Andolana originals

ಮೈಸೂರಲ್ಲಿ ಸ್ಥಾಪನೆಯಾಗಲಿದೆ ನಿರಾಶ್ರಿತ ಮಾನಸಿಕ ಅಸ್ವಸ್ಥರ ಕೇಂದ್ರ

ರಾಜ್ಯದಲ್ಲೇ ಪ್ರಪ್ರಥಮವಾಗಿ ಆರಂಭವಾಗಲಿರುವ ಕೇಂದ್ರ

ಕೆ.ಆರ್.ಆಸ್ಪತ್ರೆಯಲ್ಲಿ ೩೦ ಹಾಸಿಗೆಯುಳ್ಳ ಪ್ರತ್ಯೇಕ ವಾರ್ಡ್ ಮೀಸಲು

ಎನ್‌ಜಿಒ ಸಂಸ್ಥೆಗೆ ನಿರ್ವಹಣೆಯ ಜವಾಬ್ದಾರಿ

ಗುಣಮುಖರಾದವರ ವಿಳಾಸ ಪತ್ತೆ ಹಚ್ಚಿ ಮನೆಗೆ ಕಳುಹಿಸಲು ಯೋಜನೆ

ಮೈಸೂರು: ದೂರ ದೂರದ ರಾಜ್ಯಗಳಿಂದ ರೈಲು ಮತ್ತಿತರ ವಾಹನಗಳಲ್ಲಿ ಮೈಸೂರಿಗೆಬಂದಿಳಿಯುವ ಮಾನಸಿಕ ಅಸ್ವಸ್ಥರನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಲು ರಾಜ್ಯದಲ್ಲೇ ಮೊದಲ ನಿರಾಶ್ರಿತ ಮಾನಸಿಕ ಅಸ್ವಸ್ಥರ ಕೇಂದ್ರವನ್ನು ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಸರ್ಕಾರದ ಸೂಚನೆಯಂತೆ ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದು, ಇನ್ನೊಂದು ತಿಂಗಳಲ್ಲಿ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಪ್ರತ್ಯೇಕ ನಿರಾಶ್ರಿತ ಮಾನಸಿಕ ಅಸ್ವಸ್ಥರ ಕೇಂದ್ರ ಸ್ಥಾಪನೆ ಯಾಗಲಿದೆ. ಪತ್ತೆಯಾದ ನಿರಾಶ್ರಿತರಿಗೆ ಚಿಕಿತ್ಸ ಕೊಡಿಸುವ ಹೊಣೆಯನ್ನು ಎನ್‌ಜಿಒಗೆ ವಹಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರಿನ ನಂತರದ ಸ್ಥಾನದಲ್ಲಿ ಮೈಸೂರು ಇದೆ. ವರ್ಷವಿಡೀ ಹೊರ ರಾಜ್ಯ, ಹೊರ ದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಬಂದು ಹೋಗು ತ್ತಾರೆ. ಅದೇ ರೀತಿ ಪಶ್ಚಿಮ ಬಂಗಾಳ, ಬಿಹಾರ, ಆಂಧ್ರಪ್ರದೇಶ, ತಮಿಳುನಾಡು, ಮಣಿಪುರ, ಒಡಿಶ್ಶಾ, ಗುಜರಾತ್ ಮತ್ತಿತರ ರಾಜ್ಯಗಳಿಂದ ಕಟ್ಟಡ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ, ಕೇಬಲ್ ಅಳವಡಿಕೆ ಮತ್ತಿತರ ಕೆಲಸಗಳಿಗಾಗಿ ರೈಲುಗಳಲ್ಲಿ ಬರುವುದು ಸಾಮಾನ್ಯವಾಗಿದೆ.

ಇನ್ನೊಂದು ಕಡೆ ಮೈಸೂರಿಗೆ ಮಾನಸಿಕ ಅಸ್ವಸ್ಥರು ಕೂಡ ರೈಲುಗಳು, ಲಾರಿಗಳಲ್ಲಿ ಬರುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ರೈಲು ನಿಲ್ದಾಣ, ಬಸ್ ನಿಲ್ದಾಣ, ದೊಡ್ಡಗಡಿಯಾರ, ಪುರಭವನ, ಕರ್ಜನ್ ಪಾರ್ಕ್, ಕೆ.ಆರ್.ಆಸ್ಪತ್ರೆ ಇನ್ನಿತರ ಕಡೆಗಳಲ್ಲಿ ಓಡಾಡಿಕೊಂಡು, ಅವರಿವರು ಕೊಟ್ಟ ತಿಂಡಿ, ಊಟ ಮಾಡಿಕೊಂಡು ಕಾಲ ಕಳೆಯುತ್ತಾರೆ. ಇಂತಹವರ ಪೈಕಿ ಅನೇಕರು ಕ್ರಮೇಣ ಮಾನಸಿಕ ಅಸ್ವಸ್ಥರಾಗುತ್ತಾರೆ ಎನ್ನಲಾಗಿದೆ. ಹಾಗಾಗಿಯೇ, ರಾಜ್ಯ ಸರ್ಕಾರ ನಿರಾಶ್ರಿತರ ಮಾನಸಿಕ ಅಸ್ವಸ್ಥರ ಕೇಂದ್ರ(ಇಸಿಆರ್‌ಸಿ)ವನ್ನು ಸ್ಥಾಪನೆಗೆ ನಿರ್ಧಾರ ಕೈಗೊಂಡಿದ್ದು, ಇದು ರಾಜ್ಯದಲ್ಲಿ ಮೊದಲನೆಯದಾಗಲಿದೆ.

ಇದನ್ನು ಓದಿ: ಜಿಲ್ಲೆಯಲ್ಲಿ ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆ ಯಶಸ್ವಿ

೩೦ ಹಾಸಿಗೆಗಳ ಕೇಂದ್ರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಎಮರ್ಜೆನ್ಸಿ ಕೇರ್ ರಿಕವರಿ ಸೆಂಟರ್‌ನ್ನು ಸ್ಥಾಪಿಸಲಾಗುತ್ತಿದೆ. ಕೆ.ಆರ್.ಆಸ್ಪತ್ರೆಯಲ್ಲಿ ೩೦ ಹಾಸಿಗೆಗಳುಳ್ಳ ವಾರ್ಡ್‌ನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ. ಈಗಾಗಲೇ ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗೆ ಇದರ ಜವಾಬ್ದಾರಿಯನ್ನು ನೀಡಲಾಗಿದೆ. ಎನ್‌ಜಿಒ ಸಿಬ್ಬಂದಿ ನಗರದಲ್ಲಿ ಓಡಾಡುವ ನಿರಾಶ್ರಿತ ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಕೆ.ಆರ್.ಆಸ್ಪತ್ರೆಗೆ ಕರೆತಂದು ದಾಖಲಿಸುತ್ತಾರೆ.

ಈ ಕೇಂದ್ರದಲ್ಲಿ ಕನಿಷ್ಠ ಮೂರು ತಿಂಗಳುಗಳ ಕಾಲ ನಿರಂತರವಾಗಿ ಚಿಕಿತ್ಸೆ ನೀಡಿದ ಮೇಲೆ ಗುಣವಾದರೆ ಅಂತಹವರನ್ನು, ವಿಳಾಸ ಪತ್ತೆ ಮಾಡಿ ಮನೆಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಕುಟುಂಬದವರು ಇಲ್ಲದಿದ್ದರೆ ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ. ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಚಿಕಿತ್ಸೆ ಕೊಡುವ ಜತೆಗೆ, ನಿರಂತರ ಮೂರು ವರ್ಷಗಳ ಕಾಲ ನಿಗಾ ಇಟ್ಟು ಫಾಲೋ ಅಪ್ ಮಾಡಲಾಗುತ್ತದೆ.ವಯೋವೃದ್ಧರಾಗಿದ್ದರೆ ಜೀವನ ಪೂರ್ತಿ ಚಿಕಿತ್ಸೆ ಕೊಡಿಸುವುದಕ್ಕೂ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.

ನಿರ್ವಹಣೆಗೆ ಅನುದಾನ: ನಿರಾಶ್ರಿತ ಮಾನಸಿಕ ಅಸ್ವಸ್ಥರ ಕೇಂದ್ರದ ನಿರ್ವಹಣೆಗೆ ನಿಗದಿತ ಎನ್‌ಜಿಒಗೆ ರಾಜ್ಯ ಸರ್ಕಾರ ಅನುದಾನ ಕೊಡುತ್ತದೆ. ಅದರ ಹೊರತಾಗಿ ಬೇರೆ ಯಾವುದೇ ಅನುದಾನ ಇಲ್ಲದೆ ಎನ್ ಜಿಒ ಸೇವಾ ಮನೋಭಾವದಲ್ಲಿ ಕೆಲಸ ಮಾಡಬೇಕಾಗಿದೆ. ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಗೌರವಧನ ಹೊರತುಪಡಿಸಿ ಇತರೆ ಯಾವುದೇ ಸೌಲಭ್ಯಗಳೂ ಇರುವುದಿಲ್ಲ. ವೈದ್ಯರು, ಮನೋರೋಗ ತಜ್ಞರು, ಸಿಬ್ಬಂದಿ ಸರ್ಕಾರಿ ಆಸ್ಪತ್ರೆಯವರೇ ಆಗಿರುತ್ತಾರೆ. ಮಾನಸಿಕ ಅಸ್ವಸ್ಥರನ್ನು ಪತ್ತೆ ಮಾಡುವುದು, ಚಿಕಿತ್ಸೆ ಕೊಡಿಸುವುದು ಮತ್ತು ಗುಣಮುಖರಾದರೆ ಸಂಬಂಧಿಕರ ಮನೆಗೆ ತಲುಪಿಸುವುದು ಅಥವಾ ಪುನರ್ ವಸತಿ ಕೇಂದ್ರಕ್ಕೆ ರವಾನೆ ಮಾಡುವುದನ್ನು ನೋಡಿಕೊಳ್ಳಲಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

” ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನಿರಾಶ್ರಿತ ಮಾನಸಿಕ ಅಸ್ವಸ್ಥರ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದೆ. ಈಗಾಗಲೇ ಎನ್‌ಜಿಒ ಆಯ್ಕೆ ಮಾಡಲು ಸರ್ಕಾರಕ್ಕೆ ಪಟ್ಟಿ ಕಳುಹಿಸಲಾಗಿದೆ. ಎಲ್ಲಾ ಪ್ರಕ್ರಿಯೆ ಮುಗಿದರೆ ಇನ್ನೊಂದು ತಿಂಗಳಲ್ಲಿ ಕೇಂದ್ರ ಶುರುವಾಗಲಿದೆ.”

-ಡಾ.ಬಿ.ಬೃಂದಾ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ, ಮೈಸೂರು.

” ಮಾನಸಿಕ ಆರೋಗ್ಯ ಕಾಯ್ದೆ ೨೦೧೭ರ ಪ್ರಕಾರ ಬೀದಿಗಳಲ್ಲಿ ಗೊತ್ತು ಗುರಿಯಿಲ್ಲದೆ ಅಲೆದಾಡುತ್ತಿರುವ ಜನರನ್ನು ರಕ್ಷಿಸುವುದು ಮುಖ್ಯವಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮಿತಿಯು, ಸರ್ಕಾರೇತರ ಸಂಸ್ಥೆಗಳನ್ನು ಗುರುತಿಸಿ ಕೇಂದ್ರ ನಿರ್ವಹಣೆಗೆ ಕ್ರಮ ಕೈಗೊಳ್ಳ ಬೇಕೆಂದು ಹೇಳಿದ್ದರಿಂದಾಗಿ ಮೈಸೂರು ಜಿಲ್ಲೆಯಲ್ಲಿ ಸ್ಥಾಪನೆ ಮಾಡಲಾಗುತ್ತಿದೆ.”

-ಕೆ.ಬಿ.ರಮೇಶನಾಯಕ

ಆಂದೋಲನ ಡೆಸ್ಕ್

Recent Posts

ಸದನದಲ್ಲಿ ಮಾತನಾಡಲು ಅವಕಾಶ ನಿರಾಕರಣೆ : ರಾಹುಲ್‌ ಗಾಂಧಿ

ಹೊಸದಿಲ್ಲಿ : ಈ ಸದನವು ಒಂದು ಪಕ್ಷವನ್ನು ಪ್ರತಿನಿಧಿಸುವುದಿಲ್ಲ, ಬದಲಾಗಿ ಇಡೀ ದೇಶವನ್ನು ಪ್ರತಿನಿಧಿಸುತ್ತದೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ…

16 mins ago

13 ವರ್ಷಗಳಿಂದ ಕೋಮಾ : ಹರೀಶ್‌ ರಾಣಾ ದಯಾಮರಣಕ್ಕೆ ಸುಪ್ರೀಂ ಅನುಮತಿ

ಹೊಸದಿಲ್ಲಿ : ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್‌ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ ಅನುಮತಿ ನೀಡಿದೆ. ಚಲಿಸಲು ಅಥವಾ ಮಾತನಾಡಲು…

44 mins ago

ಹಾರ್ಮುಜ್‌ ಜಲಸಂಧಿ ಬಳಿ ಅಮೇರಿಕಾ ಅಬ್ಬರ: ಇರಾನ್‌ನ 16 ನೌಕೆಗಳು ಧ್ವಂಸ

ಟೆಹರಾನ್:‌ ವಿಶ್ವದ ಪ್ರಮುಖ ಇಂಧನ ಸಾಗಣೆ ಮಾರ್ಗವಾದ ಹಾರ್ಮುಜ್‌ ಜಲಸಂಧಿಯ ಬಳಿ ನೌಕಾ ಮೈನ್‌ಗಳನ್ನು ಅಳವಡಿಸಲು ಸಜ್ಜಾಗಿದ್ದ ಇರಾನ್‌ನ 16…

3 hours ago

90 ದಿನದೊಳಗೆ ಅಂಗನವಾಡಿ ಖಾಲಿ ಹುದ್ದೆ ಭರ್ತಿಗೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು: ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಹುದ್ದೆ ಖಾಲಿಯಾದ 90 ದಿನಗಳ ಒಳಗಾಗಿ ಭರ್ತಿ ಮಾಡಬೇಕು ಎಂದು ಕಳೆದ ಡಿಸೆಂಬರ್‌ನಲ್ಲೇ ಜಿಲ್ಲಾಧಿಕಾರಿಗಳು…

3 hours ago

ಗೃಹ ಬಳಕೆಯ ಗ್ಯಾಸ್‌‍ ಸಿಲಿಂಡರ್‌ನ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ: ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು: ಗೃಹ ಬಳಕೆಯ ಗ್ಯಾಸ್‌‍ ಸಿಲಿಂಡರ್‌ನ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ…

3 hours ago

ಮಂಡ್ಯ: ಕುಡಿಯುವ ನೀರಿನ ಗುಣಮಟ್ಟಕ್ಕೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ.ಕುಮಾರ

ಮಂಡ್ಯ: ಕುಡಿಯುವ ನೀರಿನ ಗುಣಮಟ್ಟವು ನೇರವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಸುರಕ್ಷಿತ, ಶುದ್ಧ ಮತ್ತು ರಾಸಾಯನಿಕ ಮುಕ್ತ ನೀರನ್ನು…

4 hours ago