Categories: ಆಂದೋಲನ 50

ವಿನಯವಂತಿಕೆಯ ವ್ಯಕ್ತಿತ್ವದ ಒಳಗಿದ್ದ ಹಟ, ಛಲ

-ದೇವನೂರ ಮಹಾದೇವ

ನನಗೆ ರಾಜಶೇಖರ ಕೋಟಿ ಅವರು ಮೊದಲು ಭೇಟಿಯಾದದ್ದು ಮೈಸೂರಿನ ನೂರಡಿ ರಸ್ತೆಯಲ್ಲಿ. ಅದು ಜೆಪಿ ಆಂದೋಲನದ ಕಾಲ. ಇಸವಿ ೧೯೭೫-೭೬ ಇರಬಹುದು. ಒಬ್ಬ ವ್ಯಕ್ತಿ ಜುಬ್ಬಾ ಹಾಕಿಕೊಂಡು, ಬ್ಯಾಗ್ ನೇತಾಕ್ಕೊಂಡು ತೇಜಸ್ವಿ ಜೊತೆಯಲ್ಲಿ ಮಾತನಾಡುತ್ತಿದ್ದರು. ನಾನು ಅವರ ಹತ್ತಿರಕ್ಕೆ ಹೋದೆ. ತೇಜಸ್ವಿ, ‘‘ ಏಯ್ ಎಲ್ಹೋಗಿದ್ದಯ್ಯಾ? ನಾನು ನಿನ್ಗೆ ಕಣ್ಣಾಕ್ಕೊಂಡು ಹುಡುಕ್ತಾ ಇದ್ದೀನಿ’’ ಅಂದರು. ‘‘ಯಾಕೆ’’ ಅಂದೆ. ‘‘ಒಂದು ಕಾರಣ ಇದೆ. ಇವರು ರಾಜಶೇಖರ ಕೋಟಿ ಅಂತ, ಧಾರವಾಡದಿಂದ ಬಂದಿದ್ದಾರೆ. ‘ಆಂದೋಲನ’ ಸಂಪಾದಕರು. ಅಲ್ಲಿ ನಡಿಸ್ತಾ ಇದ್ದರು. ಈಗ ಮೈಸೂರಿಗೆ ಬಂದಿದ್ದಾರೆ’’ ಎಂದರು. ನನಗೆ ಆವಾಗಲೇ ಗೊತ್ತಿತ್ತು, ‘ಆಂದೋಲನ’ ರಾಜಶೇಖರ ಕೋಟಿ ಅವರದ್ದು ಅಂತ. ಆದರೆ, ಅವರನ್ನು ನೋಡಿರಲಿಲ್ಲ. ಆಗ ಅವರನ್ನು ನೋಡಿ ನನಗೆ ಸಿಕ್ಕಾಪಟ್ಟೆ ಖುಷಿಯಾಯಿತು. ಅವರ ಮುಖಭಾವ ನೋಡಿದಾಗ ಬಹಳ ವಿನಯವಂತ ಅನಿಸಿತು. ಆ ವಿನಯವಂತ ಎಕ್ಸ್ಪ್ರೆಷನ್ ಒಳಗೆ ಅಷ್ಟೊಂದು ಹಟ ಇದೆ, ಛಲ ಇದೆ ಅಂತ ಗೊತ್ತಾಗುತ್ತಿರಲಿಲ್ಲ. ಅದಕ್ಕೆ ಅವರು ಗಡ್ಡ ಬಿಟ್ಟಿದ್ದು ಕಾರಣ ಇರಬಹುದು. ಆಮೇಲೆ ಬಹುಶಃ ಕೋಟಿ ಅವರು ಮೈಸೂರಿನಲ್ಲಿ ಉಳಿಯುವುದಕ್ಕೆ ತೇಜಸ್ವಿನೇ ಕಾರಣ. ಏಕೆಂದರೆ ಸ್ವಲ್ಪ ಹಣಕಾಸಿನ ನೆರವು ನೀಡಿ, ಒಂದು ಸೆಟಲ್ಮೆಂಟ್ ಮಾಡಿ, ‘‘ಇದನ್ನು ಪ್ರಿಂಟ್ ಮಾಡಿಸು. ಇಲ್ಲೇ ಮಾಡು. ನಾವೆಲ್ಲ ಒತ್ತಾಸೆಯಾಗಿರುತ್ತೇವೆ’’ ಅಂತ ಹೇಳಿದವರು ತೇಜಸ್ವಿ.

ಅದಾದ ಮೇಲೆ ಕೋಟಿ ಮತ್ತು ನಮ್ಮ ನಡುವೆ ಅದೇನೋ ಸಿಕ್ಕಾಪಟ್ಟೆ ಒಡನಾಟ ಶುರುವಾಗಿಬಿಟ್ಟಿತು. ಒಂದೇ ಮನೆಯವರು ಅನ್ನೋ ಥರ ಆಗ್ಹೋಯ್ತು. ಆವಾಗ ಪ್ರತಿದಿನ ಭೇಟಿ ಮಾಡುತ್ತಿದ್ದೆವು. ಅವರ ಪತ್ರಿಕೆಯ ಕೆಲಸಗಳಲ್ಲಿ ನಾನು ಕೂಡ ಭಾಗಿಯಾಗಿದ್ದೆ. ಬೇಕಾದರೆ ಈಗ ನನ್ನ ವಾಹನಕ್ಕೆ ಪ್ರೆಸ್ ಅಂತ ಬೋರ್ಡ್ ಹಾಕಿಕೊಳ್ಳಬಹುದು. ಪತ್ರಿಕೆಗೆ ಅಷ್ಟು ಕೆಲಸ ಮಾಡಿದ್ದೇನೆ. ಎಮರ್ಜೆನ್ಸಿ ಸಂದರ್ಭದಲ್ಲಿ ‘ಆಂದೋಲನ’ದಿಂದೇ ಪರ್ಮಿಷನ್ ತೆಗೆದುಕೊಂಡು ಪ್ರೆಸ್ ಅಂತ ಹಾಕಿಕೊಂಡಿದ್ದೆ. ಅಷ್ಟು ಕೆಲಸ ಮಾಡಿದ್ದೀನಿ ನಾನು. ಆಶ್ಚರ್ಯಕರವೆಂದರೆ, ಪ.ಮಲ್ಲೇಶ್ ಅವರ ಪ್ರೆಸ್ನಲ್ಲಿ ಆಂದೋಲನ ಪ್ರಿಂಟ್ ಆಗುವಾಗ ಫೋಟೊ ಶೀರ್ಷಿಕೆ ಅಥವಾ ಸುದ್ದಿಗೆ ಉಪ ಶೀರ್ಷಿಕೆ ಕೊಡುವುದಕ್ಕೆ ನಾನೇ ಆರ್ಟಿಸ್ಟ್. ಅಥವಾ ಪೋಸ್ಟ್ ರೈಟರ್ ಆಗಿಬಿಟ್ಟೆ. ಏಕೆಂದರೆ ಬೇರೆ ಯಾರೂ ಇರಲಿಲ್ಲ. ಈಗಲೂ ನೆನಸಿಕೊಂಡರೆ ಖುಷಿಯಾಗುತ್ತೆ, ಆಶ್ಚರ್ಯವೂ ಆಗುತ್ತದೆ. ನಾನು ಬೀಡಿ ಸೇದುತ್ತಿದ್ದೆ ಆವಾಗ. ಆ ಬೀಡಿಯ ಮೋಟಿನ ತುದಿಗೆ ಇಂಡಿಯನ್ ಇಂಕ್ ಹಾಕಿಕೊಂಡು ಬರೆಯುತ್ತಿದ್ದೆ. ಕೋಟಿ ಆಶ್ಚರ್ಯಚಕಿತರಾಗಿ, ‘‘ಏನ್ರೀಯಪ್ಪ ಇದು, ಹಿಂಗ್ ಬರಿತೀರಾ? ಕೈಬರಹ ಇಷ್ಟು ಚೆನ್ನಾಗಿದೆ’’ ಎನ್ನುತ್ತಿದ್ದರು. ನನಗೆ ಅಷ್ಟೆ ಸರ್ಟಿಫಿಕೇಟ್ ತುಂಬ ಖುಷಿಯಾಗುತ್ತಿತ್ತು. ಎಷ್ಟು ಕಷ್ಟ ಇತ್ತು ಅಂದರೆ, ನಾವು ಊಟ ಮಾಡಿದೆವಾ ಎಂಬುದು ಗೊತ್ತಾಗುತ್ತಿರಲಿಲ್ಲ. ನಿದ್ದೆ ಮಾಡಿದೆವಾ ಅದೂ ಗೊತ್ತಾಗುತ್ತಿರಲಿಲ್ಲ.

ಅಷ್ಟು ತನ್ಮಯತೆಯಿಂದ ಕೆಲಸ ಮಾಡುತ್ತಿದ್ದೆವು. ಅಲ್ಲಿಂದ ಕೋಟಿ ಅವರು ಕೊಪ್ಪಲಿಗೆ ಬಂದ ಮೇಲೆ ಒಡನಾಟ ಜಾಸ್ತಿಯಾಯಿತು. ಸಂಕಷ್ಟದ ಸಂದರ್ಭದಲ್ಲಿ ಕೋಟಿಗೆ ನೆರವಾದವರು ಬಹಳ ಜನ ಇದ್ದಾರೆ. ಅದರಲ್ಲಿಯೂ ಮೂರ್ನಾಲ್ಕು ಜನ ಪತ್ರಿಕೆ ನಿಂತೇ ಹೋಗುತ್ತದೆ ಎಂಬಂತಹ ಕಷ್ಟಕಾಲದಲ್ಲಿ ಕೈಕಟ್ಟಿಕೊಂಡಿದ್ದಾರೆ.

ಇಲ್ಲಿ ಇಬ್ಬರನ್ನು ನೆನಪಿಸಿಕೊಳ್ಳಬೇಕು. ಒಬ್ಬರು, ಪ್ರೊ.ರಾಮಲಿಂಗಂ. ತಮ್ಮ ನಿವೃತ್ತಿಯ ಹಣದಲ್ಲಿ ಸ್ವಲ್ಪ ಭಾಗವನ್ನು ತಂದು ಪತ್ರಿಕೆಗೆ ಹಾಕಿದ್ದರು. ಇನ್ನೊಬ್ಬರು ಜಯಲಕ್ಷ್ಮೀಪುರಂನಲ್ಲಿ ಯಾವುದೋ ಪ್ರಿಂಟಿಂಗ್ ಪ್ರೆಸ್ನಲ್ಲಿದ್ದವರು ಕೈಕಟ್ಟಿಕೊಳ್ಳುತ್ತಾರೆ. ಕೋಟಿ ಅವರ ಬಗ್ಗೆ ಏನೇನೊ ಹೇಳುತ್ತಾರೆ. ಆದರೆ, ನಾನು ಅವರ ಜೊತೆಯಲ್ಲೇ ಒಂದು ಭಾಗವೇ ಆಗಿಬಿಟ್ಟಿದ್ದೆ. ನನ್ನ ಬಗ್ಗೆ ಹಾಗೆ ಮಾಡಿದರು, ಹೀಗೆ ಮಾಡಿದರು ಅಂತ ಏನೇನೊ ಹೇಳುತ್ತಾರೆ. ಆದರೆ, ನನಗೆ ಲೆಕ್ಕಕ್ಕೇ ಬರುವುದಿಲ್ಲ. ಏಕೆಂದರೆ ನಾನು, ಕೋಟಿಯವರ ಕಷ್ಟ- ಸುಖದಲ್ಲಿ ಭಾಗಿಯಾಗಿಬಿಟ್ಟಿದ್ದೆ. ಎಷ್ಟು ಕಷ್ಟ ಇತ್ತು ಎನ್ನುವುದಕ್ಕೆ ಪ್ರೆಸ್ನಲ್ಲಿ ಕಂಪೋಜ್ ಮಾಡುವ ಒಬ್ಬರು ಕೋಟಿ ಅವರ ಆಫೀಸ್ಗೆ ಬರುತ್ತಿದ್ದರು. ಅವರು ಟಿಫನ್ ಬಾಕ್ಸ್ನಲ್ಲಿ ಊಟ ತರುತ್ತಿದ್ದರು. ಕೋಟಿ ಊಟ ಮಾಡಿರುತ್ತಿರಲಿಲ್ಲ. ಅಂದರೆ ಊಟ ಇದ್ದರೂ ಮಾಡಿರುತ್ತಿರಲಿಲ್ಲ ಅಂತ ಅಲ್ಲ. ಅವರಿಗೆ ಊಟಕ್ಕೇ ಇರುತ್ತಿರಲಿಲ್ಲ! ಆ ವ್ಯಕ್ತಿ ಸಾರ್, ಬನ್ನಿ ಊಟ ಮಾಡಿ ಅಂತ ಊಟ ಮಾಡಿಸುತ್ತಿದ್ದ! ಅವನನ್ನು ನಾವು ನೆನಪು ಮಾಡಿಕೊಳ್ಳಬೇಕು.

ನೆನಪು ಮಾಡಿಕೊಂಡು ಮಾತನಾಡುವುದು ನನಗೆ ಕಷ್ಟವಾಗುತ್ತಿದೆ. ನಮ್ಮೂರು ದೇವನೂರು ಗ್ರಾಮದಲ್ಲಿ ಇತ್ತೀಚೆಗೆ ನಮ್ಮ ಮಾವ ತೀರಿಕೊಂಡಿದ್ದರು. ಅವರನ್ನು ನೋಡಲು ಊರಿಗೆ ಹೋಗಿದ್ದೆ. ಅವರು ನನ್ನನ್ನು ತುಂಬ ಚೆನ್ನಾಗಿ ನೋಡಿಕೊಂಡಿದ್ದರು. ಪಿಯುಸಿ ಓದುವಾಗ, ಊಟಕ್ಕೆ ಇಲ್ಲದಿದ್ದಾಗ. ನನ್ನ ಮನಸ್ಸು ನಮ್ಮ ಅಣ್ಣ ಇನ್ನು ಬಂದಿಲ್ಲ ಏಕೆ ಅಂತ ಹುಡುಕುತ್ತಿತ್ತು. ಯಾರನ್ನೋ ಕೇಳಬೇಕೆನ್ನುವಷ್ಟರಲ್ಲಿ, ಇದ್ದಕ್ಕಿದ್ದಂತೆ ಹೊಳೆಯಿತು. ಓ, ಅಣ್ಣ ತೀರಿಕೊಂಡಿದ್ದಾನೆ ಅಂತ. ಈ ಥರ ನನ್ನದು ಎಡವಟ್ಟಾ? ಡಿಸ್ಕನೆಕ್ಟ್ ಆಗ್ತೀನಾ? ಗೊತ್ತಿಲ್ಲ ನನಗೆ. ಈ ಥರ ಆಗುವುದರಿಂದ ಸುಮಾರು ಜನರ ಬಗ್ಗೆ ನನಗೆ ಹಾಗೆ ಆಗಿದೆ. ಕೋಟಿ ಅವರ ಬಗ್ಗೆಯೂ ಅದೇ ರೀತಿ ಆಗಿದೆ. ಆದರೆ, ಕೋಟಿ ಅವರು ಇಲ್ಲಿಗೆ ಬಂದು ನೆಲೆಯಾದ ನೆನಪು ಇದೆಯಲ್ಲ, ಅದು ಒಂದು ಗಿಡ ಗಾಳಿಯ ಅಬ್ಬರಕ್ಕೆ ಇನ್ನೇನು ಕಿತ್ತುಕೊಂಡು ಹೋಗಿಬಿಡುತ್ತದೆ ಎಂಬ ಹಂತದಲ್ಲಿ ಸೆಟೆದು ನಿಂತುಕೊಂಡು ಬಿಡುತ್ತದಲ್ಲ, ಅದರ ಚೈತನ್ಯ ಅಸಾಧಾರಣ ಅನಿಸಿಬಿಡುತ್ತದೆ. ಕೋಟಿಯವರು ಹಾಗೆಯೇ ಇದ್ದರು. ಕೋಟಿಯವರು ಹೇಗೆ ಇಂಪ್ರೆಸ್ ಆಗಿದೆ ಎಂದರೆ, ಕೋಟಿ ನಿಜವಾದ ಅರ್ಥದಲ್ಲಿ ಕೋಟ್ಯಧೀಶರಾದರು. ಆದರೆ, ನನಗೆ ತಾಪತ್ರಯ ಇದ್ದಾಗ ಅವರ ಹತ್ತಿರ ದುಡ್ಡು ಕೇಳುವುದಕ್ಕೆ ಮನಸ್ಸು ಒಪ್ಪುತ್ತಿರಲಿಲ್ಲ. ಏಕೆಂದರೆ, ನನ್ನ ತಲೆಯೊಳಗೆಲ್ಲ ಅಯೋ ಕೋಟಿ ಎಷ್ಟು ಕಷ್ಟದಲ್ಲಿರುತ್ತಾರೋ ಏನ್ ಕಥೆನೋ (ಅವರು ಕೋಟ್ಯಧೀಶರಾಗಿದ್ದರೂ) ಈ ಥರ ರಿಜಿಸ್ಟರ್ ಆಗಿಬಿಟ್ಟಿದೆ.

ಕೆಲವು ಸಲ ನಮ್ಮ ಅಣ್ಣನ ಬಗ್ಗೆ ಆಯಿತಲ್ಲ, ಆ ರೀತಿ ಎಲ್ಲಿ ಕೋಟಿ ಕಾಣಲೇ ಇಲ್ಲ ವಲ್ಲ. ಇನ್ನೊಂದು ಕಡೆಗೆ ಅಯೋ ಎಷ್ಟು ಕಷ್ಟದಲ್ಲಿರುತ್ತಾರೊ ಏನು ಕಥೆಯೋ? ಹಾಗೆ ಕಷ್ಟ ಅನ್ನೋದು ರಿಜಿಸ್ಟರ್ ಆಗಿರುವುದು. ನನ್ನ ವೈಯಕ್ತಿ ಕವಲ್ಲ. ಏಕೆಂದರೆ ಆ ಕಷ್ಟ-ಸುಖದ ಜೊತೆಯಲ್ಲಿ ನಾನು ಅಷ್ಟು ಬೆರೆತು ಹೋಗಿಬಿಟ್ಟಿದ್ದೀನಿ.

andolana

Recent Posts

ಫಿಸಿಯೋಥೆರಪಿ ಕೋರ್ಸ್‌ಗಳಿಗೆ ಈಗ ನೀಟ್ ಕಡ್ಡಾಯ: ಡಾ. ಶರಣ ಪ್ರಕಾಶ ಪಾಟೀಲ

ಬೆಂಗಳೂರು : ಫಿಸಿಯೋಥೆರಪಿ ಕೋರ್ಸ್‌ಗಳಿಗೆ ಪ್ರವೇಶವು ಈಗ ನೀಟ್ ವ್ಯಾಪ್ತಿಗೆ ಬರಲಿದೆ. ಇದು ಪ್ರಮಾಣೀಕೃತ ವೈದ್ಯಕೀಯ ಶಿಕ್ಷಣದತ್ತ ರಾಷ್ಟ್ರೀಯ ನಡೆಗೆ…

27 mins ago

ಭೂ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಮೈಮೇಲೆ ಸಗಣಿ ಸುರಿದುಕೊಂಡು ಪ್ರತಿಭಟನೆ

ಪಿರಿಯಾಪಟ್ಟಣ: ಕಳೆದ ಮೂರು ವರ್ಷಗಳಿಂದ ತಾಲೂಕು ಆಡಳಿತದ ಮುಂಭಾಗ ತಾಲ್ಲೂಕಿನ ಭೂ ಸಮಸ್ಯೆ ಸೇರಿದಂತೆ ಇತರೆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಂತೆ…

1 hour ago

ಎಲ್ಲಾ ಜಾತಿ, ಧರ್ಮದ ಬಡವರಿಗೆ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆ ನಿರ್ಮಿಸಿ : ಸಿ.ಎಂ

ಚಾಮರಾಜನಗರ : ಎಲ್ಲಾ ಜಾತಿ ಮತ್ತು ಎಲ್ಲಾ ಧರ್ಮದ ಬಡವರಿಗೆ ನೆರವಾಗುವ ರೀತಿಯಲ್ಲಿ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ.…

2 hours ago

Pahalgam attack | ಪಾಕ್‌ ಪತ್ರಕರ್ತನ ಪ್ರಶ್ನೆಗೆ ಉತ್ತರ ನಿರಾಕರಿಸಿದ ಯುಎಸ್‌ ಅಧಿಕಾರಿ

ವಾಷಿಂಗ್ಟನ್ : ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರಾದ ಟ್ಯಾಮಿ ಬ್ರೂಸ್ ಅವರು, ಪಹಲ್ಗಾಮ್ ದಾಳಿಯ ನಂತರ ಭಾರತ-ಪಾಕಿಸ್ತಾನ ಗಡಿ ಉದ್ವಿಗ್ನತೆಯ…

2 hours ago

ಕಾವೇರಿ ಆರತಿಗೆ ಸಮಿತಿ ರಚನೆ ; ಡಿಸಿಎಂ ಡಿ.ಕೆ ಶಿವಕುಮಾರ್‌

ಮಂಡ್ಯ : ಗಂಗಾರತಿ ರೀತಿ ದಕ್ಷಿಣ ಕರ್ನಾಟಕದ ಜೀವನಾಡಿ ಕಾವೇರಿ ಆರತಿ ಮಾಡುವ ಸಂಬಂಧ ಯೋಜನೆ ರೂಪಿಸಲು ಸಮಿತಿ ರಚಿಸಲಾಗಿದೆ…

3 hours ago

ರಸ್ತೆಯಲ್ಲಿ ಪಾಕ್‌ ಧ್ವಜ ; ಬಜರಂಗದಳ ಕಾರ್ಯಕರ್ತರು ಪೊಲೀಸ್‌ ವಶಕ್ಕೆ

ಕಲಬುರಗಿ : ನಗರದ ಜಗತ್ ವೃತ್ತದಲ್ಲಿ ಪಾಕಿಸ್ತಾನ ಧ್ವಜವನ್ನು ಅಂಟಿಸಿದ ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಜರಂಗದಳದ ಕಾರ್ಯಕರ್ತರು…

3 hours ago