ಸಂತ್ರಸ್ತರ ಬದುಕಲ್ಲಿ ಹೊಸ ನಿರೀಕ್ಷೆ; ಶೀಘ್ರದಲ್ಲೇ ನಿವೇಶನ ಒದಗಿಸಲು ಒತ್ತಾಯ
ಸಿದ್ದಾಪುರ: ಕಾವೇರಿ ನದಿ ತೀರದ ಬಫರ್ ಜೋನ್ ಪ್ರದೇಶಗಳನ್ನು ಸರ್ವೆ ಮಾಡಲು ದಿನ ನಿಗದಿಯಾಗಿದ್ದು, ೨೦೧೮-೧೯ರಲ್ಲಿ ಕಾವೇರಿ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡು ಸರ್ಕಾರ ನಿವೇಶನ ನೀಡುತ್ತದೆ ಎಂಬ ಭರವಸೆ ಇಟ್ಟುಕೊಂಡು ಪ್ಲಾಸ್ಟಿಕ್ ಹೊದಿಕೆಯಿಂದ ನಿರ್ಮಿಸಿದ ಶೆಡ್ ಗಳಲ್ಲಿ ಕಳೆದ ಐದು ವರ್ಷಗಳಿಂದ ಜೀವನ ಸಾಗಿಸುತ್ತಿರುವ ಸಂತ್ರಸ್ತರ ನಿವೇಶನದ ನಿರೀಕ್ಷೆಗೆ ಮತ್ತೆ ಜೀವಬಂದಂತಾಗಿದೆ.
ಕಾವೇರಿ ನದಿ ತೀರದ ಬಫರ್ ಜೋನ್ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಪ್ರದೇಶವಾಗಿದ್ದು, ಕಳೆದ ಆರೇಳು ದಶಕಗಳಿಂದ ಸುಮಾರು ೧೭೦ ಕುಟಂಬಗಳು ಇಲ್ಲಿ ಬದುಕು ಕಟ್ಟಿಕೊಂಡಿವೆ. ಇವರಿಗೆ ಪಡಿತರ ಚೀಟಿ, ಮತದಾರ ಗುರುತಿನ ಚೀಟಿ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಪಡೆಯಲು ನಿರಾಪೇಕ್ಷಣಾ ಪತ್ರ ನೀಡಿ, ಕಂದಾಯವನ್ನು ಗ್ರಾಮ ಪಂಚಾಯಿತಿ ನಿಗದಿಪಡಿಸಿದೆ. ಜವಾಹರ್ ರೋಜ್‌ಗಾರ್ ಯೋಜನೆಯಡಿ ಸರ್ಕಾರವೇ ಮನೆಗಳನ್ನು ನಿರ್ಮಿಸಿ ಇವರ ಬದುಕನ್ನು ಅತಂತ್ರಗೊಳಿಸಿದೆ.
ಕರಡಿಗೋಡು ಗ್ರಾಮದ ಸಂತ್ರಸ್ಥರು ೨೦೧೮ರ ಕಾವೇರಿ ನದಿ ಪ್ರವಾಹದ ನಂತರ ಸ್ವಯಂ ಪ್ರೇರಿತರಾಗಿ ತಮಗೆ ನಿವೇಶನ ನೀಡಿದಲ್ಲಿ ಈ ಪ್ರದೇಶವನ್ನು ಬಿಟ್ಟು ಹೋಗುವುದಾಗಿ ತಹಸಿಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಕಂದಾಯ ಇಲಾಖೆಯ ಅಧೀನಕ್ಕೆ ಒಳಪಟ್ಟ ಕೊಡಗು- ಶ್ರೀರಂಗಪಟ್ಟಣ ಸರ್ವೆ ನಂ ೨೮/೨ರಲ್ಲಿ ನಿವೇಶನ ಒದಗಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಈ ಅರ್ಜಿಯು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದ್ದರೂ ಅದನ್ನು ಹೊರತುಪಡಿಸಿ ಕಸ್ತೂರಿ ರಂಗನ್ ವರದಿಗೆ ಒಳಪಡುವ ಅರಣ್ಯ ಪ್ರದೇಶದೊಳಗೆ ಜಾಗ ಗುರುತಿಸಲಾಗಿತ್ತು. ಆದರೆ ಇಂದಿಗೂ ಈ ಕುರಿತು ಯಾವುದೇ ಬೆಳ ವಣಿಗೆ ಆಗದೆ ಕಳೆದ ೬ ವರ್ಷಗಳಿಂದ ಸಂತ್ರಸ್ಥರು ಸೂರು ಸಿಗುವ ಭರವಸೆ ಯಲ್ಲೇ ದಿನದೂಡುವಂತಾಗಿದೆ.
ಇದನ್ನು ಓದು : ಕಾಡುಹಂದಿಗಳ ಕಾಟದಿಂದ ಬೇಸತ್ತ ರೈತರು
ಇದೀಗ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ ಗ್ರಾಮದ ಕಕ್ಕಟಕಾಡು, ಗುಹ್ಯ, ಕೂಡುಗದ್ದೆ ಹಾಗೂ ಕರಡಿಗೋಡು ಗ್ರಾಮಗಳ ಕಾವೇರಿ ನದಿ ತೀರದ ಬಫರ್ ಜೋನ್ ಪ್ರದೇಶಗಳನ್ನು ಸರ್ವೆ ಮಾಡಲು ವಿರಾಜಪೇಟೆ ತಹಸಿಲ್ದಾರ್ ಪ್ರವೀಣ್, ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಭೂಮಾಪನ ಅಧಿಕಾರಿ ಸೂರ್ಯಪ್ರಕಾಶ್ ಹಾಗೂ ರಘುವೀರ್ ಅವರ ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖೆ ಸಿಬ್ಬಂದಿಯೊಂದಿಗೆ ಅ.೨೭ರಂದು ಸರ್ವೆ ಕಾರ್ಯ ನಡೆಯಲಿದೆ. ಇದರಿಂದ ಪ್ರಸ್ತುತ ನದಿತೀರದಲ್ಲಿ ವಾಸಿಸುತ್ತಿರುವ ಸಂತ್ರಸ್ತರಲ್ಲಿ ಬಫರ್ ಜೋನ್ ಒತ್ತುವರಿದಾರರ ಮಾಹಿತಿ ಸಿಗಲಿದ್ದು, ನಿವೇಶನ ಒದಗಿಸಲು ಸಹಕಾರಿ ಆಗಲಿದೆ. ಆ ಮೂಲಕ ಸಂತ್ರಸ್ತರಲ್ಲಿ ನಿವೇಶನದ ಆಶಾಭಾವನೆ ಮತ್ತೆ ಚಿಗುರೊಡೆದಿದೆ.
” ಪ್ರವಾಹ ಸಂತ್ರಸ್ತರ ನಿವೇಶನದ ಬೇಡಿಕೆಯನ್ನು ಮುಂದಿಟ್ಟು ೯ ದಿನಗಳ ಕಾಲ ಅಹೋರಾತ್ರಿ ಹೋರಾಟ ನಡೆಸಿದರೂ ಸರ್ಕಾರ, ಯಾವ ಜನ ಪ್ರತಿನಿಧಿಗಳೂ ಸ್ಪಂದಿಸಿಲ್ಲ. ಹೀಗಾಗಿ ಸಮಸ್ಯೆಗೆ ಪರಿಹಾರವೂ ಸಿಕ್ಕಿಲ್ಲ. ಶಾಸಕರು, ಸರ್ಕಾರಗಳು ಬದಲಾದರೂ ನಮ್ಮ ನಿವೇಶನದ ಕನಸು ಮರೀಚಿಕೆಯಾಗಿದೆ.ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿಯೇ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕು.”
-ಯಮುನಾ, ನಿವೇಶನ ಹೋರಾಟ ಸಮಿತಿ ಅಧ್ಯಕ್ಷೆ
” ೫ ವರ್ಷಗಳಿಂದ ನಿವೇಶನದ ಭರವಸೆ ಇಟ್ಟುಕೊಂಡು ಪ್ಲಾಸ್ಟಿಕ್ ಶೆಡ್‌ಗಳಲ್ಲಿ ಬದುಕು ದೂಡುತ್ತಿದ್ದೇವೆ. ಮಳೆಗಾಲದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ನೀಡುವ ಭರವಸೆಗಳಿಂದ ಒಂದಷ್ಟು ಆಶಾಭಾವನೆ ಮೂಡಿದರೂ ನಂತರ ಅದು ಭರವಸೆಯಾಗಿಯೇ ಉಳಿದಿದೆ. ಸಂತ್ರಸ್ಥರು ಹೋರಾಟದ ಮೂಲಕ ನಿವೇಶನ ಪಡೆಯಬೇಕಾದ ಅವಶ್ಯಕತೆ ಇದೆ.”
-ಹರೀಶ, ಕಕ್ಕಟಕಾಡು ಪ್ರವಾಹ ಸಂತ್ರಸ್ತ
-ಕೃಷ್ಣ ಸಿದ್ದಾಪುರ
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…