banu musthaq
ಸಂದರ್ಶನ: ರಶ್ಮಿ ಕೋಟಿ
ಬೂಕರ್ ಪ್ರಶಸ್ತಿ ಪುರಸ್ಕತ “ಹಾರ್ಟ್ ಲ್ಯಾಂಪ್” ಕೃತಿಯಿಂದ ಬಾನು ಮುಷ್ತಾಕ್ ಅವರು ಭಾರತೀಯ ಸಾಹಿತ್ಯದಲ್ಲಿ ಹೊಸ ಅಧ್ಯಾಯವನ್ನೇ ಬರೆದಿದ್ದಾರೆ. ಶೋಷಿತರ, ತಳವರ್ಗದ, ಹೆಣ್ಣಿನ ನೋವನ್ನು ನಿಖರವಾಗಿ ಚಿತ್ರಿಸಿರುವ ಈ ಕಥಾ ಸಂಕಲನ ಈಗ ಜಗತ್ತಿನ ಗಮನ ಸೆಳೆದಿದೆ. ಇದು ಕೇವಲ ಸಾಹಿತ್ಯದ ಗೆಲುವಲ್ಲ; ಇದು ನಿಶ್ಶಬ್ದ ಧ್ವನಿಗೆ ನೀಡಲಾದ ಅಕ್ಷರ ರೂಪಕ್ಕೆ ದೊರೆತಿರುವ ಮಾನ್ಯತೆ. ಈ ಮಹತ್ವದ ಕ್ಷಣದಲ್ಲಿ ತಮ್ಮ ಸಾಹಿತ್ಯದ ಹಾದಿ, ಹೋರಾಟ ಮತ್ತು “ಹಾರ್ಟ್ ಲ್ಯಾಂಪ್” ಹುಟ್ಟಿದ ಕಥೆಯ ಕುರಿತು ಬಾನು ಮುಷ್ತಾಕ್ ಅವರು ‘ಆಂದೋಲನ’ ದಿನಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಆಂದೋಲನ: ಬೂಕರ್ ಇತಿಹಾಸದಲ್ಲಿಯೇ ಸಣ್ಣ ಕತೆಗಳಿಗೆ ಪ್ರಶಸ್ತಿ ಲಭಿಸಿರುವುದು ಇದೇ ಮೊದಲು. ಈ ಕುರಿತು ನೀವು ಏನು ಹೇಳ ಬಯಸುತ್ತೀರಿ?
ಬಾನು: ಹೌದು. ಇದುವರೆಗೂ ಸಣ್ಣ ಕತೆಗಳನ್ನು ಬೂಕರ್ ಸ್ಪರ್ಧೆಗೆ ಪರಿಗಣಿಸಿಯೇ ಇಲ್ಲ. ಇದೇ ಮೊಟ್ಟಮೊದಲ ಬಾರಿಗೆ ಸಣ್ಣಕತೆಗಳಿಗೆ ಬೂಕರ್ ಪ್ರಶಸ್ತಿ ಲಭಿಸಿರುವುದು. ಸಾಮಾನ್ಯ ವಾಗಿ ಸಣ್ಣ ಕತೆಗಳನ್ನು ಕಾದಂಬರಿ ಕ್ಷೇತ್ರಕ್ಕಿಂತ ಕಡಿಮೆ ಪ್ರಾಮುಖ್ಯತೆ ಹೊಂದಿರುವುದು ಎಂದು ಪರಿಗಣಿಸಲಾ ಗುತ್ತದೆ ಹಾಗೂ ಬಹುತೇಕ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಫಿಕ್ಷನ್ ಎಂದರೆ ಕಾದಂಬರಿ ಎಂದೇ ಲೆಕ್ಕ. ಹಾಗಾಗಿ ನಮ್ಮ ಕಥಾ ಸಂಕಲನ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ ಎಂದೇ ಹೇಳಬಹುದು. ಇದರೊಂದಿಗೆ ಮತ್ತೊಂದು ದಾಖಲೆ ಎಂದರೆ ನಾನು ಹಾಗೂ ನನ್ನ ಕಥಾ ಸಂಕಲನದ ಅನುವಾದಕಿಯಾದ ದೀಪಾ ಭಸ್ತಿ ಇಬ್ಬರೂ ಕನ್ನಡಿಗರು, ಇಬ್ಬರೂ ಕಂದು ವರ್ಣದವರು. ಇದೂ ಕೂಡ ಒಂದು ಹೊಸ ವಿಶ್ವ ದಾಖಲೆಯೇ ಸರಿ.
ಆಂದೋಲನ: ನಿಮ್ಮ ಕತೆಗಳ ಸೃಷ್ಟಿಗೆ ಕಾರಣವಾದ ಮೂಲ ಯೋಚನೆ ಅಥವಾ ಅನುಭವ ಯಾವುದು?
ಬಾನು: ಒಂದೊಂದು ಕತೆಗೂ ವಿಭಿನ್ನ ಹಿನ್ನೆಲೆಯಿದೆ. ಆಯಾ ಸಂದರ್ಭೋಚಿತವಾಗಿ ತೋರಿ ಬರುವಂತಹ ಪ್ರಚೋದನೆಯನ್ನು ಕಲಾತ್ಮಕವಾಗಿ ಅಭಿವ್ಯಕ್ತಿ ಮಾಡಿದ್ದೇನೆ. ಹಾಗಾಗಿ ಪ್ರತೀ ಕತೆಯ ಸೃಷ್ಟಿಯ ಸಂದರ್ಭವೂ ಭಿನ್ನವಾಗಿದ್ದು, ಅದರ ಹಿಂದಿನ ಪ್ರಚೋದನೆಯೂ ಭಿನ್ನವಾಗಿದೆ.
ಆಂದೋಲನ: ನಿಮ್ಮ ಕತೆಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸುವಾಗ ದೀಪಾ ಹಾಗೂ ನಿಮ್ಮ ನಡುವೆ ಯಾವ ರೀತಿಯ ಚರ್ಚೆಗಳಾಗುತ್ತಿದ್ದವು?
ಬಾನು: ನಾನು ದೀಪಾ ಅವರಿಗೆ ಎಲ್ಲ ರೀತಿಯ ಸ್ವಾತಂತ್ರ್ಯವನ್ನು ಕೊಟ್ಟಿದ್ದೆ. ಮೊದಲಿಗೆ “ಹಸೀನಾ ಮತ್ತು ಇತರ ಕತೆಗಳು” ಕೃತಿಯಿಂದ ದೀಪಾ ಅವರು ೧೨ ಕತೆಗಳನ್ನು ಭಾಷಾಂತರಕ್ಕೆ ಆಯ್ಕೆ ಮಾಡಿಕೊಂಡು ನನಗೆ ಕಳಿಸಿದರು. ನನ್ನ ಕತೆಯಲ್ಲಿ ಅನೇಕ ಮುಸ್ಲಿಂ ಸಂಪ್ರದಾಯದ ವಿಚಾರಗಳನ್ನು ಹಾಗೂ ಉರ್ದು ಪದಗಳನ್ನು ಪ್ರಸ್ತಾಪ ಮಾಡಿರುವುದರಿಂದ ಅವುಗಳ ಬಗ್ಗೆ ವಿವರಗಳನ್ನು ಕೇಳುತ್ತಿದ್ದರು. ನಾನು ವಿವರಿಸುತ್ತಿದ್ದೆ. ಅದರ ಹೊರತಾಗಿ ಹೆಚ್ಚೇನೂ ಚರ್ಚೆ ಮಾಡಲಿಲ್ಲ.
ಆಂದೋಲನ: ನೀವು ಮುಸ್ಲಿಂ ಮಹಿಳೆಯರು ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಗುರಿಯಾಯಿತು. ಆ ಘಟನೆ ನಿಮ್ಮ ಬರವಣಿಗೆಯ ಮೇಲೆ ಪ್ರಭಾವ ಬೀರಿತೆ?
ಬಾನು: ನನ್ನ ಕತೆಗಳ ಕುರಿತು ಯಾರಿಗೂ ಯಾವುದೇ ತಕರಾರುಗಳಿಲ್ಲ. ಮುಸ್ಲಿಂ ಸಮುದಾಯದವರಿಗೂ ಇಲ್ಲ. ಆದರೆ ಈ ವಿವಾದದ ನಂತರ ನನ್ನ ವಿಚಾರ ಇನ್ನಷ್ಟು ಸ್ಛುಟವಾಯಿತು. ಬರವಣಿಗೆಯ ಶೈಲಿಯಲ್ಲಿ, ಶಬ್ದಗಳ ಪ್ರಯೋಗದಲ್ಲಿ ಎಚ್ಚರಿಕೆ ವಹಿಸುವುದು ಅನಿವಾರ್ಯವಾಯಿತು.
ಆಂದೋಲನ: ನಿಮ್ಮ ಕತೆಯ ಪಾತ್ರಗಳೇನಾದರೂ ನಿಮ್ಮನ್ನು ಕಾಡಿವೆಯೇ?
ಬಾನು: ಖಂಡಿತಾ ಇಲ್ಲ. ನನ್ನ ಪಾತ್ರಗಳು ಎಂದೂ ತಕರಾರು ಮಾಡಿಲ್ಲ, ನನ್ನ ಬಳಿ ನ್ಯಾಯ ಕೇಳಿಲ್ಲ. ಏಕೆಂದರೆ ಅವುಗಳಿಗೆ ಎಲ್ಲೂ ಕೂಡ ಅನ್ಯಾಯ ಮಾಡಿಲ್ಲ. ಹಲವಾರು ಬಾರಿ ನಾನು ಮತ್ತು ಪಾತ್ರ ಎರಡೂ ಒಂದೇ ಆಗಿರುವ ಸಂದರ್ಭಗಳೂ ಇವೆ. ಅಲ್ಲದೆ ನಾನು ಎಂದೂ ಆತ್ಮವಂಚನೆ ಮಾಡಿಕೊಂಡವಳಲ್ಲ. ಹಾಗಾಗಿ ನನ್ನ ಪಾತ್ರಗಳಿಗೂ ನಾನು ಎಂದೂ ವಂಚನೆ ಮಾಡಿಲ್ಲ. ಹಾಗಾಗಿ ಅವರ‍್ಯಾರೂ ನನ್ನೊಂದಿಗೆ ಜಿದ್ದಿಗೆ ಬಿದ್ದಿಲ್ಲ.
ಆಂದೋಲನ: ಹೊಸ ತಲೆಮಾರಿನ ಲೇಖಕರಿಗೆ ಯಾವ ಸಂದೇಶ ಕೊಡಲು ಬಯಸುತ್ತೀರಾ?
ಬಾನು: ಹೊಸ ತಲೆಮಾರಿನ ಲೇಖಕರು ಹೊಸ ಕಾಲದ ಅವಶ್ಯಕತೆಗಳಿಗೆ ತಕ್ಕ ಹಾಗೆ ಬರೆಯುತ್ತಿದ್ದಾರೆ. ಬಹಳ ಪ್ರಮುಖವಾದ ಯುವ ಲೇಖಕರು ಮೂಡಿದ್ದಾರೆ. ಅವರು ಬಹಳ ಸ್ಪಷ್ಟವಾಗಿ ಹಾಗೂ ಸಮೃದ್ಧವಾಗಿ ಬರವಣಿಗೆಯನ್ನು ಮಾಡುತ್ತಿದ್ದಾರೆ. ಬರವಣಿಗೆ ಎಂಬುದೇ ಒಂದು ಸಾಂಸ್ಕ ತಿಕ ಕ್ರಿಯೆ. ಹಾಗಾಗಿ ಬರವಣಿಗೆಯಲಿ ನಮ್ಮ ಜನಜೀವನಕ್ಕೆ, ನಮ್ಮ ದೇಶಕ್ಕೆ ಅಭಿವೃದ್ಧಿಪರವಾದ ಚಿಂತನೆಯನ್ನು ಕೊಡುತ್ತಾ ಅದನ್ನು ಕಾರ್ಯಗೊಳಿಸುವತ್ತ ಸಕ್ರಿಯರಾಗುತ್ತಾ ನಮ್ಮ ಸಮಾಜ ದಲ್ಲಿ ಚಿಂತನೆಯ ದೀಪವನ್ನು ಕೂಡ ಹಚ್ಚುವ ಕೆಲಸ ಮಾಡಬೇಕಿದೆ.
ಆಂದೋಲನ: ದೀಪಾ ಭಸ್ತಿಯವರು ನಿಮ್ಮ ಕೃತಿಯನ್ನು ಸಮರ್ಥವಾಗಿ ಅನುವಾದ ಮಾಡಿದ ಕಾರಣ ಅದಕ್ಕೆ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಸಂದರ್ಭದಲ್ಲಿ ಅನುವಾದಕರ ಶಕ್ತಿ ಹಾಗೂ ಪ್ರಾಮುಖ್ಯತೆಯ ಬಗ್ಗೆ ಏನು ಹೇಳ ಬಯಸುತ್ತೀರಿ?
ಬಾನು: ಅನುವಾದದ ಪ್ರಕ್ರಿಯೆ ನಮ್ಮ ರಾಜ್ಯದಲ್ಲಿ ಕಡೆಗಣಿಸಲ್ಪಟ್ಟ ಸಾಹಿತ್ಯಕ ಕ್ರಿಯೆಯಾಗಿದೆ. ನೀವು ಮಲಯಾಳಂ ಸಾಹಿತ್ಯವನ್ನು ಗಮನಿಸಿದರೆ ಅಲ್ಲಿನ ಅನೇಕ ಪುಸ್ತಕಗಳು ಬೇರೆ ಭಾಷೆಗಳಿಗೆ ಹಾಗೂ ಬೇರೆ ಭಾಷೆಯ ಪುಸ್ತಕಗಳು ಮಲಯಾಳಂ ಭಾಷೆಗೆ ಅನುವಾದಗಳಾಗಿವೆ. ಆದರೆ ನಮ್ಮಲ್ಲಿ ಅನುವಾದದ ಕೆಲಸ ಹೆಚ್ಚಾಗಿ ಆಗುತ್ತಿಲ್ಲ. ಹಾಗಾಗಿ ಅನುವಾದಕರ ಶಕ್ತಿ ಹಾಗೂ ಪ್ರಾಮುಖ್ಯತೆ ಕುರಿತಾಗಿ ವಿಚಾರಗೋಷ್ಠಿಗಳು ನಡೆಯಬೇಕು. ಅದರೊಂದಿಗೆ ಹೆಚ್ಚು ಹೆಚ್ಚು ಅನುವಾದಕರು ಬೆಳೆಯಲು ಬೇಕಾದರೆ ಅನುವಾದಕ್ಕೆ ಸೂಕ್ತ ಸಂಭಾವನೆ ಕೊಡುವ ವ್ಯವಸ್ಥೆ ಬಂದರೆ ಅನುವಾದ ಕ್ಷೇತ್ರವು ಖಂಡಿತವಾಗಿಯೂ ಹಿಗ್ಗಲಿದೆ.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…