ಆಂದೋಲನ 50

ನಮ್ಮ ನಡುವಿನ ಕಲೋಪಾಸಕರು

ಲಕ್ಷ್ಮೀ ದುಡಿದವರಿಗೆ, ಸರಸ್ವತಿ ಪಡೆದವರಿಗೆ ಎಂಬ ಮಾತುಂಟು. ಹಾಗೆಯೇ ಕಲಾ ಸರಸ್ವತಿಯ ಆರಾಧನೆ ಎಂಬುದು ಮೈಸೂರಿನ ಜನತೆ ಪಡೆದು ಬಂದ ಪರಂಪರೆ. ಮೈಸೂರನ್ನು ಬಹುಕಾಲ ಆಳಿದ ಯದುವಂಶಸ್ಥರು ಕಲಾರಾಧಕರಾಗಿದ್ದರು. ಇದರ ಫಲವಾಗಿ ಬಹಳಷ್ಟು ಸಂಖ್ಯೆಯಲ್ಲಿ ಪ್ರತಿಭಾವಂತ ಕಲಾವಿದರು ಈ ನೆಲದ ಮಣ್ಣಿನಲ್ಲಿ ಆಗಿಹೋಗಿದ್ದಾರೆ, ಇದ್ದಾರೆ ಮತ್ತು ಮೂಡಿಬರುತ್ತಿದ್ದಾರೆ. ಈ ಪ್ರತಿಭಾ ಪರಂಪರೆಯ ಬಗೆಗಿನ ಸಣ್ಣ ಝಲಕ್‌ ಇಲ್ಲಿದೆ. 

ಅಲಕಾ ಕಟ್ಟೆಮನೆ ಪತ್ರಕರ್ತೆ, ಕತೆಗಾರ್ತಿ

ಕರ್ನಾಟಕದ ಲಲಿತ ಕಲೆಗಳ ಇತಿಹಾಸದ ಹೊತ್ತಗೆಯನ್ನು ತೆರೆದರೆ ಅದರ ಬಹುಪಾಲು ಪುಟಗಳು ಸಲ್ಲುವುದು ಮೈಸೂರಿಗೆ. ಮೈಸೂರರಸರ ಆಳ್ವಿಕೆಯ ಕಾಲದಿಂದಲೂ ಸಂಗೀತಗಾರರಿಗೆ, ನರ್ತಕರಿಗೆ, ವಾದಕರಿಗೆ ಮತ್ತು ಚಿತ್ರಕಾರರಿಗೆ ಆಶ್ರಯವನ್ನಿತ್ತು ಪ್ರೋತ್ಸಾಹ ನೀಡಿದ ಸುದೀರ್ಘ ಚರಿತ್ರೆ ಮೈಸೂರಿನದ್ದು. ಯದುರಾಯರಿಂದ ಆರಂಭವಾದ ಮೈಸೂರು ಅರಸರ ವಂಶ, ಲಲಿತ ಕಲೆಗಳ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ.

ರಣಧೀರ ಕಂಠೀರವ ನರಸರಾಜ ಒಡೆಯರ (ಕ್ರಿ.ಶ. ೧೬೩೮) ಕಾಲದಿಂದ ಈ ಕೇತ್ರಗಳಿಗೆ ಬಹಳಷ್ಟು ಪ್ರೋತ್ಸಾಹ ನೀಡಿದ ದಾಖಲೆಗಳು ಲಭ್ಯವಿವೆ. ಆದರೆ ಮುಮ್ಮಡಿ ಕೃಷ್ಣರಾಜ ಒಡೆಯರ ಆಳ್ವಿಕೆ ಮತ್ತು ನಂತರದ ಕಾಲವನ್ನು ಕರ್ನಾಟಕ ಸಂಗೀತದ ಸ್ವರ್ಣಯುಗವೆಂದು ಗುರುತಿಸಲಾಗುತ್ತದೆ. ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜೇಂದ್ರ ಒಡೆಯರ್ ಅವರ ಕಾಲದಲ್ಲಿ ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಮಹತ್ವದ ಸಂಗತಿಗಳು, ಘಟನೆಗಳು ದಾಖಲಾಗಿವೆ. ಹೊಸ ರಾಗಗಳು, ರಚನೆಗಳು, ವಾಗ್ಗೇಯಕಾರರು, ಹೊಸ ಕಲಾವಿದರು ಹೀಗೆ ನಾನಾ ನೂತನ ಸಾಧ್ಯತೆಗಳು ಮೈಸೂರಿನಲ್ಲಿ ಮೇಳೈಸಿವೆ. ಇದರ ಫಲವಾಗಿ ಬಹಳಷ್ಟು ಸಂಖ್ಯೆಯಲ್ಲಿ ಪ್ರತಿಭಾವಂತ ಕಲಾವಿದರು ಈ ನೆಲದ ಮಣ್ಣಿನಲ್ಲಿ ಆಗಿಹೋಗಿದ್ದಾರೆ, ಇದ್ದಾರೆ ಮತ್ತು ಮೂಡಿಬರುತ್ತಿದ್ದಾರೆ. ಈ ಪ್ರತಿಭಾ ಪರಂಪರೆಯ ಬಗೆಗಿನ ಸಣ್ಣ ಝಲಕ್ ಇಲ್ಲಿದೆ.

ವೀಣೆ ವೆಂಕಟಸುಬ್ಬಯ್ಯನವರಿಂದ (ಕ್ರಿ.ಶ. ೧೭೫೦) ತೆಗೆದುಕೊಂಡರೆ, ಮೈಸೂರು ಸದಾಶಿವ ರಾವ್, ವೀಣೆ ಶಾಮಣ್ಣ, ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ, ಮೈಸೂರು ವಾಸುದೇವಾಚಾರ್, ಬಿಡಾರಂ ಕೃಷ್ಣಪ್ಪ, ಮುತ್ತಯ್ಯ ಭಾಗವತರ್, ವೀಣೆ ಸುಬ್ರಹ್ಮಣ್ಯ ಅಯ್ಯರ್, ವೀಣೆ ವೆಂಕಟಗಿರಿಯಪ್ಪ, ಪಿಟೀಲು ಚೌಡಯ್ಯ, ಜಯಚಾಮರಾಜೇಂದ್ರ ಒಡೆಯರ್, ದೊರೆಸ್ವಾಮಿ ಅಯ್ಯಂಗಾರ್ ಹೀಗೆ ಬಹುದೊಡ್ಡ ಸಂಖ್ಯೆಯಲ್ಲಿ ಸಂಗೀತ ವಿದ್ವಾಂಸರ ಚರಿತ್ರೆ ತೆರೆದುಕೊಳ್ಳುತ್ತದೆ.
ಈ ಹಿರಿಯರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲೇ ಸಾಗಿರುವ ನಂತರದ ಕಲಾವಿದರು ಮತ್ತವರ ಹೊಸ ತಲೆಮಾರಿನ ಕಲಾವಿದರು ಮೈಸೂರಿನ ಕಲಾ ಜೀವನವನ್ನು ಸಮೃದ್ಧಗೊಳಿಸಿದ್ದಾರೆ. ಹಿಂದೆ ಮೈಸೂರು ಸಹೋದರರೆಂಬ ಖ್ಯಾತಿಗೆ ಪಾತ್ರವಾಗಿದ್ದವರು ಗಾಯಕರಾದ ಆರ್. ಚಂದ್ರಶೇಖರಯ್ಯ ಮತ್ತು ಆರ್. ಸೀತಾರಾಮ. ಅವರ ಸಹೋದರ ಮಹಾಮಹೋಪಾಧ್ಯಾಯ ರಾ. ಸತ್ಯನಾರಾಯಣ ಅವರು ಪ್ರಖ್ಯಾತ ಸಂಗೀತ ಶಾಸ್ತ್ರಜ್ಞರಾಗಿದ್ದರು. ಅವರ ಕಿರಿಯ ಸಹೋದರ ಆರ್. ವಿಶ್ವೇಶ್ವರನ್ ಖ್ಯಾತ ವೈಣಿಕರು. ರಾ. ಸತ್ಯನಾರಾಯಣ ಅವರ ಪುತ್ರ ರಾ.ಸ. ನಂದಕುಮಾರ್ ಸಂಗೀತ ವಿದ್ವಾಂಸರು. ಇಂದಿಗೆ ಮೈಸೂರು ಸಹೋದರರು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾದವರು ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್. ಈ ಸಹೋದರರ ತಂದೆ ಮೈಸೂರು ಮಹದೇವಪ್ಪ ಅವರಿಂದ ಪ್ರಾರಂಭವಾಗಿದ್ದ ಈ ಕಲಾಯಾನ, ಮೂರನೆಯ ತಲೆಮಾರಿಗೂ ಮುಂದುವರಿದಿದ್ದು ಕಾರ್ತಿಕ್ ನಾಗರಾಜ್ ಹಾಗೂ ಸುಮಂತ್ ಮಂಜುನಾಥ್ ಭರವಸೆ ಮೂಡಿಸುತ್ತಿದ್ದಾರೆ.

ವಿಶ್ವದ ಶ್ರೇಷ್ಠ ಸರೋದ್ ವಾದಕರಲ್ಲಿ ಒಬ್ಬರೆನಿಸಿರುವ ರಾಜೀವ ತಾರಾನಾಥರು ಮೈಸೂರು ನಗರವನ್ನೇ ತಮ್ಮ ನೆಲೆಯಾಗಿಸಿ ಈಗ ಸಾಂಸ್ಕೃತಿಕ ನಗರದ ಭಾಗವಾಗಿದ್ದಾರೆ. ಅವರಿಂದ ಸಂಗೀತ ಮತ್ತು ಸರಳತೆಯಿಂದ ಸ್ಫೂರ್ತಿ ಪಡೆದ ದೊಡ್ಡ ಬಳಗವೇ ಮೈಸೂರಿನಲ್ಲಿದೆ.

ಸುಕನ್ಯಾ ಪ್ರಭಾಕರ್, ಆರ್. ಎನ್. ಶ್ರೀಲತಾ, ಗೀತಾ ಸೀತಾರಾಮ್, ಎಸ್. ಕೆ. ವಸುಮತಿ ಮುಂತಾದ ಸಂಗೀತ ವಿದ್ವಾಂಸರಿಂದ ಈ ಕಲಾಪರಂಪರೆ ಕುಂದಿಲ್ಲದಂತೆ ಮುಂದುವರೆದಿದೆ. ಪ್ರಧಾನವಾಗಿ ಕರ್ನಾಟಕ ಸಂಗೀತವೇ ಮೈಸೂರಿನಲ್ಲಿ ಕೇಳುವುದು ಹೌದಾದರೂ, ಇಂದೂಧರ ನಿರೋಡಿ, ವೀರಭದ್ರಯ್ಯ ಹಿರೇಮಠ ಅವರಂಥ ಕಲಾವಿದರು ಉತ್ತರಾದಿ ಸಂಗೀತದ ಘಮ ಪಸರಿಸುತ್ತಿದ್ದಾರೆ. ಈ ನಡುವೆ ಶಾಸ್ತ್ರೀಯ ಸಂಗೀತ ಮಾತ್ರವಲ್ಲದೆ, ಸುಗಮ ಸಂಗೀತದ ಉಗಮದಲ್ಲೂ ಮೈಸೂರಿನ ಪಾತ್ರ ಮಹತ್ವದ್ದು. ಮೈಸೂರು ಅನಂತಸ್ವಾಮಿ, ಎಚ್. ಆರ್. ಲೀಲಾವತಿ, ಇಂದ್ರಾಣಿ ಅನಂತರಾಮ್, ಜಿ. ಪುಷ್ಪಲತಾರಂಥ ಅನೇಕ ಕಲಾವಿದರು ಈ ಕ್ಷೇತ್ರವನ್ನು ಹಸಿರಾಗಿಸಿದ್ದಾರೆ. ಇನ್ನು ಈಗಿನ ಪೀಳಿಗೆಯಲ್ಲಿ ವಿಜಯ್ ಪ್ರಕಾಶ್, ಅನನ್ಯ ಭಟ್, ರಘು ದೀಕ್ಷಿತ್ ಮುಂತಾದವು ಯುವ ಮನಸ್ಸುಗಳನ್ನು ಮೋಡಿ ಮಾಡಿದ್ದಾರೆ.

ವೀಣೆ ಮತ್ತು ವೋಂಲಿನ್ ವಾದನಗಳಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಮೈಸೂರಿನಲ್ಲಿ ವೇಣುವಾದನಕ್ಕೂ ಅಷ್ಟೇ ಪ್ರಾಶಸ್ತ್ಯ. ಈಗಿನ ಪೀಳಿಗೆಯಲ್ಲಿ, ಚೌಡಯ್ಯನವರ ವಂಶಸ್ಥರಾದ ಚಂದನ್ ಕುಮಾರ್, ಸಮೀರ್ ರಾವ್, ಸ್ಮಿತಾ ರವಿಕಿರಣ್ ಮುಂತಾದ ವಾಂಶಿಕರು ಪ್ರಖ್ಯಾತರಾಗಿದ್ದಾರೆ. ಮೃದಂಗ, ತಬಲಾ ಮತ್ತು ಘಟಂನಂತಹ ವಾದನಗಳಲ್ಲಿ ಬಿ. ರವಿಶಂಕರ್, ಎಚ್. ಎಲ್. ಶಿವಶಂಕರಸ್ವಾಮಿ, ರಾಮಾನುಜ ಮುಂತಾದವರ ತಾಳ-ಲಯಗಳು ಕೇಳಿಬರುತ್ತಿವೆ.

ಸಂಗೀತದ ಜೊತೆಜೊತೆಗೆ ಭರತನಾಟ್ಯದ ಇತಿಹಾಸ ಹೇಳದಿದ್ದರೆ ಮೈಸೂರಿನ ಚರಿತ್ರೆಯೇ ಅಪೂರ್ಣ. ರಾಜಾಶ್ರಯದಲ್ಲಿದ್ದ ಜಟ್ಟಿತಾಯಮ್ಮನವರಿಂದ ಮೊದಲ್ಗೊಂಡರೆ, ಮೂಗೂರು ಅಮೃತಪ್ಪ, ನಂಜನಗೂಡು ದಾಸಪ್ಪ, ಮೂಗೂರು ಸುಂದರಮ್ಮ, ವೆಂಕಟಲಕ್ಷಮ್ಮ ಮುಂತಾದವರಿಂದ ಪರಂಪರೆ ಬೆಳೆಯಿತು. ಆನಂತರ ಮುರಳೀಧರ ರಾವ್, ವಸುಂಧರಾ ದೊರೆಸ್ವಾಮಿ, ನಂದಿನಿ ಈಶ್ವರ್, ತುಳಸಿ ರಾಮಚಂದ್ರ, ಶೀಲಾ ಶ್ರೀಧರ್, ಕೃಪಾ ಫಡ್ಕೆ ಮುಂತಾದ ನೃತ್ಯ ವಿದ್ವಾಂಸರು ಸಮೃದ್ಧವಾದ ಶಿಷ್ಯ ಸಂಪತ್ತನ್ನು ಮೈಸೂರಿಗೆ ನೀಡಿದ್ದಾರೆ. ಇದು ನಮ್ಮ ನಡುವಿನ ಕಲಾವಿದರ ಕಿರು ಮಾಹಿತಿಯಷ್ಟೇ. ಇನ್ನೂ ಅನೇಕರು ಈ ಸಾಲಿನಲ್ಲಿದ್ದಾರೆ. ಒಬ್ಬೊಬ್ಬರೂ ಮೈಸೂರಿನ ಹಿರಿಮೆಯನ್ನು ಪಸರಿಸಿದ, ಪಸರಿಸುತ್ತಿರುವ ನಕ್ಷತ್ರಗಳು.

andolana

Recent Posts

ಬಳ್ಳಾರಿ ಬ್ಯಾನರ್‌ ಘರ್ಷಣೆ | ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಎಫ್‌ಐಆರ್‌

ಬಳ್ಳಾರಿ : ವಾಲ್ಮೀಕಿ ಬ್ಯಾನರ್‌ ಅಳವಡಿಕೆ ವಿಚಾರದಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಗುರುವಾರ ಸಂಜೆ ನಡೆದ ಘರ್ಷಣೆ…

2 hours ago

ಓದುಗರ ಪತ್ರ: ಕೆರೆ, ಕಟ್ಟೆಗಳ ಹೂಳೆತ್ತಿಸಿ

ಮಳೆಗಾಲದಲ್ಲಿ ಕೆರೆ ಕಟ್ಟೆಗಳು ತುಂಬಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತಗಳೇ ಸೃಷ್ಟಿಯಾಗುತ್ತವೆ. ನಗರ ಪ್ರದೇಶಗಳಲ್ಲಿ ಇರುವ ಕೆರೆಗಳ ಹೂಳೆತ್ತಿ…

5 hours ago

ಓದುಗರ ಪತ್ರ: ಪ್ರಜಾಪ್ರಭುತ್ವ ಎಂಬ ಮೃಷ್ಟಾನ್ನ ಭೋಜನ ಶಾಲೆ!

ಭ್ರಷ್ಟಾಚಾರವೇ ಇಲ್ಲದ ವ್ಯವಸ್ಥೆ ನಿರ್ಮಾಣ ಮಾಡುವುದು ಇನ್ನು ತುಂಬಾ ಕಷ್ಟಕರವಾದ ಕೆಲಸ ಎಂದು ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಎನ್.ಸಂತೋಷ್…

6 hours ago

ಓದುಗರ ಪತ್ರ: ಡಿಜಿಟಲ್ ತಂತ್ರಜ್ಞಾನ ಸದ್ಬಳಕೆಯಾಗಲಿ

ಇಂದು ಡಿಜಿಟಲ್ ತಂತ್ರಜ್ಞಾನ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಇದರಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಆನ್ಲೈನ್ ತರಗತಿಗಳು, ಯೂಟ್ಯೂಬ್ ಶಿಕ್ಷಣ…

6 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಪೈರೆಸಿ ವಿರುದ್ಧ ಚಿತ್ರೋದ್ಯಮ ಯುದ್ಧ ಸನ್ನದ್ಧ!?

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ೨೦೨೬ರ ಆರಂಭದ ವೇಳೆ ಹಲವು ಬೆಳವಣಿಗೆಗಳು. ೨೦೨೫ರ ಕೊನೆಯ ಶುಕ್ರವಾರ ತೆರೆ ಕಂಡ ೨ ಚಿತ್ರಗಳ…

6 hours ago

ಸಿದ್ದಾಪುರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ

ಕೃಷ್ಣ ಸಿದ್ದಾಪುರ ಸಿಬ್ಬಂದಿ ಕೊರತೆ, ಜನಸಂಖ್ಯೆ ಆಧಾರದಲ್ಲಿ ಹೊಸ ಠಾಣೆ ಸ್ಥಾಪನೆ, ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಆಗ್ರಹ  ಸಿದ್ದಾಪುರ:ಸಿದ್ದಾಪುರ ಪೊಲೀಸ್…

6 hours ago