ಆಂದೋಲನ 50

ಸ್ಥಿತ್ಯಂತರದಲ್ಲಿ ಮಂಡ್ಯ ರೈತರ ಬದುಕು

ಮಂಡ್ಯ ರೈತರ ಪಾಲಿಗೆ ನೀರಾವರಿ ಭಾಗ್ಯದ ಬಾಗಿಲನ್ನೇ ತೆರೆದಿದೆ. ಒಣಭೂಮಿಯೆಲ್ಲವೂ ನಿತ್ಯ ಹಸಿರು ಹೊದ್ದಂತೆ ರೈತರ ಬವಣೆಗಳೆಲ್ಲವೂ ನಿವಾರಣೆಯಾಗಿ ನಿರಾಳ ಭಾವ. ರಾಜ್ಯದಲ್ಲೇ ಮೊದಲಿಗೆ ಸಮೃದ್ಧ ನೀರಾವರಿ ಸೌಲಭ್ಯ ಪಡೆದ ಮಂಡ್ಯ ರೈತರು ಆರ್ಥಿಕವಾಗಿ ಶ್ರೀಮಂತರಾದರು. ಆರ್ಥಿಕ ಶ್ರೀಮಂತಿಕೆಯು ವಿಸ್ತಾರವಾದಂತೆ, ಸೌಲಭ್ಯಗಳು ದಕ್ಕುತ್ತಾ ಹೋದವು. ಕಾಲ ಬದಲಾದಂತೆ, ಹೊಸ ತಲೆಮಾರುಗಳು ಉದಯಿಸಿದಂತೆ ಆರ್ಥಿಕ ಶ್ರೀಮಂತಿಕೆಯು ಸಾಮಾಜಿಕ ತಲ್ಲಣಗಳ ಸ್ವರೂಪ ಪಡೆಯಿತು. ಮಂಡ್ಯದ ಗ್ರಾಮೀಣ ಪ್ರದೇಶದಲ್ಲೀಗ ಹಳ್ಳಿ ಸೊಗಡೂ ಇಲ್ಲ , ಸೊಗಸೂ ಇಲ್ಲದಂತಾಗಿದೆ!

ಹೇಮಂತ್ ಕುಮಾರ್ ಜಿ.

ಮಂಡ್ಯ ಜಿಲ್ಲೆಯ ರೈತರ ಬದುಕು ಬವಣೆಯ ಸ್ಥಿತ್ಯಂತರವನ್ನು ಕಾಣಬೇಕೆಂದರೆ ಕನ್ನಂಬಾಡಿ ಕಟ್ಟೆ ನಿರ್ಮಾಣ ಪೂರ್ವದ ಬದುಕು ಮತ್ತು ನಿರ್ಮಾಣ ನಂತರದ ಇದುವರೆಗಿನ ಚಿತ್ರಣವನ್ನು ಗಮನಿಸಬೇಕು. ಕನ್ನಂಬಾಡಿ ಅಣೆಕಟ್ಟೆ ನಿರ್ಮಾಣದ ಪೂರ್ವದಲ್ಲಿನ ಮಂಡ್ಯ ಜನರ ಬದುಕು ಹೇಗಿತ್ತು ಎಂಬುದರ ಕಲ್ಪನೆ ಈಗಿನವರಿಗೆ ಸಿಗಲಿಕ್ಕಿಲ್ಲ. ಶತಾಯುಷಿಗಳನ್ನು ಕೇಳಿದರೆ ಹೇಳಬಹುದಷ್ಟೆ. ರಾಜರ ಕಾಲದಲ್ಲಿನ ಕೆರೆ ಕಟ್ಟೆಗಳು, ಮಳೆಯಾಶ್ರಿತವಾದ ಬೆಳೆಗಳೇ ಜೀವಾಳವಾಗಿದ್ದ ಕಾಲ ಅದು. ಹಬ್ಬ ಹರಿದಿನಗಳಲ್ಲಿ ಮಾತ್ರ ಅನ್ನ ಕಾಣುತ್ತಿದ್ದ ಕಾಲವದು. ಕೆರೆ ಅಚ್ಚುಕಟ್ಟಿದ್ದರೆ ಭತ್ತ, ಖುಷ್ಕಿ ಜಮೀನಿನಲ್ಲಿ ರಾಗಿ, ಜೋಳ, ಹುರುಳಿ ಬೆಳೆಯುತ್ತಿದ್ದ ರೈತರು ತಕ್ಕಮಟ್ಟಿಗೆ ಇದ್ದುದರಲ್ಲೇ ಸಮಾಧಾನ ಕಂಡುಕೊಂಡಿದ್ದರು. ಚಿನ್ನಾಭರಣ, ಬೈಕು ಕಾರುಗಳನ್ನು ಕಾಣದಿದ್ದರೂ ಹಬ್ಬ ಹರಿದಿನ, ಜಾತ್ರೆ, ಉತ್ಸವಗಳು, ಪೌರಾಣಿಕ ನಾಟಕಗಳಲ್ಲೇ ಮನರಂಜನೆ ಕಂಡು ಸಂಭ್ರಮಿಸಿದ್ದರು.

ಮನೆಯ ಮಕ್ಕಳು ಗ್ರಾಮೀಣ ಆಟೋಟಗಳಲ್ಲಿ ಖುಷಿಯಾಗಿದ್ದರು. ಯುವಕರು ಕೆಲಸಕ್ಕಾಗಿ ವಲಸೆ ಹೋಗುವ ಪ್ರಮೇಯವಿರಲಿಲ್ಲ. ನಂದಗೋಕುಲದಂತಿದ್ದ ಮನೆಗಳಲ್ಲಿ ಹಾಲು, ಮೊಸರು, ಬೆಣ್ಣೆ, ತುಪ್ಪ ಉಂಡು ದೃಢಕಾಯರಾಗಿದ್ದ ಯುವಜನತೆ ವೃದ್ಧ ತಂದೆ ತಾಯಿಯರನ್ನು ಅಕ್ಕರೆಯಿಂದ ನೋಡಿಕೊಂಡಿದ್ದರ ಬಗ್ಗೆ ಹಿರಿಯರು ಈಗಲೂ ಸ್ಮರಿಸುತ್ತಾರೆ.

ಮದುವೆಗಳು ಮನೆ ಮುಂದೆಯೇ ನಡೆಯುತ್ತಿದ್ದ ಕಾಲ. ತೊಟ್ಟಿ ಮನೆ, ಅಂಕಣದ ಮನೆಗಳಲ್ಲಿ ನೆಂಟರಿಷ್ಟರೆಲ್ಲ ಕೂಡಿ ನಲಿದಾಡುತ್ತಿದ್ದ ವೈಭವ ಈಗಿನವರಿಗೆ ಕಲ್ಪನೆಗೂ ಸಿಗದಂತಹ ಸಮೃದ್ಧ ಬಾಂಧವ್ಯದ ಸನ್ನಿವೇಶ ಆಗಿತ್ತು. ಜನರಲ್ಲಿ ಹಣಕಾಸು ವಹಿವಾಟು ಏನೇನೂ ಇರದಿದ್ದ ಸನಿವೇಶದಲ್ಲಿ ಬಹುತೇಕ ಎಲ್ಲರೂ ಆರೋಗ್ಯದಿಂದಿದ್ದರು. ಆಧುನಿಕತೆಯ ಸೋಂಕಿನಿಂದ ದೂರವಿದ್ದ ಅಂದಿನ ಸಮಾಜದಲ್ಲಿ ಹೃದಯಾಘಾತ, ರಕ್ತದೊತ್ತಡ, ಮಧುಮೇಹ ಮುಂತಾದ ಪದಗಳನ್ನೇ ಕೇಳದಿದ್ದ ಜನರಿಗೆ ನಾಟಿ ಪಂಡಿತರೇ ವೈದ್ಯರು. ಮಹಿಳೆಯರಿಗೆ ಕೈ ತುಂಬ ಕೆಲಸ. ರಾಗಿ ಬೀಸುವುದು, ಬಾವಿಯಲ್ಲಿ ನೀರು ಸೇದುವುದು, ಖಾರ, ಸಂಪಳ ರುಬ್ಬುವುದು, ಬೆರಣಿ ತಟ್ಟುವುದು, ಕೆರೆಕಟ್ಟೆಗೆ ಹೋಗಿ ಬಟ್ಟೆ ಒಗೆದುಕೊಂಡು, ಪಾತ್ರೆ ತೊಳೆದುಕೊಂಡು ಬರುತ್ತಿದ್ದ ಮಹಿಳೆಯರು ಗಟ್ಟಿಗಿತ್ತಿಯರಾಗಿದ್ದರು. ಸ್ಥೂಲಕಾಯದ ಒಬ್ಬ ಮಹಿಳೆಯೂ ಕಾಣಸಿಗುತ್ತಿರಲಿಲ್ಲ. ಸೌದೆ ಒಲೆ, ಮಡಿಕೆ ಕುಡಿಕೆಗಳೇ ಹೆಚ್ಚು ಬಳಕೆಯಲ್ಲಿದ್ದ ಕಾಲ. ಸಮಾಜದ ಎಲ್ಲ ಸ್ಥರದ ಜನಾಂಗದವರಿಗೂ ಅವರವರದೇ ಆದ ಕಸುಬುಗಳು. ಹೀಗೆ ಎಲ್ಲ ವರ್ಗಗಳಿಂದ ಕೂಡಿರುತ್ತಿದ್ದ ಗ್ರಾಮೀಣ ಚಿತ್ರಣ ಎಷ್ಟು ಚಂದವಿತ್ತು ಗೊತ್ತೆ ಎಂಬ ನಿಟ್ಟುಸಿರು ಹಿರಿಯರ ಮನದಾಳದಿಂದ ವ್ಯಕ್ತವಾಗುತ್ತದೆ.

ಕಟ್ಟೆ ನಿರ್ಮಾಣವಾದ ಬಳಿಕ, ಅದರಲ್ಲೂ ಸ್ವಾತಂತ್ರೋತ್ತರವಾದ ಮಂಡ್ಯ ಜಿಲ್ಲೆಯ ಈ ದಿನಗಳ ವರೆಗಿನ ಬೆಳವಣಿಗೆ ಸಮೃದ್ಧ ಅಭಿವೃದ್ಧಿಯ ಚಿತ್ರಣ ಕಣ್ಣಿಗೆ ರಾಚುತ್ತದೆಯಾದರೂ ಅನ್ನದಾತ ರೈತನ ಮನೆಯಲ್ಲಿ ನೆಮ್ಮದಿಯಿಲ್ಲ. ೧೯೩೩ರ ವೇಳೆಗಾಗಲೇ ಕನ್ನಂಬಾಡಿ ಅಣೆಕಟ್ಟೆ ಮೂಲಕ ಹುಲಿಕೆರೆ ಸುರಂಗದಿಂದ ಮಂಡ್ಯ ಪ್ರದೇಶಕ್ಕೆ ಬಂದ ಕಾವೇರಿ ನೀರು ಮಂಡ್ಯದ ಶುಷ್ಕ ಪ್ರದೇಶವನ್ನು ಹಸಿರೀಕರಣಗೊಳಿಸಿದ್ದು ಇತಿಹಾಸ.
ಆ ನಂತರದ ದಿನಗಳಲ್ಲಿ ಮಂಡ್ಯ ಹಸಿರಾಗಿ ನಳನಳಿಸಿದ್ದು ನಿಜ. ಸರ್ ಎಂ.ವಿಶ್ವೇಶ್ವರಯ್ಯ ಅವರು ‘ಕನ್ನಂಬಾಡಿ ಪೂರ್ಣಗೊಂಡರೆ ನಿಮ್ಮ ಬದುಕು ಬಂಗಾರವಾಗುತ್ತದೆ. ಪ್ರತಿಯೊಬ್ಬ ರೈತನ ಮನೆಯಲ್ಲೂ ಧವಸ ಧಾನ್ಯ ಧನ ಕನಕಗಳೇ ಅವತರಿಸುತ್ತದೆ’ ಎಂದಿದ್ದರಂತೆ. ಅದು ನಿಜವಾಯಿತು ಕೂಡ. ಆಲೆಮನೆಗಳು, ಸಕ್ಕರೆ ಕಾರ್ಖಾನೆಗಳು, ಬಿನ್ನಿ ರೈಸ್ ಮಿಲ್‌ಗಳು, ವೈವಿಧ್ಯಮಯವಾದ ತಾಂತ್ರಿಕ, ಯಾಂತ್ರಿಕತೆಗಳೂ ಬೆಳೆದವು, ರೈತ ಕೈಗೆ ಮಣ್ಣು ಮಾಡಿಕೊಳ್ಳದೇ ಯಂತ್ರಗಳಿಂದ ಫಸಲು ತೆಗೆದು ಚೀಲಕ್ಕೆ ತುಂಬುವವರೆಗೂ ತಾಂತ್ರಿಕತೆ ಬೆಳೆದು ನಿಂತಿದೆ.

ಆದರೆ ರೈತ ಸುಖವಾಗಿಲ್ಲ. ಬಂಡವಾಳ ಹೂಡಿ ಬೆಳೆದ ಬೆಳೆ ಒಮ್ಮೊಮ್ಮೆ ಕೈಗೆ ಸಿಗುವುದಿಲ್ಲ, ಸಿಕ್ಕರೆ ಬೆಲೆ ಇರುವುದಿಲ್ಲ. ಮಂಡಿ ಉದ್ದ ಬೆಳೆ ಎದೆಮಟ್ಟ ಸಾಲ ಎನ್ನುವಂತಾಯಿತು. ಕಬ್ಬು ಬೆಳೆದ ಬೆಳೆಗಾರ ಒಣಗಿದ ಕಬ್ಬನ್ನು ನೋಡಲಾರದೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾದ ಘಟನೆ ಈಗಲೂ ಹಸಿರಾಗಿದೆ. ಆ ನಂತರದಲ್ಲಿ ಸಾಲು ಸಾಲು ಆತ್ಮಹತ್ಯೆಗಳು, ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣು ಎಂತಲೋ, ವಿಷ ಕುಡಿದು ಕುಟುಂಬದವರನ್ನು ಬಿಟ್ಟು ಹೊರಟುಹೋದ ಎಂತಲೋ ದಿನನಿತ್ಯ ಸುದ್ದಿಗಳು ಬರಲಾರಂಭಿಸಿದವು. ಸರ್ಕಾರ ರೈತರ ಸಾಲ ಮನ್ನಾ ಮಾಡಿದರೂ ಚೇತರಿಸಿಕೊಳ್ಳಲಾರದ ಅವ್ಯವಸ್ಥೆಯಾಗಿದ್ದನ್ನು ಜಿಲ್ಲೆಯ ಜನ ಕಂಡು ನೊಂದಿದ್ದಾರೆ.

ಇದೆಲ್ಲ ಬೆಳವಣಿಗೆಗಳಿಂದ ಬೇಸತ್ತ ಹಳ್ಳಿ ರೈತನ ಮಕ್ಕಳು ನೌಕರಿಗಾಗಿ ದೂರದ ಬೆಂಗಳೂರು, ಮುಂಬೈ ಮಹಾನಗರಗಳತ್ತ ಹೋಗಿದ್ದಾರೆ. ಊರ ದೊಡ್ಡಹಬ್ಬದಂದು ಮಾತ್ರ ಗ್ರಾಮಗಳು ಕಳೆಗಟ್ಟುತ್ತವೆ. ಉಳಿದ ದಿನ ಹಳ್ಳಿಗಳು ವೃದ್ಧಾಶ್ರಮದಂತಾಗುವ ಹಲವು ನಿದರ್ಶನಗಳೂ ಇಲ್ಲಿವೆ. ಈ ನಡುವೆ ಗ್ರಾಮೀಣ ಜನರಿಗೇ ಅಧಿಕಾರ ಕೊಡುವಂತಹ ಗ್ರಾಮ ಪಂಚಾಯಿತಿ ವ್ಯವಸ್ಥೆ ಅಸ್ತಿತ್ವಕ್ಕೆ ಬಂದು ಗ್ರಾಮ ಪಂಚಾಯಿತಿ ಆಡಳಿತ ತಮ್ಮ ಗ್ರಾಮಗಳನ್ನು ತಾವೇ ಉದ್ಧಾರ ಮಾಡಿಕೊಳ್ಳುವಂತಹ ಅಧಿಕಾರವನ್ನು ಸರ್ಕಾರ ನೀಡಿದೆ. ಇದರಿಂದ ಸಾಕಷ್ಟು ಕೆಲಸಗಳಾಗಿವೆ. ಅದರೊಂದಿಗೇ ರಾಜಕೀಯ ಮನೆಮನೆಗೂ ವಕ್ಕರಿಸಿ, ಮನೆ ಮನಗಳನ್ನು ಒಡೆದಿರುವ ದೃಷ್ಟಾಂತವೂ ಕಣ್ಣೆದುರಿಗಿದೆ. ಸಹೋದರರು, ಅಪ್ಪ ಮಕ್ಕಳು, ಅತ್ತೆ ಸೊಸೆಯರೇ ಎದುರಾಳಿಗಳಾಗಿ ರಣಾಂಗಣವಾಗಿ ಮಾರ್ಪಡುವ ಪಂಚಾಯಿತಿ ಚುನಾವಣೆ ಎಂದರೆ ಕುಡುಕರು, ಪುಂಡರಿಗೆ ಹಬ್ಬದ ಸಂಭ್ರಮವಾದರೆ, ಸಭ್ಯತೆಯ ಕುಟುಂಬಗಳಿಗೆ ಸೂತಕದ ದಿನಗಳಿದ್ದಂತೆ.

ಹೀಗೆ ರೈತರ ಬದುಕು ಸ್ಥಿತ್ಯಂತರದಲ್ಲಿದ್ದು, ಹಲವರು ಜಮೀನುಗಳನ್ನು ಅನ್ಯ ಉದ್ಯಮಗಳಿಗೆ ಬಾಡಿಗೆ ಕೊಟ್ಟು ಮನೆಯಲ್ಲಿದ್ದಾರೆ. ಮತ್ತೆ ಕೆಲವರು ಇತರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರೆ, ಸ್ವಂತ ಜಮೀನು, ಮನೆ ಮಠವಿಲ್ಲದವರು ದೊಡ್ಡ ನಗರಗಳಲ್ಲಿ ಬದುಕು ಕಂಡುಕೊಳ್ಳಲು ಹೋಗಿದ್ದಾರೆ. ಹಾಗಾಗಿ ಮಂಡ್ಯದ ಗ್ರಾಮೀಣ ಪ್ರದೇಶದಲ್ಲೀಗ ಹಿಂದಿನ ಹಳ್ಳಿ ಸೊಗಡೂ ಇಲ್ಲ ಸೊಗಸೂ ಇಲ್ಲದಂತಾಗಿದೆ!

 

 

 

andolana

Recent Posts

ಗಣೇಶೋತ್ಸವದ ವೇಳೆ ಪ್ರಸಾದಕ್ಕೆ ಪರವಾನಗಿ ಕಡ್ಡಾಯ ಆದೇಶಕ್ಕೆ ಪ್ರಹ್ಲಾದ್‌ ಜೋಶಿ ಆಕ್ರೋಶ

ಹುಬ್ಬಳ್ಳಿ: ಗಣೇಶೋತ್ಸವ ಆಚರಣೆ ವೇಳೆ ಪೆಂಡಾಲ್‌ಗಳಲ್ಲಿ ಪ್ರಸಾದ ಸಿದ್ಧಪಡಿಸಲು ಆಹಾರ ಸುರಕ್ಷತಾ ಇಲಾಖೆ ಪರವಾನಗಿ ಪಡೆಯಬೇಕು ಎಂಬ ರಾಜ್ಯ ಸರ್ಕಾರದ…

2 hours ago

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ ಸಾಂಸ್ಕೃತಿಕ ನಗರಿ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ದಸರಾ ಕೆಲಸಗಳು ಭರದಿಂದ ಸಾಗುತ್ತಿವೆ. ನಾಡಹಬ್ಬ…

2 hours ago

ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ: ಅಮಿತ್‌ ಶಾ ಗಂಭೀರ ಆರೋಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಸ್ಥಾಪಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌…

2 hours ago

ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್‌

ರಾಮನಗರ: ಕನಕಪುರ ತಾಲ್ಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತ ನೀರಾವರಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರೀಕ್ಷಾರ್ಥ ಚಾಲನೆ…

3 hours ago

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

11 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

11 hours ago