ಆಂದೋಲನ 50

ಎಲ್ಲೋಯಿತು ಮದ್ದೂರು ಎಳನೀರು ವೈಭವ ?

ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರೂಪಿಸುವ ಕಾನೂನುಗಳು ನಿಯಮಗಳು ರೈತರ ಹಿತಾಸಕ್ತಿಗೆ ವ್ಯತಿರಿಕ್ತವಾಗುತ್ತವೆ, ದಲ್ಲಾಳಿಗಳು ಮತ್ತು ಕಾರ್ಪೊರೆಟ್ ವಲಯಕ್ಕೆ ಅನುಕೂಲ ಮಾಡಿಕೊಡುತ್ತವೆ ಎಂಬುದಕ್ಕೆ ಮದ್ದೂರಿನ ಎಳನೀರು ಮಾರುಕಟ್ಟೆಯೇ ಸಾಕ್ಷಿ. ಒಂದು ಕಾಲದಲ್ಲಿ ದಿನಕ್ಕೆ ಐದಾರು ಲಕ್ಷ ಎಳನೀರು ಮಾರಾಟ ನಡೆಯುತ್ತಿದ್ದ ಮದ್ದೂರು ಎಳನೀರು ಮಾರುಕಟ್ಟೆಯಲ್ಲೀಗ ಆ ವೈಭವವಿಲ್ಲ. ಹಿಂದಿನಂತೆ ವ್ಯವಸ್ಥೆಯೂ ಇಲ್ಲ. ಇದು ಮದ್ದೂರು ಎಳನೀರು ಮಾರುಕಟ್ಟೆಯ ಏಳು-ಬೀಳುಗಳ ಚಿತ್ರಣ.

ಹೇಮಂತ್ ಕುಮಾರ್ ಜಿ.

ಸರಿಯಾಗಿ ಮೂರು ದಶಕಗಳ ಹಿಂದಿನ ಮಾತು. ಮದ್ದೂರು ಕೃಷಿ ಉತ್ಪನ್ನ ಮಾರುಕಟ್ಟೆ ಯಲ್ಲಿ ದಿನವಿಡೀ ಜನ ಜಾತ್ರೆ. ಆಗ ತಾನೇ ಮಂಡ್ಯ ಎಪಿಎಂಸಿಯಿಂದ ಸ್ವತಂತ್ರವಾಗಿ ಹೊಸದಾಗಿ ಆರಂಭವಾಗಿದ್ದ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರಲ್ಲಿ ಎಳನೀರುಗಳ ರಾಶಿ. ಹೀಗೆ ಸಾಗಿದ ಮಾರುಕಟ್ಟೆ ಒಂದು ಹಂತದಲ್ಲಿ ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಎಳನೀರು ಮಾರುಕಟ್ಟೆ ಎಂಬ ಖ್ಯಾತಿಗೂ ಪಾತ್ರವಾಗಿತ್ತು. ೧೯೯೨ರಲ್ಲಿ ಮದ್ದೂರಿನಲ್ಲಿ ಅಸ್ತಿತ್ವಕ್ಕೆ ಬಂದ ಎಪಿಎಂಸಿಯಲ್ಲಿ ಇತರೆಲ್ಲ ಉತ್ಪನ್ನಗಳಿಗಿಂತ ಎಳನೀರೇ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದ್ದ ದಿನಗಳವು. ಒಂದೇ ಸೀಸನ್‌ನಲ್ಲಿ ಒಂದೇ ದಿನ ೬ ಲಕ್ಷ ಎಳನೀರು ಸರಬರಾಜಾಗಿದ್ದು ಅಂದಿನ ದಾಖಲೆ.

ಆ ವೈಭವ ಈಗ ಕಾಣ ಸಿಗದು. ಆದರೆ ಈಗಲೂ ಮುಂಬೈ, ಕೊಲ್ಕತ್ತ, ಪೂನ, ದೆಹಲಿ ಮುಂತಾದ ದೊಡ್ಡ ನಗರಗಳಿಗೆ ಮದ್ದೂರು ಎಳನೀರು ರವಾನೆಯಾಗುತ್ತದೆ. ಗಾತ್ರ, ಗುಣಮಟ್ಟ, ನೀರಿನ ರುಚಿಯನ್ನಾಧರಿಸಿ ಹೊರ ರಾಜ್ಯಗಳಿಂದ ಬರುವ ಖರೀದಿದಾರರು ದರ ನಿಗದಿ ಪಡಿಸುತ್ತಾರೆ. ಮಾರುಕಟ್ಟೆ ಸಮಿತಿ ಎಳನೀರು ತಂದ ರೈತನಿಗೆ ತೂಕ, ಅಳತೆ ಮತ್ತು ಹಣ ಬಟವಾಡೆಯಲ್ಲಿ ವಂಚನೆಯಾಗದಂತೆ ನೋಡಿಕೊಳ್ಳುತ್ತಿರುವುದು ಇಲ್ಲಿನ ವಿಶೇಷ.

ಮದ್ದೂರಿನ ಎಳನೀರು ಮಾರುಕಟ್ಟೆಯ ಪ್ರವೇಶ ದ್ವಾರ

ಮಳವಳ್ಳಿ ತಾಲ್ಲೂಕಿನ ಮಾರುಕಟ್ಟೆಯೊಂದಿಗೆ ಸಂಯೋಗವಾಗಿದ್ದ ದಿನಗಳಿಂದಲೂ ಕೆಸ್ತೂರು, ಕೌಡ್ಲೆ, ನಿಡಘಟ್ಟ, ಕಿರುಗಾವಲು, ಬೆಳಕವಾಡಿ ಹಾಗೂ ಚಿಕ್ಕರಸಿನಕೆರೆ ಒಳಗೊಂಡ ಉಪಮಾರುಕಟ್ಟೆಯನ್ನು ಹೊಂದಿದ್ದ ಮದ್ದೂರಿನ ಎಳನೀರು ಮಾರುಕಟ್ಟೆ ೬.೧೨ ಎಕರೆ ವಿಶಾಲ ಜಾಗವನ್ನು ಹೊಂದಿದೆ. ಮಳವಳ್ಳಿಯಲ್ಲಿ ೧೭ ಎಕರೆ ಜಾಗವನ್ನು ಹೊಂದಿತ್ತು. ವಿಶೇಷವೆಂದರೆ ಏಷ್ಯಾದ ಅತಿದೊಡ್ಡ ಮಾರುಕಟ್ಟೆ ಎಂದು ಎಳನೀರು ವಹಿವಾಟು ವಿಭಾಗದಲ್ಲಿ ಹೇಗೆ ಖ್ಯಾತಿಯಾಗಿದೆಯೋ ಹಾಗೆ ಭಾರತದ ವರ್ಷದ ಮೂನ್ನೂರೈವತ್ತು ದಿನವೂ ತೆರೆದಿರುವ ‘ರಜವೇ ಇಲ್ಲ’ದ ಮಾರುಕಟ್ಟೆ ಎಂಬ ವಿಶೇಷಣವನ್ನೂ ಹೊಂದಿದೆ ಮದ್ದೂರು ಎಳನೀರು ಮಾರುಕಟ್ಟೆ.

ದೂರದ ಹನೂರು, ಮಹದೇಶ್ವರಬೆಟ್ಟ, ಚಾಮರಾಜ ನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದಲೂ ಮದ್ದೂರು ಮಾರುಕಟ್ಟೆಗೆ ಎಳನೀರನ್ನು ತರುತ್ತಿದ್ದ ರೈತರು ಒಂದೇ ದಿನದಲ್ಲಿ ಕೈತುಂಬ ಹಣ ಎಣಿಸಿಕೊಂಡು ಹೋಗುತ್ತಿದ್ದರು ಎಂದು ಹಿಂದಿನ ವೈಭವವನ್ನು ಮದ್ದೂರಿನ ಹಿರಿಯರು ನೆನಪಿಸಿಕೊಳ್ಳುತ್ತಿದ್ದಾರೆ.

ಮಾರುಕಟ್ಟೆ ದಿನೇ ದಿನೇ ಸೊರಗುತ್ತ ಬಂದಿದೆ. ಹಿಂದೆ ೨೦೦ಕ್ಕೂ ಹೆಚ್ಚು ಹಮಾಲಿಗಳು, ರವಾನೆದಾರರು, ೨೫೦ಕ್ಕೂ ಹೆಚ್ಚು ಖರೀದಿದಾರರು, ೨೦ಕ್ಕೂ ಹೆಚ್ಚು ಮಂದಿ ದಳ್ಳಾಳಿಗಳು ದೊಡ್ಡ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದ ಸಂಭ್ರಮ ಇಂದಿಲ್ಲ. ಸರ್ಕಾರದ ಮಾರುಕಟ್ಟೆ ಕಾಯ್ದೆ ತಿದ್ದುಪಡಿ ಜಾರಿಯಾದ ಮೇಲೆ ಎಪಿಎಂಸಿ ವಹಿವಾಟಿನ ಮೇಲೆ ಬರೆ ಎಳೆದಂತಾಗಿದೆ.

ಮಾರುಕಟ್ಟೆಯಲ್ಲಿ ವಹಿವಾಟು ನಡೆಯುತ್ತಿರುವ ದೃಶ್ಯ

ಆಗೆಲ್ಲ ಎಳನೀರು ತರುವ ರೈತನಿಗೆ ನೂರು ರೂ. ವಹಿವಾಟು ನಡೆದರೆ ೧.೫೦ ರೂ. ಶುಲ್ಕ ವಿಧಿಸಲಾಗುತ್ತಿತ್ತು. ಈಗ ೪೦ ಪೈಸೆಗೆ ಬಂದು ನಿಂತಿದ್ದು, ಕನಿಷ್ಠ ಮೂಲ ಸೌಲಭ್ಯ ನಿರ್ವಹಣೆಗೂ ಸಾಲದಾಗಿದ್ದು, ಎಪಿಎಂಸಿ ಆಡಳಿತ ಮಂಡಳಿ ಹೋಗಿ ಉಸ್ತುವಾರಿ ಅಧಿಕಾರಿ ನೋಡಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ೨೦೧೫ರಲ್ಲಿ ೨.೫ ಕೋಟಿ ರೂ. ಆದಾಯ ಗಳಿಸಿದ್ದ ವೈಭವದ ದಿನಗಳನ್ನು ಕಂಡಿದ್ದ ಮಾರುಕಟ್ಟೆ ಈಗ ನಿಸ್ತೇಜವಾಗಿದೆ.

ಬಹಳಷ್ಟು ರೈತರು ಈಗ ಕೆ.ಆರ್.ಪೇಟೆ, ಕಿಕ್ಕೇರಿ, ಪಾಂಡವಪುರದ ಮಾರುಕಟ್ಟೆಗಳಲ್ಲೇ ಎಳನೀರು ಸಾಗಿಸುತ್ತಿದ್ದರೆ, ಹೊರ ರಾಜ್ಯಗಳಿಂದ ಬರುವ ಖರೀದಿದಾರರು, ಮಧ್ಯವರ್ತಿಗಳು ನೇರವಾಗಿ ಸ್ಥಳೀಯ ಏಜೆಂಟರನ್ನು ಸಂಪರ್ಕಿಸಿ ಚೌಕಾಸಿ ನಡೆಸಿ ಎಳನೀರು ತುಂಬಿಕೊಂಡು ಹೋಗುತ್ತಿದ್ದಾರೆ. ಪ್ರಸ್ತುತ ಎಪಿಎಂಸಿಯಲ್ಲಿ ಒಂದು ಎಳನೀರು ೧೫ ರೂ.ಗೆ ಮಾರಾಟವಾಗುತ್ತಿದೆ. ಎಪಿಎಂಸಿ ಕಾಂಪೌಂಡ್ ಹೊರಗಡೆಯೇ ಹಲವಾರು ವಹಿವಾಟುಗಳು ನಡೆಯುವುದರಿಂದ ಮಾರುಕಟ್ಟೆಗೆ ಬರುವ ಅಲ್ಪ ಆದಾಯವೂ ಖೋತಾ ಆಗಿದೆ.

ಎಪಿಎಂಸಿ ಮಾರುಕಟ್ಟೆ ತಿದ್ದುಪಡಿ ಕಾಯ್ದೆ ಸಣ್ಣಪುಟ್ಟ ವ್ಯಾಪಾರಿಗಳನ್ನು ನೇಪಥ್ಯಕ್ಕೆ ಸರಿಸುತ್ತಿವೆ. ಮುಂದಿನ ದಿನಗಳಲ್ಲಿ ಇಂತಹ ಮಾರುಕಟ್ಟೆಗಳು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ. -ಅಂಬರೀಷ್ ಮುಟ್ಟನಹಳ್ಳಿ, ಮಾಜಿ ಅಧ್ಯಕ್ಷರು, ಎಪಿಎಂಸಿ. ಮದ್ದೂರು.

 

 

 

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

6 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

6 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

6 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

7 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

7 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

7 hours ago