ್ತಿತ್ತು, ಇಲ್ಲಿಗೆ ನಮ್ಮ ತಂಡದವರನ್ನೇ ನೇಮಿಸಿ ತುಪ್ಪ ತಯಾರಿಕೆ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ ಎನ್ನಲಾಗಿದೆ.
೨೦೨೧ರ ಡಿಸೆಂಬರ್ ೧೬ ರಂದು ಚಾಮುಂಡಿ ಬೆಟ್ಟದ ತಪ್ಪಲಿನ ಹೊಸಹುಂಡಿ ಗ್ರಾಮದ ಬಳಿ ನಂದಿನಿ ತುಪ್ಪದೊಂದಿಗೆ ಡಾಲ್ಡಾ ಬೆರೆಸಿ ನಕಲಿತುಪ್ಪ ತಯಾರಿಸುತ್ತಿದ್ದ ಘಟಕದ ಮೇಲೆ ಮಾನವ ಹಕ್ಕುಗಳ ರಕ್ಷಣಾ ವೇದಿಕೆ, ಮೈಮುಲ್ಹಾಗೂ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದರು
ಅಂದು ಲಕ್ಷಾಂತರ ರೂ. ಮೌಲ್ಯದ ನಕಲಿ ತುಪ್ಪವನ್ನು ವಶಕ್ಕೆ ಪಡೆಯಲಾಗಿತ್ತು. ಆ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರುನಡೆಸುತ್ತಿದ್ದು, ಅದಿನ್ನೂ ವಿಚಾರಣಾ ಹಂತದಲ್ಲಿಯೇ ಇದೆ. ಇದೀಗಬೆಂಗಳೂರಿನಲ್ಲಿ ನಕಲಿ ತುಪ್ಪ ತಯಾರಿಕಾ ಘಟಕದ ಮೇಲೆ ದಾಳಿ ನಡೆದಿರುವುದು ರಾಜ್ಯಾದ್ಯಂತ ಸುದ್ದಿಯಾಗಿದೆ.
ಹೊಸಹುಂಡಿ ಗ್ರಾಮದ ಸುಧಾಕರ್ ಎಂಬವರಿಗೆ ಸೇರಿದ ಜಮೀನನ್ನು ಬಾಡಿಗೆಗೆ ಪಡೆದಿದ್ದ ತಮಿಳುನಾಡು ಮೂಲದ ಮುರುಗೇಶ್ ನಕಲಿ ತುಪ್ಪ ತಯಾರಿಕಾ ಘಟಕವನ್ನು ನಡೆಸುತ್ತಿದ್ದನು. ಅವನೊಂದಿಗೆ ಅಶ್ವಿನಿ, ರಾಯಚೂರು ಮೂಲದ ರಾಘವೇಂದ್ರ, ಬೆಂಗಳೂರಿನ ಎಲ್.ಕುಮಾರ್, ಸಂತೋಷ್ ಎಂಬವರು ಅಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲಿ ಏನು ನಡೆಯುತ್ತಿದೆ ಎಂಬುದು ಸ್ಥಳೀಯರಿಗೂ ತಿಳಿದಿರಲಿಲ್ಲ.
ಗೋದಾಮನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದ ಅಧಿಕಾರಿಗಳು ನಕಲಿ ತುಪ್ಪ ತಯಾರಿಕೆಗೆ ಬಳಸುತ್ತಿದ್ದ ಯಂತ್ರಗಳು, ಕವರ್‌ಗಳು, ನಂದಿನಿ ಪೋಸ್ಟ್‌ರ್‌ಗಳು ಹೀಗೆ ಅಲ್ಲಿದ್ದ ಹಲವಾರು ವಸ್ತುಗಳನ್ನು ಜಪ್ತಿ ಮಾಡಿ ಗೋದಾಮಿಗೆ ಬೀಗ ಜಡಿದಿದ್ದರು. ಗೋದಾಮಿನಲ್ಲಿ ಅಸಲಿ ನಂದಿನಿ ತುಪ್ಪದ ಜೊತೆಗೆ ಸಾವಿರಾರು ಕೆಜಿ ಡಾಲ್ಡಾವನ್ನು ದಾಸ್ತಾನಿಡಲಾಗಿತ್ತು. ಡಾಲ್ಡ ಹಾಗೂ ತುಪ್ಪವನ್ನು ಕಾಯಿಸಲು ಯಂತ್ರಗಳು, ನಂದಿನಿ ಹೆಸರನ್ನೇ ಹೋಲುವ ಕವರ್‌ಗಳ ತಯಾರಿಕೆಯ ಯಂತ್ರ ಸ್ಥಳದಲ್ಲಿ ಪತ್ತೆಯಾಗಿದ್ದವು. ಖದೀಮರು ನಕಲಿ ತುಪ್ಪವನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದರು. ನಂದಿನಿ ಏಜೆನ್ಸಿ ಪಡೆದಿದ್ದೇನೆ ಎಂದು ಸುಳ್ಳು ಹೇಳುವ ಮೂಲಕ ಕಡಿಮೆ ದರದಲ್ಲಿ ಹಾಗೂ ಸಾಲದ ರೂಪದಲ್ಲಿ ನಕಲಿ ತುಪ್ಪವನ್ನು ಪೂರೈಕೆ ಮಾಡುತ್ತಿದ್ದರು.
ಇಂತಹ ಅಕ್ರಮಗಳನ್ನು ತಡೆಯಲು ಮೈಮುಲ್‌ನ ವಿಜಿಲೆನ್ಸ್ ತಂಡವನ್ನು ಚುರುಕುಗೊಳಿಸುತ್ತೇವೆ. ಪ್ರತಿ ವಾರಕ್ಕೊಮ್ಮೆ ಎಲ್ಲಾ ಮಿಲ್ಕ್ ಪಾರ್ಲರ್‌ಗಳಿಗೆ ಭೇಟಿ ಕೊಟ್ಟು ಪರಿಶೀಲಿಸಲಾಗುವುದು. ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಪ್ರತಿ ವಾರ ಉತ್ಪನ್ನಗಳನ್ನು ಲ್ಯಾಬ್‌ಗೆ ತಂದು ಪರಿಶೀಲಿಸುತ್ತೇವೆ ಎಂದು ಅಂದು ಅಧಿಕಾರಿಗಳು ತಿಳಿಸಿದ್ದರು.
ಮೈಮರೆತ ಅಧಿಕಾರಿಗಳು: ಆದರೆ, ನಂತರದ ದಿನಗಳಲ್ಲಿ ಇಡೀ ಪ್ರಕರಣವನ್ನು ಅಧಿಕಾರಿಗಳು ಮರೆತುಬಿಟ್ಟರು. ವಿಜಿಲೆನ್ಸ್ ತಂಡ ಎಚ್ಚೆತ್ತುಕೊಳ್ಳದ ಕಾರಣ ಇಂತಹುದೇಪ್ರಕರಣ ಮತ್ತೆ ಬೆಳಕಿಗೆ ಬಂದಿದೆ. ನಂದಿನಿ ತುಪ್ಪಕ್ಕೆ ದೇಶ, ವಿದೇಶಗಳಲ್ಲಿಭಾರೀ ಬೇಡಿಕೆ ಇರುವ ಇಂತಹ ಸಂದರ್ಭದಲ್ಲಿ ಅಸಲಿ, ನಕಲಿ ತುಪ್ಪದ ಮೇಲಾಟದಲ್ಲಿ ಗ್ರಾಹಕರಿಗೆ ಎಲ್ಲಿ ನಕಲಿ ತುಪ್ಪವನ್ನು ಬಳಸುತ್ತಿದ್ದೇವೆಯೋ ಎಂದು ಗೊಂದಲ ಮೂಡುವಂತಾಗಿದೆ. ರೈತರು, ಗ್ರಾಹಕರು ಮೈಮುಲ್‌ಗೆ ಎರಡು ಕಣ್ಣುಗಳಿದ್ದಂತೆ. ಇಬ್ಬರ ವಿಶ್ವಾಸವನ್ನು ಹಾಲು ಒಕ್ಕೂಟಗಳು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಇದೆ ಎಂಬುದನ್ನು ಅಧಿಕಾರಿಗಳು ಮರೆಯಬಾರದು.
ನಕಲಿ ತುಪ್ಪ ಪರೀಕ್ಷೆ ಹೇಗೆ?:
೧. ನಿಮ್ಮ ಅಂಗೈಯಲ್ಲಿ ಒಂದು ಚಮಚ ತುಪ್ಪವನ್ನು ತೆಗೆದುಕೊಂಡು ನಿಧಾನವಾಗಿ ಉಜ್ಜಿಕೊಳ್ಳಿ. ಅದು ದೇಹದ ಉಷ್ಣತೆಗೆ ಪ್ರತಿಕ್ರಿಯಿಸಿ ಕರಗಿದರೆ ಶುದ್ಧ ತುಪ್ಪ. ಅದು ಕರಗದೆ ಘನ ಪದಾರ್ಥವಾಗಿದ್ದರೆ ಕಲಬೆರಕೆಯಾಗಿರುವ ಸಾಧ್ಯತೆ ಹೆಚ್ಚು
೨. ಒಂದು ಪಾರದರ್ಶಕ ಗಾಜಿನ ಬಾಟಲಿಯಲ್ಲಿ, ಸ್ವಲ್ಪ ತುಪ್ಪ ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಅಲ್ಲಾಡಿಸಿ. ಕೆಲವು ನಿಮಿಷಗಳ ನಂತರ ಬಾಟಲಿಯ ಕೆಳಭಾಗದಲ್ಲಿ ಕೆಂಪು ಗೆರೆಗಳು ಕಾಣಿಸಿಕೊಂಡರೆ, ಅದು ಕಲಬೆರಕೆ ತುಪ್ಪ ಎಂದರ್ಥ.
೩. ಸ್ವಲ್ಪ ತುಪ್ಪಕ್ಕೆ ನಾಲ್ಕು ಹನಿ ಅಯೋಡಿನ್ ಸೇರಿಸಿ. ತುಪ್ಪ ನೀಲಿ ಬಣ್ಣಕ್ಕೆ ತಿರುಗಿದರೆ ಅದನ್ನು ಪಿಷ್ಟದೊಂದಿಗೆ ಬೆರೆಸಿದ ನಕಲಿ ತುಪ್ಪ ಎಂದು ಗುರುತಿಸಬೇಕು.
೪. ನಿಮ್ಮ ಕೈಗೆ ಸ್ವಲ್ಪ ತುಪ್ಪ ಹಚ್ಚಿ ಉಜ್ಜಿಕೊಳ್ಳಿ. ಅದು ಮೃದು ಮತ್ತು ನೈಸರ್ಗಿಕ ಪರಿಮಳವನ್ನು ಹೊಂದಿದ್ದರೆ ಅದು ಶುದ್ಧ ತುಪ್ಪ. ಪರಿಮಳ ಬೇಗನೆ ಮಾಯವಾದರೆ ಅದು ಕಲಬೆರಕೆ ಪದಾರ್ಥಗಳ ಮಿಶ್ರಣವಾಗಿರಬಹುದು.
೫. ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ಫ್ರಿಡ್ಜ್ನಲ್ಲಿಡಿ. ಒಂದೇ ಪದರವಾದರೇ ಅದು ಶುದ್ಧ ತುಪ್ಪ. ಎರಡು ಪ್ರತ್ಯೇಕ ಪದರಗಳಲ್ಲಿದ್ದರೆ ಅದು ಕಲಬೆರಕೆ ಎಣ್ಣೆಗಳಿಂದ ಕೂಡಿದ ತುಪ್ಪ.
೬. ತುಪ್ಪವನ್ನು ಬಿಸಿ ಮಾಡಿದಾಗ, ಅದು ಎಣ್ಣೆಯಂತೆ ಹರಿಯುವಂತೆ ಕಾಣಬೇಕು. ಕರಗಿದ ತುಪ್ಪವು ತಿಳಿ ಹಳದಿ ಅಥವಾ ಬಿಳಿ ಬಣ್ಣದಲ್ಲಿದ್ದರೆ, ಅದು ಕೂಡ ಕಲಬೆರಕೆಯ ಸಂಕೇತವಾಗಿದೆ.
ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…
ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…
ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…