Andolana originals

ಬರೋಬ್ಬರಿ 75 ರೂ ಮುಟ್ಟಿದ ಕೆಜಿ ತೆಂಗಿನಕಾಯಿ ಬೆಲೆ

ಸಣ್ಣ ಕಾಯಿಗೂ ೨೫ ರೂ.ನಿಂದ ೩೦ ರೂ. ಬೆಲೆ; ಕಾಯಿ ಖರೀದಿಸಲು ಗ್ರಾಹಕರು ಹಿಂದೇಟು

ಎಚ್.ಎಸ್.ದಿನೇಶ್ ಕುಮಾರ್

ಮೈಸೂರು: ತಿಂಗಳ ಹಿಂದೆ ಗ್ರಾಹಕರ ಕೈಗೆಟುಕುವಂತಿದ್ದ ತೆಂಗಿನಕಾಯಿ ಬೆಲೆ ಇದ್ದಕ್ಕಿದ್ದಂತೆ ಗಗನಕ್ಕೇರಿದ್ದು, ಅಡುಗೆಗೆ ಅಗತ್ಯವಾದ ತೆಂಗಿನ ಕಾಯಿ ಖರೀದಿಸಲು ಜನರು ಹಿಂದೆ ಮುಂದೆ ನೋಡುವಂತಾಗಿದೆ.

ಒಂದು ತಿಂಗಳ ಹಿಂದೆ ರಾಜ್ಯಾದ್ಯಂತ ತೆಂಗಿನಕಾಯಿ ಬೆಲೆ ಸಾಮಾನ್ಯವಾಗಿತ್ತು. ಆದರೀಗ ಸಣ್ಣ ಗಾತ್ರದ ಕಾಯಿಯೂ ೨೫ ರೂ.ನಿಂದ ೩೦ ರೂ.ವರೆಗೆ ಮಾರಾಟವಾಗುತ್ತಿದೆ. ಕಾಯಿಯ ಬೆಲೆ ಹೆಚ್ಚಳವಾದ್ದರಿಂದ ಗ್ರಾಹಕನ ಜೇಬಿಗೂ ಕತ್ತರಿ ಬೀಳುವಂತಾಗಿದ್ದರೂ ತೆಂಗು ಬೆಳೆಗಾರರಿಗೆ ಮಾತ್ರ ಆರ್ಥಿಕವಾಗಿ ಅನುಕೂಲವಾಗಿದೆ.

ಸಾಮಾನ್ಯವಾಗಿ ಕರ್ನಾಟಕ ಮತ್ತು ಕೇರಳದಲ್ಲಿ ಯಥೇಚ್ಛವಾಗಿ ತೆಂಗು ಬೆಳೆಯುವುದರಿಂದ ಒಂದು ತಿಂಗಳ ಹಿಂದೆ ತೆಂಗಿನಕಾಯಿ ಬೆಲೆ ಪ್ರತಿ ಕೆಜಿಗೆ ೨೫ ರೂ.ನಿಂದ ೩೦ ರೂ.ವರೆಗೆ ಇತ್ತು. ಬೇಸಿಗೆ ಹಿನ್ನೆಲೆಯಲ್ಲಿ ಜನವರಿ ತಿಂಗಳಿನಿಂದ ಏಪ್ರಿಲ್ ವರೆಗೆ ತೆಂಗು ಇಳುವರಿ ಕಡಿಮೆ ಇರುವುದರಿಂದ ತೆಂಗಿನಕಾಯಿ ಬೆಲೆ ಹೆಚ್ಚಳವಾಗುವುದು ಸಾಮಾನ್ಯ ಸಂಗತಿ. ಆದರೆ, ಈ ಬಾರಿ ಒಂದು ಕೆಜಿ ತೆಂಗಿನಕಾಯಿ ಬೆಲೆ ಬರೋಬ್ಬರಿ ೭೫ ರೂ.ಗೆ ಮುಟ್ಟಿದೆ. ಮಾರುಕಟ್ಟೆಯ ಇತಿಹಾಸದಲ್ಲಿ ಈ ಮಟ್ಟದ ಬೆಲೆ ಹೆಚ್ಚಳವಾಗಿದ್ದ ಉದಾಹರಣೆಯೇ ಇಲ್ಲ.  ಇದರಿಂದಾಗಿ ಸಾರ್ವಜನಿಕರು ತೆಂಗಿನಕಾಯಿ ಖರೀದಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಕೆಲವರಂತೂ ಅಡುಗೆಗೆ ಕಾಯಿ ಬಳಸುವುದೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇನ್ನು ಹೋಟೆಲ್ ಮಾಲೀಕರಿಗಂತೂ ತೆಂಗಿನಕಾಯಿ ಬೆಲೆ ಏರಿಕೆ ಬಿಸಿ ತುಪ್ಪವಾಗಿ ಪರಿಣಮಿ ಸಿದೆ. ಕಾಯಿ ಇಲ್ಲದೇ ಯಾವ ಅಡುಗೆಯೂ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದೆ. ಆದರೀಗ ಬೆಲೆ ನಾಲ್ಕು ಪಟ್ಟು ಹೆಚ್ಚಳವಾಗಿರುವುದರಿಂದ ಚಿಂತೆಗೀಡು ಮಾಡಿದೆ.

ಬಿಸಿಲಿನ ತಾಪ ಕಾರಣ: ತೆಂಗಿನ ತೋಟ ಹೊಂದಿರುವ ರೈತರು ಹೇಳುವ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಈ ಮಟ್ಟದ ಬಿಸಿಲು ಬಂದಿರಲಿಲ್ಲ. ಈ ಬಾರಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ಇಳುವರಿ ಕಡಿಮೆಯಾಗಿದೆ.

ಎಳನೀರಿಗೂ ಬೇಡಿಕೆ: ಬಿಸಿಲಿನ ಬೇಗೆ ಹೆಚ್ಚಿರುವ ಕಾರಣ ವಿಶೇಷ ವಾಗಿ ಎಳನೀರಿಗೆ ಹೆಚ್ಚು ಬೇಡಿಕೆ ಬಂದಿದೆ. ರಾಜ್ಯ ಮಾತ್ರವಲ್ಲದೇ ಉತ್ತರ ಭಾರತದ ರಾಜ್ಯಗಳಿಗೂ ರಾಜ್ಯದಿಂದ ಎಳನೀರು ಪ್ರತಿದಿನ ಹೋಗುತ್ತಿದೆ. ರೈತರಿಗೆ ತೆಂಗಿನಕಾಯಿ ಮಾರಾಟದಲ್ಲಿ ಬರುವ ಲಾಭಕ್ಕಿಂತ ಎಳನೀರು ಮಾರಾಟದಲ್ಲಿ ಹೆಚ್ಚಿನ ಲಾಭ ಸಿಗುತ್ತಿದೆ. ಎಳನೀರು ಖರೀದಿಸುವವರೇ ಮರ ಹತ್ತಿ ಎಳನೀರು ಕೀಳುವುದಲ್ಲದೆ, ಸಾಗಣೆಯನ್ನೂ ಅವರೇ ಮಾಡಿಕೊಳ್ಳುತ್ತಾರೆ. ಹೀಗಾಗಿ ರೈತನಿಗೆ ಖರ್ಚಿಲ್ಲದೆ ಲಾಭ ಸಿಗುತ್ತಿದೆ. ತೆಂಗಿನಕಾಯಿ ಬೆಲೆ ಹೆಚ್ಚಳವಾಗಲು ಈ ಅಂಶವೂ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಮುಂದಿನ ಜೂನ್‌ವರೆಗೂ ಹೀಗೆ ಬೆಲೆ ಏರಿಕೆ: 

ರೈತ ಮುಖಂಡರು ಹೇಳುವ ಪ್ರಕಾರ ತೆಂಗಿನಕಾಯಿ ಬೆಲೆಯು ಮುಂದಿನ ಜೂನ್ವರೆಗೂ ಹೀಗೆ ಮುಂದುವರಿಯಲಿದೆ. ಒಮ್ಮೆ ಮಳೆ ಆರಂಭವಾದಲ್ಲಿ ಎಳನೀರು ಬಳಸುವವರ ಸಂಖ್ಯೆಯೂ ಕಡಿಮೆಯಾಗುವುದರಿಂದ ತೆಂಗಿನಕಾಯಿ ಬೆಲೆ ಕಡಿಮೆಯಾಗಬಹುದು.

ಲಾಭ ಪಡೆಯುತ್ತಿರುವ ದಲ್ಲಾಳಿಗಳು:  ತೆಂಗಿನಕಾಯಿ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಳವಾಗಿದ್ದರೂ ಅಷ್ಟು ಮೊತ್ತ ರೈತರನ್ನು ತಲುಪುತ್ತಿಲ್ಲ. ತೋಟಗಳಿಗೆ ತೆರಳುವ ದಲ್ಲಾಳಿಗಳು ರೈತರೊಂದಿಗೆ ಚೌಕಾಸಿಗಿಳಿದು ಕೆಜಿ ಕಾಯಿಯನ್ನು ೩೫ ರೂ. ನಿಂದ ೪೫ ರೂ.ಗೆ ಖರೀದಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ.

” ಕೊಬ್ಬರಿ ಬೆಲೆ ಸಾಮಾನ್ಯ ತೆಂಗಿನಕಾಯಿ ಬೆಲೆ ಏರಿಕೆ ಆಗುತ್ತಿದೆ. ಆದರೆ, ಕೊಬ್ಬರಿ ಬೆಲೆ ಮಾತ್ರ ಹೆಚ್ಚಳವಾಗಿಲ್ಲ ಎಂಬುದು ಸಮಾಧಾನಕರ ಸಂಗತಿ. ಇದೀಗ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ೧೮೦ ರೂ. ಇದೆ. ಹೀಗಾಗಿ ಬಹುತೇಕರು ತೆಂಗಿನಕಾಯಿ ಬದಲಿಗೆ ಅಡುಗೆಗೆ ಕೊಬ್ಬರಿಯನ್ನೇ ಬಳಸುತ್ತಿದ್ದಾರೆ.”

” ಬಿಸಿಲಿನ ತಾಪ ಹೆಚ್ಚಳ, ಅಂತರ್ಜಲ ಕೊರತೆ ಹಾಗೂ ಇನ್ನಿತರೆ ಕಾರಣಗಳಿಂದ ರಾಜ್ಯಾದ್ಯಂತ ತೆಂಗಿನಕಾಯಿ ಬೆಲೆ ಹೆಚ್ಚಳವಾಗಿದೆ. ರೈತರು ಎಳನೀರನ್ನು ಹೆಚ್ಚು ಮಾರಾಟ ಮಾಡುತ್ತಿರುವುದರಿಂದ ಈ ಮಟ್ಟದ ಬೆಲೆ ಹೆಚ್ಚಳವಾಗಿದೆ. ಜೂನ್ ಬಳಿಕ ಬೆಲೆಗಳು ಇಳಿಕೆ ಕಾಣಬಹುದು.”

-ಮಹೇಶ್ ಪ್ರಭು, ರೈತ ಮುಖಂಡರು.

” ಕಳೆದ ಮೂರು ತಿಂಗಳಿನಿಂದಲೇ ತೆಂಗಿನಕಾಯಿ ಬೆಲೆ ಸ್ವಲ್ಪ ಸ್ವಲ್ಪವೇ ಹೆಚ್ಚಳವಾಗುವ ಮೂಲಕ ಇದೀಗ ದಾಖಲೆಯ ರೀತಿ ಬೆಲೆ ಏರಿಕೆ ಕಂಡಿದೆ. ಇದರಿಂದಾಗಿ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಮುಂದಿನ ದಿನಗಳಲ್ಲಿ ಬೆಲೆ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಹೋಟೆಲ್ ಉದ್ಯಮವಿದೆ.”

-ಸಿ.ನಾರಾಯಣಗೌಡ, ಅಧ್ಯಕ್ಷ, ಹೋಟೆಲ್ ಮಾಲೀಕರ ಸಂಘ

ಆಂದೋಲನ ಡೆಸ್ಕ್

Recent Posts

ಬಹೂರೂಪಿ | ಜಾನಪದ ಉತ್ಸವಕ್ಕೆ ಚಾಲನೆ

ಮೈಸೂರು : ಸಂಕ್ರಾಂತಿ ಹೊಸ್ತಿಲಲ್ಲಿ ಮೈಸೂರಿನಲ್ಲಿ ನಡೆಯುವ ಕಲಾ ಹಬ್ಬವಾದ ಬಹುರೂಪಿ ನಾಟಕೋತ್ಸವವಕ್ಕೆ ಮುನ್ನುಡಿ ಬರೆದು ‘ಜಾನಪದ ಉತ್ಸವ’ ರಂಗಾಯಣದಲ್ಲಿ…

10 hours ago

ಸಂಗ್ರಹಾಲಯವಾಗಿ ಕುವೆಂಪು ಅವರ ಉದಯರವಿ ಮನೆ

ರಸಪ್ರಶ್ನೆ ಕಾರ್ಯಕ್ರಮದ ಸಮಾರಂಭದಲ್ಲಿ ಡಾ.ಚಿದಾನಂದ ಗೌಡ ಮಾಹಿತಿ ಕುಶಾಲನಗರ : ಕುವೆಂಪುರವರ ಉದಯರವಿ ಮನೆಯನ್ನು ಸಂಗ್ರಹಾಲಯ ಮಾಡುವ ಬಗ್ಗೆ ಚಿಂತನೆ…

10 hours ago

ಮ.ಬೆಟ್ಟ ಮಾರ್ಗದಲ್ಲಿ ಚಿರತೆ ಪ್ರತ್ಯಕ್ಷ : ಎಚ್ಚರಿಕೆಯ ಸಂಚಾರಕ್ಕೆ ಕೋರಿಕೆ

ಹನೂರು : ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಾರ್ಗಮಧ್ಯ ರಂಗಸ್ವಾಮಿ ಒಡ್ಡಿನ ಬಳಿ ತಡೆಗೋಡೆಯ ಮೇಲೆ ಚಿರತೆ ಮತ್ತು ಅದರ ಎರಡು…

10 hours ago

ದ್ವೇಷ ಮರೆಯಿರಿ, ಪ್ರೀತಿ ಗಳಿಸಿ : ಡಿ.ಆರ್.ಪಾಟೀಲ್ ಕರೆ

ನಂಜನಗೂಡು : ದ್ವೇಷ ಮರೆತು, ಪ್ರೀತಿ ಗಳಿಸುವಂತೆ ಕೆಲಸ ಮಾಡಿ ಜೀವನ ನಡೆಸಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ…

10 hours ago

ಡ್ಯಾಡ್ ಈಸ್‌ ಹೋಂ | ಎಚ್‌ಡಿಕೆ ಎಂಟ್ರಿಗೆ ಡಿಕೆಶಿ, ಸಿದ್ದು ಶಾಕ್‌ ; ಸಂಚಲನ ಮೂಡಿಸುತ್ತಿರುವ AI ವಿಡಿಯೋ

ಬೆಂಗಳೂರು : ನಟ ಯಶ್ ಅವರು ‘ಟ್ಯಾಕ್ಸಿಕ್’ ಸಿನಿಮಾದ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟೀಸರ್ ನಲ್ಲಿನ ಕಾರು…

10 hours ago

ಸೋಮನಾಥದಲ್ಲಿ ಶೌರ್ಯ ಯಾತ್ರೆ

ಸೋಮನಾಥ : ಗುಜರಾತ್‌ನ ಗಿರ್‌ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಆಯೋಜಿಸಲಾದ ವಿಧ್ಯುಕ್ತ…

11 hours ago