ಚಿರಂಜೀವಿ ಸಿ.ಹುಲ್ಲಹಳ್ಳಿ
ದುಸ್ಥಿತಿಯ ಕೊಠಡಿಗಳಲ್ಲಿ ಪಾಠ-ಪ್ರವಚನ; ಆತಂಕದಲ್ಲಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು
■ ಕೇಳುವವರಿಲ್ಲ ವಿದ್ಯಾರ್ಥಿಗಳು, ಬೋಧಕರ ಅಳಲು
■ ಇತಿಹಾಸ ವಿಭಾಗದಲ್ಲಿ ಶಿಥಿಲ ಕೊಠಡಿಗಳೇ ಹೆಚ್ಚು
■ ಬಣ್ಣಗೆಟ್ಟ ಕೊಠಡಿ ಗೋಡೆಗಳು, ಅನೈರ್ಮಲ್ಯ ತಾಂಡವ
■ ಪತ್ರಿಕೋದ್ಯಮ, ಡಿಜಿಟಲ್ ಗ್ರಂಥಾಲಯ ಕೊಠಡಿಗಳದ್ದೂ ಇದೇ ಸ್ಥಿತಿ
■ ಕೆಲ ಗೋಡೆಗಳ ಮೇಲೆಬೆಳೆದಿರುವ ಸಣ್ಣ ಗಿಡಗಳು
ಮೈಸೂರು: ದೊಡ್ಡ ಕಟ್ಟಡ, ಬೃಹತ್ ಬಾಗಿಲು-ಕಿಟಕಿಗಳು… ಶತಮಾನ ಪೂರೈಸಿದ್ದರೂ ಸದೃಢವಾಗಿರುವ ಕಟ್ಟಡ! ಆದರೆ, ಗೋಡೆಗಳಲ್ಲಿ ಬಿರುಕು, ಆ ಬಿರುಕುಗಳಲ್ಲಿ ಬೇರುಬಿಟ್ಟ ಪುಟ್ಟ ಪುಟ್ಟ ಗಿಡಗಳು, ಯಾವಾಗಲೋ ಬಳಿದಿರುವ ಬಣ್ಣ, ಚಕ್ಕೆಯಂತೆ ಉದುರುತ್ತಿವೆ ಗಾರೆಗಳು…
ಇದು ನಗರದ ಮಹಾರಾಜ ಕಾಲೇಜಿನ ಬಹುತೇಕ ಕೊಠಡಿ ಗಳ ಕಥೆ-ವ್ಯಥೆಯಾಗಿದೆ.ಶೈಕ್ಷಣಿಕ ವಲಯದಲ್ಲಿ ತನ್ನದೇ ಆದ ಇತಿಹಾಸ ಹೊಂದಿರುವ ಮಹಾರಾಜ ಕಾಲೇಜು ಪಾರಂಪರಿಕ ಕಟ್ಟಡ ನಿರ್ವಹಣೆಯಕೊರತೆಯಿಂದ ಸೊರಗುತ್ತಿದ್ದು, ಗೋಡೆ ಗಳು ಬಿರುಕು ಬಿಟ್ಟು, ಗಾರೆ ಚಕ್ಕೆಗಳು ಉದುರುತ್ತಿವೆ. ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಆತಂಕದಲ್ಲಿ ಪಾಠ ಕೇಳುವಂತಾಗಿದೆ.
ಮಹಾರಾಜ ಕಾಲೇಜು ಕಲಾ ವಿಭಾಗದಲ್ಲಿ ಕಲಿಯಲು ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಹೀಗಾಗಿ ಇತಿಹಾಸ ವಿಷಯ ಅಧ್ಯಯನಕ್ಕೆ ಸಂಬಂಧಿಸಿದಂತೆ ೨೦ಕ್ಕೂ ಹೆಚ್ಚು ವಿಭಾಗಗಳಿವೆ. ಪ್ರತಿ ವಿಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಆದರೆ, ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಅಲ್ಲದೇ, ಆ ಕಟ್ಟಡದ ಲ್ಲಿಯೇ ತರಗತಿಗಳು ನಡೆಯು ತ್ತಿವೆ. ಇದರಿಂದ ವಿದ್ಯಾರ್ಥಿಗಳು ಭಯ ಭೀತಿ ನಡುವೆಯೇ ಪಾಠ ಕೇಳಬೇಕಾದ ಪರಿಸ್ಥಿತಿ ಎದು ರಾಗಿದೆ. ಕಾಲೇಜಿನ ಬಲ ಭಾಗದಲ್ಲಿ ಪತ್ರಿಕೋದ್ಯಮ, ಡಿಜಿಟಲ್ ಗ್ರಂಥಾಲಯ, ಜಾನಪದ ವಿಭಾಗ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ತರಗತಿಗಳು ನಡೆಯುತ್ತಿವೆ. ವಿದ್ಯಾರ್ಥಿಗಳಷ್ಟೇ ಅಲ್ಲ, ಅಧ್ಯಾಪಕರು ಕೂಡ ಆತಂಕದಲ್ಲಿ ಪಾಠ-ಪ್ರವಚನ ಬೋಧಿಸುತ್ತಿದ್ದಾರೆ.
ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಬಣ್ಣ ಒಣಗಿ ಚಕ್ಕೆಗಳಂತೆ ಉದುರುತ್ತಿವೆ. ಮೇಲ್ಭಾಗದಲ್ಲಿ ಗಿಡ-ಗಂಟಿಗಳು ಬೆಳೆದಿದ್ದು, ಅವುಗಳ ಬೇರು ಗೋಡೆಯ ಬಿರುಕಿಗೆ ಕಾರಣವಾಗುತ್ತಿವೆ. ಇಷ್ಟಾದರೂ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ತರಗತಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಯತ್ನ ಮಾಡಿಲ್ಲ.
ನಿರ್ವಹಣೆ ಕೊರತೆ: ಕಾಲೇಜಿನಲ್ಲಿ ೨೫ಕ್ಕೂ ಹೆಚ್ಚು ಕೊಠಡಿಗಳಿವೆ. ಆದರೆ, ಯಾವ ಕೊಠಡಿಯಲ್ಲಿಯೂ ಶುಚಿತ್ವ ಇಲ್ಲ. ಬಾಗಿಲು, ಕಿಟಕಿಗಳು ಕಿತ್ತು ಬರುವ ಸ್ಥಿತಿಗೆ ತಲುಪಿವೆ. ಹಿಂದೆ ‘ನ್ಯಾಕ್’ ಕಮಿಟಿ ಪರಿಶೀಲನೆಗಾಗಿ ಕಾಲೇಜಿಗೆ ಬಂದ ಸಂದರ್ಭದಲ್ಲಿ ಸುಣ್ಣ- ಬಣ್ಣ ಕಂಡಿದ್ದ ಕಟ್ಟಡಕ್ಕೆ ಮತ್ತೆ ಆ ಭಾಗ್ಯ ಲಭಿಸಿಲ್ಲ. ಕೊಠಡಿಗಳಲ್ಲಿ ಕಸವನ್ನು ನಿತ್ಯ ಗುಡಿಸಿ ಶುಚಿಗೊಳಿಸುವ ಕಾರ್ಯ ನಡೆಯುತ್ತಿಲ್ಲ. ವಿವಿಯಲ್ಲಿ ಹಣಕಾಸಿನ ತೊಂದರೆಯಿಂದ ಕಟ್ಟಡ ನಿರ್ವಹಣೆಯಾಗುತ್ತಿಲ್ಲ ಎಂಬುದು ಕಾಲೇಜಿನ ಪ್ರಾಧ್ಯಾಪಕರೊಬ್ಬರ ಬೇಸರದ ಮಾತು. ಕಳೆದ ವರ್ಷ ಮಹಾರಾಣಿ ಕಾಲೇಜಿನ ಕೊಠಡಿಗಳು ಕುಸಿದು ಬಿದ್ದಿದ್ದವು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ. ಆದರೆ, ಮಹಾರಾಜ ಕಾಲೇಜಿನ ಈ ಕಟ್ಟಡವನ್ನು ನಿರ್ವಹಣೆ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು, ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ.
ಕೆಲ ದಿನಗಳು ಸ್ಥಗಿತವಾಗಿದ್ದ ಪಾಠ-ಪ್ರವಚನ:
ಕ್ರಿಮಿನಾಲಜಿ ವಿಭಾಗದ ಕೊಠಡಿಯ ಗೋಡೆಯ ಗಾರೆ ಚಕ್ಕೆ ವಿದ್ಯಾರ್ಥಿನಿಯೊಬ್ಬರ ಮೇಲೆ ಬಿದ್ದ ಪರಿಣಾಮ ಕೆಲ ದಿನಗಳು ಈ ಕೊಠಡಿಯಲ್ಲಿ ಪಾಠ-ಪ್ರವಚನಗಳನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೆ ಅದೇ ಕೊಠಡಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ.
” ಮಹಾರಾಜ ಕಾಲೇಜು ಪಾರಂಪರಿಕ ಕಟ್ಟಡವಾಗಿರುವುದರಿಂದ ಪುರಾತತ್ವ ಇಲಾಖೆಯಿಂದ ಸಹಕಾರ ಪಡೆಯಬೇಕು. ಹೀಗಾಗಿ ಕಟ್ಟಡ ನಿರ್ವಹಣೆ ಕಷ್ಟದ ಕೆಲಸವಾಗಿದೆ. ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಓಆರ್‌ಐ, ಮಹಾರಾಜ ಕಾಲೇಜಿನ ಭಾಗವೊಂದರ ದುರಸ್ತಿಗೆ ಡಿಪಿಆರ್ ತಯಾರಿಸಿ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿದೆ. ಕಟ್ಟಡಕ್ಕೆ ಬಣ್ಣ ಬಳಿಯಲು ಹಣದ ಕೊರತೆ ಇದೆ. ಜಯಲಕ್ಷ್ಮಿ ವಿಲಾಸದಂತೆ ಈ ಕಟ್ಟಡಗಳನ್ನೂ ದುರಸ್ತಿ ಮಾಡಿಸಲಾಗುವುದು.”
-ಪ್ರೊ.ಎನ್.ಕೆ.ಲೋಕನಾಥ್, ಕುಲಪತಿ, ಮೈಸೂರು ವಿಶ್ವವಿದ್ಯಾನಿಲಯ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಕು ಅಮಾನವೀಯ ಘಟನೆ ನಡೆದಿದ್ದು, ಸಾಕು ಪ್ರಾಣಿಗಳನ್ನು ಚಿತ್ರಹಿಂಸೆ ನೀಡಿ ಕೊಂದು ವಿಕೃತಿ ಮೆರೆದಿರುವ…
ಬೆಳಗಾವಿ: ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್ ಕ್ಲಿಯರ್ ಆಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ…
ಬೆಂಗಳೂರು: ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ…
ಬೆಳಗಾವಿ: ಪೊಲೀಸ್ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳು ಖಾಲಿಯಿದ್ದು, ಈ ಪೈಕಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ…
ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಮತ್ತೊಮ್ಮೆ ಬಾಂಬ್…
ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸರ್ಕಾರಿ ಆಸ್ಪತ್ರೆಯ…