Andolana originals

ಶಿಥಿಲಾವಸ್ಥೆಯಲ್ಲಿ ‘ದಲಿತ- ಗಾಂಧಿ’ ಶತಮಾನದ ಶಾಲೆ

ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ,

ಮೈಸೂರು ವಿಶ್ವವಿದ್ಯಾನಿಲಯ

ಮೈಸೂರು: ಮಕ್ಕಳಲ್ಲಿ ಗಾಂಧೀಜಿ ಅವರ ಸರಳತೆ, ಸಹಿಷ್ಣುತೆ, ಸಮಾನತೆಯ ಚಿಂತನೆಗಳ ಅರಿವು ಮೂಡಿಸುವುದಕ್ಕೆ ಅಕ್ಷರ ಕಲಿಸುವ ಮಹತ್ತರ ಆಶಯದೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ‘ಬಾಲಬೋಧಿನಿ’ ಎಂಬ ಹೃದಯ ಅರಳಿಸುವ ಹೆಸರು ಸೇರಿಸಿ ಆರಂಭಿಸಿದ ಶಾಲೆ ಈಗ ೧೩೦ ವರ್ಷಗಳನ್ನು ದಾಟಿ ಸಾಗಿದೆ. ಆದರೆ, ಹಿರಿತನಕ್ಕೆ ತಕ್ಕಂತೆ ಸವಲತ್ತುಗಳು ಇಲ್ಲದೆ ದುಸ್ಥಿತಿಯಲ್ಲಿದೆ.

ನಗರದ ಚಾಮುಂಡಿಪುರಂನಲ್ಲಿರುವ ದಯಾನಂದ ಸಾಗರ ಮಗ್ಗೆ ವೆಂಕಟಯ್ಯ ಅವರ ಕನಸಿನ ಶಾಲೆಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ- ವಿಎಂವಿ ಬಾಲಬೋಧಿನಿ ಶಾಲೆಯ ಕಟ್ಟಡವು ಶಿಥಿಲಾವಸ್ಥೆಗೊಂಡು ಮಳೆಗೆ ಸೋರುತ್ತಿದೆ.

ಮಹಾತ್ಮ ಗಾಂಧಿಜಿಯ ಸಮಾನತೆಯ ಚಿಂತನೆಗಳಿಂದ ಪ್ರೇರಣೆಗೊಂಡ ಮೈಸೂರಿನ ವೃದ್ಧ ಪಿತಾಮಹ ದಯಾನಂದಸಾಗರ ಮಗ್ಗೆ ವೆಂಕಟಕೃಷ್ಣಯ್ಯ ಅವರು ದಲಿತ ಮಕ್ಕಳ ಶೈಕ್ಷಣಿಕ ಹಿತಕ್ಕಾಗಿಯೇ ಶಾಲೆಯನ್ನಾಗಿಸಲು ತನ್ನ ಸ್ವಂತ ಮನೆಯನ್ನೇ ಬಿಟ್ಟು ಕೊಡುತ್ತಾರೆ. ೧೮೯೬ರಲ್ಲಿ ಸ್ಥಾಪಿತವಾದ ಈ ಶಾಲೆ ಈಗ ೧೩೦ ವರ್ಷಗಳನ್ನು ದಾಟಿ ಸಾಗುತ್ತಿದೆ.

ಗಾಂಧೀಜಿ ಅವರ ಆಶಯಗಳನ್ನು ಹೊತ್ತುಕೊಂಡು ದಲಿತ ಮಕ್ಕಳಿಗಾಗಿ ಸ್ಥಾಪಿತವಾದ ಶಾಲೆ ಇದು. ಆ ಕಾರಣಕ್ಕೆ ಶಾಲೆಯನ್ನು ‘ದಲಿತ ಮಕ್ಕಳ ಶಾಲೆ’ ‘ಗಾಂಧಿ ಶಾಲೆ’ ಎಂದು ಕರೆಯುತ್ತಿದ್ದ ಕಾಲವೂ ಇತ್ತಂತೆ. ಆದರೆ ಈಗ ಶಾಲೆಯ ಕಟ್ಟಡವು ಶಿಥಿಲಗೊಂಡಿದೆ. ಮಳೆ ಸುರಿದರೆ ಚಾವಣಿ ಸೋರುತ್ತದೆ. ಇದರಿಂದ ಕಟ್ಟಡದ ಗೋಡೆಗಳ ಗಾರೆಯು ಉದುರುತ್ತಿದೆ.

ಶಾಲೆಯ ಕಾಂಪೌಂಡ್ ಬಣ್ಣ ಕಾಣದೆ ಪಾಚಿ ಕಟ್ಟಿಕೊಂಡು ಕೊಳಕಾಗಿದ್ದು, ಅದೂ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಪ್ರಸ್ತುತ ಈ ಶಾಲೆಯಲ್ಲಿ ೩೫ ಮಕ್ಕಳು ಕಲಿಯುತ್ತಿದ್ದಾರೆ. ನಾಲ್ವರು ಶಿಕ್ಷಕಿಯರು ಇದ್ದಾರೆ. ಶಾಲೆಯ ಸಮೀಪದ ಸೆಂಟ್ ಮೇರಿ’ಸ್, ಶಾರದಾ ವಿಲಾಸ ಶಾಲೆ, ವಾಣಿ ವಿದ್ಯಾಮಂದಿರ ಹಾಗೂ ಇನ್ನಿತರ ಖಾಸಗಿ ಶಾಲೆಗಳು ಈ ಶಾಲೆಯ ಪ್ರವೇಶಾತಿಯನ್ನು ಕಬಳಿಸಿವೆ.

ಇದಕ್ಕೆ ಸವಾಲು ಹಾಕುವಂತೆ ಬಾಲಬೋಧಿನಿಯ ಪ್ರಭಾರ ಮುಖ್ಯಶಿಕ್ಷಿಕ ಲತಾಕುಮಾರಿ, ಸಹ ಶಿಕ್ಷಕಿಯರಾದ ಬಿ.ಎಸ್.ಲೀಲಾವತಿ, ಆರ್.ಎಂ.ಮೋಸಿನ್ ತಾಜ್, ಮಮತಾ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ವಾಹನ ವ್ಯವಸ್ಥೆ ಮಾಡಿದ್ದಾರೆ. ಈ ವ್ಯವಸ್ಥೆಗೆ ಒಂದು ವರ್ಷಕ್ಕೆ ೧ ಲಕ್ಷ ರೂ. ಖರ್ಚಾಗುತ್ತದೆ ಎನ್ನುತ್ತಾರೆ ಲತಾಕುಮಾರಿ.

ಈ ಶಾಲೆಗೆ ಜೆ.ಪಿ.ನಗರ, ನಾಚನಹಳ್ಳಿ ಪಾಳ್ಯ, ಮಂಡಕಳ್ಳಿ ಹಾಗೂ ಮಹಾದೇವಪುರದ ನರ್ಮ್ ಯೋಜನೆಯ ಮನೆಗಳ ಮಕ್ಕಳು ಬರುತ್ತಾರೆ.ಬಹುಪಾಲು ಪೌರಕಾರ್ಮಿಕರು, ಕೂಲಿ ಕಾರ್ಮಿಕರ ಕುಟುಂಬದ ಮಕ್ಕಳೇ ಇದ್ದಾರೆ. ಇವರಲ್ಲಿ ೨೧ ಪರಿಶಿಷ್ಟ ಜಾತಿ ಮಕ್ಕಳು, ೧ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿ, ೧೦ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ಮಕ್ಕಳಾಗಿದ್ದು, ೩ ಮುಸ್ಲಿಂ ಕುಟುಂಬಕ್ಕೆ ಸೇರಿದ್ದಾರೆ. ಇಲ್ಲಿ ೨೧ ಮಕ್ಕಳಿಗೆ ತಾಯ್ನುಡಿ ತೆಲುಗು.

ಮೈಸೂರಿನ ಮಲ್ಲಿಗೆ ಸೇವಾ ಸಂಘವು ಈ ಶತಮಾದ ದಾಟಿದ ಶಾಲೆಗೆ ಒತ್ತಾಸೆಯಾಗಿ ನಿಂತಿದೆ. ಈ ಶಾಲೆಯ ಕಟ್ಟಡಕ್ಕೆ ಬಣ್ಣ ಬಳಿಸಲು ಹಾಗೂ ಶುದ್ಧ ಕುಡಿಯುವ ನೀರಿಗಾಗಿ ಆರ್‌ಒ ಪ್ಲಾಂಟ್ ಅನ್ನು ನೀಡುವ ಯಾರಾದರೂ ದಾನಿಗಳು ಮುಂದಾಗಬೇಕು ಎಂಬುದು ಲತಾಕುಮಾರಿ ಅವರ ಮನವಿ.

” ಯಾವ ಯಾವ ಶಾಲೆಯಲ್ಲಿ ತುರ್ತುಗಾಗಿ ರಿಪೇರಿ ಕೆಲಸ ಆಗಬೇಕು ಎಂಬುದರ ಬಗ್ಗೆ ಆಡಳಿತ ವರ್ಗದ ಜೊತೆ ಚರ್ಚಿಸಲಾಗಿದೆ. ಬಾಲಬೋಧಿನಿ ವಿಎಂವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಮಳೆಗೆ ಸೋರುತ್ತಿರುವುದು ಗಮನಕ್ಕೆ ಬಂದಿದೆ. ಈ ಬೇಸಿಗೆಯಲ್ಲಿ ಸರಿಪಡಿಸಲು ಕ್ರಮ ವಹಿಸಲಾಗುವುದು.”

-ಕೃಷ್ಣ, ಬಿಇಒ, ದಕ್ಷಿಣ ವಲಯ, ಮೈಸೂರು

” ಆಗ ನಾವು ಓದುವುದೇ ದೊಡ್ಡ ವಿಷಯ ಆಗಿತ್ತು. ಆಗ ಕನ್ನಡವೇ ಮುಖ್ಯವೂ ಆಗಿತ್ತು. ಈಗ ಕಾಲ ಬದಲಾಗಿದೆ. ಎಲ್ಲರೂ ಇಂಗ್ಲಿಷ್, ಇಂಗ್ಲಿಷ್ ಅಂತ ಆಸೆಪಡುತ್ತಾರೆ. ನಾವು ಓದಿದ ಶಾಲೆಯಾದರೂ, ನಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಭವಿಷ್ಯಕ್ಕೆ ದಾರಿದೀಪವಾಗಿದೆ. ಈ ಶಾಲೆಯಲ್ಲೂ ಇಂಗ್ಲಿಷ್ ಮಾಧ್ಯಮ ಅಳವಡಿಸಬೇಕು. ಇಂಗ್ಲಿಷ್ ಕಾರಣಕ್ಕಾದರೂ ಮಕ್ಕಳ ಪ್ರವೇಶಾತಿ ಹೆಚ್ಚಾಗಬಹುದು.”

-ಸಂಪತ್, ನಿವಾಸಿ, ಚಾಮುಂಡಿಪುರಂ, ಮೈಸೂರು

” ಈ ಶಾಲೆಯಲ್ಲಿ ನಾವು ಓದುತ್ತಿದ್ದ ಆ ಕಾಲವನ್ನು ವರ್ಣನೆ ಮಾಡಲು ಪದವೇ ಇಲ್ಲ. ಈಗ ಶಿಕ್ಷಕರು ಇದ್ದಾರೆ. ಮಕ್ಕಳೇ ಇಲ್ಲ. ಹಳೇ ವಿದ್ಯಾರ್ಥಿಗಳ ಸಂಘ ರಚಿಸಿಕೊಂಡು ಶಾಲೆಗೆ ಏನು ಮಾಡಬಹುದು ಎಂದು ಶಾಲಾ ಆಡಳಿತದ ಜೊತೆ ಚರ್ಚಿಸುತ್ತೇವೆ.”

-ಸಂತೋಷ್ ಕುಮಾರ್ ಎಸ್. ದೇಶಿಕ್, ಹಳೇ ವಿದ್ಯಾರ್ಥಿ, ಹೆಬ್ಬಾಳು, ಮೈಸೂರು

” ಶಾಲೆಯ ಅನುಕೂಲಕ್ಕಾಗಿ ಹಳೇ ವಿದ್ಯಾರ್ಥಿಗಳ ಸಂಘ ರಚಿಸಲು, ಸುಮಾರು ೫೦ ರಿಂದ ೧೦೦ ಹಳೇ ವಿದ್ಯಾರ್ಥಿಗಳ ಮನೆ ವಿಳಾಸಕ್ಕೆ ಪತ್ರ ಬರೆದರೂ ಪ್ರಯೋಜನ ಆಗಲಿಲ್ಲ.ಕಳುಹಿಸಿದ ಮುಕ್ಕಾಲು ಭಾಗ ಪತ್ರಗಳು ಶಾಲೆಗೆ ವಾಪಸ್ ಬಂದವು. ಕೆಲವು ವಾಪಸ್ ಬರಲೂ ಇಲ್ಲ, ಉತ್ತರವೂ ಇಲ್ಲ. ಶಾಲೆಯ ಉಳಿವಿಗಾಗಿ ಉನ್ನತಸ್ಥಾನದಲ್ಲಿರುವ ಹಳೇ ವಿದ್ಯಾರ್ಥಿ ಗಳು ಕಾಳಜಿ ವಹಿಸಿದರೆ ಅನುಕೂಲವಾಗುತ್ತದೆ.”

-ಲತಾಕುಮಾರಿ, ಪ್ರಭಾರ ಮುಖ್ಯೋಪಾಧ್ಯಾಯರು, ಬಾಲಬೋಧಿನಿ ಶಾಲೆ

” ಮಕ್ಕಳ ಕಲಿಕೆಗಾಗಿ ಸ್ಮಾರ್ಟ್ ಕ್ಲಾಸ್ ಟಿವಿ ಕಂಪ್ಯೂಟರ್, ಪ್ರಿಂಟರ್ ಅವಶ್ಯ ಬಹಳ ಇದೆ. ಯಾಕೆಂದರೆ ಸಾಂದರ್ಭಿಕವಾಗಿ ಮಕ್ಕಳಿಗೆ ಹೇಳಿಕೊಡಲು ಅಥವಾ ಕಲಿಕೆಗೆ ಪೂರಕವಾಗಿ ಇವು ಅತ್ಯಗತ್ಯ.”

-ಆರ್.ಎಂ.ಮೋಸಿನ್ ತಾಜ್, ಸಹ ಶಿಕ್ಷಕಿ, ಬಾಲಬೋಧಿನಿ ಶಾಲೆ

” ಶಾಲೆ ಬೌದ್ಧಿಕವಾಗಿ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ. ಪ್ರವೇಶಾತಿ ಹೆಚ್ಚಳವನ್ನು ನಾವು ಸವಾಲಾಗಿ ತೆಗೆದುಕೊಂಡಿದ್ದೇವೆ. ಮಕ್ಕಳ ಸಂಖ್ಯೆ ಹೆಚ್ಚಾಗಬೇಕಾದರೆ ಸ್ಥಳೀಯರು ಶಾಲೆಯ ಮಹತ್ವವನ್ನು ಅರಿತುಕೊಳ್ಳಬೇಕು. ಕನ್ನಡ ಭಾಷೆಯ ಮೇಲಿನ ಒಲವು ಸ್ಥಳೀಯರಿಗೆ ಹೆಚ್ಚಾಗಬೇಕು. ಉನ್ನತ ಸ್ಥಾನದಲ್ಲಿರುವ ಹಳೇ ವಿದ್ಯಾರ್ಥಿಗಳು ಶಾಲಾಭಿವೃದ್ಧಿಗೆ ಕಾಳಜಿ ತೋರಬೇಕು.”

-ಬಿ.ಎಸ್.ಲೀಲಾವತಿ, ಸಹ ಶಿಕ್ಷಕಿ, ಬಾಲ ಬೋಧಿನಿ ಶಾಲೆ 

ಆಂದೋಲನ ಡೆಸ್ಕ್

Recent Posts

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

47 mins ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

52 mins ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

1 hour ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

1 hour ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

6 hours ago

ಓದುಗರ ಪತ್ರ: ಟ್ರಾಫಿಕ್ ದಂಡ: ಸುಪ್ರೀಂ ಸಲಹೆ ಸ್ವಾಗತಾರ್ಹ

ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…

6 hours ago