Andolana originals

‘ಬಿತ್ತನೆ ಶುಂಠಿ ಆಯ್ಕೆ, ಬೀಜೋಪಚಾರದಲ್ಲಿ ಇರಲಿ ಎಚ್ಚರ’

ಲಕ್ಷ್ಮಿಕಾಂತ್ ಕೊಮಾರಪ್ಪ

ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಸಲಹೆ

ಸೋಮವಾರಪೇಟೆ: ಕೊಡಗು ಜಿಲ್ಲೆಯಲ್ಲಿ ಶುಂಠಿ ಬೆಳೆಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಅದರ ಜೊತೆಗೆ ಮಾಹಿತಿ ಕೊರತೆಯಿಂದ ರೋಗಬಾಧೆಯಿಂದಾಗಿ ಕೆಲವು ರೈತರು ನಷ್ಟವನ್ನೂ ಅನುಭವಿಸುತ್ತಿದ್ದಾರೆ.

ಹೀಗಾಗಿ ಬಿತ್ತನೆಯ ಶುಂಠಿಯ ಆಯ್ಕೆ, ಬಿತ್ತನೆ ಶುಂಠಿಯ ಬೀಜೋಪಚಾರದ ಬಗ್ಗೆ ಗೋಣಿಕೊಪ್ಪಲಿನ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಅಗತ್ಯ ಸಲಹೆ ನೀಡಿದೆ.

ಈ ವರ್ಷವೂ ಕೊಡಗು ಜಿಲ್ಲೆಯಲ್ಲಿ ಶುಂಠಿ ಬೆಳೆಯುವವರ ಸಂಖ್ಯೆ ಮತ್ತು ಪ್ರದೇಶ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ವೈಜ್ಞಾನಿಕ ಮಾಹಿತಿಯಿಲ್ಲದೆ ಶುಂಠಿ ಬೆಳೆಯುತ್ತಿರುವವರು ಗೆಡ್ಡೆ ಕೊಳೆ ರೋಗ, ಮಹಾಕಾಳಿ ರೋಗದಿಂದ ಸಮಸ್ಯೆ ಎದುರಿಸುತ್ತಿದ್ದಾರೆ.

ಶುಂಠಿ ಕೃಷಿಗೆ ಬಿತ್ತನೆ ಬೀಜದ ಆಯ್ಕೆ ಮಾಡುವಾಗ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಆರೋಗ್ಯಕರ, ರೋಗ-ಕೀಟ ರಹಿತ, ತಾಜಾ ಹಾಗೂ ಬಲಿಷ್ಠ ಶುಂಠಿಯನ್ನು ಮಾತ್ರ ಆಯ್ಕೆ ಮಾಡಬೇಕು. ಹುಳುಕು, ಕೊಳೆ, ಕಪ್ಪು ಕಲೆಗಳು ಇರುವ ಶುಂಠಿಗಳನ್ನು ಬಿತ್ತನೆಗೆ ಬಳಸಬಾರದು. ಸರಿಯಾದ ಗಾತ್ರದ ಅಂದರೆ ಕನಿಷ್ಠ ೩೦ ರಿಂದ ೩೫ ಗ್ರಾಂ, ಗರಿಷ್ಟ ೧೦೦ ಗ್ರಾಂ ತೂಕದ ಶುಂಠಿಯ ತುಂಡುಗಳನ್ನು ಬಿತ್ತನೆಗೆ ಬಳಸಬೇಕು, ಅತಿ ಚಿಕ್ಕ ತುಂಡುಗಳನ್ನು ಬಳಸಬಾರದು.

ಪ್ರತಿ ಬಿತ್ತನೆ ಶುಂಠಿಯಲ್ಲಿ ಕನಿಷ್ಠ ೧ ರಿಂದ ೨, ಗರಿಷ್ಟ ೪ ರಿಂದ ೫ ಆರೋಗ್ಯಕರ ಗಿಣ್ಣುಗಳು ಇರಬೇಕು. ಗಿಣ್ಣುಗಳು ಹಸಿರು ಅಥವಾ ತಾಜಾ ಬಣ್ಣದಲ್ಲಿ ಇರಬೇಕು. ಶುಂಠಿಯ ಬಣ್ಣ ಮಂಜಳ-ಹಳದಿ ಅಥವಾ ಬೆಳ್ಳಗಿನ ಬಣ್ಣದಲ್ಲಿರಬೇಕು. ಒತ್ತಿದಾಗ ಮೃದುವಾಗಿರದೆ ಗಟ್ಟಿಯಾಗಿರಬೇಕು. ಹಿಂದಿನ ಬೆಳೆಯಲ್ಲಿ ರೋಗ ಕಾಣಿಸದ ತೋಟದಿಂದ ಬೀಜ ಆಯ್ಕೆ ಮಾಡುವುದು ಸೂಕ್ತ.

ಸ್ಥಳೀಯವಾಗಿ ಉತ್ತಮ ಫಲ ನೀಡುವ ಮತ್ತು ರೋಗ ನಿರೋಧಕ ಶಕ್ತಿ ಇರುವ ತಳಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಬಿತ್ತನೆ ಬೀಜದ ರೈಸೋಮ್‌ಗಳನ್ನು ನೆರಳಿನಲ್ಲಿಯೇ, ಒಣ ಮತ್ತು ಗಾಳಿಯಾಡುವ ಸ್ಥಳದಲ್ಲಿ ಇಡಬೇಕು. ನೇರವಾಗಿ ಸೂರ್ಯನ ರಶ್ಮಿ ಬೀಳುವ ಜಾಗದಲ್ಲಿ ಇಡಬಾರದು. ಬಹಳ ಹಳೆಯ ಅಥವಾ ಒಣಗಿದ ರೈಸೋಮ್‌ಗಳನ್ನು ಬಳಸಬಾರದು. ಅವಽಗೆ ಮುಂಚಿತವಾಗಿ ಕಟಾವಾದ ತಾಕುಗಳ ಶುಂಠಿಯನ್ನು ಬಿತ್ತನೆಗೆ ಬಳಸಬಾರದು. ೨೭೦ರಿಂದ ೩೦೦ ದಿನಗಳು ತುಂಬಿದ ಶುಂಠಿಯನ್ನು ಬಿತ್ತನೆಗೆ ಆಯ್ಕೆ ಮಾಡಿಕೊಳ್ಳಬೇಕು.

ಬಿತ್ತನೆ ಶುಂಠಿಯನ್ನು ಸಂಗ್ರಹಿಸುವ ಮೊದಲು, ೨೦೦ ಕೆ.ಜಿ. ಶುಂಠಿ ಬೀಜವನ್ನು ಪ್ರೊಪಿಕೊನಜೋಲ್ ೨೦೦ ಮಿ.ಲಿ. ಅಥವಾ ಕಾರ್ಬೆಂಡಜಿಮ್ + ಮ್ಯಾಂಕೋಜೆಬ್ ೪೦೦ ಗ್ರಾಂ ಅಥವಾ ೬೦೦ ಗ್ರಾಂ ಮ್ಯಾಂಕೋಜೆಬ್ ಮತ್ತು ಕ್ವಿನಾಲ್‌ಫಾಸ್ ೪೦೦ ಮಿ.ಲಿ.ಯನ್ನು ೨೦೦ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ೩೦ ನಿಮಿಷಗಳು ಕಡ್ಡಾಯವಾಗಿ ನೆನೆಯಲು ಬಿಡಬೇಕು. ನಂತರ ಬಿತ್ತನೆಯ ಶುಂಠಿಯನ್ನು ಹೊರತೆಗೆದು ೧೫ ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಿ, ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಶೇಖರಿಸಬೇಕು.

ಸಾವಯವ ಪದ್ಧತಿಯಲ್ಲಿ ಶುಂಠಿಯನ್ನು ಬೆಳೆಯುವವರು ಪ್ರತೀ ಲೀಟರ್ ನೀರಿಗೆ ಅಥವಾ ಪ್ರತಿ ಕೆ.ಜಿ.ಬಿತ್ತನೆ ಬೀಜಕ್ಕೆ ಸುಡೋ ಮೋನಾಸ್ ೧೦.೦ ಗ್ರಾಂ.ಅನ್ನು ಮಿಶ್ರಣ ಮಾಡಿ ಅದಕ್ಕೆ ಬಿತ್ತನೆ ಶುಂಠಿಯನ್ನು ಅದ್ದಿ ೩೦ ನಿಮಿಷಗಳು ಕಡ್ಡಾಯವಾಗಿ ನೆನೆಯಲು ಬಿಡಬೇಕು. ನಂತರ ಬಿತ್ತನೆಯ ಶುಂಠಿಯನ್ನು ಹೊರ ತೆಗೆದು ೩೦ ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಿದ ನಂತರ ಬಿತ್ತನೆ ಮಾಡಬೇಕು.

ಬೀಜೋಪಚಾರ ಮಾಡುವಾಗ ಶುಂಠಿಯನ್ನು ಅದ್ದಿ ೩೦ ನಿಮಿಷಗಳು ಕಡ್ಡಾಯವಾಗಿ ನೆನೆಯಲು ಬಿಡಲೇಬೇಕು. ಹೆಚ್ಚಿನ ರೈತರು ಶಿಫಾರಸು ಮಾಡಿರುವ ಶಿಲೀಂಧ್ರನಾಶಕವನ್ನು ಉಪಯೋಗಿಸುತ್ತಾರಾದರೂ ಶುಂಠಿಯನ್ನು ಶಿಲೀಂಧ್ರನಾಶಕದ ದ್ರಾವಣದಲ್ಲಿ ಮುಳುಗಿಸಿದ ನಂತರ ೫ ನಿಮಿಷಗಳಲ್ಲೇ ಹೊರತೆಗೆದು, ನೆರಳಿನಲ್ಲಿ ೩೦ ನಿಮಿಷಗಳ ಕಾಲ ಒಣಗಿಸದೆ ಬಿತ್ತನೆ ಮಾಡುತ್ತಾರೆ. ಇದು ಸರಿಯಾದ ಬೀಜೋಪಚಾರದ ಕ್ರಮವಲ್ಲ. ಒಂದು ಬಾರಿ ಕಲಸಿದ ದ್ರಾವಣದಲ್ಲಿ ಬೀಜೋಪಚಾರ ಮಾಡಿದ ನಂತರ ಮತ್ತೆ ಅದೇ ದ್ರಾವಣವನ್ನು ಬಳಸುವುದಾದರೆ ಶೇ.೫೦ ಶಿಫಾರಸು ಮಾಡಿರುವ ಶಿಲೀಂಧ್ರನಾಶಕ ಮತ್ತು ಕೀಟನಾಶಕವನ್ನು ಮತ್ತೆ ಸೇರಿಸಬೇಕು. ಬೀಜೋಪಚಾರಕ್ಕೆ ಶಿಫಾರಸು ಮಾಡಿರುವ ಶಿಲೀಂದ್ರ ನಾಶಕ ಮತ್ತು ಕೀಟನಾಶಕವನ್ನು ಮಾತ್ರ ಉಪಯೋಗಿಸಬೇಕು.

ಸಲಹೆ ನೀಡಲಾದ ಪೀಡೆನಾಶಕವನ್ನು ಬಿಟ್ಟು ಬೇರೆ ಯಾವುದೇ ಶಿಲೀಂಧ್ರನಾಶಕ ಮತ್ತು ಕೀಟನಾಶಕವನ್ನು ಮಿಶ್ರಣ ಮಾಡಬಾರದು ಎಂದು ಗೋಣಿಕೊಪ್ಪಲಿನ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಸಲಹೆ ನೀಡಿದೆ.

” ಶುಂಠಿಯು ಮುಖ್ಯವಾದ ಸಂಬಾರ ಬೆಳೆಯಾಗಿದ್ದು, ಕೊಡಗು ಜಿಲ್ಲೆಯಾದ್ಯಂತ ಶುಂಠಿ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕೆಲವರು ಪಾಳು ಬಿಟ್ಟಿರುವ ಕೃಷಿ ಪ್ರದೇಶಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಶುಂಠಿ ಬೆಳೆಯುತ್ತಿದ್ದಾರೆ. ಆದರೆ, ವೈಜ್ಞಾನಿಕವಾಗಿ ಶುಂಠಿ ಬಿತ್ತನೆ, ಬೀಜೋಪಚಾರ ಮಾಡದಿದ್ದಲ್ಲಿ ಮುಂದೆ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಕೃಷಿ ವಿಜ್ಞಾನ ಕೇಂದ್ರದ ಸಲಹೆಯನ್ನು ಪಡೆದು ರೈತರು ಲಾಭದಾಯಕ ಕೃಷಿ ಮಾಡಬೇಕು.”

-ಡಾ.ಕೆ.ವಿ.ವೀರೇಂದ್ರ ಕುಮಾರ್, ಪ್ರಕೃತಿ, ಸಸ್ಯ ಸಂರಕ್ಷಣೆ ವಿಭಾಗ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ

 

 

ಆಂದೋಲನ ಡೆಸ್ಕ್

Recent Posts

ಸಾಲೂರು ಶ್ರೀ ರಚಿಸಿದ್ದ ಮಹಾಪ್ರಬಂಧಕ್ಕೆ ಸಂಸ್ಕೃತ ಗ್ರಂಥ ಪುರಸ್ಕಾರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ…

18 mins ago

ಹನೂರು: ಕಾಡಂಚಿನ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ: ಜಿಲ್ಲಾಧಿಕಾರಿ ಶ್ರೀರೂಪ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಿಗೆ…

26 mins ago

ಓದುಗರ ಪತ್ರ: ಯುದ್ಧ-ಬುದ್ಧ

ಯುದ್ಧ-ಬುದ್ಧ ಜಗತ್ತಿನ ತುಂಬಾ ಬರೀ ಯುದ್ಧ ಆದರೆ ನಮ್ಮ ಭಾರತ ಸುಖ ಶಾಂತಿ ಸಮೃದ್ಧಿಗೆ ಬದ್ಧ ಇದು ಶತಸಿದ್ಧ ಏಕೆಂದರೆ…

44 mins ago

ಓದುಗರ ಪತ್ರ: ಸಾರಿಗೆ ಬಸ್‌ನಲ್ಲಿ ಕುಡಿಯುವ ನೀರು ವ್ಯವಸ್ಥೆ!

ಮೈಸೂರು ಜಿಲ್ಲೆಯ ತಿ. ನರಸೀಪುರದಿಂದ ಬನ್ನೂರು ಮಾರ್ಗವಾಗಿ ಮಂಡ್ಯಕ್ಕೆ ತೆರಳುವ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಚಾಲಕ ಹಾಗೂ…

48 mins ago

ಓದುಗರ ಪತ್ರ: ಲಿಂಗಾಂಬುಧಿ ಕೆರೆ ಏರಿ ಬೀದಿ ದೀಪ ಸರಿಪಡಿಸಿ

ಮೈಸೂರು ನಗರದ ಲಿಂಗಾಂಬುಧಿ ಕೆರೆ ಏರಿಯ ರಸ್ತೆಯು, ಶ್ರೀ ರಾಂಪುರ ಬಡಾವಣೆ, ಪ್ರೀತಿ ಬಡಾವಣೆಯಿಂದ ಲಿಂಗಾಂಬುಧೀ ಪಾಳ್ಯ, ಅರ್.ಟಿ.ನಗರ ದಟ್ಟಗಳ್ಳಿ ೩ ನೇ…

50 mins ago

ಓದುಗರ ಪತ್ರ: ಕಿಸಾನ್ ಸಮಾನ್ ಸರ್ವರ್ ಸಮಸ್ಯೆ ನಿವಾರಿಸಿ

ಕಿಸಾನ್ ಸಮ್ಮಾನ್ ಯೋಜನೆಯಡಿ ಇ-ಕೆವೈಸಿ ಮತ್ತು ಸೆಂಟ್ರಲ್ ಐಡಿ ಪಡೆಯಲು ರೈತರು ಎದುರಿಸುತ್ತಿರುವ ತಾಂತ್ರಿಕ ತೊಂದರೆ ದಿನೇ ದಿನೇ ಹೆಚ್ಚಾಗುತ್ತಿದೆ.…

53 mins ago