ಆಂದೋಲನ 50

ಕೆ.ಆರ್‌.ನಗರ ಸಾಧಕರಿಗೆ ಆಂದೋಲನ ಸನ್ಮಾನ

ಆಂದೋಲನ ದಿನಪತ್ರಿಕೆಯ 50 ವರ್ಷಗಳ ಸಾರ್ಥಕ ಪಯಣದ ಅಂಗವಾಗಿ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳ ಅಭಿವೃದ್ಧಿ ಮುನ್ನೋಟದ ಸಂವಾದ ಕಾರ್ಯಕ್ರಮದಲ್ಲಿ ಇಂದು ತಾಲ್ಲೂಕಿನ ಇಬ್ಬರು ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಇಬ್ಬರೂ ಸವಾಲುಗಳನ್ನು ಮೆಟ್ಟಿ ನಿಂತು ಬದುಕನ್ನು ರೂಪಿಸಿಕೊಂಡವರು. ಸಾಮಾನ್ಯರಾಗಿದ್ದುಕೊಂಡೇ ಅಸಾಮಾನ್ಯರಾದವರು.

ಗಾಣದ ಎಣ್ಣೆಯಲ್ಲಿ ಸ್ವಾವಲಂಬನೆ ಕಂಡ ನವೀನ್

ಮೈಸೂರು: ಕೆ.ಆರ್. ನಗರದ ಹೆಬ್ಬಾಳು ಹೋಬಳಿಯ ಅಡಗನಹಳ್ಳಿ ಗ್ರಾಮದಲ್ಲಿ ಐದು ವರ್ಷಗಳ ಹಿಂದೆ ( 2017) ಎತ್ತಿನ ಗಾಣದ ಮೂಲಕ ಅಡುಗೆ ಎಣ್ಣೆ ತಯಾರಿಸುವ ಘಟಕ ಸ್ಥಾಪಿಸಿದ ಎಚ್. ಆರ್. ನವೀನ್ ಕುಮಾರ್ ಅಂದು ಹುಚ್ಚು ಸಾಹಸಿ ಎನಿಸಿಕೊಂಡಿದ್ದರು. ಇಂದು ಸ್ಥಳೀಯ 100ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಲ್ಲದೆ ದೇಶಾದ್ಯಂತ ರಾಸಾಯನಿಕ ಮುಕ್ತ ಎಣ್ಣೆ ಪೂರೈಸುತ್ತಾ ತಮ್ಮ ಸಾಹಸಕ್ಕೆ ಶಹಬ್ಬಾಸ್ ಗಿರಿ ಪಡೆಯುತ್ತಿದ್ದಾರೆ.
ನವೀನ್ ಕುಮಾರ್ ಇಂಜಿನಿಯರಿಂಗ್ ಮತ್ತು ಎಂಬಿಎ ಪದವಿ ಪಡೆದು ಸುಮಾರು 14 ವರ್ಷಗಳ ಕಾಲ ಐಟಿ ಕಂಪನಿಗಳಲ್ಲಿ ಉದ್ಯೋಗಿಯಾಗಿದ್ದವರು. ಗಾಂಧೀಜಿಯವರ ಸ್ವಾವಲಂಬನೆ ಮತ್ತು ಸ್ವದೇಶಿ ಚಿಂತನೆಗಳಿಂದ ಪ್ರಭಾವಿತರಾದ ಇವರು ಹಳ್ಳಿಗೆ ಮರಳಿ ಜನರಿಗೆ ಅನುಕೂಲವಾಗುವ ಕಿರು ಉದ್ಯಮ ಸ್ಥಾಪಿಸುವ ತುಡಿತದಲ್ಲಿದ್ದರು. ಸಹೋದ್ಯೋಗಿ ಸ್ನೇಹಿತರಾದ ಚಾಮರಾಜನಗರ ಮಹೇಶ್ ಮತ್ತು ಬೆಂಗಳೂರಿನ ಯೋಗೇಶ್ ಈ ಕಾರ್ಯದಲ್ಲಿ ಜತೆಗೂಡಿದರು. ಕೆ.ಆರ್. ನಗರದ ಅಡಗನಹಳ್ಳಿ ಗ್ರಾಮದಲ್ಲಿ ಎರಡು ಎಕರೆ ಜಮೀನು ಖರೀದಿಸಿ ಎತ್ತಿನ ಗಾಣದ ಮೂಲಕ ಅಡುಗೆ ಎಣ್ಣೆ ತೆಗೆಯುವ ಕೆಲಸ ಆರಂಭಿಸಿದರು.
ಆರಂಭದ ಎಲ್ಲ ಸವಾಲುಗಳನ್ನು ಮೀರಿ ಈಗ ಇವರ ಸಾಹಸ ಯಶಸ್ಸಿನತ್ತ ಹೆಜ್ಜೆ ಹಾಕಿದೆ. ಮೂರು ಲಕ್ಷ ರೂ. ಬಂಡವಾಳದೊಂದಿಗೆ ಆರಂಭಿಸಿದ ಒಂದು ಗಾಣ ಈಗ ಏಳು ಗಾಣಗಳಿಗೆ ವಿಸ್ತರಿಸಿದೆ. ಜತೆಗಿದ್ದ ಸ್ನೇಹಿತರೂ ತಮ್ಮ ತಮ್ಮ ಊರುಗಳಲ್ಲಿ ಎಣ್ಣೆ ಗಾಣಗಳನ್ನು ತೆರೆದಿದ್ದಾರೆ. ಕಡ್ಲೆ ಎಣ್ಣೆ, ಕೊಬ್ಬರಿ, ಎಳ್ಳೆಣ್ಣೆ, ಹುಚ್ಚೆಳ್ಳು ಎಣ್ಣೆಯಿಂದ ಆರಂಭವಾದ ಗಾಣದಲ್ಲಿ ಈಗ ಸುಮಾರು 9 ಬಗೆಯ ಎಣ್ಣೆಗಳನ್ನು ತೆಗೆಯಲಾಗುತ್ತಿದೆ. ಎಣ್ಣೆಯ ಜತೆಗೆ ಶುದ್ಧ ಅರಿಶಿನ ಪೌಡರ್, ಶುಂಠಿ ಪೌಡರ್ , ಇತ್ಯಾದಿ 60ಕ್ಕೂ ಹೆಚ್ಚು ದಿನಸಿ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಈಗ ಇವರ ‘ದೇಸಿರಿ’ ಉತ್ಪನ್ನಗಳು ಹೊರ ರಾಜ್ಯಗಳಲ್ಲೂ ಜನಪ್ರಿಯವಾಗಿವೆ. ಆ್ಯಪ್ ಮೂಲಕವೂ ಬುಕ್ಕಿಂಗ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಗಾಜಿನ ಬಾಟಲಿಗಳಲ್ಲಿ ಎಣ್ಣೆ ಪೂರೈಸುತ್ತಿರುವುದರಿಂದ ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗಿದೆ. ʼದೇಸಿರಿʼ ಉತ್ನನ್ನಗಳ ಮಾರಾಟದಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಸ್ಥಳೀಯರು ಇವರಿಂದ ನೇರವಾಗಿ ಖರೀದಿ ಮಾಡುತ್ತಿದ್ದಾರೆ. ಮೈಸೂರು ಮತ್ತು ಬೆಂಗಳೂರಿನ ಗ್ರಾಹಕರ ಮನೆ ಬಾಗಿಲಿಗೆ ಎಣ್ಣೆ ಮತ್ತು ಕಲಬೆರಕೆರಹಿತ ದಿನಸಿ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ಹೊರರಾಜ್ಯದವರಿಗೆ ಸ್ಟೀಲ್ ಟಿನ್ ಮೂಲಕ ಎಣ್ಣೆ ಕೊರಿಯರ್ ಮಾಡಲಾಗುತ್ತಿದೆ.
ದೇಶದ ಖಾದ್ಯ ಎಣ್ಣೆ ಉದ್ಯಮ ವಾರ್ಷಿಕ ಮೂರು ಲಕ್ಷ ಕೋಟಿ ರೂ. ವಹಿವಾಟು ನಡೆಸುತ್ತಿದೆ. ಆದರೆ ಕಂಪನಿಗಳ ಹಿಡಿತದಲ್ಲಿರುವ ಎಣ್ಣೆ ಉದ್ಯಮದಿಂದ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಜನರ ಆರೋಗ್ಯವೂ ಹಾಳಾಗುತ್ತಿದೆ. ಇಡೀ ದೇಶದ ಜನತೆ ಗಾಣದ ಎಣ್ಣೆ ಬಳಸಿದರೆ ದೇಹದ ಸ್ವಾಸ್ಥದ ಜತೆಗೆ ಹಳ್ಳಿಗಳ ಮತ್ತು ದೇಶದ ಆರ್ಥಿಕತೆಯ ಸ್ವಾಸ್ಥ್ಯ ಉಳಿಸಬಹುದು ಎನ್ನುವುದು ಇವರ ಆಶಯ. ಈ ನಿಟ್ಟಿನಲ್ಲಿ ನಾನಾ ಕಡೆಗಳಲ್ಲಿ ಗಾಣದ ಎಣ್ಣೆಯ ಪ್ರಚಾರವನ್ನೂ ನಡೆಸುತ್ತಿದ್ದಾರೆ. ನವೀನ್ ತಮ್ಮ ಸಾಧನೆಗಾಗಿ ರಾಜ್ಯ ಮಟ್ಟದ ಕೃಷಿ ಪಂಡಿತ (ಕೃಷಿ ಸಂಸ್ಕರಣೆ) ಪ್ರಶಸ್ತಿಗೆ ಪಾತ್ರರಾಗಿದ್ದಾರೆ.


ಅಶಕ್ತರ ಸೇವೆಯಲ್ಲಿ ಸಾರ್ಥಕತೆ ಕಾಣುವ ಹೇಮಂತಕುಮಾರ್

ಮೈಸೂರು: ಕೃಷ್ಣರಾಜನಗರ ಪಟ್ಟಣದ ಕಾಟ್ನಾಳು ಲಕ್ಕೇಗೌಡ ಹೇಮಂತಕುಮಾರ್ ಹುಟ್ಟಿನಿಂದಲೇ ವಿಕಲಚೇತನರು. ಕಾಲಿನ ಸಮಸ್ಯೆಗೆ ಒಳಗಾದವರು. ಮನೆಯಲ್ಲಿ ಮಗನಿಗೆ ಹೀಗೆ ಆಯಿತಲ್ಲ ಎಂದುಕೊಂಡು ಪೋಷಕರು ಎಂದೂ ಕೊರಗಲಿಲ್ಲ. ಮಗನಿಗೆ ಶಿಕ್ಷಣ ಕೊಡಿಸಿದರು. ಬಿಎಸ್ಸಿ ಪದವಿ ಮುಗಿಸಿದ ಹೇಮಂತ್ಕುಮಾರ್ ತಮ್ಮನ್ನು ತಾವು ಸಮಾಜ ಸೇವೆಗೆ ಅರ್ಪಿಸಿಕೊಂಡರು. ಇವರ ತಂದೆ ಕೆ.ಆರ್.ಲಕ್ಕೇಗೌಡರು ಕನ್ನಡ ಅಧ್ಯಾಪಕರಾಗಿ, ಪುರಸಭೆ ಸದಸ್ಯರಾಗಿ ಸಮಾಜದ ಪರವಾಗಿ ಕೆಲಸ ಮಾಡಿದವರು. ತಂದೆಯ ಹಾದಿಯನ್ನೇ ತುಳಿದ ಹೇಮಂತ್ ಅವರು ತಮ್ಮ ಸುತ್ತಮುತ್ತಲ ಅಶಕ್ತರ ಪಾಲಿನ ಆಪದ್ಬಾಂಧವರಾದರು.
ಕೆ.ಆರ್.ನಗರ, ಸಾಲಿಗ್ರಾಮ ತಾಲ್ಲೂಕಿನ ಯಾವುದೇ ವಿಕಲಚೇತನರು, ಅಬಲೆಯರು, ವೃದ್ದರು, ವಿಧವೆಯರು ತಮಗೆ ಸಿಗುವ ಮಾಸಾಶನ, ಪಾಸ್ ಸೇರಿ ಇತರೆ ಸವಲತ್ತುಗಳಿಗಾಗಿ ಕಚೇರಿಗೆ ಅಲೆಯುವ ಅಗತ್ಯವೇ ಇಲ್ಲ. ಅವರ ಮನೆ ಮಗನಂತೆ ಹೇಮಂತ್ಕುಮಾರ್ ಸದಾ ನಿಲ್ಲುತ್ತಾರೆ. ಬೆಳಗ್ಗೆ ಸೈಕಲ್ ಏರಿ ಹೊರಡುವ ಹೇಮಂತ್, ಅವರ ದಾಖಲೆಗಳನ್ನು ತೆಗೆದುಕೊಂಡು ಮೈಸೂರಿಗೆ ಬಂದು ಕಚೇರಿಗಳಲ್ಲಿ ಖುದ್ದು ತಾವೇ ನಿಂತು ಕೆಲಸ ಮಾಡಿಸಿಕೊಂಡು ಹೋಗಿ ಫಲಾನುಭವಿಗಳಿಗೆ ತಲುಪಿಸುತ್ತಾರೆ. ಇದು ೨೦ ವರ್ಷಕ್ಕೂ ಹೆಚ್ಚು ಕಾಲದಿಂದ ನಡೆದುಕೊಂಡು ಬಂದಿದೆ. ಈವರೆಗೆ ಸಹಸ್ರಾರು ಮಂದಿಗೆ ನೆರವಾಗಿದ್ದಾರೆ. ಯಾರಿಂದಲೂ ಹಣ ಪಡೆಯುವುದಿಲ್ಲ, ಮೋಸ ಮಾಡುವುದಿಲ್ಲ ಎನ್ನುವ ವಿಶ್ವಾಸದಿಂದ ಅಧಿಕಾರಿಗಳು ಹೇಮಂತ್ ಅವರು ತಂದ ದಾಖಲೆಗಳನ್ನು ಬೇಗನೇ ಮುಗಿಸಿಕೊಡುತ್ತಾರೆ. ಹಲವು ವರ್ಷಗಳಿಂದ ಹೇಮಂತ್ಕುಮಾರ್ ವಿಕಲಚೇತನರ ಜನತಾದರ್ಶನ ರೂಪಿಸುತ್ತಾ ಸೇವೆ ನೀಡುತ್ತಿದ್ದಾರೆ. ಕೆ.ಆರ್. ನಗರ ತಾಲ್ಲೂಕು ಅಂಗವಿಲಕರು, ವಿಧವೆಯರು, ವೃದ್ದರ ಸಂಘದ ಅಧ್ಯಕ್ಷರಾಗಿಯೂ ಹೇಮಂತ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ದೀನದಲಿತರಲ್ಲಿ ದೇವರನ್ನು ಕಾಣುವ ಹೇಮಂತ್ ಅಶಕ್ತರ ಪಾಲಿನ ಆಶಾಕಿರಣವಾಗಿದ್ದಾರೆ.

andolanait

Recent Posts

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ: ಜನತೆಗೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಹೀಟ್‌ ವೇವ್‌ ಎಚ್ಚರಿಕೆ…

1 hour ago

ಆರು ಹಸುಗಳ ಸಜೀವ ದಹನ ಪ್ರಕರಣ: ಆರೋಪಿ ಬಂಧನ

ಬೆಂಗಳೂರು: ಇಲ್ಲಿನ ಡಿ.ಜೆ.ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿ ಆರು ಹಸುಗಳನ್ನು ಸಜೀವ ದಹನ ಮಾಡಿದ್ದ ಪ್ರಕರಣಕ್ಕೆ…

2 hours ago

ಅಮರನಾಥ ಯಾತ್ರೆಗೆ ಏಪ್ರಿಲ್.15ರಿಂದ ನೋಂದಣಿ‌

ನವದೆಹಲಿ: ಇದೇ ಏಪ್ರಿಲ್.‌15ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್ ಪ್ರಾರಂಭವಾಗಲಿದ್ದು,…

2 hours ago

ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಕೊಡಗು: ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ.…

2 hours ago

ಪ್ರಧಾನಿ ಮೋದಿ-ರಾಹುಲ್ ಗಾಂಧಿ ಮಾತುಕತೆ: ವಿಡಿಯೋ ವೈರಲ್

ನವದೆಹಲಿ: ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ…

2 hours ago

ಮಂಡ್ಯ: ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ

ಮಂಡ್ಯ: ಮುಂಬರುವ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಅನುಕೂಲವಾಗುವಂತೆ ಯಾವುದೇ ಅಡಚಣೆಯಿಲ್ಲದೇ ವಿವಿಧ ಬೆಳೆಗಳಿಗೆ ಅವಶ್ಯಕವಾದ ರಸಗೊಬ್ಬರಗಳನ್ನು ನಿಯಮಾನುಸಾರ…

2 hours ago