ಸಿ.ಹರಕುಮಾರ್, ಬರಹಗಾರ
ಬಾಬಾ ಸಾಹೇಬ್‌ರ ಧಾರ್ಮಿಕ ನಿಲುವು ಅರಿಯಲು ಬಹುತೇಕರು ವಿಫಲ
ಭಾರತದ ಭಾಗ್ಯವಿಧಾತ ಮತ್ತು ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ ನೇ ಜನುಮ ದಿನವನ್ನು ಜಗತ್ತಿನಾದ್ಯಂತ ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಭಾರತದಲ್ಲಿ ಅವರನ್ನು ಅರ್ಥೈಸಿಕೊಳ್ಳಲು ಇಂದಿಗೂ ಹೆಣಗುತ್ತಿರುವ ಸಮಾಜದ ನಡುವೆ ನಾವಿದ್ದೇವೆಂದು ಹೇಳಲು ಪಶ್ಚಾತ್ತಾಪವಾಗುತ್ತಿದೆ. ‘ನಾನು ಯಾರಿಗೂ ಮೋಸ ಮಾಡಿಲ್ಲ, ಇದು ನಿಮಗೆ ಅರ್ಥವಾಗಬೇಕೆಂದರೆ ಭಾರತದ ಸಂವಿಧಾನವನ್ನು ಓದಿ ತಿಳಿದುಕೊಳ್ಳಿ ‘ ಎಂದು ಸ್ವಯಂ ಅಂಬೇಡ್ಕರ್ ರವರೇ ಧೈರ್ಯದಿಂದ ಹೇಳಿದ್ದಾರೆ.
ಅಂದರೆ ಪ್ರತಿಯೊಂದು ಧರ್ಮದ, ಜಾತಿಯ ವ್ಯಕ್ತಿ ಮತ್ತು ವ್ಯಕ್ತಿಗಳು ಭಾರತ ಸಂವಿಧಾನದ ಫಲಾನುಭವಿ ಗಳಾಗಿದ್ದಾರೆ. ಮೂಲಭೂತ ಹಕ್ಕುಗಳು ಎಲ್ಲರಿಗೂ ಒಂದೇ, ಶೈಕ್ಷಣಿಕ- ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯನ್ನು ಎಲ್ಲ ಜಾತಿ ಧರ್ಮದವರೂ ಪಡೆಯುತ್ತಿದ್ದಾರೆ. ಒಬ್ಬ ವ್ಯಕ್ತಿ -ಒಂದು ಮತ- ಒಂದು ಮೌಲ್ಯವನ್ನು ದಯಪಾಲಿಸಿದ್ದಾರೆ. ಇಷ್ಟೆಲ್ಲ ಇದ್ದರೂ ವಸ್ತುನಿಷ್ಠವಿಮರ್ಶೆಗಳನ್ನು ಬರೆಯಲು ಶಕ್ತರಲ್ಲದ ಕೆಲವರು ಅಂಬೇಡ್ಕರ್ ‘ವ್ಯಕ್ತಿತ್ವ’ದ ಬಗ್ಗೆ, ಅವರ ಕೊಡುಗೆಗಳ ಬಗ್ಗೆ ಕುಹಕವನ್ನಾಡುವ, ಸುಳ್ಳು ಹಬ್ಬಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳು ಬಂದ ಮೇಲಂತೂ ಈ ಅವಿವೇಕದ ಕೆಲಸ ಯಾವುದೇ ಎಗ್ಗಿಲ್ಲದೆ ಸಾಗುತ್ತಿದೆ. ಇದರ ಜೊತೆಗೆ ಅಂಬೇಡ್ಕರ್ ಅವರನ್ನು ಅರ್ಥೈಸಿಕೊಂಡು ವಸ್ತುನಿಷ್ಠ ಸಂಶೋಧನೆ, ಚರ್ಚೆ, ಮೀಮಾಂಸೆಯಲ್ಲಿ ತೊಡಗಿಸಿಕೊಂಡವರು ಕೂಡ ಇದ್ದಾರೆ. ಇಂದು ವಿಶ್ವದಾದ್ಯಂತ ನಿಮಿಷ ನಿಮಿಷಕ್ಕೂ ಧ್ಯಾನಿಸಲ್ಪಡುವ, ಚರ್ಚೆಗೆ ಒಳಗಾಗುತ್ತಿರುವ ವ್ಯಕ್ತಿ ಅಥವಾ ವ್ಯಕ್ತಿತ್ವವೇನಾದರೂ ಇದ್ದರೆ ಅದು ಅಂಬೇಡ್ಕರ್ ಎನ್ನುವ ನೀಲಿ ಸಾಗರ ಮಾತ್ರ. ಎಷ್ಟೇ ಟೀಕೆ, ಟಿಪ್ಪಣಿ, ಅಪಹಾಸ್ಯ, ನಿಂದನೆಗಳನ್ನು ಮಾಡಿದರೂ ಅವರ ವ್ಯಕ್ತಿತ್ವ, ಬರಹ, ಭಾಷಣಗಳು ಯಾರ ಜಪ್ತಿಗೂ ಸಿಗದ ನವಿಲುಗಳಂತಿರುವುದು ಸ್ಪಷ್ಟ.
ಅಂಬೇಡ್ಕರ್ ಅವರ ದೃಷ್ಟಿಕೋನ ಮತ್ತು ಬೌದ್ಧಿಕತೆಯ ಪರಿಶ್ರಮದಿಂದ ಮೂಡಿಬಂದಿರುವ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನದ ಬಗ್ಗೆ ಮೌಲಿಕ ಚರ್ಚೆಗಳು ನಡೆಯಬೇಕೆ ವಿನಾ ಕುಹಕ, ವ್ಯಂಗ್ಯ ಮಿಥ್ಯಗಳನ್ನು ಸೃಷ್ಟಿಸುವ ಪ್ರಕ್ರಿಯೆ ನಡೆಯುತ್ತಿರುವುದು ನಮಗೆ ನಾವೇ ಮಾಡಿಕೊಳ್ಳುತ್ತಿರುವ ಅವಮಾನ. ಏಕೆಂದರೆ ಸದೃಢ ಸಂವಿಧಾನವಿಲ್ಲದ ರಾಷ್ಟ್ರಗಳಲ್ಲಿ ಇಂದಿಗೂ ಆಂತರಿಕ ವಿಪ್ಲವ(ಕ್ರಾಂತಿ), ಕ್ಷೋಭೆ, ಅರಾಜಕತೆ… ಇತ್ಯಾದಿ ತಾಂಡವವಾಡುತ್ತಿರುವುದನ್ನು ಸಂವಿಧಾನದ ವಿರೋಧಿಗಳೇ ಗಮನಿಸಿದ್ದಾರೆ ಮತ್ತು ಅಂತಹ ರಾಷ್ಟ್ರಗಳಲ್ಲಿ ನೆಲೆಸಿದ್ದ ಬಹುತೇಕ ಅನಿವಾಸಿ ಭಾರತೀಯರ ವೈಯಕ್ತಿಕ ಅನುಭವಕ್ಕೂ ಬಂದಿರುವುದು ಸುಳ್ಳಲ್ಲ.
ನೈಜ ರಾಷ್ಟ್ರೀಯತೆ ಮತ್ತು ನಕಲಿ ರಾಷ್ಟ್ರೀಯತೆ ನಡುವೆ ಇಂದು ಆಂತರಿಕ ಯುದ್ಧ ಜರುಗುತ್ತಿದೆ. ನಕಲಿ ರಾಷ್ಟ್ರೀಯತೆಯಿಂದ ಹೊರಗೆ ಬರಬೇಕಾದರೆ ಸಂವಿಧಾನ ಕುರಿತು ಅರಿವು ಮತ್ತು ಜಾಗೃತಿ ತುಂಬಾ ಆವಶ್ಯಕ. ಈ ಕೆಲಸ ಪ್ರಾಥಮಿಕ ಶಿಕ್ಷಣದಿಂದಲೇ ಮಕ್ಕಳಿಗೆ ಬೋಧಿಸುವ ಕೆಲಸವಾಗಬೇಕು. ರಾಷ್ಟ್ರೀಯತೆ ಎಂದರೆ ಭಾರತೀಯತೆ ಮತ್ತು ಭಾರತೀಯತೆ ಎಂದರೆ ಸಹಿಷ್ಣುತೆ ಎನ್ನುವ ಬೋಧನೆ ಮಕ್ಕಳಿಂದಲೇ ಆರಂಭವಾಗಬೇಕು. ಡಾ.ಬಿ.ಆರ್. ಅಂಬೇಡ್ಕರ್ ರವರೇ ಸ್ವಯಂ ‘ “I am firstly Indian and Indian last’’ ನೀಡಿರುವ ಹೇಳಿಕೆಯನ್ನು ಪದೇ ಪದೇ ನೆನಪಿಸಬೇಕಾಗಿದೆ.
ಇಂದು ವಿಶ್ವದಾದ್ಯಂತ ಮುಸ್ಲಿಂ ಮತ್ತು ಕ್ರಿಶ್ಚಿಯನ್ ರಾಷ್ಟ್ರಗಳ ನಡುವೆ ಯಜಮಾನಿಕೆ ಸಾಮ್ರಾಜ್ಯ ಸ್ಥಾಪನೆಯ ದುರುದ್ದೇಶದಿಂದ ಯುದ್ಧ ಜರುಗುತ್ತಿದೆ. ಅಮಾಯಕರನ್ನು ಕೊಲ್ಲುವುದರ ಜೊತೆಗೆ ಅಲ್ಲಿನ ನೈಸರ್ಗಿಕ ಸಂಪತ್ತನ್ನು ರಾಸಾಯನಿಕ ಪರಮಾಣು ಬಾಂಬು ಗಳಿಂದ ನಾಶಗೊಳಿಸುತ್ತಿರುವ ಸಂದರ್ಭದಲ್ಲಿ ಮಾನವೀಯತೆಯ ಅಂಶಗಳು ಮಣ್ಣುಪಾಲಾಗಿವೆ. ಅಂಬೇಡ್ಕರ್ ರವರು ಅಳೆದು ತೂಗಿ ಕೊಡಮಾಡಲ್ಪಟ್ಟ ಗೌತಮ ಬುದ್ಧರ ಮತ್ತು ಧಮ್ಮದ ಸಂದೇಶಗಳನ್ನು ಸಂವಿಧಾನದಲ್ಲಿ ಅಡಕಗೊಳಿಸಿರುವುದರಿಂದ (ಪೀಠಿಕೆ, ರಾಷ್ಟ್ರ ಲಾಂಛನ, ರಾಷ್ಟ್ರಧ್ವಜ ) ಭಾರತವೂ ಸೇರಿದಂತೆ ಜಗತ್ತಿನ ೪೫ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಯುದ್ಧವಿಲ್ಲದೆ ಜನರು ನೆಮ್ಮದಿಯಿಂದ ಬದುಕುವಂತೆ ಮಾಡಿದೆ. ಈ ವಿಚಾರದಲ್ಲಿ ಭಾರತವನ್ನು ಆಂತರಿಕ ವಿಪ್ಲವದಿಂದ ಪಾರು ಮಾಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲಬೇಕು. ಅಪರೂಪಕ್ಕೊಮ್ಮೆ ಸಿಗುವ ಇಂತಹ ವ್ಯಕ್ತಿತ್ವವನ್ನು ಜತನದಿಂದ ಕಾಪಾಡಿಕೊಳ್ಳಲಾಗದೇ, ಅವರ ವಿಚಾರಧಾರೆಗಳನ್ನು ಅಳವಡಿಸಿ ಕೊಳ್ಳಲಾಗದೇ, ನೆಮ್ಮದಿಯ ಬದುಕಿನಿಂದ ದೂರವಾಗುತ್ತಿರುವುದು ಆತಂಕಕಾರಿಯಾಗಿದೆ.
ಧರ್ಮದ ಅಫೀಮು ಮತ್ತು ಜಾತಿಯ ಮೇಲು- ಕೀಳಿನ ವ್ಯಸನದಲ್ಲಿ ಗಲಭೆ, ಅವಮಾನ, ಕೊಲೆ, ಸುಲಿಗೆಯಂತಹ ದುಶ್ಚಟಗಳಲ್ಲಿ ಅಮೂಲ್ಯ ಬದುಕನ್ನು ವಿನಾಶ ಮಾಡಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ. ಅಂಬೇಡ್ಕರ್ ರವರನ್ನು ಜಾತಿಯ ಸೂಕ್ಷ್ಮಗ್ರಾಹಿಯಿಂದ ಅಳೆಯದೇ, ಬೌದ್ಧಿಕತೆಯ ಮಾನದಂಡದಿಂದ ನೋಡಿದಾಗ ಸದೃಢ ಭಾರತವನ್ನು ಕಟ್ಟಲು ಅವರು ಮಾಡಿರುವ ತ್ಯಾಗ, ಶ್ರಮಿಸಿರುವ ದಾರಿ ಅರ್ಥವಾಗುತ್ತದೆ. ಬಹುತೇಕ ಭಾರತೀಯರು ಇಂದಿಗೂ ಅಂಬೇಡ್ಕರ್ ಅವರ ಧಾರ್ಮಿಕತೆಯನ್ನು, ಧಾರ್ಮಿಕ ನಿಲುವನ್ನು ಟೀಕಿಸುತ್ತಿದ್ದಾರೆ, ಪ್ರಶ್ನಿಸುತ್ತಿದ್ದಾರೆ ಮತ್ತು ಸಂಶಯಿಸುತ್ತಿದ್ದಾರೆ. ಧಾರ್ಮಿಕತೆ ಬಗ್ಗೆ ಅವರಿಗಿದ್ದ ನಿಲುವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಹ ಬಹುತೇಕರು ವಿಫಲರಾಗಿದ್ದಾರೆ. ಖುದ್ದು ಅಂಬೇಡ್ಕರ್ ರವರೇ ಬರೆದ My Autobiography- My Story-My Voice ’ ಎನ್ನುವ ಆತ್ಮಕಥನದಲ್ಲಿ ಈ ರೀತಿ ದಾಖಲಿಸಿದ್ದಾರೆ. “Many people think I am irreligious. What I absolutely cannot stand is religious hypocrisy. A religion that does not teach a person to control their base instincts is worthless’. ಅಂದರೆ ಅಂಬೇಡ್ಕರ್ ರವರು ಎಲ್ಲಾ ಧರ್ಮಗಳ ಬೂಟಾಟಿಕೆ ವಿರುದ್ಧ ನಿಲುವು ಹೊಂದಿದ್ದರೇ ವಿನಾ ಯಾವುದೇ ಧರ್ಮ ಅಥವಾ ಧಾರ್ಮಿಕತೆ ವಿರುದ್ಧ ಅಲ್ಲ. ಇದಕ್ಕಾಗಿ ಯಾರ ಮಾತನ್ನೂ ಕೇಳುವ ಅಥವಾ ಬರಹಗಳನ್ನು ಓದುವ ಆವಶ್ಯಕತೆ ಇಲ್ಲ. ಅವರ ಪ್ರಕಟಿತ ಸಾಹಿತ್ಯವನ್ನು ಓದಿದರಷ್ಟೇ ಸಾಕು.
“No man can be grateful at the cost of his self respect, No woman can be grateful at the cost of her chastity, No nation can be grateful at the cost of its liberty ‘ (Daniel O’ Connell) – ಇದು ಅಂಬೇಡ್ಕರ್ ರವರು ಸಂವಿಧಾನವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡುವಾಗ ಮಾಡಿದ ಕೊನೆಯ ಭಾಷಣದಲ್ಲಿ ಬಳಸಿದ ಐರಿಷ್ ದೇಶದ ತತ್ವಜ್ಞಾನಿಯ ಮಾತುಗಳು. ಅಂದರೆ ‘ಒಬ್ಬ ವ್ಯಕ್ತಿ ತನ್ನ ಸ್ವಾಭಿಮಾನ, ಒಬ್ಬ ಮಹಿಳೆ ತನ್ನ ಚಾರಿತ್ರ್ಯ, ಒಂದು ದೇಶ ತನ್ನ ಸ್ವಾತಂತ್ರ್ಯವನ್ನು ಬಲಿಕೊಟ್ಟು ಅಥವಾ ಧಕ್ಕೆ ತಂದುಕೊಂಡು ಶ್ರೇಷ್ಠತೆಯನ್ನು ಸಾಧಿಸುವುದು ಎಷ್ಟೊಂದು ಅಸಹನೀಯ ಎಂಬುದನ್ನು ಧ್ವನಿಸುತ್ತದೆ.
ಶೋಷಿತ ಸಮುದಾಯ ಮತ್ತು ಜಾತಿವಾದಿಗಳಿಬ್ಬರೂ ಅವರ ಬೌದ್ಧಿಕತೆಗೆ, ಚಿಂತನೆಗೆ ಹತ್ತಿರವಾಗಲು ಶ್ರಮಿಸದಿರುವುದು ಮತ್ತು ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದಿರುವುದೇ ಇದಕ್ಕೆ ಪ್ರಮುಖ ಕಾರಣ. ಆ ದಿಕ್ಕಿನಲ್ಲಿ ಚಲಿಸಿದಾಗ ಮಾತ್ರ ಅಂಬೇಡ್ಕರ್ ರವರ ಆಶಯಗಳು ಖಂಡಿತವಾಗಿಯೂ ಈಡೇರುತ್ತವೆ.
” ಧರ್ಮದ ಅಫೀಮು ಮತ್ತು ಜಾತಿಯ ಮೇಲು- ಕೀಳಿನ ವ್ಯಸನದಲ್ಲಿ ಗಲಭೆ, ಅವಮಾನ, ಕೊಲೆ, ಸುಲಿಗೆಯಂತಹ ದುಶ್ಚಟಗಳಲ್ಲಿ ಅಮೂಲ್ಯ ಬದುಕನ್ನು ವಿನಾಶ ಮಾಡಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ.”
ನವದೆಹಲಿ: ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ಜಯಂತಿ. ಇದರ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ…
ನವದೆಹಲಿ: ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.…
ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ ನಜೀರ್ ಅಹಮ್ಮದ್ ಅವರು ರಾಜೀನಾಮೆ ನೀಡಿದ್ದಾರೆ. ನಜೀರ್ ಅಹಮ್ಮದ್ ಅವರು ಸಿಎಂ…
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಕಾವೇರಿ ನದಿಯ ಉಪನದಿಯಾಗಿದ್ದು, ಹುಣಸೂರು ಭಾಗದ ಬಹಳ ಮುಖ್ಯವಾದ…
ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಕರ್ನಾಟಕದವರು ಇನ್ನು ಮುಂದೆ ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಹಾಗೂ ರೈಲ್ವೆ ಇಲಾಖೆ…
ಮೈಸೂರಿನ ಮಾನಸಗಂಗೋತ್ರಿಯಿಂದ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿಗೆ (ಎಸ್‌ಜೆಸಿಇ) ಸಂಪರ್ಕ ಕಲ್ಪಿಸುವ ರಸ್ತೆಯ ಎಡ ಬದಿಯಲ್ಲಿ ಇರುವ ಮರವೊಂದರ ಕೊಂಬೆ…