Andolana originals

ಕೆರೆಗಳ ಸಂರಕ್ಷಣೆ, ಉತ್ತಮ ಆಡಳಿತಕ್ಕೆ ಮಣೆ’

ಕೆ.ಬಿ.ರಮೇಶನಾಯಕ

‘ಆಂದೋಲನ’ ಸಂದರ್ಶನದಲ್ಲಿ ಸಿಇಒ ಯುಕೇಶ್ ಕುಮಾರ್ ಮುಕ್ತ ಮಾತುಕತೆ

ಮೈಸೂರು: ‘ಜನರಿಂದ ಕಣ್ಮರೆಯಾಗುತ್ತಿರುವ ಕೆರೆಗಳನ್ನು ಸಂರಕ್ಷಿಸಿ ಅಂತರ್ಜಲ ವೃದ್ಧಿಗೊಳಿಸುವುದು, ನದಿ ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಜನರಿಗೆ ನೀರು ಒದಗಿಸುವ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡುವುದು, ಪಿಡಿಒಗಳಿಂದ ಜಿಲ್ಲಾ ಮಟ್ಟದ ಅಧಿಕಾರಿಗಳ ತನಕ ಆಡಳಿತದಲ್ಲಿ ಶಿಸ್ತು ಮತ್ತು ಪಾರದರ್ಶಕತೆ ತಂದು ಸರ್ಕಾರದ ಕಾರ್ಯ ಕ್ರಮಗಳು ಸಾಮಾನ್ಯರಿಗೆ ತಲುಪುವಂತೆ ಮಾಡುವುದು ಮುಖ್ಯ ಗುರಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ ಅಗಾಧ ಮಾನವ ಸಂಪನ್ಮೂಲವಿದೆ’. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್ ಅವರು ‘ಆಂದೋಲನ’ ದಿನಪತ್ರಿಕೆ ನಡೆಸಿದ ವಿಶೇಷ ಸಂದರ್ಶನದಲ್ಲಿ ತಮ್ಮ ಮುಂದಿನ ಗುರಿ ಮತ್ತು ಭವಿಷ್ಯದ ಯೋಜನೆಗಳನ್ನು ಕುರಿತು ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಆಂದೋಲನ: ಮೈಸೂರಿನಂತಹ ಜಿಲ್ಲಾ ಪಂಚಾಯಿತಿಗೆ ಸಿಇಒ ಆಗಿ ವರ್ಗಾವಣೆ ಮಾಡಿದ ವಿಷಯ ಕೇಳಿದಾಗ ಏನನ್ನಿಸಿತು?

ಸಿಇಒ: ಮೈಸೂರು ಜಿಲ್ಲೆಗೆ ವರ್ಗಾವಣೆ ಮಾಡುತ್ತಾರೆಂದು ನಿರೀಕ್ಷಿಸಿರದ ನನಗೆ ಈ ವಿಚಾರ ಕೇಳಿ ತುಂಬಾ ಸಂತೋಷವಾಯಿತು. ಇಲ್ಲಿ ಹಿಂದೆ ಕಾರ್ಯ ನಿರ್ವಹಿಸಿದ್ದ ಹಲವು ಅಧಿಕಾರಿಗಳು ಉತ್ತಮ ಕೆಲಸದ ಮೂಲಕ ಹೆಸರು ಗಳಿಸಿದ್ದಾರೆ. ಹಾಗಾಗಿ ಇಲ್ಲಿ ನನಗೂ ಕೆಲಸ ಮಾಡಲು ಅವಕಾಶ ದೊರಕಿರುವುದು ಖುಷಿಯಾಯಿತು. ನನ್ನ ಕಾರ್ಯ ವೈಖರಿಯನ್ನು ಡಿಪಿಎಆರ್‌ನಲ್ಲಿ ಉಪ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾಗ ನೋಡಲಾಗಿತ್ತು. ಐಎಎಸ್ ಅಧಿಕಾರಿಗಳಿಗೆ ಡಿಪಿಆರ್ನಲ್ಲಿ ಅವಕಾಶ ಸಿಗುವುದು ಕಡಿಮೆ. ಇಬ್ಬರು-ಮೂವರಿಗೆ ಸಿಗುವ ಅವಕಾಶದಲ್ಲಿ ನನಗೂ ಸಿಕ್ಕಿತ್ತು. ಅಲ್ಲಿ ಸಿಎಂ, ಮುಖ್ಯಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳ ನೇರ ಸಂಪರ್ಕ ಇರುತ್ತದೆ. ಇದರಿಂದಾಗಿಯೇ ನನಗೊಂದು ಅವಕಾಶ ದೊರೆತಿರಬಹುದೆಂದು ಭಾವಿಸಿದ್ದೇನೆ.

ಆಂದೋಲನ: ಕೋಲಾರ ಜಿಲ್ಲೆಯಲ್ಲಿ ಸೀಮಿತ ಅವಧಿಯಲ್ಲಿ ಕೈಗೊಂಡ ಕೆಲಸಗಳೇನು?

ಸಿಇಒ: ಕೋಲಾರ ಜಿಲ್ಲೆಯು ಮಳೆಯಾಶ್ರಿತ ಪ್ರದೇಶವಾದ್ದರಿಂದ ಕೆರೆಗಳ ಸಂರಕ್ಷಣೆ ಮಾಡುವುದಕ್ಕೆ ಆದ್ಯತೆ ನೀಡಿದ್ದೆ. ಜಿಲ್ಲೆಯ ಕೆರೆಗಳನ್ನು ಗುರುತಿಸಿ ಪುನಶ್ಚೇತನಗೊಳಿಸಿದ್ದರಿಂದ ೩ ತಿಂಗಳಲ್ಲಿ ಖಾಲಿಯಾಗುತ್ತಿದ್ದ ನೀರು ೮ ರಿಂದ ೧೦ ತಿಂಗಳು ಉಳಿಯುತ್ತಿದೆ. ಅನೇಕ ಗ್ರಾಮಗಳಿಗೆ ಅದರಿಂದ ಅನುಕೂಲವಾಗಿದೆ. ನೀರು ಸಿಗದಿದ್ದ ಕಡೆಗಳಲ್ಲಿ ಇಂದು ಬೋರ್‌ವೆಲ್‌ನಲ್ಲಿ ನೀರು ದೊರೆಯುತ್ತಿದೆ. ಕೆರೆಗಳನ್ನು ಉಳಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗುವ ಕಾರಣ ಮೈಸೂರು ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳನ್ನು ಸಂರಕ್ಷಿಸಲು ಆದ್ಯತೆ ನೀಡುವೆ.

ಆಂದೋಲನ: ಪ್ರವಾಸೋದ್ಯಮ ಅಭಿವೃದ್ಧಿಗೆ ಏನಾದರೂ ಪ್ಲಾನ್ ಇದೆಯೇ?

ಸಿಇಒ: ಗ್ರಾಮಾಂತರ ಪ್ರದೇಶಗಳಲ್ಲಿರುವ ಪುರಾತನ ದೇವಾಲಯಗಳನ್ನು ಅಭಿವೃದ್ಧಿಪಡಿಸಿ ಮೂಲ ಸೌಕರ್ಯ ಒದಗಿಸಬೇಕು. ಗ್ರಾಮ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿದರೆ ಸ್ಥಳೀಯವಾಗಿ ಉದ್ಯೋಗ ದೊರೆಯಲಿದೆ. ಆರ್ಥಿಕತೆಯೂ ಉತ್ತಮಗೊಳ್ಳುತ್ತದೆ. ತಾಲ್ಲೂಕು ಕೇಂದ್ರಗಳಲ್ಲಿ ಇರುವ ದೇವಸ್ಥಾನಗಳ ಬಗ್ಗೆ ಮಾಹಿತಿ ಪಡೆದುಕೊಂಡು ಯೋಜನೆ ರೂಪಿಸುತ್ತೇನೆ. ಕುಡಿಯುವ ನೀರು, ರಸ್ತೆ ಮೊದಲಾದ ಮೂಲ ಸೌಕರ್ಯ ಸಮರ್ಪಕವಾಗಿದ್ದರೆ, ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಮಾಡುವುದಕ್ಕೆ ಅನುಕೂಲವಾಗಲಿದೆ.

ಆಂದೋಲನ : ಸ್ವಚ್ಛತೆಗೆ ಹೆಚ್ಚು ಒತ್ತು ಕೊಡುತ್ತಿಲ್ಲ ಎನ್ನುವ ದೂರಿಗೆ ಏನು ಕ್ರಮ ಕೈಗೊಳ್ಳುತ್ತೀರಾ?

ಸಿಇಒ: ಗ್ರಾಮಾಂತರದಲ್ಲಿ ಕೂಡ ನಗರ ಪ್ರದೇಶದಂತೆ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ತ್ಯಾಜ್ಯ ನಿರ್ವಹಣೆ ಮಾಡಬೇಕು. ಹಳ್ಳಿಗಳಲ್ಲಿ ಕಸ ಸಂಗ್ರಹಣೆ, ಮನೆ ಮನೆ ಕಸ ಸಂಗ್ರಹಣೆ ಬಗ್ಗೆ ಅರಿವು ಮೂಡಿಸಬೇಕು. ಮನ್ರೇಗಾ ಯೋಜನೆ ಅನುದಾನ ಬಳಸಿಕೊಂಡು ಕಸ ಸಾಗಾಣಿಕೆಗೆ ಟಿಪ್ಪರ್, ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಒತ್ತು ಕೊಡುತ್ತೇವೆ. ಸ್ವಚ್ಛತೆ ಇದ್ದರೆ ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗುವುದಿಲ್ಲ. ನಾವು ಜನರಿಗೆ ಮೊದಲು ಮನವರಿಕೆ ಮಾಡಿಕೊಡಬೇಕು. ಗ್ರಾಪಂ ಸಿಬ್ಬಂದಿ, ಆರೋಗ್ಯ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿದಾಗ ಸ್ವಚ್ಛತೆ, ನೈರ್ಮಲ್ಯ ಮತ್ತು ಕುಡಿಯುವ ನೀರಿನ ಬಗ್ಗೆ ಜಾಗೃತಿ ಮೂಡಿಸಿದರೆ ಸಮಸ್ಯೆ ದೂರ ಮಾಡಬಹುದಾಗಿದೆ.

ಆಂದೋಲನ: ಆಡಳಿತದಲ್ಲಿ ಪಾರದರ್ಶಕತೆ ತರುವ ಬಗ್ಗೆ ಏನು ಹೇಳುತ್ತೀರಿ?

ಸಿಇಒ: ಹೌದು, ಆಡಳಿತದಲ್ಲಿ ಶಿಸ್ತು ಮತ್ತು ಪಾರದರ್ಶಕತೆ ತರಬೇಕು. ಗ್ರಾಪಂ ಪಿಡಿಒ ಅವರಿಂದ ಸಿಇಒ ತನಕ ಎಲ್ಲರೂ ಶಿಸ್ತು ರೂಢಿಸಿಕೊಳ್ಳಬೇಕು. ಜನ ಸಾಮಾನ್ಯರ ಕೆಲಸಗಳನ್ನು ವಿಳಂಬ ಇಲ್ಲದೆ ಮಾಡಿಕೊಡಬೇಕು. ಸರ್ಕಾರ ನಮಗೆ ವಹಿಸಿರುವ ಜವಾಬ್ದಾರಿಯನ್ನು ಚಾಚೂ ತಪ್ಪದೆ ಮಾಡಿದರೆ ಜನರು ಕಚೇರಿಗೆ ಅಲೆಯುವುದು ತಪ್ಪಲಿದೆ. ಪಿಡಿಒಗಳ ಮೇಲೆ ಹಲವಾರು ಜವಾಬ್ದಾರಿಗಳಿವೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕಿದೆ. ತಾಪಂ ಅಧಿಕಾರಿಗಳು ಮಾನಿಟರ್ ಮಾಡಬೇಕು.

ಆಂದೋಲನ: ಮೈಸೂರಲ್ಲಿ ಹೊಸ ಯೋಜನೆಗಳನ್ನು ರೂಪಿಸಿದ್ದೀರಾ?

ಸಿಇಒ: ಮೈಸೂರು ಸೂಕ್ಷ್ಮ ಪ್ರದೇಶವಾಗಿದೆ. ಮಾನವ ಸಂಪನ್ಮೂಲ ಅಗಾಧವಾಗಿದೆ. ಜನರು ಕೂಡ ಸಾಕಷ್ಟು ಸ್ಪಂದಿಸುತ್ತಾರೆ. ನಾನು ಗಮನಿಸಿದ ಮಟ್ಟಿಗೆ ಕೆಲವು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನಾವು ಸ್ವಲ್ಪ ಮಟ್ಟಿಗೆ ಹಿಂದಿದ್ದೇವೆ ಅನಿಸುತ್ತಿದೆ. ನಾವು ಯಾವ್ಯಾವ ಮಾನದಂಡದಲ್ಲಿ ಹಿಂದಿದ್ದೇವೆ ಎಂಬುದನ್ನು ಗಮನಿಸಿ ಆದ್ಯತೆ ಮೇಲೆ ಕೆಲಸ ಮಾಡುತ್ತೇನೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಿಗೆ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡುತ್ತೇನೆ.

ಎಸ್.ಯುಕೇಶ್ ಕುಮಾರ್ ಹಿನ್ನೆಲೆ

ಮೂಲತಃ ತಮಿಳುನಾಡು ರಾಜ್ಯದವರಾದರೂ ಹೆಚ್ಚು ಕಾಲ ಕಳೆದಿದ್ದು ಉತ್ತರ ಭಾರತದಲ್ಲಿ. ಎಸ್.ಯುಕೇಶ್ ಕುಮಾರ್ ಅವರ ತಂದೆ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಉತ್ತರ ಭಾರತದಲ್ಲಿ ನೆಲೆಸಿದ್ದರು. ೨೦೧೮ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿ ರಾಯಚೂರು ಜಿಲ್ಲೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪ ವಿಭಾಗಾಧಿ ಕಾರಿಯಾಗಿ, ಕೋಲಾರ ಜಿಲ್ಲೆಯಲ್ಲಿ ಎರಡು ವರ್ಷ ಸಿಇಒ ಆಗಿ ಕೆಲಸ ಮಾಡಿದ್ದರು. ನಂತರ, ಮಹತ್ವದ ಡಿಪಿಎಆರ್‌ನಲ್ಲಿ ಉಪ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಅವರನ್ನು ಪ್ರಸ್ತುತ ಮೈಸೂರು ಜಿಪಂ ಸಿಇಒ ಆಗಿ ನೇಮಕ ಮಾಡಲಾಗಿದೆ.

 

 

ಆಂದೋಲನ ಡೆಸ್ಕ್

Recent Posts

ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಪೋಟ : ಓರ್ವ ಸಾವು, ನಾಲ್ವರು ಗಂಭೀರ

ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…

1 hour ago

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

3 hours ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

4 hours ago

ಮೈಸೂರು | ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮಾಚರಣೆ

ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…

4 hours ago

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…

4 hours ago

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

4 hours ago