ಕೆ.ಬಿ.ಶಂಶುದ್ದೀನ್
ಕುಶಾಲನಗರ ತಾಲ್ಲೂಕಿನಲ್ಲಿ ಭತ್ತ, ಮುಸುಕಿನ ಜೋಳ ಬೆಳೆಗೆ ರೈತರ ಒತ್ತು
ಕುಶಾಲನಗರ: ಮುಂಗಾರು ಮಳೆಯ ಪ್ರಮಾಣದಲ್ಲಿ ಕೊರತೆ ಕಂಡುಬಂದಿರುವುದರ ನಡುವೆಯೂ ಕುಶಾಲ ನಗರ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಮುಂದುವರಿದಿವೆ. ಒಟ್ಟು ೪,೧೭೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿಪಡಿಸಲಾಗಿದ್ದು, ಇದುವರೆಗೆ ೩,೧೪೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಭತ್ತ ಹಾಗೂ ಮುಸುಕಿನ ಜೋಳ ಪ್ರಮುಖ ಬೆಳೆಗಳಾಗಿದ್ದು, ಜಲಾಶಯ ಆಧಾರಿತ ನೀರಾವರಿ ಪ್ರದೇಶಗಳಲ್ಲಿ ಭತ್ತದ ಬಿತ್ತನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ತಾಲ್ಲೂಕಿನಲ್ಲಿ ಭತ್ತದ ಒಟ್ಟು ೨,೭೦೦ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ೧,೭೦೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ೭೦೦ ಹೆಕ್ಟೇರ್ ಗುರಿಯಲ್ಲಿ ೪೫೫ ಹೆಕ್ಟೇರ್ ಸಾಧನೆಯಾಗಿದೆ. ಮಳೆಯ ಪ್ರಮಾಣದಲ್ಲಿ ಕೊರತೆ ಇದ್ದರೂ ಮಳೆಯಾಶ್ರಿತ ಪ್ರದೇಶಗಳಲ್ಲಿ ರೈತರು ಲಭ್ಯವಾದ ತೇವಾಂಶವನ್ನು ಬಳಸಿಕೊಂಡು ಬಿತ್ತನೆ ಕೈಗೊಂಡಿದ್ದಾರೆ.
ಹಾರಂಗಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ೧,೭೦೦ ಹೆಕ್ಟೇರ್ ಗುರಿಯಲ್ಲಿ ೧,೧೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಚಿಕ್ಲಿಹೊಳೆ ಜಲಾಶಯ ಆಶ್ರಿತ ಪ್ರದೇಶದಲ್ಲಿ ೩೦೦ ಹೆಕ್ಟೇರ್ ಗುರಿಯಲ್ಲಿ ೧೫೦ ಹೆಕ್ಟೇರ್ ಸಾಧನೆಯಾಗಿದೆ. ಜಲಾಶಯಗಳ ನೀರಾವರಿ ವ್ಯವಸ್ಥೆ ಭತ್ತದ ಬೆಳೆಗೆ ಪ್ರಮುಖ ಆಧಾರವಾಗಿದ್ದು, ಮಳೆಯ ಕೊರತೆಯ ನಡುವೆಯೂ ನೀರಾವರಿ ಪ್ರದೇಶಗಳಲ್ಲಿ ಕೃಷಿ ಮುಂದುವರಿದಿದೆ.
ಮುಸುಕಿನ ಜೋಳ ಬಿತ್ತನೆ ಗುರಿ ಸಾಧನೆ: ಕುಶಾಲನಗರ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಮುಸುಕಿನ ಜೋಳಕ್ಕೆ ೧,೪೫೦ ಹೆಕ್ಟೇರ್ ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು. ಇದರಲ್ಲಿ ೧,೩೯೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದ್ದು, ಗುರಿಯ ಬಹುಪಾಲು ಸಾಧನೆಯಾಗಿದೆ. ಮಳೆಯ ಕೊರತೆಯ ನಡುವೆಯೂ ಮುಸುಕಿನ ಜೋಳದ ಬಿತ್ತನೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಮಳೆ ಕೊರತೆಯಿಂದ ಬೆಳೆ ಹಾನಿ ಸಂಭವಿಸಿದೆ.
ರಾಗಿಗೆ ೨೫ ಹೆಕ್ಟೇರ್ ಬಿತ್ತನೆ ಗುರಿ ನಿಗದಿಪಡಿಸಲಾಗಿದ್ದರೂ ಯಾವುದೇ ಸಾಧನೆ ದಾಖಲಾಗಿಲ್ಲ. ಮತ್ತೊಂದೆಡೆ, ಗುರಿ ನಿಗದಿಪಡಿಸದಿದ್ದರೂ ಅಲಸಂದೆಯನ್ನು ೨೭ ಹೆಕ್ಟೇರ್ ಹಾಗೂ ಹೆಸರುಕಾಳನ್ನು ೧೮ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಇದರಿಂದ ತಾಲ್ಲೂಕಿನಲ್ಲಿ ರೈತರು ಸ್ಥಳೀಯ ಪರಿಸ್ಥಿತಿ, ಮಣ್ಣಿನ ತೇವಾಂಶ ಹಾಗೂ ಲಭ್ಯವಿರುವ ನೀರಿನ ಆಧಾರದ ಮೇಲೆ ಪರ್ಯಾಯ ಬೆಳೆಗಳತ್ತಲೂ ಗಮನಹರಿಸಿರುವುದು ಕಂಡುಬಂದಿದೆ.
ಶೇ.೧೩ರಷ್ಟು ಮಳೆ ಕೊರತೆ: ಸೆಪ್ಟೆಂಬರ್ ಅಂತ್ಯದವೇಳೆಗೆ ಕುಶಾಲನಗರ ತಾಲ್ಲೂಕಿನಲ್ಲಿ ೭೭೧.೨ ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ ೬೫೭.೯ ಮಿ.ಮೀ. ಮಳೆಯಾಗಿದ್ದು, ಶೇ.೧೩ರಷ್ಟು ಮಳೆ ಕೊರತೆ ದಾಖಲಾಗಿದೆ. ಜಿಲ್ಲೆಯ ಇತರ ತಾಲ್ಲೂಕುಗಳಿಗೆ ಹೋಲಿಸಿದರೆ ಕುಶಾಲನಗರದಲ್ಲಿ ಮಳೆ ಕೊರತೆಯ ಪ್ರಮಾಣ ಕಡಿಮೆ ಇದ್ದರೂ, ಮುಂಗಾರು ಮಳೆಯ ಏರಿಳಿತ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.
ಬೆಳೆ ವಿಮೆಗೆ ೧೮೫ ಮಂದಿ ರೈತರ ನೋಂದಣಿ: ಬೆಳೆ ನಷ್ಟದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಬೆಳೆ ವಿಮೆ ಯೋಜನೆಯಡಿ ತಾಲ್ಲೂಕಿನಲ್ಲಿ ೧೮೫ ಮಂದಿ ನೋಂದಾಯಿಸಿಕೊಂಡಿದ್ದಾರೆ. ಮಳೆ ಕೊರತೆ, ಬೆಳೆ ರೋಗ ಹಾಗೂ ಮಾರುಕಟ್ಟೆ ಬೆಲೆಗಳ ಏರಿಳಿತದಿಂದ ಕೃಷಿಯಲ್ಲಿ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳೆ ವಿಮೆ ರೈತರಿಗೆ ಪ್ರಮುಖ ರಕ್ಷಣಾ ವ್ಯವಸ್ಥೆಯಾಗಿದೆ.
ಶುಂಠಿ ಬೆಲೆ ಕುಸಿತ- ಸಂಕಷ್ಟ: ಕೃಷಿ ಕ್ಷೇತ್ರದಲ್ಲಿ ಮಳೆ ಕೊರತೆಯಷ್ಟೇ ಅಲ್ಲದೆ ಮಾರುಕಟ್ಟೆ ಬೆಲೆಯ ಕುಸಿತವೂ ರೈತರನ್ನು ಕಾಡುತ್ತಿದೆ. ವಿಶೇಷವಾಗಿ ಶುಂಠಿ ಬೆಳೆಗಾರರು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಮಾಡಿ ಬೆಳೆ ಬೆಳೆದಿರುವ ರೈತರಿಗೆ ನಿರೀಕ್ಷಿತ ಬೆಲೆ ದೊರೆಯದಿರುವುದು ಆರ್ಥಿಕ ಒತ್ತಡ ಹೆಚ್ಚಿಸಿದೆ. ಇದರೊಂದಿಗೆ ಶುಂಠಿ ರೋಗದ ಬಾಧೆಯೂ ಕಾಣಿಸಿಕೊಂಡಿದ್ದು, ಬೆಳೆ ನಷ್ಟದ ಆತಂಕ ರೈತರಲ್ಲಿ ಮೂಡಿದೆ.
” ಮುಂಗಾರು ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ ಪ್ರದೇಶಗಳನ್ನು ಪಟ್ಟಿ ಮಾಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಡಿಸಿ ಹಾಗೂ ಶಾಸಕರ ನೇತೃತ್ವದಲ್ಲಿ ಹಲವು ಸಭೆಗಳನ್ನು ಕರೆಯಲಾಗಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮೂಲಕ ತಾಲ್ಲೂಕಿನ ಬರ ಪರಿಸ್ಥಿತಿಯ ಕುರಿತ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಗಿದೆ.”
-ಕೆ.ಕೆ.ಕೃಷ್ಣಮೂರ್ತಿ, ತಹಸಿಲ್ದಾರ್ ಕುಶಾಲನಗರ
” ಶುಂಠಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಸೂಕ್ತ ಬೆಂಬಲ ಬೆಲೆ ದೊರಕದೆ ರೈತರು ಸಂಕಷ್ಟದಲ್ಲಿದ್ದಾರೆ. ಒಂದೆಡೆ ಸಾಲ ಮಾಡಿ ಬೆಳೆದ ಬೆಳೆಗೆ ಸಮರ್ಪಕವಾದ ಬೆಲೆ ಸಿಗದ ಕಾರಣ ಸಾಲ ಮರುಪಾವತಿಗೆ ಹೆಣಗಾಡುವಂತಾಗಿದೆ. ಮತ್ತೊಂದೆಡೆ ಶುಂಠಿ ಫಸಲು ರೋಗದಿಂದ ನಾಶವಾಗುತ್ತಿದೆ. ಸರ್ಕಾರ ನಿಯಮಗಳನ್ನು ಸಡಿಲಗೊಳಿಸಿ ಶುಂಠಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು.”
– ಕಪನಪ್ಪ, ಹುಲಸೆ ರೈತ
ರಾಜ್ಯ ಸರ್ಕಾರ ಹಾಲಿನ ದರವನ್ನು ಲೀಟರ್‌ಗೆ ೮ ರೂ. ಏರಿಕೆ ಮಾಡಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಲಿನ ದರವನ್ನು ಒಂದೇ…
ರಾಜ್ಯದಲ್ಲಿ ಬಳಕೆಯಲ್ಲಿರುವ ಒಟ್ಟು ೩೦ ಸಾವಿರ ಜಲಮೂಲಗಳಲ್ಲಿ ಕೇವಲ ಶೇ.೨೦ರಷ್ಟು ಮಾತ್ರ ಅಂತರ್ಜಲ ಮರುಪೂರಣಕ್ಕಾಗಿ ಬಳಕೆಯಾಗುತ್ತಿರುವುದು ಸರ್ಕಾರ ಹಾಗೂ ಸಾರ್ವಜನಿಕರ…
ಟಿ. ಕೆ.ಹರೀಶ್, ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಭ್ರಮದ ಜೊತೆಗೆ ಸ್ವಚ್ಛತೆ, ಸುರಕ್ಷತೆ ಮತ್ತು…
ಎಂ.ನಾರಾಯಣ ತಿ.ನರಸೀಪುರ: ನಾಲೆಗಳಿಗೆ ನೀರು ಹರಿಸದ ಕಾರಣ ಒಣಗುತ್ತಿರುವ ದ್ವಿದಳ ಧಾನ್ಯ ಬೆಳೆಗಳು ತಿ.ನರಸೀಪುರ: ತಾಲ್ಲೂಕಿನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿ…
ದಾ.ರಾ.ಮಹೇಶ್ ವೀರನಹೊಸಹಳ್ಳಿ: ಸಿಹಿ ಗೆಣಸು ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಹನಗೂಡು…