75ನೇ ವರ್ಷದ ಅಮೃತ ಮಹೋತ್ಸವ ಮಹಾ ಮಸ್ತಕಾಭಿಷೇಕಕ್ಕೆ ಗೊಮ್ಮಟಗಿರಿ ಸಜ್ಜು
ಗಿರೀಶ್ ಹುಣಸೂರು
ಮೈಸೂರು: ಕಣ್ಣು ಹಾಯಿಸಿದಷ್ಟು ದೂರಕ್ಕೆ ಹಸಿರು ಹೊದ್ದು ಮಲಗಿರುವ ಭೂ ರಮೆ, ಮತ್ತೊಂದೆಡೆ ಕೆಆರ್ ಎಸ್ ಹಿನ್ನೀರಿನ ಜಲರಾಶಿ. ಇಂತಹ ಸೌಂದರ್ಯದ ನಡುವೆ ಹೆಬ್ಬಂಡೆಯ ಮೇಲೆ ವಿರಾಜಮಾನನಾಗಿ ನಿಂತಿರುವ ೧೬ ಅಡಿ ಎತ್ತರದ ಏಕಶಿಲೆಯ ಗೊಮ್ಮಟಮೂರ್ತಿಗೆ ಡಿ. ೧೨ರಿಂದ ೧೫ರ ವರೆಗೆ ೭೫ನೇ ವರ್ಷದ ಅಮೃತ ಮಹೋತ್ಸವ ಮಹಾ ಮಸ್ತಕಾಭಿಷೇಕ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ.
ಮೈಸೂರಿಗೆ ಸಮೀಪವಿದ್ದರೂ ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿಗೆ ಸೇರಿರುವ ಬೆಟ್ಟದೂರು (ಗೊಮ್ಮಟಗಿರಿ) ಗ್ರಾಮದಲ್ಲಿನ ಬೃಹತ್ ಬೆಟ್ಟದ ಮೇಲೆ ಕಪ್ಪು ಶಿಲೆಯಲ್ಲಿ ಕಡೆದು ನಿಲ್ಲಿಸಿರುವ ಗೊಮ್ಮಟ ಮೂರ್ತಿಗೆ ಪ್ರತಿವರ್ಷ ಶ್ರೀ ಗೊಮ್ಮಟಗಿರಿ ಸೇವಾ ಸಮಿತಿ ವತಿಯಿಂದ ಮಸ್ತಕಾಭಿಷೇಕ ನಡೆಸಲಾಗುತ್ತದೆ.
ಗೊಮ್ಮಟೇಶ್ವರ ಮೂರ್ತಿಯನ್ನು ಕಡೆದಿರುವ ಬಂಡೆಯ ತಪ್ಪಲಿನಲ್ಲಿ ೨೪ ಜೈನ ತೀರ್ಥಂಕರರ ಪುಟ್ಟ ಬಸದಿಗಳಿವೆ. ಬೃಹತ್ ಬಂಡೆಯ ಮೇಲೆ ನಿಂತರೆ ಸುತ್ತಲಿನ ಜಮೀನುಗಳ ಹಸಿರು ಪರಿಸರ, ಕಣ್ಣಳತೆ ದೂರದಲ್ಲಿ ಕೆಆರ್‌ಎಸ್ ಜಲಾಶಯದ ಹಿನ್ನೀರು ಮುದ ನೀಡುತ್ತದೆ.
ನಾಲ್ಕು ದಿನಗಳವರೆಗೆ ವಿವಿಧ ಕಾರ್ಯಕ್ರಮ: ಆರ್ಯಿಕಾ ೧೦೫ ಶಿವಮತಿ ಮಾತಾಜಿ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕನಕಗಿರಿ ಜೈನಮಠದ ಪೀಠಾಧಿಪರಿ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಹೊಂಬುಜ ಜೈನ ಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀ ಕ್ಷೇತ್ರ ಶ್ರವಣ ಬೆಳಗೊಳ ಜೈನ ಮಠದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಾಲ್ಕು ದಿನಗಳ ಕಾಲ ಪೂಜಾ ಕಾರ್ಯ ಹಾಗೂ ಮಹಾ ಮಸ್ತಕಾಭಿಷೇಕ ನಡೆಯಲಿದೆ.
ಡಿ. ೧೨ರಂದು ಬೆಳಿಗ್ಗೆ ೬ ಗಂಟೆಗೆ ಮಂಗಳಾಷ್ಟಕರ, ಮಹಾಮಂತ್ರ ಪಠಣೆ, ನಾಂದಿ ಮಂಗಲ, ೭. ೩೦ಕ್ಕೆ ಜಲಮಂದಿರದಲ್ಲಿ ನಿತ್ಯಪೂಜೆ, ಪಂಚಾಮೃತಾಭಿಷೇಕ, ಬೆಳಿಗ್ಗೆ ೧೧ರಿಂದ ೨೪ ತೀರ್ಥಂಕರರ ಕೂಟ ಗಳಲ್ಲಿ ಸಾಮೂಹಿಕ ಪೂಜೆ, ಮಧ್ಯಾಹ್ನ ೧೨ರಿಂದ ಬೆಟ್ಟದಲ್ಲಿ ನವಗ್ರಹ ಆರಾಧನೆ, ಭಗವಾನ್ ಬಾಹು ಬಲಿ ಸ್ವಾಮಿಗೆ ಎಣ್ಣೆ ಮಜ್ಜನ, ಶ್ರೀ ಬ್ರಹ್ಮದೇವರಿಗೆ ಷೋಡಶೋಪಚಾರ ಪೂಜೆ ನೆರವೇರಲಿದೆ.
ಡಿ. ೧೩ರಂದು ಬೆಳಿಗ್ಗೆ ೧೧ಕ್ಕೆ ಮೈಸೂರಿನ ಪದ್ಮಶ್ರೀ ಜೈನ ಮಹಿಳಾ ಸಮಾಜದವರಿಂದ ಮಹಾ ಮಸ್ತಕಾಭಿಷೇಕ ನೆರವೇರಿಸಲಾಗುತ್ತದೆ. ಕಾರ್ಯಕ್ರಮವನ್ನು ಮೇಘಾಲಯ ರಾಜ್ಯಪಾಲ ಸಿ. ಎಚ್. ವಿಜಯಶಂಕರ್ ಉದ್ಘಾಟಿಸಲಿದ್ದಾರೆ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಜಿ. ಡಿ. ಹರೀಶ್‌ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.
ಡಿ. ೧೪ರಂದು ಬೆಳಿಗ್ಗೆ ೧೦. ೩೦ಕ್ಕೆ ಕ್ಷೇತ್ರದಲ್ಲಿ ನಿರ್ಮಿಸಲಾಗಿರುವ ಅಮೃತ ಕುಟೀರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಉದ್ಘಾಟಿಸಲಿದ್ದು, ಸಚಿವರಾದ ಕೃಷ್ಣ ಭೈರೇಗೌಡ, ಈಶ್ವರ ಖಂಡ್ರೆ ಮತ್ತಿತರರು ಭಾಗವಹಿಸಲಿದ್ದಾರೆ.
ಡಿ. ೧೫ರಂದು ಬೆಳಿಗ್ಗೆ ೧೧ಕ್ಕೆ ಸಮಸ್ತ ಭಟ್ಟಾರಕರ ಉಪಸ್ಥಿತಿಯಲ್ಲಿ ಮಹಾ ಮಸ್ತಕಾಭಿಷೇಕ ಹಾಗೂ ಬೃಹತ್ ಸಮವಸರಣ ನಿರ್ಮಾಣದ ಭೂಮಿಪೂಜೆ ನೆರವೇರಲಿದೆ. ಡಿ. ೧೩ರಿಂದ ೧೫ರವರೆಗೆ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಗೊಮ್ಮಟೇಶ್ವರ ಮೂರ್ತಿಯ ಇತಿಹಾಸ
ಮೈಸೂರು: ಸುಮಾರು ೨೦೦ ಅಡಿ ಎತ್ತರದ ಹೆಬ್ಬಂಡೆಯ ಮೇಲೆ ಕಪ್ಪು ಶಿಲೆಯಲ್ಲಿ ೧೬ ಅಡಿ ಎತ್ತರಕ್ಕೆ ಕೆತ್ತಲಾಗಿರುವ ಗೊಮ್ಮಟೇಶ್ವರ ಮೂರ್ತಿಯ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಗಳುಳ್ಳ ಶಾಸನ ಗಳೂ ದೊರೆತಿಲ್ಲ. ಆದರೆ, ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಈ ಭಾಗದಲ್ಲಿದ್ದ ಗಂಗ ಅರಸರು ಈ ಮೂರ್ತಿಯನ್ನು ಕೆತ್ತಿಸಿರಬಹುದು ಎಂದರೆ, ಮತ್ತೆ ಕೆಲವರು ಶ್ರವಣ ಬೆಳಗೊಳದ ಗೊಮ್ಮಟೇಶ್ವರ ಮೂರ್ತಿ ಕೆತ್ತಿದ ಚಾಮುಂಡರಾಯನೇ ಗೊಮ್ಮಟಗಿರಿಯ ಮೂರ್ತಿಯನ್ನೂ ಕೆತ್ತಿರಬಹುದು ಎಂದು ಹೇಳುತ್ತಾರೆ.
ಗೊಮ್ಮಟೇಶ್ವರ ಮೂರ್ತಿ ಇರುವ ಹೆಬ್ಬಂಡೆಯ ಕೆಳಗೆ ಬಲ ಭಾಗದಲ್ಲಿ ೨೪ ತೀರ್ಥಂಕರರ ಪಾದ ಕೂಟಗಳು, ಜಲಮಂದಿರ, ಎಡ ಭಾಗದಲ್ಲಿ ಕುಂದಾಚಾರ್ಯರ ದ್ವಿಸಹಸ್ರಾಬ್ಧಿ ಜ್ಞಾಪಕಾರ್ಥವಾಗಿ ನಿರ್ಮಿಸಿರುವ ಪಾದಕೂಟಗಳನ್ನು ಕಾಣಬಹುದಾಗಿದೆ. ಹೆಬ್ಬಂಡೆಗೆ ಸಿಡಿಲು ಬಡಿದು ಇಬ್ಭಾಗವಾದ ಕಾರಣ ಬೆಟ್ಟ ಹತ್ತಲಾಗದೆ ಬಹು ವರ್ಷಗಳವರೆಗೆ ಪೂಜೆ, ಪುನಸ್ಕಾರಗಳು ನಿಂತು ಹೋಗಿದ್ದವು. ದನಗಾಹಿಗಳು ಈ ಕ್ಷೇತ್ರವನ್ನು ಪತ್ತೆಹಚ್ಚಿದ ನಂತರ ವಿಷಯ ತಿಳಿದ ಮೈಸೂರಿನ ಜೈನ ಸಮಾಜದ ಮುಖಂಡರು ಒಗ್ಗೂಡಿ ಗೊಮ್ಮಟಗಿರಿ ಕ್ಷೇತ್ರ ಸೇವಾ ಸಮಿತಿ ರಚಿಸಿಕೊಂಡು ಕ್ಷೇತ್ರದ ಕಾಯಕಲ್ಪಕ್ಕೆ ಟೊಂಕಕಟ್ಟಿ, ಸಿಡಿಲು ಬಡಿದು ಹೋಳಾಗಿದ್ದ ಹೆಬ್ಬಂಡೆಗೆ ಕಲ್ಲುಗಳನ್ನು ತುಂಬಿ ಭರ್ತಿ ಮಾಡಿಸಿ, ಹೆಬ್ಬಂಡೆಗೆ ೯೦ ಮೆಟ್ಟಿಲುಗಳನ್ನು ಕಡೆಸಿ ಭಕ್ತರು ಹೆಬ್ಬಂಡೆ ಏರಲು ಅನುವು ಮಾಡಿಕೊಟ್ಟ ನಂತರ ಅಂದಿನಿಂದ ಪ್ರತಿವರ್ಷ ಮಸ್ತಕಾಭಿಷೇಕ ನಡೆಸುತ್ತಾ ಬರಲಾಗುತ್ತಿದ್ದು, ಇದೀಗ ೭೫ನೇ ವರ್ಷದ ಅಮೃತ ಮಹೋತ್ಸವ ಮಹಾ ಮಸ್ತಕಾಭಿಷೇಕಕ್ಕೆ ಗೊಮ್ಮಟಗಿರಿ ಸಜ್ಜಾಗಿದೆ.
ಮಹಾದೇಶ್ ಎಂ ಗೌಡ ಹನೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ…
ಮಹಾದೇಶ್ ಎಂ ಗೌಡ ಹನೂರು: ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ…
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…