ಆಂದೋಲನ 50

ನಂಜನಗೂಡಿನ ಕ್ರೀಡಾಜಗತ್ತಿನ ಸುವರ್ಣಯುಗ

ನಂಜನಗೂಡು ಕ್ರೀಡೆಗೆ ಹಿಂದಿನ ಕಾಲದಿಂದಲೂ ಹೆಸರುವಾಸಿ. ಐವತ್ತು ವರ್ಷಗಳ ಹಿಂದಿನಿಂದಲೂ ನಂಜನಗೂಡು ಹಲವು ಕ್ರೀಡೆಗಳಲ್ಲಿ ಇಡೀ ರಾಜ್ಯದಲ್ಲಿಯೇ ಉತ್ತುಂಗ ಸ್ಥಿತಿಯಲ್ಲಿ ಇದ್ದುದನ್ನು ಕಾಣಬಹುದಾಗಿದೆ. ಆಗ ಸಾಂಪ್ರದಾಯಿಕ ಕ್ರೀಡೆಯಾದ ಕುಸ್ತಿ, ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ ಮತ್ತು ಖೋ-ಖೋ ಯುವಕರ ಆಕರ್ಷಣೆಯ ಕ್ರೀಡೆಯಾಗಿತ್ತು. ಫುಟ್‌ಬಾಲ್ ಮತ್ತು ಅಥ್ಲೆಟಿಕ್ಸ್‌ನಲ್ಲಿಯೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ತಂಡಗಳು ಹಾಗೂ ಕ್ರೀಡಾಪಟುಗಳನ್ನು ನಂಜನಗೂಡು ಹೊಂದಿತ್ತು. ಅಂದು ನಂಜನಗೂಡು ವಿಶಾಲವಾದ ಆಟದ ಮೈದಾನವನ್ನು ಹೊಂದಿದ್ದು ಬೇರೆ ಬೇರೆ ಸ್ಥಳಗಳಲ್ಲಿ ಯುವಕರು ಹಲವು ಕ್ರೀಡೆಗಳನ್ನು ಅಭ್ಯಾಸ ಮಾಡುತ್ತಿದ್ದರು. ನಂಜನಗೂಡಿನ ಕ್ರೀಡಾ ಜಗತ್ತಿನ ಸುವರ್ಣಯುಗದ ಮೆಲುಕು ನೋಟ ಇಲ್ಲಿದೆ.

ಎನ್‌.ಎಸ್‌.ಸುಬ್ರಮಣ್ಯ

ನಂಜನಗೂಡು ಕುಸ್ತಿ ಸ್ಪರ್ಧೆಗೆ ಬಹಳ ಹೆಸರುವಾಸಿ ಆಗಿದ್ದಿತು. ಆಗ ನಂಜನಗೂಡು ಟೌನ್‌ನಲ್ಲಿ ಮುಖ್ಯವಾಗಿ ಚಾಮಲಾಪುರದ ಗರಡಿ, ಒಕ್ಕಲಗೇರಿ ಗರಡಿ, ಕುರಬಗೇರಿ ಗರಡಿ, ಎಕ್ಸ್‌ಟೆನ್ಷನ್ ಗರಡಿ, ಶಂಕರಪುರದ ಗರಡಿ, ಶ್ರೀರಾಂಪುರದ ಗರಡಿ ಹಾಗೂ ಹಳ್ಳದಕೇರಿ ಗರಡಿ ಮುಂತಾದ ಹಲವು ಗರಡಿಗಳಿದ್ದು ಅಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ಹಲವು ಗರಡಿಗಳು ಇದ್ದವು.

ಇವುಗಳಲ್ಲಿ ಹಿರಿಯ ಕುಸ್ತಿಪಟುಗಳು ಯುವ ಕ್ರೀಡಾಪಟುಗಳಿಗೆ ಸಾಂಪ್ರದಾಯಿಕ ಶೈಲಿಯ ಕುಸ್ತಿಯ ತರಬೇತಿಯನ್ನು ನೀಡಿ ಅಭ್ಯಾಸ ಮಾಡಿಸುತ್ತಿದ್ದರು. ನಂಜನಗೂಡಿನಲ್ಲಿ ನೆನಪಿಸಿಕೊಳ್ಳಬೇಕಾದ ಹಿರಿಯ ಕುಸ್ತಿಪಟುಗಳಲ್ಲಿ ಕೆಲವರೆಂದರೆ ಒಕ್ಕಲಗೇರಿ ಗರಡಿಯ ಪೈಲ್ವಾನ್ ಶಿವಣ್ಣ, ಕುರುಬಗೇರಿ ಗರಡಿಯ ಪೈಲ್ವಾನ್ ಪ್ರಕಾಶ್ ಪೋಕಿ, ಎಕ್ಸ್ ಟೆನ್ಷನ್ ಗರಡಿಯ ಪೈಲ್ವಾನ್ ರಾಚಪ್ಪ ಚಾಮಲಾಪುರ ಗರಡಿಯ ಪೈಲ್ವಾನ್ ಸ್ಟೀಲ್ ಮಾಧು, ಸೌದೆ ಡಿಪೋ ಕೃಷ್ಣಪ್ಪ, ಮಿಲ್ಟ್ರಿ ಹೋಟೆಲ್ ಸಿದ್ದಪ್ಪ ಹೀಗೆ ಹಲವಾರು ಹಿರಿಯ ಕುಸ್ತಿಪಟುಗಳಿದ್ದರು. ನಂತರದಲ್ಲಿ ತಯಾರಾಗುತ್ತಿದ್ದ ಹಲವು ಕುಸ್ತಿ ಪಟುಗಳು ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದರು. ಪೈಲ್ವಾನ್ ರಿಯಾಜ್, ಪುರಿಬಟ್ಟಿ ನಂಜಯ್ಯನವರ ಮಗ ಪೈಲ್ವಾನ್ ನಂಜಯ್ಯ, ಕಳಲೆ ಮಹದೇವು ಪೈಲ್ವಾನ್ ಸ್ಟೂಡೆಂಟ್ ರಾಜಣ್ಣ, ಸ್ಟೀಲ್ ಮಾಧುರವರ ಮಗ ಪೈಲ್ವಾನ್ ಸ್ವಾಮಿ, ಪೈಲ್ವಾನ್ ಗೋಪಾಲ್, ಪೈಲ್ವಾನ್ ಕೃಷ್ಣ ಇನ್ನೂ ಮುಂತಾದ ಪೈಲ್ವಾನರುಗಳು ನಂಜನಗೂಡಿನ ಕುಸ್ತಿ ಕಲೆಗೆ ಕೀರ್ತಿ ತಂದವರು. ಕುರುಬಗೇರಿ ಗರಡಿಯ ಪುರಿಬಟ್ಟಿ ನಂಜಯ್ಯನವರ ಮಗ ಪೈಲ್ವಾನ್ ನಂಜಯ್ಯನವರು ಪಾಕಿಸ್ತಾನದ ಬೋಲಾ, ಬೆಂಗಳೂರಿನ ಅಹ್ಮದ್, ಮೈಸೂರಿನ ಕರಿಯ ಬೋಲಾ, ಪಾಲಹಳ್ಳಿಯ ಬೆಟ್ಟೇಗೌಡ, ಹೈದರಾಬಾದಿನ ಉತ್ತಮ್ ಕದಂ ಮುಂತಾದ ಪೈಲ್ವಾನರುಗಳ ಜೊತೆ ಕುಸ್ತಿ ಮಾಡಿ ಇವರೆಲ್ಲರ ವಿರುದ್ಧ ಗೆದ್ದಿರುವುದು ನಂಜನಗೂಡಿನ ಹಿರಿಮೆ. ಇದೇ ಸಮಯದಲ್ಲಿ ನಂಜನಗೂಡಿನ ಟೌನ್‌ನಲ್ಲಿ ಕುಸ್ತಿ ಸ್ಪರ್ಧೆಗಳು ನಿರಂತರವಾಗಿ ಆಯೋಜನೆಗೊಳ್ಳುತ್ತಿದ್ದವು.

ಫುಟ್ಬಾಲ್

ನಂಜನಗೂಡಿನ ಫುಟ್ಬಾಲ್ ತಂಡ ರಾಜ್ಯದ ಉತ್ತಮ ತಂಡಗಳಲ್ಲಿ ಒಂದಾಗಿತ್ತು. ಪ್ರತಿದಿನ ಸಂಜೆ ನಂಜನಗೂಡಿನ ಶಾರದಾ ಟಾಕೀಸ್‌ನ ಮುಂಭಾಗದಲ್ಲಿ ಇದ್ದ ಮೈದಾನದಲ್ಲಿ ಅಂದು ಯುವಕರುಗಳಾಗಿದ್ದ ಯು. ಎನ್. ಪದ್ಮನಾಭರಾವ್, ಥಿಯೇಟರ್ ನಾರಾಯಣ್, ಶ್ರೀಕಂಠ, ಪಟೇಲ್ ನಾಗರಾಜು, ದೊರೆ, ಧನರಾಜ್, ದೇವರಸನಹಳ್ಳಿ ನಾರಾಯಣ್, ಬೈರಾ, ಪಿ.ಡಿ. ಕುಮಾರ್, ವೆಂಕಟೇಶ್, ಪಿ.ಡಿ. ಮನೋಹರ್ ಮುಂತಾದವರು ನಂಜನಗೂಡಿನ ಫುಟ್ಬಾಲ್ ಆಟದ ಅಭ್ಯಾಸವನ್ನು ಮಾಡುತ್ತಿದ್ದ ದಿಗ್ಗಜರುಗಳು.

ನಂಜನಗೂಡಿನ ಫುಟ್ಬಾಲ್ ವಿಷಯವನ್ನು ನೆನೆಯುವಾಗ ಬಹಳ ಮುಖ್ಯವಾಗಿ ಇಬ್ಬರು ಹಿರಿಯ ಧೀಮಂತರನ್ನು ನೆನೆಯಲೇಬೇಕು. ಅವರಲ್ಲಿ ಕೆ.ನರಸೇಗೌಡರು ಸ್ವತಃ ಕ್ರೀಡಾ ಪ್ರೇಮಿಗಳು ಮತ್ತು ಅವರು ನಂಜನಗೂಡಿನ ಪುರಸಭಾ ಅಧ್ಯಕ್ಷರಾಗಿದ್ದಾಗ ರಾಷ್ಟ್ರೀಯ ಉತ್ಸವಗಳ ಆಚರಣೆಯ ಸಮಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ಕ್ರೀಡೆಗಳನ್ನು ಪ್ರಪ್ರಥಮ ಬಾರಿಗೆ ಆಯೋಜಿಸಿ ಹೆಚ್ಚಿನ ಯುವ ಕ್ರೀಡಾಪಟುಗಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶಮಾಡಿಕೊಟ್ಟಿದ್ದರು. ಇನ್ನೊಬ್ಬರು ಇವರ ಸಹೋದರ ಕೆ. ಕಾಳೇಗೌಡರವರು ಸ್ವತಃ ಫುಟ್ಬಾಲ್ ಆಟಗಾರರಾಗಿದ್ದು, ಪ್ರತಿದಿನ ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದರು. ಅಲ್ಲದೆ ನಂಜನಗೂಡಿನ ಫುಟ್ಬಾಲ್ ತಂಡದ ಜೀವನಾಡಿಯೂ ಆಗಿದ್ದರು.

ನಂಜನಗೂಡಿನ ಫುಟ್ಬಾಲ್ ತಂಡ ಭಾರತದ ಪ್ರತಿಷ್ಠಿತ ಫುಟ್ಬಾಲ್ ತಂಡಗಳಲ್ಲಿ ಒಂದಾದ ಕೊಲ್ಕತ್ತಾದ ಮಹಮಡನ್ ಸ್ಪೊರ್ಟ್ಸ್ ಕ್ಲಬ್‌ನ ವಿರುದ್ಧ ಪಂದ್ಯವನ್ನು ಆಡಿದ್ದು ನಂಜನಗೂಡಿನ ಇತಿಹಾಸದಲ್ಲಿ ಫುಟ್‌ಬಾಲ್‌ನ ಸುವರ್ಣ ಯುಗ ಎಂದರೆ ತಪ್ಪಾಗಲಾರದು. ಇದೇ ಸಮಯದಲ್ಲಿ ಅತ್ಯುತ್ತಮ ಫುಟ್ಬಾಲ್ ಆಟವನ್ನು ಆಡುತ್ತಿದ್ದ ನಂಜನಗೂಡಿನ ಯುವ ಕ್ರೀಡಾಪಟು ಯು.ಎನ್. ಪದ್ಮನಾಭರಾವ್ ಭಾರತದ ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗಿ ಶ್ರಿಲಂಕಾದಲ್ಲಿ ನಡೆದ ಅಂತರರಾಷ್ಟ್ರೀಯ ಫುಟ್ ಬಾಲ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಹೆಮ್ಮೆಯ ವಿಷಯ.

ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದ ನಂಜನಗೂಡಿನ ಫುಟ್ಬಾಲ್ ತಂಡ, ಐಡಿಯಲ್ ಜಾವಾ ಫುಟ್ಬಾಲ್ ತಂಡ, ರೈಲ್ವೇಸ್‌ನ ಫುಟ್ಬಾಲ್ ತಂಡ, ಗೌರ್ನಮೆಂಟ್ ಪ್ರೆಸ್ ಫುಟ್ಬಾಲ್ ತಂಡ, ನೇತಾಜಿ ಫುಟ್ಬಾಲ್ ತಂಡ ಮತ್ತು ಮುಸ್ಲಿಮ್ ಯೂತ್ ಫುಟ್ಬಾಲ್ ತಂಡ ಇವುಗಳ ಜೊತೆ ಸೆಣಸಿ ಗೆಲುವನ್ನು ಸಾಧಿಸಿತ್ತು. ಹನ್ನೆರಡು ಪಂದ್ಯಗಳಲ್ಲಿ ಹನ್ನೊಂದು ಪಂದ್ಯಗಳನ್ನು ನಂಜನಗೂಡು ಫುಟ್ಬಾಲ್ ತಂಡ ಜಯಗಳಿಸಿತ್ತು.

ಟೌನ್ ಟೆನಿಸ್ ಕ್ಲಬ್

ಸ್ವಾತಂತ್ರ್ಯ ಪೂರ್ವದಲ್ಲೇ ಟೌನ್ ಟೆನಿಸ್ ಕ್ಲಬ್ ನಂಜನಗೂಡಿನಲ್ಲಿ ಪ್ರಾರಂಭವಾಗಿತ್ತು. ಆಗ ಇದನ್ನು ಪೂರ್ಣವಾಗಿ ಬಿ.ವಿ.ಪಂಡಿತರು ನಿರ್ವಹಿಸುತ್ತಿದ್ದರು. ಅಂದು ಹಿರಿಯರಾಗಿದ್ದ ಗುಂಡಪ್ಪ ಎ.ವಿ. ಕೃಷ್ಣನ್, ಸಿ.ಕೆ. ನಾಗಪ್ಪ, ವೆಂಕಟಸುಬ್ಬನ್ ಮುಂತಾದ ಹಿರಿಯರು ಪ್ರತಿದಿನ ಅಭ್ಯಾಸ ಮಾಡುತ್ತಿದ್ದರು. ಪ್ರಪಂಚದಲ್ಲಿ ಎರಡನೆಯ ಮಹಾಯುದ್ಧ ಪ್ರಾರಂಭವಾಗಿದ್ದ ಸಮಯದಲ್ಲಿ ಅದರ ಪ್ರಭಾವ ಭಾರತದ ಮೇಲೂ ಆಗಿತ್ತು. ಇದರಿಂದ ಇಡೀ ಭಾರತದಲ್ಲಿ ಟೆನಿಸ್ ಬಾಲ್‌ಗಳು ದೊರೆಯದಂತಾಗಿ ಟೆನಿಸ್ ಕ್ಲಬ್‌ಗಳಲ್ಲಿ ಅಭ್ಯಾಸವನ್ನು ನಿಲ್ಲಿಸುವಂತಾಯಿತು. ಇದರ ಪರಿಣಾಮ ನಂಜನಗೂಡು ಟೌನ್ ಟೆನಿಸ್ ಕ್ಲಬ್‌ನ ಮೇಲೂ ಆಗಿ ಅಭ್ಯಾಸವನ್ನು ನಿಲ್ಲಿಸುವಂತಹ ಪರಿಸ್ಥಿತಿ ಉಂಟಾಗಿತ್ತು. ಆಗ ಟೌನ್ ಟೆನಿಸ್ ಕ್ಲಬ್‌ನ ಸದಸ್ಯರು ಹಾಗೂ ವಕೀಲರೂ ಆಗಿದ್ದ ಸಿ.ಕೆ.ನಾಗಪ್ಪನವರು ಮತ್ತು ಸ್ನೇಹಿತರು ನೇರವಾಗಿ ಇಂಗ್ಲೆಂಡಿನ ರಾಣಿಯ ಜೊತೆ ಪತ್ರ ವ್ಯವಹಾರವನ್ನು ನಡೆಸಿ ಇಂಗ್ಲೆಂಡಿನಿಂದ ನೇರವಾಗಿ ನಂಜನಗೂಡಿನ ಟೌನ್ ಟೆನಿಸ್ ಕ್ಲಬ್‌ಗೆ ಟೆನಿಸ್ ಬಾಲ್‌ಗಳು ಸರಬರಾಜು ಆಗುವಂತೆ ಮಾಡಿಕೊಂಡು ಟೆನಿಸ್ ಅಭ್ಯಾಸ ಮಾಡುತ್ತಿದ್ದರು.

ನಂಜನಗೂಡಿನ ಕೇಂದ್ರಸ್ಥಾನದಲ್ಲೇ ಸ್ಥಾಪಿತವಾಗಿದ್ದ ಟೌನ್ ಟೆನಿಸ್ ಕ್ಲಬ್ ನಂಜನಗೂಡಿನ ಕ್ರೀಡೆಗಳಿಗೆ ಮಾತೃಸ್ಥಾನದಲ್ಲಿದ್ದು ಎಲ್ಲಾ ಕ್ರೀಡೆಗಳಿಗೂ ಸಮಾನ ಪ್ರೋತ್ಸಾಹ ನೀಡುತ್ತಿತ್ತು.

ಖೋ ಖೋ

ನಂಜನಗೂಡಿನ ಟೌನ್ ಟೆನಿಸ್ ಕ್ಲಬ್‌ನ ಮುಂಭಾಗದ ಮೈದಾನದಲ್ಲಿ ಪ್ರತಿದಿನ ಹಲವು ಶಾಲಾ ಮತ್ತು ಕಾಲೇಜುಗಳ ಯುವಕರು ಮತ್ತು ಯುವತಿಯರು ನಂಜನಗೂಡಿನ ಹಿರಿಯ ಕ್ರೀಡಾಪಟು ಜಾವಿದ್ ಅಹಮ್ಮದ್‌ರವರ ನೇತ್ರತ್ವದಲ್ಲಿ ಖೋ ಖೋ ಆಟವನ್ನು ಅಭ್ಯಾಸ ಮಾಡುತ್ತಿದ್ದರು. ಜಾವೀದ್ ಅಹ್ಮದ್‌ರವರು ಉತ್ತಮ ಅಥ್ಲೀಟ್ ಆಗಿದ್ದು ದೂರದ ಓಟದಲ್ಲಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಮತ್ತು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವಾರು ಬಾರಿ ಪ್ರಶಸ್ತಿಗಳನ್ನು ಪಡೆದಿದ್ದರು. ಪಂಜಾಬ್ ರಾಜ್ಯದ ಪಟಿಯಾಲಾದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅಥ್ಲೀಟ್‌ಗಳ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದರು. ಜಾವಿದ್ ಅಹಮ್ಮದ್‌ರವರ ನಂತರದಲ್ಲಿ ಅವರ ಮಾರ್ಗದರ್ಶನದಲ್ಲಿ ಬೆಳೆದ ಉತ್ತಮ ಖೋ ಖೋ ಪಟುಗಳೆಂದರೆ ಭೋಜರಾಜ ಮತ್ತು ಕೆ.ಎಸ್.ಸತ್ಯನಾರಾಯಣ.

ಉತ್ತಮ ತಂಡವಾಗಿ ರೂಪುಗೊಂಡಿದ್ದ ನಂಜನಗೂಡಿನ ಯುವಕರ ಖೋ ಖೋ ತಂಡ ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಾರಿ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ತಂಡದಲ್ಲಿ ಉತ್ತಮ ಕೌಶಲವನ್ನು ಹೊಂದಿದ ಯುವ ಆಟಗಾರರು ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದರು. ಅವರುಗಳೆಂದರೆ ಶಶಿಧರ್, ಕಳಲೆ ಮಹದೇವ, ಕೆ. ಕಣ್ಣನ್, ಶಾಂತಕುಮಾರ್, ಖಲೀಲ್ ಅಹ್ಮದ್, ಕಾಮಿಲ್, ರಫೀಕ್ ಅಹ್ಮದ್, ಅನಿಲ್ ಕುಮಾರ್, ನಾಗರಾಜು ಮುಂತಾದವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಖೋ ಖೋ ತಂಡಗಳಿಗೆ ಆಯ್ಕೆಯಾಗಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ನಂಜನಗೂಡಿಗೆ ಕೀರ್ತಿ ತಂದಿದ್ದಾರೆ.

ಥ್ರೋಬಾಲ್

ನಂತರದಲ್ಲಿ ಜಾವಿದ್ ಅಹಮ್ಮದ್‌ರವರ ಗಮನ ಥ್ರೋಬಾಲ್ ಕಡೆಗೆ ತಿರುಗಿತು. ಮೈಸೂರು ಜಿಲ್ಲಾ ಅಮೆಚೂರ್ ಥ್ರೋಬಾಲ್ ಸಂಸ್ಥೆಯ ಅಧ್ಯಕ್ಷರಾದ ಮೇಲೆ ಪ್ರಪ್ರಥಮ ಬಾರಿಗೆ ಥ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾದ ವತಿಯಿಂದ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಯನ್ನು ನಂಜನಗೂಡಿನ ಸಿಟಿಜನ್ ಶಾಲೆಯಲ್ಲಿ ಆಯೋಜನೆಗೊಳಿಸಿ ನಂಜನಗೂಡಿಗೆ ಕ್ರೀಡಾ ಗರಿಮೆಯನ್ನು ಹೆಚ್ಚಿಸಿದರು.

ಇದರಿಂದ ನಂಜನಗೂಡಿನಲ್ಲಿ ಥ್ರೋಬಾಲ್ ಪ್ರತಿಭೆಗಳ ಸಂಖ್ಯೆ ಹೆಚ್ಚಾಗಿ ಹುಟ್ಟಿಕೊಂಡವು. ನಂತರದಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ವತಿಯಿಂದ ರಾಷ್ಟ್ರ ಮಟ್ಟದ ಕ್ರೀಡೆಗಳನ್ನು ಆಯೋಜನೆಗೊಳಿಸುವ ಸಂಸ್ಥೆಯಾದ ಠ್ಚಟಟ್ಝ ಜಞಛಿ federation of india  ವತಿಯಿಂದ ಆಯೊಜನೆಗೊಳ್ಳುವ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಥ್ರೋ ಬಾಲ್ ಸ್ಪರ್ಧೆಯನ್ನು ನಂಜನಗೂಡಿನಲ್ಲಿ ಪ್ರಥಮ ಬಾರಿಗೆ ಆಯೋಜನೆ ಗೊಳ್ಳಲು  ಕಾರಣರಾದವರು ಜಾವಿದ್ ಅಹಮ್ಮದ್ ರವರ ಗರಡಿಯಲ್ಲಿ ಪಳಗಿದ್ದ ಸೈಯದ್ ಮುಬೀನ್‌ರವರು.

ನಂತರದಲ್ಲಿ ಹಲವು ಬಾರಿ ರಾಷ್ಟ್ರಮಟ್ಟದ ಥ್ರೋಬಾಲ್ ಮತ್ತು ವಾಲಿಬಾಲ್ ಆಟವನ್ನು ನಂಜನಗೂಡಿನಲ್ಲಿ ಸಂಘಟಿಸಲಾಗಿದೆ. ಇದರಿಂದ ನಂಜನಗೂಡಿನ ಹಲವು ವಿದ್ಯಾರ್ಥಿ ವಿದ್ಯಾರ್ಥಿನಿಯರು ಥ್ರೋಬಾಲ್ ಆಟದಲ್ಲಿ ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸಲು ಸಹಾಯಕವಾಗಿ ಅವರ ಮುಂದಿನ ಶೈಕ್ಷಣಿಕ ವ್ಯಾಸಂಗಕ್ಕೆ ಅನುಕೂಲಕರವಾಗಿದೆ.

ನಂಜನಗೂಡಿನಲ್ಲಿ ಜಾವಿದ್ ಅಹ್ಮದ್‌ರವರು ಸಂಘಟನೆ  ಗೊಳಿಸುತ್ತಿದ್ದ ಎಲ್ಲಾ ಸಂಘಟನೆಗಳಿಗೆ ಹೆಗಲಿಗೆ ಹೆಗಲು ಕೊಟ್ಟು ಹಗಲಿರುಳು ಅವರ ಜೊತೆಯಲ್ಲಿ ನಿಸ್ವಾರ್ಥತೆಯಿಂದ ದುಡಿದು ಸಂಘಟನೆಗಳು ನಿಖರವಾಗಿ ನಡೆಯುವಂತೆ ಆಯೊಜನೆಗೊಳಿಸುತ್ತಿದ್ದ ಜಾವಿದ್ ಅಹಮದ್‌ರವರ ಆತ್ಮೀಯ ಸ್ನೇಹಿತರು ಹಾಗೂ ದೈಹಿಕ ಶಿಕ್ಷಣ ನಿದೇಶಕರೂ ಆದ  ನಂಜನಗೂಡಿನ ಎನ್.ಎಸ್. ಸುಬ್ರಹ್ಮಣ್ಯರವರು.

andolana

Recent Posts

ಸಿಎಂ ಆಯ್ಕೆ ವೇಳೆ ಯಾವುದೇ ಗಡುವು ಕೊಟ್ಟಿಲ್ಲ: ಸಚಿವ ಕೆ.ಜೆ.ಜಾರ್ಜ್‌

ಬೆಳಗಾವಿ: ಸಿಎಂ ಆಯ್ಕೆ ಮಾಡುವ ವೇಳೆ ಯಾವುದೇ ಗಡುವು ಕೊಟ್ಟಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. ಸಿಎಂ ಬದಲಾವಣೆ…

39 mins ago

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ KERS ನಿರ್ದೇಶಕ ನೇತೃತ್ವದಲ್ಲಿ ತಂಡ ರಚನೆ

ಬೆಂಗಳೂರು: ಸುಪ್ರೀಂಕೋರ್ಟ್‌ ತೀರ್ಪು ಬೆನ್ನಲ್ಲೇ ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ತ್ವರಿತ ಅನುಷ್ಠಾನಕ್ಕೆ ಕರ್ನಾಟಕ ಇಂಜಿನಿಯರಿಂಗ್‌ ಸಂಶೋಧನಾ ಕೇಂದ್ರ ನಿರ್ದೇಶಕರ…

1 hour ago

ಪಾರಂಪರಿಕ ನಗರ ಅಭಿವೃದ್ಧಿಗೆ ಕಾನೂನು ರೂಪಿಸಿ: ಸಂಸತ್‌ನಲ್ಲಿ ಸಂಸದ ಯದುವೀರ್‌ ಒಡೆಯರ್‌ ಆಗ್ರಹ

ನವದೆಹಲಿ: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ದೇಶದಲ್ಲಿರುವ ಪಾರಂಪರಿಕ ನಗರಗಳ ಅಭಿವೃದ್ಧಿಗೆ ಪೂರಕವಾದ ಕಾನೂನು ಚೌಕಟ್ಟು ರೂಪಿಸಲು ನಗರಾಭಿವೃದ್ಧಿ ಸಚಿವಾಲಯ…

1 hour ago

ನನ್ನನ್ನು ಸಿಎಂ ಮಾಡುವುದಾದರೆ ಬಿಜೆಪಿಗೆ ವಾಪಸ್‌ ಹೋಗುತ್ತೇನೆ: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌

ಬೆಳಗಾವಿ: ನನ್ನನ್ನು ಸಿಎಂ ಮಾಡುವುದಾದರೆ ಮಾತ್ರ ನಾನು ಬಿಜೆಪಿಗೆ ವಾಪಸ್‌ ಹೋಗುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌…

2 hours ago

ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನಿಂದ ಹಿಟ್‌ ಅಂಡ್‌ ರನ್:‌ ಸವಾರ ಸಾವು

ಬೆಂಗಳೂರು: ಗ್ಯಾರಂಟಿ ಯೋಜನೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರ ಸಾವನ್ನಪ್ಪಿರುವ…

3 hours ago

ಯೂನಿಟಿ ಮಾಲ್‌ ನಿರ್ಮಾಣಕ್ಕೆ ತಡೆ ವಿಚಾರ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಮಾಧ್ಯಮ ಹೇಳಿಕೆ ಬಿಡುಗಡೆ

ಮೈಸೂರು: ಯೂನಿಟಿ ಮಾಲ್‌ ನಿರ್ಮಾಣಕ್ಕೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ…

3 hours ago