ಕೆ.ಪಿ.ಮದನ್
ಕುರುಬಾರಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿಶೇಷ ಪ್ರಯೋಗ
ಮಕ್ಕಳಿಗೆ ಸುಲಭವಾಗಿ ಇಂಗ್ಲಿಷ್ ಕಲಿಸಲು ಲೆಕ್ಕಾಚಾರ
ಲ್ಯಾಬ್ ಮೂಲಕ ಕನ್ನಡ, ಇಂಗ್ಲಿಷ್ ಕಲಿಕೆಗೆ ವಿಶೇಷ ಒತ್ತು
ಶಾಲೆಯಲ್ಲಿ ೧ರಿಂದ ೭ನೇ ತರಗತಿ: ೪೮ ವಿದ್ಯಾರ್ಥಿಗಳು ಕಲಿಕೆ
ಜೇಡರಬಲೆ ಮಾದರಿಯಲ್ಲಿ ಅಕ್ಷರ ಚಪ್ಪರ ನಿರ್ಮಾಣ
ಮೈಸೂರು: ಈ ಶಾಲೆಯ ಕೊಠಡಿಯೊಂದರ ನಾಲ್ಕು ಗೋಡೆಗಳ ಮೇಲೆಲ್ಲ ಲೆಕ್ಕ, ಪ್ರಮೇಯ, ಕೋನಗಳು… ಇವುಗಳೊಂದಿಗೆ ವಿಜ್ಞಾನದ ಪ್ರಯೋಗಗಳು. ಮತ್ತೊಂದು ಕೊಠಡಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆ ಕಲಿಕೆಗೆ ಪೂರಕವಾದ ಲ್ಯಾಬ್ ಸಿದ್ಧಪಡಿಸಲಾಗಿದೆ!
ಇದು ಯಾವುದೋ ಖಾಸಗಿ ಶಾಲೆಯ ನೋಟವಲ್ಲ , ಬಡವರ ಮಕ್ಕಳ ಪಾಲಿನ ಅಕ್ಷರ ಧಾಮದಂತಿರುವ ಸರ್ಕಾರಿ ಶಾಲೆಯೊಂದರ ಹೆಗ್ಗಳಿಕೆ.
ನಗರದ ಕುರುಬಾರಹಳ್ಳಿಯ ವಿಹಾರ ಮಾರ್ಗದ ಬಾಡಿಗಾರ್ಡ್ ಲೈನ್ಸ್‌ನಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕರ ವಿನೂತನ ಪ್ರಯತ್ನ ಇದಾಗಿದೆ. ಇಲ್ಲಿ ೧ ರಿಂದ ೭ ತರಗತಿವರೆಗೆ ಇದ್ದು, ೪೮ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ.
ಸರ್ಕಾರಿ ಶಾಲೆ ಮಕ್ಕಳಿಗೆ ಸಾಮಾನ್ಯವಾಗಿ ಗಣಿತ ವಿಷಯ, ಇಂಗ್ಲಿಷ್ ಭಾಷೆ ಎಂದರೆ ಕಬ್ಬಿಣದ ಕಡಲೆ ಎನ್ನುವಂತಹ ಮನೋಭಾವನೆ ಇರುತ್ತದೆ. ಈ ಆತಂಕವನ್ನು ನಿವಾರಿಸಿ, ಶಾಲೆಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದು ಮಾದರಿ ಪ್ರಯತ್ನವಾಗಿದೆ.
ಈ ಶಾಲೆಯಲ್ಲಿ ಮಕ್ಕಳು ಗಣಿತವನ್ನು ಸುಲಭವಾಗಿ ಕಲಿಯುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಲ್ಯಾಬ್ (ಪ್ರಯೋಗಾಲಯ) ಪ್ರಾರಂಭಿಸಲಾಗಿದೆ. ಇದರ ವಿಶೇಷವೆಂದರೆ ಪ್ರಯೋಗಾಲಯದಲ್ಲಿ ಇರುವ ಕಲಿಕೋಪಕರಣಗಳನ್ನೆಲ್ಲ ದುಡ್ಡು ಖರ್ಚು ಮಾಡಿ ತಂದಿರುವವಲ್ಲ. ಸ್ಥಳೀಯವಾಗಿ ದೊರೆಯುವ ವಸ್ತುಗಳನ್ನು ಬಳಸಿಕೊಂಡು ಶಿಕ್ಷಕರೇ ರೂಪಿಸಿದ ಮಾದರಿಗಳು .
ಗಣಿತ ಲ್ಯಾಬ್‌ಗೆ ಪ್ರವೇಶಿಸುವ ಬಾಗಿಲನ್ನು ತೆರೆಯುವಾಗಲೇ ಗಣಿತದ ಪರಿಚಯ ಪ್ರಾರಂಭವಾಗುತ್ತದೆ. ಹೊಸ್ತಿಲಲ್ಲಿ ಕೋನಮಾಪಕವನ್ನು ಚಿತ್ರಿಸಲಾಗಿದೆ. ಬಾಗಿಲನ್ನು ಸ್ವಲ್ಪ – ಸ್ವಲ್ಪವೇ ತೆರೆಯುತ್ತಾ ಹೋದಂತೆ ಎಷ್ಟು ಡಿಗ್ರಿ ಕೋನದಲ್ಲಿ ಬಾಗಿಲು ತೆರೆದುಕೊಂಡಿದೆ ಎನ್ನುವುದನ್ನು ನೋಡ ಬಹುದಾಗಿದೆ. ಇದೇ ಬಾಗಿಲಿಗೆ ‘ಘನಾ ಕೃತಿ’ಯ ಇಟ್ಟಿಗೆಯನ್ನು ಒತ್ತು ಕೊಡಲಾಗಿದೆ. ಇಂತಹ ಹಲವು ವಿಶೇಷಗಳು ಮಕ್ಕಳ ಮನಸ್ಸನ್ನು ಪ್ರಫುಲ್ಲಗೊಳಿಸಿ, ಕಲಿಕೆಗೆ ಉತ್ತೇಜನ ನೀಡುತ್ತಿವೆ.
ನೀರಿನ ಸಮತಟ್ಟಿನ ಗುಟ್ಟು!: ನೀರಿನಮಟ್ಟವು ಸಮತಟ್ಟಾಗಿರುವುದನ್ನು ತಿಳಿಯಲು ರಟ್ಟಿನಲ್ಲಿ ನದಿಯ ಚಿತ್ರವನ್ನು ಬಿಡಿಸಿದ್ದಾರೆ. ಅದನ್ನು ಸ್ವಲ್ಪ ಕೆಳಮುಖವಾಗಿ ಮಾಡಿ, ಅದರ ಮೇಲೆ ಎರಡು ಕಡೆ ನೀರು ತುಂಬಿದ ರಬ್ಬರ್ ಟ್ಯೂಬ್‌ಅನ್ನು ಹಿಡಿದುಕೊಳ್ಳಲಾಗುತ್ತದೆ. ಸಮ ತಟ್ಟು ಇಲ್ಲದ ಕಾರಣ ಟ್ಯೂಬ್‌ನ ಒಂದು ಕಡೆಯಿಂದ ನೀರು ಹೊರಬರುತ್ತದೆ. ಮತ್ತೆ ರಟ್ಟನ್ನು ಸಮನಾಗಿ ಇಟ್ಟು ಪರೀಕ್ಷೆ ಮಾಡಿದಾಗ ಟ್ಯೂಬ್‌ನಲ್ಲಿನ ನೀರು ಎರಡು ಕಡೆಗಳಲ್ಲೂ ಸಮವಾಗಿ ನಿಲ್ಲುತ್ತದೆ. ಇದನ್ನು ಮಕ್ಕಳಿಂದಲೇ ಮಾಡಿಸಲಾಗುತ್ತದೆ.
ವಿಜ್ಞಾನಕ್ಕೆ ಸಂಬಂಧಿಸಿದಂತೆ ಬೆಳಕಿನ ವಕ್ರೀಭವನ ತೋರಿಸಲು ಸರಳ ಕಲಿಕಾ ಮಾದರಿ ಯನ್ನು ತಯಾರಿಸಲಾಗಿದೆ. ಪಿವಿಸಿ ಪೈಪ್ ಬಳಕೆ ಮಾಡಿಕೊಂಡು ಪೆರಿಸ್ಕೋಪ್ ಹಾಗೂ ಟೆಲಿಸ್ಕೋಪ್ ತಯಾರು ಮಾಡಿದ್ದಾರೆ.
ಲಾಂಗ್ವೇಜ್ ಲ್ಯಾಬ್: ಶಾಲೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯ ಲ್ಯಾಬ್‌ಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಕನ್ನಡ ಭಾಷಾ ಲ್ಯಾಬ್‌ನಲ್ಲಿ ಭಾಷಾ ಪ್ರಯೋಗ, ಸಂಧಿ-ಸಮಾಸ, ಕನ್ನಡದ ಕವಿಗಳು, ವರ್ಣ ಮಾಲೆ, ಕೊನೆಯ ಅಕ್ಷರ ಒಂದೇ ಆಗಿದ್ದು, ಅದರ ಮೊದಲಿಗೆ ಬೇರೆ-ಬೇರೆ ಅಕ್ಷರಗಳನ್ನು ಸೇರಿಸಿ ಆಹಾರ ಪದಾರ್ಥ, ಪ್ರಾಣಿ-ಪಕ್ಷಿಗಳ ಹೆಸರು ಬರುವಂತೆ ಚಾರ್ಟ್ ತಯಾರು ಮಾಡಲಾಗಿದೆ.
ಇಂಗ್ಲಿಷ್ ಭಾಷಾ ಲ್ಯಾಬ್‌ನಲ್ಲಿ ಕೂಡ ಇದೇ ಮಾದರಿ ಇದೆ. ಇದಲ್ಲದೇ ನಲಿ-ಕಲಿ ಕೊಠಡಿಯಲ್ಲಿ ಜೇಡರಬಲೆ ಮಾದರಿಯಲ್ಲಿ ಅಕ್ಷರದ ಚಪ್ಪರವನ್ನು ನಿರ್ಮಾಣ ಮಾಡಲಾಗಿದೆ. ಮಕ್ಕಳು ಇದೇ ಚಪ್ಪರದಡಿಯಲ್ಲಿ ಕುಳಿತು ಖುಷಿಯಿಂದ ಪಾಠ ಕೇಳುತ್ತಾರೆ. ಈ ಶಾಲೆಯಲ್ಲಿ ಸ್ಮಾರ್ಟ್ ಟಿವಿ, ಪ್ರೊಜೆಕ್ಟರ್ ಮೂಲಕವೂ ಪಾಠ ಹೇಳಿಕೊಡಲಾಗುತ್ತಿದೆ. ಇದಲ್ಲದೇ ಕಂಪ್ಯೂಟರ್ ಶಿಕ್ಷಣವನ್ನು ಹೇಳಿ ಕೊಡಲಾಗುತ್ತಿದೆ.
” ಇಲ್ಲಿ ಗಣಿತವನ್ನುಸುಲಭವಾಗಿ ಕಲಿಯಲುಸಾಧ್ಯವಾಗಿದೆ. ಪುಸ್ತಕದಲ್ಲಿ ಇರುವ ವಿಚಾರಗಳನ್ನು ಇಲ್ಲಿ ಪ್ರತ್ಯಕ್ಷವಾಗಿ ನೋಡುವುದಲ್ಲದೆ, ಪ್ರಯೋಗ ಮಾಡುವ ಮೂಲಕತಿಳಿದುಕೊಳ್ಳಬಹುದಾಗಿದೆ. ಲೆಕ್ಕ, ತೂಕ ಆಳತೆ ಎಲ್ಲವನ್ನೂ ಪ್ರಾಯೋಗಿಕವಾಗಿ ತಿಳಿಸಿಕೊಡುವುದರಿಂದ ನಮಗೆ ಬಹಳ ಅನುಕೂಲವಾಗಿದೆ.”
-ಅರ್ಜುನ್, ೫ನೇ ತರಗತಿ ವಿದ್ಯಾರ್ಥಿ
” ಮಕ್ಕಳಿಗೆ ಸರಳ ವಿಧಾನದಲ್ಲಿ ಗಣಿತವನ್ನು ಕಲಿಸುವ ಉದ್ದೇಶದಿಂದ ಲ್ಯಾಬ್‌ನ್ನು ತೆರೆಯಲಾಗಿದೆ ಹಾಗೂ ಶಿಕ್ಷಕರ ಸಂಪೂರ್ಣ ಸಹಕಾರದಿಂದ ಮಾಡಲಾಗಿರುವ ಲಾಂಗ್ವೆಜ್ ಲ್ಯಾಬ್ನಿಂದ ನಿರಂತರ ಕಲಿಕೆ ಸಾಧ್ಯವಾಗಿದೆ. ಈ ಕಾರ್ಯಕ್ಕೆ ಇಲಾಖೆ ಅಽಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.”
-ಎಂ.ಕೆ.ಅಂಬುಜ, ಶಾಲಾ ಮುಖ್ಯ ಶಿಕ್ಷಕಿ
ಶಿಕ್ಷಕರದ್ದೇ ಪರಿಕಲ್ಪನೆ:
ಮ್ಯಾಥ್ಸ್ ಲ್ಯಾಬ್‌ಅನ್ನು ಗಣಿತ ಶಿಕ್ಷಕ ಕೆ.ಎನ್.ಹರ್ಷ ಅವರು ಸಿದ್ಧಗೊಳಿಸಿದ್ದಾರೆ. ಇನ್ನು ಕನ್ನಡ ಭಾಷಾ ಲ್ಯಾಬ್ ಅನ್ನು ಶಿಕ್ಷಕಿ ನಾಹಿದಾ ಅಂಜುಮ್ ಮಾಡಿದ್ದಾರೆ. ಇಂಗ್ಲಿಷ್ ಭಾಷಾ ಲ್ಯಾಬ್‌ಗೆ ಸ್ವರೂಪ ನೀಡಿರುವುದು ಶಿಕ್ಷಕಿ ಆರ್.ರಶ್ಮಿ ಅವರು. ನಲಿ-ಕಲಿ ಕೊಠಡಿಯ ವಿನ್ಯಾಸ ಶಾಲೆಯ ಮುಖ್ಯ ಶಿಕ್ಷಕಿ ಎಂ.ಕೆ.ಅಂಬುಜಾ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿದೆ.
ಬೆಂಗಳೂರು : ಹೊಳೆನರಸೀಪುರದ ಸಂತ್ರಸ್ತೆಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದ್ದು, ರೇವಣ್ಣ…
ಹುಣಸೂರು : ಸದಾ ಜನನಿಬಿಡ ಪ್ರದೇಶವಾದ ಹುಣಸೂರು ಬಸ್ ನಿಲ್ದಾಣ ಹಿಂಭಾಗದ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಜ್ಯುಯಲರಿ ಅಂಗಡಿಯಲ್ಲಿ…
ತಿ.ನರಸೀಪುರ : ಮುಡುಕುತೊರೆಯು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದ್ದು, ಪ್ರವಾಸೋದ್ಯಮ ಕೇಂದ್ರವೂ ಆಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು…
ಮೈಸೂರು : ರಂಗಾಯಣದ ಪ್ರತಿಷ್ಠಿತ ಉತ್ಸವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಜನವರಿ 11 ರಿಂದ 18 ರವರೆಗೆ ನಡೆಯಲಿದೆ ಎಂದು…
ಬೆಂಗಳೂರು : ಹೊಸ ವರ್ಷಾಚರಣೆ ವೇಳೆ ಬೆಂಗಳೂರು ನಗರದಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ…
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಸ್ಥಾನದಿಂದಲೇ ಅನರ್ಹಗೊಂಡು ನ್ಯಾಯಾಲಯದ ತಡೆಯಾಜ್ಞೆಯಿಂದ ಬಚಾವ್ ಆಗಿದ್ದ ಮಾಜಿ ಸಚಿವ ಹಾಗೂ ಶಾಸಕ…