ಕೆ.ಬಿ.ರಮೇಶ ನಾಯಕ
ಕೆಐಎಡಿಬಿಯಿಂದ ಈಗಾಗಲೇ ವಾರ್ತಾ ಇಲಾಖೆಗೆ ೧೫೦ ಎಕರೆ ಜಾಗ ಹಸ್ತಾಂತರ
ತಾಂಡವಪುರ, ಕಡಕೊಳ ಕೈಗಾರಿಕಾ ಪ್ರದೇಶದ ಬೆಳವಣಿಗೆಗೂ ಸಹಕಾರಿ
ಚಿತ್ರನಗರಿ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ವಿಧ್ಯುಕ್ತವಾಗಿ ಚಾಲನೆ ದೊರೆಯುವ ನಿರೀಕ್ಷೆ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು- ನಂಜುಂಡೇಶ್ವರನ ನೆಲೆವೀಡು ಎಂದೇ ಖ್ಯಾತಿ ಹೊಂದಿರುವ ನಂಜನಗೂಡು ಮಧ್ಯದಲ್ಲಿರುವ ಇಮ್ಮಾವಿನಲ್ಲಿ ಅಂತರಾಷ್ಟ್ರೀಯ ದರ್ಜೆಯ ಚಿತ್ರನಗರಿ ನಿರ್ಮಾಣ ಮಾಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿರುವುದರಿಂದ ದಶಕದ ನಂತರ ಚಿತ್ರನಗರಿ ನಿರ್ಮಾಣದ ಚಟುವಟಿಕೆಯು ಮತ್ತೆ ಗರಿಗೆದರಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಅಂತಾರಾಷ್ಟ್ರೀಯ ದರ್ಜೆಯ ಚಿತ್ರನಗರಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ೫೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಹೇಳಲಾಗಿದೆ. ಕಡಕೊಳ, ತಾಂಡವಪುರ ಕೈಗಾರಿಕಾ ಪ್ರದೇಶಕ್ಕೆ ಭೂಮಿಯನ್ನು ಮೀಸಲಿಟ್ಟಿರುವ ಸಮೀಪದಲ್ಲೇ ೧೫೦ ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಇದರಿಂದಾಗಿ ಬಹು ವರ್ಷಗಳ ಕನಸು ನನಸಾಗುವತ್ತ ಹೆಜ್ಜೆ ಇಡುವ ಜತೆಗೆ ಚಿತ್ರನಗರಿ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ವಿಧ್ಯುಕ್ತವಾಗಿ ಚಾಲನೆ ದೊರೆಯುವ ನಿರೀಕ್ಷೆ ಇದೆ.
ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ೨೦೧೫- ೧೬ನೇ ಸಾಲಿನ ಬಜೆಟ್‌ನಲ್ಲಿ ಚಿತ್ರನಗರಿ ನಿರ್ಮಾಣ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು. ಆದರೆ, ಅವರ ಅಧಿಕಾರಾವಧಿ ಪೂರ್ಣಗೊಳ್ಳುವವರೆಗೂ ಚಿತ್ರನಗರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುದಾನ ಬಿಡುಗಡೆಯಾಗಲಿಲ್ಲ. ನಂತರ ಸರ್ಕಾರ ಬದಲಾವಣೆಯಾಗಿ ಎಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದಾಗ ರಾಮನಗರದಲ್ಲಿ ಚಿತ್ರನಗರಿ ನಿರ್ಮಾಣ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು. ಆ ನಂತರ ಕುಮಾರಸ್ವಾಮಿ ತಮ್ಮ ನಿರ್ಧಾರ ಬದಲಾಯಿಸಿ ನಟ ಅಂಬರೀಶ್ ಅವರ ಆಶಯದಂತೆ ಚಿತ್ರನಗರಿಯನ್ನು ಮೈಸೂರಿನಲ್ಲಿ, ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದರು. ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಬೆಂಗಳೂರಿನ ಹೆಸರಘಟ್ಟದಲ್ಲಿ ಚಿತ್ರನಗರಿ ನಿರ್ಮಾಣ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದರು. ಹೀಗಾಗಿ ಚಿತ್ರನಗರಿ ಎಲ್ಲಿ ನಿರ್ಮಾಣವಾಗಲಿದೆ ಎಂಬ ಗೊಂದಲ ಹಲವಾರು ವರ್ಷಗಳ ಕಾಲ ಕಾಡಿತ್ತು. ಆದರೆ, ೨೦೨೩ರಲ್ಲಿ ಮತ್ತೆ ಎರಡನೇ ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಆಸಕ್ತಿ ತೋರಿದರು. ಅದರಂತೆ, ಈ ಬಾರಿಯ ಬಜೆಟ್‌ನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಅನುದಾನ ಘೋಷಣೆ ಮಾಡಿರುವುದು ಗಮನಾರ್ಹವಾಗಿದೆ.
ಜಾಗ ಹಸ್ತಾಂತರ: ಚಿತ್ರನಗರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಐಡಿಬಿಯಿಂದ ವಾರ್ತಾ ಇಲಾಖೆಗೆ ೧೫೦ ಎಕರೆ ಜಾಗವನ್ನು ಹಸ್ತಾಂತರಿಸಲಾಗಿದೆ. ಮುಂದಿನ ಹಂತದಲ್ಲಿ ಸರ್ಕಾರ ಖಾಸಗಿ ಸಹಭಾಗಿತ್ವ ದಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸಿ ಅರ್ಹ ಸಂಸ್ಥೆಗೆ ಚಿತ್ರನಗರಿ ನಿರ್ಮಾಣದ ಜವಾಬ್ದಾರಿ ವಹಿಸುವ ಕಾರ್ಯವಾಗಬೇಕು. ಈ ಕಾರ್ಯ ಕೈಗೊಳ್ಳುವ ಸಲುವಾಗಿ ಬಜೆಟ್ ಮಂಡನೆಗೂ ಮುನ್ನ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು.
ಪ್ರಸ್ತುತ ಚಿತ್ರರಂಗಕ್ಕೆ ಅಗತ್ಯವಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಚಿತ್ರನಗರಿ ನಿರ್ಮಾಣ ಮಾಡಬೇಕು. ಚಿತ್ರನಗರಿಂiಲ್ಲಿ ಥಿಯೇಟರ್, ಸ್ಟುಡಿಯೋ, ಮಲ್ಟಿಪ್ಲೆಕ್ಸ್, ಥೀಮ್ ಪಾರ್ಕ್, ಹೋಟೆಲ್ಗಳನ್ನೂ ನಿರ್ಮಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದ್ದರು.
ಪ್ರಸಿದ್ಧ ಪ್ರವಾಸಿ ತಾಣಗಳು: ಅರಮನೆಗಳ ನಗರಿ ಮೈಸೂರು ಚಿತ್ರನಗರಿ ನಿರ್ಮಾಣಕ್ಕೆ ಸೂಕ್ತವಾದ ಸ್ಥಳ ಹೊಂದಿದೆ. ಮೈಸೂರು ಸುತ್ತಮುತ್ತ ಹಲವಾರು ಇತಿಹಾಸ ಪ್ರಸಿದ್ಧ ತಾಣಗಳಿವೆ. ಸುಂದರ ಉದ್ಯಾನವನಗಳು, ನದಿಗಳು, ಐತಿಹಾಸಿಕ ತಾಣಗಳು, ಜಲಪಾತ, ಬೆಟ್ಟಗುಡ್ಡ ಗಳಿವೆ. ಜಗತ್ತಿನ ಯಾವುದೇ ಭಾಗದಲ್ಲಿ ಒಂದೇ ಕಡೆ ಇಷ್ಟೊಂದು ವೈವಿಧ್ಯ ಮಯ ತಾಣಗಳು ಕಾಣಸಿಗುವುದಿಲ್ಲ.
ಚಿತ್ರ ನಗರಿ ನಿರ್ಮಾಣದಿಂದ ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ಕನ್ನಡ ಸಿನಿಮಾ ಜನ್ಮ ತಳೆದದ್ದೇ ಮೈಸೂರಿನಲ್ಲಿ ಎನ್ನುವುದು ಗಮನಾರ್ಹ ಸಂಗತಿ. ೧೯೨೯ರಲ್ಲಿಯೇ ಮೈಸೂರಿನ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರು ಕೈಯಿಂದ ಸುತ್ತಿ ಚಿತ್ರ ತೆಗೆಯುವ ಕ್ಯಾಮೆರಾದಿಂದ ‘ನಿರುಪಮಾ’ ಎಂಬ ನಾಟಕವನ್ನು ಯಥಾವತ್ತಾಗಿ ಚಿತ್ರೀಕರಿಸಿದ್ದರು. ಹೀಗಾಗಿ ಮೈಸೂರು ಅರಮನೆಯೇ ಮೊದಲ ಸ್ಟುಡಿಯೋ ಹಾಗೂ ಕಂಠೀರವ ನರಸಿಂಹರಾಜ ಒಡೆಯರ್ ಮೊದಲ ಕನ್ನಡ ಸಿನಿಮಾ ನಿರ್ಮಾಪಕರು. ಆದ್ದರಿಂದ ಮೈಸೂರಿನ ಇಮ್ಮಾವಿನಲ್ಲಿ ಚಿತ್ರನಗರಿ ನಿರ್ಮಾಣ ಅತ್ಯಂತ ಸೂಕ್ತ ಎಂಬುದು ಸಿನಿಮಾ ತಜ್ಞರ ಅಭಿಪ್ರಾಯವಾಗಿದೆ.
ಮೈಸೂರಿಗೂ ಸಿನಿಮಾಗೂ ನಂಟು:
ಚಿತ್ರೋದ್ಯಮಕ್ಕೂ ಮೈಸೂರಿಗೂ ಅವಿನಾಭಾವ ನಂಟು ಇದೆ. ೧೯೪೬ ರಲ್ಲಿ ತೆರೆಕಂಡ ಹಾಲಿವುಡ್‌ನ ಹ್ಯಾರಿ ಬ್ಲಾಕ್ ಟೈಗರ್ ಸಿನಿಮಾ ನಿರ್ಮಾಪಕ ಅಲೆಗ್ಸಾಂಡರ್ ಕೊರ್ಡ ಅವರು ಸಿನಿಮಾ ಚಿತ್ರೀಕರಣಕ್ಕೆ ವಿಶ್ವದ ಶ್ರೇಷ್ಠ ತಾಣ ಮೈಸೂರು ಎಂದು ಬಣ್ಣಿಸಿದ್ದರು. ಹಾಲಿವುಡ್ ನಲ್ಲಿ ಖ್ಯಾತಿ ಗಳಿಸಿದ ನಗರದ ಸಾಬು ಅವರು ಮೈಸೂರಿನಲ್ಲಿ ಸುಸಜ್ಜಿತವಾದ ಫಿಲಂ ಸ್ಟುಡಿಯೋ ಸ್ಥಾಪಿಸಬೇಕೆಂದು ಬಯಸಿದ್ದರು. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಚಿತ್ರನಗರಿ ನಿರ್ಮಾಣದ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣವಾಗಲಿ ಎಂದು ವರನಟ ಡಾ.ರಾಜ್‌ಕುಮಾರ್ ಸಲಹೆ ನೀಡಿದ್ದರು.
” ಇಮ್ಮಾವು ಚಿತ್ರನಗರಿ ನಿರ್ಮಾಣಕ್ಕೆ ಅತ್ಯಂತ ಸೂಕ್ತವಾದ ಜಾಗ. ರಾಜ್ಯ ಸರ್ಕಾರ ಇಮ್ಮಾವಿನಲ್ಲಿ ಚಿತ್ರನಗರಿಯನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡಲು ಆಸಕ್ತಿ ತೋರಿರುವುದು ಸಂತಸ ತಂದಿದೆ. ಆದರೆ, ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸಲು ಕ್ರಮ ವಹಿಸಬೇಕು. ಇಮ್ಮಾವಿನಲ್ಲಿ ಚಿತ್ರನಗರಿ ನಿರ್ಮಾಣವಾದರೆ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯ ಮೇಲಿನ ಅವಲಂಬನೆ ತಪ್ಪುತ್ತದೆ. ಮೈಸೂರು ಸುತ್ತಮುತ್ತ ಸಿನಿಮಾ ಚಿತ್ರೀಕರಣಕ್ಕೆ ಸಾಕಷ್ಟು ಉತ್ತಮ ಸ್ಥಳಗಳಿದ್ದು, ಸಿನಿಮಾ ನಿರ್ಮಾಣ ಮಾಡುವವರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.”
– ಎಸ್.ವಿ.ರಾಜೇಂದ್ರಸಿಂಗ್ ಬಾಬು, ಹಿರಿಯ ನಿರ್ದೇಶಕ
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…