ಭಾರತಿ ಸಜ್ಜನ್
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ವೀಕ್ಷಿಸಲು, ಸಂಭ್ರಮಿಸಲು ಬೇರೆ ಬೇರೆ ರಾಜ್ಯಗಳಿಂದ ಮಾತ್ರವಲ್ಲದೆ, ದೇಶ- ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಆದರೆ, ಮೈಸೂರಿನಲ್ಲೇ ನೆಲೆಸಿರುವ ಕೆಲವರು ದಸರಾ ಮಹೋತ್ಸವವನ್ನು ಹಾಗೂ ಅಂಬಾರಿ ಮೆರವಣಿಗೆಯನ್ನು ನೋಡಿಲ್ಲ ಎಂದರೆ ನಂಬುತ್ತೀರಾ? ಹೌದು, ಮೈಸೂರಿನಲ್ಲಿದ್ದುಕೊಂಡು ಹಾಗೂ ಮೈಸೂರು ಜಿಲ್ಲೆಯವರೇ ಆಗಿದ್ದು ನಾಡ ಹಬ್ಬ ದಸರಾವನ್ನು ಕಣ್ತುಂಬಿಸಿಕೊಳ್ಳದ ಕೆಲ ವ್ಯಕ್ತಿಗಳ ಅಭಿಪ್ರಾಯ ಇಲ್ಲಿದೆ.
ವ್ಯಾಪಾರದಿಂದಾಗಿ ದಸರಾ ನೋಡಲು ಹೋಗಿಲ್ಲ: ಮೈಸೂರು ಮೃಗಾಲಯದ ರಸ್ತೆಯಲ್ಲಿ ಬೊಂಬೆಗಳ ವ್ಯಾಪಾರವನ್ನು ಮಾಡುತ್ತೇನೆ. ದಸರಾ ಸಮಯದಲ್ಲಿ ಮೈಸೂರಿಗೆ ಸಾಕಷ್ಟು ಜನ ಪ್ರವಾಸಿಗರು ಬರುತ್ತಾರೆ. ವರ್ಷಪೂರ್ತಿ ದುಡಿಯುವ ಹಣವನ್ನು ದಸರಾ ದಿನಗಳಲ್ಲಿ ದುಡಿಯಬಹುದು ಎಂಬ ಉದ್ದೇಶದಿಂದ ದಸರಾ ಹಬ್ಬದ ದಿನಗಳಲ್ಲಿ ಅಂಗಡಿಯನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಕೆಲಸದವರನ್ನು ನೇಮಿಸಿಕೊಂಡಿಲ್ಲ. ನನ್ನದೊಂದು ಚಿಕ್ಕ ಅಂಗಡಿ. ನಾನೊಬ್ಬನೇ ಅಂಗಡಿಯನ್ನು ನೋಡಿಕೊಳ್ಳಬೇಕು. ಹಾಗಾಗಿ ಅಂಬಾರಿ ಉತ್ಸವದ ದಿನದಂದು ವ್ಯಾಪಾರ ಮಾಡುವುದರಿಂದ ದಸರಾ ನೋಡಲು ಹೋಗಿಲ್ಲ ಎಂದು ಹೇಳುತ್ತಾರೆ ಗೊಂಬೆ ವ್ಯಾಪಾರಿ ೬೮ ವರ್ಷದ ಮಂಜುನಾಥ್ ಅವರು.
ದಸರಾ ತೋರಿಸುವವರು ಯಾರೂ ಇರಲಿಲ್ಲ: ನಾನು ದಿನ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತೇನೆ. ಒಂದೊಂದು ದಿನದ ಕೂಲಿಯೂ ನನಗೆ ಮುಖ್ಯ. ಮನೆ, ಮಕ್ಕಳಿಗಾಗಿ ದುಡಿಯುತ್ತಿದ್ದ ನಾನು, ದಸರಾ ದಿನಗಳಲ್ಲಿಯೂ ಕೆಲಸಗಳಿಗೆ ಹೋಗುತ್ತಿದ್ದೆ. ಜೊತೆಗೆ ಮೈಸೂರಿಗೆ ಕರೆದುಕೊಂಡು ಹೋಗಿ ದಸರಾ ತೋರಿಸುವವರು ಯಾರೂ ಇರಲಿಲ್ಲ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ಟಿವಿಯಲ್ಲಿ ತೋರಿಸುವುದನ್ನು ನೋಡಿ ಖುಷಿ ಪಡುತ್ತಿದ್ದೇನೆ ಎನ್ನುತ್ತಾರೆ ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿಯ ೬೫ ವರ್ಷದ ಮಹದೇವಮ್ಮ ಅವರು.
ಆಡಂಬರದ ಜೀವನ ಇರಲಿಲ್ಲ: ನಾನೊಬ್ಬ ಬಡ ರೈತ. ಮನೆಯಲ್ಲಿನ ಬಡತನದಿಂದಾಗಿ ಯಾವುದೇ ಆಡಂಬರದ ಜೀವನ ಇರಲಿಲ್ಲ. ಯುವಕನಾಗಿದ್ದಾಗ ಕಷ್ಟಪಟ್ಟು ದುಡಿಯುವುದೊಂದೇ ನನಗೆ ಗೊತ್ತಿದ್ದು. ದಸರಾ ಹಬ್ಬವನ್ನು ಮನೆಯಲ್ಲಿಯೇ ಸರಳವಾಗಿ ಆಚರಿಸುತ್ತಿದ್ದೆವು. ಜನಜಂಗುಳಿಯ ಮಧ್ಯೆ ಹೋಗಿ ದಸರಾ ನೋಡುವ ಆಸಕ್ತಿಯೂ ಇರಲಿಲ್ಲ. ದಸರಾ ಹಬ್ಬದ ದಿನದಂದು ಹೊಲಕ್ಕೆ ಹೋಗಿ ದುಡಿಯುತ್ತೇನೆ. ಆದ್ದರಿಂದ ಮನೆಯಲ್ಲಿಯೇ ಕುಳಿತು ಟಿವಿಯಲ್ಲಿ ತೋರಿಸುವ ದಸರಾ ನೋಡಿ ಸುಮ್ಮನಾಗುತ್ತೇನೆ ಎನ್ನುತ್ತಾರೆ ನಂಜನಗೂಡಿನ ೭೦ ವರ್ಷದ ಮಹದೇವಪ್ಪ ಅವರು.
ದಸರಾ ತೋರಿಸುವ ಮನಸ್ಸು ನನ್ನ ಗಂಡನಿಗಿರಲಿಲ್ಲ: ಮದುವೆಯಾದ ನಂತರ ಸುಮಾರು ೪೦ ವರ್ಷಗಳಿಂದ ಮೈಸೂರಿನ ಹೂಟಗಳ್ಳಿಯಲ್ಲಿ ವಾಸವಾಗಿದ್ದೇನೆ. ಮದುವೆಯಾದ ಹೊಸದರಲ್ಲಿ ನಮ್ಮನ್ನು ಆಚೆ ಕರೆದುಕೊಂಡು ಹೋಗಿ ದಸರಾ ಹಾಗೂ ಅಂಬಾರಿ ಉತ್ಸವವನ್ನು ತೋರಿಸುವ ಮನಸ್ಸು ನನ್ನ ಗಂಡನಿಗೆ ಇರಲಿಲ್ಲ. ಮಕ್ಕಳ ಜೊತೆಗೆ ಹೋಗಿ ನೋಡಬೇಕೆಂದರೆ, ಅಷ್ಟೊಂದು ಜನರ ಮಧ್ಯೆ ಹೋಗುವುದು ತುಂಬಾ ಕಷ್ಟ. ಮಕ್ಕಳು ಎಲ್ಲಾದರೂ ತಪ್ಪಿಸಿಕೊಂಡರೆ ಎಂಬ ಭಯದಿಂದ ಸುಮ್ಮನಾಗುತ್ತಿದ್ದೆ. ತದನಂತರ ಮಕ್ಕಳು ವಿದ್ಯಾಭ್ಯಾಸ, ಕೆಲಸ ಎಂದು ಬೇರೆ ಬೇರೆ ಊರುಗಳಲ್ಲಿ ಇರುತ್ತಿದ್ದರು. ಅಕ್ಕ-ಪಕ್ಕದ ಮನೆಯವರೊಂದಿಗೆ ಹೋಗೋಣ ಎಂದರೆ ಮನೆಯಲ್ಲಿ ಒಪ್ಪುತ್ತಿರಲಿಲ್ಲ. ಹಾಗಾಗಿ ಇದುವರೆಗೂ ದಸರಾ ನೋಡಲು ಸಾಧ್ಯವಾಗಿಲ್ಲ ಎನ್ನುತ್ತಾರೆ ೬೨ ವರ್ಷದ ವಿಜಯಮ್ಮ ಅವರು.
ಅದೊಂದು ಮರೆಯದ ಕ್ಷಣ: ನಂಜನಗೂಡಿನ ಜೆರಾಕ್ಸ್ ಸೆಂಟರ್ವೊಂದರ ಮಾಲೀಕರಾದ ಸುಧಾ ಮತ್ತು ರಮೇಶ್ ಅವರು ೧೯೮೯ರಲ್ಲಿ ಮದುವೆಯಾಗಿದ್ದು, ಅದೇ ವರ್ಷ ನಾಡ ಹಬ್ಬ ದಸರಾವನ್ನು ನೋಡಲು ತೆರಳಿದ್ದರು. ಅರಮನೆ ಆವರಣದಲ್ಲಿ ಕುಳಿತು ನೋಡುವ ಅವಕಾಶ ಸಿಕ್ಕಿತ್ತು. ೭೫೦ ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಆನೆ ಹೊತ್ತಿರುವುದನ್ನು ತುಂಬಾ ಹತ್ತಿರದಿಂದ ನೋಡಿ ಕಣ್ತುಂಬಿಕೊಂಡೆವು. ಆ ಚಿನ್ನದ ಅಂಬಾರಿಯ ವೈಭವ ಹಾಗೂ ಅದರೊಳಗೆ ಕುಳಿತಿರುವ ಚಾಮುಂಡೇಶ್ವರಿ ತಾಯಿಯನ್ನು ಭಕ್ತಿಯಿಂದ ನೋಡುವ ಬಗೆಯೇ ಅದ್ಭುತ. ಅದೊಂದು ಜೀವನದ ಅಮೂಲ್ಯವಾದ ಕ್ಷಣ. ಜೊತೆಗೆ ಅಂದು ನಡೆದ ಪಂಜಿನ ಕವಾಯತು ನೋಡಲು ಹೋಗಿದ್ದೆವು. ಅದೊಂದು ಮರೆಯದ ಕ್ಷಣವಾಗಿದೆ ಎಂದು ಸುಧಾ ಮತ್ತು ರಮೇಶ್ ಅವರು ಮೆಲುಕು ಹಾಕಿದರು.
ದಂಪತಿನೋಡಿದ ಮೊದಲದಸರಾ, ಒಬ್ಬರಿಗೊಬ್ಬರು ಕೈಕೈ ಹಿಡಿದು ದಸರಾ ನೋಡಿದೆವು:
ಮೈಸೂರು: ನಾವು ೧೯೯೮ರಲ್ಲಿ ಮದುವೆಯಾದೆವು. ಅದೇ ವರ್ಷದಲ್ಲಿ ಮೊದಲ ದಸರಾ ಮಹೋತ್ಸವವನ್ನು ಕಣ್ತುಂಬಿಕೊಂಡೆವು. ಆಗ ದಸರಾ ಮೆರವಣಿಗೆ ಬರುವ ರಸ್ತೆ ಬದಿಯಲ್ಲಿ ಕುರ್ಚಿಗಳ ವ್ಯವಸ್ಥೆ ಮಾಡುತ್ತಿದ್ದರು. ಅದಕ್ಕೆ ೧೦೦ರಿಂದ ೧೫೦ ರೂ.ಗಳಿಗೆ ಟಿಕೆಟ್ ಇರುತ್ತಿತ್ತು. ಆ ಟಿಕೆಟ್ಗಳನ್ನು ತೆಗೆದುಕೊಂಡು ನಾನು ಮತ್ತು ನನ್ನ ಹೆಂಡತಿ ದಸರಾ ನೋಡಲು ಹೋದೆವು. ೭೫೦ ಕೆಜಿ ತೂಕವಿರುವ ಚಿನ್ನದ ಅಂಬಾರಿಯನ್ನು ಹತ್ತಿರದಿಂದ ನೋಡಬೇಕು ಎಂಬ ಉದ್ದೇಶದಿಂದ ಮೆರವಣಿಗೆ ಪ್ರಾರಂಭವಾಗುವ ಮುನ್ನವೇ, ಅಂದರೆ ಬೆಳಿಗ್ಗೆಯೇ ಹೋಗಿ ಸಿಟಿ ಬಸ್ ನಿಲ್ದಾಣದ ಹಿಂಭಾಗದ ರಸ್ತೆ ಬದಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದ ಕುರ್ಚಿಗಳಲ್ಲಿ ಮುಂದಿನ ಸಾಲು ಹಿಡಿದು ಕುಳಿತೆವು. ಸಮಯ ಕಳೆದಂತೆ ಜನ ಕಿಕ್ಕಿರಿದು ಸೇರುತ್ತಿದ್ದರು. ಮೈಸೂರು ಅರಮನೆಯಿಂದ ಅಂಬಾರಿ ಮೆರವಣಿಗೆ ಹೊರಡುವ ಮುನ್ನ ಪರಿಶೀಲನೆಗಾಗಿ ಪೊಲೀಸ್ ಜೀಪ್ಗಳು ಬಂದಂತೆ ಮೆರವಣಿಗೆ ಬಂತು ಎಂದು ಜನ ಕೇಕೆ, ಶಿಳ್ಳೆ ಹೊಡೆಯುತ್ತಿದ್ದರು. ಆಗ ನಮ್ಮ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿತ್ತು. ಮಧ್ಯಾಹ್ನದ ಹೊತ್ತಿಗೆ ನಾವು ಕುಳಿತಿದ್ದ ಸ್ಥಳದ ಮುಂಭಾಗ ಕಲಾತಂಡಗಳು ಬರಲು ಪ್ರಾರಂಭಿಸಿದವು. ಕುರ್ಚಿಯಲ್ಲಿ ಕುಳಿತಿದ್ದ ಜನ ಎದ್ದು ಸಂಭ್ರಮಿಸುತ್ತಿದ್ದರು. ಜಿಲ್ಲಾವಾರು ಕಲಾತಂಡಗಳು, ಸ್ತಬ್ಧ ಚಿತ್ರಗಳ ಮೆರವಣಿಗೆ ಬರುವಾಗ ಇದು ನಮ್ಮ ಜಿಲ್ಲೆಯದ್ದು, ಇದು ನಮ್ಮ ಜಿಲ್ಲೆಯದ್ದು ಎಂದು ಕೂಗುತ್ತಿದ್ದರು. ಇದರ ಮಧ್ಯೆ ತಪ್ಪಿಸಿಕೊಳ್ಳಬಾರದೆಂದು ಒಬ್ಬರಿಗೊಬ್ಬರು ಕೈಹಿಡಿದುಕೊಂಡು ನೋಡುತ್ತಿದ್ದೆವು. ನಮಗೆ ಕುತೂಹಲ ಮೂಡಿಸಿದ್ದು ಚಿತ್ರದುರ್ಗದ ಮದಕರಿ ನಾಯಕ ಮತ್ತು ಒನಕೆ ಓಬವ್ವನ ಸ್ತಬ್ಧ ಚಿತ್ರ ಹಾಗೂ ಹಾಸನದ ಶಿಲಾಬಾಲಿಕೆಯರಂತೆ ಅಲಂಕರಿಸಿಕೊಂಡು ಶಿಲೆಗಳ ರೂಪದ ಭಂಗಿಗಳಲ್ಲಿ ನಿಂತಿದ್ದ ಮಹಿಳೆಯರು. ನಾನು ಮತ್ತು ರಾಧಾ ಇಬ್ಬರೂ ತುಂಬಾ ಕುತೂಹಲದಿಂದ ವೀಕ್ಷಿಸುತ್ತಿದ್ದೆವು. ತದನಂತರ, ಆ ಘಳಿಗೆಗಾಗಿ ಕಾದಿದ್ದ ಸಮಯ ಬಂದೇ ಬಿಟ್ಟಿತು. ೭೫೦ ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತ ಆನೆಯ ಗಂಭೀರ ನಡಿಗೆ ಮತ್ತು ಅಂಬಾರಿಯ ಒಳಗೆ ಕುಳಿತಿದ್ದ ನಾಡ ದೇವತೆ ಚಾಮುಂಡೇಶ್ವರಿ ದೇವಿಯನ್ನು ನೋಡಿ ಆ ಕ್ಷಣಕ್ಕೆ ನಮಗೆ ಆತ್ಮತೃಪ್ತಿ, ಧನ್ಯತಾ ಭಾವ, ಜೀವನವೇ ಸಾರ್ಥಕವಾಯಿತು ಎಂಬ ಮನೋಭಾವ ಮೂಡಿತು. ಅಂದು ನೋಡಿದ ದಸರಾ ಇಂದಿಗೂ ನೆನಪಿಸಿಕೊಂಡರೆ ಕಣ್ಮುಂದೆ ಬರುತ್ತದೆ ಎನ್ನುತ್ತಾರೆ ವಿಜಯನಗರದ ಕೃಷ್ಣಮೂರ್ತಿ ಹಾಗೂ ರಾಧಾ ದಂಪತಿ.
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ನಡೆಯಲಿರುವ…
ಮೈಸೂರು ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬೇರೆ ಊರುಗಳಿಂದ ಪ್ರತಿನಿತ್ಯ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಆದರೆ ಆಟೋ ಚಾಲಕರು ಪ್ರಯಾಣಿಕರಿಂದ ಮನಸೋ…
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಉತ್ತಮ ಮಳೆ ಅನ್ನದಾತರಲ್ಲಿ ಹೊಸ ಆಶಾಭಾವ ಮೂಡಿಸಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ…
ಮೈಸೂರು: ನಾಡಿನಾದ್ಯಂತ ಆಯುಧ ಪೂಜೆಯ ಸಂಭ್ರಮ ಮನೆಮಾಡಿದೆ. ನವರಾತ್ರಿ ಉತ್ಸವದ ಅಂಗವಾಗಿ ಜನರು ತಮ್ಮ ಬದುಕಿಗೆ ಆಧಾರವಾಗಿರುವ ಉಪಕರಣಗಳು, ಯಂತ್ರಗಳು…
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಅರಮನೆಯ ಆಯುಧ ಪೂಜೆಗೆ ವಿಶೇಷ ಸ್ಥಾನವಿದೆ. ರಾಜವಂಶದ ಪರಂಪರೆ ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ…
ರಾಯಚೂರು ಜಿಯ ಐತಿಹಾಸಿಕ ಪಟ್ಟಣ ಎಂದೇ ಗುರುತಿಸಿಕೊಂಡಿರುವ ಮಸ್ಕಿಯ ಶಿಲಾಶಾಸನ ಸ್ಥಳಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಅಶೋಕನ ಹಿಂದಿನ…