Andolana originals

ಧರ್ಮ ಸಾಮರಸ್ಯದ ತಾಣ ಡೋರನಹಳ್ಳಿ

ಡಾ.ಕುಪ್ನಳ್ಳಿ ಎಂ.ಭೈರಪ್ಪ

ಸೌಹಾರ್ದಯುತ ತಾಣವೊಂದು ಸಾಮರಸ್ಯವನ್ನು ಸಾಧಿಸಿಕೊಳ್ಳುವ ಹಿಂದಣದತ್ತ ಹಾಗೇ ಕಣ್ಣು ಹಾಯಿಸಿದರೆ, ಭೂಮಿ ತೂಕದ ಪ್ರೀತಿಯನ್ನು ಎದೆಯಲ್ಲಿ ಹೊತ್ತು ನಿರ್ಭೀತರಾಗಿ ಮುನ್ನಡೆದ ಕಾರುಣ್ಯಪೂರ್ಣ ನುಡಿಕಾರರ ದರ್ಶನವಾಗುತ್ತದೆ. ನಿಸ್ವಾರ್ಥ ನೆಲಕಾಯಕ ಮಾಡಿದ ಚೇತನಗಳ ಮೂಲಕ ನೆಲದ ತುಂಬ ಸಾಮರಸ್ಯದ ತಾಣಗಳು ಮೈದಾಳಿ ಕೊಂಡಿರುವುದು ಚಾರಿತ್ರಿಕವಾದ ಸಂಗತಿ. ಅಂತಹ ತಾಣಗಳಲ್ಲಿ ಡೋರನಹಳ್ಳಿಯೂ ಒಂದಾಗಿದೆ.

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಡೋರನ ಹಳ್ಳಿಯು ಜಿಲ್ಲಾ ಕೇಂದ್ರದಿಂದ ೪೩ ಕಿ.ಮೀ. ಅಂತರದಲ್ಲಿದೆ. ಈ ಊರು ವಿಶ್ವಪ್ರಸಿದ್ಧ ಸಂತ ಶ್ರೇಷ್ಠರಾದ ಅಂತೋನಿಯವರ ಆರಾಧನಾ ತಾಣವಾಗಿಯೂ ಜನಸಾಮರಸ್ಯದ ನೆಲೆಯಾಗಿಯೂ ರೂಪುಗೊಂಡಿದ್ದೇ ಒಂದು ಮಹೋನ್ನತ ಕಥನ.

ಸಂತ ಅಂತೋನಿಯವರು ಮೂಲತಃ ಪೋರ್ಚುಗಲ್ ದೇಶದವರು. ಇವರು ಜನಿಸಿದ್ದು ೧೧೯೫ರ ಆಗಸ್ಟ್ ೧೫ರಂದು ಒಂದು ಶ್ರೀಮಂತ ಕುಟುಂಬದಲ್ಲಿ; ಆದರೆ ದುಡಿದದ್ದು ಬಡಜನರ ಏಳಿಗೆಗಾಗಿ. ಸಂತ ಅಂತೋನಿಯವರು ಜನರ ನಡುವೆ ಇದ್ದುದು ಕೇವಲ ೩೫ ವರ್ಷಗಳು ಮಾತ್ರವೇ, ಆದರೆ ಅವರು ಮಾಡಿದ ಸೇವೆ, ತೋರಿದ ಕರುಣೆ ಹಾಗೂ ಸಾಧಿಸಿದ ಸಿದ್ಧಿಗಳು ಇಂದಿಗೂ ಆದರಣೀಯ.

ಜಾನಪದ ದಂತಕಥೆ: ಐತಿಹ್ಯ, ಸ್ಥಳೀಯ ಪುರಾಣ ಮೊದಲಾದ ದಾಖಲಾತಿಗಳ ಪ್ರಕಾರ, ಕ್ರಿ.ಶ. ೧೮೦೦ರ ಆಚೀಚೆಯ ಆ ದಿನಗಳಲ್ಲಿ ಡೋರನಹಳ್ಳಿಯ ರೈತನೊಬ್ಬ ಹೊಲ ಉಳುತ್ತಿರುವಾಗ ಆತನ ನೇಗಿಲಿಗೆ ಏನೋ ಸಿಲುಕಿ  ದಂತಾಯಿತು. ಆ ವಸ್ತುವನ್ನು ಕೈಗೆತ್ತಿಕೊಂಡು ಪರೀಕ್ಷಿಸಲಾಗಿ ಅದೊಂದು ಮನುಷ್ಯಾಕೃತಿಯ ಮರದ ಗೊಂಬೆಯಾಗಿತ್ತು. ಸಂಜೆ ಆ ಗೊಂಬೆ ರೈತನೊಂದಿಗೇ ಮನೆಗೆ ತೆರಳಿ ಆತನ ಮುಗ್ಧ ಮಕ್ಕಳ ಕೈಸೇರಿತು. ಅದೇ ರಾತ್ರಿ ಆ ರೈತನ ಕನಸಿನಲ್ಲಿ ಸನ್ಯಾಸಿಯೊಬ್ಬ ದರ್ಶನ ನೀಡಿ ಹೊಲದಲ್ಲಿ ಸಿಕ್ಕಿದ ಆ ಗೊಂಬೆ ತನ್ನ ಪ್ರತಿರೂಪವೆಂದೂ ಅದನ್ನು ಅಪಮಾನಿಸಬಾರದೆಂದೂ ನುಡಿದು, ರೈತನಿಗೆ ಎಲ್ಲ ಒಳಿತನ್ನೂ ಹರಸಿದಂತಾಯಿತು.

ಇದೇ ರೈತನು ಕೆಲವು ವರ್ಷಗಳ ನಂತರ ತನ್ನ ಹೊಲದಲ್ಲಿನ ಪ್ರತಿಮೆಯ ವಸ್ತ್ರ ವಿನ್ಯಾಸವನ್ನೇ ಹೋಲುವ ಉಡುಪು ತೊಟ್ಟ ಪಾದ್ರಿಯೊಬ್ಬರನ್ನು ಮೈಸೂರಿನಲ್ಲಿ ಕಾಣುತ್ತಾನೆ. ಅವರು ರೆವರೆಂಡ್ಫಾದರ್ ಎಸ್.ಡಿ’ಸಿಲ್ವಾ ಆಗಿದ್ದು, ಅವರ ಬಳಿ ಹೋಗಿ ತನ್ನ ಹೊಲದಲ್ಲಿ ಸಿಕ್ಕಿದ ಮೂರ್ತಿಯ ಬಗ್ಗೆ ತಿಳಿಸುತ್ತಾನೆ. ಅಚ್ಚರಿಗೊಂಡ ಕ್ರೈಸ್ತ ಪಾದ್ರಿಯವರು ಆ ರೈತನ ಕೋರಿಕೆಯ ಮೇರೆಗೆ ಡೋರನಹಳ್ಳಿಗೆ ಬಂದು ಹದಿಮೂರು ಅಂಗುಲ ಎತ್ತರದ ಆ ಪ್ರತಿಮೆಯನ್ನು ಪರಿಶೀಲಿಸುತ್ತಾರೆ. ಸೂಕ್ಷ್ಮವಾಗಿ ಗಮನಿಸಿದಾಗ ಆ ಪ್ರತಿಮೆ ಫ್ರಾನ್ಸಿಸ್ಕನ್ ಧರ್ಮ ಪ್ರಚಾರಕ ಸಂಸ್ಥೆಯ ಸಂತ ಅಂತೋನಿಯ ಪ್ರತಿರೂಪವೆಂದು ಅರಿವಾಗುತ್ತದೆ. ಆ ಪ್ರತಿಮೆ ಸಿಕ್ಕಿದ ಜಾಗದಲ್ಲಿ ರೈತ ಮಂಟಪವೊಂದನ್ನು ನಿರ್ಮಿಸುತ್ತಾರೆ. ಮುಂದೆ ಅದು ಸಂತ ಅಂತೋನಿಯವರ ಪುಣ್ಯಕ್ಷೇತ್ರವಾಗಿ ರೂಪುಗೊಳ್ಳುತ್ತದೆ. ಕ್ರೈಸ್ತತತ್ವಗಳ ಪ್ರಚಾರದ ಹಿಂದಿನ ಉದ್ದೇಶ ಏನೇ ಇದ್ದರೂ, ಕ್ರೈಸ್ತ ಮಿಷನರಿಗಳು ಮಾಡಿದ ಜನಮುಖಿಯಾದ ಸಾಂಸ್ಕೃತಿಕ ಸೇವಾ ಕ್ರಾಂತಿಯು ಮಹತ್ವಪೂರ್ಣವಾದುದು.

ಪ್ರತಿ ವರ್ಷ ಜೂ.೫ರಿಂದ ೧೩ರವರೆಗೆ ಡೋರನಹಳ್ಳಿಯಲ್ಲಿ ಜಾತ್ರೆಯೇ ನಡೆಯುತ್ತದೆ. ಕೊನೆಯ ದಿನ ಅಂದರೆ ಜೂ.೧೩ರಂದು ಸಂತ ಅಂತೋನಿಯವರ ಸ್ಮರಣಾರ್ಥ ದೊಡ್ಡಜಾತ್ರೆ ನಡೆಯುತ್ತದೆ. ವಿವಿಧ ಊರುಗಳಿಂದ ಎತ್ತಿನ ಗಾಡಿಗಳಲ್ಲಿ ಒಂದು ವಾರಮುಂಚಿತವಾಗಿ ಬಂದು ಜಾತ್ರೆ ಮುಗಿಸಿಕೊಂಡು ಹೋಗುವುದು ವಿಶೇಷವಾದ ಪದ್ಧತಿಯಾಗಿದೆ. ಗದ್ದೆ ಹೊಸಹಳ್ಳಿ, ಆಯರಹಳ್ಳಿ, ಹಾರೋಹಳ್ಳಿ, ಚೌಕಹಳ್ಳಿ, ಬಸವರಾಜಪುರ, ಲಾಲಂದೇವನಹಳ್ಳಿ, ಕಂತೇನಹಳ್ಳಿ, ಮೂಡಲ ಕೊಪ್ಪಲು, ಮಾರ್ಚಹಳ್ಳಿ, ಮೂಲೆಪಟ್ಲು, ಮಲ್ಲಹಳ್ಳಿ, ಕಲ್ಲಹಳ್ಳಿ, ಹುಸೇನ್‌ಪುರ, ಹುಸೇನ್‌ಪುರ ಕಾವಲ್ ಮೊದಲಾದ ಸುತ್ತಮುತ್ತಲ ಗ್ರಾಮಗಳ ಜನರು ಧರ್ಮಭೇದವಿಲ್ಲದೆ, ಈ ಜಾತ್ರೆಯಲ್ಲಿ ಬಹು ಶ್ರದ್ಧಾಭಕ್ತಿಗಳಿಂದ ಪಾಲ್ಗೊಳ್ಳುತ್ತಾರೆ.

ಜಾತ್ರೆಯಲ್ಲಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಯವರೂ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮೊದಲಾದ ರಾಜ್ಯಗಳ ಜನರು ಮಾತ್ರವಲ್ಲದೆ ಫ್ರಾನ್ಸ್, ಪೋರ್ಚುಗಲ್, ಇಟಲಿ, ಅಮೆರಿಕ ಮೊದಲಾದ ವಿದೇಶಗಳವರೂ ಭಾಗವಹಿಸುತ್ತಾರೆ. ರಾತ್ರಿ ಹೊತ್ತು ನಡೆಯುವ ರಥೋತ್ಸವದ್ದೇ ಒಂದು ವಿಶೇಷ. ಸಾಲಂಕೃತವಾಗಿ ರೂಪುಗೊಂಡು ಸಂತ ಅಂತೋನಿಯವರ ಮೂರ್ತಿ ಹೊತ್ತು ಡೋರನಹಳ್ಳಿಯ ಬೀದಿಬೀದಿಯಲ್ಲಿ ಸಾಗಿಬರುವ ರಥವು ಅತ್ಯಾಕರ್ಷಕ. ಬಹುಜನಾಂಗದವರೂ, ಬಹುದೇಶಿಕರೂ, ಬಹುರಾಜಿಕರೂ, ಬಹುಮತೀಯರೂ ಪೂಜ್ಯತೆಯಿಂದ ಕಣ್ತುಂಬಿಕೊಳ್ಳುತ್ತಾರೆ.

ರಥಕ್ಕೆ ಉಪ್ಪು- ಮೆಣಸು ವಿಶೇಷ:  ಜಾತ್ರೆಯಲ್ಲಿ ರಥೋತ್ಸವ ನಡೆಯುತ್ತದೆ. ಹಲವಾರು ರಥೋತ್ಸವ ಸಂದರ್ಭಗಳಲ್ಲಿ ಬಾಳೆಹಣ್ಣು, ಹೂವನ್ನು ರಥದ ಮೇಲೆಸೆಯುವ ವಾಡಿಕೆಯಿದ್ದರೆ, ಇಲ್ಲಿ ಉಪ್ಪು-ಮೆಣಸನ್ನು ಎಸೆಯುವುದು ವಿಶೇಷ. ಈ ಕುರಿತು ಜನರನ್ನು ವಿಚಾರಿಸಿದರೆ, ‘ಅಡುಗೆಯೊಳಗೆ ಉಪ್ಪು ಕರಗಿ, ಸರ್ವರಸದೊಳಗೆ ಒಂದಾಗುವಂತೆ, ರುಚಿಕರವಾಗಿರುವಂತೆ ನಮ್ಮ ಬಾಳಿನೊಳಗೂ ಕಷ್ಟಗಳು ಕರಗಿ ಸುಖಶಾಂತಿ ಸಮರಸ ಸಾಧ್ಯವಾಗಲಿ ಎಂಬ ನಂಬಿಕೆ, ವಿಶ್ವಾಸದಲ್ಲಿ ಉಪ್ಪೆರಚಿದಾಗ ಧನ್ಯತಾ ಭಾವ ಮೂಡುತ್ತದೆ ಎನ್ನುತ್ತಾರೆ ಡೋರನಹಳ್ಳಿಯ ಪಕ್ಕದ ಊರಿನವರಾದ ಸಂಶೋಧಕಿ ಡಾ.ಸುಧಾ ಮಲ್ಲಿಕೇಶ್ ಅವರು

ಆಂದೋಲನ ಡೆಸ್ಕ್

Recent Posts

ಸಿಎಂಗೆ ವಿದ್ಯಾರ್ಥಿಗಳು ಪತ್ರ ಬರೆದ ಪ್ರಕರಣ: ಪಚ್ಚೆದೊಡ್ಡಿ ಸರ್ಕಾರಿ ಶಾಲೆಗೆ ಬಿಇಒ ಭೇಟಿ

ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…

41 mins ago

ಕೋಟೆ ಪುರಸಭೆ ಪೌರಕಾರ್ಮಿಕರು, ನೌಕರರಿಗೆ ೫ ತಿಂಗಳಿಂದ ಸಂಬಳವಿಲ್ಲ

ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…

46 mins ago

ಕೈಬೀಸಿ ಕರೆಯುತ್ತಿದೆ ‘ಪ್ರಸಾರಾಂಗ ಪುಸ್ತಕೋತ್ಸವ’

ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…

51 mins ago

ನಗರಪಾಲಿಕೆ ಆರ್ಥಿಕ ಬರ ನೀಗಿಸಿದ ತೆರಿಗೆ ಸಂಗ್ರಹ

ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…

57 mins ago

ತಾಪಮಾನ ಇಳಿಕೆ : ಬೆಂಗಳೂರಲ್ಲಿ ಚಳಿ ಹೆಚ್ಚಳ

ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…

12 hours ago