ಆಂದೋಲನ 50

ಭುವಿಗೆ ಬೆಂಕಿ ಇಟ್ಟವರು ಉರಿಯ ತಾಪವ ತಣಿಸಬಲ್ಲರೇ?

ಶಿವಸುಂದರ್, ಹಿರಿಯ ಪತ್ರಕರ್ತರು

ಭೂತಾಯಿಗೆ ಜಗತ್ತಿನ ಶ್ರೀಮಂತ ದೇಶಗಳು ಹಚ್ಚಿರುವ ಬೆಂಕಿಯನ್ನು ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ೨೦೨೧ರ ನವೆಂಬರ್ ೧ರಿಂದ ೧೪ ರವರೆಗೆ ಗ್ಲಾಸ್ಗೋದಲ್ಲಿ ಸೇರಿದ್ದ ಜಗತ್ತಿನ ೨೦೦ ದೇಶಗಳ ೨೬ನೇ ಸಮ್ಮೇಳನವು ವಿಫಲಗೊಂಡಿದೆ. ಆ ಸಮ್ಮೇಳನದಲ್ಲಿ ನಡೆದದ್ದೇನು ಎಂಬುದನ್ನು ಅರ್ಥ ಮಾಡಿಕೊಳ್ಳುವ ಮುಂಚೆ ಇಂದು ಜಗತ್ತು ಎದುರಿಸುತ್ತಿರುವ ಪರಿಸರ ತುರ್ತುಪರಿಸ್ಥಿತಿಯ ಸ್ವರೂಪ ಹಾಗೂ ಅದರ ತಡೆಗೆ ಪ್ಯಾರಿಸ್ ಸಮ್ಮೇಳನದವರೆಗೆ ಜಾಗತಿಕ ಸಮುದಾಯ, ಸರ್ಕಾರಗಳು ತೆಗೆದುಕೊಂಡ ನಿರ್ಣಯಗಳ ಹಿನ್ನೆಲೆಯನ್ನು ಹಿರಿಯ ಪತ್ರಕರ್ತರಾದ ಶಿವಸುಂದರ್ ಅವರು ಇಲ್ಲಿ ವಿಶ್ಲೇಷಿಸಿದ್ದಾರೆ.

ನಭೋಮಂಡಲದಲ್ಲಿ ಕೋಟ್ಯಂತರ ಆಕಾಶಕಾಯಗಳಿದ್ದರೂ ಭೂಮಿಯಲ್ಲಿ ಮಾತ್ರ ಜೀವಸೃಷ್ಟಿಯಾಗಲು ಕೆಲವು ನಿರ್ದಿಷ್ಟ ಕಾರಣಗಳಿವೆ. ಭೂಮಿಯನ್ನು ಬಿಟ್ಟಂತೆ ಉಳಿದ ಆಕಾಶಕಾಯಗಳೊಳಗೆ ಇರುವ ತಾಪಮಾನ ಒಂದೋ ಅತಿ ಕಡಿಮೆ (-೪೦ ಡಿಗ್ರಿ ಸೆಂಟಿಗ್ರೇಡ್ ಕ್ಕಿಂತಲೂ ಕಡಿಮೆ) ಅಥವಾ ಅತಿಹೆಚ್ಚು (೩೦೦ ಡಿಗ್ರಿಗಳ ಆಸುಪಾಸು). ಈ ಎರಡು ಸಂದರ್ಭಗಳಲ್ಲೂ ಜೀವ ಸೃಷ್ಟಿಯಾಗಲು ಸಾಧ್ಯವೇ ಇಲ್ಲ. ಮೊದಲು ಭೂಮಿಯ ಮೇಲ್ಮೈ ತಾಪಮಾನ ಸಹ -೨೦ರಷ್ಟಿತ್ತು. ಆಗ ಭೂಗೋಳದಲ್ಲಿ ಶೇ.೭೫ರಷ್ಟು ಸಾರಜನಕ ಮತ್ತು ಶೇ.೨೦ರಷ್ಟು ಆಮ್ಲಜನಕವಿತ್ತು. ಆಮ್ಲಜನಕ ಜೀವವಾಯುವಾದರೂ ಜೀವ ಸೃಷ್ಟಿಗೆ ಬೇಕಾದಷ್ಟು ತಾಪಮಾನ ಆಗಿನ್ನೂ ಭೂಮಿಯ ಮೇಲ್ಮೈನಲ್ಲಿರಲಿಲ್ಲ.

ಆದರೆ ಭೂಮಿಯ ವಾತಾವರಣದಲ್ಲಿ ಈ ಎರಡು ಅನಿಲಗಳ ಜೊತೆಜೊತೆಗೆ ಕಾರ್ಬನ್ ಡೈಆಕ್ಸೈಡ್, ಮೀಥೇನ್‌ನಂತಹ ಅನಿಲಗಳೂ ಇದ್ದವು. ಈ ಅನಿಲಗಳು ಸೂರ್ಯನ ಬೆಳಕಿನ ವಿಕಿರಣದ ಮೂಲಕ ಭೂಪದರವನ್ನು ಪ್ರವೇಶಿಸುವ ಶಾಖವನ್ನು ಹೀರಿಕೊಳ್ಳುತ್ತಿದ್ದವು ಮತ್ತು ಅದನ್ನು ಭೂಮಂಡಲದ ವಾತಾವರಣಕ್ಕೆ ಮರುಹಾಯಿಸಿದವು. ಇದರಿಂದ ಭೂಮಿಯ ಮೇಲ್ಮೈ ತಾಪಮಾನ ನಿಧಾನವಾಗಿ -೨೦ರಿಂದ +೧೦ ಡಿಗ್ರಿಗೆ ತಲುಪಿತು. ಈ ಸಂದರ್ಭದಲ್ಲಿ ಜೀವವಾಯುವಿನ ಸಹಾಯದೊಂದಿಗೆ ಈ ಭೂಗ್ರಹದಲ್ಲಿ ಜೀವ ಸೃಷ್ಟಿಯಾಯಿತು. ಹಾಗೂ ಅದು ಕಳೆದ ೨೦,೦೦೦ ಸಾವಿರ ವರ್ಷಗಳಿಂದ ಹೆಚ್ಚಿನ ಏರುಪೇರಿಲ್ಲದೆ ಸ್ಥಾಯಿಸ್ವರೂಪ ಪಡೆದುಕೊಂಡಿತು. ಹೀಗಾಗಿಯೇ ಕಳೆದ ೮-೧೦ ಸಾವಿರ ವರ್ಷಗಳ ಹಿಂದೆ ಹೆಚ್ಚೂ ಕಡಿಮೆ ಸಮಕಾಲೀನವಾಗಿ ಜಗತ್ತಿನ ವಿವಿಧ ಭಾಗಗಳಲ್ಲಿ ಸ್ಥಿರ ಕೃಷಿ, ಹಾಗೂ ನಾಗರಿಕತೆಗಳು ಹುಟ್ಟಿಕೊಂಡವು.

ಆದರೆ ೧೮ನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿ ಸಂಭವಿಸಿ ಮನುಷ್ಯ ಸಮಾಜದಲ್ಲಿ ಲಾಭದ ದುರಾಸೆಗೆ ಇತರರನ್ನು ಮತ್ತು ಪ್ರಕೃತಿಯನ್ನೂ ಶೋಷಿಸುವ ಬಂಡವಾಳಶಾಹಿ ವರ್ಗವೊಂದು ಸೃಷ್ಟಿಯಾಯಿತು. ಈ ಬಂಡವಾಳಶಾಹಿ ತನ್ನ ದೇಶದ ಮಿತಿಯಲ್ಲಿ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆ ಎಲ್ಲೆಲ್ಲಿ ಸಂಪನ್ಮೂಲಗಳಿವೆಯೋ ಅಲ್ಲೆಲ್ಲಾ ಲೂಟಿ ಮಾಡಲು ಪ್ರಾರಂಭಿಸಿತು. ಅದರಲ್ಲೂ ತನ್ನ ಕೈಗಾರಿಕೆಗಳಿಗಾಗಿ ಇಂಧನಮೂಲವಾಗಿ ಭೂಗರ್ಭದ ಪೆಟ್ರೋಲಿಯಂ ಉತ್ಪನ್ನಗಳನ್ನು ಬೇಕಾಬಿಟ್ಟಿಯಾಗಿ ಬಳಸಲು ಪ್ರಾರಂಭಿಸಿತು.

ಆದರೆ, ಈ ಪೆಟ್ರೋಲಿಯಂನಂತಹ ಇಂಧನಗಳನ್ನು ಉರಿಸಿದಾಗ ಅಪಾರ ಪ್ರಮಾಣದಲ್ಲಿ ಕಾರ್ಬನ್ ಡೈಯಾಕ್ಸೈಡ್‌ನಂತಹ ಅನಿಲಗಳು ಉತ್ಪಾದನೆಯಾಗುತ್ತವೆ. ನೈಸರ್ಗಿಕ ಅನಿಲಗಳು ಮತ್ತು ಆಧುನಿಕ ಕೃಷಿಗಳು ಮೀಥೇನ್ ಎಂಬ ಅನಿಲವನ್ನು ಅತಿ ಹೆಚ್ಚಾಗಿ ಉತ್ಪಾದಿಸುತ್ತವೆ. ಇಂಥ ಅನಿಲಗಳನ್ನೇ ಹಸಿರು ಮನೆ ಅನಿಲವೆಂದು ಕರೆಯುತ್ತಾರೆ. ಅವು ಸೂರ್ಯನ ಶಾಖವನ್ನು ಹೀರಿ ಮರಳಿ ವಾತಾವರಣಕ್ಕೆ ಬಿಡುವುದನ್ನು ಹಸಿರು ಮನೆ ಪರಿಣಾಮವೆಂದು ಕರೆಯುತ್ತಾರೆ.

ಹೀಗಾಗಿ ವಾತಾವರಣದಲ್ಲಿ ಕಾರ್ಬನ್ ಡೈಯಾಕ್ಸೈಡ್‌ನಂತಹ ಅನಿಲಗಳು ಹೆಚ್ಚಾಗುತ್ತಿದ್ದಂತೆ ಭೂಮಿಯ ತಾಪಮಾನವೂ ಹೆಚ್ಚಾಗಲು ಪ್ರಾರಂಭವಾಯಿತು. ಮೊದಲು ಇದು ಗೋಚರವಾದದ್ದು ಧ್ರುವ ಪ್ರದೇಶಗಳಲ್ಲಿ ದಿನೇದಿನೇ ಹಿಮಗಡ್ಡೆಗಳ ಪ್ರಮಾಣ ಕುಸಿಯುವುದರ ಮೂಲಕ. ೧೮೦೦ರಿಂದ ಭೂಮಿಯ ತಾಪಮಾನ ಮತ್ತು ಸಾಗರದ ಮೇಲ್ಮೈ ತಾಪಮಾನವನ್ನು ವೈಜ್ಞಾನಿಕವಾಗಿ ಅಂದಾಜು ಮಾಡುವುದು ಸಾಧ್ಯವಾಗಿತ್ತು.

೧೯೯೭ರಲ್ಲಿ ಜಪಾನಿನ ಕ್ಯೋಟೋದಲ್ಲಿ ಜಗತ್ತಿನ ರಾಷ್ಟ್ರಗಳೆಲ್ಲಾ ಈ ಅಪಾಯವನ್ನು ಪರಿಗಣಿಸಿ ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ ಒಪ್ಪಂದಕ್ಕೆ ಸಹಿಹಾಕಿದವು. ಅಮೆರಿಕ ಹೊರತುಪಡಿಸಿ! ಅದಕ್ಕೆ ಅಮೆರಿಕ ಕೊಟ್ಟಕಾರಣ ಅದು ಅಮೆರಿಕದ ಹಿತಾಸಕ್ತಿಗೆ ಮತ್ತು ಅಲ್ಲಿನ ಜನರ ಜೀವನಶೈಲಿಯ ಹಿತಾಸಕ್ತಿಗೆ ವಿರುದ್ಧವಾಗಿದೆಯೆಂದು.

ಅಷ್ಟು ಮಾತ್ರವಲ್ಲ. ಕ್ಯೋಟೋ ಒಪ್ಪಂದವನ್ನು ಸಾರಾಂಶದಲ್ಲಿ ಯಾವ ಬಂಡವಾಳಶಾಹಿ ದೇಶಗಳೂ ಮಾನ್ಯ ಮಾಡಲೇ ಇಲ್ಲ. ಬದಲಿಗೆ ಹೆಚ್ಚೆಚ್ಚು ವಿಷವನ್ನು ವಾತಾವರಣಕ್ಕೆ ಸೇರಿಸುತ್ತಲೇ ಹೋದವು. ಹೀಗಾಗಿಯೇ ವಿಶ್ವಸಂಸ್ಥೆ ಡೆನ್ಮಾರ್ಕಿನ ಕೋಪನ್‌ಹೇಗನ್‌ನಲ್ಲಿ ಜಗತ್ತಿನ ತಾಪಮಾನ ಕಡಿಮೆ ಮಾಡುವುದಕ್ಕೆ ಕಾನೂನುಬದ್ಧ ಒಪ್ಪಂದವನ್ನು ರೂಢಿಸಲು ೨೦೦೯ರ ಡಿಸೆಂಬರ್‌ನಲ್ಲಿ ವಿಶ್ವದ ೧೯೩ ರಾಷ್ಟಗಳ ಸಮಾವೇಶವನ್ನು ಕರೆದಿತ್ತು.

೧.೫ ಡಿಗ್ರಿ ಏರಿಕೆಯೆಂದರೆ … ಸರ್ವನಾಶ

ಈ ಸಮಾವೇಶ ಯಶಸ್ವಿಯಾಗಬೇಕಿದ್ದರೆ ಕನಿಷ್ಠ ಈ ಮೂರು ಒಪ್ಪಂದಗಳಿಗೆ ಜಗತ್ತಿನ ಎಲ್ಲಾ ದೇಶಗಳು ಒಪ್ಪಿಕೊಂಡ ಕಾನೂನುಬದ್ಧತೆಯುಳ್ಳ ಒಪ್ಪಂದಕ್ಕೆ ಸಹಿಹಾಕಬೇಕಿತ್ತು.

  1. ಜಗತ್ತಿನ ತಾಪಮಾನವನ್ನು ಇನ್ನು ೧.೫ ಡಿಗ್ರಿಗಿಂತ ಹೆಚ್ಚಾಗದಂತೆ ತಡೆಹಿಡಿಯಲು ಕಾರ್ಯಸೂಚಿ.
  2. ಶ್ರೀಮಂತ ದೇಶಗಳು ಬಡದೇಶಗಳು ಸಹ ತಮ್ಮ ಇಂಗಾಲದ ಹೊರಸೂಸುವಿಕೆಯ ಪ್ರಮಾಣ ತಡೆಗಟ್ಟಲು ಪರ್ಯಾಯ ತಂತ್ರಜ್ಞಾನವನ್ನು ಬಳಸಲು ಬೇಕಾದ ಹಣಕಾಸನ್ನು ಮುಂದಿನ ೨೦ ವರ್ಷಗಳವರೆಗೆ ಅಂದಾಜು ೧೦೦ ಬಿಲಿಯನ್ ಡಾಲರಷ್ಟನ್ನು ಒದಗಿಸಬೇಕು.
  3. ಅಮೆರಿಕ ಹಾಗೂ ಶ್ರೀಮಂತ ದೇಶಗಳು ೨೦೨೦ರೊಳಗೆ ತಮ್ಮ ಇಂಗಾಲದ ಪ್ರಮಾಣವನ್ನು ೧೯೯೦ರ ಪ್ರಮಾಣಕ್ಕೆ ಇಳಿಸಿಕೊಳ್ಳಬೇಕು.

ಆದರೆ ಕೋಪನ್‌ಹೇಗನ್ ಸಮಾವೇಶದಲ್ಲಿ ಈ ದೇಶಗಳು ಈ ಯಾವ ಜವಾಬ್ದಾರಿಯನ್ನೂ ಒಪ್ಪಲಿಲ್ಲ. ಕೋಪನ್‌ಹೇಗನ್ ಸಮಾವೇಶ ಹತ್ತಿರಕ್ಕೆ ಬರುತ್ತಿದ್ದಂತೆ ಶ್ರೀಮಂತ ದೇಶಗಳು ಈವರೆಗಿನ ಇಂಗಾಲದ ಹೊರಸೂಸುವಿಕೆಯ ಪ್ರಮಾಣದಲ್ಲಿ ಯಾರ ಪಾಲು ಎಷ್ಟೇ ಇದ್ದರೂ ಎಲ್ಲರೂ ಸಮಾನವಾಗಿಯೇ ತಮ್ಮತಮ್ಮ ಇಂಗಾಲದ ಇಳಿಕೆ ಮಿತಿಯನ್ನು ಹಮ್ಮಿ ಕೊಳ್ಳಬೇಕೆಂದು ರಾಗಹಾಡತೊಡಗಿದವು. ಅಮೆರಿಕವು ಭಾರತ, ಚೀನಾ ಇನ್ನಿತ್ಯಾದಿ ದೇಶಗಳು ಸಹ ತಮ್ಮಷ್ಟೇ ಇಂಗಾಲ ಇಳಿತಾಯ ಮಾಡಬೇಕೆಂದು ಹಠ ಹಿಡಿದವು.

ಶ್ರೀಮಂತ ದೇಶಗಳ ಹಾಗೂ ಲಾಭಕೋರ ಬಹುರಾಷ್ಟ್ರೀಯ ಕಂಪನಿಗಳ ಲಾಭಕೋರತನದಿಂದಾಗಿ ಇಡೀ ಜಗತ್ತು ಹಿಂದೆಂದೂ ಕೇಳರಿಯದ ಪರಿಸರ ಏರುಪೇರುಗಳನ್ನು ಅನುಭವಿಸುತ್ತಿದ್ದಂತೆ ೨೦೧೫ರಲ್ಲಿ ಪ್ಯಾರಿಸ್ ಸಮ್ಮೇಳನ ನಡೆಯಿತು.

ಶ್ರೀಮಂತ ದೇಶಗಳು ನುಂಗಿಹಾಕಿದ ಕಾರ್ಬನ್ ಬಜೆಟ್

ಪ್ಯಾರಿಸ್ ಸಮ್ಮೇಳನ ನಡೆಯುವ ವೇಳೆಗೆ ಭೂಮಿಯ ತಾಪಮಾನ ೧೮೫೦ರ ಕೈಗಾರಿಕಾ ಕ್ರಾಂತಿಯ ಪೂರ್ವಕ್ಕೆ ಹೋಲಿಸಿದಲ್ಲಿ ೧೩.೫ ಡಿಗ್ರಿ ಸೆಂಟಿಗ್ರೇಡಿನಿಂದ ೧೪.೫ ಡಿಗ್ರಿಗೆ ಅಂದರೆ ೧ ಡಿಗ್ರಿಯಷ್ಟು ಹೆಚ್ಚಾಗಿತ್ತು. ಇದಕ್ಕೆ ಕಾರಣ ೧೮೫೦ರಲ್ಲಿ ಇಂಗಾಲದ ಹೊರ ಸೂಸುವಿಕೆ ೨೭೫ ttp ಇದ್ದದ್ದು ೪೦೦ ಠಿಠಿ ಗೆ ಏರಿತ್ತು.

ಹೀಗಾಗಿ ಜಾಗತಿಕ ತಾಪಮಾನವು ಶತಾಯ ಗತಾಯ ೧೮೫೦ಕ್ಕಿಂತ ೧.೫ ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಾಗದಂತೆ ನೋಡಿಕೊಳ್ಳುವ ತುರ್ತನ್ನು ಇಂದು ಜಗತ್ತು ಎದುರಿಸುತ್ತಿದೆ. ಹಾಗೆ ಮಾಡಬೇಕೆಂದರೆ ೧೮೫೦ಕ್ಕೆ ಹೋಲಿಸಿದಲ್ಲಿ ಜಗತ್ತು ಹೆಚ್ಚೆಂದರೆ ೧ ಲಕ್ಷ ಕೋಟಿ ಟನ್ ಕಾರ್ಬನ್‌ಅನ್ನು ಮಾತ್ರ ಹೊರ ಹಾಕಬಹುದು. ಇದನ್ನು ಕಾರ್ಬನ್ ಬಜೆಟ್ ಎಂದು ಕರೆಯಲಾಗುತ್ತದೆ.

ಆದರೆ ೨೦೨೧ರ ವೇಳೆಗೆ ಜಗತ್ತು ಅದರಲ್ಲಿ ಶೇ. ೮೬ರಷ್ಟನ್ನು ಬಳಸಿ ಆಗಿದೆ. ಅದರಲ್ಲಿ ಸಿಂಹಪಾಲು ಅಮೆರಿಕ, ಕೆನಡ, ಹಾಗೂ ಪಶ್ಚಿಮ ಯುರೋಪ್, ಜಪಾನ್, ಚೀನ ಮತ್ತು ಭಾರತದ್ದು ಕೇವಲ ೨೦. ಕಲ್ಲಿದ್ದಲು, ತೈಲ ಮತ್ತು ಅನಿಲ ಬಹುರಾಷ್ಟ್ರೀಯ ಕಂಪನಿಗಳೇ ಶೇ. ೭೦ ರಷ್ಟು ವಾರ್ಷಿಕ ಜಾಗತಿಕ ಕಾರ್ಬನ್ ಮಾಲಿನ್ಯವನ್ನು ಮಾಡುತ್ತವೆ. ಅಂಥ ಕಂಪನಿಗಳೇ ಈ ALP ಸಮ್ಮೇಳನಗಳಿಗೆ ಹಣಕಾಸನ್ನು ಕೂಡಾ ಪೂರೈಸುತ್ತವೆ!

ಗ್ಲಾಸ್ಗೋ ಸಮ್ಮೇಳನ ಮತ್ತು ಹುಸಿಬಿಸಿ ಘೋಷಣೆಗಳು

ಆದರೆ ಕ್ಯೋಟೋ, ಕೋಪನ್ ಹೇಗನ್ ಮತ್ತು ಪ್ಯಾರಿಸ್ ಸಮ್ಮೇಳನದಲ್ಲಿ ಆದಂತೆ ಗ್ಲಾಸ್ಗೋದಲ್ಲೂ ಶ್ರೀಮಂತ ದೇಶಗಳು ತಮ್ಮ ದೇಶಗಳ ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಮಾತುಗಳ ತಂತ್ರವನ್ನು ಬಳಸಿದವೇ ವಿನಾ ಭೂಮಿಯ ರಕ್ಷಣೆಗೆ ಮುಂದಾಗಲಿಲ್ಲ.

೨೦೨೦ರ ವೇಳೆಗೆ ಶ್ರೀಮಂತ ದೇಶಗಳು ತಮ್ಮ ಇಂಗಾಲ ತ್ಯಾಜ್ಯಗಳನ್ನು ೨೦೧೦ರ ಪ್ರಮಾಣಕ್ಕೆ ಇಳಿಸಬೇಕಿತ್ತು. ಅದರ ಬದಲಿಗೆ ಅವುಗಳ ಪ್ರಮಾಣ ೨೦೨೦ರಲ್ಲಿ ಶೇ. ೧೪ ರಷ್ಟು ಹೆಚ್ಚಾಗಿದೆ.

ಹೀಗಾಗಿ ೨೦೩೦ರ ವೇಳೆಗಾದರೂ ಅದನ್ನು ಶೇ. ೫೦ ರಷ್ಟು ಇಳಿಸದಿದ್ದರೆ ಜಾಗತಿಕ ತಾಪಮಾನದ ಹೆಚ್ಚಳ ೧.೫ ಡಿಗ್ರಿಗೆ ಸೀಮಿತವಾಗುವುದಿರಲಿ, ಕನಿಷ್ಠ ೨.೭ ಡಿಗ್ರಿಯಷ್ಟು ಹೆಚ್ಚಾಗಲಿದೆ.

ಮತ್ತೊಂದು ಕಡೆ ಕಲ್ಲಿದ್ದಲು, ಅನಿಲಕ್ಕೆ ಪರ್ಯಾಯವಾದ ಇಂಧನ ಬಳಕೆಯ ಬಗ್ಗೆ ಯಾವ ನಿಶ್ಚಿತ ಯೋಜನೆಗಳನ್ನೂ ಗ್ಲಾಸ್ಗೋ ಸಮ್ಮೇಳನ ಘೋಷಿಸಲಿಲ್ಲ. ಕಲ್ಲಿದ್ದಲ ಬಳಕೆ ಇಂಗಾಲದ ತ್ಯಾಜ್ಯದ ಬಹುಮುಖ್ಯ ಮೂಲ ಎಂದು ಮೊಟ್ಟಮೊದಲ ಬಾರಿಗೆ ಒಪ್ಪಿಕೊಂಡರೂ ಅವುಗಳ ಬಳಕೆಯನ್ನು ನಿಲ್ಲಿಸುವ ಘೋಷಣೆ ಮಾಡುವ ಬದಲಿಗೆ ನಿಧಾನವಾಗಿ ಕಡಿಮೆ ಮಾಡುವ ಘೋಷಣೆ ಮಾಡಿ ಭೂಮಿಯ ಆರೋಗ್ಯದ ಜೊತೆ ರಾಜಿ ಮಾಡಿಕೊಂಡಿತು.

ಇನ್ನು ಈಗಾಗಲೇ ಆಗಿರುವ ಹಾನಿಯನ್ನು ನಿವಾರಿಸುವ ಮತ್ತು ಹೊಸ ಸಂದರ್ಭದ ಅಳವಡಿಕೆಗೆ ಬೇಕಾದ ತಂತ್ರಜ್ಞಾನ ಮತ್ತು ಯೋಜನೆಗಳಿಗೆ ಸಂಬಂಧಪಟ್ಟ ಪರಿಸರ ಹಣಕಾಸು ಪ್ರಸ್ತಾಪದ ಬಗ್ಗೆ ಶ್ರೀಮಂತ ದೇಶಗಳು ಮುಂದಿನ ವರ್ಷಗಳಲ್ಲಿ ಯೋಚಿಸುವ ಭರವಸೆ ಮಾತ್ರ ನೀಡಿದವು. ಸಮ್ಮೇಳನದ ಪ್ರಾರಂಭದಲ್ಲಿ ಜಾಗತಿಕ ತಾಪಮಾನದ ಏರಿಕೆ ೧.೫ ಡಿಗ್ರಿಗಿಂತ ಕಡಿಮೆ ಪ್ರಮಾಣದಲ್ಲಿ ಇಟ್ಟುಕೊಳ್ಳಲು ದೇಶಗಳು ಹಾಕಿಕೊಂಡಿರುವ ಗುರಿಗಳು ಸಮಾಧಾನಕರವಾಗಿಲ್ಲ ಎಂದು ಚರ್ಚಿಸಿದರೂ ಯಾವ ಹೊಸ ಗುರಿಗಳೂ ಘೋಷಣೆಯ ಭಾಗವಾಗಲಿಲ್ಲ. ಹೀಗಾಗಿ ಮತ್ತೊಮ್ಮೆ ಕಾರ್ಪೊರೇಟ್ ಹಿತಾಸಕ್ತಿಗಳೇ ಭೂಮಿಯ ಹಾಗೂ ಬಡವರ ಹಿತಾಸಕ್ತಿಯನ್ನು ನುಂಗಿಹಾಕಿದವು.

೧೯೯೫ರಲ್ಲಿ ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯು ಸಕಲ ವೈಜ್ಞಾನಿಕ ಆಧಾರಗಳೊಂದಿಗೆ ಈ ಕೆಲವು ಅಂಶಗಳನ್ನು ಜಗತ್ತಿನ ಮುಂದಿರಿಸಿತು

  1. ಜಾಗತಿಕ ತಾಪಮಾನ ಕಳೆದ ಮೂರು ದಶಕಗಳಿಂದ ಒಂದೇ ಸಮನೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಭೂಮಿಯ ತಾಪಮಾನ ೦.೭೪ ಡಿಗ್ರಿಯಷ್ಟು ಏರಿದೆ.
  2. ಈ ತಾಪಮಾನ ಏರಿಕೆಗೆ ಪ್ರಧಾನ ಕಾರಣ ವಾತಾವರಣದಲ್ಲಿ ಹೆಚ್ಚುತ್ತಿರುವ ಇಂಗಾಲದ ಡೈಯಾಕ್ಸೈಡ್‌ನಂತಹ ಹಸಿರು ಮನೆ ಅನಿಲಗಳು ಮತ್ತು ಅದರಿಂದ ಉಂಟಾಗುತ್ತಿರುವ ಹಸಿರು ಮನೆ ಪರಿಣಾಮ.
  3. ವಾತಾವರಣದಲ್ಲಿ ಈ ಪ್ರಮಾಣದಲ್ಲಿ ಹಸಿರು ಮನೆ ಅನಿಲಗಳು ಹೆಚ್ಚಾಗಲು ಕಾರಣ ಅಭಿವೃದ್ಧಿ ಹೊಂದಿದ ದೇಶಗಳ ಕೈಗಾರಿಕಾ ಚಟುವಟಿಕೆಗಳು, ಕಲ್ಲಿದ್ದಲು, ಪೆಟ್ರೋಲಿಯಂನಂಥ ಇಂಧನ ಬಳಕೆ ಮತ್ತು ಜಗತ್ತಿನ ಧಾರಣಾ ಶಕ್ತಿಯ ಪರಿವಿಲ್ಲದ ಅಭಿವೃದ್ಧಿ ಹೊಂದಿದ ದೇಶಗಳ ಜನತೆಯ ಜೀವನ ವಿಧಾನ.
  4. ಭೂಮಂಡಲದ ವಾತಾವರಣದಲ್ಲಿರುವ ಹಸಿರುಮನೆ ಅನಿಲಗಳಲ್ಲಿ ಶೇ.೮೦ರಷ್ಟು ಪಾಲು ಅಮೆರಿಕ, ಐರೋಪ್ಯ ಒಕ್ಕೂಟ, ಜಪಾನ್ ನಂತಹ ಅಭಿವೃದ್ಧಿ ಹೊಂದಿದ ದೇಶಗಳದ್ದೇ ಆಗಿದೆ.
  5. ಇನ್ನಾದರೂ ಈ ಹಸಿರುಮನೆ ಅನಿಲಗಳ ಉತ್ಪಾದನೆಯನ್ನು ಈ ಅಭಿವೃದ್ಧಿ ಹೊಂದಿದ ದೇಶಗಳು ಕಡಿಮೆ ಮಾಡಿಕೊಳ್ಳದೇ ಹೋದರೆ ಜಗತ್ತಿನ ತಾಪಮಾನ ಇನ್ನು ಐವತ್ತು ವರ್ಷಗಳಲ್ಲಿ ೬ ಡಿಗ್ರಿಯಷ್ಟು ಏರುತ್ತದೆ.
  6. ಇದರ ಪರಿಣಾಮವಾಗಿ ಸಾಗರದ ಮಟ್ಟ ಒಂದು ಮೀಟರ್ ಗಿಂತಲೂ ಹೆಚ್ಚಾಗುತ್ತದೆ. ಸಾಗರದ ಮೇಲ್ಮೈ ತಾಪಮಾನ ಹೆಚ್ಚಾಗುತ್ತದೆ. ಇದರಿಂದಾಗಿ ಮಾಲ್ಡೀವ್ಸ್ ಇನ್ನಿತ್ಯಾದಿ ದೇಶಗಳು ಸಂಪೂರ್ಣವಾಗಿ ಮುಳುಗಿ ಹೋಗುತ್ತವೆ.
  7. ತಾಪಮಾನದ ಏರುಪೇರಿನಿಂದ ಹವಾಮಾನ ವೈಪರೀತ್ಯ ಸಂಭವಿಸುತ್ತದೆ. ನೆರೆ, ಪ್ರವಾಹ, ಸುನಾಮಿ, ಬರದ ಸಂಭವಗಳು ಹೆಚ್ಚಾಗುತ್ತವೆ.
    ಭೂ ತಾಪಮಾನ ಏರಿಕೆಯಿಂದ ಕೃಷಿ ಹಾಳಾಗುತ್ತದೆ. ಮತ್ತು ಸಾಗರದ ತಾಪಮಾನ ಏರಿಕೆಯಿಂದಾಗಿ ಮೀನುಗಾರಿಕೆಗೆ ದೊಡ್ಡ ಪೆಟ್ಟು ಬೀಳುತ್ತದೆ. ಹಲವಾರು ಹೊಸ ಕಾಯಿಲೆಗಳಿಗೂ ಈ ತಾಪಮಾನ ಏರಿಕೆ ಕಾರಣವಾಗುತ್ತದೆ.

ಕೇಂದ್ರ ಸರ್ಕಾರದ ಬೇಜವಾಬ್ದಾರಿ

ಇಡೀ ಗ್ಲಾಸ್ಗೋ ಸಮ್ಮೇಳನದಲ್ಲಿ ಹೊಸ ಭರವಸೆಗಳನ್ನು ಹುಟ್ಟಿಸಿದ್ದು ಮೋದಿಯವರ ಭಾಷಣ ಮತ್ತು ಘೋಷಣೆಗಳು! ಅದರಲ್ಲಿ ೨೦೩೦ರ ವೇಳೆಗೆ ಭಾರತವು ತನ್ನ ಇಂಗಾಲದ ಹೊರಸೂಸುವಿಕೆಯನ್ನು ನೂರು ಕೋಟಿ ಟನ್‌ಗಳಷ್ಟು ಕಡಿಮೆ ಮಾಡುವ, ತನ್ನ ಇಂಧನದ ಶೇ.೫೦ರಷ್ಟನ್ನು ತೈಲ ಮತ್ತು ಕಲ್ಲಿದ್ದಲೇತರ ಮೂಲಗಳಿಂದ ಸಾಧಿಸುವ, ತನ್ನ ಅಭಿವೃದ್ಧಿಯಲ್ಲಿನ ಇಂಗಾಲ ತೀವ್ರತೆಯನ್ನು ಶೇ. ೪೫ರಷ್ಟಕ್ಕೆ ಇಳಿಸುವ ಮತ್ತು ೨೦೭೦ರ ವೇಳೆಗೆ ಓಟ್ಟಾರೆಯಾಗಿ ಇಂಗಾಲದ ಹೊರಸೊಸುವಿಕೆಯನ್ನು ಪರಿಣಮಕಾರಿಯಾಗಿ ಶೂನ್ಯಕ್ಕೆ ಇಳಿಸುವ ಭರವಸೆಗಳಿದ್ದವು.

ಆದರೆ ಅದೇ ಸಮಯದಲ್ಲಿ ಕೇಂದ್ರ ಸರ್ಕಾರ ಮತ್ತು ಚೀನಾ ಸರ್ಕಾರಗಳು ಒತ್ತಡ ಹೇರಿ ಅಂತಿಮ ಗ್ಲಾಸ್ಗೋ ಕರಡಿನಲ್ಲಿ ಕಲ್ಲಿದ್ದಲ ಬಳಕೆಯ ನಿಗ್ರಹ ಎಂದಿದ್ದ ಘೋಷಣೆಯನ್ನು ಕಲ್ಲಿದ್ದಲ ಬಳಕೆಯನ್ನು ನಿಧಾನವಾಗಿ ಕಡಿಮೆಗೊಳಿಸುವ ತಿದ್ದುಪಡಿಯನ್ನು ತುರುಕಿದವು.

ಏಕೆಂದರೆ ಭಾರತದಲ್ಲಿ ೪೦ಗಿಗಾ ವ್ಯಾಟುಗಳಷ್ಟು (೧ಗಿಗಾ ವ್ಯಾಟು= ೧೦೦೦ಮೆಗಾ ವ್ಯಾಟು ) ಕಲ್ಲಿದ್ದಲು ವಿದ್ಯುತ್ ಉತ್ಪಾದನೆಯ ವಿವಿಧ ಹಂತದಲ್ಲಿವೆ.ಅವುಗಳ ಬಹುಪಾಲು ಕಲ್ಲಿದ್ದಲು ಪೂರೈಕೆ ಮತ್ತು ವಿದ್ಯುತ್ ಉತ್ಪಾದನೆ ಎರಡೂ ಅದಾನಿ ಮಾಡಲಿದ್ದಾರೆ. ಹೀಗಾಗಿ ಅಂತಿಮ ಹಂತದಲ್ಲಿ ಇಂಥ ಭೂಮಿ ವಿನಾಶಕಾರಿ ತಿದ್ದುಪಡಿಯನ್ನು ಮೋದಿ ಸರ್ಕರ ಸೇರಿಸಿತು.

ಮತ್ತೊಂದು ಕಡೆ ಇಂಗಾಲವನ್ನು ಹೀರಿಕೊಳ್ಳಲು ಅತ್ಯಗತ್ಯವಾಗಿರುವ ಕಾಡುಗಳನ್ನು ಕಾಪಾಡಿಕೊಳ್ಳಲು ಕಾಡು ನಾಶವನ್ನು ನಿಗ್ರಹಿಸುವ ಮತ್ತು ಮರುಕಾಡುಯೋಜನೆಗಳಿಗೆ ಸಂಬಂಧಪಟ್ಟಂತೆ ಗ್ಲಾಸ್ಗೋ ಸಮ್ಮೇಳನದಲ್ಲಿ ನೂರು ದೇಶಗಳು ಪ್ರಸ್ತಾಪಿಸಿದ ಕರಡಿಗೆ ಭಾರತ ಸಹಿ ಹಾಕಲು ನಿರಾಕರಿಸಿತು.

ಹಾಗೆಯೇ ಮೀಥೇನ್ ಉತ್ಪಾದನೆ ನಿಗ್ರಹಕ್ಕೆ ಸಂಬಂಧಪಟ್ಟ ಕರಡಿಗೂ ಸಹಿ ಹಾಕಲು ನಿರಾಕರಿಸಿತು.

ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲಾ ಐದು ಗುರಿಗಳನ್ನು ಈಡೇರಿಸಬೇಕೆಂದರೆ ಶ್ರೀಮಂತ ದೇಶಗಳು ಒಂದು ಟ್ರಿಲಿಯನ್ ಡಾಲರ್ ಅಂದರೆ ೭೫ಲಕ್ಷ ಕೋಟಿ ರೂಪಾಯಿ ಹಣಕಾಸು ಕೊಟ್ಟರೆ ಮಾತ್ರ ಸಾಧ್ಯ ಎಂದು ಸಮ್ಮೇಳನದ ಕೊನೆಯ ದಿನ ಭಾರತ ಸರ್ಕಾರ ಘೋಷಿಸಿತು. ಅರ್ಥಾತ್ ಶ್ರೀಮಂತ ದೇಶಗಳು ಇಷ್ಟು ದೊಡ್ಡ ಮೊತ್ತದ ಹಣ ಕೊಟ್ಟರೆ ಮಾತ್ರ ಪರಿಸರ ಕಾಪಾಡುತ್ತೇವೆ ಇಲ್ಲದಿದ್ದರೆ ಇಲ್ಲ ಎಂದು!

ಆದರೆ ಈ ಒಂದು ಟ್ರಿಲಿಯನ್ ಡಾಲರ್ ಮೊತ್ತವನ್ನು ಪ್ಯಾರಿಸ್ ಸಮ್ಮೇಳನದಲ್ಲಿ ಪ್ರತಿ ವರ್ಷ ನೂರು ಬಿಲಿಯನ್ ಡಾಲರಿನಂತೆ ಜಗತ್ತಿನ ಎಲ್ಲ ಬಡದೇಶಗಳಿಗೂ ಶ್ರೀಮಂತ ದೇಶಗಳು ಪಾವತಿಸಬೇಕೆಂದು ಆಗಿದ್ದ ಒಡಬಂಡಿಕೆ. ಅದರಲ್ಲಿ ಕಾಲು ಭಾಗವನ್ನು ಶ್ರೀಮಂತ ದೇಶಗಳು ಪೂರೈಸಿಲ್ಲ. ಈಗ ಕೇಂದ್ರ ಸರ್ಕಾರ ಅಷ್ಟೂ ಹಣವನ್ನು ತನಗೇ ಕೊಡಬೇಕೆಂದು ಕೇಳುತ್ತಿದೆ. ಅದನ್ನು ಶ್ರೀಮಂತ ದೇಶಗಳು ಕೊಡುವುದಿರಲಿ ಕೇಳಿಸಿಯೂಕೊಳ್ಳುವುದಿಲ್ಲ. ಹೀಗಾಗಿ ಬಂಡವಾಳಶಾಹಿಗಳ ಲಾಭವನ್ನು ಕಾಯುತ್ತಾ ಭೂಮಿಗೆ, ಭಾರತದ ಹಾಗೂ ಜಗತ್ತಿನ ಬಡವರಿಗೆ ದ್ರೋಹ ಬಗೆಯುವುದು ನಿರಾತಂಕವಾಗಿ ಮುಂದುವರಿಯಲಿದೆ.

ಜಗತ್ತಿನ ಬಂಡವಾಳಶಾಹಿಗಳ ಹಾಗೂ ಅವರ ಪ್ರತಿನಿಧಿ ಸರ್ಕಾರಗಳ ಬೇಜವಾಬ್ದಾರಿಯಿಂದಾಗಿ ಜಗತ್ತಿನ ತಾಪಮಾನ ೨೦೨೪ರ ವೇಳೆಗೆ ೧೮೫೦ಕ್ಕೇ ಹೋಲಿಸಿದಲ್ಲಿ ೧.೫ ಡಿಗ್ರಿಯಷ್ಟೂ ಮತ್ತು ೨೦೩೫ರ ವೇಳೆಗೆ ೨.೭ ರಷ್ಟು ಹೆಚ್ಚುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ಆಗ ಏನಾಗಬಹುದು?
ಒಟ್ಟಿನಲ್ಲಿ ಮನುಕುಲದ ಎಲ್ಲ ಸಂಕಟಕ್ಕೂ ಈ ಬಂಡವಾಳಶಾಹಿ ಹೇಗೆ ಕಾರಣವೋ ಭೂ ತಾಯಿಯ ಬಸಿರಿಗೆ ಬೆಂಕಿ ಹಚ್ಚಲೂ ಈ ಬಂಡವಾಳಶಾಹಿಗಳೇ ಕಾರಣ. ಹೀಗಾಗಿ ಈ ಭೂಮಂಡಲ ಉಳಿಯಬೇಕೆಂದರೂ ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ನಿರ್ನಾಮವಾಗಬೇಕು. ಇದೇ ಗ್ಲಾಸ್ಗೋ ಸಮ್ಮೇಳನ ಅನಧಿಕೃತವಾಗಿ ನೀಡಿರುವ ಸಂದೇಶ

andolana

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

5 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

5 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

6 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

6 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

6 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

6 hours ago