ಹನೂರು: ೪ ದಿನಗಳ ಕಾಲ ನಡೆಯಲಿರುವ ಜಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆ; ಸಕಲ ಸಿದ್ಧತೆ
ಮಹಾದೇಶ್ ಎಂ.ಗೌಡ
ಹನೂರು: ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಮಾರ್ಚ್ ೨೪ರಿಂದ ನಾಲ್ಕು ದಿನಗಳ ಕಾಲ ನಡೆಯಲಿದ್ದು, ಸಾವಿರಾರು ಭಕ್ತಾದಿಗಳು ಸೇರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಜಾತ್ರೆ ಅಂಗವಾಗಿ ಮಾ.೨೪ರಂದು ಜಾಗರ ಸಮರ್ಪಣೆ, ೨೫ರಂದು ರಥೋತ್ಸವ, ತಂಪು ಜ್ಯೋತಿ, ೨೬ರಂದು ದೊಡ್ಡಬಾಯಿ ಬೀಗ, ೨೭ರಂದು ಬೆಳಿಗ್ಗೆ ಅಗ್ನಿಕುಂಡ ದರ್ಶನ ನಡೆಯಲಿದೆ. ಬೆಟ್ಟಳ್ಳಿ ಮಾರಮ್ಮ ದೇವಸ್ಥಾನಕ್ಕೆ ೬೦೦ ವರ್ಷಗಳ ಇತಿಹಾಸವಿದ್ದು, ಪಟ್ಟಣದ ಜನತೆ ಗ್ರಾಮ ದೇವತೆಯಾಗಿ ಪೂಜಿಸುತ್ತಿದ್ದಾರೆ. ಈ ಜಾತ್ರೆ ಕೋಮುಸೌಹಾರ್ದತೆಯ ಹಾಗೂ ಸಾಮರಸ್ಯದ ಸಂಕೇತವಾಗಿದೆ.
ಈಗಾಗಲೇ ಪಟ್ಟಣದಲ್ಲಿ ಕಳೆದ ಮಂಗಳವಾರದಿಂದಲೇ ಮಾಂಸ ಮಾರಾಟವನ್ನು ಸ್ಥಗಿತ ಗೊಳಿಸಲಾಗಿದೆ. ಸಾಂಬಾರ ಪದಾರ್ಥಗಳ ಒಗ್ಗರಣೆ, ಗೋಬಿಮಂಚೂರಿ ಹಾಗೂ ಮಾಂಸಾಹಾರಿ ಹೋಟೆಲ್‌ಗಳು ಮುಚ್ಚಿವೆ. ಪಟ್ಟಣದಲ್ಲಿ ವಾಸವಿರುವ ಮುಸ್ಲಿಂ ಸಮುದಾಯದವರು ಸಹ ಮಾಂಸಾಹಾರವನ್ನು ತ್ಯಜಿಸಿದ್ದು ಜಾತ್ರಾ ಮಹೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ.
ಮೊದಲ ದಿನವಾದ ಮಾರ್ಚ್ ೨೪ರಂದು ತಡರಾತ್ರಿ ಜಾಗರ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಜಾಗರ ಸಮರ್ಪಣೆಗೆ ಜನರು ಒಂದು ವಾರದ ಮುಂಚೆ ಅವರೆ, ಜೋಳ ಸೇರಿದಂತೆ ಇನ್ನಿತರ ದವಸ ಧಾನ್ಯಗಳನ್ನು ಮೊಳಕೆ ಬರಿಸಿ ಪ್ರತಿನಿತ್ಯ ನೀರುಣಿಸಿ ಪೂಜೆ ಸಲ್ಲಿಸುವುದರ ಮೂಲಕ ಬೆಳೆಸಿದ ಧಾನ್ಯಗಳ ಪೈರುಗಳನ್ನು (ಜಾಗರ) ದೇವಾಲಯಕ್ಕೆ ಸಮರ್ಪಿಸುತ್ತಾರೆ. ಜಾಗರವನ್ನು ಮಕ್ಕಳು, ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಮಧ್ಯರಾತ್ರಿ ದೇವಸ್ಥಾನಕ್ಕೆ ಆಗಮಿಸಿ, ಜಾಗರವನ್ನು ದೇವಿಗೆ ಸಮರ್ಪಣೆ ಮಾಡುತ್ತಾರೆ.
ಎರಡನೇ ದಿನವಾದ ಮಂಗಳವಾರ ಮಧ್ಯಾಹ್ನ ೧೨ ಗಂಟೆಗೆ ರಥೋತ್ಸವ ಜರುಗಲಿದ್ದು ಇದೇ ದಿನ ತಂಪು ಜ್ಯೋತಿಯನ್ನು ಸಮರ್ಪಿಸುತ್ತಾರೆ. ಜಾತ್ರಾ ಮಹೋತ್ಸವದ ಮೂರನೇ ದಿನವಾದ ಬುಧವಾರ ಬಾಯಿ ಬೀಗ ಕಾರ್ಯಕ್ರಮ ನಡೆಯಲಿದ್ದು ಹಲವಾರು ಮಂದಿ ಬಾಯಿ ಬೀಗ ಹಾಕಿಸಿಕೊಂಡು ಹರಕೆ ತೀರಿಸಲಿದ್ದಾರೆ.
ಜಾತ್ರೆಯ ಕೊನೆಯ ದಿನ ಗುರುವಾರ ಬೆಳಗ್ಗೆ ಮುಂಜಾನೆಯಿಂದಲೇ ಶ್ರೀ ಬೆಟ್ಟಳ್ಳಿ ಮಾರಮ್ಮನಿಗೆ ವಿಧಿ-ವಿಧಾನಗಳ ಮೂಲಕ ವಿಶೇಷ ಪೂಜೆಯನ್ನು ಸಲ್ಲಿಸಿ ಅಗ್ನಿಕುಂಡವನ್ನು ಎತ್ತಿ ಈ ವರ್ಷದ ಮಳೆಯ ಬೆಳೆಯ ಮೂಲಕ ಮಾಹಿತಿ ನೀಡಿದ ನಂತರ ಜಾತ್ರೆಗೆ ತೆರೆ ಬೀಳಲಿದೆ.
ಪ್ರಸಾದದ ವ್ಯವಸ್ಥೆ: ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಸಾವಿರಾರು ಮಂದಿಗೆ ದೇವಸ್ಥಾನದ ವತಿಯಿಂದಲೇ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ದೇವಾಲಯದ ರಾಜಗೋಪುರ ಮತ್ತು ಆವರಣದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇನ್‌ಸ್ಪೆಕ್ಟರ್ ಆನಂದ್ ಮೂರ್ತಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
” ನಾಲ್ಕು ದಿನಗಳ ಕಾಲ ನಡೆಯಲಿರುವ ಜಾತ್ರೆ ಅಂಗವಾಗಿ ಈಗಾಗಲೇ ದೇವಸ್ಥಾನದ ವತಿಯಿಂದ ಒಂದು ವಾರದಿಂದಲೇ ವಿಶೇಷ ಪೂಜೆಗಳು ಪ್ರಾರಂಭವಾಗಿವೆ. ಮಂಗಳವಾರ ಎರಡನೇ ವರ್ಷದ ರಥೋತ್ಸವ ನೆರವೇರಲಿದ್ದು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.”
ಜಯಂತ್‌ರಾವ್ ಶಿಂಧೆ, ಅರ್ಚಕರು, ಬೆಟ್ಟಳ್ಳಿ ಮಾರಮ್ಮ ದೇವಸ್ಥಾನ
” ಜನಸಂದಣಿ ಇರುವ ಕಡೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಲ್ಲದೆ ದೇವಸ್ಥಾನದ ಆವರಣದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಎಸ್‌ಐ, ಎಎಸ್ ಐ, ಮುಖ್ಯಪೇದೆ, ಮಹಿಳಾ ಪೇದೆಗಳನ್ನು ನಿಯೋಜಿಸಲು ಕ್ರಮ ವಹಿಸಲಾಗಿದೆ ಎಂದು ಇನ್‌ಸ್ಪೆಕ್ಟರ್ ಆನಂದ್ ಮೂರ್ತಿ ‘ಆಂದೋಲನ’ಕ್ಕೆ ತಿಳಿಸಿದರು.”
ಬೆಳಗಾವಿ: ಗ್ಯಾರಂಟಿಗಳ ಬಗ್ಗೆ ಸಿಎಲ್‌ಪಿಯಲ್ಲಿ ಚರ್ಚೆಯೇ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಶಾಸಕರು…
ಬೆಳಗಾವಿ: ನಿಜಲಿಂಗಪ್ಪನವರು ಒಬ್ಬ ದಕ್ಷ, ಪ್ರಾಮಾಣಿಕ ವ್ಯಕ್ತಿ. ಕರ್ನಾಟಕ ಕಂಡ ಅಪರೂಪದ ರಾಜಕಾರಣಿಯಾಗಿದ್ದು ಕೊನೆಯವರೆಗೂ ಪ್ರಾಮಾಣಿಕವಾಗಿ ಇದ್ದವರು ಎಂದು ಮುಖ್ಯಮಂತ್ರಿ…
ಬೆಳಗಾವಿ: ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾರೂ ಕೂಡ ಗ್ಯಾರಂಟಿ ಯೋಜನೆಗಳನ್ನು ವಿರೋಧ ಮಾಡಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.…
ಕೊಡಗು: ಆಸ್ತಿ ವಿಚಾರಕ್ಕೆ ಅಣ್ಣನ ಮಗನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕಾವಾಡಿಯಲ್ಲಿ ನಡೆದಿದೆ.…
ಬೆಳಗಾವಿ: ರಾಜ್ಯದಲ್ಲಿ ಶೀಘ್ರದಲ್ಲೇ ಅರ್ಹರಿಗೆ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಘೋಷಣೆ…
ಬೆಂಗಳೂರು: ನಾಳೆ ನಟ ದರ್ಶನ್ ಅಭಿನಯದ ಡೆವಿಲ್ ಚಿತ್ರ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಜೈಲಿನಿಂದಲೇ ಅಭಿಮಾನಿಗಳಿಗೆ ನಟ ದರ್ಶನ್…