4 ಕೋಟಿ ರೂ. ಕಾಮಗಾರಿ ಅಂದಾಜು ವೆಚ್ಚ
2.20 ಕೋಟಿ ರೂ. ಮೆಟ್ಟಿಲುಗಳು, ರೈಲಿಂಗ್ ಅಳವಡಿಕೆಗೆ
15 ಕೋಟಿ ರೂ. ತೇರಿನ ಬೀದಿ ಕಾಂಕ್ರಿಟೀಕರಣಕ್ಕೆ
3.25 ಕೋಟಿ ರೂ. ಜಿಎಸ್ ಟಿ ಕಳೆದು ಉಳಿದ ಅನುದಾನ
ಚಾಮರಾಜನಗರ: ಶ್ವೇತಾದ್ರಿಗಿರಿ ಎಂದೇ ಕರೆಯಲ್ಪಡುವ ಸುಪ್ರಸಿದ್ದ ಪ್ರವಾಸಿ ತಾಣ ಬಿಳಿಗಿರಿರಂಗನಬೆಟ್ಟದಲ್ಲಿ ಭಕ್ತರು ತೇರಿನ ಬೀದಿಯಿಂದ ರಂಗಸ್ವಾಮಿ ದೇವಾಲಯಕ್ಕೆ ತೆರಳಲು ಹೊಸ ಮೆಟ್ಟಿಲು ಅಳವಡಿಸಲು ಅನುದಾನ ಬಿಡುಗಡೆಯಾಗಿ 8 ತಿಂಗಳುಗಳಾದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ.
ಪ್ರವಾಸೋದ್ಯಮ ಇಲಾಖೆಯ ಅನುದಾನ 4 ಕೋಟಿ ರೂ. ವೆಚ್ಚದಲ್ಲಿ ಹಳೆಯ ಮೆಟ್ಟಲು ಅಳವಡಿಸುವ ಕಾಮಗಾರಿಯ ಉಸ್ತುವಾರಿಯನ್ನು ಲೋಕೋಪಯೋಗಿ ಇಲಾಖೆಯು ವಹಿಸಿಕೊಂಡಿದೆ. ಟೆಂಡರ್ ಕೂಡ ನೀಡ ಲಾಗಿದೆ. ಆದರೆ, ಕಾಮಗಾರಿಯನ್ನು ಆರಂಭಿಸಲು ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮೀನಮೇಷ ಎಣಿಸುತ್ತಿದ್ದಾರೆ.
ಬಿಳಿಗಿರಿರಂಗನಬೆಟ್ಟದಲ್ಲಿ ತೇರಿನ ಬೀದಿಯಿಂದ ರಂಗನಾಥಸ್ವಾಮಿ ಮೂರ್ತಿ ಸಮೇತ ಅಲಮೇಲಮ್ಮ ದೇವಾಲಯಕ್ಕೆ ತೆರಳಲು ಸುಮಾರು ಅರ್ಧ ಕಿ.ಮೀ. ದೂರ ಮೆಟ್ಟಿಲುಗಳ ಮೂಲಕ ಹೋಗಬಹುದು. 10 ವರ್ಷಗಳ ಹಿಂದೆ ಈ ಮಾರ್ಗದಲ್ಲೇ ಭಕ್ತರು ಕೂಡ ದೇವಾಲಯವನ್ನು ಪ್ರವೇಶಿಸುತ್ತಿದ್ದರು.
ದಿ.ಎಚ್.ಎಸ್.ಮಹದೇವಪ್ರಸಾದ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮತ್ತು ದಿ.ಆರ್. ಧ್ರುವನಾರಾಯಣ ಅವರು ಸಂಸದರಾಗಿದ್ದಾಗ ರಥದ ಬೀದಿಯಿಂದ ಎಡಕ್ಕೆ ತಿರುವುಗಳು ರಸ್ತೆಯನ್ನು ಡಾಂಬರೀಕರಣ ಮಾಡಿಸಿದರು. ಇದರ ಮೂಲಕ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ದೇವಾಲಯದ ಬಳಿಗೆ ಹೋಗಲು ಅನುಕೂಲವಾಯಿತು. ಮೆಟ್ಟಿಲು ಗಳ ಮೂಲಕ ನಡೆದುಕೊಂಡು ಬೆಟ್ಟಕ್ಕೆ ತೆರಳುವವರ ಸಂಖ್ಯೆ ಕಡಿಮೆಯಾಯಿತು.
ಕಳೆದ ಬಿಜೆಪಿ ಸರ್ಕಾರದಲ್ಲಿ ವಿ.ಸೋಮಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಬೆಟ್ಟದಲ್ಲಿ ಹಳೆಯ ಮೆಟ್ಟಿಲುಗಳನ್ನು ಬದಲಾಯಿಸಿ ಹೊಸ ಮೆಟ್ಟಿಲು ಅಳವಡಿಸಲು ಪ್ರವಾಸೋ ದ್ಯಮ ಇಲಾಖೆಯಿಂದ 4 ಕೋಟಿ ರೂ. ಘೋಷಿಸಿದ್ದರು. ಟೆಂಡರ್ ಕೂಡ ನೀಡಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಅನುದಾನ ಲಭ್ಯವಿಲ್ಲ ಎಂದು ಘೋಷಿಸಿ ಕಾಮಗಾರಿಯನ್ನೇ ರದ್ದು ಮಾಡಿತ್ತು. ಇದನ್ನು ಗಮನಿಸಿದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಭೇಟಿಯಾಗಿ ಭಕ್ತರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಮೆಟ್ಟಿಲುಗಳ ಅವಶ್ಯಕತೆಯಿದೆ ಎಂದು ಮನವರಿಕೆ ಮಾಡಿದ್ದರು. ಬಳಿಕ ಸಚಿವರು 4 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ.
ಅಷ್ಟರಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಯಿತು. ಕಾಮಗಾರಿ ಆರಂಭಕ್ಕೆ ಮತ್ತೆ ಅಡಚಣೆಯಾಯಿತು. ಕಳೆದ ತಿಂಗಳು ಸುರಿದ ಧಾರಾಕಾರ ಮಳೆ, ಕೊಳ್ಳೇಗಾಲ ತಾಲ್ಲೂಕಿನ 8 ಗ್ರಾಮಗಳಲ್ಲಿ ಪ್ರವಾಹದ ಭೀತಿ ಕಾರಣದಿಂದ ಮೆಟ್ಟಿಲು ಅಳವಡಿಕೆ ಕಾಮಗಾರಿ ಆರಂಭವಾಗಿಲ್ಲ. ಅತಿ ಶೀಘ್ರದಲ್ಲಿ ಆರಂಭಿಸಲಾಗುವುದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ಟಿಲುಗಳು ಹಳೆಯ ಕಾಲದವು: ಬಿಳಿಗಿರಿರಂಗನಬೆಟ್ಟದಲ್ಲಿ ಹಾಲಿ ಇರುವ ಕಲ್ಲಿನ ಮೆಟ್ಟಿಲುಗಳನ್ನು ಸಮನಾಂತರವಾಗಿ ಜೋಡಿಸಿಲ್ಲ. ಆಕಾರ ಕೂಡ ದೊಡ್ಡದಾಗಿ, ಚಿಕ್ಕದಾಗಿ ಹಾಗೂ ಅಗಲವಾಗಿವೆ. ಕಲ್ಲುಗಳೂ ಸಮತಟ್ಟಾಗಿಲ್ಲದೆ, ಜನರು ಹತ್ತುವುದಕ್ಕೆ, ಇಳಿಯುವುದಕ್ಕೆ ಕಷ್ಟಪಡಬೇಕಿದೆ. ಕಲ್ಲುಗಳು ಪಾದಗಳಿಗೂ ಒತ್ತುತ್ತಿದ್ದು, ವಯಸ್ಸಾದವರು, ಮಕ್ಕಳು ಮೆಟ್ಟಲು ಏರಲು ಬಹಳ ಕಷ್ಟಪಡುವಂತಾಗಿದೆ. ಇವು ಹಳೆಯ ಕಾಲದವು. ಆದ್ದರಿಂದಲೇ ಹೊಸದಾಗಿ ಕಲ್ಲಿನ ಮೆಟ್ಟಿಲುಗಳನ್ನು ಅಳವಡಿಸಲು ಸರ್ಕಾರ ಮುಂದಾಗಿದೆ.
ಕೋಟ್ಸ್))
ಸದ್ಯದಲ್ಲೇ ಕಾಮಗಾರಿ ಆರಂಭ: ಬೆಟ್ಟಕ್ಕೆ ಮೆಟ್ಟಿಲು ಅಳವಡಿಕೆ ಕಾಮಗಾರಿಯೇ ರದ್ದಾಗಿತ್ತು. ಪ್ರವಾಸೋದ್ಯಮ ಸಚಿವರಿಗೆ ಮನವರಿಕೆ ಮಾಡಿ, ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಸದ್ಯವೇ ಕಾಮಗಾರಿ ಆರಂಭವಾಗಲಿದೆ.
-ಎ.ಆರ್.ಕೃಷ್ಣಮೂರ್ತಿ, ಶಾಸಕರು
ಮಳೆಯಿಂದ ಕಾಮಗಾರಿ ಆರಂಭಿಸಿಲ್ಲ: ಲೋಕಸಭಾ ಚುನಾವಣೆ ಹಾಗೂ ನಿರಂತರ ಮಳೆಯಿಂದ ಕಾಮಗಾರಿಯನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ. ಟೆಂಡರ್ ಮುಗಿದಿದ್ದು, ಕೆಲಸ ಆರಂಭಕ್ಕೆ ಆದೇಶ ನೀಡಲಾಗಿದೆ. ಮಳೆಯ ಸನ್ನಿವೇಶವನ್ನು ಗಮನಿಸಿ, ಕೆಲಸ ಪ್ರಾರಂಭಿಸಲಾಗುವುದು.
-ಪುರುಷೋತ್ತಮ್, ಲೋಕೋಪಯೋಗಿ ಇಲಾಖೆ, ಕೊಳ್ಳೇಗಾಲ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…
ಬೆಳಗಾವಿ: ಸುವರ್ಣ ಸೌಧದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ…
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ…
ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…