ನವೀನ್ ಡಿಸೋಜ
ಸುಮಾರು ೧೧೦ ಮೀ. ಉದ್ದ, ಅಂದಾಜು ೧೫ ಅಡಿ ಎತ್ತರದ ಸೇತುವೆ, ೩೬.೫೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ಮಡಿಕೇರಿ: ಪ್ರತಿವರ್ಷ ಮಳೆಗಾಲದಲ್ಲಿ ಹಾರಂಗಿ ಜಲಾಶಯದ ಕೆಳ ಭಾಗದಲ್ಲಿ ಸೇತುವೆ ಮುಳುಗಡೆಯಿಂದ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿದ್ದರು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ೩೬.೫೦ ಕೋಟಿ ರೂ. ಅಂದಾಜು ವೆಚ್ಚದ ಕಮಾನು ಸೇತುವೆ ನಿರ್ಮಾಣಕ್ಕೆ ಸಚಿವ ಸಂಪುಟದ ಅನುಮೋದನೆ ಸಿಕ್ಕಿದ್ದು, ಈ ಭಾಗದ ಗ್ರಾಮಗಳ ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.
ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಿಂದ ನೀರನ್ನು ಹೊರಗೆ ಹರಿಬಿಟ್ಟರೆ ಅಣೆಕಟ್ಟೆ ಎದುರಿನ ಸೇತುವೆ ಮುಳುಗಡೆಗೊಂಡು ಹಲವು ಗ್ರಾಮಗಳು ಸಂಪರ್ಕ ಕಡಿದುಕೊಳ್ಳುತ್ತಿದ್ದವು. ಹಾರಂಗಿ-ಸೋಮವಾರಪೇಟೆ ರಸ್ತೆಯಲ್ಲಿ ಸಂಚಾರ ಕಡಿತವಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಭಾಗದ ಜನರ ಓಡಾಟಕ್ಕೆ ಅನನುಕೂಲವಾಗುತ್ತಿತ್ತು. ಈ ಸಂಬಂಧ ಶಾಸಕ ಡಾ.ಮಂಥರ್‌ಗೌಡ ಅವರ ಸೇತುವೆ ನಿರ್ಮಾಣದ ಪ್ರಸ್ತಾ ವನೆಯನ್ನು ಸರ್ಕಾರ ಅಂಗೀಕರಿಸಿ ಕಮಾನು ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ.
ಹಾರಂಗಿ, ಯಡವನಾಡು, ಹುದುಗೂರು ಮತ್ತಿತರ ಗ್ರಾಮಗಳು ಹಾರಂಗಿ ಜಲಾಶಯದಿಂದ ನೀರು ಬಿಡುಗಡೆಯಾ ದರೆ ಸಂಪರ್ಕ ಕಡಿದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿವೆ. ಜಲಾಶಯದಿಂದ ೧೪ ಸಾವಿರ ಕ್ಯೂಸೆಕ್ಸ್ ನೀರು ಹೊರಬಿಟ್ಟರೆ ಈ ಸೇತುವೆಯ ಮೇಲೆ ನೀರು ಹರಿಯುತ್ತದೆ. ಅಲ್ಲದೇ ಸೇತುವೆಯ ಎರಡೂ ಕಡೆ ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲದ ಕಾರಣ ಸೇತುವೆಯ ಮೇಲೆ ಸ್ವಲ್ಪ ಮಟ್ಟಿಗೆ ನೀರು ಹರಿದರೂ ಸಂಚಾರ ಬಹಳ ಅಪಾಯಕಾರಿ.
ಕೆಲ ವರ್ಷಗಳ ಹಿಂದೆ ನೀರು ಹರಿಯುವ ಸಂದರ್ಭದಲ್ಲಿ ಸೇತುವೆ ದಾಟಲು ಹೋದ ಹಸುವೊಂದು ಕೊಚ್ಚಿಹೋದ ಘಟನೆಯೂ ನಡೆದಿದೆ. ಜೊತೆಗೆ ಪ್ರವಾಸಿಗರು ಸೆಲ್ಛಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಘಟನೆಯೂ ನಡೆದಿದೆ. ಈ ಎಲ್ಲ ಸಮಸ್ಯೆಗಳನ್ನೂ ಮನಗಂಡ ಶಾಸಕ ಡಾ.ಮಂಥರ್‌ಗೌಡ ಇದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸೇತುವೆ ನಿರ್ಮಾಣದ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದರು.
ಇತ್ತೀಚೆಗೆ ಸೇತುವೆ ಮುಳುಗಡೆಯಾಗಿದ್ದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿಡಿಯೋ ಕರೆ ಮಾಡಿದ್ದ ಡಾ.ಮಂಥರ್‌ಗೌಡ ಪರಿಸ್ಥಿತಿ ಬಗ್ಗೆ ವಿವರಿಸಿದ್ದರು. ಕಿರುಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿಯಿಂದ ನೂತನ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿ ಸೇತುವೆ ನಿರ್ಮಾಣಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವಂತೆ ಮನವಿ ಮಾಡಿದ್ದರು.
ನೂತನ ಸೇತುವೆಗೆ ನೀರಾವರಿ ನಿಗಮದಿಂದ ಯೋಜನೆ ಸಿದ್ಧವಾಗಿದ್ದು, ಅಂದಾಜು ೧೧೦ ಮೀ. ಉದ್ದದ ಈ ಕಮಾನು ಸೇತುವೆ ಈಗಿರುವ ಸೇತುವೆಗಿಂತ ಅಂದಾಜು ೧೫ ಅಡಿ ಎತ್ತರದಲ್ಲಿರಲಿದೆ. ಒಮ್ಮೆಗೆ ೨ ವಾಹನಗಳು ಸಂಚರಿಸುವಷ್ಟು ಸ್ಥಳಾವಕಾಶವಿರಲಿದ್ದು, ಅದರೊಂದಿಗೆ ಪ್ರವಾಸಿಗರಿಗೆ ನಡೆದಾಡಲು ಫುಟ್ ಪಾತ್ ವ್ಯವಸ್ಥೆ ಸಹಿತ ನಿಂತುಕೊಂಡು ಜಲಾಶಯವನ್ನು ವೀಕ್ಷಿಸಲು ಗ್ಯಾಲರಿ ವ್ಯವಸ್ಥೆಯನ್ನೂ ಒಳಗೊಂಡಿರಲಿದೆ.
ಈಗಾಗಲೇ ಸೇತುವೆಯ ನೀಲ ನಕ್ಷೆ ಸಿದ್ಧವಾಗಿದ್ದು, ಸರ್ಕಾರದ ಅನುಮೋದನೆ ಸಿಕ್ಕಿರುವುದರಿಂದ ಸದ್ಯದಲ್ಲಿಯೇ ಮುಂದಿನ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಐ.ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.
” ಶಾಸಕರ ನಿರಂತರ ಪ್ರಯತ್ನದಿಂದ ಕಮಾನು ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ೩೬.೫೦ ಕೋಟಿ ರೂ. ವೆಚ್ಚದಲ್ಲಿ ಅಂದಾಜು ೧೧೦ ಮೀ. ಉದ್ದದ ಕಮಾನು ಸೇತುವೆ ನಿರ್ಮಾಣವಾಗಲಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗುವುದರ ಜತೆಗೆ, ಪ್ರವಾಸಿಗರೂ ನಿಂತು ಜಲಾಶಯ ವೀಕ್ಷಣೆ ಮಾಡಲು ವ್ಯವಸ್ಥೆಯಾಗಲಿದೆ.”
-ಐ.ಕೆ. ಪುಟ್ಟಸ್ವಾಮಿ, ಕಾರ್ಯಪಾಲಕ ಇಂಜಿನಿಯರ್, ಹಾರಂಗಿ ಪುನರ್ವಸತಿ ವಿಭಾಗ
” ಹಾರಂಗಿ ಸೇತುವೆ ಮುಳುಗಡೆ ಸಮಸ್ಯೆ ಕುರಿತಂತೆ ಸರ್ಕಾರದ ಗಮನ ಸೆಳೆಯಲಾಗಿತ್ತು. ಸದ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಿದೆ. ಇದರೊಂದಿಗೆ ಜಲಾಶಯದ ಎಡದಂಡೆ ಕಾಲುವೆಗಳ ವಿತರಣಾ ನಾಲೆಗಳನ್ನು ಅಭಿವೃದ್ಧಿಪಡಿಸಲು ೪೯.೯೦ ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಗಿದೆ.”
-ಡಾ.ಮಂಥರ್‌ಗೌಡ, ಮಡಿಕೇರಿ ಶಾಸಕ
ದೆಹಲಿ ಕಣ್ಣೋಟ -ಶಿವಾಜಿ ಗಣೇಶನ್ ಹತ್ತೊಂಬತ್ತು ದಿನಗಳ ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಎಂದಿನಂತೆ…
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಸಾಮಾಜಿಕ ಬಹಿಷ್ಕಾರ ಹಾಕಿದವರಿಗೆ ಜೈಲು ಶಿಕ್ಷೆ ಹಾಗೂ ಲಕ್ಷ ರೂ. ದಂಡವನ್ನು ವಿಧಿಸುವ ಮಸೂದೆಗೆ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ…
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ಹೊರಬರಲು ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದೆ. ಆದರೆ ಈ…
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆಗೆ ಪ್ರತಿನಿತ್ಯ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ…
ನಿಗಮಗಳಿಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡದ ಸರ್ಕಾರ; ಏದುಸಿರು ಬಿಡುತ್ತಿರುವ ನಿಗಮಗಳು ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ…