Andolana originals

ಕೊಡಗಿನಲ್ಲಿ ಪುನರ್ವಸು ಮಳೆಯ ಆತಂಕಗಳು

• ರಂಜಿತ್ ಕವಲಪಾರ

ಭೋರೆಂದು ಸುರಿಯುತ್ತಿರುವ ಮಳೆ, ನಡು ಮಧ್ಯಾಹ್ನವೂ ರಸ್ತೆಯನ್ನು ಮರೆಮಾಚುವ ದಟ್ಟ ಮಂಜು, ರಸ್ತೆಗಡ್ಡಲಾಗಿ ಬಿದ್ದಿದ್ದ ಮರಗಳನ್ನು ಯಾರೋ ಪಕ್ಕಕ್ಕೆ ಸರಿಸಿ ಇಟ್ಟರುವ ದೃಶ್ಯ, ಕುಸಿದ ಗುಡ್ಡ, ಕುಸಿಯಲು ಸಿದ್ಧವಾಗಿ ನಿಂತಿರುವ ಬೆಟ್ಟ ಗುಡ್ಡಗಳು.

ಪಾಚಿಗಟ್ಟಿ ಕಾಲಿಟ್ಟರೆ ಜಾರುವ ಹಾದಿ, ಸೊಂಟ ಮುರಿದುಕೊಂಡು ಬಿದ್ದಿರುವ ವಿದ್ಯುತ್ ಕಂಬಗಳು, ಮಳೆಗೆ ತುಂಡಾದ ಮರಗಳನ್ನು ತೆರವುಗೊಳಿಸುತ್ತಾ ಕಂಬಗಳನ್ನು ತಂತಿಗಳನ್ನೂ ರಿಪೇರಿ ಮಾಡುತ್ತಿರುವ ವಿದ್ಯುತ್ ಇಲಾಖೆಯ ರೈನ್‌ ಕೋಟ್‌ ಧಾರಿ ಕಾರ್ಮಿಕರು.

ಮರ ಬಿದ್ದು ಮುರಿದ ಕೊಟ್ಟಿಗೆ, ಬಿರುಕು ಬಿಟ್ಟ ಮನೆಯ ಗೋಡೆಗಳು ಹಾರಿಹೋದ ಜಿಂಕ್ ಶೀಟ್, ಹೊಡೆದು ಹೋಗಿರುವ ಹೆಂಚು, ಹುಚ್ಚೆದ್ದು ಹರಿಯುತ್ತಿರುವ ಹೊಳೆ, ಕೊಚ್ಚಿ ಹೋಗುತ್ತಿರುವ ಅಪರಿಚಿತ ಸರಕು ಸರಂಜಾಮುಗಳು, ಮುರಿದ ಮರಗಳು, ಮುಳುಗುತ್ತಿರುವ, ಮುಳುಗಡೆಯ ಹಂತದಲ್ಲಿರುವ ಸೇತುವೆಗಳು, ಕಡಿದು ಹೋದ ರಸ್ತೆ ಸಂಪರ್ಕ, ಬೆಳಿಗ್ಗೆಯೂ ಹೆಡ್ ಲೈಟ್ ಹಾಕಿಕೊಂಡು ವಿರಳವಾಗಿ ಓಡಾಡುವ ವಾಹನಗಳು, ಹುಚ್ಚೆದ್ದು ಬೀಸುತ್ತಿರುವ ಗಾಳಿ, ನೀಳವಾಗುತ್ತಿರುವ ಭಯಾನಕ ರಾತ್ರಿಗಳು, ಸೂರ್ಯ ದರ್ಶನವಿಲ್ಲದ ಕುಳಿರ್ಗಾಳಿಯ ದುಸ್ತಪ್ಪದಂತಹ ಹಗಲು, ಆತಂಕದ ಮುಖಹೊತ್ತ ಗಂಡಸರು, ಚಡಪಡಿಸುವ ಹೆಂಗಸರು, ಚಿಂತೆಯ ಮಡುವಿನಲ್ಲಿರುವ ವೃದ್ಧರು, ಏನೂ ಅರಿಯದೆ ತಬ್ಬಿಬ್ಬಾಗಿರುವ ಮಕ್ಕಳು, ಮುಚ್ಚಿರುವ ಶಾಲೆ, ತೆರೆದಿರುವ ನಿರಾಶ್ರಿತರ ಕೇಂದ್ರ ಇದು ಕೊಡಗಿನ ಈ ಕ್ಷಣದ ಚಿತ್ರಣ.

ಕಳೆದ ಒಂದು ವಾರದಲ್ಲಿ ಪುನರ್ವಸು ಮಳೆ ಸೃಷ್ಟಿಸಿರುವ ಈ ವಾತಾವರಣ ಆಗಬಹುದಾದ ಆನಾಹುತಕ್ಕೆ ಕೈ ಬೀಸಿ ಆಹ್ವಾನ ನೀಡುವಂತಿದೆ. ಈ ಹಿಂದೆ ಆಗಿರುವ ಭೂಕುಸಿತ, ಮೇಘಸ್ಫೋಟ, ಜಲಪ್ರಳಯ, ಭೂಕಂಪನದಂತಹ ದುರ್ಘಟನೆಯ ಕಾರಣಕ್ಕೆ ಹೋಗಿರುವ ಪ್ರಾಣಗಳ ಕರಿನೆರಳು ವಸ್ತು ಸ್ಥಿತಿಯ ಭೀಕರತೆಯನ್ನು ಕಣಕಣಕ್ಕೂ ಹೆಚ್ಚಿಸುತ್ತಿದೆ.

ನೆಲೆ ಕಳೆದುಕೊಳ್ಳುವ ಅಪಾಯದಂಚಿಲ್ಲಿರುವ ಮನೆಯವರ ಸ್ಥಿತಿ ನೋಡುಗರ ಕರುಳು ಹಿಂಡುತ್ತಿದೆ. ಚಳಿಗೆ ನಡುಗುವ ಶ್ವಾನಸಮೂಹ, ಮಳೆಗಾಳಿಯಿಂದ ತಪ್ಪಿಸಿಕೊಳ್ಳಲು ಹೆಣಗುತ್ತಿರುವ ಬೀಡಾಡಿ ದನಗಳು, ಚಳಿಯಿಂದ ಪತರಗುಟ್ಟುವ ನಿರಾಶ್ರಿತ ಭಿಕ್ಷುಕರು, ಇವರನ್ನು ಗಮನಿಸಲಾಗದೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಧಾವಂತದಿಂದ ಹೆಣಗುತ್ತಿರುವ ಸಾರ್ವಜನಿಕರು ಎಲ್ಲರೂ ಎಲ್ಲವೂ ಆಸಹಾಯಕತೆಯ ಕೈಗೆ ತಮ್ಮನ್ನು ತಾವು ಒಪ್ಪಿಸಿ ಓಡಾಡುತ್ತಿರುವಂತೆ ಕಾಣುತ್ತಿದೆ. ನೀರು ಮಗ್ಗಿ, ಪ್ರತಿಷ್ಠಿತ ಬಡಾವಣೆಗಳು ಮುಳುಗಡೆಯ ಹಂತ ತಲುಪಿದೆ.

ಸ್ಥಿತಿವಂತರೂ ನಿರಾಶ್ರಿತರಾಗುವ ಚಿಂತೆಯಲ್ಲಿ ದ್ದಾರೆ. ಈಗಾಗಲೇ ಬೆಟ್ಟದ ಬುಡದ, ಬೆಟ್ಟದ ಮೇಲಿನ ಜನರನ್ನು ಬೇರೆಡೆಗೆ ಸರಕಾರ ಸ್ಥಳಾಂತರಿಸುತ್ತಿದೆ.

ಇದ್ಯಾವುದಕ್ಕೂ ನಮಗೂ ಸಂಬಂಧವಿಲ್ಲ ಅನ್ನುವಂತೆ ಕೆಲ ಪ್ರವಾಸಿಗರು ಜಲಪಾತ ನೋಡಲು ಕೊಡಗಿನತ್ತ ದೌಡಾಯಿಸುತ್ತಿದ್ದಾರೆ. ಮಡಿಕೇರಿ ನಗರದ ಅಲ್ಲಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ಐಡಿ, ಕಣಲೆ, ಕಾಡುಮಾವು, ಪತ್ತೊಡೆ ಎಲೆ ಮಾರಾಟವಾಗುತ್ತಿದೆ.

ಕೋವಿಡ್ ಸಂದರ್ಭದಲ್ಲಿ ಕಲಿತ ಪಾಠಗಳನ್ನು ಮೈಗೂಡಿಸಿಕೊಂಡಿರುವ ಸಾರ್ವಜನಿಕರು ಮನೆಯಿಂದ ಹೊರಗೆ ಕಾಲಿಡುತ್ತಿಲ್ಲ. ಇದನ್ನೆಲ್ಲಾ ನೋಡುತ್ತಾ ಅನ್ಯಮನಸ್ಕನಾಗಿ ರೈನ್ ಕೋಟ್ ಧರಿಸಿ ಬೈಕಿನಲ್ಲಿ ಓಡಾಡುತ್ತಿರುವ ನಾನು 2018ರ ಭೀಕರತೆ ನೆನಪಾಗಿ ಆಗಾಗ್ಗೆ ಕುಗ್ಗುತ್ತೇನೆ. ಅಂದಿನ ಮಳೆ ನನ್ನ ಕುಟುಂಬದ ಬದುಕಿನ ದಿಕ್ಕನ್ನೇ ಬದಲಿಸಿದ ಕುರಿತು ಯೋಚಿಸುವಾಗಲೆಲ್ಲಾ ಎದೆಯೊಳಗೆ ಕಟ್ಟಿರುವೆಯೊಂದು ಕಚ್ಚಿದ ಅನುಭವ ಆಗುತ್ತದೆ. ಹುಟ್ಟಿ ಬೆಳೆದ ಮನೆ ರಾತ್ರೋರಾತ್ರಿ ಕುಸಿದ ಬರೆಗೆ ಆಹುತಿ ಆದ ನಂತರ, ಆ ಮಳೆಗೆ ನಿರಾಶ್ರಿತರಾದ ನೂರಾರು ಮಂದಿಯಲ್ಲಿ ನಾವೂ ಒಬ್ಬರು ಎಂದು ನಾವು ಅಂದು ಅರ್ಥ ಮಾಡಿಕೊಳ್ಳುವುದಕ್ಕೇ ನಮಗೆ ವಾರಗಟ್ಟಲೆ ಸಮಯ ಹಿಡಿದಿತ್ತು. ನೆಲೆ ಕಳೆದುಕೊಂಡ ನಾವು ಅನಾಥರಂತೆ ಅವರಿವರ ಮನೆಯಲ್ಲಿ ಆಶ್ರಯ ಪಡೆದು, ಎರಡೆರಡು ಬಾಡಿಗೆ ಮನೆ ಹಿಡಿದು, ಸುದೀರ್ಘ ಮೂರು ವರ್ಷಗಳ ಹೋರಾಟದ ಫಲವಾಗಿ ಸರ್ಕಾರ ನಿರ್ಮಿಸಿದ ಮಾದಾಪುರದ ಜಂಬೂರಿನಲ್ಲಿ ಪುನರ್ವಸತಿ ಮನೆ ಪಡೆದುಕೊಂಡೆವು. ಈಗಲ್ಲಿ ನಾವೂ ಸೇರಿದಂತೆ ನಮ್ಮಂತಹ ಸುಮಾರು ಮುನ್ನೂರು ಕುಟುಂಬಗಳು ಪರಿಸ್ಥಿತಿಗೆ ಹೊಂದಿಕೊಂಡು ಸಹಬಾಳ ನಡೆಸುತ್ತಿದ್ದೇವೆ. ಕರಾಳತೆ ಮಾಸಿ ಜೀವನೋತ್ಸಾಹಕ್ಕೆ ತೆರೆದುಕೊಳ್ಳುತ್ತಿದ್ದೇವೆ. ಪರಿಸ್ಥಿತಿ ನಮ್ಮನ್ನು ಗಟ್ಟಿಯಾಗಿಸಿದೆ.

ಆ ಮೂರು ವರ್ಷಗಳು ಸಮಾಜ ನಮ್ಮನ್ನು ನೋಡಿದ ರೀತಿ, ನಡೆಸಿಕೊಂಡ ಪರಿ, ತೋರಿಸುತ್ತಿದ್ದ ಕನಿಕರ, ಕೆಲವರ ಅಪಹಾಸ್ಯ, ಮಾಡಿದ ಸಹಾಯ, ನೀಡಿದ ನೋವು ಈ ಮಳೆಗಾಲದ ಕರಾಳ ರಾತ್ರಿಗಳಲ್ಲಿ ನನ್ನ ನಿದ್ದೆಗೆಡಿಸುತ್ತದೆ. ಈ ಅನಾಹುತಗಳಿಗೆಲ್ಲಾ ಮಳೆ ಕಾರಣವಾ? ಪ್ರಕೃತಿ ಕಾರಣವಾ ಅಥವಾ ಪ್ರಕೃತಿಯ ಮೇಲೆ ನಾವು ಮಾಡುತ್ತಿರುವ ದೌರ್ಜನ್ನಗಳು ಕಾರಣವಾ? ಎಂದು ಆಗಾಗ್ಗೆ ದೂರದಲ್ಲಿ ಬೆಟ್ಟ ಅಗೆದು ನಿರ್ಮಿಸುತ್ತಿರುವ ಖಾಸಗಿ ರೆಸಾರ್ಟ್ಗಳತ್ತ ನೋಡುತ್ತಿರುತ್ತೇನೆ.
ranjithkum19@gmail.com

ಆಂದೋಲನ ಡೆಸ್ಕ್

Recent Posts

ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ರಾಜಕಾರಣಿಗಳಿವರು…

ಬಾರಾಮತಿ : ಭಾರತೀಯ ರಾಜಕಾರಣದಲ್ಲಿ ಅನೇಕ ರಾಜಕೀಯ ನಾಯಕರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ವಿಮಾನ ಅಪಘಾತದಲ್ಲಿ ಯಾವೆಲ್ಲಾ…

4 hours ago

ಹೆಬ್ಬಾಳಿನಲ್ಲಿ ಡ್ರಗ್ಸ್‌ ಲ್ಯಾಬ್‌ ಶಂಕೆ : ಶೆಡ್‌ವೊಂದರ ಮೇಲೆ ಎನ್‌ಸಿಬಿ ದಾಳಿ

ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ…

4 hours ago

ನಿಗಮ ಮಂಡಳಿ | ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ

ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ…

4 hours ago

ಡಿಜಿಟಲ್‌ ಅರೆಸ್ಟ್‌ ಕುತಂತ್ರ : 1 ಕೋಟಿ ವಂಚನೆ

ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ…

4 hours ago

ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌ ಇನ್ನಿಲ್ಲ ; ಬೆಂಗಳೂರು ಚಲೋ ಮುಂದೂಡಿಕೆ

ಬೆಂಗಳೂರು : ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿಅನಂತ್‌ ಸುಬ್ಬರಾವ್‌ (85) ಬುಧವಾರ ಸಂಜೆ ನಿಧನರಾಗಿದ್ದಾರೆ.…

5 hours ago

ಮೈಸೂರು | ಮೃಗಾಲಯದ ಯುವರಾಜ ಸಾವು

ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದೆ. 1987ರಲ್ಲಿ ಜರ್ಮನಿಯಿಂದ…

5 hours ago