Categories: ಆಂದೋಲನ 50

ಬದುಕು ಬದಲಾಗಿಲ್ಲ, ಜವಾಬ್ದಾರಿ ಬಂದಿದೆಯಷ್ಟೇ.. : ತ್ರಿಶಿಕಾ ಕುಮಾರಿ

ದೇಶಕ್ಕೆ ಸ್ವಾತಂತ್ರ್ಯದ ಬೆಳಕು ಸಿಕ್ಕಿದ ಕೂಡಲೇ ಅರಸೊತ್ತಿಗೆ ತೊರೆದು ಪ್ರಜೆಗಳ ಜತೆ ಒಂದಾಗಿದ್ದು ಮೈಸೂರು ರಾಜಮನೆತನದ ಹೆಗ್ಗಳಿಕೆ. ಪ್ರಜೆಗಳಿಗೆ ರಾಜವಂಶದವರ ಮೇಲೆ ಈಗಲೂ ಅದೇ ಗೌರವ ಭಾವ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಮನೆತನದ ಉತ್ತರಾಧಿಕಾರಿಯಾದಾಗ, ರಾಜಸ್ಥಾನದ ರಾಜಕುವರಿಯನ್ನು ವಿವಾಹವಾದಾಗ, ಈ ದಂಪತಿ ಮುದ್ದಾದ ಮಗುವಿಗೆ ಜನ್ಮ ನೀಡಿದಾಗ ತಮ್ಮದೇ ಮನೆಯ ಸಮಾರಂಭವೆಂಬಂತೆ ಜನರು ಸಂಭ್ರಮಿಸಿದ್ದರು. ಜೈಪುರದ ರಾಜಕುವರಿ ಮೈಸೂರಿನ ಜನರ ಪಾಲಿಗೆ ಈಗ ಮಹಾರಾಣಿ. ಅವರ ಬಗ್ಗೆ ಹೆಚ್ಚು  ತಿಳಿದುಕೊಳ್ಳುವ ಆಸಕ್ತಿ. ರಾಜಮಾತೆಯನ್ನು, ಪತಿಯನ್ನು ಅನುಸರಿಸುತ್ತಾ ಸಾಮಾನ್ಯರಂತೆ ಬದುಕು ಸಾಗಿಸುತ್ತಿರುವ ತ್ರಿಷಿಕಾ ಕುಮಾರಿ ಅವರೀಗ ಮೈಸೂರಿನ ಹುರುಳಿ ಸಾರನ್ನು, ಡಾ. ರಾಜ್ ಅವರ ಚಿತ್ರವನ್ನು ಇಷ್ಟಪಡುವ ಅಪ್ಪಟ ಕನ್ನಡತಿ. ೫೦ರ ಸಂಭ್ರಮದಲ್ಲಿರುವ ಆಂದೋಲನ ದಿನಪತ್ರಿಕೆ ಜತೆ ಅವರು ಮನ ಬಿಚ್ಚಿ ಮಾತನಾಡಿದ್ದಾರೆ.

ಸಂದರ್ಶನ: ರಶ್ಮಿ ಕೋಟಿ

• ಜಯಪುರದ ಯುವರಾಣಿಯಾದ ನಿಮಗೆ ಮೈಸೂರಿನ ಮಹಾರಾಣಿಯಾಗಿ ಹೇಗೆ ಅನಿಸುತ್ತಿದೆ?

 ನಾನು ವಿದ್ಯಾಭ್ಯಾಸದ ಕಾರಣ ಹೆಚ್ಚಿನ ಕಾಲ ಬೆಂಗಳೂರಿನಲ್ಲೇ ವಾಸವಿದ್ದೆ. ನನ್ನ ಲೈಫ್ ಸ್ಟೈಲ್ ನಾರ್ಮಲ್ ಆಗಿತ್ತು. ಶಾಲೆಗೆ ಹೋಗುವುದು, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ನೃತ್ಯಾಭ್ಯಾಸಕ್ಕೆ ಹಾಜರಾಗುವುದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದು ಹೀಗೆ..

ಇಲ್ಲಿ ಅರಮನೆಯಲ್ಲಿಯೂ ನಾವು ಸರಳವಾದ ಜೀವನಶೈಲಿಯನ್ನೇ ಹೊಂದಿದ್ದೇವೆ, ಬದಲಾಗಿರುವ ಏಕೈಕ ವಿಷಯವೆಂದರೆ ಈಗ ನನಗೆ ದೊಡ್ಡ ಜವಾಬ್ದಾರಿ ಇದೆ.

• ಯುವ ರಾಣಿಯಾಗಿ ಕಾರ್ಯನಿರ್ವಹಿಸಲು ನಿಮಗೆ ರಾಜಮಾತೆ ಪ್ರಮೋದಾದೇವಿಯವರ ಸಲಹೆಗಳೇನು?

 ನಾನು ಮಾಡುವ ಪ್ರತೀ ಕಾರ್ಯಕ್ಕೂ ಅವರ ಆಶೀರ್ವಾದ ಮತ್ತು ಸಲಹೆ ಅಗತ್ಯ. ಅವರು ಪ್ರತಿಯೊಂದು ಕಾರ್ಯದಲ್ಲೂ ಸಹಾಯವನ್ನು ಮಾಡುತ್ತಾರೆ, ಅದು ದೊಡ್ಡದಾಗಿರಲಿ ಅಥವಾ ಸಣ್ಣದಾಗಿರಲಿ.

• ಅರಮನೆಯಲ್ಲಿ ನಿಮ್ಮ ದಿನಚರಿ ಹೇಗಿರುತ್ತದೆ?

ನಾನು ಬೆಳಿಗ್ಗೆ  ೫:೦೦ ರ ಸುಮಾರಿಗೆ ಎದ್ದು ಯೋಗಾಭ್ಯಾಸ ಮಾಡುತ್ತೇನೆ. ನಂತರ ಮಗನನ್ನು ಶಾಲೆಗೆ ಸಿದ್ಧಗೊಳಿಸುತ್ತೇನೆ. ನಂತರ ನಾನು ನನ್ನ ಪತಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ನಮ್ಮ ‘ದಿ ಲಿಟಲ್ ಬಂಟಿಂಗ್’ ಕಂಪನಿ ಮತ್ತು ಇತರ ಅನೇಕ ಕಾರ್ಯಗಳಲ್ಲಿ  ಸಹಾಯ  ಮಾಡುತ್ತೇನೆ. ಮನೆಯ ಎಲ್ಲಾ ಕೆಲಸಗಳನ್ನೂ ಪೂರ್ಣಗೊಳಿಸಿ ನನ್ನ ಮಗನನ್ನು ಶಾಲೆಯಿಂದ ಕರೆತಂದು ಸ್ವಲ್ಪ ಸಮಯದ ವಿಶ್ರಾಂತಿಯ ನಂತರ ಅವನ ಸಂಜೆಯ ಕ್ರೀಡೆಗಳು ಮತ್ತು ಇತರ ತರಗತಿಗಳಿಗೆ ಸಿದ್ಧರಾಗುತ್ತೇವೆ. ಸಂಜೆ ಕುಟುಂಬದ ಜೊತೆಗೆ ಸಮಯ ಕಳೆಯುತ್ತೇನೆ.

• ದಸರಾಗೆ ಹೇಗೆ ತಯಾರಿ ನಡೆಸುತ್ತೀರಿ?

ಈ ವಿಷಯದಲ್ಲಿ ನಾನು ತುಂಬಾ ಅದೃಷ್ಟವಂತೆ, ಹೆಚ್ಚಿನ ಕೆಲಸವನ್ನು ನನ್ನ ಅತ್ತೆಯವರು ಮಾಡುತ್ತಾರೆ. ನಾನು ಅವರ ಹೆಜ್ಜೆಗಳನ್ನು ಅನುಸರಿಸುತ್ತೇನೆ.

• ನಿಮಗೆ ಓದುವ ಹವ್ಯಾಸ ಇದೆ ಎಂದು ಕೇಳಿದ್ದೇವೆ. ಅರಮನೆಯಲ್ಲಿ ನಿಮ್ಮದೇ ಆದ ಲೈಬ್ರರಿ ಕೂಡ ಇದೆಯಂತೆ. ನಿಮ್ಮ ನೆಚ್ಚಿನ ಲೇಖಕರು ಹಾಗೂ ಪುಸ್ತಕ ಯಾವುದು? ಯಾಕೆ?

ನಾನು ಇತಿಹಾಸ, ತೋಟಗಾರಿಕೆ ಮತ್ತು ಅಡುಗೆಯ ಕುರಿತು ಓದು ಇಷ್ಟ. ನಾನು ಅಡುಗೆಯ ವಿವಿಧ ಹೊಸ ನೈತಿಕ ವಿಧಾನಗಳ ಬಗ್ಗೆ, ನಮ್ಮ ಮನೆಯ ತೋಟದಲ್ಲೇ ಕೆಲ ತರಕಾರಿಗಳನ್ನು  ಬೆಳೆಯುವ ಬಗ್ಗೆ  ಮತ್ತು ವಿವಿಧ ಬಗೆಯ ಅಡುಗೆ ಪುಸ್ತಕಗಳನ್ನು ಸಂಗ್ರಹಿಸುತ್ತೇನೆ.

• ಆದಿವಾಸಿ ಮಕ್ಕಳ ಕುರಿತು ಪಿಹೆಚ್. ಡಿ ಮಾಡಬೇಕೆಂದು ಇದ್ದೀರಂತೆ. ಹೌದೇ?

ನಾನು ಅದನ್ನು ಪೂರ್ಣಗೊಳಿಸಲು ಬಯಸಿದ್ದೆ. ಆದರೆ ಕೆಲವು ವೈಯಕ್ತಿಕ ಕೆಲಸಗಳ ಒತ್ತಡದ ನಡುವೆ ಸಾಧ್ಯವಾಗಲಿಲ್ಲ.

ಮೈಸೂರಿನ ಪಾರಂಪರಿಕತೆಯನ್ನು ಉಳಿಸಲು ನಿಮ್ಮ ದೂರದೃಷ್ಟಿ ಏನು? ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಏನು ಮಾಡಬೇಕೆಂದು ನಿಮ್ಮ ಅನಿಸಿಕೆ?

ನಮ್ಮ ಮೈಸೂರು ಪರಂಪರೆ ಅಗಾಧವಾಗಿದೆ. ಅದನ್ನು ನನ್ನ ಅತ್ತೆಯವರಂತೆ ಉಳಿಸಿಕೊಂಡು ಹೋಗುವುದು ಅತ್ಯಂತ ಮುಖ್ಯವಾದುದು.

• ಜೈಪುರದ ಯಾವ ಒಳ್ಳೆಯ ಅಭ್ಯಾಸಗಳನ್ನು ಮೈಸೂರಿನಲ್ಲಿ  ಅನುಷ್ಠಾನಗೊಳ್ಳಬೇಕೆಂದು  ನೀವು ಬಯಸುತ್ತೀರಿ?

ಎರಡೂ ವಿಭಿನ್ನ ಸಂಸ್ಕೃತಿ ಮತ್ತು ನಾವು ಎರಡನ್ನೂ ಗೌರವಿಸಬೇಕು. ನಾನು ಇಲ್ಲಿಗೆ ಮದುವೆಯಾಗಿರುವುದರಿಂದ ನಮ್ಮ ಸುಂದರ ದಕ್ಷಿಣದ ಸಂಪ್ರದಾಯಗಳನ್ನು ಮುಂದುವರಿಸಲು ಬಯಸುತ್ತೇನೆ.

ಮಗ ಆದ್ಯವೀರ್ ನಲ್ಲಿ ಯಾವ ಮೌಲ್ಯಗಳನ್ನು ರೂಪಿಸಬೇಕೆಂದು ಇದ್ದೀರಿ?

ಯಾರೇ ಆಗಿರಲಿ, ಎಲ್ಲರೊಂದಿಗೂ ಗೌರವದಿಂದ ನಡೆದುಕೊಳ್ಳುವುದನ್ನು ನಾನು ಅವನಿಗೆ ಕಲಿಸುತ್ತೇನೆ. ಅವನು ಇತರರ ಬಗ್ಗೆ ಸಹಾನುಭೂತಿ ಮತ್ತು ತಿಳಿವಳಿಕೆಯನ್ನು ಹೊಂದಿರಬೇಕು ಮತ್ತು ಅವನ ಪೂರ್ವಜರ ಮಾರ್ಗವನ್ನು ಅನುಸರಿಸಬೇಕು.

ದಕ್ಷಿಣ ಭಾರತದ ಅಡುಗೆ ನಿಮಗೆ ಇಷ್ಟವಾಗಿದೆಯೇ ? ಮನೆಯವರಿಗೆ ರಾಜಸ್ತಾನಿ ಶೈಲಿ ಅಡುಗೆಯ ಸವಿ ಉಣ ಬಡಿಸಿದ್ದೀರಾ ?

ದಕ್ಷಿಣ ಭಾರತದ, ಅದರಲ್ಲೂ ದಕ್ಷಿಣ ಕರ್ನಾಟಕದ ಆಹಾರ ನನ್ನ ನೆಚ್ಚಿನದು. ಹುರುಳಿ ಸಾರು, ಬೇಳೆ ಸಾರು, ಮಸ್ಸೊಪ್ಪಿನ ಸಾರು ನನ್ನ ಮೆಚ್ಚಿನವು. ತಮಾಷೆ ಎಂದರೆ ನಾನು ರಾಜಸ್ಥಾನಿ ತಿನಿಸುಗಳನ್ನು  ಹೆಚ್ಚು ಇಷ್ಟಪಡುವುದಿಲ್ಲ.

• ರಾಜಮನೆತನದ ಪರಿವಾರವಾಗಿರುವುದರಿಂದ ಖಾಸಗಿ ಬದುಕಿಗೆ ಅವಕಾಶ ಕಡಿಮೆ ಎಂದು ಅನಿಸಿದ್ದಿದೆಯೇ ?

ಹಾಗೇನೂ ಇಲ್ಲ, ನಾನು ಮುಂಚೆ ಮಾಡುತ್ತಿದ್ದ ಎಲ್ಲವನ್ನೂ ಈಗಲೂ ಮಾಡುತ್ತೇನೆ.

ಪತಿಯ ಯಾವ ಗುಣ ನಿಮಗೆ ತುಂಬಾ ಇಷ್ಟ? ನಿಮ್ಮ ಯಾವ ಗುಣ ಅವರಿಗೆ ಹೆಚ್ಚು ಇಷ್ಟ..?

ನನ್ನ ಪತಿಗೆ ಇತಿಹಾಸದಲ್ಲಿ ಬಹಳ ಆಸಕ್ತಿ. ನಮ್ಮ ಕರ್ನಾಟಕದ ಇತಿಹಾಸದ ಬಗ್ಗೆ ಯಾವಾಗಲೂ, ಏನಾದರೂ ಒಂದು ವಿಷಯ ಹೇಳುತ್ತಿರುತ್ತಾರೆ. ನನಗದು ಇಷ್ಟ. ಅವರು ಯಾವಾಗಲೂ ಹೆಚ್ಚು ಉದ್ಯಮಶೀಲ ಚಟುವಟಿಕೆಗಳನ್ನು ಮಾಡಲು ನನ್ನನ್ನು ಪ್ರೋತ್ಸಾಹಿಸುತ್ತಿರುತ್ತಾರೆ. ನಾನು ಏನೇ ಮಾಡಿದರೂ ಪೂರ್ಣ ಮನಸ್ಸಿನಿಂದ ಬೆಂಬಲಿಸುತ್ತಾರೆ. ಅವರು ನನ್ನಲ್ಲಿರುವ ಅತ್ಯುತ್ತಮವಾದದ್ದನ್ನು ಹೊರತರುತ್ತಾರೆ ಮತ್ತು ಯಾವಾಗಲೂ ನನ್ನ ಬೆಂಬಲವಾಗಿ ನಿಂತಿರುತ್ತಾರೆ…

ಇನ್ನು ನನ್ನ ಬಗ್ಗೆ ಹೇಳಬೇಕೆಂದರೆ, ಅವರು ನನ್ನ ಅಡುಗೆಯನ್ನು ತುಂಬಾ ಆನಂದಿಸುತ್ತಾರೆ. ಅವರ ಆಲೋಚನೆಗಳು ಮತ್ತು ಕೆಲಸಗಳಲ್ಲಿ ನನ್ನ ಬೆಂಬಲವನ್ನು  ಪ್ರಶಂಸಿಸುತ್ತಾರೆ. ಅವರ ಪ್ರತಿಯೊಂದು ಪ್ರಯತ್ನದಲ್ಲಿಯೂ, ಯಾವಾಗಲೂ ನನ್ನ ಅನುಮೋದನೆಯನ್ನು ಹುಡುಕುತ್ತಾರೆ. ಅವರು, ನನ್ನ ಬದುಕಿನ ದೊಡ್ಡ ಉಡುಗೊರೆ.

ಯಾವುದಾದರೂ ಕನ್ನಡ ಸಿನಿಮಾ, ನಾಟಕಗಳನ್ನು ನೋಡಿದ್ದೀರಾ ? ಇಷ್ಟವಾದ ಸಿನಿಮಾ ಯಾವುದು ?

ನಾನು ಸ್ವತಂತ್ರ ಚಲನಚಿತ್ರಗಳನ್ನು ಮತ್ತು ಕೆಲವೊಮ್ಮೆ ಮುಖ್ಯವಾಹಿನಿಯನ್ನು ಆನಂದಿಸುತ್ತೇನೆ. ನನಗೆ ‘ತಿಥಿ’ ಚಲನಚಿತ್ರ ಇಷ್ಟವಾಗಿದ್ದು, ಇದನ್ನು ಮಂಡ್ಯದಲ್ಲಿ ಚಿತ್ರೀಕರಿಸಲಾಗಿದೆ. ನಮ್ಮ  ದಕ್ಷಿಣ ಕರ್ನಾಟಕದ ಹಳ್ಳಿಗಳನ್ನು ಈ ಚಿತ್ರದಲ್ಲಿ ವಿಶಿಷ್ಟವಾಗಿ ತೋರಿಸಿದ್ದಾರೆ. ನನ್ನ ಪತಿ ನನಗೆ ಗುಣಮಟ್ಟದ ಚಲನಚಿತ್ರಗಳನ್ನು ತೋರಿಸುತ್ತಾರೆ, ನನಗೆ ನಮ್ಮ ಕಾಡುಗಳು ತುಂಬಾ ಇಷ್ಟ. ಡಾ. ರಾಜ್‌ಕುಮಾರ್ ಅವರ ನಟನೆಯ ‘ಗಂಧದ ಗುಡಿ’ ಚಿತ್ರ ನೋಡಿ ತುಂಬಾ ಖುಷಿಪಟ್ಟಿದ್ದೆ. ನನ್ನ ಮಗನಿಗೆ ಈ ಚಿತ್ರದಲ್ಲಿ ಬರುವ ‘ನಾವಾಡುವ ನುಡಿಯೇ ಕನ್ನಡ ನುಡಿ’ ಅತ್ಯಂತ ನೆಚ್ಚಿನ ಹಾಡು.

andolana

Recent Posts

ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಗೆ ಸ್ವಾಗತ, ಮೋದಿಯವರ ಭಯದಿಂದ ಈ ಕ್ರಮ ವಿರೋಧಿಸುತ್ತಿರುವ ಕಾಂಗ್ರೆಸ್‌: ಆರ್‌.ಅಶೋಕ

ರಾಹುಲ್‌ ಗಾಂಧಿಯವರಿಗೆ ಪ್ರಬುದ್ಧತೆ ಇಲ್ಲ, ಮಕ್ಕಳಂತೆ ಆಟವಾಡುತ್ತಾರೆ ಬೆಂಗಳೂರು: ಒಂದು ದೇಶ, ಒಂದು ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ…

7 hours ago

ರೀಲ್ಸ್‌ ಪ್ರಿಯರಿಗೆ ಭರ್ಜರಿ ಆಫರ್:‌ ರೀಲ್ಸ್ ಟ್ಯಾಗ್ ಮಾಡಿ ಬಹುಮಾನ ಗೆಲ್ಲಿ

ಮೈಸೂರು: ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಧ್ಯೇಯ ವಾಕ್ಯದೊಂದಿಗೆ ಸೆಪ್ಟೆಂಬರ್‌ ಸೆ. 27 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು…

7 hours ago

ʻಕಾಟೇರʼನಿಗೆ ಕೋಳ ಬಿದ್ದು 100 ದಿನ: ಇಲ್ಲಿಯವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಕಂಪ್ಲಿಟ್‌ ಡೀಟೆಲ್ಸ್…‌

ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲು ಸೇರಿ ಇಂದಿಗೆ ಬರೊಬ್ಬರಿ 100 ದಿನ…

8 hours ago

ಕೃಷಿ ತಂತ್ರಜ್ಞಾನ ವರ್ಗಾವಣೆ ರಾಜ್ಯ ಸರ್ಕಾರದ ಆದ್ಯತೆ: ಎನ್ ಚಲುವರಾಯಸ್ವಾಮಿ

ಬೆಂಗಳೂರು: ಭೂಸಾರ ಹಾಗೂ ಇ ಸ್ಯಾಪ್ ಆ್ಯಪ್ ಗಳು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಪರಿಣಕಾರಿಯಾಗಿ ನೆರವಾಗಲಿವೆ .ಇದೇ ರೀತಿ ರೈತರಿಗೆ…

8 hours ago

ದಸರಾ ಚಲನಚಿತ್ರೋತ್ಸವ: ಕಿರುಚಿತ್ರ ಪ್ರದರ್ಶನ

ಮೈಸೂರು: ದಸರಾ ಚಲನಚಿತ್ರೋತ್ಸವ 2024 ರ ಅಂಗವಾಗಿ ಅಂತಿಮವಾಗಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲು ಕಿರುಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾಗಿರುತ್ತವೆ. ಅಭಿಜಿತ್ ಪುರೋಹಿತ್ ನಿರ್ದೇಶನದ…

8 hours ago

ಮೈಸೂರು: ಪೊಲೀಸ್‌ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಒತ್ತಾಯ

ಮೈಸೂರು: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಿ ಹಾಗೂ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು…

10 hours ago