Andolana originals

ರಾಷ್ಟ್ರೀಯ ಹೆದ್ದಾರಿ ಬದಿಯ ಅಂಗಡಿಗಳ ತೆರವಿಗೆ ಕ್ರಮ

ನವೀನ್ ಡಿಸೋಜ

ಹೆದ್ದಾರಿ ಉಪ ವಿಭಾಗದಿಂದ ಸಿದ್ಧತೆ; ಶೀಘ್ರದಲ್ಲೇ ಅನಧಿಕೃತ ಫಲಕ, ತಾತ್ಕಾಲಿಕ ಅಂಗಡಿಗಳ ತೆರವು 

ಮಡಿಕೇರಿ: ರಾಷ್ಟ್ರೀಯ ಹೆದ್ದಾರಿ ೨೭೫ರ ಸಂಪಾಜೆಯಿಂದ ಕುಶಾಲನಗರದವರೆಗಿನ ರಸ್ತೆಬದಿಯಲ್ಲಿ ತೆರವುಗೊಳಿಸಿದ್ದ ಅಕ್ರಮ ಅಂಗಡಿಗಳು ಮತ್ತೆ ತಲೆ ಎತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ ಮತ್ತೆ ಕ್ರಮಕ್ಕೆ ಮುಂದಾಗಿದೆ.

ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯ ಸಂಪಾಜೆಯಿಂದ ಕುಶಾಲನಗರದವರೆಗೆ ನಿಯಮ ಬಾಹಿರವಾಗಿ ಅಳವಡಿಸಲಾಗಿದ್ದ ಜಾಹೀರಾತು ಫಲಕಗಳು ಮತ್ತು ಅಕ್ರಮ ಅಂಗಡಿ ಗಳನ್ನು ಹೆದ್ದಾರಿ ಮಡಿಕೇರಿ ಉಪ ವಿಭಾಗದ ಅಧಿಕಾರಿಗಳು ತೆರವುಗೊಳಿಸಿದ್ದರು. ಇದೀಗ ಅದೇ ಸ್ಥಳಗಳಲ್ಲಿ ಮತ್ತೆ ಬೋರ್ಡ್ ಗಳು ರಾರಾಜಿಸುತ್ತಿದ್ದು, ಅಂಗಡಿಗಳು ತಲೆ ಎತ್ತಿವೆ. ಈ ಅಂಗಡಿಗಳ ತೆರವಿಗೆ ಈಗ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಹಿಂದೆ ಅಂಗಡಿಗಳು ಮತ್ತು ಜಾಹೀರಾತು ಫಲಕ ಅಳವಡಿಸಿದವರಿಗೆ ಎಚ್ಚರಿಕೆ ನೀಡಿದರೂ ತೆರವು ಮಾಡದ ಹಿನ್ನೆಲೆಯಲ್ಲಿ ಇಲಾಖೆಯಿಂದ ಜೆಸಿಬಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿತ್ತು. ಈಗ ಮತ್ತೆ ಅದೇ ಸ್ಥಳಗಳಲ್ಲಿ ಅಕ್ರಮವಾಗಿ ಅಂಗಡಿಗಳನ್ನು ಹಾಕಿಕೊಳ್ಳಲಾಗಿದೆ. ಹೀಗಾಗಿ ಮತ್ತೆ ಅಂಗಡಿ ಮಳಿಗೆಗಳ ಮಾಲೀಕರು ಹಾಗೂ ಜಾಹೀರಾತು ಫಲಕಗಳನ್ನು ಅಳವಡಿಸಿರುವವರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಅ.೨೬ರವರೆಗೆ ಸ್ವಯಂಪ್ರೇರಿತರಾಗಿ ತೆರವುಗೊಳಿಸಬೇಕೆಂದು ಸೂಚಿಸಲಾಗಿದ್ದು, ಅ. ೨೭ರಿಂದ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸಂಪಾಜೆಯಿಂದ ಕುಶಾಲನಗರದವರೆಗೆ ರಾಷ್ಟ್ರೀಯ ಹೆದ್ದಾರಿ ೨೭೫ರ ಎರಡೂ ಬದಿಗಳಲ್ಲಿ ಅಲ್ಲಲ್ಲಿ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಂಡು ಹಣ್ಣು, ಜ್ಯೂಸ್, ಎಳನೀರು ಮತ್ತಿತರ ವಸ್ತುಗಳ ವ್ಯಾಪಾರ ಮಾಡಲಾಗುತ್ತದೆ. ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳವರು ಅಲ್ಲಿ ನಿಲ್ಲಿಸಿ ಖರೀದಿಗೆ ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ಹೈವೇಯಲ್ಲಿ ಸಂಚರಿಸುವ ಇತರ ವಾಹನಗಳಿಗೆ ಅಡಚಣೆ ಉಂಟಾಗುತ್ತಿದೆ. ಇದಲ್ಲದೇ ಕೆಲವು ತಿರುವುಗಳಲ್ಲಿ ಅಂಗಡಿಗಳನ್ನು ಹಾಕಿಕೊಂಡಿರುವುದರಿಂದ ಎದುರಿನಿಂದ ಬರುವ ವಾಹನಗಳು ಕಾಣಿಸದೇ ಅಪಘಾತಗಳಾಗುತ್ತಿವೆ. ಈ ಬಗ್ಗೆ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಲಾಖೆ ಈಗ ಕ್ರಮಕ್ಕೆ ಮುಂದಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಒಂದಷ್ಟು ಬೋರ್ಡ್‌ಗಳು ಹೋಂಸ್ಟೇ ಮತ್ತು ಜುವೆಲರಿ ಶಾಪ್‌ಗಳಿಗೆ ಸೇರಿವೆ. ಶೇ.೮೦ ಹೋಟೆಲ್ ಮತ್ತು ರೆಸಾರ್ಟ್‌ಗಳ ಜಾಹೀರಾತುಗಳು ಮತ್ತು ಕಿ.ಮೀ ಸೂಚನಾ ಫಲಕಗಳಾಗಿವೆ. ಇವುಗಳನ್ನು ತೆರವುಗೊಳಿಸುವಂತೆ ಈ ಹಿಂದೆಯೇ ಅಧಿಕಾರಿಗಳು ಸೂಚನೆ ನೀಡಿದ್ದರಾದರೂ ಕೆಲ ಪ್ರಭಾವಿಗಳು ನೋಟಿಸ್ ನೀಡಲು ಹೋಗಿದ್ದ ಅಧಿಕಾರಿಗಳನ್ನೇ ಬೆದರಿಸಿದ್ದರು. ಅಂಗಡಿಗಳ ತೆರವು ವಿಚಾರದಲ್ಲಿಯೂ ಇಂತಹದ್ದೇ ಸವಾಲನ್ನು ಅಧಿಕಾರಿಗಳು ಎದುರಿಸಿದರಾದರೂ ಕೊನೆಗೆ ಪೊಲೀಸರ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಸಿದ್ದರು.

ರಾಷ್ಟ್ರೀಯ ಹೆದ್ದಾರಿ ನಿಯಮ ಏನು?: ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಹೆದ್ದಾರಿಯ ಮಧ್ಯಭಾಗದಿಂದ ಒಂದು ಬದಿಗೆ ೪೦ ಮೀಟರ್‌ವರೆಗೆ ಯಾವುದೇ ಕಟ್ಟಡ, ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಅಥವಾ ಯಾವುದೇ ವ್ಯಾಪಾರ ವಹಿವಾಟಿಗೆ ಅವಕಾಶವಿಲ್ಲ. ಹೆದ್ದಾರಿ ಗಡಿ ರೇಖೆಯಿಂದ ೧೨ಮೀಟರ್ ಅಂತರದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗೆ ಅವಕಾಶವಿರುವುದಿಲ್ಲ. ಕೆಲವರು ಸಂಬಂಧಪಟ್ಟ ಪಂಚಾಯ್ತಿಗಳು, ಹೆದ್ದಾರಿ ಪ್ರಾಧಿಕಾರ ಅಥವಾ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯದೇ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ವಾಹನ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ವಾಹನ ಚಾಲಕರಿಂದ ದೂರುಗಳೂ ಬಂದಿವೆ ಎಂದು ಹೆದ್ದಾರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಭಿಯಂತರ ಗಿರೀಶ್ ತಿಳಿಸಿದ್ದಾರೆ.

” ಈ ಹಿಂದೆಯೂ ಹೆದ್ದಾರಿ ಬದಿಯಲ್ಲಿರುವ ಅಕ್ರಮ ಜಾಹೀರಾತು ಫಲಕಗಳು ಮತ್ತು ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಇದಾದ ಕೆಲವೇ ತಿಂಗಳಲ್ಲಿ ಮತ್ತೆ ಬೋರ್ಡ್ಗಳು ಕಾಣಿಸಿಕೊಂಡಿವೆ. ಅಂಗಡಿಗಳೂ ತಲೆ ಎತ್ತಿವೆ. ಹೀಗಾಗಿ ಮತ್ತೆ ಸಾರ್ವಜನಿಕ ಪ್ರಕಟಣೆ ಮೂಲಕ ಅ.೨೬ರ ವರೆಗೆ ಗಡುವು ನೀಡಿದ್ದೇವೆ. ಅ.೨೭ರಿಂದ ತೆರವು ಕಾರ್ಯಾಚರಣೆ ನಡೆಸುತ್ತೇವೆ.ʼ

-ಜಿ.ಎಚ್.ಗಿರೀಶ್, ಸಹಾಯಕ ಕಾರ್ಯಪಾಲಕ ಅಭಿಯಂತರ, ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ 

ಆಂದೋಲನ ಡೆಸ್ಕ್

Recent Posts

ಶ್ರೀಕ್ಷೇತ್ರ ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನ

ಪಟ್ಟಣಂತಿಟ್ಟ: ಶ್ರೀ ಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ವಾರ್ಷಿಕ ಮಕರ ಜ್ಯೋತಿ ಇಂದು ದರ್ಶನವಾಗಲಿದೆ. ಇಂದು ಸಂಜೆ ಮಕರ ಜ್ಯೋತ…

11 mins ago

ನಾಳೆಯಿಂದ ಸುತ್ತೂರು ಜಾತ್ರಾ ಮಹೋತ್ಸವ: ಮಹಾದಾಸೋಹಕ್ಕೆ ಅಧಿಕೃತ ಚಾಲನೆ

ನಂಜನಗೂಡು: ನಾಳೆಯಿಂದ ಜನವರಿ.20ರವರೆಗೆ ಸುತ್ತೂರು ಜಾತ್ರಾ ಮಹೋತ್ಸವ ನಡೆಯಲಿದ್ದು, ಇಂದು ಮಹಾದಾಸೋಹಕ್ಕೆ ಅಧಿಕೃತ ಚಾಲನೆ ದೊರೆಯಿತು. ಮೈಸೂರು ಜಿಲ್ಲೆ ನಂಜನಗೂಡು…

23 mins ago

ಓದುಗರ ಪತ್ರ: ಪ್ರಾಮಾಣಿಕತೆ ಮೆರೆದ ಕುಟುಂಬ

ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಹಣಗಳಿಕೆಗಾಗಿ ಸುಳ್ಳು, ಮೋಸ, ಕೊಲೆ ಸುಲಿಗೆ ಪ್ರಕರಣಗಳೇ ಹೆಚ್ಚಾಗಿ ಕಂಡುಬರುತ್ತಿವೆ. ನಿಧಿಗಾಗಿ ವಾಮಾಚಾರ…

4 hours ago

ಓದುಗರ ಪತ್ರ: ಬೆಳೆ ನಷ್ಟಕ್ಕೆ ಪರಿಹಾರ ನೀಡಿ

ಪ್ರಸ್ತುತ ರಾಜ್ಯದಲ್ಲಿ ತೀವ್ರ ಚಳಿ ಮತ್ತು ಅಕಾಲಿಕ ತುಂತುರು ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು,…

4 hours ago

ಓದುಗರ ಪತ್ರ: ಚಿನ್ನ , ಬೆಳ್ಳಿ ದರ ಏರಿಕೆಗೆ ಕಡಿವಾಣ ಹಾಕಿ

ಪ್ರತಿಯೊಬ್ಬರೂ ಇಷ್ಟಪಡುವ ವಸ್ತುಗಳಲ್ಲಿ ಚಿನ್ನ ಪ್ರಮುಖವಾಗಿದೆ. ಮಧ್ಯಮ ವರ್ಗದ ಜನರು ಪೈಸೆ ಪೈಸೆ ಕೂಡಿಟ್ಟು ಚಿನ್ನ ಖರೀದಿಸುತ್ತಿದ್ದು, ಮದುವೆ ಮೊದಲಾದ…

4 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: 10ನೇ ವಯಸ್ಸಿನಲ್ಲೇ ಹೆಡ್ ಮಾಸ್ಟರಾಗಿ ವಿಶ್ವ ದಾಖಲೆ ಬರೆದ ಬಾಬರ್ ಅಲಿ !

ಪಂಜುಗಂಗೊಳ್ಳಿ  ೭,೫೦೦ಕ್ಕೂ ಹೆಚ್ಚು ಮಕ್ಕಳ ಬದುಕಿಗೆ ಆಸರೆಯಾದ ಆನಂದ ಶಿಕ್ಷಾ ನಿಕೇತನ ಪಶ್ಚಿಮ ಬಂಗಾಳದ ಮುರ್ಷಿದಾಬಾದಿನ ಶಂಕರಪಾದ ಗ್ರಾಮದ ಒಂಬತ್ತು…

4 hours ago