Andolana originals

‘ಚಾಮರಾಜ ಕ್ಷೇತ್ರ ಮಾದರಿಯಾಗಿ ರೂಪಿಸುವ ಹಂಬಲ’

‘ಆಂದೋಲನ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಶಾಸಕ ಕೆ.ಹರೀಶ್ ಗೌಡ ಆಶಯ

  • ಸಿಎಂ ವಿಶ್ವಾಸದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ
  • ಚುನಾವಣೆ ಪೂರ್ವದಲ್ಲಿ ನೀಡಿದ್ದ ವಾಗ್ದಾನದಂತೆ ಕಾರ್ಯ ನಿರ್ವಹಣೆ
  • ಒಳಚರಂಡಿ ಇತರ ಕಾಮಗಾರಿಗೆ ೫೦ ಕೋಟಿ ರೂ. ಅನುದಾನ ಬಿಡುಗಡೆ

ಸಂದರ್ಶನ: ಗಿರೀಶ್ ಹುಣಸೂರು

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅದರಲ್ಲಿಯೂ ಆರೋಗ್ಯ ಕ್ಷೇತ್ರಕ್ಕೆ ಗಮನಾರ್ಹ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ನೂರಾರು ಕೋಟಿ ರೂ. ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ತರುವ ಮೂಲಕ ಚಾಮರಾಜ ಕ್ಷೇತ್ರವನ್ನು ಮಾದರಿಯಾಗಿ ರೂಪಿಸಲು ಶ್ರಮಿಸುತ್ತೇನೆ ಎಂದು ಶಾಸಕ ಕೆ.ಹರೀಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ನಾನು ಪ್ರತಿನಿಧಿಸುವ ಚಾಮರಾಜ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಹುತೇಕ ಬೇಡಿಕೆಗಳನ್ನು ಸಿದ್ದರಾಮಯ್ಯ ಮಾನ್ಯ ಮಾಡಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರಕ್ಕೂ ಅನುದಾನ ನೀಡಿರುವುದು ಮುಖ್ಯಮಂತ್ರಿಗಳ ವಿಶೇಷವಾಗಿದೆ ಎಂದು ಹೇಳಿದ ಅವರು ‘ಆಂದೋಲನ’ ದಿನಪತ್ರಿಕೆಗೆ ದೂರವಾಣಿ ಮೂಲಕ ನೀಡಿದ ವಿಶೇಷ ಸಂದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಆಂದೋಲನ : ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದ ನೀವು ಆಡಳಿತ ಪಕ್ಷದ ಶಾಸಕರಾಗಿ ಕ್ಷೇತ್ರ ಹಾಗೂ ಮೈಸೂರು ನಗರದ ಅಭಿವೃದ್ಧಿಗೆ ಹಾಕಿಕೊಂಡಿರುವ ನೀಲನಕ್ಷೆಗಳೇನು?

ಹರೀಶ್ ಗೌಡ: ಚುನಾವಣೆ ಪೂರ್ವದಲ್ಲಿಯೇ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡುವುದಾಗಿ ಜನತೆಗೆ ಭರವಸೆ ನೀಡಿದ್ದೆ. ಗೆದ್ದ ನಂತರ ಕೊಟ್ಟ ಮಾತಿನಂತೆ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಿದ್ದರಾಮಯ್ಯ ಅವರು ಮೊದಲನೇ ಬಾರಿ ಮುಖ್ಯಮಂತ್ರಿಯಾದಾಗಲೂ ಚಾಮರಾಜ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಟ್ರಾಮಾ ಸೆಂಟರ್‌ಗಳು ಈಗಾಗಲೇ ಕಾರ್ಯಾರಂಭ ಮಾಡಿವೆ.

ಕಿದ್ವಾಯಿ ಸಂಸ್ಥೆಯ ಘಟಕ, ನೆಫ್ರೊ ಯುರಾಲಜಿ, ಎಂಡೋ ಕ್ರೊನಾಲಜಿ ಘಟಕ, ಬೋನ್ ನ್ಯಾರೋ ಚಿಕಿತ್ಸಾ ಘಟಕ ಸ್ಥಾಪನೆಗಾಗಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು, ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಒಟ್ಟಾರೆ ನನ್ನ ಕ್ಷೇತ್ರ ಆರೋಗ್ಯ ವಲಯಕ್ಕೆ ೩೨೦ ಕೋಟಿ ರೂ.ಗಳಷ್ಟು ಅನುದಾನವನ್ನು ಸಿದ್ದರಾಮಯ್ಯ ನೀಡಿದ್ದಾರೆ.

ಮಹಾರಾಣಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕಾಲೇಜು ಕಟ್ಟಡಗಳ ವಿಸ್ತರಣೆ, ಸುಮಾರು ೩ ಸಾವಿರ ವಿದ್ಯಾರ್ಥಿನಿಯರ ವಸತಿಗಾಗಿ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕಾಗಿ ೧೪೦ ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಿಂದ ಯುಜಿ ಕೇಬಲ್ ಅಳವಡಿಕೆಗಾಗಿ ೧೪೦ ಕೋಟಿ ರೂ. ಅನುದಾನ ದೊರೆತಿದ್ದು, ಈಗಾಗಲೇ ಶೇ.೭೦ರಷ್ಟು ಕೆಲಸ ಪೂರ್ಣಗೊಂಡಿದೆ. ಒಳಚರಂಡಿ, ಅಂತರ್ ಸಂಪರ್ಕ ಕಾಮಗಾರಿಗಳಿಗಾಗಿ ೫೦ ಕೋಟಿ ರೂ. ಅನುದಾನ ದೊರೆತಿದೆ.

ಆಂದೋಲನ: ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರದ ಅಭಿವೃದ್ಧಿಗೆ ತೊಡಕಾಗಿದೆ ಎಂಬ ಆರೋಪ ಇದೆಯಲ್ಲಾ, ನಿಮ್ಮ ಅನಿಸಿಕೆ ಏನು?

ಹರೀಶ್ ಗೌಡ: ಇದು ವಿರೋಧಪಕ್ಷಗಳ ಆರೋಪ ಅಷ್ಟೇ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳಿಲ್ಲದಿದ್ದರೂ ಕ್ಷೇತ್ರಗಳಿಗೆ ಅನುದಾನ ಕೊಡುತ್ತಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ವಿರೋಧಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ೧ ರೂಪಾಯಿಯನ್ನೂ ಕೊಡಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳ ನಡುವೆಯೂ ಇಲಾಖಾ ಕಾರ್ಯಕ್ರಮಗಳ ಜೊತೆಗೆ ಪ್ರತಿ ಕ್ಷೇತ್ರಕ್ಕೆ ಯಾವುದೇ ತಾರತಮ್ಯ ಮಾಡದೆ ಹತ್ತು ಕೋಟಿ ರೂ. ಅನುದಾನ ನೀಡುತ್ತಿದ್ದಾರೆ. ಬಿಜೆಪಿ ಶಾಸಕರು ಪ್ರತಿನಿಽಸುವ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಗೆ ಬರುವ ವಸ್ತುಪ್ರದರ್ಶನ ಆವರಣದಲ್ಲಿ ಯೂನಿಟ್ ಮಾಲ್‌ಗೆ ಅನುದಾನ ನೀಡಿದ್ದಾರೆ.

ಆಂದೋಲನ: ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ನೀವು ನಿರೀಕ್ಷಿಸಿದಷ್ಟು ಅನುದಾನ ದೊರೆತಿದೆಯೇ? ಅಭಿವೃದ್ಧಿ ವೇಗ ಕುಂಠಿತವಾಗಿದೆ ಅನಿಸುತ್ತಿಲ್ಲವೇ?

ಹರೀಶ್ ಗೌಡ: ನಿರೀಕ್ಷೆ ಅನ್ನುವುದಕ್ಕಿಂತ ನನ್ನ ಎಲ್ಲಾ ಕೋರಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಇತರ ಸಚಿವರು -ಫುಲ್‌ಫಿಲ್ ಮಾಡಿದ್ದಾರೆ ಎಂಬ ಸಮಾಧಾನ ಇದೆ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ನನ್ನ ಎಲ್ಲಾ ಕೋರಿಕೆಗಳಿಗೂ ಒಪ್ಪಿಗೆ ನೀಡಿರುವುದರಿಂದ ಅಭಿವೃದ್ಧಿ ಕಾರ್ಯಗಳು ನಿರೀಕ್ಷೆಯಂತೆಯೇ ನಡೆಯುತ್ತಿವೆ. ಹೀಗಾಗಿ ಅಭಿವೃದ್ಧಿ ವೇಗ ಕುಂಠಿತ ಎನ್ನುವ ಪ್ರಶ್ನೆಯೇ ಬರುವುದಿಲ್ಲ.

ಆಂದೋಲನ: ನಿಮ್ಮ ಮತ್ತು ಕ್ಷೇತ್ರದ ಜನರ ಸಂಪರ್ಕ ಹೇಗಿದೆ? ಜನರ ನಿರೀಕ್ಷೆಗಳೇನು?

ಹರೀಶ್ ಗೌಡ: ನನ್ನ ಮೊಬೈಲ್ ಕರೆಯನ್ನು ಆಪ್ತ ಸಹಾಯಕರೋ ಮತ್ತೊಬ್ಬರೋ ಸ್ವೀಕರಿಸುವುದಿಲ್ಲ. ಬದಲಿಗೆ ಬಂದ ಎಲ್ಲಾ ಕರೆಗಳನ್ನು ಖುದ್ದು ನಾನೇ ಸ್ವೀಕರಿಸಿ, ಜನರ ಅಹವಾಲು ಆಲಿಸುತ್ತೇನೆ. ಬೆಳಿಗ್ಗೆ ೮.೩೦ ರಿಂದ ೧೦.೩೦ರವರೆಗೆ ಕ್ಷೇತ್ರದ ಜನರು ನನ್ನನ್ನು ಮನೆಯಲ್ಲಿ ಭೇಟಿ ಮಾಡುತ್ತಾರೆ. ಬಳಿಕ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿರುವ ನನ್ನ ಕಚೇರಿಯಲ್ಲಿ ಭೇಟಿ ಮಾಡಿ ತಮ್ಮ ಅಹವಾಲು ಹೇಳಿಕೊಳ್ಳುತ್ತಾರೆ. ಇದರ ಜೊತೆಗೆ ವಾರದಲ್ಲಿ ಕನಿಷ್ಠ ೨ ರಿಂದ ೩ ವಾರ್ಡ್‌ಗಳಿಗೆ ಅಧಿಕಾರಿಗಳನ್ನು ಭೇಟಿ ಮಾಡಿ, ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಶ್ರಮಿಸುತ್ತಿದ್ದೇನೆ.

ಆಂದೋಲನ: ಚಾಮರಾಜ ಕ್ಷೇತ್ರದಲ್ಲಿ ಈವರೆಗೆ ಸಾಕಾರಗೊಂಡಿರುವ ನಿಮ್ಮ ಪ್ರಯತ್ನದ ಯೋಜನೆಗಳು ಯಾವುವು?

ಹರೀಶ್ ಗೌಡ: ಪ್ರಮುಖವಾಗಿ ನನೆಗುದಿಗೆ ಬಿದ್ದಿದ್ದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದು, ಸದ್ಯದಲ್ಲೇ ಟೆಂಡರ್ ಕರೆದು ಕಾಮಗಾರಿ ಪೂರ್ಣಗೊಳಿಸಲಾಗುವುದು. ಇದಲ್ಲದೆ ಅರಮನೆ ನಗರಿಯ ಹೆಮ್ಮೆ ಎನಿಸಿರುವ ಲ್ಯಾನ್ಸ್‌ಡೌನ್ ಕಟ್ಟಡವನ್ನು ಪಾರಂಪರಿಕ ಶೈಲಿಯಲ್ಲೇ ಪುನರ್ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲೇ ಘೋಷಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಹಳೆ ಕಟ್ಟಡ ಮ್ಯೂಸಿಯಂ ಆಗಲಿದೆ. ಜೊತೆಗೆ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯ ಒದಗಿಸಲು ೫೦ ಕೋಟಿ ರೂ. ಅನುದಾನ ದೊರೆತಿದೆ.

ಆಂದೋಲನ: ನಗರಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೆ, ನಿಮ್ಮ ಮೇಲೆ ಒತ್ತಡ ಹೆಚ್ಚಾಗಿದೆ ಅನಿಸುವುದಿಲ್ಲವೇ?

ಹರೀಶ್ ಗೌಡ: ಖಂಡಿತಾ ಹೌದು. ನಗರಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದಿರುವುದರಿಂದ ಸಹಜವಾಗಿ ನಮ್ಮ ಮೇಲೆ ಒತ್ತಡ ಹೆಚ್ಚಾಗಿದೆ. ನಗರಪಾಲಿಕೆಗೆ ಚುನಾವಣೆ ನಡೆಯಬೇಕು. ಆದರೆ, ಗ್ರೇಟರ್ ಮೈಸೂರು ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ಪ್ರವೃತ್ತವಾಗಿರುವುದರಿಂದ ಚುನಾವಣೆ ವಿಳಂಬವಾಗಿದೆ. ಮುಂದಿನ ಐದಾರು ತಿಂಗಳಲ್ಲಿ ಗ್ರೇಟರ್ ಮೈಸೂರು ಪಾಲಿಕೆ ರಚನೆಯಾಗಿ ಚುನಾವಣೆ ನಡೆಯಲಿದ್ದು, ಜನರು ನಮ್ಮ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ.

ಆಂದೋಲನ ಡೆಸ್ಕ್

Recent Posts

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

6 hours ago

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

8 hours ago

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

9 hours ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

9 hours ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

12 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

12 hours ago