ಕೇವಲ 20-30 ರೂ.ಗಳಿಗೆ ನಿಮ್ಮ ಕಿವಿ ಸ್ವಚ್ಛಗೊಳಿಸಲಿಕ್ಕಾಗಿಯೇ ಆಳು ಇದ್ದಾನೆ ಎಂದು ಊಹಿಸಿಕೊಳ್ಳಿ!
• ಪಂಜು ಗಂಗೊಳ್ಳಿ
ಬಹುಶಃ ಇದಕ್ಕಿಂತ ಹೆಚ್ಚಿನದಾದ ಲಕ್ಷುರಿ’ ಇನ್ನೊಂದಿರಲಿಕ್ಕಿಲ್ಲವೋ ಏನೋ. ನಿಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲಿಕ್ಕಾಗಿಯೇ ನಿಮಗೊಬ್ಬ ಆಳು ಇದ್ದಾನೆ ಎಂದು ಊಹಿಸಿಕೊಳ್ಳಿ. ಅದೂ ಕೇವಲ 20-30 ರೂಪಾಯಿಗಳಿಗೆ ಮುಂಬೈ ಫುಟ್‌ಪಾತ್‌ಗಳಲ್ಲಿ ಇಂತಹ ಆಳುಗಳು ಹಲವು ಕಡೆ ಸಿಗುತ್ತಾರೆ. ಮುಂಬೈ ಜನರಲ್ ಪೋಸ್ಟ್ ಆಫೀಸ್, ಡಿಎನ್ ರಸ್ತೆ, ಹಾರ್ನಿಮನ್ ಸರ್ಕಲ್, ಗೇಟ್ ವೇ ಆಫ್ ಇಂಡಿಯಾ, ಗ್ಯಾಂಟ್ ರೋಡ್, ಕಾಮಾಟಿಪುರ, ದೋಬಿ ತಲಾವ್, ಬಾಂದ್ರಾ ತಲಾವ್, ಬಾಯ್ಸಳ ಜೀಜಾ ಮಾತಾ ಗಾರ್ಡನ್, ನರಿಮನ್ ಪಾಯಿಂಟ್ ಮೊದಲಾದೆಡೆ ಜನಜಂಗುಳಿ ಹೆಚ್ಚಿರುವ ಫುಟ್‌ಪಾತ್‌ಗಳಲ್ಲಿ ಇವರು ಕುಳಿತಿರುತ್ತಾರೆ. ಮುಂಬೈಯಲ್ಲಿ ಇವರನ್ನು ‘ಕಾನ್ ಸಾಪ್ ಕರ್ನೇವಾಲೇ’ ಎಂದು ಕರೆಯುತ್ತಾರೆ. ಇವರನ್ನು ಗುರುತಿಸುವುದೂ ಬಹಳ ಸುಲಭ. ಇವರು ತಲೆಗೆ ಕೆಂಪು ಬಣ್ಣದ ಅಂಗವಸ್ತ್ರವನ್ನು ಅವರದ್ದೇ ಆದ ಒಂದು ವಿಶೇಷ ರೀತಿಯಲ್ಲಿ ಕಟ್ಟಿಕೊಂಡಿರುತ್ತಾರೆ. ಸೊಂಟದಲ್ಲಿ ಚೌಕಾರದ ಚರ್ಮದ ಚೀಲವೊಂದು ನೇತಾಡುತ್ತಿರುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ, ಇವರೆಲ್ಲರೂ ರಾಯಚೂರು, ಗುಲ್ಬರ್ಗಾ ಕಡೆಯ ಕನ್ನಡಿಗರೆಂಬುದು ವಿಶೇಷ. ಇದರಲ್ಲೂ ಇನ್ನೊಂದು ವಿಶೇಷವೆಂದರೆ, ಇವರಲ್ಲಿ ಬಹುತೇಕರು, ಹೆಚ್ಚ ಕಡಿಮೆ ಶೇ.99ರಷ್ಟು ಜನ ಮುಸ್ಲಿಮರು!
ಬಾಂದ್ರಾ ತಲಾವನ ಅಬ್ದುಲ್ ನಬಿ ಮತ್ತು ಗ್ಯಾಂಟ್ ರೋಡ್ ಸ್ಟೇಷನ್‌ನ ಸಯ್ಯದ್ ಮೆಹಬೂಬ್ ಕಳೆದ ಮೂರು ನಾಲ್ಕು ದಶಕಗಳಿಂದ ಮುಂಬೈಗರ ಕಿವಿಗಳನ್ನು ಸಾಪ್ ಮಾಡುತ್ತಿದ್ದಾರೆ. ಕಿವಿಗಳನ್ನು ಸ್ವಚ್ಛಗೊಳಿಸುವವರಂತೆ ಫುಟ್‌ಪಾತ್‌ಗಳಲ್ಲಿ ಜನರ ಕಾಲಿನ ಆಣಿಗಳನ್ನು ತೆಗೆಯುವ ಕಾಯಕ ಮಾಡಿಕೊಂಡಿರುವವರೂ ಈ ಮುಂಬೈಯಲ್ಲಿದ್ದಾರೆ. ತೇಲ್ ಮಾಲೀಶ್ ಮಾಡುವವರೂ ಸಿಗುತ್ತಾರೆ. ಕೇವಲ ನೆಲಗಡಲೆ ಬೀಜ ಮಾರಿ ಬದುಕುವವರೂ ಇಲ್ಲಿದ್ದಾರೆ. ಸಂಜೆ ಹೊತ್ತು ಗೆಣಸು ಸುಟ್ಟು ಮಾರುವವರನ್ನೂ ಈ ಮಹಾನಗರದಲ್ಲಿ ಕಾಣಬಹುದು. ಈ ಮಾಯಾನಗರಿ ಯಾರನ್ನೂ ಬೇಡ ಎಂದು ದೂರ ಸರಿಸುವುದಿಲ್ಲ.
ಯಾವತ್ತೂ ಜೇನು ನೊಣಗಳಂತೆ ಒಂದಲ್ಲ ಒಂದು ಕೆಲಸ ಮಾಡುವ ಜನರಿರುವ ಮುಂಬೈಯಲ್ಲಿ ಯಾರಿಗಪ್ಪಾ ಒಂದೆಡೆ ಕುಳಿತು ತಮ್ಮ ಕಿವಿಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಸಮಯವಿದೆ ಎಂದು ಯಾರಾದರೂ ಆಶ್ಚರ್ಯ ಪಡಬಹುದು. ಮುಂಬೈ ಇಂತಹ ಆಶ್ಚರ್ಯಗಳ ಆಗರ ಎಂಬುದು ಇಲ್ಲಿ ಕೆಲವು ಕಾಲ ಕಳೆದವರಿಗೆಲ್ಲರಿಗೂ ತಿಳಿದ ವಿಚಾರ. ಮುಂಬೈಗರು ಫುಟ್ ಪಾತ್ರಗಳಲ್ಲಿ ನಡೆಯುತ್ತಲೇ ವಡಾಪಾವ್, ಸ್ಯಾಂಡ್‌ವಿಚ್, ಐಸ್‌ಕ್ರೀಮ್ ಮೆಲ್ಲ ಬಲ್ಲರು. ಆಫೀಸುಗಳಲ್ಲಿ ಕೆಲಸ ಮಾಡುತ್ತಲೇ ಉಣ್ಣಬಲ್ಲರು. ಟ್ಯಾಕ್ಸಿ, ಲೋಕಲ್ ಟೈನುಗಳಲ್ಲಿ ಕುಳಿತು ಅಥವಾ ನಿಂತುಕೊಂಡು ಪ್ರಯಾಣ ಮಾಡುತ್ತಲೇ ನಿದ್ರಿಸಬಲ್ಲರು. ಇಂತಹ ಕಾರಣಗಳಿಂದಾಗಿಯೇ ಮುಂಬೈಯನ್ನು ಬಿಂದಾಸ್ ನಗರ ಎಂದು ಕರೆಯುವುದು.
ಮೂವತ್ತೈದು ವರ್ಷಗಳ ಹಿಂದೆ ಸಯ್ಯದ್ ಮೆಹಬೂಬ್ ಕೆಲಸ ಅರಸುತ್ತ ಮುಂಬೈಗೆ ಬಂದಾಗ ಅವನಿಗೆ ಸಿಕ್ಕಿದ್ದು ಕನ್‌ಕ್ಷನ್ ಕೆಲಸ. ಅಲ್ಲಿ ಕೆಲ ವರ್ಷ ಕೆಲಸ ಮಾಡಿದ ನಂತರ, ಒಬ್ಬ ‘ಕಾನ್ ಸಾಪ್ ಕರ್ನೇವಾಲಾ’ನ ಪರಿಚಯವಾಗಿ, ಅವನು ಸಯ್ಯದ್ ಗೆ ಕಿವಿ ಸ್ವಚ್ಛಗೊಳಿಸುವುದು ಹೇಗೆ ಎಂದು ಕಲಿಸಿಕೊಟ್ಟನು. ಅಂದಿನಿಂದ ಸಯ್ಯದ್ ಮುಂಬೈಯ ಒಬ್ಬ ವೃತ್ತಿಪರ ‘ಕಾನ್ ಸಾಪ್ ಕರ್ನೇವಾಲಾ’ ಆದನು.
ಎರಡೂ ತುದಿಗಳು ಚೂಪಾಗಿರುವ ಒಂದು ಉದ್ದನೆ ದಬ್ಬಣ, ಒಂದು ಇಕ್ಕಳ, ಹೈಡೋಜನ್ ಪೆರಾಕ್ಸೆಡ್, ಸಾಸಿವೆ ಎಣ್ಣೆ, ಲ್ಯಾವಿಂಡರ್ ಎಣ್ಣೆ ಮೊದಲಾದ ದ್ರವಗಳಿರುವ ಹಲವು ಬಣ್ಣಗಳ ಚಿಕ್ಕಚಿಕ್ಕ ಔಷಧಿ ಬಾಟಲಿ ಮತ್ತು ಒಂದಷ್ಟು ಹತ್ತಿ. ಇವಿಷ್ಟು ಕಾನ್ ಸಾಪ್ ಕರ್ನೇವಾಲಾನ ಸಾಮಗ್ರಿ ಗಳು. ಇವೆಲ್ಲವೂ ಅವನು ಸೊಂಟದಲ್ಲಿ ಕಟ್ಟಿಕೊಂಡಿರುವ ಚೀಲದಲ್ಲಿರುತ್ತವೆ. ಕುಳಿತುಕೊಳ್ಳಲು ಯಾವುದಾದರೂ ಮರದ ಬುಡ, ಸಿಮೆಂಟ್ ಕಟ್ಟೆ, ಫುಟ್‌ಪಾತಿನ ಅಂಚು ಏನಿದ್ದರೂ ಸರಿ, ಅಲ್ಲೇ ಕುಳಿತುಕೊಂಡು ಕಾನ್ ಸಾಪ್ ಕರ್ನೇವಾಲಾ ತನ್ನ ‘ಆಪರೇಷನ್ ಇಯರ್’ ಶುರು ಮಾಡುತ್ತಾನೆ.
ಕಾನ್ ಸಾಪ್ ಕರ್ನೇವಾಲಾ ಮೊದಲಿಗೆ ತನ್ನ ಗ್ರಾಹಕನನ್ನು ಬಹಳ ಮರ್ಯಾದೆಯಿಂದ ಕರೆದು ತನ್ನ ಬಳಿ ಕುಳ್ಳಿರಿಸಿಕೊಳ್ಳುತ್ತಾನೆ. ಮೊತ್ತ ಮೊದಲಿಗೆ, ಗಿರಾಕಿಯ ಕಿವಿಯನ್ನು ಹಿಡಿದು, ಅದರ ಆಳಕ್ಕೆ ಕಣ್ಣು ಹಾಯಿಸುತ್ತಾನೆ. ಅಲ್ಲಿ ಅವನಿಗೆ ಬ್ರಹ್ಮಾಂಡವೇ ಕಾಣಿಸಿತೋ ಎಂಬಂತೆ ಮುಖ ಮಾಡಿ, ದಬ್ಬಣವನ್ನು ಕೈಗೆತ್ತಿಕೊಳ್ಳುತ್ತಾನೆ. ಅದರ ಒಂದು ತುದಿಗೆ ಹತ್ತಿ ಸುತ್ತಿ ಕಿವಿಯ ಒಳಕ್ಕೆ ತೂರಿಸುತ್ತಾನೆ. ಬಾಯಿ ಲೊಚಗುಟ್ಟುತ್ತ, ‘ಸಾಬ್, ಇಸ್ಕೊ ತೋಡಾ ದವಾ ಲಗೇಗಾ, ಬಹುತ್ ಸುಕಾ ಹೈ (ಸಾಹೇಬರೇ, ಕಿವಿ ಬಹಳ ಒಣಗಿದೆ. ಸ್ವಲ್ಪ ಔಷಧಿ ಹಾಕಬೇಕಾಗುತ್ತದೆ)’ ಎನ್ನುತ್ತಾನೆ. ಅವನು ಬಾಯಿಂದ ಮಾತಾಡುವುದೂ ದಬ್ಬಣದಿಂದ ಕಿವಿ ತೋಡುವುದೂ ಒಟೊಟ್ಟಿಗೇ ನಡೆಯುತ್ತದೆ. ಹಾಗಂದವನೇ ಒಂದು ಬಾಟಲಿಯಿಂದ ಪರಿಮಳಯುಕ್ತ ನೇರಳೆ ದ್ರವ (ಹೈಡೋಜನ್ ಪೆರಾಕ್ಸೆಡ್)ವನ್ನು ಕಿವಿಯೊಳಗೆ ಚಿಮುಕಿಸುತ್ತಾನೆ. ಕಿವಿಯ ಸುರಂಗ ಮಾರ್ಗ ತೇವವಾದ ನಂತರ, ದಬ್ಬಣಕ್ಕೆ ಬೇರೊಂದಷ್ಟು ಹತ್ತಿ ಸುತ್ತಿ, ಇನ್ನೂ ತುಸು ಆಳಕ್ಕಿಳಿದು ತಡಕಾಡುತ್ತಾನೆ. ಈ ಹಂತ ಮುಗಿದ ನಂತರ ಮುಂದಿನ ಸರದಿ ಇಕ್ಕಳದ್ದು. ಇಕ್ಕಳದ ಕೆಲಸ ಕಿವಿಯ ಆಳದಲ್ಲಿರುವ ಗುಗ್ಗೆಯ ಉಂಡೆಯನ್ನು ಹಿಡಿದು ಹೊರಗೆಳೆದು ತರುವುದು. ಕೊನೆಯಲ್ಲಿ, ಸಾಸಿವೆ ಎಣ್ಣೆಯನ್ನು ಸವರಿ, ಒಣ ಹತ್ತಿಯಿಂದ ಕಿವಿಯ ಹಾಲೆಯನ್ನು ಒರೆಸಿ ಸ್ವಚ್ಛಗೊಳಿಸಿದರೆ ಕಾನ್ ಸಾಪ್ ಕರೆಕಾ ಕಾಮ್ ಕತಂ ಗ್ರಾಹಕ ಕಿವಿ ತುರಿಸುತ್ತಿದೆ ಎಂದರೆ ಅವನ ಕಿವಿಯೊಳಗೆ ಪರಿಮಳಯುಕ್ತ ಲ್ಯಾವಿಂಡರ್ ಎಣ್ಣೆಯನ್ನು ಬಿಡುತ್ತಾನೆ. ಕಣ್ಣು ಮುಚ್ಚಿಕೊಂಡು ಕೆಲವು ನಿಮಿಷಗಳ ಸ್ವರ್ಗ ಸುಖ ಅನುಭವಿಸಿದ ಗ್ರಾಹಕ ತನ್ನ ಹೆಬ್ಬೆರಳು ಮತ್ತು ನಡು ಬೆರಳಿನಿಂದ ಕಿವಿಯ ಹಾಲೆಯನ್ನೊಮ್ಮೆ ಸವರಿಕೊಂಡು ಮೇಲೇಳಲು ನೋಡುತ್ತಾನೆ. ಆದರೆ, ಕಾನ್ ಸಾಪ್ ಕರ್ನೇವಾಲಾ ಅವನನ್ನು ಅಷ್ಟಕ್ಕೇ ಹೋಗಗೊಡುವುದಿಲ್ಲ. ಅವನನ್ನು ನಾಜೂಕಾಗಿ ಕುಳ್ಳಿರಿಸಿ, ಅವನ ಇನ್ನೊಂದು ಕಿವಿಯನ್ನು ಹಿಡಿದು, ‘ಆಪರೇಷನ್ ಇಯರ್ 2’ ಶುರು ಮಾಡುತ್ತಾನೆ.
ಕೆಲವು ಕಾರ್ ಸಾಪ್ ಕರ್ನೇವಾಲಾರಿಗೆ ಅವರದ್ದೇ ಆದ ಖಾಯಂ ಗಿರಾಕಿಗಳಿರುತ್ತಾರೆ. ಇಂತಹ ಗಿರಾಕಿಗಳು ವಾರಕ್ಕೊಮ್ಮೆ, ತಿಂಗಳಿಗೊಮ್ಮೆಯಾ ದರೂ ತಮ್ಮ ಕಿವಿ ಸ್ವಚ್ಛಗೊಳಿಸಿಕೊಂಡು ಸ್ವರ್ಗ ಸುಖವನ್ನು ಅನುಭವಿಸಲೇ ಬೇಕು. ಕಿವಿ ಡಾಕ್ಟರುಗಳು ಇಂತಹ ಬೀದಿ ಬದಿಯ ಕಾನ್ ಸಾಪ್ ಕರ್ನೇ ವಾಲಾರಿಂದ ಸ್ವಚ್ಛಗೊಳಿಸಿಕೊಂಡು ಕಿವಿಗೆ ಹಾನಿ ಮಾಡಿಕೊಳ್ಳಬೇಡಿ ಎಂದು ಎಚ್ಚರಿಸುತ್ತಾರೆ. ಆದರೆ, ಮುಂಬೈಯ ಪ್ರಸಿದ್ದ ಇಎನ್‌ಟಿ ಡಾಕ್ಟರ್ ಆಗಿದ್ದ ಡಾ.ಎಚ್.ಎಲ್.ಹೀರಾನಂದಾನಿಯವರು ಕಾನ್ ಸಾಪ್ ಕರ್ನೇವಾಲಾರಿಂದ ತಮ್ಮ ಕಿವಿ ಸ್ವಚ್ಛಗೊಳಿಸಿಕೊಳ್ಳುತ್ತಿದ್ದುದನ್ನು ಮುಂಬೈಗರು ಬಲ್ಲರು. ಕೆಲವು ಶ್ರೀಮಂತ ಗ್ರಾಹಕರು ಕಾನ್ ಸಾಪ್ ಕರ್ನೇವಾಲಾರನ್ನು ತಮ್ಮ ಮನೆಗಳಿಗೆ ಕರೆಸಿಕೊಳ್ಳುವುದೂ ಇದೆ. ಪೊಲೀಸರೂ ಇವರನ್ನು ಸ್ಟೇಷನ್ನಿಗೆ ಕರೆಸಿಕೊಂಡು ತಮ್ಮ ಕಿವಿಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಕುತೂಹಲದ ಕಾರಣಕ್ಕೆ ಇವರಿಂದ ತಮ್ಮ ಕಿವಿಗಳನ್ನು ಸ್ವಚ್ಛಗೊಳಿಸಿಕೊಳ್ಳುವ ವಿದೇಶಿ ಪ್ರವಾಸಿಗರೂ ಇದ್ದಾರೆ. ಭಿಕ್ಷುಕರೂ ಇವರಿಂದ ತಮ್ಮ ಕಿವಿಗಳನ್ನು ಸ್ವಚ್ಛ ಮಾಡಿಸಿಕೊಳ್ಳುತ್ತಾರೆ. ಯಾರಿಗೂ ಇವರು ತಮ್ಮ ಸೇವೆಯನ್ನು ನಿರಾಕರಿಸುವುದಿಲ್ಲ.
ಈಗ ಮೊದಲಿನಷ್ಟು ಗ್ರಾಹಕರಿಲ್ಲ
ನಾಲೈದು ದಶಕಗಳ ಹಿಂದೆ ಮುಂಬೈಯ ಎಲ್ಲೆಡೆ ಕಾನ್ ಸಾಪ್ ಕರ್ನೇವಾಲಾಗಳು ಕಾಣ ಸಿಗುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಸ್ವಚ್ಛತೆಯ ಅರಿವು ಹೆಚ್ಚಿ ಹಾಗೂ ಇವರುಗಳಿಂದ ಕಿವಿ ಸ್ವಚ್ಛ ಮಾಡಿಸಿಕೊಳ್ಳುವುದು ಅಪಾಯದ ಉಸಾಬರಿ ಎಂದು ಜನ ಭಯಪಡುವ ಕಾರಣ ಕಾನ್ ಸಾಪ್ ಕರ್ನೇವಾಲಾರಿಗೆ ಈಗ ಮೊದಲಿನಷ್ಟು ಗ್ರಾಹಕರು ಸಿಗುವುದಿಲ್ಲ. ಹಾಗಾಗಿ, ಈಗ ಜನಜಂಗುಳಿ, ಪ್ರವಾಸಿಗರು ಹೆಚ್ಚಿರುವ ಕೆಲವೇ ಕೆಲವು ಸ್ಥಳಗಳಲ್ಲಿ ಇವರು ನೋಡ ಸಿಗುತ್ತಾರೆ. ಆದರೂ, ಹೇಗೋ ಇವರಿಗೆ ಜೀವನ ನಡೆಸುವಷ್ಟು ಸಂಪಾದನೆಯಾಗುತ್ತದೆ. ಒಂದು ಕಿವಿಯನ್ನು ಸಾದಾ ರೀತಿಯಲ್ಲಿ ಸಾಪ್ ಮಾಡಿದರೆ 20 ರೂಪಾಯಿ ಪಡೆಯುತ್ತಾರೆ. ಹೈಡೋಜನ್ ಪೆರಾಕ್ಸೆಡ್ ಹಾಕಿ ಸಾಪ್ ಮಾಡಿದರೆ 40 ರೂಪಾಯಿ. ಆಯುರ್ವೇದ ತೈಲಗಳನ್ನು ಹಾಕಿ ಸ್ವಚ್ಛ ಮಾಡಿ ಒಂದು ಕಿವಿಗೆ ನೂರು ರೂಪಾಯಿ ಚಾರ್ಜು ಮಾಡುವವರೂ ಇದ್ದಾರೆ. ದಿನಕ್ಕೆ ಸರಾಸರಿ ಮುನ್ನೂರು-ನಾನೂರು ರೂಪಾಯಿ ಸಂಪಾದನೆಗೆ ಏನೂ ತೊಂದರೆ ಇಲ್ಲ. ಒಳ್ಳೆಯ ಗಿರಾಕಿಗಳು ಸಿಕ್ಕ ದಿನಗಳಂದು 600-700 ರೂಪಾಯಿವರೆಗೂ ಸಂಪಾದನೆಯಾಗುತ್ತದೆ.
ಕನ್ನಡಿಗ ಮುಸ್ಲಿಮರಾಗಿದ್ದ ಕರ್ನೇವಾಲಾರು
ಹಿಂದೆ, ಕಾನ್ ಸಾಪ್ ಕರ್ನೇವಾಲಾರೆಲ್ಲ ನೂರಕ್ಕೆ ನೂರು ಕನ್ನಡಿಗ ಮುಸ್ಲಿಮರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಇತರ ಧರ್ಮೀಯ, ಅನ್ಯ ಭಾಷಿಕ ಕಾನ್ ಸಾಪ್ ಕರ್ನೇವಾಲಾಗಳೂ
ಕಾಣಸಿಗುತ್ತಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಕೋಟಿಗಟ್ಟಲೇ ತೆರಿಗೆ ಹಣವನ್ನು ಬಳಸಿಕೊಂಡು ಬೆಳಗಾವಿಯಲ್ಲಿ ಅಧಿವೇಶನ ಮಾಡಲು ಹೊರಟಿದೆ ಎಂದು ಬಿಜೆಪಿ…
ಮೆಲ್ಬೊರ್ನ್: ಭಾರತ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿರುವ ಆಸ್ಟ್ರೇಲಿಯಾದ ಯುವ ಆರಂಭಿಕ ಆಟಗಾರ ಸ್ಯಾಮ್ ಕಾನ್‌ಸ್ಟಸ್ ಅವರಿಗೆ…
ಗುಂಡ್ಲುಪೇಟೆ: ಕೆಲಸದ ಒತ್ತಡದಿಂದ ಅರಣ್ಯ ಇಲಾಖೆ ದಿನಗೂಲಿ ನೌಕರ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಕಚೇರಿ ಮುಂದೆಯೇ ಶವವಿಟ್ಟು ಪ್ರತಿಭಟನೆ ನಡೆಸಿರುವ…
ಮೈಸೂರು: ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹಾಗೂ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ದೂರವಾಣಿ…
ಬೆಳಗಾವಿ: ಕೊಲೆ ಬೆದರಿಕೆ ಆರೋಪ ಮಾಡಿ ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಎಂಬುವವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ…
ಬೆಳಗಾವಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಅಧಿವೇಶನದ 100ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ನವ…